ಮುಳ್ಳೇರಿಯ ಪರಿಸರ ಪ್ರದೇಶದ ಅಸುಪಾಸಿನಲ್ಲಿ ಎಲ್ಲೇ ನಾಟಕವಿರಲಿ ಅಲ್ಲಿ ತೆರೆಯ ಮರೆಯಿಂದ ಪಾತ್ರ ಪರಿಚಯದೊಂದಿಗೆ "ಮಧುಸೂದನ ಬಳ್ಳಾಲ್" ಎಂಬ ಈ ಪ್ರಬುದ್ಧ ರಂಗ ಕಲಾವಿದನ ಹೆಸರು ಕೇಳಿ ಬರುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು.
ಆಧುನಿಕ ಯುಗದ ಮೊಬೈಲ್ ನಂತಹ ವಿದ್ಯುನ್ಮಾನ ಉಪಕರಣಗಳು ವೈಭವಿಕರಿಸದ ಅ ಕಾಲದಲ್ಲಿ ಹಳ್ಳಿಯ ನೊಂದು ಬೆಂದ ಹೃದಯಗಳಿಗೆ ನಗುವಿನ ಸವಿ ಉಣಿಸುತ್ತಾ ಸದ್ದುಗದ್ದಲವಿಲ್ಲದೆ, ಪ್ರಚಾರದ ಹಂಗಿಲ್ಲದೆ ರಂಗಭೂಮಿಯಲ್ಲಿ ತನ್ನದೇ ರೀತಿಯ ಸೇವೆ ಸಲ್ಲಿಸಿ ಪ್ರೇಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡವರಲ್ಲಿ ಒರ್ವ ಅಪ್ರತಿಮ ಕಲಾವಿದರಾಗಿದ್ದಾರೆ ಮಧುಸೂದನ ಬಳ್ಳಾಲ್.
ತನ್ನ ವಿದ್ಯಾರ್ಥಿ ಜೀವನದಲ್ಲಿಯೇ ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗಭೂಮಿಯ ಪ್ರವೇಶಗೈದ ಬಳ್ಳಾಲರಿಗೆ ಪ್ರಸ್ತುತ ವರ್ಷ ಕೇರಳ ರಾಜ್ಯದ ಕಲಾ ಸಂಘಟನೆಯಾದ ಸವಾಕ್ ನ ಕಲಾರತ್ನ ಬಿರುದು ಅರ್ಹವಾಗಿಯೇ ಸಂದಿದೆ.
ಮಧುಸೂದನ ಬಳ್ಳಾಲರು ಕಲಾರಂಗಕ್ಕೆ ಕಾಲಿರಿಸಲು ಒಂದು ಅರ್ಥದಲ್ಲಿ ಸ್ವತಃ ಇವರ ತಂದೆಯವರೇ ಪರೋಕ್ಷವಾದ ಗುರುಸ್ಥಾನದಲ್ಲಿದ್ದವರು. ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ಇವರ ತಂದೆ ದಿವಂಗತ ಕೃಷ್ಣಯ್ಯ ಬಳ್ಳಾಲ್ ಅವರಿಂದ ಮಧುಸೂದನ ಬಳ್ಳಾಲರಿಗೆ ಕಲಾಭಿರುಚಿ ಬಳುವಳಿಯಾಗಿ ಬಂದದ್ದೆಂದು ಕಲಾರಸಿಕರ ಅಂಬೋಣ.
ಅಡ್ವಳಬೀಡು ಮನೆತನಕ್ಕೊಳಪಟ್ಟಮಧುಸೂದನ ಬಳ್ಳಾಲರು ತನ್ನ ಬಾಲ್ಯದಲ್ಲಿಯೇ ಶಾಲಾ ಕಲೋತ್ಸವ,ನಾಟಕ,ಯಕ್ಷಗಾನ ,ತಾಳಮದ್ದಲೆ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ಭಾಗವಹಿಸುತ್ತಿದ್ದವರು. ಹಲವಾರು ತುಳು-ಕನ್ನಡ ನಾಟಕಗಳಲ್ಲಿ ಪಾತ್ರ ನಿರ್ವಹಿಸಿರುವುದಲ್ಲದೆ ನಾಟಕ ನಿರ್ದೇಶನವನ್ನು ಮಾಡಿದ್ದಾರೆ. ಇವರ ಹಲವಾರು ನಾಟಕ ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿ ಖ್ಯಾತಿಯನ್ನು ತಂದುಕೊಟ್ಟಿದೆ.
ಯಕ್ಷಗಾನದ ಜನಪ್ರಿಯ ಪ್ರಸಂಗವಾದ ರತಿ ಕಲ್ಯಾಣದ ಕೌಡ್ಲಿಕನಾಗಿ,ದಕ್ಷ ಯಜ್ಞ ಪ್ರಸಂಗದ ವೀರಭದ್ರ ಪಾತ್ರಗಳು ಇವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆ.
ಸದಾ ಹಸನ್ಮುಖಿಯಾಗಿದ್ದು ಸ್ನೇಹಜೀವಿಯಾದ ಮಧುಸೂದನ ಬಳ್ಳಾಲರು ತನ್ನ ನಿತ್ಯ ಚಟುವಟಿಕೆಗಳಲ್ಲಿ ಹಾಸ್ಯ ಚಟಾಕಿ ಹರಿಸುತ್ತಾ ಇತರರನ್ನು ನಗಿಸುವ ಸರಳ ಸಹೃದಯಿ.
ತನ್ನ ಬದುಕಿನ ಸುತ್ತಮುತ್ತ ಕಂಡ ನೈಜ ಘಟನೆಗಳನ್ನು ಹಾಗೂ ಕಲ್ಪನೆಯಲ್ಲಿ ಹೊಳೆದ ವಿಚಾರಗಳನ್ನು ಕಥೆಯಾಗಿ ಬರೆದು ನಾಟಕವಾಗಿಸಿದ್ದಾರೆ. ಸ್ಥಳೀಯ ಕಲಾವಿದರನ್ನು ಒಗ್ಗೂಡಿಸಿಕೊಂಡು ತನ್ನ ಊರ ಪರಿಸರದಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಬಳ್ಳಾಲರ "ಅಣ್ಣೆ ಬರುವೆನಾ..?" ನಾಟಕ ಖ್ಯಾತಿಯನ್ನು ತಂದಿದೆ.
ತನ್ನ ಊರಾದ ಬೆಳ್ಳೂರು ಸಮೀಪದ ನಾಟೆಕಲ್ಲಿನಲ್ಲಿ "ನವ್ಯತಾ ಸ್ಟೋರ್" ಎಂಬ ವಾಣಿಜ್ಯ ಸಂಸ್ಥೆಯ ಮಾಲಕರಾದ ಮಧುಸೂದನ ಬಳ್ಳಾಲರು ವೃತ್ತಿಯಲ್ಲಿ ಪ್ರಗತಿಪರ ಕೃಷಿಕರಾಗಿಯೂ ಪ್ರವೃತ್ತಿಯಲ್ಲಿ ನಾಟಕ ಕಲಾವಿದರಾಗಿ, ನಿರ್ದೇಶಕರಾಗಿ, ಸಮಾಜ ಸೇವಕರಾಗಿ ಗುರುತಿಸಿ ಕೊಂಡವರು.ಬಡವರ ಅಭಿವೃದ್ಧಿಗಾಗಿ ತನ್ನ ದುಡಿತದ ಒಂದಂಶವನ್ನು ವಿನಿಯೋಗಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಮಧುಸೂದನ ಬಳ್ಳಾಲರು ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಕಲಾ ಸಾಧನೆಗಾಗಿ ಸವಾಕ್ ಎಂಬ ಸಂಘಟನೆಯು "ಕಲಾರತ್ನ 2021" ಎಂಬ ಪುರಸ್ಕಾರ ನೀಡಿ ಗೌರವಿಸಿದೆ.
ಧರ್ಮಪತ್ನಿ ಶ್ಯಾಮಲ ಎಂ ಬಳ್ಳಾಲ್ ಮಕ್ಕಳಾದ ಲಿಖಿತ್ ಮತ್ತು ಇಂಚರ ಜತೆಗೆ ಸಂತೃಪ್ತ ಸಂಸಾರ ಸಾಗಿಸುತ್ತಿರುವ ಈ ಕಲಾ ಸಾಧಕನ ಬದುಕೆಂಬ ನಾಟಕದಲ್ಲಿ ಒಲವೆಂಬ ಬೆಳಕಿನಲ್ಲಿ ಸುಖವೆಂಬ ಬಣ್ಣ ಹಚ್ಚಿ ನಗು ಎಂಬ ಸಂಗೀತದಲ್ಲಿ ಶಾಂತಿ ಎಂಬ ಜ್ಯೋತಿಯು ಸದಾ ಬೆಳಗುತ್ತಿರಲಿ ಎಂಬುದೇ ನಮ್ಮ ವಿಶೇಷ ಹಾರೈಕೆ.ಮಧುಸೂದನ್ ಬಲ್ಲಾಳ್ ಅವರ ಸಂಪರ್ಕ ಸಂಖ್ಯೆ+91 90482 57611












0 Comments