ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ 16ನೇ ವಾರ್ಡಿಗೊಳಪಟ್ಟ ಖಂಡಿಗೆ ಎಸ್ ಟಿ ಕಾಲನಿ ಸಮಗ್ರ ಅಭಿವೃದ್ಧಿಗೆ  ಜಿ.ಪಂ. 50ಲಕ್ಷ ಮಂಜೂರುಗೊಳಿಸಿದೆ. ಈ ಬಗ್ಗೆ ಖಂಡಿಗೆಯಲ್ಲಿ ನಡೆದ ಪರಿಶಿಷ್ಟ ವರ್ಗದ ಊರುಕೂಟದಲ್ಲಿ ಈ ವಿಶೇಷ ಯೋಜನೆ ಮಂಜೂರುಗೊಳಿಸಿದ ಜಿ.ಪಂ.ಅಧ್ಯಕ್ಷೆ ಬೇಬಿ ಬಾಲಕೃಷ್ಣರನ್ನು ಸಭೆ ಅಭಿನಂದನೆ ಸಲ್ಲಿಸಿದೆ. ಊರುಕೂಟದ ಸಮಾಲೋಚನ ಸಭೆಯಲ್ಲಿ ಕೃಷ್ಣ ನಾಯ್ಕ್ ಖಂಡಿಗೆ ಅಧ್ಯಕ್ಷತೆವಹಿಸಿದ್ದರು.ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ವಾರ್ಡ್ ಸದಸ್ಯೆ ಹಾಗೂ ಎಣ್ಮಕಜೆ ಗ್ರಾ.ಪಂ.ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಭಿ ಹನೀಫ್ , ಟ್ರೈಬಲ್ ಆಫೀಸರ್ ವೀಣಾ ಮೊದಲಾದವರು ಮಾತನಾಡಿದರು.


ಎಸ್ ಟಿ ಪ್ರಮೋಟರ್ ಆಶೋಕ್ ಚವರ್ಕಾಡ್ ಸ್ವಾಗತಿಸಿ ಪ್ರೇಮ ಖಂಡಿಗೆ ವಂದಿಸಿದರು. ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆಗಾಗಿ ಮಾಜಿ ಪಂ.ಸದಸ್ಯ ಹನೀಫ್ ನಡುಬೈಲು ಅವಿರತ ಶ್ರಮಿಸಿದ್ದು ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಯೋಜನೆಯ ಮೂಲಕ ಎಸ್.ಟಿ.ಕಾಲನಿ, ರಸ್ತೆ, ಕಮ್ಯೂನಿಟಿ ಹಾಲ್ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆ ನಿರ್ವಹಣೆಗೆ ಎಣ್ಮಕಜೆ ಗ್ರಾಮ ಪಂಚಾಯತ್ ಜತೆ ಕೈಜೋಡಿಸಲಿದ್ದು ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ಸದುಪಯೋಗಪಡಿಸಲು ಶ್ರಮಿಸಲಾಗುವುದೆಂದು ತಿಳಿಸಿದರು.