ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಹರಿಕಾರ ಕೆ.ಕೆ ಶೆಟ್ಟಿಗೆ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ

 


ಮಂಗಳೂರು : 2024 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಹರಿಕಾರ ಕೆ.ಕೆ ಶೆಟ್ಟಿ   ಅವರು ಆಯ್ಕೆಯಾಗಿದ್ದಾರೆ. ದ. ಕ ಜಿಲ್ಲಾಧಿಕಾರಿಯವರು ನಿನ್ನೆ ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಘೋಷಿಸಿದ್ದು, ಸಮಾಜ ಸೇವಾ ವಿಭಾಗದಲ್ಲಿ ಕೆ. ಕೆ. ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರ ಆಯ್ಕೆಗೆ ಕಾಸರಗೋಡಿನ ಕನ್ನಡಪರ ಸಂಘಟನೆಗಳು ಸಂತೋಷ ವ್ಯಕ್ತಪಡಿಸಿವೆ. ನವಂಬರ ಒಂದರಂದು ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾಡಳಿತವು ಪ್ರಶಸ್ತಿ ನೀಡಿ ಗೌರವಿಸಲಿದೆ.

   ಕೆ. ಕೆ. ಶೆಟ್ಟಿ ಅಥವಾ ಕುತ್ತಿಕಾರು ಕಿಞಣ್ಣ ಶೆಟ್ಟಿ ಕಾಸರಗೋಡು ಜಿಲ್ಲೆ ಮತ್ತು ದಕ ಜಿಲ್ಲೆಯಾದ್ಯಂತ ದಾನ ಧರ್ಮ, ಧಾರ್ಮಿಕ ಸಾಮಾಜಿಕ ವಿಚಾರಗಳು  ಬಂದಾಗ ಎಲ್ಲರೂ ಕಣ್ಣೆತ್ತಿ ನೋಡುವ ಹೆಸರು. ಯಾವುದೇ ಧಾರ್ಮಿಕ, ಸಾಮಾಜಿಕ ಆರ್ಥಿಕ ಸಹಾಯದ ಅವಶ್ಯಕತೆ ಇದ್ದಾಗ,  ದೇವಾಲಯ, ದೇವಸ್ಥಾನಗಳ ಸಮಿತಿಗಳು, ಸಂಘ ಸಂಸ್ಥೆಗಳು ನೆನಪಿಸಿಕೊಳ್ಳುವ ಒಂದು ಮುಂಚೂಣಿಯ ಹೆಸರು ಇವರದ್ದಾಗಿದೆ. 

 ಮಹಾರಾಷ್ಟ್ರದ ಅಹಮದ್ ನಗರವನ್ನು ತನ್ನ ಕರ್ಮ ಭೂಮಿಯನ್ನಾಗಿ ಮಾಡಿರುವ ಕೆಕೆ ಶೆಟ್ಟಿ ಅವರು, ಕುಂಬಳೆ ಸೀಮೆಯ ದಳವಾಯಿಗಳಾಗಿದ್ದ ಬೋಳಗುತ್ತಿನ ಒಂದು ಕವಲಾದ ಮಾಯಣ್ಣಾಯ ಬಳಿಯ ಕುತ್ತಿಕಾರು ಕುಟುಂಬದ  ಯಜಮಾನರಾಗಿದ್ದ ಸುಬ್ಬಣ್ಣ ಶೆಟ್ಟಿ ಮತ್ತು ಪುತ್ತೂರು ಬೆಟ್ಟಂಪಾಡಿಯ ಕುಸುಮ  ಶೆಡ್ತಿ ಅವರ ಪುತ್ರ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಳತ್ತೂರಿನ ಇಚ್ಚಿಲಂಪಾಡಿ ಹಿರಿಯ ಬುನಾದಿ ಶಾಲೆ, ಪ್ರೌಢ ಶಿಕ್ಷಣವನ್ನು ಕುಂಬಳೆಯ ಸರಕಾರಿ ಹೈಸ್ಕೂಲು, ಆಬಳಿಕ ಪುತ್ತೂರಿನ ಸೇಂಟ್ ಫಿಲೋಮಿನದಲ್ಲಿ  ಮುಂದಿನ ವಿದ್ಯಾಭ್ಯಾಸವನ್ನು ಮಾಡಿ ತಮ್ಮ ಜೀವನದ ಆಸರೆಗಾಗಿ ಮಹಾರಾಷ್ಟ್ರದ ಮುಂಬೈಗೆ ತೆರಳಿದರು. ಅಹ್ಮದ್ ನಗರದಲ್ಲಿ ತಮ್ಮದೇ ಆದ ಶ್ರೀ ಶಬರಿ ಕ್ಯಾಟರರ್ಸ್ ಎಂಬ ಕ್ಯಾಟರಿಂಗ್ ಸಂಸ್ಥೆಯನ್ನು ಸ್ಥಾಪಿಸಿ ಸ್ವಉದ್ಯೋಗಿಯಾಗಿ ಬೆಳೆಯುತ್ತಾ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಉಡುಪಿಯ ವಿನಯ್ ಕೆ ಶೆಟ್ಟಿ ಅವರನ್ನು ವಿವಾಹವಾದ ಇವರಿಗೆ ಇಬ್ಬರು ಗಂಡು ಮಕ್ಕಳಾದ  ಅನುಷ್ ಶೆಟ್ಟಿ ಮತ್ತು ಯಶ್ ಶೆಟ್ಟಿ ಜೊತೆಗಿನ ಸಂತೃಪ್ತ ಕುಟುಂಬ.

2020ರಲ್ಲಿ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವಾದ ಶ್ರೀ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಸಂಪೂರ್ಣ ಪುನರ್ ನಿರ್ಮಾಣದ ಮತ್ತು ಬ್ರಹ್ಮಕಲಶದ ಹೊರೆಯನ್ನು ಹೊತ್ತು ಊರಿನವರ ಸಹಕಾರದೊಂದಿಗೆ ಸಂಪೂರ್ಣಗೊಳಿಸಿ ತಮ್ಮ ತಂದೆಯವರ ಹೆಸರಿನಲ್ಲಿ ಊರಿಗೆ ಸಮರ್ಪಿಸಿದ್ದಾರೆ. ಅಹಮದ್ ನಗರದಲ್ಲಿ ಇರುವ ಶ್ರೀ ಶಬರಿಮಲೆ ಅಯ್ಯಪ್ಪನ್ ದೇವಸ್ಥಾನದ ನಿರ್ಮಾಣ ಮತ್ತು ಸಂಪೂರ್ಣ ಜವಾಬ್ದಾರಿ ಇವರೇ ನಿಭಾಯಿಸಿದ್ದರು. ಇಂದಿಗೂ ಅದರ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾಗಿ ಅಲ್ಲಿ ಸಹ ಧಾರ್ಮಿಕ ಕೆಲಸದಲ್ಲಿ ಮುಂದುವರಿಯುತ್ತಿದ್ದಾರೆ. 2024 ಫೆಬ್ರವರಿಯಲ್ಲಿ ಪುನರ್ ಬ್ರಹ್ಮಕಲಶವಾದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ನವೀಕರಣ ಮತ್ತು ಜೀರ್ಣೋದ್ದಾರದಲ್ಲಿ ಇವರು ಮಹತ್ತರವಾದ ಪಾತ್ರವಹಿಸಿ ಸಮಿತಿಯ ಗೌರವಾಧ್ಯಕ್ಷರಾಗಿ ಕಾರ್ಯವೆಸಗಿದ್ದಾರೆ. ಅಲ್ಲದೆ ಮಧೂರು ಶ್ರೀ ಮದನಂತೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದಾರದಲ್ಲಿ ಸಹ ತನ್ನಿಂದಾಗುವ ಅತ್ಯಮೂಲ್ಯ ಸೇವೆ ನೀಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಶಕ್ತರಿಗೆ ನೆರವು, ಕಲಿಕಾ ಸಹಾಯ, ವಿವಾಹ ಸಹಾಯ ನೀಡುವ ಮೂಲಕ ಮೌನ ಸೇವೆ ಮಾಡುತ್ತಿದ್ದಾರೆ.

 ಹೀಗೆ ಹಲವು ರೀತಿಯಲ್ಲಿ ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅರ್ಹತೆಗೆ ಸಂದ ಗೌರವ ಎನಿಸಿದೆ.

Post a Comment

0 Comments