ಈ ಭಾವ ಚಿತ್ರದಲ್ಲಿ ಕಾಣುವ ದೀಪಸ್ತಂಭ ವಿಶೇಷವಾಗಿ ಕಂಡಾಗ, ನನ್ನ ಅಕ್ಕರೆಯ ಗೆಳೆಯ ಕವಿಹೃದಯದ ಆತ್ಮೀಯ ಶ್ರೀಯುತ ನಾರಾಯಣ ರೈ ಕುಕ್ಕುವಳ್ಳಿಯವರು ಕುತೂಹಲದಿಂದ ಪ್ರಶ್ನಿಸಿದ್ದು ಇದು ಯಾವ ಕ್ಷೇತ್ರಕ್ಕೆ ಸಮ್ಮಂಧಪಟ್ಟದ್ದು,ಈ ಬಗ್ಗೆ ವಿಷೇಶ ಮಾಹಿತಿ ಇದೆಯೇ ಎಂದು.
ಪ್ರಕೃತ ತತ್ಸಂಬಂಧಿತ ವಿಚಾರವನ್ನು ನಮ್ಮ ಗ್ರಾಮದೇವರಾದ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ತೆಗೆದ ಚಿತ್ರವಾದ್ದರಿಂದ.ದೇವಸ್ಥಾನದ ಕಾರ್ಯಮಂಡಳಿಯಲ್ಲಿರುವ ನನ್ನ ಗೆಳೆಯ ಶ್ರೀಯುತ ರಾಜಗೋಪಾಲ ಕೈಪಂಗಳ ಅವರಲ್ಲಿ ಪ್ರಸ್ತಾಪಿಸಿದಾಗ,ಶ್ರೀದೇವರ ಸಾನಿಧ್ಯದ ಲ್ಲಿ,ದೀಪಾರಾಧನೆಯ ಶ್ರೇಷ್ಠತೆಯಲ್ಲಿ ಕೆಲವೊಂಷ್ಟನ್ನು ತನ್ನ ತಿಳುವಳಿಕೆಯಲ್ಲಿ ವಿವರಿಸಿದರು.... ಕತ್ತಲು ಮತ್ತು ಬೆಳಕುಗಳ ನಡುವಿನ ಹೊಯ್ದಾಟವನ್ನು ನಮ್ಮ ಬದುಕಿಗೆ ಹೋಲಿಸಿದಾಗ.ಕತ್ತಲು ಅಜ್ಞಾನದ ಸಂಕೇತವನ್ನೂ.ಬೆಳಕು ಜ್ಞಾನದ ಸಂಕೇತವನ್ನೂ ಸೂಚಿಸುತ್ತಿದ್ದು.ಇಲ್ಲಿ ಒಂದಷ್ಟು ವಾಸ್ತು ವಿಜ್ಞಾನವನ್ನೂ ಅನುಸರಿಸಲ್ಪಟ್ಟು. ದೀಪಸ್ತಂಭ ರಚನೆಯಾಗಿದೆ.ಶ್ರೀಕ್ಷೇತ್ರಕ್ಕೆ ಮಹಾಕಳೆಯನ್ನೂ ತೇಜಸ್ಸನ್ನೂ ವರ್ಚಸ್ಸನ್ನೂ ತಂದಿತ್ತು,ಭಕ್ತ ಮಹಾಜನರ ಮನಸ್ಸನ್ನೂ ಪುಳಕಗೊಳಿಸುವ ಪ್ರೇರಕ ಶಕ್ತಿಯಾಗಿ ಧನಾತ್ಮಕತೆಯನ್ನು ನೀಡುವಲ್ಲಿ ಪುಷ್ಟಿನೀಡುತ್ತದೆಯೆಂದು ಹೇಳಿದರು.
ಇಲ್ಲಿ ದೀಪಜ್ವಲಿಸುವಾಗ ದೀಪಗಳ ಲೆಕ್ಕಾಚಾರವಿದೆಯಂತೆ.ಒಂದು ಅಥವಾ ವಿಷಮ ಸಂಖ್ಯೆಯಲ್ಲಿ ದೀಪ ಉರಿಸಬೇಕೆಂಬ ಲೆಕ್ಕಾರವೂ ಇದೆಯಂತೆ.ಇಲ್ಲಿ ದೇವಸ್ಥಾನದ ಮುಂಭಾಗದ ಧ್ವಜಸ್ತಂಭದ ಪಕ್ಕದಲ್ಲಿ ನಾವು ಪ್ರವೇಶಿಸುವಾಗ ನಮ್ಮ ಎಡಕ್ಕೂ ಶ್ರೀದೇವರ ಬಲಭಾಗಕ್ಕೂ ಸ್ಥಾಪನೆಯಾಗಿದೆ. ದಿನವೂ ರಾತ್ರಿಯ ಪೂಜಾಸಮಯದಲ್ಲಿ ಬೆಳಗುವ ಈ ದೀಪಸ್ತಂಬ ನೋಡುಗರ ಕಣ್ಣಿಗೆ ಮುದನೀಡಿ ಮನಸಿಗಾನಂದವಾಗುತ್ತದೆ.
ಸ್ತಂಬದ ಪಾದದಡಿಯಲ್ಲಿ ಮಂಡಿಯೂರಿಕುಳಿತು ಮೌನವಾಗಿ ತದೇಕ ಚಿತ್ತದಿಂದ ಅದರ ಶಿರವನ್ನೇ ಗಮನಿಸಿದರೆ.ಜಠಾಧಾರಿ ಶಿವನೇ ನರ್ತಿಸಿ ನಮ್ಮೊಳಹೊಕ್ಕಂತಹ ಅನುಭೂತಿಯಾಗುವುದಂತೂ ಸತ್ಯವಿಚಾರ. ಢಣಢಣ ಘಂಟೆಯ ಮಾರ್ದನಿಯೊಂದಿಗೆ ಶಂಖನಾದದ ಮೊಳಗು ಮಂದಾನಿಲದ ಲಯಕ್ಕೆ ತಲೆಬಾಗುವ ಅಷ್ಟೂ ದೀಪಗಳು ಶರಣಾಗುವ ಪ್ರತೀಯೊಬ್ಬ ಆಸ್ತಿಕನ ಮನದೊಳಗೆ ಸುಜ್ಞಾನ ದೀವಿಗೆಯ ಸೊಡರು ಪ್ರಸಾದರೂಪವಾಗಿ ಕಿಡಿಹಚ್ಚದಿರದು. ಅಂದಹಾಗೆ ಇಲ್ಲಿರುವ ದೀಪ ಸ್ತಂಭಗಳನ್ನು ಶ್ರೀಕ್ಷೇತ್ರದ ಭಕ್ತರೂ ಖ್ಯಾತ ಯಕ್ಷಗಾನ ಕಲಾವಿದರೂ ಆಗಿರುವ ಶ್ರೀಯುತ ಮಾಧವ ನೆಟ್ಟಣಿಗೆಯವರು ಸಮರ್ಪಿಸಿದ್ದಾರೆ.
ಇದು ಖರಾಸುರನೆಂಬ ದಾನವ ಪೂಜಿಸಲ್ಪಟ್ಟ ಲಿಂಗರೂಪ ಶಿವದೇಗುಲ.
ಹಲವಾರು ವರ್ಷಗಳ ಇತಿಹಾಸವಿರುವ ಈ ದೇಗುಲ ಬಹಳ ಪ್ರಸಿದ್ಧಿಯನ್ನೂ ಹೊಂದಿದೆ.
ಹಾಗದರೆ ಸರಿ, ಲೋಕಾ ಸಮಸ್ತಾ ಸುಖಿನೋಭವಂತು.....ತಮಸೋಮಾ ಜೋತಿರ್ಗಮಯ ಕಾಣದ ಪರಮಾತ್ಮನನ್ನು ಬೆಳಕಿನ ಮೂರ್ತರೂಪದಲ್ಲಿ ಕಾಣುವ ನಮಗೆಲ್ಲರಿಗೂ ಜ್ಞಾನಾಂಧಕಾರವನ್ನು ನೀಗಿ ಬುದ್ಧಿಯ ಬೆಳಕನ್ನು ನೀಡಿ ನವಚೇತನವನ್ನು ಕರುಣಿಸಲಿ ಅಲ್ವೇ.
ಚಿತ್ರ ಬರಹ ✒️ : ದಯಾನಂದರೈ ಕಳ್ವಾಜೆ





0 Comments