ವಿದೇಶ_ವಿಶೇಷ -08
ಯುಎಇ : ಅರಬ್ ಸಂಯುಕ್ತ ರಾಷ್ಟ್ರದಲ್ಲಿ ಉದ್ಯೋಗದ ಜತೆಗೆ ತನ್ನ ಸುಮಧುರ ಕಂಠಸಿರಿಮೂಲಕ ಗಾಯನ ರಂಗದ ನಾಯಕರಾಗಿ,ನಟನೆಯ ಮುಖಾಂತರ ಸಾಂಸ್ಕೃತಿಕ ರಂಗದ ರಾಯಭಾರಿಯಾಗಿ,ಸಮಾಜ ಸೇವೆಗೆ ಅನ್ವರ್ಥ ಸೇವಕರಾಗಿ ಬಹುಮುಖಗಳಲ್ಲಿ ಗುರುತಿಸಿಕೊಂಡ ಅದ್ವಿತೀಯ ಸಾಧಕರಾದ ಜೋಸೆಫ್ ಮಥಿಯಸ್ ಬಗ್ಗೆ ವಿಶೇಷ ಚಾನೆಲ್ ಈ ಬಾರಿ "ವಿದೇಶ_ವಿಶೇಷ" ಅನಾವರಣಗೊಳಿಸುತ್ತದೆ.
ಅಂದು ಚರ್ಚ್ ನ ಕ್ವಾಯರ್ ಗಾಯಕ....ಇಂದು ಸಂಗೀತ ರಂಗದ ಸಾಧಕ.....!!!
ಸಂಗೀತ ಅಭಿರುಚಿಗೆ ದೇವರ ಆಶೀರ್ವಾದ ಸದಾ ಇರುತ್ತದೆ ಮತ್ತು ಅಂತಹ ದೈವಿಕ ಅನುಗ್ರಹ ಜೀವನದ ಉತ್ತುಂಗಕ್ಕೆ ಏರಿಸಬಲ್ಲುದು ಎಂಬುದಕ್ಕೆ ಇಂದಿನ ಅಂಕಣದ ಈ ವಿಶೇಷ ಸಾಧಕ ಜೋಸೆಫ್ ಮಥಿಯಸ್ ಸ್ಪಷ್ಟ ನಿದರ್ಶನವಾಗಿದ್ದಾರೆ.
ಕರ್ನಾಟಕ ರಾಜ್ಯದ ಕರಾವಳಿ ಕಡಲ ತೀರದ ಮಂಗಳೂರಿನ ಬಳಿಯಿರುವ ಕುಪ್ಪೆಪದವು ನಿವಾಸಿಯಾಗಿರುವ ಜೋಸೆಫ್ ಮಥಿಯಸ್ ಅವರು ಲಾರೆನ್ಸ್ ಮಥಿಯಸ್ ಮತ್ತು ಮೇರಿ ಮಥಿಯಸ್ ದಂಪತಿಗಳ ಪುತ್ರರಾಗಿದ್ದಾರೆ.ಬಾಲ್ಯ ಕಾಲದಲ್ಲಿ ಸ್ವತಃ ತಮ್ಮ ತಾಯಿಯ ಬಾಯಿಂದ ಸರಾಗವಾಗಿ ಕೇಳಿ ಬರುವ ಹಾಡುಗಳನ್ನು ಕೇಳುತ್ತಾ ಬೆಳೆದವರು.ಬಳಿಕ ತಮ್ಮ ಕಲಿಯುವಿಕೆಯೊಂದಿಗೆ ತಮ್ಮಲ್ಲಿದ ಗಾಯನ ಆಸಕ್ತಿಯನ್ನು ಹೊರಗೆಡಹಲಾರಂಭಿಸಿದರು.
ಹೀಗೆ ಬಾಲ್ಯ ಕಾಲದ ಶಾಲಾ ಹಂತದಲ್ಲಿ ಗಾಯನ ಸ್ಪರ್ಧೆಯಲ್ಲಿ ಬಹುಮಾನಗಳನ್ನು ತಮ್ಮದಾಗಿಸಿ ಕೊಳ್ಳುತ್ತಿದ್ದ ಇವರ ಗಾಯನ ಪ್ರತಿಭೆಯನ್ನು ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಸಂದರ್ಭದಲ್ಲಿ ಗುರುತಿಸಿದ ಬೆಂದೂರ್ ಚರ್ಚ್‌ನ ಗಾಯನ ಮಂಡಳಿ (ಕ್ವಯಾರ್) ಯಲ್ಲಿ ಸದಸ್ಯತ್ವ ನೀಡಿ ಪ್ರೋತ್ಸಾಹಿಸಿದರು. ಪ್ರೊಫೆಸರ್ ಅಲ್ಬಾನ್ ಕ್ಯಾಸ್ಟಲಿನೋ ಎಂಬವರು ಸಂಗೀತದ ಬಗ್ಗೆ ಸಮರ್ಪಕವಾದ ತರಬೇತಿ ನೀಡಿ ಇವರೊಳಗಿನ ಗಾಯನ ಪ್ರತಿಭೆಗೆ ತಕ್ಕ ಅವಕಾಶ ಹಾಗೂ ಪುರಸ್ಕಾರ ದೊರೆಯುವಂತಾಗಿಸಿದ ಗುರು ಪೂಜ್ಯರಾಗಿದ್ದಾರೆ.
ಅ ಬಳಿಕದ ದಿನಗಳು ಜೋಸೆಫ್ ಮಥಿಯಸ್ ರವರಿಗೆ ಬಹಳ ಪ್ರಮುಖ ಸ್ಥಾನಮಾನಗಳನ್ನು ಕಲ್ಪಿಸಿದವು.
ಇಂಟರ್ ಪ್ಯಾರಿಶ್ ಗಾಯನ ಸ್ಪರ್ಧೆಯಲ್ಲಿ ಜಯ ಗಳಿಸುತ್ತಾ ಜನಮನದಲ್ಲಿ ತಮ್ಮ ಕಂಠಸಿರಿಯ ಬಗ್ಗೆ ಮೆಚ್ಚುಗೆಯನ್ನುಪಡೆಯುತ್ತಾ ಜೋಸೆಫ್ ಮಥಿಯಸ್ ಗಾಯನ ರಂಗದಲ್ಲಿ ಪ್ರಸಿದ್ಧಿಗೆ ಬಂದರು.
ಮೂಡಬಿದರಿ ವಾರಾಡೊದಲ್ಲಿ ನಡೆದ ಗಾಯನ ಸ್ಪರ್ಧೆಯ ಜೋಡಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಮಂಗಳೂರು ಕೊಂಕಣ್ ನಾಟಕ ಸಭಾ ಮತ್ತು ಕಲಾ ಸಂಪತ್ ಗಾಯನ ಸ್ಪರ್ಧೆ, ಬೆಂದೂರ್ ಪ್ಯಾರಿಶ್ ಗಾಯನ ಸ್ಪರ್ಧೆಗಳಲ್ಲಿ ತಮ್ಮ ಗಾಯನ ಪ್ರತಿಭೆಗೆ ಸೂಕ್ತ ಪುರಸ್ಕಾರ ಪಡೆದರು.
ಮುಂಬಯಿಯತ್ತ ಮುಖ ಮಾಡಿದ ಹಾಡು ಹಕ್ಕಿ......!!!
ಬದುಕಿನ ಬಂಡಿ ಸಾಗಲು ಉದ್ಯೋಗ ಅವಶ್ಯವಾಗಿತ್ತು. ಆದ್ದರಿಂದ ತಾಯ್ನಾಡಿನಿಂದ ಮುಂಬೈಯತ್ತ ಪಯಣ ಬೆಳೆಸಿ 1988ರಲ್ಲಿ ಚರ್ಚ್ ಗೇಟ್ ಸರಹದ್ಧಿನಲ್ಲಿ ಶಿಪ್ಪಿಂಗ್ ಕಂಪೆನಿಯಲ್ಲಿ ಕಸ್ಟಮ್ಸ್ ಕ್ಲರ್ಕ್ ಉದ್ಯೋಗ ಗಳಿಸಿಕೊಂಡರು. ಅಲ್ಲಿ ಸತತ ಐದು ವರ್ಷಗಳ ಕಾಲ ದುಡಿದು ಅಪಾರ ಅನುಭವ ಪಡೆದ ಸಂದರ್ಭದಲ್ಲಿ ಒಂದು ದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಗಲ್ಫ್ ರಾಷ್ಟವೊಂದರಲ್ಲಿ ಉದ್ಯೋಗಕ್ಕಾಗಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಜಾಹಿರಾತು ನೋಡಿದ ಜೋಸೆಫ್‌ರವರು ಸಂದರ್ಶನದಲ್ಲಿ ಭಾಗವಹಿಸಿದರು. ತಮ್ಮ ದುಡಿಮೆಯ ಅನುಭವ ಆಧಾರದ ಮೇಲೆ ಆಯ್ಕೆಯಾಗಿ ಗಲ್ಫ್ ರಾಷ್ಟ್ರ ಹೋಗುವ ಅವಕಾಶ ಪಡೆದುಕೊಂಡರು.
ಮರಳುಗಾಡಿನ ಬದುಕಿನ ಪಾಡು ಹಾಡಾಗಿ ಹೊರಹೊಮ್ಮಿದ ಬಗೆ.....!!!
1993 ರಲ್ಲಿ ಮುಂಬಯಿಂದ ಗಲ್ಫ್ ರಾಷ್ಟ್ರದತ್ತ ಪಯಣಿಸಿ ಆರಂಭಕ್ಕೆ ದುಬಾಯಿಯಲ್ಲಿ ಕಸ್ಟಂಸ್ ಕ್ಲರ್ಕ್ ಉದ್ಯೋಗ ಕಂಡುಕೊಂಡರು. ಕೆಲವೊಂದು ಆಕಸ್ಮಿಕ ಕಾರಣ ಎಂಬಂತೆ ಅತೀ ಶೀಘ್ರದಲ್ಲೆ ಇವರು ದುಡಿಯುತ್ತಿದ್ದ ಕಂಪೆನಿ ಆಕಸ್ಮಾತ್ ಸ್ಥಗಿತಗೊಂಡಿತು.
ವಿದೇಶದ ಮಣ್ಣಿನಲ್ಲಿ ತನ್ನ ಬದುಕಿನ ಆಸೆ ಆಕಾಂಕ್ಷೆಗಳ ಕನಸು ಕಂಡಿದ್ದ ಜೋಸೆಫ್ ಮಥಿಯಸ್ ಇದರಿಂದಾಗಿ ದೃತಿಗೆಡದೆ ನಿರಂತರ ಪರಿಶ್ರಮದ ದೃಢ ನಿರ್ಧಾರದಿಂದ ಸ್ನೇಹಿತರ ಸಹಕಾರ ಪಡೆದು 1997 ರಲ್ಲಿ "ಮೆರಿಟ್ ಫ್ರೆöಟ್ ಸಿಸ್ಟಂಸ್" ಎಂಬ ಸ್ವಂತ ಉದ್ಯಮ ಸಂಸ್ಥೆ ಸ್ಥಾಪಿಸಿದರು.
ಕ್ರಮೇಣ ಅಭಿವೃದ್ಧಿಯನ್ನು ಪಡೆಯುತ್ತಾ 2002 ರಲ್ಲಿ ಸ್ವತಂತ್ರ ಉದ್ಯಮಿಯಾದರು.ಕಳೆದ ಸುಮಾರು 27 ವರ್ಷಗಳಿಂದ ದುಬಾಯಿಯಲ್ಲಿ ನೆಲೆಸಿ ತಮ್ಮ ಸಂಸ್ಥೆ "ಮೆರಿಟ್ ಪ್ರೆöಟ್ ಸಿಸ್ಟಂಸ್" ಮೂಲಕ ಹಲವಾರು ಉದ್ಯೋಗಿಗಳಿಗೆ ಹಾಗೂ ಹಲವಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.
ಕೊಲ್ಲಿ ರಾಷ್ಟ್ರದಲ್ಲಿ ಕೊರಳ ನಾದ ಮಾಧುರ್ಯ ಹೊರ ಹೊಮ್ಮಿಸಿದ ಗಾಯಕ
20 ವರ್ಷಗಳ ದೀರ್ಘ ಸಮಯದ ಬಳಿಕ ಜೋಸೆಫ್ ಮಥಿಯಸ್ ಅವರ ಸ್ವದೇಶದ ಗಾಯನ ಸೇವೆ 2006 ರಿಂದ ವಿದೇಶದ ಮಣ್ಣಿನಲ್ಲಿ ಪ್ರತಿಧ್ವನಿಸ ತೊಡಗಿತು.
2008 ರಲ್ಲಿ ದುಬಾಯಿಯಲ್ಲಿ ಕೊಂಕಣಿ ಸಂಘಟನೆ ಆಯೋಜಿಸಿದ ಸಂಗೀತ ಸಂಜೆಯಲ್ಲಿ ಜೊಸೆಫ್ ಮಥಿಯಸ್ ರವರ ಅಪೂರ್ವ ಕಂಠಸಿರಿಗೆ ಕೊಲ್ಲಿನಾಡಿನ ಅಭಿಮಾನಿಗಳು ಮೆಚ್ಚಿಕೊಂಡರು.ಬಳಿಕ ಹಲವಾರು ರಸಮಂಜರಿ ಕಾರ್ಯಕ್ರಮಗಳಲ್ಲಿ ಜೋಸೆಫರ ಗಾಯನದ ಚಿತ್ರ ಮೆಚ್ಚುಗೆಯ ಲೇಖನದೊಂದಿಗೆ ಹಲವಾರು ಮಾಧ್ಯಮಗಳಲ್ಲಿ ಪ್ರಕಟವಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು.
ಪ್ರಸಿದ್ದ ಇನ್ನೊರ್ವ ಕೊಂಕಣಿ ಗಾಯಕ ಹಾಗೂ ಗೀತೆ ರಚನಕಾರ ಲ್ಯಾನ್ಸಿ ನೊರೋನ್ಹಾ ರವರ 27 ವರ್ಷದ ಕನಸು ಮೇ 2011ರಲ್ಲಿ ದುಬಾಯಿಯಲ್ಲಿ ನನಸಾಗಿಸಲು ಜೋಸೆಫ್ ಪ್ರಮುಖ ಕಾರಣಕರ್ತರಾದರು."ಲ್ಯಾನಿ ನೈಟ್" ಎಂಬ ಸಂಗೀತ ಸಮಾರಂಭವನ್ನು ದುಬಾಯಿಯಲ್ಲಿ ಏಳೆಂಟು ಬಾರಿ ಹಾಗೂ ಮಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸುವ ಮೂಲಕ ಗಾಯನ ರಂಗದಲ್ಲೊಂದು ಸಂಚಲನ ಮೂಡಿಸಿದರು.
ಭಾಗವಹಿಸಿದ ಪ್ರಮುಖ ಸಂಗೀತ ಸಂಜೆಗಳು...
"ಲ್ಯಾನ್ಸಿ ನೈಟ್ ದುಬಾಯಿ - 2006", ಡಾನ್ ಬಾಸ್ಕೊ ಹಾಲ್ ಮಂಗಳೂರು -2011, ಕಿರೆಮ್ ಚರ್ಚ್ ಮೈದಾನ – 2011, ಸೈಂಟ್ ಆಂಥೊನಿ ಅಶ್ರಮ ಮಂಗಳೂರು - 2011, ಜೆ.ಎಸ್.ಎಸ್. ಸ್ಕೂಲ್ ಅಲ್ ಸಫಾ ದುಬಾಯಿ 2013,ಎಮಿರೇಟ್ಸ್ ಇಂಗ್ಲೀಷ್ ಸ್ಪೀಕಿಂಗ್ ಸ್ಕೂಲ್ ದುಬಾಯಿ - 2014 ಹಾಗೂ ವಿಲ್ಸನ್ ಒಲಿವೆರಾ ನೈಟ್ ದುಬಾಯಿ, ಮಂಗಳೂರು, ಕುಂದಾಪುರ, ಸ್ಟಾನ್ ನೈಟ್ - ಡಾನ್ ಬಾಸ್ಕೋ ಹಾಲ್ ಮಂಗಳೂರು 2010, ಸೈಂಟ್ ಅಗ್ನೇಸ್ ಸ್ಪೆಶಲ್ ಸ್ಕೂಲ್ ಮೈದಾನ ಮಂಗಳೂರು- 2012, ಅಲ್ ನಾಸರ್ ಲೀಸರ್ ಲ್ಯಾಂಡ್ 2012, ಲಂಡನ್ ಎ ಹಿಸ್ಟಾರಿಕಲ್ ಮೈಡನ್ ನೈಟ್ - 2013, ಕೊಂಕಣಿ ಸುಪ್ರಸಿದ್ದ ಗಾಯಕ ಹೆನ್ರಿ ಡಿಸೋಜಾ ರೊಂದಿಗೆ ದಾಯಿಜಿ ದುಬಾಯಿ 10ನೇ ವಾರ್ಷಿಕೋತ್ಸವದಲ್ಲಿ - ಮಂಗ್ಳುರ್ ಕೊಂಕಣ್ಸ್ ನಾಟಕ - ದುಬಾಯಿ 2014 ಹೀಗೆ ವೈವಿದ್ಯಮಯ ರಸಮಂಜರಿಯಲ್ಲಿ ಭಾಗವಹಿಸಿ ತನ್ನ ಗಾಯನ ಮಾಧುರ್ಯದ ಮೂಲಕ ಜೋಸೆಫ್ ಮಥಿಯಸ್ ಅಪಾರ ಅಭಿಮಾನಿಗಳ ಬಳಗವನ್ನು ಗಳಿಸಿಕೊಂಡರು.
ಗಾಯನದ ಅವಕಾಶ ನೀಡಿದ ಸಂಘ ಸಂಸ್ಥೆಗಳು.....
ಮಿಲಾಗ್ರಿಯನ್ಸ್, ಫೆರಾರಿಯೆಟ್ಸ್- ಉಡುಪಿ, ಉದೆಂಟಿಚಿ ನೆಕೆಟ್ರ, ಉದ್ಯಾವರೈಟ್ಸ್, ಲಿಟ್ಲ್ ಫ್ಲವರ್-ಮುಕಾಮರ್, ಎಮಿರೇಟ್ಸ್ ಪಾಂಗಲೇಟ್ಸ್, ಉಸ್ವಾಸ್ ಶಿರ್ವಾ, ಬೆಳ್ಮನ್ಚಿ ಬೆಕ್ತಾತಿ, ವಾಮಂಜೂರಿಯನ್ಸ್, ಪೆರ್ನಾಲಿಟ್ಸ್, ಬೈಂದೂರಿಯನ್ಸ್ ಮತ್ತು ಸೈಂಟ್ ಮೇರಿಸ್ ಚರ್ಚ್, ಜೆಬೆಲ್ ಆಲಿ ಚರ್ಚ್ ಕ್ಯಾಯಿರ್ ಮೊದಲಾದ ಸಂಘ ಸಂಸ್ಥೆಗಳು ಸಂಗೀತ ಅವಕಾಶ ಕಲ್ಪಿಸಿದ್ದು ಜೋಸೆಫ್ ಮಥಿಯಸ್ ಇವುಗಳಿಗೆ
ಸದಾ ಚಿರ ಋಣಿಯಾಗಿದ್ದಾರೆ.
ಸಂಗೀತ ಸಾಧನೆ.....
ಹಲವಾರು ಜನಪ್ರಿಯ ಸಂಗೀತ ಸಮಾರಂಭಗಳಲ್ಲದೆ ಧ್ವನಿ ಸುರುಳಿಯ ಮೂಲಕವೂ ತಮ್ಮ ಕಂಠಸಿರಿಯನ್ನು ಮೂಡಿಸಿರುವ ಜೊಸೆಫ್ ಮಥಿಯಸ್ ಅವರು ಮೊಗ ಸಗೊರ್, ಮೊಗಾಚಿ ಲಾಹ್ರ, ಪನಿ ಪನಿ ಬರ್ಸ, ಕಲಿಜಂತಿ ಬೋಗ್ನಾ, ಆಶಾವಾದಿ, ಹಲೋ ದೇವಾ, ಮೊಗಾ ನಾದ ಮೊದಲಾದ ಧ್ವನಿ ಸುರುಳಿಯಲ್ಲಿ ಗಾಯನಕ್ಕೆ ಧ್ವನಿಯಾಗಿ ಮೆಚ್ಚುಗೆ ಗಳಿಸಿದ್ದಾರೆ.
ಚಲನ ಚಿತ್ರದ ಗಾಯಕ - ನಟನೆಯ ಸಾಧಕ....
ಕೇವಲ ಹಾಡುವುದು ಮಾತ್ರವಲ್ಲದೆ ನಟನೆಯಲ್ಲೂ ಆಸಕ್ತಿ ಹೊಂದಿದ್ದ ಜೋಸೆಫ್ ಮಥಿಯಸ್ ಅವರು ಹಲವು ತುಳು-ಕೊಂಕಣಿ ಸಿನಿಮಾದಲ್ಲಿ ಅಭಿನಯಿಸಿ ನಟನೆಯಲ್ಲೂ ಸೈ ಎನಿಸಿದ್ದಾರೆ. "ಎನ್ನ "(ತುಳು)
"ಅಶೆಂ ಚಾಲೆ ಕಶೆಂ ಇಂಚಂಡ ಎಂಚ"(ಕೊಂಕಣಿ,ತುಳು)"ಏಕ್ ಅಸ್ಲ್ಯಾರ್ ಏಕ್ ನಾ"(ಕೊಂಕಣಿ)"ಬೆಂಡ್ಕಾರ್"(ಕೊಂಕಣಿ) ಇವರು ಅಭಿನಯಿಸಿದ ಪ್ರಮುಖ ಸಿನಿಮಾವಾಗಿದೆ.ಇದಲ್ಲದೆ "ಮಂಗಳೂರು ಟು ಗೋವ" ಎಂಬ ಕೊಂಕಣಿ ಚಿತ್ರದಲ್ಲಿ ಹಿನ್ನೆಲೆ ಗಾಯಕರಾಗಿ ಮಿಂಚಿದ್ದಾರೆ.
ಲ್ಯಾನ್ಸಿ ನೊರೋನ್ಹಾ,ಅನಿತಾ ಡಿಸೋಜಾ, ಪ್ರೇಮ್ ಕುಮಾರ್, ಡಾ. ಪ್ರಶಾಂತ್ ರಾಜ್, ರೋನಿ ಕ್ರಾಸ್ತಾ, ಪ್ರೀಮಾ ರಾಡ್ರಿಗಸ್, ವಿಲ್ಸನ್ ಒಲಿವೆರಾ, ಸ್ಟಾನಿ ಮೆಂಡೊನ್ಸಾ, ಕ್ಲಾಡ್ ಡಿ'ಸೋಜಾ, ವಿನ್ಸೆಂಟ್ ಫೆರ್ನಾಂಡಿಸ್ ಮೊದಲಾದ ಜನಪ್ರಿಯ ಗಾಯಕ, ಗಾಯಕಿಯರ ಜೊತೆಯಲ್ಲಿ ತಮ್ಮ ಕಂಠಸಿರಿಯನ್ನು ಹಂಚಿಕೊಂಡಿರುವ ಜೋಸೆಪ್ ಮಥಿಯಸ್ ಕೊಂಕಣಿ ಗಾಯನ ರಂಗದ ಮೇರು ಪ್ರತಿಭೆಯಾಗಿ ಹೊರ ಹೊಮ್ಮಿದ್ದಾರೆ.
ಸದ್ದಿಲ್ಲದ ಸಮಾಜ ಸೇವಕ....
ಹಲವಾರು ಸಂಘ ಸಂಸ್ಥೆಗಳ ಪೊಷಕರಾಗಿದ್ದ ಇವರು ಸೈಂಟ್ ಮೇರಿಸ್ ಮಂಗಳೂರು ಕಮ್ಯುನಿಟಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ತನ್ನ ಹುಟ್ಟೂರಲ್ಲಿ ಸಂಕಷ್ಟದಲ್ಲಿ ಇರುವವರಿಗೆ ತನ್ನ ಆದಾಯದ ಒಂದು ಪಾಲನ್ನು ಸದಾ ನೆರವಿನ ಹಸ್ತವಾಗಿ ನೀಡುತ್ತಾ ಬಂದಿರುವ ಇವರು ಪ್ರಚಾರ ಬಯಸದ ಸಹೃದಯತೆಯ ಮಹಾದಾನಿಯಾಗಿದ್ದಾರೆ.
ಗಲ್ಫ್ ನಾಡಿನಲ್ಲಿಯೂ ಸಹ ಸಂಕಷ್ಟ ದಲ್ಲಿರುವರ ನೆರವಿಗೆ ಸದಾ ಸ್ಪಂದಿಸುತ್ತಿರುವ ಜೋಸೆಪ್ ಮಥಿಯಸ್‌ರವರು ಯು.ಎ.ಇ. ಯಲ್ಲಿ ನಡೆಯುವ ಎಲ್ಲ ಕರ್ನಾಟಕ ಪರ ಸಾಂಸ್ಕೃತಿಕ , ಕ್ರೀಡೆ ಅಥವಾ ಇನ್ನಿತರ ಯಾವುದೇ ಸಮ್ಮೇಳನ ಸಮಾರಂಭಕ್ಕೆ ಸದಾ ಬೆಂಬಲ, ಪ್ರೋತ್ಸಾಹ, ಪ್ರಾಯೋಜಕತ್ವ ನೀಡುತ್ತಾ ಬಂದಿರುವ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ.
ದೇಶವನ್ನೇ ತಲ್ಲಣಗೊಳಿಸಿದ ಈ ಕರೋನ ಮಹಮಾರಿ ಯ ಸಂದರ್ಭದಲ್ಲಿ 3 ಲಕ್ಷಕ್ಕೂ ಅಧಿಕ ಸಹಾಯ ಹಸ್ತ ನೀಡಿದ ಇವರು ತುಂಬೆ ಗ್ರೂಪ್‌ನೊಂದಿಗೆ ಸೇರಿ ಮಂಗಳೂರಿಗೆ 3 ಚಾರ್ಟೆಡ್ ವಿಮಾನದ ಮೂಲಕ ಕೆಲಸ ಕಳಕೊಂಡವರಿಗೆ ಟಿಕೆಟ್‌ಗಳನ್ನು ನೀಡಿ ಜನ್ಮ ನಾಡಿಗೆ ಕಳುಹಿಸಿ ಕೊಟ್ಟ ಮಹಾನುಭಾವರಾಗಿದ್ದಾರೆ.
ಸಾಂಸ್ಕೃತಿಕ-ಸಾಮಾಜಿಕ ರಂಗದಲ್ಲಿ ಅದ್ವಿತೀಯ ಸಾಧನೆಗೈದಿರುವ ಜೋಸೆಪ್ ಮಥಿಯಸ್ ರವರಿಗೆ ಶಾರ್ಜಾ ಕರ್ನಾಟಕ ಸಂಘ ಪ್ರತಿಷ್ಠಿತ "ಮಯೂರ ಪ್ರಶಸ್ತಿ" ಗೌರವಿಸಿರುವುದಲ್ಲದೆ,ಗಲ್ಫ್ ಹಾಗೂ ಹುಟ್ಟೂರಿನ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಅಭಿನಂದಿಸಿದೆ.
ಅವರ ಬಾಳ ಸಂಗಾತಿ ಫ್ಲೆವಿಯಾ ಹಾಗೂ ಮುದ್ದಾದ ಮಕ್ಕಳು ಟಿಶಾ ಹಾಗೂ ಟಿಯನ್ನ ಸದಾ ಚೈತನ್ಯದ ಚಿಲುಮೆಯಂತೆ ಜೋಸೆಪ್ ಮಥಿಯಸ್ ಅವರ ಜೀವಮಾನದ ಸಾಧನೆಯ ಯಶಸ್ಸಿನ ಹಿಂದಿರುವ ಶಕ್ತಿಯಾಗಿದ್ದಾರೆ.
ಸುಮಧುರ ಕಂಠಸಿರಿಯ ಗಾಯಕರಾಗಿ, ಚಲನಚಿತ್ರ ನಟರಾಗಿ, ಸಮಾಜ ಸೇವಕರಾಗಿ, ಉದ್ಯಮಿಯಾಗಿ ಸರ್ವ ರಂಗದ ಸವ್ಯಸಾಚಿಯಂತೆ ಅನನ್ಯ ಕೊಡುಗೆ ನೀಡಿರುವ ಜೋಸೆಫ್ ಮಥಿಯಸ್ ಅವರ ಬದುಕು ಸಾಧನೆಯ ಮೆಟ್ಟಿಲೇರುವ ಪ್ರತಿಭಾವಂತರಿಗೆ ಆದರ್ಶನೀಯವಾಗಿದ್ದು ಸಂಗೀತಲೋಕದಲ್ಲಿ ಅಜರಾಮರವಾಗಿ ಧ್ವನಿಸುತ್ತಿರಲಿ ಎಂಬುದಾಗಿ "ವಿಶೇಷ" ಅಭಿನಂದನೆ.














0 Comments