ಅಬುಧಾಬಿಯಲ್ಲಿ ಬ್ಯಾಂಕಿಂಗ್ ವೃತ್ತಿಪರತೆಯೊಂದಿಗೆ ಬರಹದ ಪ್ರವೃತ್ತಿಯಲ್ಲಿ "ಮನೋಹರ"ಬದುಕು ಕಂಡ ಸಾಧಕ


                        ವಿದೇಶ_ವಿಶೇಷ      ‌‌ಅಂಕಣ-18

(ಅಬುಧಾಬಿ) ಸ್ವದೇಶದಲ್ಲಿ ವ್ಯಕ್ತಿಯೊಬ್ಬರ ಬಹುಮುಖ ಪ್ರತಿಭೆ ಬೆಳೆದು ಬರಲು ಸಾಕಷ್ಟು ಅವಕಾಶಗಳು ಇರುತ್ತದೆ. ಆದರೆ ವಿದೇಶದಲ್ಲಿ ವೃತ್ತಿಯೊಂದಿಗೆ ಬಹುಮುಖ ಪ್ರವೃತ್ತಿಯನ್ನು ಪ್ರದರ್ಶಿಸಬೇಕೆಂದರೆ ಅದರ ಹಿಂದೆ ಸಾಕಷ್ಟು ಅವಿರತ ಸಾಧನೆ ಹಾಗೂ ಸಮಯಾವಕಾಶದ ಬಳಕೆ ಇರಬೇಕಾಗುತ್ತದೆ. ಇಂತಹ ಅಪರೂಪದ ಸಾಧನೆಯನ್ನು ಮೈಗೂಡಿಸಿಕೊಂಡು ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ತನ್ನ ಖ್ಯಾತಿಯನ್ನು ಬಹುರಂಗಕ್ಕೆ ಪರಿಚಯಿಸಿ ಕನ್ನಡ ನಾಡಿನ ಕಂಪನ್ನು ಕೊಲ್ಲಿ ರಾಷ್ಟ್ರದಲ್ಲೂ ಪಸರಿಸಿ ಪ್ರಸಿದ್ಧರಾದ ಸಾರಸ್ವತ ಲೋಕದ ದಿಗ್ಗಜರೋರ್ವರನ್ನು ಈ ಬಾರಿ ವಿಶೇಷ ಚಾನೆಲ್ ವಿದೇಶ ವಿಶೇಷ ಅಂಕಣದ ಮೂಲಕ ಪರಿಚಯಿಸುತ್ತಿದೆ. 


ಇವರ ಹೆಸರು ಮನೋಹರ್ ತೋನ್ಸೆ ಅಬುಧಾಬಿಯ ಎಡಿಸಿಬಿ ಬ್ಯಾಂಕಿನ ಸಹಾಯಕ ಉಪಾಧ್ಯಕ್ಷ ಮತ್ತು ಸೀನಿಯರ್ ಮೆನೇಜರ್ ಆಗಿರುವ ಇವರು ಬ್ಯಾಂಕಿಂಗ್ ವೃತ್ತಿಯ ಜತೆಗೆ ಲೇಖಕರಾಗಿ,ಕೃತಿಕಾರರಾಗಿ,ವಿಮರ್ಶಕರಾಗಿ,ಸಂಘಟಕರಾಗಿ ಮನೋಹರ ಬದುಕು ಕಂಡವರು. ಮೂಲತಃ ಕರ್ನಾಟಕ ಕರಾವಳಿಗೊಳಪಟ್ಟ ಉಡುಪಿ ಜಿಲ್ಲೆಯ ಬಡ ನಿಡಿಯೂರು ಅಣ್ಣಪ್ಪ ಸುವರ್ಣ- ಅಪ್ಪಿ ಸುವರ್ಣ ದಂಪತಿಗಳ ಪುತ್ರರಾದ ಮನೋಹರ ತೋನ್ಸೆ ಅವರು ಬಡನಿಡಿಯೂರು ಗಾಂಧಿ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣದ ಕನ್ನಡ ಸ್ನಾತಕೋತ್ತರ ಪದವಿ ಯುಎಸ್ಇ ಯುನಿವರ್ಸಿಟಿಯಿಂದ ಎಂ.ಕಾಂ, ಹಾಗೂ ಸಿಐಎ ಮತ್ತು ಸಿ.ಎಸ್.ಎಸ್.ಎ. ಪದವಿ ಗಳಿಸಿಕೊಂಡಿದ್ದಾರೆ.

ಕನ್ನಡ ಸ್ನಾತಕೋತ್ತರ ಪದವಿ ಗಳಿಸಿಕೊಂಡಿರುವುದರಿಂದ ಸಹಜವಾಗಿಯೇ ಸಾಹಿತ್ಯ ಆಸಕ್ತಿಯನ್ನು ಗಳಿಸಿಕೊಂಡಿರುವ ಇವರು 1987ರಿಂದಲೇ ಮುಂಬೈಯ ಕನ್ನಡ ಮಾಸಿಕವಾದ ಪತ್ರಪುಷ್ಪ ,ಮೊಗವೀರ ಮಾಸಿಕದಲ್ಲಿ ಹಾಗೂ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಮುಂಗಾರು ಪತ್ರಿಕೆಗೆ ಲೇಖನಗಳನ್ನು ಬರೆಯುವ ಮೂಲಕ ತನ್ನ ಸಾಹಿತ್ಯ ಪ್ರೀತಿಯನ್ನು ಜಾಗೃತವನ್ನಾಗಿರಿಸಿದ್ದರು. 1988ರಿಂದ ಕೊಲ್ಲಿ ರಾಷ್ಟ್ರಕ್ಕೆ ಆಗಮಿಸಿ ಅಬುಧಾಬಿಯ ಎಡಿಸಿಬಿ ಬ್ಯಾಂಕಿಂಗ್ ಉದ್ಯೋಗದ ಜತೆಗೆ ತನ್ನ ಲೇಖನಿಯ ಹೊಳಪನ್ನು ನೀಡಲು ಮನ ಮಾಡಿದ ಇವರ ಹಲವಾರು ಲೇಖನಗಳು,ಸಂದರ್ಶನ ವರದಿಗಳು ಮಣಿಪಾಲದಿಂದ ಪ್ರಕಟವಾಗುತ್ತಿದ್ದ ಉದಯವಾಣಿ,ರೂಪತಾರ,ಮುಂಬೈಯಿಂದ ಪ್ರಕಟವಾಗುತ್ತಿದ್ದ ಕರ್ನಾಟಕ ಮಲ್ಲ ,ಅಕ್ಷಯ ಮುಂತಾದ ಮಾಸ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಇವರು ನಿರಂತರವಾಗಿ ಪತ್ರಿಕೆಗೆ ಬರೆಯುತ್ತಿದ್ದ ಲೇಖನಗಳಿಂದ ಸಮಾಜದ ತೆರೆಯ ಮರೆಯ ಸತ್ಯಾಸತ್ಯತೆಗಳನ್ನು ಓದುಗರೆಡೆಯಲ್ಲಿ ತೆರೆದಿಡುತ್ತಿದ್ದುದಲ್ಲದೆ ಹಲವಾರು ಪ್ರತಿಭಾನ್ವಿತರು ಬೆಳಕಿಗೆ ಬರಲು ಪ್ರೋತ್ಸಾಹದಾಯವಾಗಿದೆ. ಒರ್ವ ಸತ್ಯನಿಷ್ಟ ಯಾವುದೇ ಉತ್ಪ್ರೆಕ್ಷೆ ರಹಿತ ಲೇಖಕನಾಗಿ ಸಾರಸ್ವತ ಲೋಕಕ್ಕೆ ತನ್ನನ್ನು ತಾನು ಪರಿಚಯಿಸಿಕೊಂಡ ಮನೋಹರ್ ತೋನ್ಸೆಯವರು ತಮ್ಮ ಲೇಖನಿಯಲ್ಲಿ ರಚಿಸಿದ್ದಾರೆ. ಪ್ರಕಾಶ್ ರಾವ್ ಪಯ್ಯಾರ್ ಲೋಕಾರ್ಪಣೆಗೊಳಿಸಿರುವ  . "ತಾರೆ ಎಣಿಸಿ ಮೊತ್ತ ಹೇಳಿ", "ಕನ್ನಡ ನಾಡು ನುಡಿ ರಕ್ಷಣೆ ಯಾಕೆ ಮತ್ತು ಹೇಗೆ?" ,ಶ್ರೀಮತಿ ರಂಜಿನಿ ಸುರೇಶ್ ಅವರ"ಕಂಠಿ ಸರ ಮತ್ತು ಇತರ ಕಥೆಗಳ ವಿಮರ್ಶೆ" ಇವುಗಳು ಮನೋಹರ್ ತೋನ್ಸೆಯವರ  ಪ್ರಮುಖ ಬರಹಗಳಾಗಿದೆ. 

ಮನೋಹರ್ ತೋನ್ಸೆ ಅವರ ಕನ್ನಡಭಾಷೆ,ಸಾಹಿತ್ಯ,ಪತ್ರಿಕೋದ್ಯಮ ಮತ್ತು ಸಮಾಜಸೇವೆ ಗಮನಾರ್ಹವಾಗಿದ್ದು ಮರಳುಗಾಡಿನ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಸಮರ್ಥ ಸಂಘಟಕರೂ ಆಗಿ ಗುರುತಿಸಿಕೊಂಡಿದ್ದಾರೆ. 1996ರಲ್ಲಿ ಪ್ರತಿಷ್ಠಿತ ಅಬುಧಾಬಿ ಇಂಡಿಯಾ ಸೋಶಿಯಲ್ ಸೆಂಟರ್ ನ ಸದಸ್ಯರಾಗಿ,ಆಂಗ್ಲ ಭಾಷಾ ವಾರ್ತಾ ಸಂಚಿಕೆಯ ಸಂಪಾದಕರಾಗಿ,2003ರಲ್ಲಿ ಕೋಶಾಧಿಕಾರಿಯಾಗಿ,2004ರಲ್ಲಿ ಸಾಹಿತ್ಯ ಹಾಗೂ ಕಲಾ ವಿಭಾಗದ ಸಂಘಟಕರಾಗಿ ಸೇವೆ ಸಲ್ಲಿಸಿದ್ದರು. 1989ರಿಂದ 1991ರ ವರೆಗೆ ದುಬಾಯಿ ಕರ್ನಾಟಕ ಸಂಘದ ಚಂದನ ವಾರ್ತೆ ಪತ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.


ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರ ನೇತೃತ್ವದ ಅಬುಧಾಬಿ ಕರ್ನಾಟಕ ಸಂಘದ ಸಂಘಟಕ ಸಮಿತಿಯಲ್ಲಿ ಹಾಗೂ 2006ರಲ್ಲಿ ಈ ಸಂಘಟನೆಯ ವಜ್ರಮಹೋತ್ಸವ ನಡೆದಾಗ ಸಂಘಟನೆಯ ಸ್ಮರಣ ಸಂಚಿಕೆಯ ಪ್ರಕಟಣೆಯ ನೇತೃತ್ವವಹಿಸಿದ್ದರು.ಅಬುಧಾಬಿಯಲ್ಲಿ ಸರ್ವೋತ್ತಮ ಶೆಟ್ಟಿ ಆಯೋಜಿಸಿದ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಯಶಸ್ವಿಗೂ ದುಡಿದ ಪ್ರಮುಖರು ಇವರಾಗಿದ್ದಾರೆ.

1994ರಲ್ಲಿ ತನ್ನ ಸಮುದಾಯದ ಅಭ್ಯುದಯಕ್ಕೊಸ್ಕರ ಅಬುದಾಬಿಯಲ್ಲಿ ಬಿಲ್ಲವರ ಬಳಗ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸಾರಥ್ಯವಹಿಸಿ ಅದರ ಮೂಲಕ ಸಮಾಜದ ಮಕ್ಕಳ,ಮಹಿಳೆಯರ,ಮಹನೀಯರ ಕ್ರೀಡೆ,ಕಲೆ,ಸಾಂಸ್ಕೃತಿಕ,ಸಾಹಿತ್ಯದ ಜತೆಗೆ ವಾರ್ಷಿಕೋತ್ಸವಗಳನ್ನು ಯಶಶ್ವಿಯಾಗಿ ನಡೆಸಿದ್ದರು. 2004ರಲ್ಲಿ ಬಿಲ್ಲವರ ಬಳಗದ ದಶಮಾನೋತ್ಸವದ ವೇಳೆ ಕರ್ನಾಟಕ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಕನ್ನಡ ಸಂಸ್ಕೃತಿ  ಆಕಾಡೆಮಿಯ ಅಧ್ಯಕ್ಷೆ  ಜಯಮಾಲ ಅವರನ್ನು ಮುಖ್ಯ ಅತಿಥಿಗಳಾಗಿ ಅಬುಧಾಬಿಗೆ ಆಹ್ವಾನಿಸಿ ತಮ್ಮ ಸಮುದಾಯದ ಕಲೆ ಸಂಸ್ಕೃತಿಯನ್ನು ಪರಿಚಯಿಸಿ ಅಭಿಮಾನ ಭಾಜನರಾಗಿದ್ದರು. ಕಳೆದ ಮೂರು ವರ್ಷಗಳಿಂದ ಮಂಗಳೂರು ಪುರಭವನದಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಬಿಲ್ಲವ ಸಮುದಾಯದ ಪ್ರತಿಭಾನ್ವಿತ ಹಾಗೂ ಬಡ ಮಕ್ಕಳಿಗೆ ಸಂಘಟನೆಯ ವತಿಯಿಂದ ಸುಮಾರು ಏಳು ಲಕ್ಷ ರೂಗಳ ಶಿಕ್ಷಣ ಧನ ಸಹಾಯ ನೀಡುತ್ತಾ ಬರುವಲ್ಲಿ ಮನೋಹರ್ ತೋನ್ಸೆ ಪ್ರಮುಖ ಪಾತ್ರವಹಿಸುತ್ತಿದ್ದಾರೆ.  


                                        ಸೇವೆಗೆ ಸಂದ ಸನ್ಮಾನ-ಪುರಸ್ಕಾರಗಳು: 


ಸಾಮಾಜಿಕ-ಸಾಹಿತ್ತಿಕ-ಸಾಂಸ್ಕೃತಿಕ ಸೇವೆಗೆ ತನ್ನನ್ನು ತಾನು ಅಹರ್ನಿಶಿ ಅರ್ಪಿಸಿಕೊಂಡಿರುವ ಮನೋಹರ್ ತೋನ್ಸೆ ಅವರ ಗಣನೀಯ ಸಾಧನೆಗಳನ್ನು ಗುರುತಿಸಿಕೊಂಡು ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದು ಮುಡಿಗೇರಿತ್ತು. ಕಾಶಿ ವಿಶ್ವನಾಥ ಟ್ರಸ್ಟ್ ಬೆಂಗಳೂರು ಇದರ ಸುವರ್ಣ ಕನ್ನಡಿಗ ಪ್ರಶಸ್ತಿ 2006,ಮುಂಬೈ ಇಂಡಿಯಾ ಇಂಟರ್ ನೇಶನಲ್ ಫ್ರೆಂಡ್ ಶಿಫ್ ಸೊಸೈಟಿಯ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ 2006, ಬೆಂಗಳೂರಿನ ಸ್ಫೂರ್ತಿ ಚಾರಿಟೇಬಲ್ ಟ್ರಸ್ಟ್ ನ "ಸುವರ್ಣ ರತ್ನ 2007 ಪ್ರಶಸ್ತಿ",2008ರಲ್ಲಿ ಕರ್ನಾಟಕ ಸಂಘ ಮುಂಬೈ ಮತ್ತು ಜ್ಞಾನ ಮಂದಾರ ಅಕಾಡೆಮಿಯ ಆಶ್ರಯದಲ್ಲಿ ನಡೆದ ವಚನ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ "ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ", 2011ರಲ್ಲಿ ಹೃದಯವಾಹಿನಿ ಪತ್ರಿಕೆಯ "ಗಲ್ಫ್ ಬ್ಯಾಂಕರ್ ಪ್ರಶಸ್ತಿ",2019ರ ಅಬುಧಾಬಿ ಕರ್ನಾಟಕ ಸಂಘ ಹಾಗೂ ಹೃದಯವಾಹಿನಿಯ ಸಂಯುಕ್ತ ಆಶ್ರಯದ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ,ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ "ದ.ರಾ.ಬೇಂದ್ರೆ ಪ್ರಶಸ್ತಿ" ಪ್ರಮುಖವಾದವುಗಳಾಗಿದೆ.


ಇದೀಗ ಕಳೆದ 32 ವರ್ಷಗಳಿಂದ ಅಬುಧಾಬಿಯಲ್ಲಿ ನೆಲೆಸಿ ವೃತ್ತಿ ಹಾಗೂ ಪ್ರವೃತ್ತಿಗಳೆರಡಲ್ಲೂ ಸಾರ್ಥಕತೆ ಕಂಡುಕೊಂಡಿರುವ ಮನೋಹರ್ ತೋನ್ಸೆ ಅವರು ಪತ್ನಿ ಪೂರ್ಣಿಮ,ಮಕ್ಕಳಾದ ಮೈತ್ರಿ,ಮುಕ್ತಿಕ ಅವರೊಂದಿಗೆ ಸಂತೃಪ್ತ ಸಂಸಾರ ಸಾಗಿಸುತ್ತಿದ್ದು ಗಲ್ಫ್ ಕನ್ನಡಿಗರಾಗಿ ಅನಿವಾಸಿ ಭಾರತೀಯರ ಹೆಮ್ಮೆಗೆ ಪಾತ್ರರಾಗಿರುವ ಈ ವಿಶೇಷ ಸಾಧಕರನ್ನು ಅಕ್ಷರ ಅಭಿಮಾನದೊಂದಿಗೆ ವಿಶೇಷ ಚಾನೆಲ್ ಅಭಿನಂದಿಸುತ್ತಿದೆ.

Post a Comment

0 Comments