ಸಂಘಟನೆಗೂ ಜೈ....ಸಮಾಜ ಸೇವೆಗೂ ಸೈ ಎಂದ ಕುವೈಟ್ ನ ಉದ್ಯಮಿ ರಮೇಶ್ ಕಿದಿಯೂರು


ವಿದೇಶ_ವಿಶೇಷ.    ಅಂಕಣ -19

ಕುವೈಟ್‌ : ಪ್ರಾಮಾಣಿಕತೆ ಎಂಬ ಒಂದು ಶಬ್ದಕ್ಕೆ ಪ್ರತ್ಯಕ್ಷವಾದ ಉದಾಹರಣೆ ಕೊಡಬಹುದೆಂದರೆ ಅದಕ್ಕೆ ಅನ್ವರ್ಥ ವ್ಯಕ್ತಿ ರಮೇಶ್ ಕಿದಿಯೂರು ಎಂಬವರಾಗಿದ್ದಾರೆ. ದೇಶಿಯ ಸಂಸ್ಕೃತಿ,ಭಾಷೆ, ಕ್ರೀಡೆ,ಸಂಘಟನೆ,ಸಮಾಜ ಸೇವೆ ಹೀಗೆ ಬಹುಮುಖಗಳನ್ನು ಪ್ರತಿನಿಧೀಕರಿಸುವ ಇವರು ಪ್ರಚಾರದ ಮೂಲಕ ಪ್ರಕಟಗೊಂಡಿರುವುದು ಅತೀ ವಿರಳ. ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿರುವ ರಮೇಶ್ ಕಿದಿಯೂರು ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯ ಬಾರದೆನ್ನುವ ಮಾತಿಗೆ ತಕ್ಕ ಮಾದರಿ. ಆದ್ದರಿಂದಲೇ ಇಂದಿನ ನವ ವಿದ್ಯುನ್ಮಾನ ಮಾಧ್ಯಮ ತಂತ್ರಜ್ಞಾನದ ಯುಗದಲ್ಲೂ ಪೋಟೊಕ್ಕೆ ಪೋಸು ನೀಡದೆ ,ಪುಕ್ಕಟೆ ಪ್ರಚಾರ ಬಯಸದೆ ಎಲೆ ಮರೆಯ ಕಾಯಿಯಂತೆ ತನ್ನ ಕೆಲಸ ಕಾರ್ಯದಲ್ಲೇ ತಲ್ಲೀನರಾದ "ಜನತಾ ಜನಾರ್ಧನ" ಎನಿಸಿಕೊಂಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ವಿಶೇಷ ಚಾನೆಲ್ "ವಿದೇಶ_ವಿಶೇಷ" ಅಂಕಣದ ಮೂಲಕ ಒಂದಷ್ಟು ಸವಿಶೇಷತೆಯನ್ನು ಅನಾವರಣಗೊಳಿಸುತ್ತಿದೆ.


ಕಿದಿಯೂರು ಮೂಲತಃ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶ. ಇಲ್ಲಿನ ಮೊಗವೀರ ಕುಟುಂಬಕ್ಕೆ ಸೇರಿದ ದಿ.ಚಂದು ಪುತ್ರನ್ ಹಾಗೂ ದಿ.ಗಿರಿಜ ಸಾಲಿಯಾನ್ ದಂಪತಿಗಳ ಪುತ್ರರಾದ ರಮೇಶ್ ಕಿದಿಯೂರು ತನ್ನ ಗ್ರಾಮವಾದ ಕಿದಿಯೂರಿನ  ಶಾಲೆಯಲ್ಲಿಯೇ ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣವನ್ನು ಗಳಿಸಿಕೊಂಡು ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿನ ಸೈಂಟ್ ಆಲೋಶಿಯೆಷ್ ಸಂಧ್ಯಾ ಕಾಲೇಜನ್ನು ಆಶ್ರಯಿಸಿದರು. ಬಳಿಕ  ಉದರ ನಿಮಿತ್ತ ಊರಲ್ಲಿ ಹಾಗೂ ಸೌದಿ,ಮುಂಬಯಿ ಮೊದಲಾದೆಡೆ ಉದ್ಯೋಗ ಮಾಡಿ, ಅಲ್ಪ ಕಾಲದಲ್ಲಿ ವಿದೇಶದ ಉದ್ಯೋಗದ ಕನಸಿನೊಂದಿಗೆ ಕೊಲ್ಲಿ ರಾಷ್ಟ್ರದ ಕುವೈಟ್ ಗೆ ಆಗಮಿಸಿದರು. ಅಲ್ಲಿ  1993ರಿಂದ ಅಲ್ ಇನ್ ಝಾಸ್  ಕಂಪೆನಿಯ ಕರಾರು ಉದ್ಯಮ (contracting marketing) ಉದ್ಯೋಗ ಕೈಗೊಂಡು ತನ್ನ ಬದುಕಿನ ಯಶಸ್ವಿಯ ಹಾದಿಗೆ ಮುನ್ನಡೆಯಿಟ್ಟರು. 


ಬಾಲ್ಯದಿಂದಲೇ ದೇಹ ಧಾಡ್ಯತೆಯನ್ನು ಸಶಕ್ತವಾಗಿ ಬೆಳೆಸಿಕೊಂಡು ಬಂದಿರುವ ಇವರೊಬ್ಬ ಕ್ರೀಡಾ ಪಟುವಾಗಿ ವಾಲಿಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಕುವೈಟ್ ಗೆ ಆಗಮಿಸಿ ಇಲ್ಲಿನ ಉದ್ಯೋಗದ ಜತೆಗೆ ಸಹಜ ವಾತವರಣ ಲಭಿಸಿದಾಗ ಇವರ ವಾಲಿಬಾಲ್ ಕ್ರೀಡಾ ಪ್ರೇಮದ ಉದ್ದೀಪನೆಗೊಂಡದ್ದಲ್ಲದೆ ಅದಕ್ಕೊಂದು ವಿಶೇಷ ತಿರುವು ದೊರಕಿತು‌‌. 

ಉತ್ತಮ ಕ್ರೀಡಾಳುವಾಗಿ ಗುರುತಿಸಿಕೊಂಡು ಹಲವಾರು ಕ್ರೀಡಾ ಸಂಘಟನೆಯ ಮೂಲಕವೂ ತನ್ನೊಳಗಿನ ಕ್ರೀಡಾಸಕ್ತಿಯನ್ನು ಪ್ರಕಟಿಸಲು ಅವಕಾಶ ಗಿಟ್ಟಿಸಿಕೊಂಡರು.ಕುವೈಟ್‌ ಕನ್ನಡ ಕೂಟದ ಸದಸ್ಯರಾಗಿ, ಒಂದು ವರ್ಷ ಕನ್ನಡ ಕೂಟದ ಹೌಸ್ ಕ್ಯಾಪ್ಟನ್ ಆಗಿ  ಉತ್ತಮ ಸೇವೆಯೊಂದಿಗೆ ಗುರುತಿಸಿಕೊಂಡಿದ್ದಾರೆ.


ತನ್ನ ಮಾತೃ ಮಣ್ಣಿನ ಗ್ರಾಮ್ಯ ಸಹಜತೆಯ ಗುಣಗಳನ್ನು ಕುವೈಟ್ ನಂತಹ ಗಲ್ಫ್ ರಾಷ್ಟ್ರದಲ್ಲೂ ಪಸರಿಸುವ ಜತೆಗೆ ತನ್ನ ಭಾಷೆ, ಸಂಸ್ಕೃತಿ, ಕ್ರೀಡೆಯನ್ನು ಉಳಿಸಲು ಹಾಗೂ ಬೆಳೆಸಲು ವಿಶೇಷ ಪ್ರೋತ್ಸಾಹ ನೀಡಿದ ಅಗ್ರಮಾನ್ಯರಲ್ಲಿ ರಮೇಶ್ ಅವರ ಹೆಸರು ಚಿರಸ್ಥಾಯಿಯಾಗಿದೆ. ತುಳು ಭಾಷೆ,ಸಂಸ್ಕೃತಿ,ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ಕುವೈಟ್‌ ತುಳುಕೂಟದ ಮೂಲಕ ಸಮಿತಿಯಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ,ವೆಲ್ಫೆರ್ ಆಫೀಸರ್ ಆಗಿ,ಉಪಾಧ್ಯಕ್ಷರ ಹೀಗೆ ಹಲವು ಹುದ್ದೆಯನ್ನು ಅಲಂಕರಿಸಿ 2012-2013 ರ ಸಾಲಿನ ಅದ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.


2012ರಲ್ಲಿ ಕಾಪು ರಂಗ ತರಂಗ ನಾಟಕ ತಂಡದಿಂದ ಎರಡು ಪ್ರಮುಖ ನಾಟಕ ಪ್ರದರ್ಶನಕ್ಕೆ ಅವಕಾಶವೊದಗಿಸಿದ್ದರು. 2013 ರಲ್ಲಿ World Tulu Convention ಕಾರ್ಯಕ್ರಮ ಏರ್ಪಡಿಸಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರ ಲಕುಮಿ ತಂಡದವರನ್ನು ಹಾಗೂ ಊರಿನ ಪ್ರಸಿದ್ಧ ಯಕ್ಷಗಾನ  ಕಲಾವಿದರನ್ನು ಕುವೈಟ್‌ ಗೆ ಆಮಂತ್ರಿಸಿ ಭಾರತದ ಸಾಂಸ್ಕೃತಿಕ ಕಲೆಯನ್ನು ಕುವೈಟ್ ನಂತಹ ವಿದೇಶದ ನೆಲದಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸಿದ್ದರು.ಇವರ ಅಧ್ಯಕ್ಷ ಅವಧಿಯಲ್ಲಿ ಕುವೈಟಿನಲ್ಲಿ ತುಳು ಲಿಪಿ ಕಲಿಕಾ ಕಾರ್ಯಗಾರ,ತುಳು ಕ್ಯಾಲೆಂಡರ್ ಗೆ ಪ್ರಾಧಾನ್ಯತೆ ಕಲ್ಪಿಸಲಾಗಿತ್ತು. 2013ರಲ್ಲಿ ಉಡುಪಿ ನಾಗರಿಕ ವೇದಿಕೆಗಾಗಿ ಕುವೈಟ್ ತುಳುಕೂಟದ ವತಿಯಿಂದ ಅಂಬುಲೆನ್ಸ್ ನೀಡಲು ಮುತುವರ್ಜಿ ವಹಿಸಿದ್ದರು. ಇವರು ಉಪಾಧ್ಯಕ್ಷರಾಗಿದ್ದಾಗ ಮಂಗಳೂರು, ಉಡುಪಿ ಜಿಲ್ಲೆಯಲ್ಲಿನ ಕಿಡ್ನಿ ರೋಗಿಗಳಾದ ಬಡವರ ಡಯಾಲಿಸ್ ಗೆ ಸಹಾಯವಾಗುವಂತೆ ಯಂತ್ರಗಳನ್ನು ಕೊಡುಗೆ ಯಾಗಿಸಿದ್ದಾರೆ.ಪ್ರಸ್ತುತ ತುಳು ಕೂಟದ ಸಲಹೆಗಾರರಾಗಿದ್ದಾರೆ


ತನ್ನ ಸಮಾಜದ ಬಂಧುಗಳನ್ನು ಒಗ್ಗೂಡಿಸಿಕೊಂಡು ಕುವೈಟ್‌ ನಲ್ಲಿ  ಮೊಗವೀರ ಅಸೋಸಿಯೇಷನ್ ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಸ್ತುತ್ಯಾರ್ಹ ಸೇವೆ ಸಲ್ಲಿಸಿರುವುದಲ್ಲದೆ ಇದೀಗ ಸಂಘಟನಾ ಕನ್ವೀನರ್ ಆಗಿ ಸೇವಾ ನಿರತರಾಗಿದ್ದಾರೆ. 


ಕಳೆದ ನಾಲ್ಕು ವರ್ಷಗಳಿಂದ ಪ್ರತಿಷ್ಠಿತ ಮೊಗವೀರ ಆಸೋಶಿಯೇಶನ್ ಕುವೈಟ್ MAK Champion Trophy ಎಂಬ ನ್ಯಾಷನಲ್ ಲೇವೆಲ್ ನ ವಾಲಿಬಾಲ್ ಹಾಗು ತ್ರೋಬಾಲ್ ಪಂದ್ಯಾಟವನ್ನು ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಿಕೊಂಡು ಕ್ರೀಡಾ ಪ್ರೇಮಿಗಳ ಪ್ರೀತಿ ಪಾತ್ರರಾಗಿದ್ದಾರೆ.ಇದರಲ್ಲಿ ಕರ್ನಾಟಕ,ಕೇರಳ,ತಮಿಳ್ನಾಡು,ತೆಲುಗು, ನೇಪಾಳಿಗಳಿಗಾಗಿ ಕುವೈಟ್ ಗಣರಾಜ್ಯೋತ್ಸವದಂದು ಏರ್ಪಡಿಸಿ ಅನಿವಾಸಿ ಕ್ರೀಡಾಳುಗಳಿಗೆ ಕುವೈಟ್ ನಲ್ಲಿ ಅವಕಾಶವೊದಗಿಸಿ ಹೆಮ್ಮೆಗೆ ಪಾತ್ರವಾಗಿದೆ.

ಇಷ್ಟು ಮಾತ್ರವಲ್ಲದೆ ಊರಲ್ಲಿಯೂ ಶೈಕ್ಷಣಿಕ ಪ್ರೋತ್ಸಾಹ ಕಲ್ಪಿಸುವ ಈ ಸಂಘಟನೆಯ ವತಿಯಿಂದ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆ, ಪಡುಬಿದ್ರೆಯ ವಿದ್ಯಾ ಸಾಗರ್ ಶಿಕ್ಷಣ ಕೇಂದ್ರಗಳಲ್ಲು ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶೀಫ್ ನೀಡುವ ಮೂಲಕ ಕುವೈಟ್ ನ ಆನಿವಾಸಿ ಮೊಗವೀರ ಬಂಧುಗಳಿಂದ ಸ್ವದೇಶಿಯ ಶೈಕಣಿಕ ಪ್ರೋತ್ಸಾಹ ನೀಡಿದಂತಾಗುತ್ತಿದೆ ಎಂಬ ಉದ್ದೇಶದಿಂದ ಇವರು ಹಾಕಿ ಕೊಟ್ಟ ಸಮಾಜದ ಏಳಿಗೆಗೆ ಪರೋಕ್ಷವಾದ ಬದ್ರ ಬುನಾದಿಯಾಗಿದೆ.


ತಾನು ಸಮಾಜದಿಂದ ಪಡೆದುಕೊಂಡದ್ದನ್ನು ತನ್ನ ಕೈಲಾದ ಮಟ್ಟಿನಲ್ಲಿ ಸಮಾಜಕ್ಕೆ ಸಮರ್ಪಿಸ ಬೇಕು ಎನ್ನುವ ಮನೋಭಾವನ್ನು ಬೆಳೆಸಿಕೊಂಡಿರುವ ರಮೇಶ್ ಕಿದಿಯೂರು ಅವರು ತಮ್ಮ ತಂದೆ ತಾಯಿಯ ಸ್ಮರಣಾರ್ಥವಾಗಿ ಅವರ ಹೆಸರಲ್ಲಿ "ಗಿರಿಚಂದ್ ಚಾರಿಟಬಲ್ ಟ್ರಸ್ಟ್ (ರಿ)" ಎಂಬ ಟ್ರಸ್ಟ್ ನ್ನು ಸ್ಥಾಪಿಸಿ ಶೈಕ್ಷಣಿಕ,ಸಾಮಾಜಿಕ,ಸಾಂಸ್ಕೃತಿಕ, ಕ್ರೀಡಾತ್ಮಕವಾಗಿ ಸಹಾಯ, ಸಹಕಾರದ ಮೂಲಕ ಕಾರ್ಯ ಪ್ರವೃತ್ರರಾಗಿದ್ದಾರೆ. 

ಕೊರೋನ ಎಂಬ  ಮಹಾಮಾರಿಯ ಉಲ್ಬಣ ಸಮಯದಲ್ಲಿ ಊರಲ್ಲಿ ಲಾಕ್ ಡೌನ್ ಘೋಷಿಸಿದಾಗ ಒಂದು ಹೊತ್ತಿನ ಊಟಕ್ಕೆ ತಾತ್ವರ ಪಡುತ್ತಿದ್ದ ಹಲವಾರು ಕುಟುಂಬಕ್ಕೆ ಹಣಕಾಸಿನ ಸಹಾಯ ಹಸ್ತ ಹಾಗೂ ಆಹಾರ ಕಿಟ್ಟ್ ನೀಡಿ ಮಾನವಿಯತೆ ಮೆರೆದಿದ್ದಾರೆ.

ಸಂಗೀತದ ಅಭಿಮಾನದ ಮೂಲಕ ಪ್ರಸಿದ್ಧ ಗಾಯಕ ರಮೇಶ್ಚಂದ್ರರ ನೇತೃತ್ವದಲ್ಲಿ ದೇಶ ವಿದೇಶದಲ್ಲಿ ಇತ್ತೀಚೆಗೆ ಸ್ಥಾಪನೆಯಾದ "ಐಲೇಸಾ" ತಂಡದ ಕುವೈಟ್ ನ ಸದಸ್ಯರಾಗಿಯೂ ರಮೇಶ್ ಕಿದಿಯೂರು ತನ್ನ ಸಂಗೀತ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.


ಇಷ್ಟೆಲ್ಲ ಸಮರೋಪಾದಿಯ ಸಮಾಜ ಸೇವೆಯ ಮುಖವನ್ನು ಎಲ್ಲಿಯೂ ಪ್ರಚಾರಕ್ಕಾಗಿ ಪ್ರಕಟ ಪಡಿಸದ ರಮೇಶ್ ಕಿದಿಯೂರು ಎಂಬ ಈ ವ್ಯಕ್ತಿ ತನ್ನ ಕೆಲಸ ಕಾರ್ಯವನ್ನು ಯಾವುದೇ ಪ್ರಚಾರ ಅಥವ ಪ್ರಶಸ್ತಿ ಪುರಸ್ಕಾರದ ಹಂಗಿಗೆ ಒಡ್ಡಿಕೊಂಡವರಲ್ಲ. ಯಾವುದೇ ಪೋಟೋ ಪೋಸ್ ಗೂ,ಪ್ರಚಾರದ ತೆವಲಿಗೂ ಒಳಗೊಳ್ಳದವರಾದ ಕಾರಣ ಎಲೆ ಮರೆಯ ಕಾಯಿಯಂತಿರುವ ಇವರನ್ನು ಯಾವ ಸಂಘಟನೆಗಳು, ಸರಕಾರವೂ ಗುರುತಿಸಿಲ್ಲ ಎನ್ನುವುದು ವೇದ್ಯವಾಗಿದೆ.


ತುಳುನಾಡಿನ ಮೊಗವೀರ ಕುಟುಂಬದ ಮಾದರಿ ವ್ಯಕ್ತಿಯಾಗಿ ಕುವೈಟ್ ನಂತಹ ಮರಳುಗಾಡಿನಲ್ಲಿ ನಮ್ಮ ದೇಶಿಯ ಸಂಸ್ಕೃತಿಯನ್ನು ಪಸರಿಸಿ, ಸಮಾಜ ಸೇವೆಯನ್ನೂ ಕ್ರೀಡಾತ್ಮಕ ಕಾರ್ಯವನ್ನು ಉಸಿರಾಗಿರಿಸಿದ ರಮೇಶ್ ಕಿದಿಯೂರು ಅವರಂತೆಯೇ 


ಇವರ ಧರ್ಮಪತ್ನಿ ಕವಿತ ಕಿದಿಯೂರವರು ಕೂಡ ಉತ್ತಮ ತ್ರೋಬಾಲ್ ಕ್ರೀಡಾ ಪಟು ಜತೆಗೆ ಮಕ್ಕಳಿಬ್ಬರಾದ ರನಿಯ ಜಪಾನ್ ಕರಾಟೆ ಆಸೋಶಿಯೇಶನ್ ನ‌ ಬ್ಲಾಕ್ ಬೆಲ್ಟ್ ವಿಜೇತೆ,ಕಿರಿಯಾಕೆ ರಿಯ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದಾರೆ. ರಮೇಶ್ ಕಿದಿಯೂರು ಮತ್ತು ಅವರ ಸಂತೃಪ್ತ ಸಂಸಾರ ಸದಾ ಸುಖ ಸಂತೋಷದಿಂದ ಕೂಡಿರಲಿ, ಅವರ ಕ್ರೀಡಾ,ಸಮಾಜೋನ್ಮುಖಿ ಸೇವೆಗೆ ಅರ್ಹ ಪ್ರಶಸ್ತಿ ಪುರಸ್ಕಾರದಿಂದ ಪ್ರಶಂಸಲಿ ಎಂದು ವಿಶೇಷ ಚಾನೆಲ್ ಶುಭ ಹಾರೈಸುತ್ತದೆ‌.

ಜಾಹೀರಾತು





Post a Comment

0 Comments