ವಿದೇಶದ ಕರ್ಮಭೂಮಿಯಿಂದ ಸ್ವದೇಶದ ಧರ್ಮಭೂಮಿಯ ಸೇವಾ ನಿರತ "ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ"

   

ವಿದೇಶ_ವಿಶೇಷ - 13


ದುಬೈ : ಭಾರತದ ಮಣ್ಣಿನ‌ ಋಣಕ್ಕಾಗಿ ಒರ್ವ ಸ್ವಾತಂತ್ರ್ಯ ಹೋರಾಟಗಾರ, ಯೋಧ, 
ಅಥವಾ ರೈತ ಹೀಗೆ ತಾಯ್ನಾಡಿನ ಸೇವೆಯಲ್ಲಿ ಯಾರೆಲ್ಲಾ ನಿಸ್ವಾರ್ಥ ಸೇವಾ ನಿರತರಾಗುತ್ತಾರೋ ಅಂತಹದೇ ಹಾದಿಯಲ್ಲಿ ತಾನು ಸಾಗಬೇಕೆಂಬ ಕನಸನ್ನು ನನಸಾಗಿಸಿದ ಯಶಸ್ವಿ ಸಾಧಕರೊಬ್ಬರ ವಿಶೇಷ ಸಾಧನೆಯ ಬಗ್ಗೆ ಈ ಬಾರಿ "ವಿದೇಶ_ವಿಶೇಷ" ಅಂಕಣ ಅನಾವರಣ ಗೊಳಿಸುತ್ತಿದೆ. 
ಹೀಗೆ ಬದುಕಿನಲ್ಲಿ ಮಹತ್ತರವಾದ ಸೇವಾಕಾಂಕ್ಷೆಯ ಧ್ಯೇಯವನ್ನು ನನಸಾಗಿಸಿದ ವಿಶೇಷ ವ್ಯಕ್ತಿ  ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ.
ಗಲ್ಫ್ ರಾಷ್ಟ್ರವಾದ ದುಬೈಯನ್ನು ತನ್ನ ಕರ್ಮಭೂಮಿಯಾಗಿಸಿ ಭಾರತದ ತಾಯ್ನಾಡಿನ‌ ಧಾರ್ಮಿಕ-ಸಾಮಾಜಿಕ-ಶೈಕ್ಷಣಿಕ-ಸಾಹಿತ್ಯ-ಸಾಂಸ್ಕೃತಿಕ ಸೇವೆಗೈಯುತ್ತಾ ದೇಶ ವಿದೇಶದ ಜನಪ್ರೀತಿಗೆ ಪಾತ್ರರಾಗಿದ್ದಾರೆ. 


ಪ್ರವೀಣ್ ಶೆಟ್ಟಿ ಅವರು ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದಲ್ಲಿ ನಾರಾಯಣ ಶೆಟ್ಟಿ- ಸರೋಜಿನಿ ಶೆಟ್ಟಿ ದಂಪತಿಗಳ ಪುತ್ರರಾಗಿ 1967 ಜುಲೈ 6ರಂದು ಜನಿಸಿದರು.
ಸರಕಾರಿ ಕಾಲೇಜು ಕೋಟೇಶ್ವರ   ಹಾಗೂ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಪದವಿ  ಶಿಕ್ಷಣವನ್ನು ಗಳಿಸಿದ ಅವರು ಬಳಿಕ  ಮುಂಬೈಗೆ ತೆರಳಿ ಅಲ್ಲಿ  ಹೋಟೆಲ್ ನಲ್ಲಿ ದುಡಿದು ತನ್ನ ಸ್ವ ಸಂಪಾದನೆಯಿಂದ ಜೀವನೋಪಾಯ ಕಂಡುಕೊಂಡರು. ಈ ನಡುವೆ 1990ರಲ್ಲಿಕೊಲ್ಲಿ ರಾಷ್ಟ್ರಕ್ಕೆ ಉದ್ಯೋಗಕ್ಕಾಗಿ ಆಗಮಿಸಿದ ಪ್ರವೀಣ್ ಕುಮಾರ್ ಶೆಟ್ಟಿ ಹೋಟೆಲ್ ಉದ್ಯಮದಲ್ಲಿ ಸೂಪರ್ ವೈಸರ್, ಮೇನೆಜರ್, ಜನರಲ್ ಮೇನೆಜರ್ ಹೀಗೆ ವಿವಿಧ ಹುದ್ದೆಗಳನ್ನು 1994ರ ತನಕ ನಿಭಾಯಿಸಿ ಉದ್ಯಮದ ವಿವಿಧ ಮಜಲುಗಳಲ್ಲಿ ಪ್ರಾವೀಣ್ಯತೆ ಗಳಿಸಿಕೊಂಡರು. 
ಬಳಿಕ 1995ರಿಂದ ದುಬೈಯಲ್ಲಿ ತಮ್ಮದೇ ಸ್ವಂತ ಹೋಟೆಲ್ ಉದ್ಯಮವನ್ನು ಆರಂಭಿಸಿದರು. ಮುಂದೆ 1999ನೇ ವರುಷಕ್ಕಾಗುವಾಗ ಹೋಟೆಲ್ ಉದ್ಯಮವನ್ನು ಅರಬ್ ರಾಷ್ಟ್ರದ ಪುಜೈರ,ಉಮ್ ಆಲ್,ಕುಯಿನ್ ಮೊದಲಾದ ನಗರಗಳಿಗೆ ವಿಸ್ತರಿಸಿದರು. 
ಬಳಿಕ ಬಹು ಕನಸು ಹೊಂದಿದ್ದ ಇವರು ಯುಎಇಯಲ್ಲಿ ಪಾಲುದಾರಿಕೆಯಲ್ಲಿ ಫಾರ್ಚೂನ್ ಹೊಟೇಲ್ ಆರಂಭಿಸಿದರು. ತನ್ನ ದೂರದೃಷ್ಟಿಯ ಸ್ಪಷ್ಟವಾದ ಧ್ಯೇಯೋದ್ದೇಶಗಳನ್ನು ಹೊಂದಿದ್ದ ಪ್ರವೀಣ್ ಕುಮಾರ್ ಶೆಟ್ಟಿ ಅವರು ಬಳಿಕ ಪಾಲುದಾರಿಕೆಯನ್ನು ಬಿಟ್ಟು ಸ್ವಂತವಾಗಿ ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್  ಎಂಬ ಹೆಸರಿನಲ್ಲಿ ಕೇವಲ ಯುಎಇ ಮಾತ್ರವಲ್ಲದೆ ಜಾರ್ಜಿಯಾ ಮತ್ತು ಭಾರತದಲ್ಲೂ ತನ್ನ ಒಡೆತನದ ಹೋಟೆಲ್ ಉದ್ಯಮವನ್ನು ವಿಸ್ತರಿಸಿದರು. 
ತನ್ನ ಜವಾಬ್ದಾರಿಗಳ ಜೊತೆಗೆ ಸಾಮಾಜಿಕವಾಗಿ ಅರಬ್ ರಾಷ್ಟ್ರದಲ್ಲಿ ಜನ ಸಂಪರ್ಕ ಸಾಧಿಸಿ ತನ್ನ ಸಾಮಾಜಿಕ ಸೇವಾ ಆಸಕ್ತಿಯನ್ನು ಪ್ರಕಟಿಸ  ಆರಂಭಿಸಿದರು.
ಕಳೆದೆರಡು ದಶಕಗಳಿಂದ ಕನ್ನಡ,ತುಳು,ಕೊಂಕಣಿ, ಬ್ಯಾರಿ ಮುಂತಾದ ಎಲ್ಲಾ ಭಾಷಿಗರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಇವರ ಮಾಲೀಕತ್ವದ ಫಾರ್ಚೂನ್ ಹೋಟೆಲ್ ಅತಿಥ್ಯವನ್ನು ನೀಡುತ್ತಿದೆ. ಕನ್ನಡಿಗರಾದ ಹಲವಾರು ಉದ್ಯೋಗಿಗಳಿಗೂ,ನಿರುದ್ಯೋಗಿಗಳಿಗೆ ದುಬೈಯಲ್ಲಿರುವ ಮುಖ್ಯ ಆಶ್ರಯ ತಾಣ ಇದಾಗಿದೆ. ಈ ಹಿಂದೆ ಭೂಗತ ಪತಾಕಿಗಳಿಂದ ಪ್ರಮುಖರನ್ನು‌ ಟಾರ್ಗೆಟ್ ಮಾಡಿ ಹಫ್ತಾ ವಸೂಲಿ ದಂಧೆ ವ್ಯಾಪಕಗೊಂಡಿರುವ ಕಾಲಘಟ್ಟದಲ್ಲಿ ಪ್ರವೀಣ್ ಶೆಟ್ಟರಿಂದಲೂ ಬೆದರಿಕೆ ಒಡ್ಡಿ ಹಫ್ತಾ ವಸೂಲಿ ನಡೆಯುವ ಪ್ರಯತ್ನ ನಡೆದಾಗ ಅದನ್ನು ಸವಾಲು ಆಗಿ ಎದುರಿಸಿದ್ದರು. ಭೂಗತ ಪಾತಕಿಯೋರ್ವನನ್ನು ಪೋಲಿಸ್ ಇಲಾಖೆ ಮೂಲಕ ಹೆಡೆಮುರಿ ಕಟ್ಟಿ ಹಲವಾರು ಈ ಸಮಸ್ಯೆಯಿಂದ ಪಾರಾಗುವಂತಾಗಿಸಿದ ಎಂಟೆದೆಯ ಬಂಟ ಎನಿಸಿಕೊಂಡಿದ್ದಾರೆ.  
ಪಾರ್ಚೂನ್ ಹೋಟೆಲ್ ಗಳು
ಪ್ರಸ್ತುತ ಫೋರ್ ಸ್ಟಾರ್ ಮತ್ತು ತ್ರಿಸ್ಟಾರ್ ಹೋಟೆಲ್ ಹೊಂದಿದ್ದಯ ಮುಂದೆ ಇನ್ನಷ್ಟು ವ್ಯವಸ್ಥಿತ ಶಾಖೆಗಳನ್ನು ಹೊಂದಲು ಯೋಜನೆ ರೂಫಿಸಿದೆ.ತಮ್ಮ ಉದ್ಯಮದಲ್ಲಿ ಹೆಚ್ಚಿನ ಕನ್ನಡಿಗರಿಗೆ ಉದ್ಯೋಗ ನೀಡಿ ಹಲವಾರು ಕುಟುಂಬದ ಅನ್ನದಾತರೆನಿಸಿಕೊಂಡಿದ್ದಾರೆ.

ಕೊಲ್ಲಿ ರಾಷ್ಟ್ರದಲ್ಲಿರುವ ಕರ್ನಾಟಕ ಎನ್ ಆರ್ ಐ ಫಾರಮ್ ಯುಎಇ ಇದರ ಅಧ್ಯಕ್ಷರಾಗಿ, ಪ್ರತಿಷ್ಠಿತ ಶಾರ್ಜಾ ಕರ್ನಾಟಕ ಸಂಘದ ಉನ್ನತ ಸಲಹ ಸಮಿತಿ ಸದಸ್ಯರಾಗಿಯೂ,ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ದುಬೈ ಘಟಕದ ಗೌರವಾಧ್ಯಕ್ಷರಾಗಿ  ಸಂಘಟನಾತ್ಮಕ  ಸೇವೆ ಸಲ್ಲಿಸುತ್ತಿದ್ದಾರೆ.


ಶಿಕ್ಷಣ ಹಾಗೂ ಸಾಮಾಜಿಕ-ಧಾರ್ಮಿಕ ರಂಗದ ಸೇವಾ ಸಾರಥಿ:
ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ಅಹರ್ನಿಶಿ ಸೇವಾ ನಿರತರಾಗಿರುವ ಪ್ರವೀಣ್ ಶೆಟ್ಟರು ದುಬೈಯಲ್ಲಿ ನಡೆಯುತ್ತಿರುವ "ಕನ್ನಡ ಪಾಠ ಶಾಲೆ " ಎಂಬ ಕನ್ನಡ ಮಾಧ್ಯಮ ತರಗತಿ ಆರಂಭಿಸಲು ಗಮನಾರ್ಹ ಪಾತ್ರವಹಿಸಿದ್ದಾರೆ. ತಾಯ್ನಾಡಿನ ಬಡ ಹಾಗೂ ಪ್ರತಿಭಾವಂತ ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕಾಗಿ ಪ್ರತಿವರ್ಷ ಜಾತಿ ಮತ ಧರ್ಮ ನೋಡದೆ  ಆರ್ಥಿಕ ನೆರವು ನೀಡುತ್ತಾರೆ.ಮುಂಬಯಿ, ಮಂಗಳೂರು, ಕುಂದಾಪುರ, ಉಡುಪಿಯ ಬಂಟರ ಸಂಘ, ದುಬೈ ಬ್ಯಾರಿ ಕಲ್ಚರಲ್ ಫಾರಂ ಯುಎಇ ಮುಂತಾದ ಸಂಘ ಸಂಸ್ಥೆಗಳ ಮೂಲಕ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ.  ಕಾವಾಡಿ ಸರಕಾರಿ ಪ್ರೌಢಶಾಲೆಗೆ ಉಚಿತವಾಗಿ ಕಟ್ಟಡ ನಿರ್ಮಾಣ, ಶಾಲಾ ವಾಹನದ ವ್ಯವಸ್ಥೆ, 
ಕುಂದಾಪುರದ ಸ್ಪೂರ್ತಿ ಧಾಮಕ್ಕೆ ಪಠ್ಯ ಕೋಣೆ ಹಾಗೂ ಬೃಹತ್ ರಂಗ ವೇದಿಕೆ ನಿರ್ಮಾಣ,ವಕ್ವಾಡಿಯಲ್ಲಿ ಅಂಚೆ ಕಚೇರಿ ಕಟ್ಟಡ ಹಾಗೂ ಬಸ್ಸು ತಂಗುದಾಣ, ಬ್ರಹ್ಮಾವರ ಬಸ್ಸು ತಂಗುದಾಣದಲ್ಲಿ ಸಾರ್ವಜನಿಕರಿಗಾಗಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ,ತಂದೆಯ ಹೆಸರಿನಲ್ಲಿ ಮಂಗಳೂರಿನಲ್ಲಿ ರಾಜ್ಯ ಸರಕಾರಿ ನೌಕರರ ಒಕ್ಕೂಟಕ್ಕೆ ಕಟ್ಟಡ ನಿರ್ಮಾಣ,  ತನ್ನೂರಿನ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಸುತ್ತು ಗೋಪುರ,ವಕ್ವಾಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಕಳೆದ 25 ವರ್ಷಗಳಿಂದ ಅನ್ನದಾನ ಸೇವೆ, ಕಾವಾಡಿಯ ಗಣೇಶೋತ್ಸವಕ್ಕೆ ಕಳೆದ 12 ವರ್ಷಗಳಿಂದ ಅನ್ನದಾನ ಸೇವೆ ಸಹಿತ ನಾಡಿನಾದ್ಯಂತ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದಾರೆ.ಇವರ ನೇತೃತ್ವದಲ್ಲಿ ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಕನ್ನಡಿಗರನ್ನು ಸೇರಿಸಿಕೊಂಡು ಪ್ರಥಮ ಗಣೇಶೋತ್ಸವ ಆಚರಣೆಗೆ ತೊಡಗಲಾಗಿತ್ತು. ದುಬೈ ಹಾಗೂ ನಾಡಿನಲ್ಲಿ ನಡೆಯುವ ಪ್ರತಿ ತುಳು ಕನ್ನಡ ಕಾರ್ಯಕ್ರಮ, ಧಾರ್ಮಿಕ ,ಸಾಂಸ್ಕೃತಿಕ, ಕ್ರೀಡೆ ಮುಂತಾದವುಗಳಿಗೆ ಕೊಡುಗೈ ಸಹಾಯ ನೀಡುವಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಹೆಸರು ಮೊದಲ ಸಾಲಿನಲ್ಲಿರುತ್ತದೆ. 

ಕೋರೋನ ಕಾಲದಲ್ಲಿ ಕೈ ಮಿಗಿಲಾದ ಸೇವೆ...... 
ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಅರಬ್ ರಾಷ್ಟ್ರದಲ್ಲಿದ್ದ ಕನ್ನಡಿಗರ ಸಹಿತ ಅನೇಕರಿಗೆ ಸಹಾಯ,ಸಹಕಾರ ನೀಡುತ್ತಾ ಧೈರ್ಯ ತುಂಬುವ ಕೆಲಸವನ್ನು ಮಾಡಿರುವುದು ಮಾದರಿ ಆಗಿದೆ. ಕೋರೋನ ಬಾಧಿತರ ಕ್ವಾರಂಟೈನ್ ವ್ಯವಸ್ಥೆ ಗೆ ತನ್ನ ಎರಡು ಹೋಟೆಲ್ ಗಳನ್ನು ನೀಡಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಉದ್ಯೋಗ,ಮನೆ ಕಳಕೊಂಡವರಿಗೆ ತಮ್ಮ ಹೋಟೆಲ್ ನಲ್ಲಿ ಉಚಿತ ವಸತಿ,ಆಹಾರ ಹಾಗೂ ಔಷಧೀಯ ವ್ಯವಸ್ಥೆ ಕಲ್ಪಿಸಿದ್ದಾರೆ. ವೈಯಕ್ತಿಕವಾಗಿ ಮಾತ್ರವಲ್ಲದೆ ಕರ್ನಾಟಕ ಎನ್ ಆರ್ ಐ ಫಾರಂ ಹಾಗೂ ಯುಎಇ ಕನ್ನಡಿಗರ ಹೆಲ್ಪ್ ಲೈನ್ ಎಂಬ ಸಂಘಟನೆಗಳ ಮೂಲಕ ಆಹಾರ ಕಿಟ್,ದುಬೈಯಲ್ಲಿದ್ದ ಭಾರತೀಯರಿಗೆ ಕೋರೊನ ಸಂದರ್ಭದಲ್ಲಿ ಊರಿಗೆ ಮರಳಲು ಕೇಂದ್ರ ಸರ್ಕಾರ ಅನುಮತಿ ನೀಡುವಂತೆ ಮಾಡಿ ಖಾಸಗೀ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿದುದರಲ್ಲಿ ಪ್ರವೀಣ್ ಶೆಟ್ಟಿ ಗಮನಾರ್ಹರಾಗಿದ್ದಾರೆ‌. ಮಂಗಳೂರು ಮತ್ತು ಬೆಂಗಳೂರಿಗೆ ಚಾರ್ಟರ್ ವಿಮಾನ ವ್ಯವಸ್ಥೆಗೆ ಅನುಮತಿ ಲಭಿಸಿದಂತಾಗಿದ್ದು ಮಾತ್ರವಲ್ಲದೆ ತನ್ನ ಹೋಟೆಲಿನ 177 ಸಿಬ್ಬಂದಿಗಳನ್ನು ಮೊದಲ ಖಾಸಗೀ ಚಾರ್ಟರ್ ವಿಮಾನದ ಮೂಲಕ ಮಂಗಳೂರಿಗೆ ಕಳುಹಿಸಿದ ಕೀರ್ತಿ ಶೆಟ್ಟರದ್ದಾಗಿದೆ. ಅ ಬಳಿಕ ಸಮಾನ ಮನಸ್ಕರಾದ ಸ್ನೇಹಿತರೊಡನೆ ಸೇರಿ ಐದು ಚಾರ್ಟರ್ ವಿಮಾನಗಳನ್ನು ,ರೋಗಿಗಳುಗೆ ಔಷಧೀಯ ವ್ಯವಸ್ಥೆ ಮಾಡಿ ಕೋರೋನ ನಿಗ್ರಹಕ್ಕೆ ಸಮರೋಪಾದಿಯ ಸೇವೆ ಸಲ್ಲಿಸಿದ್ದಾರೆ.
ಪ್ರವೀಣ್ ಕುಮಾರ್  ಶೆಟ್ಟರ ಜೀವಮಾನದ ಸಾಧನೆಯನ್ನು‌ ಅಭಿನಂದಿಸಿದೆ.
 2011ರ ಅಂತರಾಷ್ಟ್ರೀಯ ಆಯರ್ಭಟ ಅವಾರ್ಡ್,
ಇಂಟರ್ ನೇಶನಲ್ ಫೀಸಾ ಅವಾರ್ಡ್, ಕರ್ನಾಟಕ ಸಂಘ ಶಾರ್ಜಾದ ಪ್ರತಿಷ್ಠಿತ "ಮಯೂರ ಪ್ರಶಸ್ತಿ" ,
ಜಾರ್ಜಿಯ ದೇಶದ ಉದ್ಯಮ ಪುರಸ್ಕಾರ, 2017ರ ಬಹರೈನ್ ಯಶಸ್ವಿ ಉದ್ಯಮಿ ಪುರಸ್ಕಾರ, 
ಅಬುದಾಬಿ ಕರ್ನಾಟಕ ಸಂಘದ ವತಿಯಿಂದ ದುಬೈ ವಿಶ್ವ ಕನ್ನಡ ಸಮ್ಮೇಳನದಲ್ಲಿ "ವಿಶ್ವ ಮಾನವ ಪ್ರಶಸ್ತಿ-2009", ಗೋವಾ ಸರಕಾರದ ಬೀಚ್ ಫೆಸ್ಟಿವಲ್ 2019 ಪುರಸ್ಕಾರ, ಶ್ರೇಷ್ಠ ಕನ್ನಡಿಗ ಎನ್ ಆರ್ ಐ ಉದ್ಯಮಿ 2019, ಬೆಂಗಳೂರಿನ ಅಭಿನಂದನ್ ಸಾಂಸ್ಕೃತಿಕ ಟ್ರಸ್ಟ್ ನ " ಕೀರಿಟ ಪ್ರಶಸ್ತಿ -2017", ಕೇರಳದ 14ನೇ ಪ್ರವಾಸಿ ಭಾರತೀಯ ದಿನದ "ಶ್ರೇಯಸ್ ಅವಾರ್ಡ್ 2016", ದಕ್ಷಿಣ ಭಾರತ ಪ್ರವಾಸೋದ್ಯಮ ಆಂಧ್ರ ಪ್ರದೇಶದ ವಿಶಾಖ ಪಟ್ಟಣದ " ಒವರ್ ಸೀಸ್ ಟೂರಿಸಂ ಅವಾರ್ಡ್ 2016" ಮೊದಲಾದ ಪ್ರಶಸ್ತಿ-ಪುರಸ್ಕಾರ ನೀಡುವ ಮೂಲಕ ಗೌರವಿಸಿದೆ. 
ಇಷ್ಟು ಮಾತ್ರವಲ್ಲದೇ ತುಳು - ಕನ್ನಡಪರ ಸಂಘ ಸಂಸ್ಥೆಗಳಿಂದ ,ಬಂಟರ ಸಂಘದಂತಹ ಹಲವು ಸಾಮಾಜಿಕ ಸಂಘಟನೆಗಳಿಂದ ಲೆಕ್ಕವಿಲ್ಲದಷ್ಟು ಸನ್ಮಾನ ಗೌರವಗಳಿಗೆ ಪಾತ್ರರಾಗಿದ್ದಾರೆ. 

ಸಂತೃಪ್ತ ಕುಟುಂಬ: 
ಧರ್ಮಪತ್ನಿ ಶ್ರೀಮತಿ ರೂಪಾಲಿ ಶೆಟ್ಟಿ ಮತ್ತು  ಮಕ್ಕಳಾದ ಪ್ರಾಚಿ ಶೆಟ್ಟಿ  ಮತ್ತು
ಪರಂ ಶೆಟ್ಟಿ ಅವರೊಂದಿಗೆ  ಸಂತೃಪ್ತ ಸಂಸಾರ ಹೊಂದಿರುವ ಶೆಟ್ಟರು ಪ್ರತಿ ವರ್ಷ ತಮ್ಮ ತಂದೆ ತಾಯಿಯ ವಿವಾಹ ವಾರ್ಷಿಕ ದಿನಾಚರಣೆಯನ್ನು ಹಾಗೂ ತನ್ನ ಜನ್ಮಾಚರಣೆಯಂದು ರಕ್ತದಾನ ಶಿಬಿರ ಆಯೋಜಿಸುತ್ತಾ ಆಡಂಭರದ ಆಚರಣೆಗಳಿಗಿಂತಲೂ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾ ಆದರ್ಶಪ್ರಾಯರಾಗಿದ್ದಾರೆ. ಇವರ ಎಲ್ಲಾ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೆ ತಮ್ಮ ಧರ್ಮ ಪತ್ನಿ ಹಾಗೂ ಮಕ್ಕಳ ಸಂಪೂರ್ಣ ಬೆಂಬಲ ಈ ಹಾದಿಯಲ್ಲಿ ಸಾಗಲು ಸುಗಮವಾಗಿಸಿದೆ ಎಂದು ಅಭಿಮಾನ ಭಾಜನರಾಗಿದ್ದಾರೆ.
ವಿದೇಶದಲ್ಲಿದ್ದರೂ ಸದಾ ತನ್ನ ತಾಯ್ನಾಡಿನ ತುಡಿತ, ಸಾಮಾಜಿಕ-ಧಾರ್ಮಿಕ-ಶೈಕ್ಷಣಿಕ-ಸಾಂಸ್ಕೃತಿಕ ಮಿಡಿತ ಇರುವಂತಹ ಸಹೃದಯಿ ಪ್ರವೀಣ್ ಶೆಟ್ಟರು ನಾಡಿನ ಒಳಿತಿಗಾಗಿ ಸಲ್ಲಿಸುವ ಸೇವೆ ಸ್ತುತ್ಯಾರ್ಹ. ಅವರಿಗೆ ಸರ್ವ ವಿಧದ ಕೀರ್ತಿ-ಯಶಸ್ಸು ಮುಂದೆಯೂ ಲಭಿಸಲೆಂದು "ವಿಶೇಷ" ಶುಭ ಹಾರೈಕೆ.


Post a Comment

0 Comments