ಸುಪ್ತ ಪ್ರತಿಭೆಗಳ ಗಾಯನಕ್ಕೆ "ಇಂಚರ" ಒದಗಿಸುವ ಸಂಗೀತ ಸಾಧಕ - ಕೇಶವ ಕನಿಲ

 

.                     ಕೇಶವ ಕನಿಲ
                
                (ಪ್ರತಿಭಾ ವಿಶೇಷ)
 ತನ್ನಲ್ಲಿರುವ ಪ್ರತಿಭೆಯ ಜತೆಗೆ ಇತರರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಕಂಡು ಹಿಡಿದು ಪ್ರೋತ್ಸಾಹಿಸುವ ಸಹೃದಯತೆ ಕೆಲವರಿಗಷ್ಟೆ ಸೀಮಿತ. ಅಂತಹ ಒರ್ವ ಅಪ್ರತಿಮ‌ ಗಾಯಕ,ಪ್ರತಿಭೆಗಳ ಸಂಘಟಿಸುವ ನಾಯಕ,ಗ್ರಾಮೀಣ ಪ್ರದೇಶದ ಎಲೆ ಮರೆಯ ಕಾಯಿಯಂತಿರುವ ಸಂಗೀತ ಸಾಧಕನ ಬದುಕು ಬರಹದ ಮೂಲಕ ವಿಶೇಷ ಚಾನೆಲ್ ನಿಮ್ಮ ಮುಂದೆ ಅನಾವರಣಗೊಳಿಸುತ್ತಿದೆ. 
ಇವರು ಮಂಜೇಶ್ವರ ತಾಲೂಕಿನ  ಕನಿಲದ ಎಂ.ಕೆ.ಮುಂಡಪ್ಪ- ಲಕ್ಷ್ಮಿ ದಂಪತಿಗಳ ಪುತ್ರ ಕೇಶವ ಕನಿಲ. 

ಮಂಜೇಶ್ವರದ ಆಸುಪಾಸಿನಲ್ಲಿ ಎಲ್ಲೆಡೆ ಶುಭ ಸಮಾರಂಭಗಳಲ್ಲಿ  ಸಂಗೀತ ರಸಮಂಜರಿ ಕಾರ್ಯಕ್ರಮ ಇರಲಿ ಅಲ್ಲಿ ಈ ಸುಮಧುರ ಕಂಠದ ಗಾಯಕನ ಹೆಸರು ಕೇಳಿ ಬರುವುದು ಖಚಿತ. ಹಾಡುವುದನ್ನು ಹವ್ಯಾಸವಾಗಿ ಸ್ವೀಕರಿಸಿದ ಇವರು ಸಂಗೀತವನ್ನು ಎಂದಿಗೂ ಬಿಸಿನೆಸ್ ಆಗಿ ನೋಡಿಕೊಂಡವರೇ ಅಲ್ಲ. ಈಗೀನ ಹೆಚ್ಚಿನವರು ಸಂಗೀತದಿಂದ ಸಾವಿರಗಟ್ಟಲೆ ಹಣ ಗಳಿಸುವುದನ್ನೇ ಲಕ್ಷ್ಯವಾಗಿರಿಸಿರುವಾಗ ಇವರು ಸ್ವತಃ ತನ್ನ ಕೈಯಿಂದ ಹಣ ಸುರಿದು ಸಂಗೀತ ಪ್ರೋತ್ಸಾಹದ ಮೂಲಕ ಮಾದರಿಯಾಗಿದ್ದಾರೆ. 
ಬಂಗ್ರಮಂಜೇಶ್ವರದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ,ಬಳಿಕ ಉಳ್ಳಾಲ ಮದನಿ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಗಳಿಸಿದ್ದಾರೆ. 

                    ಸಂಗೀತದ ಸಾರಥ್ಯ....
ಸುಮಧುರವಾದ ಕಂಠ ಸಿರಿಯನ್ನು ಹೊಂದಿದ ಕೇಶವ ಕನಿಲ ಅವರು 1996ರಲ್ಲಿ ಸಂಗೀತ ವಿದ್ವಾನ್ ಹಂಸ ಪೆರ್ನಡ್ಕ ಎಂಬವರಿಂದ ಕುಂಬಳೆಯಲ್ಲಿ ಶಾಸ್ತ್ರೀಯ ಸಂಗೀತಾಭ್ಯಾಸ ನಡೆಸಿದ್ದರು. ಬಳಿಕ ಭಕ್ತಿಗೀತೆ, ಭಾವಗೀತೆ,ಚಿತ್ರಗೀತೆಗಳನ್ನು ಹಾಡ ತೊಡಗಿದರು. ಊರೂರಲ್ಲಿ ಹಲವಾರು ಸಂದರ್ಭಗಳು, ಸದಾವಕಾಶಗಳು ಲಭಿಸುತ್ತಿರುವಾಗ 
ಕಳೆದ ಏಳೆಂಟು ವರ್ಷದ ಹಿಂದೆ "ಇಂಚರ ಮೆಲೋಡಿಸ್" ಎಂಬ ಸಂಗೀತ ತಂಡವನ್ನು ಆಸ್ತಿತ್ವಕ್ಕೆ ತಂದರು. ಇದರ ಮೂಲಕ ಹಲವಾರು ಗಾಯಕರನ್ನು,ವಾದ್ಯೋಪಕರಣ ವಾದಕರನ್ನು ಸಂಗೀತ ಲೋಕಕ್ಕೆ ಕೊಡುಗೆಯಾಗಿಸಿದರು. 

               ಈ ಗಾಯಕನೇ ನಾಯಕ....
ತಮ್ಮ‌ ಉದ್ಯಮ ಸ್ಥಳವನ್ನೇ ಕೇಂದ್ರವಾಗಿಸಿ ಎಲೆ ಮರೆಯ ಕಾಯಿಯಂತಿದ್ದ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ನಡೆಸಿದರು. ಇವರಿಂದಾಗಿ ವೇದಿಕೆ ಹಿಂಭಾಗದಲ್ಲಿ ನಿಂತು ಹಾಡಲು ಆಸೆ ಪಡುತ್ತಿದ್ದ ಅದೇಷ್ಟೋ ಗಾಯಕ/ ಗಾಯಕಿಯರು ಇಂದು ವೇದಿಕೆ ಏರಿ ಹಾಡುವ ಮೂಲಕ ಸಂಗೀತದ ಸಾಧನೆಯಲ್ಲಿ ಮೇಲಸ್ತರವನ್ನು ತಲುಪಿದ್ದಾರೆ. 

ಊರ,ಪರವೂರುಗಳಲ್ಲಿ ಸಂಗೀತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ  ಹಲವಾರು ಕಾರ್ಯಕ್ರಮಗಳನ್ನು ಸ್ವತಃ ಮುತುವರ್ಜಿವಹಿಸಿ ಸಂಘಟಿಸಿದ್ದಾರೆ. ಹೀಗೆ ಈ ಗಾಯಕನೇ ನಾಯಕನಾಗಿ ತನ್ನೂರ ಸಂಗೀತ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಇದೀಗ ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಮಹಾಬಲ ಭಾಗವತ್ ಎಂಬವರ ಬಳಿ ಹಿಂದೂಸ್ತಾನಿ ಸಂಗೀತದ ಅಭ್ಯಾಸ ನಿರತರಾಗಿರುವ ಕೇಶವ ಕನಿಲ ಅವರು ಇತ್ತೀಚೆಗೆ

"ನಾಗೇಶ್ ನಿವಾಸ್" ಎಂಬ ಕನ್ನಡ ಚಲನಚಿತ್ರಕ್ಕಾಗಿ ಹಾಡೊಂದು ಹಾಡುವ ಮೂಲಕ ಚಿತ್ರರಂಗದ ನಂಟನ್ನು ಬೆಳೆಸಿಕೊಂಡಿದ್ದಾರೆ. 
ಪ್ರಸ್ತುತ ಕಡಂಬಾರ್ ಸಮೀಪದ ಇಡಿಯಾ ಎಂಬಲ್ಲಿ ಪತ್ನಿ ಲವೀನಾ,ಮಕ್ಕಳಾದ ಗಹನ್ (ದ್ವಿತೀಯ ಪಿಯುಸಿ ವಿದ್ಯಾರ್ಥಿ), ನೇಹಾಲ್ (6ನೇ ತರಗತಿ ವಿದ್ಯಾರ್ಥಿ) ಎಂಬವರೊಡನೆ ಸಂತೃಪ್ತ ಸಂಸಾರ ಸಾಗಿಸುತ್ತಿದ್ದಾರೆ. 
ವೃತ್ತಿಯಲ್ಲಿ ಉದ್ಯಮಿ,ಪ್ರವೃತ್ತಿಯಲ್ಲಿ ಸಂಗೀತವನ್ನು ಮೆಚ್ಚಿಕೊಂಡಿರುವ ಕೇಶವ ಕನಿಲ ಅವರ ಬದುಕಿನ ಭಾವ- ರಾಗ-ತಾಳಗಳು ಸುಮಧುರವಾಗಿ ಮೇಳೈಸಿ ಸಂಗೀತದ "ಇಂಚರ" ಹೊರ ಹೊಮ್ಮಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.
ಕೇಶವ ಕನಿಲ ಅವರ ಸಂಪರ್ಕ ಸಂಖ್ಯೆ: +91 99465 23124

Post a Comment

0 Comments