ವೃತ್ತಿಯಲ್ಲಿ ಸಾಮಾನ್ಯ ಬಸ್ಸು ಚಾಲಕ ಮತ್ತು ಮಾಲಕರಾಗಿ ಪ್ರವೃತ್ತಿಯ ಮೂಲಕ ತುಳು ಸಾಹಿತಿ,ಆಧ್ಯಾತ್ಮಿಕ,ಧಾರ್ಮಿಕ,ಸಾಮಾಜಿಕ,ಸಾಂಸ್ಕೃತಿಕ ರಂಗದ ಅಸಾಮಾನ್ಯ ಸಾಧಕರಾಗಿ ಗುರುತಿಸಿಕೊಂಡಿರುವ ಮಂಜೇಶ್ವರ ಸಮೀಪದ ಉದ್ಯಾವರ ಮಾಡದ ಸಂಜೀವ ಶೆಟ್ಟಿ
ಉತ್ತಮ ಕೆಲಸಕ್ಕೆ ಎಂದೂ ಅಳಿವಿಲ್ಲ.ಮರಗಳು ಹಣ್ಣಿನಿಂದ ಹೇಗೆ ಗುರುತಿಸಲ್ಪಡುತ್ತೀದೆಯೋ ,ಮಾನವನು ಕೂಡ ತನ್ನ ಉತ್ತಮ ಕೆಲಸಗಳಿಂದ ಪರಿಚಿತನಾಗುತ್ತಾನೆ ಎಂಬುದೇ ಸಂಜೀವ ಶೆಟ್ಟರ ಬದುಕಿನ ಆದರ್ಶತೆಯ ಧ್ಯೇಯ.
ಮೂಲತಃ ಮುಳ್ಳೇರಿಯದ ಮೌವ್ವರು ಸಮೀಪದ ತಲೆಬೈಲು ಶಾಂತಣ್ಣ ಶೆಟ್ಟಿ- ಅಚಕ್ಕ ಹೆಂಗ್ಸು ದಂಪತಿಗಳ ಪುತ್ರರಾಗಿ ಕೃಷಿ ಪ್ರಧಾನವಾದ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಸಂಜೀವ ಶೆಟ್ಟರು ಬದುಕಿನ ಪಯಣದಲ್ಲಿ ಬಹಳಷ್ಟು ಕಷ್ಟ-ಸುಖಗಳನ್ನು ಕಂಡುಂಡವರು.ತನ್ನ 10ನೇ ವರುಷದ ಬಾಲ್ಯದಲ್ಲಿಯೇ ಬಸ್ಸಿನ ಕ್ಲಿನರ್ ಆಗಿ ದುಡಿಯುವ ಜತೆಗೆ ಹಿರಿಯ ಚಾಲಕರಿಂದ ಚಾಲನೆ ಕಲಿತುಕೊಳ್ಳಲು ತೊಡಗಿದವರು.ಆಗ ಹೀಗಿನಂತೆ ಡ್ರೈವಿಂಗ್ ತರಬೇತಿ ಶಾಲೆಗಳು ಇದ್ದಿರದ ಸಂದರ್ಭದಲ್ಲಿ ವರ್ಷನೂ ಗಟ್ಟಲೆ ವಿಸಿಲ್ ಊದಿ,ಬಸ್ಸು ಶುಚಿಗೊಳಿಸಿ, ಬಸ್ಸಲ್ಲೇ ಮಲಗಿ,ಡ್ರೈವರ್ -ಕಂಡಕ್ಟರ ಬೈಗುಳದ ಜತೆಗೆ ಪ್ರಯಾಣಿಕರ ಸಹಸ್ರ ನಾಮಾರ್ಚನೆಗೂ ಗುರಿಯಾಗಿ ಚಾಲಕನಾಗುವ ಪಟ್ಟು ಬಿಡದೆ ಸ್ಟೇರಿಂಗಲ್ಲಿ ಬದುಕು ಕಟ್ಟಿಕೊಳ್ಳುವ ಕನಸ್ಸನ್ನು ನನಸಾಗಿಸಿದವರು.
ಸಾಧರಣ 45 ವರ್ಷಗಳಿಗೂ ಹೆಚ್ಚು ಕಾಲ ಅಪಘಾತ ರಹಿತವಾಗಿ ತನ್ನ ವೃತ್ತಿ ಜೀವನವನ್ನು ನಡೆಸಿ ಸಮಾಜದಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮ್ಮ ವೃತ್ತಿ ನಿರ್ವಹಣೆಯ ನಡುವೆ ಮೌವ್ವಾರಿನಿಂದ ಕುಂಬಳೆಗೆ ಬಂದು ನೆಲೆಸಿದ ಶೆಟ್ಟರು ಕಾಸರಗೋಡಿನ ಅಂದಿನ ಪ್ರಖ್ಯಾತ ಸಾರಿಗೆ ಸಂಸ್ಥೆಗಳಾದ ಶಾಸ್ತ, ಕೆಸಿಬಿಟಿ ,ಮೆಹಬೂಬ್,ಸಫರ್ ಹಾಗೂ ಕೋಹಿನೂರು ಬಸ್ಸುಗಳಲ್ಲಿ ವರ್ಷಾನುಗಟ್ಟಲೆ ಸೇವೆ ಸಲ್ಲಿಸಿದರು.ಈ ನಡುವೆ ಕಾಸರಗೋಡು-ಮಂಗಳೂರು ರೂಟಿನಲ್ಲಿ ತಮ್ಮದೇ ಸ್ವಂತ ಮಾಲಿಕತ್ವದಲ್ಲಿ ದುರ್ಗಾದೇವಿ ಎಂಬ ಎರಡು, ಮೂರು ಬಸ್ಸುಗಳನ್ನು ಹಲವಾರು ವರ್ಷಗಳ ಕಾಲ ಓಡಾಟ ನಡೆಸಿ ಸಾರಿಗೆ ಸಂಚಾರದಲ್ಲಿ ಸಮರ್ಥ ಸೇವೆಗೆ ಪಾತ್ರರಾಗಿದ್ದಾರೆ.
ಮಂಗಳೂರಿನ ಬಿಕರ್ನಕಟ್ಟೆಯ ಕಿಟ್ಟಣ್ಣ ಶೆಟ್ಟಿ-ವಸಂತಿ ದಂಪತಿಗಳ ಪುತ್ರಿಯಾದ ಅಮಿತಾ ಎಂಬವರನ್ನು 1979 ಜೂನ್ 11ರಂದು ಗುರು ಹಿರಿಯರ ಬಂಧು ಬಾಂಧವರ ಸಮಕ್ಷಮದಲ್ಲಿ ಕುಂಬಳೆಯ ಸದ್ಗುರು ನಿತ್ಯಾನಂದ ಮಠದ ಸಭಾಂಗಣದಲ್ಲಿ ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬದುಕಿನ ಏರಿಳಿತದಲ್ಲಿ ಪತಿಗೆ ತಕ್ಕ ಸತಿಯಾಗಿ ಸಂಸಾರದ ಸಾರಥ್ಯವಹಿಸಿಕೊಂಡ ಇವರು ಆದರ್ಶತೆಯ ಬದುಕಿಗೆ ಹರಿಕಾರರಾಗಿದ್ದಾರೆ.
ಕುಂಬಳೆಯಿಂದ ಉದ್ಯಾವರ ಸಮೀಪದ ಮಾಡದ ಮಣ್ಣಿಗೆ ಬಂದ ಶೆಟ್ಟರು ತಮ್ಮ ಬದುಕನ್ನು ಇಲ್ಲಿಯೇ ಭದ್ರವಾಗಿಸುವ ಜತೆಗೆ ಇಲ್ಲಿನ ಧಾರ್ಮಿಕ ,ಸಾಮಾಜಿಕ ಮತ್ತುಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಪ್ರಸ್ತುತ ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಸಮತಿಯ ಮಠ ಮಂದಿರ ಪ್ರಮುಖರಾಗಿ,ಉದ್ಯಾವರ ಶ್ರೀ ದೈವಗಳ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅರಸು ಮಂಜೀಷ್ಣಾರ್ ಕೃಪಾ ಜೈ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಕೃತಾರ್ಥರಾಗಿದ್ದಾರೆ.
ಶಬರಿಮಲೆ ಯಾತ್ರೆಯ ಗುರುಸ್ವಾಮಿ
ಸುಮಾರು 35 ವರ್ಷಗಳ ಹಿಂದೆ ಕಾಸರಗೋಡಿನ ಅಯ್ಯಪ್ಪ ಸೇವಾ ಸಂಘದ ಆಶ್ರಯದಲ್ಲಿ ಅಂದಿನ ಪ್ರಖ್ಯಾತ ಗುರುಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಶಬರಿಮಲೆ ಯಾತ್ರಯ ಮಾಲೆ ಹಾಕಿ ವ್ರತಾಚರಣೆಗೈದು ಗುರುಸ್ವಾಮಿಯಾಗಿ ಗುರುತಿಸಿಕೊಂಡರು. ಇದೀಗ
ಉದ್ಯಾವರ ಮಾಡ ಅಯ್ಯಪ್ಪ ಭಕ್ತವೃಂದದ ಗುರುಸ್ವಾಮಿ ಯಾಗಿ ವರ್ಷಂಪ್ರತಿ ಮಕರ ಸಂಕ್ರಮಣ ಸಮಯದಲ್ಲಿ ಸುಮಾರು 45 ವರ್ಷಗಳಿಂದ ಸಾವಿರಾರು ಅಯ್ಯಪ್ಪ ವೃತಧಾರಿ ಗಳಿಗೆ ಸ್ವಾಮಿಯ ಮಾಲಾಧಾರಣೆ ಯನ್ನು ಮಾಡಿಸಿ ಶಬರಿಮಲೆಯಾತ್ರೆಯನ್ನು ಗೈದು ಅಯ್ಯಪ್ಪಸ್ವಾಮಿಯ ದಿವ್ಯ ದರ್ಶನವನ್ನು ಮಾಡಿಸಿ ವೃತಧಾರಿಗಳಿಗೆ ಮಾತ್ರವಲ್ಲದೆ ಊರಿನ ಎಲ್ಲರಿಗೂ ಗುರು ಸ್ವಾಮಿಯಾಗಿ ಪ್ರೀತಿ ಪಾತ್ರರಾಗಿದ್ದಾರೆ.ಪಾದಯಾತ್ರೆಯಲ್ಲಿ ಬರುವಂತಹ ಸ್ವಾಮಿಗಳಿಗೆ ಹಗಲು-ರಾತ್ರಿ ಎನ್ನದೆ ಸ್ವಾಮಿಯವರೊಡಗೂಡಿ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮತ್ತು ಅವರಿಗೆ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಮಾಡಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ.
ತುಳು ಭಕ್ತಿಗೀತೆ ರಚನೆಗಾರರು:
ಮನೆ ಭಾಷೆ ತುಳುವಾದ್ದರಿಂದ ಈ ಭಾಷೆಯಲ್ಲಿಯೇ ಸಾಹಿತ್ಯ ರಚನೆಗಿಳಿದ ಸಂಜೀವ ಶೆಟ್ಟರು ಹಲವಾರು ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಉದ್ಯಾವರ ಶ್ರೀ ದೈವಗಳ, ಕುಂಜತ್ತೂರು ಶ್ರೀ
ಮಹಾಲಿಂಗೇಶ್ವರ ದೇವರ ಹಾಗೂ ಇನ್ನೂ ಕೆಲವು ದೇವಸ್ಥಾನದ ದೇವರ ಭಕ್ತಿ ಗೀತೆಗಳನ್ನು ರಚಿಸಿ ಧ್ವನಿಸುರುಳಿಯನ್ನು ಮಾಡಿರುತ್ತಾರೆ. ಮಾಡದ ಮಹಿಮೆ,ಮಾಡದ ತುಡರ್,ಭಕ್ತಿಗೀತಾಂಜಲಿ ಎಂಬುದು ಅಂದಿನ ಕ್ಯಾಸೆಟ್ ಯುಗದಲ್ಲಿ ಇವರ ಪ್ರಸಿದ್ಧ ಧ್ವನಿಸುರುಳಿಯಾಗಿದೆ. ಭಜನೆಯಲ್ಲೂ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಇವರು ಸ್ವತಃ ಹಲವಾರು ಭಜನೆಗಳನ್ನು ರಚಿಸಿ ಹಾಡುತ್ತಿದ್ದಾರೆ.
ಸಮರ್ಥ ಸಮಾಜ ಸೇವಕ:-
ಊರು ಪರವೂರುಗಳಲ್ಲಿ ನಡೆಯುವ ಭಜನೋತ್ಸವ ಮತ್ತು ಬ್ರಹ್ಮಕಲಶೋತ್ಸವಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಧಾರ್ಮಿಕ ಕಾರ್ಯದಲ್ಲೂ, ಊರ ನಾಟಕ,ಯಕ್ಷಗಾನ ತಂಡಗಳೊಂದಿಗೆ ಸಾಂಸ್ಕೃತಿಕ ಪೋಷಕರಾದ ಇವರು ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಉಪಾಧ್ಯಕ್ಷರು ಹಾಗೂ ಮಕ್ಕಳ ಪ್ರತಿಭಾ ಪೋಷಕರು ಆಗಿದ್ದಾರೆ. ತನ್ನ ದುಡಿತದಲ್ಲಿ ಅಲ್ಪ ಹಣವನ್ನು ಸಮಾಜ ಸೇವೆಗೆ ಉಪಯೋಗಿಸುವ ಸಂಜೀವ ಶೆಟ್ಟರು ಊರಿನ ಸಾಮಾಜಿಕ ಸಂಘಟನೆಗಳ ಜತೆಗೂ ಉದಾರ ಸಹಾಯದೊಂದಿಗೆ ಕೈಜೋಡಿಸುತ್ತಾರೆ.
ನಿರ್ಮಲ ಮನಸ್ಸು ನಿಶ್ಚಲ ಮನದಿಂದ ಭಗವಂತನ ಕೃಪಾಶೀರ್ವಾದ ಬದುಕಿನಲ್ಲಿ ಸಂತೃಪ್ತತೆ ಸಾಧ್ಯ ಎನ್ನುವ ಸಂಜೀವ ಶೆಟ್ಟಿ -ಅಮಿತ ದಂಪತಿಗಳ ಆದರ್ಶ ಬದುಕಿಗೆ ಸಾಕ್ಷಿಯಾದ ಹರ್ಷಿತ್ ಶೆಟ್ಟಿ (ಶೀಫ್ ಉದ್ಯೋಗಿ),ಅಕ್ಷಯ ಶೆಟ್ಟಿ (ಅಬುಧಾಬಿ ಉದ್ಯೋಗಿ), ರಶ್ಮಿ ಶೆಟ್ಟಿ (ಗೃಹಿಣಿ) ಎಂಬ ಮಕ್ಕಳು ತಂದೆ ತಾಯಿಗಳ ಸಂತೋಷಕ್ಕೆ ಪಾತ್ರರಾಗುತ್ತಿದ್ದಾರೆ.







0 Comments