ದುಬೈ ( ವಿದೇಶ ವಿಶೇಷ ಸಾಧಕ)
ತುಳುನಾಡು ಅಂತರ್ಗತ ಕರಾವಳಿ ಕರ್ನಾಟಕದ ಜನತೆಗೆ ಉದ್ಯೋಗ -ಅವಕಾಶದ ಪ್ರಮುಖ ಕೇಂದ್ರವಾಗಿರಿಸಿರುವುದು ಕೊಲ್ಲಿ ರಾಷ್ಟ್ರವನ್ನಾಗಿದೆ.
ಅರಬ್ ವ್ಯಕ್ತಿ, ಸಂಸ್ಥೆ,ಉದ್ಯಮಗಳಲ್ಲಿ ದುಡಿಯುವ ಯಾವುದೇ ಅನಿವಾಸಿ ಭಾರತೀಯನಿಗೂ ಅಲ್ಲಿ ಕಷ್ಟ ನಷ್ಟಗಳುಂಟಾದಾಗ ಅಥವಾ ದಿಕ್ಕು ತೋಚದೆ ಅಲೆದಾಡುವಾಗ ಸದಾ ಸಹಾಯಕ್ಕೆ ಸ್ಪಂದಿಸುವ ವ್ಯಕ್ತಿ ಒರ್ವರಿದ್ದಾರೆ.ಅಂತಹ ಅದರ್ಶ ವ್ಯಕ್ತಿತ್ವವನ್ನು ನಿಮ್ಮ ಮುಂದೆ ವಿಶೇಷ ಚಾನೆಲ್ "ವಿದೇಶ-ವಿಶೇಷ" ದ ಮೂಲಕ ತೆರೆದಿಡುತ್ತಿದೆ.
ವಿದೇಶದಲ್ಲಿ ಇದ್ದುಕೊಂಡು ತನ್ನ ಊರಿಗೆ,ಊರಿನ ಜನತೆಗೆ ಸದಾ ತನ್ನ ಕೈ ಮಿಗಿಲಾದ ರೀತಿಯಲ್ಲಿ ಸ್ಪಂದಿಸುವ ಇವರು ತುಳುನಾಡು ಅರ್ಥಾತ್ ಕರಾವಳಿಯ ಜನತೆಗೆ ಮರುಭೂಮಿಯಲ್ಲೊಂದು "ಓಯಸಿಸ್"ನಂತೆ ಗೋಚರಿಸುತ್ತಾರೆ. ಅವರೇ ಸರ್ವೋತ್ತಮ ಶೆಟ್ಟಿ.
"ಸರ್ವರಲ್ಲಿ ಉತ್ತಮ" ಎಂಬ ಅನ್ಬರ್ಥ ನಾಮಕ್ಕೆ ಪಾತ್ರರಾದ ಸರ್ವೋತ್ತಮ ಶೆಟ್ಟರ ಆದರ್ಶಮಯ ಜೀವನ ಶೈಲಿ, ಸ್ಫಟಿಕದಂತಹ ಸ್ಪಷ್ಟ ಸಂವಹನ ಕೌಶಲ್ಯ,ತನ್ನ ಅಧಿಕಾರದ ಸವ್ಯಸಾಚಿ ನಿಭಾವಣೆ,ಕಲೆ-ಸಂಸ್ಕೃತಿಗಳಲ್ಲಿ ಇವರಿಗೆ ಇರುವ ಪ್ರತಿಭಾನ್ವಿತ ಗುಣಗಳು ಇವರನ್ನು ನೈಜತೆಯ ನಾಯಕನನ್ನಾಗಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸರ್ವೊತ್ತಮ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಪರೀಕ ಎಂಬ ಸಣ್ಣ ಕುಗ್ರಾಮದಲ್ಲಿ ಮಟ್ಟಾರ್ ಪಾರಾರಿ ಸೂರಪ್ಪ ಹೆಗ್ಡೆ -ಪರೀಕಾ ಸರಸ್ವತಿ ಹೆಗ್ಡೆ ದಂಪತಿಗಳ ಪುತ್ರರಾಗಿ ಜನಿಸಿದರು.
ಪೆರ್ಡೂರ್ ಮತ್ತು ಹಿರಿಯಡ್ಕ ವಿದ್ಯಾ ಸಂಸ್ಥೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಗಳಿಸಿದ ಅವರು ಬಳಿಕ ಮುಂಬೈಗೆ ತೆರಳಿ ಅಲ್ಲಿ ಹೋಟೆಲ್ ನಲ್ಲಿ ದುಡಿದು ತನ್ನ ಸಂಪಾದನೆಗಾಗಿ
ಜೀವನೋಪಾಯ ಕಂಡುಕೊಂಡರು. ಈ ನಡುವೆ
"ಸಂಪಾದಿಸಿ ಮತ್ತು ಕಲಿಯಿರಿ" ಎಂಬಂತೆ ಶಿಕ್ಷಣ ನಿರತರಾದ ಅವರಿಗೆ ಸರ್ಕಾರಿ ವಾಣಿಜ್ಯ ಡಿಪ್ಲೊಮಾ ಪದವಿಯನ್ನು ನೀಡಿತು.ಬಳಿಕ
ಬಾಂಬೆ ವಿಶ್ವವಿದ್ಯಾಲಯ ಮತ್ತು ನಂತರ ಆರ್.ಎ.ಪೊದಾರ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರಿಸಿದರು.
ಮುಂಬೈನ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಮತ್ತು ಬಿ.ಕಾಂ ಪದವಿ ಪಡೆದರು. ವಿದ್ಯಾರ್ಥಿ ಸಂಘದಲ್ಲಿ ಸಕ್ರಿಯರಾಗಿದ್ದ ಅವರನ್ನು ಆರ್.ಎ.ಪೊದಾರ್ ಕಾಲೇಜು 1977 ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಸೆನೆಟ್ಗೆ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯ್ಕೆ ಮಾಡಿತ್ತು.
ಪದವಿ ಶಿಕ್ಷಣದ ಮೊದಲೇ ಮುಂಬಯಿಯ ಫಾರ್ಮಾಸ್ಯುಟಿಕಲ್ ಕಂಪನಿಯೊಂದರಲ್ಲಿ ಕಾಯಕ ನಿರತರಾಗಿರುವ ನಡುವೆ ಸಿಂಡಿಕೇಟ್ ಬ್ಯಾಂಕ್ ನಲ್ಲಿಯೂ ಸರ್ವೋತ್ತಮ ಶೆಟ್ಟರಿಗೆ ಉದ್ಯೋಗ ದೊರಕಿತ್ತು.
ಮುಂಬಯಿಯ ಕಲಾ ಜಗತ್ತಿನ ರೂವಾರಿ:-
ಕಾಲೇಜು ಕಲಿಕೆಯ ಸಂದರ್ಭದಲ್ಲಿ ಅಭಿನಯ ಕಲೆಯನ್ನು ಸಹಜವಾಗಿಯೇ ಅಭ್ಯಸಿಸಿದ್ದ ಶೆಟ್ಟರು
ಅಂತರ್ ಕಾಲೇಜ್ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿಕೊಂಡು ಸೈ ಎನಿಸಿದ್ದರು. ತುಳು-ಕನ್ನಡ ಕಲೆಗಳ ಬಗ್ಗೆ ಅಭಿರುಚಿಯಿದ್ದ ಅವರು
ಸ್ವತಃ ಕಲೆಗಳ ಜಗತ್ತಿಗೆ ಉದಾತ್ತವಾದ ಕೊಡುಗೆಯನ್ನು ನೀಡಲು
1979 ರಲ್ಲಿ ಅವರ ಸ್ನೇಹಿತರ ಸಹಕಾರದೊಂದಿಗೆ ಮುಂಬಯಿಯಲ್ಲಿ “ಕಲಾಜಗತ್ತು ” ಎಂಬ ಸಂಸ್ಥೆಯ ಸ್ಥಾಪಕರಾಗಿ,ಅಧ್ಯಕ್ಷರಾಗಿ ಸುದೀರ್ಘ ವರ್ಷಗಳ ಕಾಲ ಕಲಾ ರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ‘ಕಲಾಜಗತ್ತು" ಇದೀಗ ಮುಂಬೈನ ಪ್ರತಿಷ್ಠಿತ ಕಲಾ ಸಂಸ್ಥೆಯಾಗಿ ಸಾಂಸ್ಕೃತಿಕ ಭೂಪಟದಲ್ಲಿ ಗುರುತಿಸಿಕೊಂಡಿದ್ದು ಪ್ರಸ್ತುತ ತೊನ್ಸೆ ವಿಜಯಕುಮಾರ್ ಶೆಟ್ಟಿ ಅಧ್ಯಕ್ಷರಾಗಿ ಕಲಾ ಜಗತ್ ನ್ನು ಮುಂದುವರಿಸುತ್ತಿದ್ದಾರೆ.
ಬದುಕು ಬದಲಿಸಿದ ಪಥ...👣

ಯುಎಇಯ ಇಂಟರ್ ನ್ಯಾಷನಲ್ ಡಿಸ್ಟ್ರೀಬ್ಯೂಷನ್ ಆಫ್ ಅಬುದಾಬಿ ಅವರನ್ನು ಆಹ್ವಾನಿಸಿ ಪ್ರಮುಖ ಸ್ಥಾನದ ಹೊಣೆಗಾರಿಕೆಯನ್ನು ವಹಿಸಿದಾಗ ಸರ್ವೊತ್ತಮ ಶೆಟ್ಟರ ಬದುಕು ಮಹತ್ವದ ತಿರುವು ಪಡೆದುಕೊಂಡಿತು. ಸುಮಾರು 25 ವರ್ಷಗಳ ಕಾಲ ಯುಎಇ ಇಂಟರ್ ನ್ಯಾಷನಲ್ ಡಿಸ್ಟ್ರೀಬ್ಯೂಷನ್ ಆಫ್ ಅಬುದಾಬಿಯ ಮಹಾ ಪ್ರಬಂಧಕರಾಗಿ ಸೇವೆ ಸಲ್ಲಿಸಿ ಇದೀಗ ಕಳೆದ 16 ವರ್ಷಗಳಿಂದ ಯುಎಇಯ ರಾಜಧಾನಿ ಅಬುಧಾಬಿಯಲ್ಲಿ ತಮ್ಮದೆ ಆದ ಸ್ವಂತ ಉದ್ಯಮ ನಿರತರಾಗಿದ್ದಾರೆ.
ಕೆಲಸದಲ್ಲಿ ತನ್ನ ಜವಾಬ್ದಾರಿಗಳ ಜೊತೆಗೆ, ಬಿಡುವಿನ ವೇಳೆಯಲ್ಲಿ ಅವರು ಹೊರಗಿನ ಸಾಮಾಜಿಕವಾಗಿ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಕೊಲ್ಲಿ ರಾಷ್ಟ್ರದಲ್ಲೂ ತನ್ನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಸಕ್ತಿಯನ್ನು ಪ್ರಕಟಿಸಲಾರಂಭಿಸಿದರು.
ಸರ್ವೋತ್ತಮ ಶೆಟ್ಟರು ಸ್ವತಃ ಸಂಘಟನಾ ಕೌಶಲ್ಯವನ್ನು ಕರಗತ ಮಾಡಿಕೊಂಡವರಾದ ಕಾರಣ ಊರಿನಿಂದ ವಿದೇಶಕ್ಕೆ ಉದ್ಯೋಗವನ್ನು ಅರಸಿಕೊಂಡು ಬರುವವರನ್ನು ಭೇಟಿಯಾಗಿ ಅವರ ಸುಖ-ದುಃಖದಲ್ಲಿ ಭಾಗಿಯಾಗುವ ಸಹೃದಯತೆ ಬೆಳೆಸಿಕೊಂಡಿದ್ದರು.
ಹೀಗೆ ಪರಸ್ಪರ ಪ್ರತಿಭಾ ಪೋಷಣೆ,ಗೌರವಾದರದಿಂದ ಸರ್ವೊತ್ತಮ ಶೆಟ್ಟರ ಸಹಭಾಗಿತ್ವದಲ್ಲಿ ವಿದೇಶದಲ್ಲಿ ಅಸ್ತಿತ್ವಕ್ಕೆ ಬಂದ ಸಂಘ ಸಂಸ್ಥೆಗಳಾಗಿದೆ ಕರ್ನಾಟಕ
ಸಂಘ ಅಬುಧಾಬಿ, ಯುಎಇ ಬಂಟ್ಸ್ ಸಂಘ, ಯು.ಎ.ಇ.ತುಳುಕೂಟ, ನಮ್ಮ ತುಳುವೆರ್ ಮೊದಲಾದವು.
ಸರ್ವೋತ್ತಮ ಶೆಟ್ಟರು ಈ ಎಲ್ಲಾ ಸಾಂಸ್ಕೃತಿಕ ವೇದಿಕೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಮಾತ್ರವಲ್ಲದೇ ಇಲ್ಲಿ ನಡೆಯುವ ತುಳು-ಕನ್ನಡ ಕಾರ್ಯಕ್ರಮಗಳ ಅಧ್ಯಕ್ಷತೆ ಇವರಿಗೇ ಸದಾ ಮೀಸಲಾಗಿದ್ದು ಅರಬ್ ರಾಷ್ಟ್ರದಲ್ಲಿನ ಕನ್ನಡದ ತುಡಿತಕ್ಕೆ,ತುಳುವಿನ ಮಿಡಿತಕ್ಕೆ ಶೆಟ್ಟರು "ಯಜಮಾನ"ನಂತೆ ಗುರುತಿಸಿಕೊಂಡಿದ್ದಾರೆ.
ಕಳೆದ ಸುದೀರ್ಘ 40 ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ ಅಸೋಸಿಯೇಷನ್, ಬಂಟ್ಸ್ ಅಸೋಸಿಯೇಷನ್ ಮತ್ತು ತುಳು ಕೂಟದ ಸುಗಮ ಕಾರ್ಯನಿರ್ವಹಣೆಗೆ ಪ್ರಮುಖ ಪಾತ್ರವಹಿಸಿದ್ದಾರೆ.ಯುಎಇ ಬಂಟ್ಸ್ ಮತ್ತು ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ಜನೋಪಕಾರಿಯಾಗಿ ಕಳೆದ ಹಲವಾರು ವರ್ಷಗಳಿಂದ ಸರ್ವೋತ್ತಮ ಶೆಟ್ಟಿ ಅವರ ನಾಯಕತ್ವದಲ್ಲಿ ರಕ್ತದಾನ ಶಿಬಿರ ನಡೆಯುತ್ತ ಬರುತ್ತ ಇದೆ
ರಂಗಭೂಮಿ ಹಾಗೂ ಚಲನಚಿತ್ರದ ಆಶಕ್ತ ಕಲಾವಿದರಿಗೆ ಧನ ಸಹಾಯ ವಿತರಿಸುತ್ತಾ ಬರುತ್ತಿದ್ದು
ತುಳುನಾಡ ಸಂಸ್ಕೃತಿ ಹಾಗೂ ಮಕ್ಕಳ ಪ್ರತಿಭಾ ಪ್ರೋತ್ಸಾಹಕಾರ್ಥ "ತುಳುನಾಡ ಬಾಲೆ ಬಂಗಾರ್ " ಕಾರ್ಯಕ್ರಮದ ಪ್ರೋತ್ಸಾಹಕರಾಗಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ.
ಇಂಡಿಯ ಸೋಶಿಯಲ್ ಎಂಡ್ ಕಲ್ಚರಲ್ ಸೆಂಟರ್ (ISC)ಗೆ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ..
ಶಿಕ್ಷಣ ಹಾಗೂ ಕ್ರೀಡಾ ರಂಗದ ಸಾರಥಿ:
ಕೊಲ್ಲಿ ರಾಷ್ಟ್ರದಲ್ಲಿ 7500 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಿಬಿಎಸ್‌ಇ ಪಠ್ಯಕ್ರಮದೊಂದಿಗೆ ಕಾರ್ಯಚರಿಸುವ ಅಬುಧಾಬಿ ಇಂಡಿಯನ್ ಸ್ಕೂಲ್ ಆಡಳಿತ ಮಂಡಳಿಯ ಸದಸ್ಯರಾಗಿರುವ ಅವರು ಸ್ಪೋರ್ಟ್ಸ್ ಎಂಡ್ ಎಜುಕೇಶನ್ ಕಮಿಟಿ ಅಧ್ಯಕ್ಷರೂ ಆಗಿದ್ದಾರೆ.
ಬಂಟ್ಸ್ ಮತ್ತು ಕನ್ನಡ ಸಂಘಗಳ ಮೂಲಕ ಗಲ್ಫ್ ನಲ್ಲಿ ಮಹಿಳೆಯರ ಮತ್ತು ಪುರುಷರ ಥ್ರೋ ಬಾಲ್ ಆಟವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾತ್ರವಲ್ಲದೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಥ್ರೋ ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದರು.
ಶೆಟ್ಟರ ನೇತೃತ್ವದಲ್ಲಿ ಕಳೆದ 30 ವರ್ಷಗಳಿಂದ ಗಲ್ಫ್ ದೇಶ ಮಾತ್ರವಲ್ಲದೆ ಮುಂಬೈ, ಪುಣೆ,ಬೆಂಗಳೂರು, ದೆಹಲಿ ಮತ್ತು ಹರಿಯಾಣ ಮೊದಲಾದ ರಾಜ್ಯದ ಮಹಿಳೆ,ಪುರುಷ ಮತ್ತು ಮಕ್ಕಳಿಗಾಗಿ (18 ವರ್ಷಕ್ಕಿಂತ ಕಡಿಮೆ) ತಂಡಗಳನ್ನು ಆಹ್ವಾನಿಸಿ ಥ್ರೋಬಾಲ್ ಪಂದ್ಯಾಟ ಆಯೋಜಿಸಲಾಗುತ್ತದೆ.
ಈ ಎಲ್ಲಾ ಸಾಮಾಜಿಕ ಕಾರ್ಯಗಳಿಗೆ ಶೆಟ್ಟರ ನಾಯಕತ್ವದ ಗುಣಮಟ್ಟಕ್ಕೆ ಕನ್ನಡಿಗರು ಒಟ್ಟಾಗಿ ಕೈ ಜೋಡಿಸಿ ಯಶಸ್ವಿಗೆ ಕಾರಣರಾಗುತ್ತಿದ್ದಾರೆ.
ಅರ್ಹವಾಗಿ ಪಡೆದ ಪ್ರಶಸ್ತಿ ಪದವಿ:
(1).1998 ರಲ್ಲಿ ಕರ್ನಾಟಕ ಸರ್ಕಾರ ಸರ್ವೋತ್ತಮ ಶೆಟ್ಟರಿಗೆ ಹೊರನಾಡ ಕನ್ನಡಿಗ ಎಂಬ ವಿಭಾಗದಲ್ಲಿ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”
(2).2006 ರಲ್ಲಿ ಸರ್ವೊತ್ತಮ ಶೆಟ್ಟರು ಅಧ್ಯಕ್ಷರಾಗಿದ್ದ ಅಬುಧಾಬಿ ಕರ್ನಾಟಕ ಸಂಘಕ್ಕೆ "ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ" ಲಭಿಸಿದೆ
(3). ಅಖಿಲ ಭಾರತ ಕನ್ನಡ ಸಾಂಸ್ಕೃತಿಕ ಸಮಾವೇಶದಲ್ಲಿ “ನೋಬಲ್ ಮ್ಯಾನ್ ಪ್ರಶಸ್ತಿ -2006”.
(4).“ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ -2008”
(5) ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ “ಗ್ಲೋಬಲ್ ಮ್ಯಾನ್ ಅವಾರ್ಡ್ -2009”
(6) ವಿಜಯ ಬ್ಯಾಂಕ್ ಕಾರ್ಮಿಕರ ಸಂಘಟನೆಯ "ಸುಂದರರಾಮ್ ಶೆಟ್ಟಿ ಪ್ರಶಸ್ತಿ - 2016"
(7) ಯುಎಇಯಿಂದ “ಮಯೂರ ವಿಶ್ವ ಕನ್ನಡಿಗ ಪ್ರಶಸ್ತಿ -2017”
(8) ಬೆಂಗಳೂರಿನ ತುಳು ಕೂಟದ “ತೌಳವ ಪ್ರಶಸ್ತಿ - 2017”
(10) ಕರ್ನಾಟಕ ರಕ್ಷನಾ ವೇದಿಕೆ ಬೆಂಗಳೂರು “ಕದಂಬ ಪ್ರಶಸ್ತಿ - 2018”
(11) ವಿಶ್ವ ಬಂಟೆರೆ ಸಮ್ಮೇಳನದ “ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ -2018"
(12) ದೆಹಲಿ ತುಳುಕೂಟದ ತುಳು ಸಿರಿ ಸಮ್ಮೇಳನದ "ತುಳು ಸಿರಿ ಪ್ರಶಸ್ತಿ-2008"
(13) ಬಂಟರ ಚಾವಡಿ ಪರ್ಕಳ ಇವರಿಂದ ಸೇವಾ ವಿಭೂಷಣ ಪ್ರಶಸ್ತಿ 2018
(14) ರಂಗ ಚಾವಡಿ ಸಂಸ್ಥೆ ಕುಡ್ಲ ಇವರಿಂದ ರಂಗ ಚಾವಡಿ ಪ್ರಶಸ್ತಿ2019
ಹೀಗೆ ಪ್ರಪಂಚದಾದ್ಯಂತ ಇರುವ ಸಂಘಸಂಸ್ಥೆಗಳು, ಗೌರವಾನ್ವಿತ ಕರ್ನಾಟಕ ಸರಕಾರ ಸಹಿತ ಸರ್ವೋತ್ತಮ ಶೆಟ್ಟರ ಜೀವಮಾನದ ಸಾಧನೆಯನ್ನು ಅಭಿನಂದಿಸಿ ಪ್ರಶಸ್ತಿ-ಪುರಸ್ಕಾರ ನೀಡುವ ಮೂಲಕ ಗೌರವಿಸಿದೆ.
ಸಂಘ ಸಂಸ್ಥೆಗಳ ಸಾರಥ್ಯ:
(1) "ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್" ಯುಎಇ ಘಟಕದ ಅಧ್ಯಕ್ಷ
(2) ಬದಿಯಡ್ಕದಲ್ಲಿ ಜರಗಿದ "ವಿಶ್ವ ತುಳು ಆಯನೋ - 2016"ರ ಸರ್ವಾಧ್ಯಕ್ಷ.
(3) ಅಬುಧಾಬಿಯ ಐಎಸ್ಸಿ ಪ್ರೊಫೆಷನಲ್ ಮತ್ತು ಎಂಟರ್ಪ್ರೆನಿಯರ್ ಫೋರಂನ ಅಧ್ಯಕ್ಷರು
(4) ಇಂಡಿಯನ್ ಬಿಸಿನೆಸ್ ಎಂಡ್ ಪ್ರೋಫಸನಲ್ ಗ್ರೂಫ್ ನ ಕಾರ್ಯಕಾರಿ ಸಮಿತಿ ಸದಸ್ಯ-ಅಬುಧಾಬಿ
(5) ಮಂಗಳೂರಿನ ಪಿಲಿಕುಲದಲ್ಲಿ ಜರಗಿದ “ತುಳು ನಾಡೋಚ್ಚಯ 2017”ರ ಗೌರವ ಅಧ್ಯಕ್ಷ.
(6). 2018ರ ದುಬೈಯಲ್ಲಿ ಜರಗಿದ ವಿಶ್ವ ತುಳು ಸಮ್ಮೇಳನ ಅಧ್ಯಕ್ಷ ಸ್ಥಾನ.
(7) 2020 ರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ.
ಸಂತೃಪ್ತ ಸಂಸಾರ:-
ಧರ್ಮಪತ್ನಿ ಕೊತ್ವಲ ಗುತ್ತಿನ ಉಷಾ ಮತ್ತು ಮಕ್ಕಳಾದ ಸಮರ್ಥ್ ಮತ್ತು ಸಂಯುಕ್ತಾ ಅವರೊಂದಿಗೆ ಅಬುಧಾಬಿಯಲ್ಲಿ ಸಂತೃಪ್ತ ಸಂಸಾರದೊಡನೆ ನೆಲೆಸಿರುವ ಸರ್ವೋತ್ತಮ ಶೆಟ್ಟಿ ಅವರು ನಾಟಕಕಾರ, ಕ್ರೀಡಾ ಪ್ರೇಮಿ, ಶಿಕ್ಷಣ ತಜ್ಞ, ಸ್ಥಾಪಕ ಹಾಗೂ ಸಂಘಟಕ ಹೀಗೆ ದೇಶಿಯ ಹಾಗೂ ವಿದೇಶದ ಕನ್ನಡ ಮತ್ತು ತುಳು ಸಾಂಸ್ಕೃತಿಕ ಚಟುವಟಿಕೆಗಳಿಂದ ಗಲ್ಫ್ ನ ತುಳು- ಕನ್ನಡಿಗರಿಗೆ "ಸರ್ವರ ಉತ್ತಮ ಆಸ್ತಿ" ಎಂಬಂತ ವ್ಯಕ್ತಿತ್ವವಾಗಿದ್ದಾರೆ. ಇತ್ತೀಚಿಗೆ ತಮ್ಮ ಜನಮ ದಿನದ ಸಂಭ್ರಮವನ್ನು ಆಚರಿಸಿಕೊಂಡಿರುವ ಅವರಿಗೆ ಸರ್ವ ವಿಧದ ಕೀರ್ತಿ-ಯಶಸ್ಸು ಮುಂದೆಯೂ ಲಭಿಸಲೆಂದು ಶುಭ ಹಾರೈಕೆ.













0 Comments