ವಿದೇಶ_ವಿಶೇಷ 09
ದುಬಾಯಿ: ತುಳುನಾಡಿನ ಸಜ್ಜನಿಕೆ,ಸಾತ್ವಿಕತೆಯ ಗುಣಗಳಿಂದ ಮರಳು ನಾಡಿನ ಅರ್ಥಾತ್ ಗಲ್ಫ್ ನ ಸಾಂಸ್ಕೃತಿಕ,ಸಾಮಾಜಿಕ, ಸಂಘಟನಾತ್ಮಕ ರಂಗದಲ್ಲಿ ಸಕ್ರಿಯರಾಗಿದ್ದರೂ, ಸುದ್ದಿ ಪ್ರಚಾರವನ್ನು ಬಯಸದ ಎಲೆ ಮರೆಯ ಕಾಯಿಯಂತಿರುವ ಸದ್ದಿಲ್ಲದ ಸಾಧಕರೋರ್ವ ಬಗ್ಗೆ ವಿಶೇಷ ಚಾನೆಲ್ ಈ ಬಾರಿ ವಿದೇಶ_ವಿಶೇಷದ ಮೂಲಕ ಬೆಳಕು ಚೆಲ್ಲುತ್ತಿದೆ.
ತುಳುನಾಡಿನ ಬಿಲ್ಲವ ಜನಾಂಗದ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಇವರ ಹೆಸರು ಆನಂದ ಬೈಲೂರು.ತನ್ನ ಹೊಣೆಗಾರಿಕೆ ಹಾಗೂ ಕರ್ತವ್ಯ ಬದ್ಧತೆಯ ಮೂಲಕ ಆನಂದವನ್ನುಂಟು ಮಾಡುತ್ತಾ ಹೆಸರಿಗೆ ತಕ್ಕುದಾಗಿ ಅನ್ಬರ್ಥನಾಮರಾಗಿದ್ದಾರೆ.
ಔದ್ಯೋಗಿಕವಾಗಿ ಕಳೆದ ಮೂವತೈದು ವರ್ಷಗಳಿಂದ ದುಬಾಯಿಯಲ್ಲಿ ನೆಲೆಸಿರುವ ಇವರು ಸ್ವಂತಕ್ಕೆ ಲಭಿಸಿದ ಅಲ್ಪ ಆದಾಯದ ಒಂದು ಪಾಲನ್ನು ಸಮಾಜ ಸೇವೆ, ಸಾಂಸ್ಕೃತಿಕ ರಂಗಕ್ಕೆ ಕೊಡುಗೆ ನೀಡುತ್ತಾ ಬಂದಿರುವ ಮಾದರಿ ವ್ಯಕ್ತಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಹಿರಿಯಡ್ಕ ಗ್ರಾಮದ ಬೊಮ್ಮರ ಬೆಟ್ಟು ಪ್ರತಿಷ್ಠಿತ ಗರಡಿ ಮನೆಯ ಅವಿಭಕ್ತ ಕುಟುಂಬದಲ್ಲಿ 1957 ನವೆಂಬರ್ 27 ರಂದು ಇವರು ಜನಿಸಿದರು. ಮಾಬು ಪೂಜಾರಿ- ಗಿರಿಜಾ ಪೂಜಾರಿ ದಂಪತಿಗಳ ಪುತ್ರರಾದ ಆನಂದ್ ಬೈಲೂರು ಅವರು ಪಂಚನಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ತನಕ ಶಿಕ್ಷಣಗೈದು ಬಳಿಕ 7ನೇ ತರಗತಿಯನ್ನು ಬಿ.ಇ.ಎಂ.ಹಿರಿಯ ಪ್ರಾಥಮಿಕ ಶಾಲೆ ನೀರೆ ಬೈಲೂರು ಹಾಗೂ 8 ರಿಂದ 10 ತರಗತಿ ತನಕ ನೀರೆ ಬೈಲೂರುವಿನ ಬೋರ್ಡ್ ಹೈಸ್ಕೂಲಿನಲ್ಲಿ ಪೂರೈಸಿ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಗಳಿಸಿದ್ದರು.
1980ರಲ್ಲಿ ಉದ್ಯೋಗಕ್ಕಾಗಿ ಮುಂಬಯಿಗೆ ತೆರಳಿ ಖಾಸಗೀ ಕಂಪೆನಿಯೊಂದರಲ್ಲಿ ದುಡಿದರು. 1985ರಲ್ಲಿ ಗಲ್ಫ್ ರಾಷ್ಟ್ರಕ್ಕೆ ಆಗಮಿಸಿದ ಇವರು ರಾಸ್ ಆಲ್ ಖೈಮಾ ಸರ್ಕಾರದ ಅಧೀನತೆಯಲ್ಲಿ RAKNOR Pvt Ltdಯಲ್ಲಿ ಉದ್ಯೋಗ ನಿರ್ವಹಿಸ ತೊಡಗಿದರು. ಬಳಿಕ 1991 ರಿಂದ ದುಬಾಯಿಯ ಜಬಲಾಲಿ ಫ್ರೀಝೋನ್ ಕಂಪೆನಿಯ VIRGINIA industry Ltd ನಲ್ಲಿ ಮಹಾ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತನ್ನ ಕರ್ತವ್ಯ ಬದ್ಧತೆಯಿಂದ ಕೊಲ್ಲಿ ರಾಷ್ಟ್ರದ ಮರಳು ಭೂಮಿಯಲ್ಲಿ ಆಳವಾದ ಅನುಭವ ಪಾಠಗಳನ್ನು ಕಲಿತುಕೊಂಡ ಆನಂದ್ ಬೈಲೂರು ಅವರು ಅಪಾರ ಸಂಘ ಸಂಸ್ಥೆಗಳ ನಿಕಟ ಸಂಪರ್ಕ ಹಾಗೂ ಗಣ್ಯರ ಜತೆಗಿನ ಒಡನಾಡ ಬೆಳೆಸಿಕೊಂಡವರು.
ಸಹೃದಯತೆಯ ಸಾಕಾರ ಮೂರ್ತಿಯಾಗಿರುವ ಆನಂದ್ ಬೈಲೂರು ಅವರು ತುಳುನಾಡಿನ ತುಡಿತದೊಂದಿಗೆ ಕನ್ನಡ ಪ್ರೇಮವನ್ನು ಬೆಳೆಸಿಕೊಂಡಿರುವ ಕರಾವಳಿಯ ಕಣ್ಮಣಿ. ಬಾಲ್ಯ ಕಾಲದಿಂದಲೇ ಸಾಂಸ್ಕೃತಿಕ,ಸಮಾಜಿಕ,ಸಂಘಟನಾ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ದಿವಂಗತ ಉಮೇಶ್ ನಂತೂರು ಅವರ ಮಾರ್ಗದರ್ಶನದಲ್ಲಿ 2003ರಲ್ಲಿ ಆರಂಭಗೊಂಡ "ಕರ್ನಾಟಕ ಸಂಘ ಶಾರ್ಜಾ"ದಲ್ಲಿ ಸದಸ್ಯತ್ವ ಗಳಿಸಿಕೊಂಡು ಕೋಶಾಧಿಕಾರಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನುಭವ ಸಂಪನ್ನರಾಗಿದ್ದಾರೆ.
ಪ್ರತಿ ವರ್ಷ ಶಾರ್ಜಾದಲ್ಲಿ ಕರ್ನಾಟಕ ರಾಜ್ಯೋತ್ಸವ ನಡೆಸುತ್ತಾ ಕನ್ನಡ ಭಾಷೆ,ಸಂಸ್ಕೃತಿ ಸಾಹಿತ್ಯಕ್ಕೆ ವೈವಿಧ್ಯಮಯ ಕೊಡುಗೆ ಸಲ್ಲಿಸುತ್ತಿದೆ. ಅಸಾಮಾನ್ಯ ಸಾಧಕರಾದ ಕನ್ನಡಿಗರನ್ನು ಗುರುತಿಸಿ ಪ್ರತಿಷ್ಠಿತ " ಮಯೂರ ಪ್ರಶಸ್ತಿ "ನೀಡಿ ಸಂಘಟನೆಯ ವತಿಯಿಂದ ಗೌರವಿಸುವಂತಹ ಕಾರ್ಯಕ್ರಮಗಳನ್ನು ಅತ್ಯಂತ ಸುಸೂತ್ರವಾಗಿ ಆಯೋಜಿಸುವಲ್ಲಿ ಆನಂದ ಬೈಲೂರು ಯಶಸ್ವಿ ಸಂಘಟಕರೆನಿಸಿದ್ದಾರೆ. ಪ್ರಸ್ತುತ 2017ರಿಂದ "ಕರ್ನಾಟಕ ಸಂಘ ಶಾರ್ಜಾ"ದ ಅಧ್ಯಕ್ಷ ಪದವಿಯನ್ನು ಅಲಂಕರಿಸಿ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.
1997 ರಿಂದ "ಬಿಲ್ಲವಸ್ ದುಬಾಯಿ" ಎಂಬ ಸಮಾಜಮುಖಿ ಸಂಘಟನೆಯಲ್ಲಿ ಸುದೀರ್ಘ ಕಾಲದಿಂದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಸಂಘಟನೆ ಹಾಗೂ ಸಮಾಜದ ಉನ್ನತಿಗೆ ಶ್ರಮ ನಿರತರಾಗಿದ್ದಾರೆ. ಸಾಹಿತಿ ಪ್ರಕಾಶ್ ರಾವ್ ಪಯ್ಯರ್ ಅವರ ಸಾರಥ್ಯದ ಪ್ರತಿಷ್ಠಿತ "ಧ್ವನಿ ಪ್ರತಿಷ್ಠಾನ"ದ ಕೋಶಾಧಿಕಾರಿಯಾಗಿಯೂ ಕಳೆದ ನಾಲ್ಕೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಗಲ್ಫ್ ನಾಡಿನಲ್ಲಿ ಕಲೆ,ಸಾಹಿತ್ಯ,ಕ್ರೀಡೆಗಳ ಪ್ರೋತ್ಸಾಹಕರಲ್ಲಿ ಒರ್ವರಾಗಿ ಗುರುತಿಸಿಕೊಂಡಿರುವ ಆನಂದ್ ಬೈಲೂರು ತುಳು ಕೂಟ ದುಬಾಯಿ, ನಮ ತುಳುವೆರ್ ದುಬಾಯಿ,ವಿಶ್ವ ತುಳು ಸಮ್ಮೇಳನ ದುಬಾಯಿ ಮೊದಲಾದ ಸಂಘಟನೆಗಳ ಹಲವಾರು ಕಾರ್ಯಕ್ರಮಗಳ ಯಶಸ್ವಿಯ ಪ್ರೋತ್ಸಾಹಕರಾಗಿದ್ದಾರೆ.
ಇವರ ಬದುಕಿನ ಸಾಧನೆಯನ್ನು ಗುರುತಿಸಿ "ಬಿಲ್ಲವಾಸ್ ದುಬೈಯ ಸನ್ಮಾನ","ಒಮಾನ್ ಬಿಲ್ಲವಾಸ್"ನ ಸನ್ಮಾನ,"ಕರ್ನಾಟಕ ಸಂಘ ಶಾರ್ಜಾದಿಂದ ಸನ್ಮಾನ", " ಕುದ್ರೋಳಿ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ ", "ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರದ ಯುಎಇ ಸಮಿತಿಯ ಪ್ರಮುಖರಾಗಿ ಬ್ರಹ್ಮಕಲೊತ್ಸವದ ಸಂದರ್ಭದಲ್ಲಿ ಸನ್ಮಾನ",ಬಿಲ್ಲವ ಸಂಘ ಕುಳಾಯಿ ಮಂಗಳೂರು ವತಿಯಿಂದ ಸನ್ಮಾನಗಳಲ್ಲದೆ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ವತಿಯಿಂದ ಹಲವಾರು ಗೌರವಗಳು, ನೆನಪಿನ ಕಾಣಿಕಗಳು ದೊರೆತಿದೆ.
ದೂರದ ಗಲ್ಫ್ ರಾಷ್ಟ್ರದ ಉದ್ಯೋಗದಲ್ಲಿ ಇದ್ದುದರಲ್ಲೇ ಸಂತೃಪ್ತರಾಗುವ ಆನಂದ್ ಬೈಲೂರು ಅವರು "ಸ್ಬಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ" ಎಂಬ ಮಾತಿಗೆ ಆನ್ವರ್ಥನಾಮರಾದ ತುಳುನಾಡಿನ ಹೆಮ್ಮೆಯ ಸಮಾಜ ಸೇವಕ. ಸದ್ದು-ಸುದ್ದಿ ಇಲ್ಲದೆ ಸೇವಾ ನಿರತವಾಗಿರುವ ಇವರ ಆದರ್ಶತೆಗೆ ಸತ್ ಕೀರ್ತಿಗಳು ಸಲ್ಲಲಿ ಎಂಬುದೇ "ವಿಶೇಷ " ಹಾರೈಕೆ.












0 Comments