ಬಾಲ ಪ್ರತಿಭೆ ಶರಣ್ಯ....ಬಹುಕಲಾ ವರೇಣ್ಯೆ

 "ತುಳುನಾಡ ಸಿರಿ ಪುರ್ಪ"- ಶರಣ್ಯ ಬಂಗೇರ

          

ಮೂರಡಿ ಉದ್ದದ ಈ ಬಾಲ ಪ್ರತಿಭೆ ಯಕ್ಷಗಾನ, ಭರತನಾಟ್ಯ, ಚಿತ್ರಕಲೆ ಎಂಬ ಮೂರು ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡವಳು.  ಈ ಬಾಲ ಸಾಧಕಿಯೇ ಶರಣ್ಯ ಪಿ.ಬಂಗೇರ.
ಈಕೆ ಯಕ್ಷಗಾನ ವೇದಿಕೆಯೇರಿದರೆ ಯಾವುದೇ ಪ್ರಸಂಗದ ಸ್ತ್ರೀ ಅಥವ ಪುಂಡು ವೇಷಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಯಕ್ಷ ಚಿಗರೆ,
ನೃತ್ಯಕ್ಕಾಗಿ ನಿಂತರೆ ಎಂತಹ ಅರಸಿಕರನ್ನೂ ಕಲಾಸ್ವಾದನೆಯತ್ತ ಸೆಳೆಯುವ ನಾಟ್ಯ ಮಯೂರಿ, ಕೈಯಲ್ಲಿ ಕುಂಚ ಹಿಡಿದರೆ ಸುಂದರ ಚಿತ್ರವನ್ನು ಅನಾವರಣಗೊಳಿಸಬಲ್ಲ ಕೈಚಳಕದ ಚಿತ್ರಗಾತಿ. ಹೀಗೆ ಚಿಕ್ಕಂದಿನಿಂದಲೇ ಬಹುಮುಖ ಕಲಾ ಪ್ರತಿಭೆಯನ್ನು ಮೆರೆಯಿಸಿದ ಹಿರಿಮೆ ಈ ಬಾಲ ಸಾಧಕಿಯದ್ದು.
ತಲಪಾಡಿ ಬಜಂಗ್ರೆ ನಿವಾಸಿ ಹೋಟೆಲ್ ಉದ್ಯಮಿ ಪುರುಷೋತ್ತಮ ಯನ್ ಬಂಗೇರ ಮತ್ತು
ಶಿಕ್ಷಕಿ ಲೀಲಾವತಿ ದಂಪತಿಗಳ  ಪುತ್ರಿಯಾದ ಶರಣ್ಯ .
 ಶ್ರೀ ದುರ್ಗಾ ಪ್ರಸಾದಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿನಿ. ಇದೀಗ ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯ 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. 
ನಾಟ್ಯ ಗುರು  ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಬಳಿ ಭರತನಾಟ್ಯ ಸಹಿತ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾಳೆ. ಬಾಲಕೃಷ್ಣ ಮಾಸ್ತರ್ ಮಾರ್ಗದರ್ಶನದಲ್ಲಿ ಈಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2016ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
2019ನೇಸಾಲಿನ CCRT ಪರೀಕ್ಷೆ ಬರೆದು  ಭಾರತ ಸರಕಾರದ ಸಾಂಸ್ಕೃತಿಕ ಸಚಿವಾಲಯದಿಂದ ಭರತನಾಟ್ಯ ಕ್ಷೇತ್ರಕ್ಕೆ  ನೀಡಲ್ಪಡುವ ವಿಶೇಷ ಪುರಸ್ಕಾರಕ್ಕೆ ಪಾತ್ರಳಾಗಿದ್ದಾಳೆ.
ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಆಸಕ್ತಿ ಬೆಳೆಸಿದ ಶರಣ್ಯ  ಆನಂದಾಶ್ರಮ ಪ್ರೌಢ ಶಾಲೆಯ ಚಿತ್ರ ಕಲಾ ಅಧ್ಯಾಪಕರಾದ ಹರೀಶ್.ಟಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2019ನೇ ಸಾಲಿನ ಡ್ರಾಯಿಂಗ್ ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿರುತ್ತಾಳೆ.
ಯಕ್ಷಗುರು ಅಶ್ವತ್ ಮಂಜನಾಡಿ ಅವರ ಬಳಿ ಯಕ್ಷಗಾನವನ್ನು ಅಭ್ಯಸಿಸುವ ಶರಣ್ಯ ಹಲವಾರು ಪ್ರಸಂಗಗಳಲ್ಲಿ ವಿವಿಧ ಪಾತ್ರಗಳ ಪರಕಾಯ ಪ್ರವೇಶಗೈದು ಯಕ್ಷಗಾನದ ನಾಟ್ಯದಲ್ಲೂ, ಮಾತಿನಲ್ಲೂ ಜನ ಪ್ರಶಂಸನೆಗೆ ಪಾತ್ರಳಾಗಿದ್ದಾಳೆ.
ಅಶ್ವತ್ ಮಂಜನಾಡಿ ಅವರ ಮಾರ್ಗದರ್ಶನದಲ್ಲಿ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ಸತತ 5 ಬಾರಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ್ದಾಳೆ.
ಈಕೆಯ ಈ ಬಾಲ್ಯ ಕಾಲ ಸಾಧನೆಯನ್ನು ಗುರುತಿಸಿಜಿ ಕೆ ಚಾರಿಟೇಬಲ್ ಟ್ರಸ್ಟ್. ರಿ. ಬದಿಯಡ್ಕ ಅವರು "ತುಳುನಾಡ ಸಿರಿ ಪುರ್ಪ" ಪುರಸ್ಕಾರ ನೀಡಿ ಗೌರವಿಸಿರುತ್ತಾರೆ.
ಈ ಬಾಲ ಸಾಧಕಿಯನ್ನು ಅಭಿನಂದಿಸಿ ಪ್ರೋತ್ಸಾಹಿಸಲು ಸಂಪರ್ಕಿಸಿ +91 98461 96996
ಲೇಖನ ✍ ಜಯ ಮಣಿಯಂಪಾರೆ

Post a Comment

0 Comments