ವಿದೇಶ_ವಿಶೇಷ - 07
ಯುಎಇ : ತಾಯ್ನಾಡಿನಲ್ಲಿ ಕಲಾರಂಗದಲ್ಲಿ ಕೌಶಲ್ಯ ತೋರ್ಪಡಿಸುವ ಅದೇಷ್ಟೋ ಕಲಾವಿದೆಯರು ನಮ್ಮೂರ ಅಲ್ಲಲ್ಲಿ ಕಂಡು ಬರುತ್ತಾರೆ. ಆದರೆ ಮರುನಾಡಿನಲ್ಲಿ ಅಂದರೆ ಅರ್ಥಾತ್ ಮರಳುಗಾಡಿನ ಈ ಅರಬ್ ರಾಷ್ಟ್ರದಲ್ಲೂ ತುಳುನಾಡ ಕಲಾ ಕಂಪನ್ನು ಪಸರಿಸುತ್ತಾ ಕಲಾ ಮಾತೆಯ ಅನುಗ್ರಹಕ್ಕೆ ಪಾತ್ರರಾದ ಮಾತೆಯೊಬ್ಬರ ಬಗ್ಗೆ ಈ ಬಾರಿಯ ವಿದೇಶ_ವಿಶೇಷ ಅನಾವರಣಗೊಳ್ಳುತ್ತಿದೆ.
ರಂಗ ನಟಿಯಾಗಿ ವಿವಿಧ ಪಾತ್ರದ ಮೂಲಕ ಜನ ಶ್ಲಾಘನೆಗೆ ಪಾತ್ರರಾದ ಸುವರ್ಣ ಸತೀಶ್ ಎಂಬವರೇ ಈ ಅಪರೂಪದ ಕಲಾ ಸಾಧಕಿ.
ಮೂಲತಃ ಕರಾವಳಿಯ ದ.ಕ.ಜಿಲ್ಲೆಯ ಮಂಗಳೂರು ಕಾವೂರಿನ ಮಧುಕರ್ ಮತ್ತು ಶ್ರೀಮತಿ ಜಯಲಕ್ಷ್ಮಿ ಅವರ ಪುತ್ರಿಯಾದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಗಳೂರಿನ ಕೂಳೂರಿನಲ್ಲಿ ಪಡೆದು ಮುಂದೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ವಿದ್ಯಾಭ್ಯಾಸವನ್ನು ಪಡೆದರು.
ಉಡುಪಿ ಜಿಲ್ಲೆಯ ಬೆಳಪು ಎಂಬಲ್ಲಿನ ನಿವಾಸಿ ಇದೀಗ ಯುಎಇ ಯ ಪ್ರತಿಷ್ಠಿತ ಉದ್ಯಮಿಯಾಗಿರುವ ಸತೀಶ್ ಪೂಜಾರಿ ಎಂಬವರನ್ನು ವಿವಾಹಿತರಾಗುವ ಮೂಲಕ ಸುವರ್ಣ ಸತೀಶ್ ಆಗಿ ಗುರುತಿಸಿಕೊಂಡ ಇವರು ಪತಿಗೆ ತಕ್ಕ ಸತಿಯಾಗಿ ಕೊಲ್ಲಿ ರಾಷ್ಟ್ರಕ್ಕೆ ಕಾಲಿರಿಸಿದರು.ಪ್ರಸ್ತುತ ದುಬಾಯಿಯಲ್ಲಿ ಫೈನಾನ್ಸ್ ಕಂಟ್ರೋಲರಾಗಿ ಕಾರ್ಯ ನಿರ್ವಹಿಸುತ್ತಾ ಕಲಾ ಸೇವೆ ಹಾಗೂ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ.
ವಿದ್ಯೆಯೊಂದಿಗೆ ಕಲಾ ಸಿದ್ಧಿಯನ್ನು ಗಳಿಸಿಕೊಂಡಿರುವ ಸುವರ್ಣ ಸತೀಶ್ ಅವರ ಅಭಿನಯ ಆಸಕ್ತಿ ದುಬಾಯಿಯಲ್ಲೂ ಗರಿಗೆದರಿ ಪ್ರಸಿದ್ಧಿಯನ್ನು ತಂದು ಕೊಡುವಲ್ಲಿ ಯಶಸ್ವಿಯಾಗಿದೆ.
ಶ್ರೇಷ್ಠ ರಂಗನಟಿಯಾಗಿರುವ ಸುವರ್ಣಾ ಸತೀಶ್ ಅವರು ದಿ. ಉಮೇಶ್ ನಂತುರೂರವರ ಅವರ ನಿರ್ದೇಶನದ ಸಂಗಮ ಕಲಾವಿದೆರ್ ದುಬೈ ತಂಡದಲ್ಲಿ "ಕಾಂತಬಾರೆ-ಬೂದಬಾರೆ" ನಾಟಕದ ಹೆಗ್ಗಡತಿಯ ಪಾತ್ರದ ಮುಲಕ ಯುಎಇಯಲ್ಲಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ನಂತರ "ಬೆನ್ಪಿನೊರಿ ತಿನ್ಪಿನೊರಿ" ನಾಟಕವು 2010ರಲ್ಲಿ ದುಬೈ ಹಾಗು ಅಬುಧಾಬಿಯಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿತು.ಬಳಿಕ ಸಂಗಮ ಕಲಾವಿದರು ತಂಡವು "ಗಮ್ಮತ್ ಕಲಾವಿದರು ದುಬೈ" ಆಗಿ ಮಾರ್ಪಾಡುಗೊಂಡ ಮೇಲೆ ಈ ತಂಡದ ಮೂಲಕ ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶನದಲ್ಲಿ 2012ರಲ್ಲಿ "ಪೊರ್ಲುದಾಯೆ", 2013ರಲ್ಲಿ "ಪೊರ್ಲು ತೂವಡೆ",
2015ರಲ್ಲಿ "ಎಡ್ಡೆಡ್ಡುಪ್ಪುಗ", 2016ರಲ್ಲಿ " ನಂಕ್ ಮಾಂತೆರ್ಲ ಬೋಡು ", 2017ರಲ್ಲಿ "ತೆಲಿಕೆದ ಬರ್ಸೊಲು", 2017ರಲ್ಲಿ"ಪೊರ್ಲುದಾಯೆ" (Oman ದೇಶದಲ್ಲಿ),2018 "ಪೊರ್ಲುದಾಯೆ" (Kuwait ದೇಶದಲ್ಲಿ),2019ರಲ್ಲಿ " ಬಯ್ಯಮಲ್ಲಿಗೆ ", 2019 "ಬಯ್ಯಮಲ್ಲಿಗೆ" (ಮಂಗಳೂರು ಪುರಭವನದಲ್ಲಿ),
2020ರಲ್ಲಿ "ದಾದ ಮಲ್ಪೆರೆ ಅಪುಂಡು" ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಮಾತ್ರವಲ್ಲದೆ "ಗಮ್ಮತ್ ಕಲಾವಿದರು ದುಬೈ" ತಂಡದ ಸಮರ್ಥ ಸಾರಥ್ಯದ ಅಧ್ಯಕ್ಷ ಪದವಿ ಅಲಂಕರಿಸಿ ಕಲಾರಂಗದ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ.
ಯುಎಇಯ ಉದ್ಯಮಿಗಳಾದ ಹರೀಶ್ ಸೇರಿಗಾರ್ ನಿರ್ಮಾಣದ ಪ್ರಶಸ್ತಿ ವಿಜೇತ ಚಿತ್ರ "ಮಾರ್ಚ್22" ಹಾಗೂ ಹರೀಶ್ ಬಂಗೇರ ಅವರ ನಿರ್ಮಾಣದ "ಅನುಕ್ತ" ಎಂಬ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ.
ತುಳುನಾಡ ಮಣ್ಣಿನ ಕಲೆ,ಸಂಸ್ಕೃತಿ, ಸಂಸ್ಕಾರವನ್ನು ರಕ್ತಗತವನ್ನಾಗಿಸಿಕೊಂಡ ಸುವರ್ಣ ಸತೀಶ್ ಅವರು ಅಲ್ಲಿನ ಸಂಪ್ರದಾಯ ಆಚರಣೆಗಳನ್ನು ಈ ಮರುನಾಡಿನಲ್ಲೂ ಸಾಕ್ಷಾತ್ಕರಿಸುವಲ್ಲಿ ಗಮನಾರ್ಹರಾಗಿದ್ದಾರೆ.
ಅನಿವಾಸಿ ಮಹಿಳೆಯರನ್ನು ಮನೆ ಮಂದಿಯನ್ನು ಒಗ್ಗೂಡಿಸಿ ಯುಎಇಯಲ್ಲೂ ವರ ಮಹಾಲಕ್ಷ್ಮಿ ವ್ರತಾಚರಣೆ ಹಾಗೂ ಪೂಜೆ ಮಾಡುವ ಮೂಲಕ ಮಹಾಲಕ್ಷ್ಮಿ ಕೃಪಾಕಟಾಕ್ಷ ಇಲ್ಲಿನ ಮಹಿಳೆಯರಿಗೂ ಲಭಿಸುವಂತಾಗಿಸುವಲ್ಲಿ ಇಲ್ಲಿನ ಪ್ರಮುಖ ಎಂಟು ಮಂದಿ ಮಹಿಳೆಯರೊಂದಿಗೆ ಸುವರ್ಣ ಸತೀಶ್ ಅವರ ಸಹಭಾಗಿತ್ವವೂ ಪ್ರಶಂಸನೀಯ. ವರಮಹಾಲಕ್ಷ್ಮಿ ಸೇವಾ ಸಮಿತಿಯ ಮುಖ್ಯಸ್ಥರಾಗಿ ಪೂಜಾ ಕೈಂಕರ್ಯ ಯಶಸ್ವಿ ದಶಮಾನೋತ್ಸವ ಪೂರೈಸಿ ಇದೀಗ ಹದಿನಾಲ್ಕನೆ ವರ್ಷದಲ್ಲಿ ಮುಂದೆ ಸಾಗುತ್ತಿರುವುದು ಗಮನಾರ್ಹವಾಗಿದೆ.
ಲಲಿತ ಸಹಸ್ರಮಾನ ಎಂಬ ಸಮೂಹವನ್ನು ರಚಿಸಿ ಅ ಮೂಲಕ ಹಲವಾರು ತಿಂಗಳಿಂದ ಮಹಿಳೆಯರ ಉಡುಗೆ ತೊಡುಗೆ,ಸಂಸ್ಕೃತಿ-ಸಂಪ್ರದಾಯಗಳ ಬಗ್ಗೆ ಹಾಗೂ ನಿತ್ಯ ಯೋಗಭ್ಯಾಸದ ಬಗ್ಗೆ ಮಾರ್ಗದರ್ಶನ ತರಬೇತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಿಲ್ಲವಾಸ್ ದುಬೈ ಏಂಡ್ ನಾರ್ಥರ್ನ್ ಎಮಿರೇಟ್ಸ್ ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹಾಗೂ ರಾಜರಾಜೇಶ್ವರಿ ಭಜನಾ ತಂಡದ ಸಕ್ರಿಯ ಸದಸ್ಯೆಯಾಗಿ,ವಿಶ್ವ ತುಳು ಸಮ್ಮೇಳನ ಯುಎಇಯಾ ಮಹಿಳಾ ಸಮಿತಿ ಹಾಗೂ ಇನ್ನಿತರ ಹಲವಾರು ಸಮಿತಿಗಳಲ್ಲಿ ದುಡಿದಿದ್ದಾರೆ.
ದಾನಗಳಲ್ಲಿ ದೊಡ್ಡ ದಾನ ಜೀವ ಉಳಿಸುವ ರಕ್ತದಾನ ಎಂದು ನಂಬಿರುವ ಸುವರ್ಣಾ ಸತೀಶ್ ಅನೇಕ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ರಕ್ತದಾನ ಮಾಡಿರುತ್ತಾರೆ. ಅದೆಷ್ಟೋ ಅಶಕ್ತ ಕಲಾವಿದರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಇವರ ಕಲಾ ಸೇವೆಗೆ, ಸಮಾಜ ಸೇವೆಗೆ ಬೆನ್ನೆಲುಬಾಗಿ ನಿಂತು ಪರಿಪೂರ್ಣವಾಗಿ ಸಹಕರಿಸುವ ಪ್ರೋತ್ಸಾಹದ ಕೈ ಇವರ ಪತಿ ಸತೀಶ್ ಪೂಜಾರಿ ಅವರದ್ದಾಗಿದ್ದು . ಶೃತಿ ಮತ್ತು ಶ್ರವಣ್ ಎಂಬ ಇಬ್ಬರು ಮಕ್ಕಳನ್ನೊಳ ಗೊಂಡ ಸುಂದರ ಸಂತೃಪ್ತ ಕುಟುಂಬ ಇವರದ್ದಾಗಿದೆ.
ಸದಾ ನಗು ಮುಖದೊಂದಿಗೆ,ಅಭಿನಯ ಕೌಶಲ್ಯದ ಕಲಾ ಅಭಿರುಚಿಯೊಂದಿಗೆ ಸಂಘಟನಾತ್ಮಕ ಸಕ್ರಿಯತೆ ಹಾಗೂ ಸಹೃದಯ ಮನಸ್ಸಿನೊಂದಿಗೆ ಎಲ್ಲರೊಡನೆ ಬೆರೆಯುವ ಮತ್ತು ಕಲಾ ಸೇವೆಯನ್ನು ಬೆಳೆಸುವ ವಿಶಾಲ ಮನೋಭಾವನೆ ಹೊಂದಿದ್ದಾರೆ.
ಸುವರ್ಣಾ ಸತೀಶ್ ಅವರ ಕಲಾ ಸೇವೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಅನೇಕ ಕಡೆ ಸನ್ಮಾನಗಳು ನಡೆದಿವೆ. ಮುಖ್ಯವಾಗಿ ದುಬೈಯ ವರಮಹಾಲಕ್ಷ್ಮೀ ಸಮಿತಿಯ ದಶಮಾನೋತ್ಸವ ಸಮಾರಂಭದ ವೇಳೆ ಇವರ ಸಂಘಟನಾ ಸಾಮರ್ಥ್ಯಕ್ಕಾಗಿ ಸನ್ಮಾನಿಸಲಾಯಿತು. ಅದೇ ರೀತಿ "ಪೊರ್ಲು ತೂವಡೆ" ತುಳು ನಾಟಕ ಪ್ರದರ್ಶನದ ವೇಳೆ ದುಬೈಯಲ್ಲಿ ಗಮ್ಮತ್ ಕಲಾವಿದರು ತಂಡದ ವತಿಯಿಂದ ಇವರಿಗೆ ಸನ್ಮಾನ ನಡೆದಿದೆ.
ಶ್ರೀಮತಿ ಸುವರ್ಣಾ ಸತೀಶ್ ಅವರು ಕಲಾ ಸೇವೆ ಹಾಗೂ ಸಮಾಜ ಸೇವೆಯಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂಬುದೇ ವಿಶೇಷ ಹಾರೈಕೆ.













0 Comments