ವಿದೇಶ_ವಿಶೇಷ ಅಂಕಣ-10
ಕುವೈಟ್: ವಿದೇಶ ಉದ್ಯೋಗದ ಮೂಲಕ ಬದುಕಿನ ನೆಲೆ ಕಂಡುಕೊಂಡು. ಅದರಲ್ಲಿ ಲಭಿಸಿದ ಆದಾಯದ ಬೆಲೆಯನ್ನು ಸಮಾಜದ ಏಳಿಗೆಗಾಗಿ ಸಮರ್ಪಿಸುತ್ತಾ ಇರುವ ಸಮರ್ಥ ಸಾಧಕರೋರ್ವರ ಬಗ್ಗೆ ವಿಶೇಷ ಚಾನೆಲ್ ಈ ಬಾರಿ "ವಿದೇಶ_ವಿಶೇಷ"ದ ಯಶಸ್ವಿ ಹತ್ತನೇ ಅಂಕಣವನ್ನಾಗಿಸಿ ಅನಾವರಣಗೊಳಿಸುತ್ತಿದೆ.
ಬಡತನದ ಬಾಲ್ಯದಿಂದಲೇ ಸತತ ಪರಿಶ್ರಮ ಹಾಗೂ ಅವಕಾಶದ ಅಡಿಪಾಯವನ್ನಾಗಿಸಿ ಬದುಕನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಈ ಸಾಧಕನ ಜೀವನದ ಯಶೋಗಾಥೆ ಮಾದರಿಯಾಗಿದೆ.
ಔದ್ಯೋಗಿಕವಾಗಿ ಕಳೆದ ಇಪ್ಪತ್ತಮೂರು ವರ್ಷಗಳಿಂದ ಕುವೈಟ್ ನಲ್ಲಿ ನೆಲೆಸಿರುವ ಇವರಿಗೆ ಬಾಲ್ಯ ಕಾಲದಿಂದಲೇ ಅನುಭವಿಸಿದ ಬದುಕಿನ ಪಾಠಗಳು ಯಶಸ್ವಿಗೆ ಮೂಲವಾಗಿರುವುದರಿಂದ ಇದೀಗ ವಿದೇಶದಲ್ಲಿನ ದುಡಿತದ ಒಂದಂಶವನ್ನು ಮರಳಿ ಸಮಾಜಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಶೇಖರ ಭಂಡಾರಿ- ಬೇಬಿ ದಂಪತಿಗಳ ದ್ವಿತೀಯ ಪುತ್ರರಾಗಿ ರಮೇಶ್ ಭಂಡಾರಿ ಅವರು ಜನಿಸಿದ್ದರು. ತುಂಬು ಸಂಸಾರದ ಬಡತನ ಭಂಡಾರಿ ಅವರನ್ನು ಬಾಲ್ಯ ಕಾಲದಲ್ಲಿ ಕಾಡಿತ್ತು. ಆದರೂ ಅಂದಿನ ಸ್ವಾಭಿಮಾನದ ನಿರ್ಧಾರಗಳು ಇವರನ್ನು ಇಂದಿನ ಉನ್ನತಿಗೆ ಏರಿಸಿದ ಮೆಟ್ಟಿಲುಗಳಾಗಿದೆ. ಕಾಪುವಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿ ಬಳಿಕ ಉಡುಪಿಯಲ್ಲಿ ಪದವಿ ವ್ಯಾಸಂಗ ಗಳಿಸಿದ್ದರು.
ಕಿರಿಯ ವಯಸ್ಸಿನಿಂದಲೇ ಮನೆಯ ಸಹಜ ಬಡತನದ ಪರಿಣಾಮ ತಮ್ಮ ಶಿಕ್ಷಣ ಸಂದರ್ಭದ ಬಿಡುವಿನ ವೇಳೆಯನ್ನು ಹೋಟೆಲ್ ಹಾಗೂ ಇನ್ನಿತರ ಕಡೆಗಳಲ್ಲಿನ ದುಡಿಮೆಗಾಗಿ ಬಳಸಿಕೊಂಡರು.ಶಾಲಾ-ಕಾಲೇಜಿನ ಶಿಕ್ಷಣ ಸಮಯದ ಬೆಳಿಗ್ಗೆ ಹಾಗೂ ಸಂಜೆಯ ತನ್ನ ಪಾರ್ಟ್ ಟೈಂ ದುಡಿತದಿಂದ ಗಳಿಸಿದ ಹಣದಿಂದಲೇ ಶಿಕ್ಷಣದ ವೆಚ್ಚ ನಿರ್ವಹಿಸಿದ ರಮೇಶ್ ಭಂಡಾರಿ ಅವರಲ್ಲಿ ಅಂದೇ ಸ್ವಾಭಿಮಾನದ ಬದುಕು ಪುಟಿದೆದ್ದಿತ್ತು.
ಬಳಿಕ ಮುಂಬಯಿಯಲ್ಲಿ ಉನ್ನತ ವ್ಯಾಸಂಗವನ್ನು ಪೂರೈಸಿ ಅಲ್ಲಿನ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪನಿಯ ಅಟ್ಲಾಸ್ ಟೆಕ್ನಾಲಜಿಯಲ್ಲಿ ಮೂರುವರೆ ವರ್ಷ ಉದ್ಯೋಗ ನಿರ್ವಹಿಸಿದರು.
1997ರಲ್ಲಿ ಗಲ್ಫ್ ರಾಷ್ಟ್ರವಾದ ಕುವೈತ್ ಗೆ ಆಗಮಿಸಿದ ಇವರು ಕುವೈತ್ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಮಹಾ ಪ್ರಬಂಧಕರಾಗಿ ಹುದ್ದೆ ನಿರ್ವಹಿಸ ತೊಡಗಿದರು.ಪ್ರಾಮಾಣಿಕ ಉದ್ಯೋಗ ನಿರ್ವಹಣೆಯ ಫಲವಾಗಿ ಗ್ರೂಫ್ ಆಫ್ ಕಂಪನಿಸ್ ನ ಬೋರ್ಡ್ ಅಡ್ವೈಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಬಾಲ್ಯದ ಕಷ್ಟ-ಸಂಕಷ್ಟಗಳು ಸಮಾಜದಲ್ಲಿ ಭವಿಷ್ಯದ ಮಕ್ಕಳಿಗೆ ತಟ್ಟದಿರಲಿ ಎಂಬ ಇವರ ಸದುದ್ದೇಶ ಸರ್ವತ್ರ ಪ್ರಶಂಸನೀಯ.
ಪರದೇಶದಲ್ಲಿನ ಕೆಲಸದ ಒತ್ತಡದ ನಡುವಲ್ಲಿಯೂ ಸದಾ ತುಳುನಾಡಿನ ಬಗ್ಗೆ ತುಡಿತ ಇರುವ ರಮೇಶ್ ಭಂಡಾರಿ ಅವರು ಕುವೈತ್ ನಲ್ಲಿ ಇದ್ದುಕೊಂಡು ತಾಯ್ನಾಡಿನ ಸಮಾಜ ಸೇವೆಗೆ ಸ್ಪಂದಿಸುವ ಪರಿ ಅನನ್ಯವಾಗಿದೆ.
ಕುವೈಟ್ ತುಳು ಕೂಟದ ಸಮರ್ಥ ಸಾರಥಿ...
20 ವರ್ಷಗಳ ಹಿಂದೆ ಕುವೈಟ್ ನಲ್ಲಿ ಆರಂಭಗೊಂಡಿರುವ ತುಳು ಕೂಟಕ್ಕೆ 2018-19ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಇದೀಗ 2019-20 ದ್ವಿತೀಯ ಅವಧಿಗೆ ಮತ್ತೊಮ್ಮೆ ಅಧ್ಯಕ್ಷರಾಗಿ ಸಾರಥ್ಯವಹಿಸಿದ್ದಾರೆ.
ತುಳುನಾಡಿನ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸರ್ವ ಧರ್ಮದ ಸದಸ್ಯರು ಇರುವ ಕುವೈಟ್ ತುಳುಕೂಟ ಅರಬ್ ನಾಡಿನಲ್ಲಿ ವರ್ಷಂಪ್ರತಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನ ರಂಜನೀಯ ಪ್ರವಾಸಗಳನ್ನು,ಮಕ್ಕಳ ವಿದ್ಯಾಭ್ಯಾಸದ ಪ್ರೋತ್ಸಾಹಕ್ಕೆ ಸ್ಕಾಲರ್ ಶಿಪ್ ವಿತರಣೆ,ವಿದ್ಯಾರ್ಥಿಗಳಿಗೆ ಶಿಬಿರ,
ಕ್ರೀಡಾ ಸ್ಪರ್ಧೆ ,ಉದ್ಯೋಗಿಗಳ ರಕ್ತದಾನ ಶಿಬಿರ,ಉಚಿತ ವೈದ್ಯಕೀಯ ಶಿಬಿರ, ತುಳುನಾಡಿನ ಕಲೆ-ಕಲಾವಿದರಿಗಾಗಿ "ತುಳುಪರ್ಬ" ಮೊದಲಾದವು ಗಳನ್ನು ವೈವಿಧ್ಯಮಯವಾಗಿ ಏರ್ಪಡಿಸುತ್ತಾ ಬರುತ್ತಿದೆ.
ತಾಯ್ನಾಡಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ,ನಿರಾಶ್ರಿತ ಬಡವರಿಗೆ " ಆಶ್ರಯ ಯೋಜನೆ" ಮೂಲಕ ವಸತಿ ನಿರ್ಮಾಣ ಮಾಡುತ್ತಾ ಇದೀಗ ಮೂರು ಮನೆಗಳನ್ನುಕಟ್ಟಿಕೊಟ್ಟಿದ್ದಾರೆ.
ಮೂರನೇಯ ವಸತಿಯ ಗೃಹ ಪ್ರವೇಶ ಇದೀಗ ಒ.23ಕ್ಕೆ ಜರಗಲಿದೆ. ಆಶಕ್ತ ರೋಗಿಗಳಿಗೆ ಚಿಕಿತ್ಸಾ ಸಹಾಯ, ರಕ್ತದಾನ, ಆಸ್ಪತ್ರೆಗಳಿಗೆ ಅಂಬುಲೆನ್ಸ್, ವೈದ್ಯಕೀಯ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದೆ.
ಕೋರೋನ ಕಾಲಘಟ್ಟದ ನೆರವು.....
ಕೋವಿಡ್19 ಎಂಬ ಮಹಾಮಾರಿ ಜಗತ್ತಿಗೆ ಬಾಧಿಸಿದಾಗ ರಮೇಶ್ ಭಂಡಾರಿಯವರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳು ನಡೆದಿದೆ.ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ಇಲ್ಲದೆ ತಾಯ್ನಾಡಿಗೆ ಮರಳುವವರಿಗೆ ಕುವೈಟ್ ನಿಂದ ವಿಮಾನ ಯಾನದ ಸೌಲಭ್ಯ ಹಾಗೂ ಈ ಸಂದರ್ಭದಲ್ಲಿ ಕೆಲಸವಿಲ್ಲದೆ ರೂಮಲ್ಲಿ ಉಳಿದಿದ್ದವರಿಗೆ ನಿರಂತರ ಆಹಾರದ ವ್ಯವಸ್ಥೆ ಗೆ ಇಂಡಿಯನ್ ಕಮ್ಯೂನಿಟಿ ಸಪೋರ್ಟ್ ಗ್ರೂಪ್ ನೊಂದಿಗೆ ತುಳುಕೂಟ ಸಹಭಾಗಿತ್ವದಲ್ಲಿ ಆರ್ಥಿಕ ,ವೈದ್ಯಕೀಯ, ಆಹಾರ ವಿತರಣೆಗೆ ಸಹಕರಿಸಿದೆ.
ತಾಯ್ನಾಡಿನಲ್ಲಿ ದೈಜಿವರ್ಲ್ಡ್ ವಾಹಿನಿಯೊಂದಿಗೆ ಸೇರಿ ಆಹಾರ ಕಿಟ್ ವಿತರಣೆಗೆ ಸಹಕರಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ಜಾನಪದ ಕಲಾವಿದರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಮೊದಲಾದವುಗಳಿಗೆ ಕುವೈಟ್ ತುಳುಕೂಟ ಲಕ್ಷಾಂತರ ರೂಗಳ ನೆರವು ನೀಡಿದೆ.
ಇದರೊಂದಿಗೆ ಹಲವು ಸಂಘ ಸಂಸ್ಥೆಗಳ ನಿಕಟ ಹಾಗೂ ಗಣ್ಯರ ಜತೆಗಿನ ಒಡನಾಟ ಬೆಳೆಸಿಕೊಂಡ ರಮೇಶ್ ಭಂಡಾರಿ ಅವರು ತುಳುಕೂಟದ ಮೂಲಕ ತುಳುನಾಡಿನ ಸಂಸ್ಕೃತಿ, ಸಾಮಾಜಿಕ ಸಹಾಯದ ಸಾಕ್ಷಾತ್ಕಾರಕ್ಕೆ ಅನನ್ಯ ಸೇವಾ ನಿರತರಾಗಿದ್ದಾರೆ.
ಸಹೃದಯತೆಯ ಸಾಕಾರ ಮೂರ್ತಿಯಾಗಿರುವ ಭಂಡಾರಿ ಅವರು ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗವಕಾಶ ನೀಡುವ ಮೂಲಕ ಸಾಮಾಜಿಕ ಉನ್ನತಿಗೆ ಶ್ರಮ ವಹಿಸಿದ್ದಾರೆ.
ಇವರ ಬದುಕಿನ ಸಾಧನೆಯನ್ನು ಗುರುತಿಸಿ ಭಂಡಾರಿ ಯುವ ವೇದಿಕೆ ಮಂಗಳೂರು ಯುವ ಸಂಗಮಕ್ಕೆ ವಿದೇಶದ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಗೌರವಿಸಿದೆ.
ಮಂಗಳೂರಿನ "ನಮ್ಮ ಕುಡ್ಲ" ಟಿವಿ ವಾಹಿನಿಯ "ನೆಲದ ಸಿರಿ" ಕಾರ್ಯಕ್ರಮದಲ್ಲಿ ರಮೇಶ್ ಭಂಡಾರಿ ಅವರ ಸಾಧನೆಗಳ ಬಗ್ಗೆ ಸಮಗ್ರ ಸಂದರ್ಶನ ನಡೆಸಲಾಗಿದೆ.
ಮೇಲಿನ ಲಿಂಕ್ ಒತ್ತಿ ನೀವು ಈ ಸಂದರ್ಶನವನ್ನು ವೀಕ್ಷಿಸಬಹುದಾಗಿದೆ.
ಇವರ ಧರ್ಮಪತ್ನಿ ಅನಿತಾ ಕುವೈಟ್ ಏರ್ ಪೋರ್ಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗ ಆರ್ಯನ್ ,ಮಗಳು ಆರ್ಶಿಯಾ (ಇಬ್ಬರೂ ಕುವೈಟ್ ಕೆಮಲ್ ಸ್ಕೂಲ್ ನ ವಿದ್ಯಾರ್ಥಿಗಳು) ಎಂಬವರೊಡನೆ ಸಂತೃಪ್ತ ಕುಟುಂಬ ಸಾಗಿಸುತ್ತಿದ್ದಾರೆ.
ಬಾಲ್ಯದಿಂದಲೇ ಸಿಕ್ಕಿದ ಅವಕಾಶಗಳನ್ನು ಅದೃಷ್ಟ ಎಂಬಂತೆ ಸದುಪಯೋಗಪಡಿಸಿಕೊಂಡು ಸತತ ಪರಿಶ್ರಮದ ಮೂಲಕ ಜೀವಮಾನದ ಸಾಧನೆಯ ಮೂಲಕ ಆದರ್ಶನೀಯ ವ್ಯಕ್ತಿತ್ವವಾಗಿ ರೂಫಿಸಿರುವ ರಮೇಶ್ ಭಂಡಾರಿ ಅವರ ಬದುಕು ಸದಾ ಹಸನಾಗಿರಲೆಂಬುದೇ "ವಿಶೇಷ" ಹಾರೈಕೆ.
















0 Comments