ಜನುಮ ದಿನದ ವಜ್ರ ಮಹೋತ್ಸವ ಸಂಭ್ರಮದಲ್ಲಿ ಕೊಲ್ಲಿ ರಾಷ್ಟ್ರದ "ಮಲ್ಲಣ್ಣ" - ಪುತ್ತಿಗೆ ಗುತ್ತು ಐಕಳ ಹಿರಿಮನೆ ಸುಧಾಕರ್ ಶೆಟ್ಟಿ

 

ವಿದೇಶ_ವಿಶೇಷ ಅಂಕಣ- 11

ಕುವೈಟ್‌: ವ್ಯಕ್ತಿಯನ್ನು ಶಕ್ತಿಯನ್ನಾಗಿಸುವಲ್ಲಿ ಅವರ 
ಕ್ರಿಯಾಶೀಲತೆ ಹಾಗೂ ಅದಕ್ಕೆ ಒಪ್ಪುವ ದೇಹದಾರ್ಢ್ಯತೆ,ವಯೋ ಸಹಜ ಗುಣ-ನಡತೆಗಳು ಪ್ರಧಾನ ಪಾತ್ರವಹಿಸುತ್ತದೆ.ಇಂತಹ ಸವಿಶೇಷಣಗಳನ್ನು ಮೈಗೂಡಿಸಿಕೊಂಡು ಆದರ್ಶ ಪ್ರಾಯವರಾದವರಲ್ಲಿ ಪುತ್ತಿಗೆ ಗುತ್ತು ಐಕಳ ಹಿರಿಮನೆ ಸುಧಾಕರ್ ಶೆಟ್ಟಿ ಅವರ ವ್ಯಕ್ತಿತ್ವ ಹಾಗೂ ಜೀವಮಾನದ ಸಾಧನೆಗಳು ಪ್ರಶಂಸನೀಯ.
ತುಳುನಾಡಿನಲ್ಲಿ ಯಾವುದೇ ಜವಾಬ್ದಾರಿಯನ್ನು ಅಂಜಿಕೆ ಇಲ್ಲದೆ ಹೊರುವವರು "ಅಣ್ಣ" ಎಂದು ಅಭಿಮಾನಿಕರಿಸುವುದು ವಾಡಿಕೆ. ಅಂತಹ ಸಂಪ್ರದಾಯವನ್ನು ಕೊಲ್ಲಿ ರಾಷ್ಟ್ರದಲ್ಲೂ ಹುಟ್ಟು ಹಾಕಿ "ಮಲ್ಲಣ್ಣ"( ಹಿರಿಯಣ್ಣನ) ಸ್ಥಾನವನ್ನು ತುಂಬಿ ಕಿರಿಯವರಲ್ಲಿ ಸದಾ ಪ್ರೋತ್ಸಾಹ  ಸೃಷ್ಠಿಸಿ ಇಂದು ಎಪ್ಪತ್ತೈದನೇ (75) ಜನುಮ ದಿನದ ಸಂಭ್ರಮದಲ್ಲಿರುವ ಈ ಶೆಟ್ಟರ ಜೀವನಗಾಥೆಯ ಬಗ್ಗೆ ವಿಶೇಷ ಚಾನೆಲ್ ಈ ಬಾರಿ ವಿದೇಶ ವಿಶೇಷ ಅಂಕಣದ ಮೂಲಕ ಅನಾವರಣಗೊಳಿಸುತ್ತಿದೆ.

ತುಳು-ಕನ್ನಡ ಸಂಸ್ಕೃತಿಯನ್ನು ಸಹಜತೆಯಿಂದ ಮೈಗೂಡಿಸಿಕೊಂಡು   ಅನಿವಾಸಿ ಭಾರತೀಯರಿಗೆಲ್ಲರಿಗೂ ಆದರ್ಶರಾಗಿರುವ ಪುತ್ತಿಗೆ ಗುತ್ತು ಐಕಳ ಹಿರಿಮನೆ ಸುಧಾಕರ್ ಶೆಟ್ಟಿ ಅವರು ನಮ್ಮ ಸಂಸ್ಕೃತಿಯ ಆರಾಧಕರು, ಕಲೆ-ಸಾಹಿತ್ಯ- ಕ್ರಿಡೆಗಳ ಪ್ರೋತ್ಸಾಹಕರು, ಸಮಗ್ರವಾಗಿ ಕುವೈಟ್‌ನಲ್ಲಿರುವ  ತುಳುನಾಡಿನ ಅಭಿವ್ಯಕ್ತಿ,ಗುತ್ತಿನ ಹಿರಿಮೆಗೆ ಗತ್ತಿನ ಗರಿಮೆಗೆ ಅನ್ವರ್ಥರಾದವರು 
ಕಿನ್ನಿಗೋಳಿ ಸಮೀಪದ ಐಕಳದಲ್ಲಿ ರೆಂಜೆಗುತ್ತು ಮುಂಡ್ಕೂರು  ಶ್ಯಾಮರಾಯ ಶೆಟ್ಟಿ ಮತ್ತು ಐಕಳ ಹಿರಿಮನೆ ಕಮಲ ಶೆಟ್ಟಿ ದಂಪತಿಗಳ ಪುತ್ರರಾದ ಸುಧಾಕರ ಶೆಟ್ಟಿ ಅವರು ಕೃಷಿ ಮೇಧಾವಿತ್ವದ ಕುಟುಂಬದ ಸದಸ್ಯ. ‌ತುಳುನಾಡಿನ ವಾತಾವರಣ ಇವರನ್ನು ಸಾಂಸ್ಕೃತಿಕವಾಗಿ, ಕ್ರೀಡಾತ್ಮಕವಾಗಿ ಪೋಷಿಸಿ ಮುಂದಡಿಯಿಡಲು ಪ್ರೋತ್ಸಾಹಿಸಿತು.  ಅವಿಭಕ್ತ ಕುಟುಂಬದ ಸಂಸ್ಕೃತಿಯ ಸಾರ ಇವರನ್ನು  ಬಾಲ್ಯದಿಂದಲೂ ವಿದ್ಯಾಭ್ಯಾಸ ಹಾಗೂ ಕ್ರೀಡೆ ಈ ಎರಡು ಕ್ಷೇತ್ರದಲ್ಲಿಯೂ ಅಗ್ರಪಂಕ್ತಿಯಲ್ಲಿ ಮುನ್ನಡೆಯಲು ದಾರಿ ದೀಪವಾಯಿತು.  
ಸಾಂಸ್ಕೃತಿಕ, ಸಾಹಿತ್ಯ ಮತ್ತು ವಿಜ್ಞಾನ  ಲೋಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ಮಯತೆ ತೊಡಗಿಸಿಕೊಳ್ಳಲು ಸ್ಪೂರ್ತಿ ಒದಗಿಸಿತು. 
ಪದವಿ ವ್ಯಾಸಂಗದಲ್ಲಿ ಇಲೆಕ್ಟ್ರಿಕಲ್  ಇಂಜಿನಿಯರ್ ಪದವಿಯ ಉನ್ನತ ಶ್ರೇಣಿಯ ಅಂಕಪಟ್ಟಿ ಕೈಸೇರಿದಾಗ  ಸ್ವಂತ ಉದ್ಯೋಗಿಯಾಗಬೇಕೆಂಬ ಉತ್ಕಟ ಬಯಕೆ ಇವರನ್ನು ಮಾಯಾನಗರಿಯಾದ ಮುಂಬಯಿಗೆ ಕೈಬೀಸಿ ಕರೆಯಿತಂತೆ. ಅಲ್ಲಿ ತಮ್ಮದೇ  ಆದ "ವಸುಧಾ ಇಂಜಿನಿಯರಿಂಗ್"  ಸಂಸ್ಥೆಯನ್ನು ಆರಂಭಿಸಿ ವೃತ್ತಿ ಜೀವನಕ್ಕೆ ನಾಂದಿ ಹಾಡಿದರು.ಆರಂಭಿಸಿದರು. 
 ಇವರ ಶೈಕ್ಷಣಿಕ ಅರ್ಹತೆ ಹಾಗೂ ಉದ್ಯೋಗ  ನಿಪುಣತೆಯಿಂದಾಗಿ ಕೊಲ್ಲಿ ರಾಷ್ಟ್ರಕ್ಕೆ ಕಾಲಿರಿಸುವ ಅವಕಾಶವೊದಗಿಸಿತು. 
ಕುವೈಟ್ ನ  ಪ್ರತಿಷ್ಠಿತ ಕುವೈಟ್ ಆಯಿಲ್ ಕಂಪೆನಿಯ ಆಹ್ವಾನ ಮನ್ನಿಸಿ  ಹಿರಿಯ ಇಂಜಿನಿಯರ್ ಹುದ್ದೆಯನ್ನಲಂಕರಿಸಿ ವೃತ್ತಿ ಜೀವನದಲ್ಲಿ ಮುಂದಡಿಯಿಟ್ಟರು.
ಕುವೈಟಿನ ವೃತ್ತಿ ಬದುಕಿನೊಂದಿಗೆ ತಾನು ಬಾಲ್ಯದಿಂದಲೂ ಮೈಗೂಡಿಸಿಕೊಂಡಿದ್ದ ಕ್ರೀಡಾ ಸಕ್ತಿಯನ್ನು ಗರಿಗೆದರಿಸಿಕೊಂಡರು.  
ಕುವೈತ್ ಆಯಿಲ್ ಕಂಪೆನಿಯ ಕ್ರಿಕೆಟ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಪದಗ್ರಹಣ ಗೈಯುವುದರೊಂದಿಗೆ ಕೊಲ್ಲಿರಾಷ್ಟ್ರದಲ್ಲಿ  ಇವರ ಕ್ರೀಡಾ ಬಾಳ್ವೆ ಬೆಳಗ ತೊಡಗಿತು. ಇವರ  ಮುಂದಾಳತ್ವದಲ್ಲಿ ಎರಡು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು 
ಕುವೈಟ್ ಗೆ ಅರ್ಪಿಸಿದರು. ಕುವೈಟ್ ಕ್ರಿಕೆಟ್ ಆಸೋಶಿಯೇಷನ್ ನ ವ್ಯವಸ್ಥಾಪಕ, ಡೆಪ್ಯುಟಿ ಚೀಪ್ ಎಕ್ಸಿಕ್ಯುಟಿವ್ ಹಾಗೂ ತಾಂತ್ರಿಕ ನಿರ್ದೇಶಕರಂತಹ ಅತ್ಯುನ್ನತ  ಹುದ್ದೆಗಳನ್ನು ಅಲಂಕರಿಸಿ ಮರಳುಗಾಡಿನಲ್ಲೂ ಕ್ರಿಕೆಟ್ ಎಂಬ 
ಕ್ರಿಕೆಟ್ ಕ್ರೀಡೆಯ ಬೆಳವಣಿಗೆಗೆ ಮಹತ್ತರವಾದ ಕೊಡುಗೆಗಳನ್ನು ನೀಡಿದರು. 
ತಮ್ಮ ಮುಂದಾಳುತ್ವದಲ್ಲಿ ಕುವೈಟ್ ಕ್ರಿಕೆಟ್ ತಂಡ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ  ವಿಜಯ ದುಂದುಬಿ ಮೊಳಗಿಸುವಂತಾಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು.  
ಬಾಲ್ಯದಿಂದಲೇ ಮೈಗೂಡಿಸಿಕೊಂಡು ಬಂದಿರುವ ತುಳುನಾಡ ಸಂಸ್ಕೃತಿ ಇವರನ್ನು  ನಾಡು-ನುಡಿ ಪ್ರೀತಿಯ  ಬಗೆಗೆ ಅತೀವ ಆಸಕ್ತಿಯನ್ನು ಮೂಡಿಸಿತು. ಕುವೈಟ್ ನಲ್ಲಿ ತುಳುಭಾಷೆ ಹಾಗೂ ಸಂಸ್ಕೃತಿಗೆ ಮಾನ್ಯತೆಯನ್ನು ನೀಡಲು ಹೊರಟ ತುಳುಕೂಟ ಕುವೈಟ್ ಇದರ ದಂಡಿನ ದಂಡ ನಾಯಕರಾದರು. ಇದರ ಪರಿಣಾಮ ತುಳುಕೂಟ ಕುವೈತ್ ಇದರ ಪ್ರಥಮ ಅಧ್ಯಕ್ಷ ಎಂಬ ಹಿರಿಮೆ ಇವರದ್ದಾಗಿದೆ. ಈ
ಮೂಲಕ ತುಳು ಕೂಟದ  ಭದ್ರ ಬುನಾದಿಯಾಯಿತು. ಕುವೈಟ್ ನಲ್ಲಿ ತುಳುಕೂಟ ವಿವಿಧ ಕಾರ್ಯ ಚಟುವಟಿಕೆಗಳ ಮೂಲಕ  ಮಾದರಿ ಸಂಘವಾಗಿ ಬೆಳೆಯಿತು.
ತುಳುಕೂಟವನ್ನು  ರಾಯಭಾರಿ ಕಛೇರಿಯಲ್ಲಿ ನೊಂದಾಯಿಸಿ ತುಳುಕೂಟದ ಲಿಖಿತ "ಸಂವಿಧಾನ ಶಿಲ್ಪಿ" ಎಂಬ ಹೆಗ್ಗಳಿಕೆಗೆ ಸುಧಾಕರ ಶೆಟ್ಟಿ ಪಾತ್ರರಾಗಿದ್ದಾರೆ. 
ಇವರ ಮುಂದಾಳತ್ವದಲ್ಲಿ ಕೂಟದ ವತಿಯಿಂದ ಬಡ ಜನತೆಗೆ ಸಹಾಯಕವಾಗಿ ಕ್ಷೇಮ ನಿಧಿ ಎಂಬ ಹೊಸ ಯೋಜನೆಯನ್ನು ರೂಫಿಸಿದರು.  
ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡು ತುಳುಕೂಟಕ್ಕೆ ರಾಷ್ಟ್ರೀಯ ಹಾಗೂ
ಅಂತರಾಷ್ಟ್ರೀಯ ಮನ್ನಣೆ ಲಭಿಸುವಂತಾಗಿ ಸಿದರು.ಇವರ ಮಹತ್ತರ ಕಾರ್ಯ ಸಾಧನೆಯನ್ನು ಗೌರವಿಸಿ ತುಳುಕೂಟ ಕುವೈಟ್‌ ನ ದಶಮಾನೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಗಿದೆ.
ಕುವೈಟ್‌ನಲ್ಲಿ ಕೇವಲ ತುಳುವಿಗೆ ಮಾತ್ರವಲ್ಲದೆ ಕನ್ನಡದ ಸಂಸ್ಥೆಯಾದ ಕುವೈತ್ ಕನ್ನಡ
ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಕುವೈತ್ ನ ಇತಿಹಾಸದಲ್ಲಿ ತುಳು-ಕನ್ನಡದ ಪತಾಕೆಯನ್ನು ಹಾರಿಸುವಲ್ಲಿ ಗಮನಾರ್ಹರಾದರು. ಕುವೈತ್ ನಲ್ಲಿ ಪ್ರಥಮ ಬಾರಿಗೆ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ -
2007ನ್ನು ಆಯೋಜಿಸುವ ಮೂಲಕ ಕನ್ನಡದ ಕಹಳೆ ಮೊಳಗಿಸಿದರು.
ಇವರ ಈ ಸಾಧನೆಯನ್ನು ಗುರುತಿಸಿ ಕತಾರ್ ನಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ‘ವಿಶ್ವಮಾನವ’ ಬಿರುದು ನೀಡಿ ಇವರನ್ನು  ಗೌರವಿಸಲಾಗಿದೆ. ಇವರ ನಾಡು ನುಡಿಯ ಸೇವೆಯನ್ನು ಗುರುತಿಸಿ
ಗುಜರಾತ್ ನ"ವಾಪಿ" ಎಂಬಲ್ಲಿ ಆಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳವನ್ನು ಉದ್ಘಾಟಿಸಲು ಆಮಂತ್ರಿತರಾದರು. ಇದೇ ಹಾದಿಯಲ್ಲಿ
ಸಾಗುತ್ತಾ ಕುವೈಟ್ ನಲ್ಲಿರುವ ಮತ್ತೊಂದು ಸಂಸ್ಥೆಯಾದ ಬಂಟರ ಸಂಘದ ಅಧ್ಯಕ್ಷರಾಗಿ ಸಂಘದ ಚಟುವಟಿಕೆಗೂ ದಾರಿದೀಪವಾದರು. 
ಹೀಗೆ ಕುವೈತ್ ನಲ್ಲಿರುವ  ಮೂರು ಪ್ರಮುಖ ಸಂಸ್ಥೆಗಳ ಅಧ್ಯಕ್ಷರಾಗಿದ್ದ ಪ್ರಥಮ ತುಳುವ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸಾಗರದೀಚೆಗೆ  ಬಂದು ಕರ್ಮಭೂಮಿಯಲ್ಲಿ ತಮ್ಮ  ಸಾಧನೆಗಳ ಜತೆಗೆ ಜನ್ಮಭೂಮಿಗೂ ಸಾಮಾಜಿಕ-ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಹಲವಾರು ಕೊಡುಗೆಗಳನ್ನು ಸದ್ದಿಲ್ಲದೆ ನೀಡಿದ್ದಾರೆ. 
ತಮ್ಮ ಗುತ್ತಿನ ಮನೆಯ ಗುರಿಕಾರನಾಗಿ ಅಲ್ಲಿನ ನಿಯಮಿತ ಧಾರ್ಮಿಕ ಕಾರ್ಯಗಳನ್ನು ಸಾಂಗವಾಗಿ ನೆರವೇರಿಸುತ್ತಿರುವ ಜತೆಗೆ ತಮ್ಮ ಗ್ರಾಮ ಏರಿಂಜೆಯ ದೇವಸ್ಥಾನದ ಗೌರವ ಮೋಕ್ತೆಸರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ವಸಂತಿ ಶೆಟ್ಟಿಯವರ ಜತೆ ಸುಮಧುರ ದಾಂಪತ್ಯದ ಹೊಸಿಲು ಏರಿ  ಪುತ್ರ ವಿನೀತ್ ಹಾಗ ಪುತ್ರಿ ಶ್ರೇಯಾ ಎಂಬ ಸಂತಾನ‌ ಸೌಭಾಗ್ಯದೊಡನೆ ಸಂತೃಪ್ತರಾಗಿದ್ದಾರೆ. ತಂದೆಯ ಯಶಸ್ಸಿನ ನೆರಳಿನಲ್ಲಿ ಮುಂದುವರಿಯುವ ಮಕ್ಕಳಲ್ಲಿ ಪುತ್ರ  ಗಣಕಯಂತ್ರ ತಂತ್ರಜ್ಞ. ಪುತ್ರಿ ಶ್ರೇಯಾ ವಾಸ್ತು ಶಿಲ್ಪ ಇಂಜಿನಿಯರ್. ಜೊತೆಗೆ ತಂದೆಯಂತೆ  ಅತ್ಯುತ್ತಮ  ಕ್ರೀಡಾಪಟು ಮತ್ತು ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ನಾರಾಯಣ ಹೃದಯಾಲಯದ ಪ್ರಸಿದ್ಧ ತಜ್ಞ 
ವೈದ್ಯರಾದ ಡಾ| ಅರ್ಜುನ್ ಆಳ್ವರನ್ನು ಅಳಿಯನಾಗಿ ಪಡೆದಿರುವ ಇವರಿಗೆ ಪುಟಾಣಿ ಅಧ್ಯಾನ್ ಎಂಬ ಮೊಮ್ಮಗ ನೊಂದಿಗೆ ಜೀವನದ ಸಂತಸದ ಕ್ಷಣವನ್ನು ಕಳೆಯುತ್ತಿದ್ದಾರೆ.
ಸುದೀರ್ಘ 38 ವರ್ಷಗಳ ವೃತ್ತಿ ಜೀವನದ ಬಳಿಕ ಇದೀಗ ನಿವೃತ್ತಿ ಬದುಕಿನಲ್ಲಿ ಸಂತೃಪ್ತರಾಗಿದ್ದಾರೆ. ಇಂದು ತಮ್ಮ ಜನುಮ ದಿನದ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಈ ಹೆಮ್ಮೆಯ ಸಾಧಕ ಮಹನೀಯರು ಇನ್ನಷ್ಟು ಕೊಡುಗೆಗಳನ್ನು ಸಮಾಜದ ಸರ್ವ ರಂಗಕ್ಕೂ ನೀಡುವಂತಾಗಲಿ ಎಂಬುದಾಗಿ ಶುಭಾಶಯ ಸಲ್ಲಿಸೋಣ.

Post a Comment

0 Comments