ವಿದೇಶ_ವಿಶೇಷ ಅಂಕಣ-12
ಯುಎಇ : ವಿದೇಶದಲ್ಲಿ ಉದ್ಯೋಗ ಕಂಡುಕೊಂಡಿದ್ದರೂ ಅದರಲ್ಲಿ ಲಭಿಸಿದ ವರಮಾನದ ಹದಿನೈದು ಶೇಕಡಾವನ್ನು ತನ್ನ ತಾಯ್ನಾಡಿನ ಸಾಮಾಜಿಕ ,ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇವೆಗಾಗಿ ಸಮರ್ಪಿಸುತ್ತಾ ಇರುವ ಒರ್ವ ಅಪರೂಪದ ಸಾಧಕರೋರ್ವರ ಬಗ್ಗೆ ವಿಶೇಷ ಚಾನೆಲ್ ಈ ಬಾರಿ "ವಿದೇಶ_ವಿಶೇಷ"ದ ಮೂಲಕ ಅನಾವರಣಗೊಳಿಸುತ್ತಿದೆ.
ಪುತ್ತೂರು ಸಮೀಪದ ಮಿತ್ರಂಪಾಡಿಯ ಜಯರಾಮ ರೈ ಎಂಬವರೇ ಅಬುಧಾಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಭಾರತದ ತಾಯ್ನಾಡಿನ ಸಮಾಜ ಸೇವೆಯೊಂದಿಗೆ ಗಲ್ಫ್ ರಾಷ್ಟ್ರದಲ್ಲೂ ಸಾಹಿತ್ಯ-ಸಾಂಸ್ಕೃತಿಕ ಪೋಷಕರಾಗಿ ಗುರುತಿಸಿಕೊಂಡು ಜನ ಪ್ರೀತಿಗೆ ಪಾತ್ರರಾದ ಅಪರೂಪದ ವ್ಯಕ್ತಿ.
ಪುತ್ತೂರು ತಾಲೂಕಿನ ಚೆನ್ನಪ್ಪ ರೈ- ಡಿಂಬ್ರಿಗುತ್ತು ಸರಸ್ವತಿ ರೈ ದಂಪತಿಗಳ ಪುತ್ರರಾಗಿ ಸುಸಂಸ್ಕೃತ ಬಂಟ ಮನೆತನದಲ್ಲಿ ಜನಿಸಿದ ಜಯರಾಮ ರೈಗಳು ಶೈಕ್ಷಣಿಕವಾಗಿ ಸುದೃಡತೆ ಗಳಿಸಿಕೊಂಡ ಸಹೃದಯಿಗಳು.
ಪಾರಂಪರಿಕ ಕೃಷಿ ಚಟುವಟಿಕೆಯೊಂದಿಗೆ ಗುರುತಿಸಿಕೊಂಡಿದ್ದ ಇವರ ತಂದೆ-ತಾಯಿಗಳ ಸಾಮಾಜಿಕ ತುಡಿತ, ಸಂಸ್ಕೃತಿ ಜನ್ಯ ಪೋಷಣೆ ಜಯರಾಮ ರೈಗಳ ಮನದಲ್ಲಿ ಬಾಲ್ಯದಿಂದಲೇ ಮನೆ ಮಾಡಿತ್ತು. ಇದರ ಪರಿಣಾಮ ಮುಂದೆ ತಾನು ಕೂಡ ಸಮಾಜ ಸೇವೆಗಿಳಿಯಬೇಕೆಂಬ ಆದ್ಯಮ ಉತ್ಸಾಹವೇ ಇವರನ್ನು ದುಡಿತದೊಂದಿಗೆ ಈ ರೀತಿಯ ಚಟುವಟಿಕೆಗೆ ಪ್ರೋತ್ಸಾಹಿಸಿತು.
ಕಳೆದ ಎರಡು ದಶಕದ ಹಿಂದೆ ತುಳುನಾಡಿನ ತಾಯ್ನಾಡಿನಿಂದ ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರವಾದ ಯುಎಇ ಗೆ ಆಗಮಿಸಿದ ಇವರು ಹಂತಾನು ಹಂತವಾಗಿ ಮುಂದುವರಿದು ಇದೀಗ Bin Fardan group of Cos ಇದರ CFO ಆಗಿ ಹುದ್ದೆಯಲ್ಲಿದ್ದಾರೆ.
ಪ್ರಾಮಾಣಿಕ ಉದ್ಯೋಗ ನಿರ್ವಹಣೆಯ ಫಲವಾಗಿ ತನಗೆ ಲಭಿಸಿದ ವರಮಾನದಲ್ಲಿ ಸಾಂಸ್ಕೃತಿಕ-ಧಾರ್ಮಿಕ-ಸಮಾಜ ಸೇವೆಗೆ ಕೊಡುಗೈ ದಾನ ನೀಡುವ ಮೂಲಕ ಜೀವಮಾನದ ಸಾರ್ಥಕತೆ ಮೆರೆದಿದ್ದಾರೆ.
ಯುಎಇಯಲ್ಲಿ ನಡೆಯುವ ಕನ್ನಡ-ತುಳು ಹೀಗೆ ಯಾವುದೇ ಸಾಂಸ್ಕೃತಿಕ- ಸಾಹಿತ್ತಿಕ ಕಾರ್ಯಕ್ರಮ- ಗಳಾಗಲಿ, ಸಾಮಾಜಿಕ ಸೇವೆಯಲ್ಲಾಗಲಿ, ಎಲ್ಲದರಲ್ಲೂ ಸಹಭಾಗಿಗಳಾಗಿ ಅನನ್ಯ ಸೇವಾ ನಿರತರಾಗುತ್ತಾರೆ.
ರಂಗ ನಟನೆಯಲ್ಲಿ ಅಭಿರುಚಿ ಇರುವ ರೈಗಳು ಕೆಲವು ನಾಟಕ, ನಗೆ ನಾಟಕಗಳಲ್ಲಿ ಅಭಿನಯಿಸಿ ಹವ್ಯಾಸಿ ಕಲಾವಿದನಾಗಿ ಪ್ರಶಂಸನೆಗೆ ಪಾತ್ರರಾಗಿದ್ದಾರೆ. ಇವರು ರಚಿಸಿದ "ಮಂತ್ರಿ ಮಂಡಲ" ಮತ್ತು"ಅಪ್ಪೆನ ತ್ಯಾಗ" ಎಂಬ ತುಳು ನಾಟಕ ದುಬೈಯಲ್ಲಿ ಪ್ರಯೋಗ ನಡೆಸಿ ಜನ ಮೆಚ್ಚುಗೆ ಗಳಿಸಿದ್ದಾರೆ.
ಪರದೇಶದಲ್ಲಿನ ಕೆಲಸದ ಒತ್ತಡದ ನಡುವಲ್ಲಿಯೂ ಸದಾ ತನ್ನ ತುಳುನಾಡಿನ ಬಗ್ಗೆ ತುಡಿತ ಇರುವ ಜಯರಾಮ ರೈಗಳು ಅಬುಧಾಬಿಯ ಇಂಡಿಯಾ ಸೋಷಿಯಲ್ ಸೆಂಟರ್ ನ ಮಾಜಿ ಉಪಾಧ್ಯಕ್ಷ ರಾಗಿಯೂ, ISC Toastmasters ಅಬುಧಾಬಿ ಇದರ ಸ್ಥಾಪಕ ಅದ್ಯಕ್ಷರಾಗಿ ಹಾಗೂ ಬೆಂಗಳೂರು ಯುವ ಬಂಟರ ಸಂಘದ ಅದ್ಯಕ್ಷ ಪದವಿ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ಅನಿವಾಸಿ ಭಾರತೀಯರ ಕನ್ನಡ-ತುಳು ಪರ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ತಾಯ್ನಾಡಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ,ಹಲವಾರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ,ರೋಗಿಗಳಿಗೆ ಚಿಕಿತ್ಸಾ ಧನ ಸಹಾಯ, ಸಾಂಸ್ಕೃತಿಕ -ಸಾಹಿತ್ತಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವದ ಪ್ರೋತ್ಸಾಹ ಹೀಗೆ ತನ್ನ ಕೈ ಮಿಗಿಲಾದ ಕೊಡುಗೆಗಳನ್ನು ನೀಡುವಲ್ಲಿ ಸಮರ್ಥರೆನಿಸಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಕೋರೋನ ಕಾಲದಲ್ಲಿ ಸಮರೋಪಾದಿ ನೆರವು.....
ಈ ಸಂದರ್ಭದಲ್ಲಿ ವಿದೇಶದಿಂದ ತಾಯ್ನಾಡಿಗೆ ಮರಳುವವರಿಗೆ ವಿಮಾನದ ವ್ಯವಸ್ಥೆಗೆ,ಉಚಿತ ವಿಮಾನ ಟಿಕೆಟ್ ಮೊದಲಾದವುಗಳಿಗೆ ಕೈ ಜೋಡಿಸಿದರು.
ಹುಟ್ಟೂರಿನ ಜನತೆಯ ಬಗ್ಗೆ ಅತೀವ ಪ್ರೀತಿ ಹಾಗೂ ಕಾಳಜಿಯನ್ನು ಬೆಳೆಸಿಕೊಂಡಿರುವ ರೈಗಳು ಅಲ್ಲಿನ ಜನರ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ನಿರ್ಧರಿಸಿದರು.
ಇದರಂತೆ ಪುತ್ತೂರು ತಾಲೂಕಿನ ಕೆದಂಬಾಡಿ ಕೆಯ್ಯೂರು. ಸರ್ವೆ, ಒಳಮೊಗ್ರು,ಕುರಿಯ ಹಾಗೂ ಪುತ್ತೂರು ಪಟ್ಟಣದ ಬಡ ಕುಟುಂಬಗಳ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಮನೆಗಳಿಗೆ ಅಕ್ಕಿಯನ್ನು ವಿತರಿಸಿದರು.
ಇದರಿಂದಾಗಿ ಜನರಿಗೆ ಜಯರಾಮ ರೈಗಳ ಮೇಲೆ ಎಲ್ಲೆ ಮೀರಿದ ಪ್ರೀತಿ ಮೂಡಿತು. ತಾನಾಯಿತು ತನ್ನ ಸಂಸಾರವಾಯಿತು ಎನ್ನುವ ಮನೋಭಾವದ ಈಗಿನ ಜನತೆಯ ನಡುವೆ ವಿದೇಶದಲ್ಲಿ ಪರಿಶ್ರಮದ ದುಡಿದ ಹಣದಿಂದ ತಾಯ್ನಾಡಿಗೆ ಕೊಡುಗೈ ದಾನ ನೀಡಿದ ಜಯರಾಮ ರೈಗಳ ಅಸಾಮಾನ್ಯ ವ್ಯಕ್ತಿತ್ವ ಆದರ್ಶನೀಯವಾಗಿದೆ.
ತಂದೆ ದಿ.ಮಿತ್ರಂಪಾಡಿ ಚೆನ್ನಪ್ಪ ರೈ,ತಾಯಿ ದಿ.ಡಿಂಬ್ರಿಗುತ್ತು ಸರಸ್ವತಿ ಸಿ. ರೈ ಹಾಗೂ ಸಹೋದರ ದಿ.ಮಿತ್ರಂಪಾಡಿ ಜಗನ್ನಾಥ ರೈಗಳು ಪ್ರಗತಿಪರ ಕೃಷಿಕರಾಗಿದ್ದು ಅವರ ಪ್ರೇರಣೆ ಜಯರಾಮ ರೈಗಳನ್ನು ಸರ್ವರಂಗಕ್ಕೂ ದುಮ್ಮುಕ್ಕುವಂತೆ ಸ್ಪೂರ್ತಿ ನೀಡಿತು. ಇವರು ಮಾತ-ಪಿತರ ಲಾಲನೆ ಪಾಲನೆಯಲ್ಲಿ ಸಾರ್ಥಕತೆ ಕಂಡುಕೊಂಡಿದ್ದು ಅವರ ಆಶೀರ್ವಾದವೇ ತಾನು ಈ ರೀತಿ ಸಮಾಜ ಸೇವೆಗೈಯಲು ಮೂಲ ಕಾರಣ ಎಂದು ಅಭಿಮಾನಪಟ್ಟುಕೊಳ್ಳುತ್ತಿದ್ದಾರೆ.
ಧರ್ಮಪತ್ನಿ ಆಶಾ ಜೆ.ರೈ ಮಗ ತಾರನಾಥ ರೈ ,ಮಗಳು ಪ್ರಾಂಜಲ ಜತೆ ಸಂತೃಪ್ತ ಸಂಸಾರ ಹೊಂದಿರುವ ರೈಗಳು 22ವರ್ಷದ ದುಡಿಮೆಯ ವರಮಾನದಲ್ಲಿ 15% ಸಮಾಜ ಸೇವೆಗೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಹುಟ್ಟೂರಲ್ಲಿ ತನ್ನ ತಂದೆಯವರ 93ನೇ ಹುಟ್ಟುಹಬ್ಬವನ್ನು ಅತಿಥಿ ಗಣ್ಯರ,ಕುಟುಂಬಿಕ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಿದರು.
ಸತತ ಪರಿಶ್ರಮದ ದುಡಿಮೆ, ಕೊಡುಗೈ ದಾನ, ಸಾಂಸ್ಕೃತಿಕ ಪ್ರೀತಿ,ಸಾಮಾಜಿಕ ಸೇವೆಯ ಜೀವಮಾನದ ಸಾಧನೆಯ ಮೂಲಕ ಮಿತ್ರಂಪಾಡಿ ಜಯರಾಮ ರೈಗಳು ಆದರ್ಶ ಪ್ರಾಯರಾಗಿದ್ದಾರೆ. ಅವರ ಬದುಕು ಸದಾ ಹಸನಾಗಿರಲೆಂಬುದೇ "ವಿಶೇಷ" ಹಾರೈಕೆ.





















0 Comments