ಗಲ್ಫ್ ರಾಷ್ಟ್ರದಲ್ಲಿರುವ ಕರಾವಳಿಯ ಬ್ಯಾರಿ ಸಂಸ್ಕೃತಿಯ ಸಂವಾಹಕ - ಎಂ.ಇ.ಮೂಳೂರ್


               ವಿದೇಶ_ವಿಶೇಷ  ಅಂಕಣ-20

ಯುಎಇ: ಕರಾವಳಿ ಕರ್ನಾಟಕದ ಸಂಸ್ಕೃತಿ,ಸಾಹಿತ್ಯ ಹಾಗೂ ಸಾಮಾಜಿಕತೆಗೆ ತನ್ನದೇ ಆದ ಕೊಡುಗೆ ನೀಡುವುದರಲ್ಲಿ ಬ್ಯಾರಿ ಸಮುದಾಯದ ಕೊಡುಗೆ ವಿಶೇಷವಾಗಿದೆ. ಅಂತಹ ಸಮುದಾಯದ ಸಂಘಟನಾತ್ಮಕ ಬೆಳವಣಿಗೆಗೆ ಕಾರಣೀಭೂತರಾಗಿ ಕನ್ನಡ,ಬ್ಯಾರಿ,ತುಳು ಭಾಷಾ ಬೆಳವಣಿಗೆಗೆ ಕೊಲ್ಲಿ ರಾಷ್ಟ್ರದಿಂದ ಪ್ರೋತ್ಸಾಹ ನೀಡುವುತ್ತಿರುವುದರಲ್ಲಿ ಎಂ.ಇ.ಮೂಳೂರು ಎಂಬ ಮಹಮ್ಮದ್ ಇಬ್ರಾಹಿಂ ಮೂಳೂರು ಅವರ ಸಾಧನೆ ಗಮನಾರ್ಹವಾಗಿದೆ. ಕಳೆದ 42 ವರ್ಷಗಳಿಂದ ದುಬಾಯಿಯಲ್ಲಿ ಉದ್ಯೋಗ ನಿರ್ವಹಿಸುತ್ತಾ ಸಾಮಾಜಿಕ,ಸಾಂಸ್ಕೃತಿಕ ಪ್ರಗತಿಗೆ ಕಾರಣಕರ್ತರಾಗಿರುವ ಈ ಅನಿವಾಸಿ ಭಾರತೀಯನ ಸಾಧನೆಯ ಸಚಿತ್ರಣವನ್ನು ವಿಶೇಷ ಚಾನೆಲ್  "ವಿದೇಶ ವಿಶೇಷ" ಅಂಕಣದ ಮೂಲಕ ಅನಾವರಣಗೊಳಿಸುತ್ತಿದೆ.


ವೃತ್ತಿ-ಪ್ರವೃತ್ತಿ:
ಮೂಲತಃ ಉಡುಪಿ.ಜಿಲ್ಲೆಯ ಮುಳೂರಿನ ಇಬ್ರಾಹಿಂ ಬ್ಯಾರಿ-ಆಯಿಷಾ ದಂಪತಿಗಳ ಪುತ್ರರಾಗಿ 1953ರಲ್ಲಿ ಜನಿಸಿದ ಮಹಮ್ಮದ್ ಇಬ್ರಾಹಿಂ ಶೈಕ್ಷಣಿಕ ಸಂದರ್ಭದಲ್ಲಿಯೇ ತನ್ನ ನಾಯಕತ್ವ ಗುಣದಿಂದ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾದವರು. ಮೂಳೂರು ಬೋರ್ಡ್ ಮಾಪಿಲಾ ಶಾಲೆ
ಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಬಳಿಕ ಸ್ಥಳೀಯ ಉ  ಬಿ ಎಂ  ಸಿ  ವಿದ್ಯಾ ಸಂಸ್ಥೆ  ಮತ್ತು ಸರಕಾರೀ ಫಿಶರೀಸ್ ಹೈ ಸ್ಕೂಲ್ ಗಳಲ್ಲಿ ಮುಂದಿನ ಹೈಸ್ಕೂಲ್ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸ ನಂತರ ಪಿ ಯು ಸಿ  ಮತ್ತು  ಪದವಿ ಪೂರ್ವ  ಕೋರ್ಸ್ ಗಳನ್ನು ಅದಮಾರು ಜೂನಿಯರ್ ಕಾಲೇಜಿನಲ್ಲಿ ಮಾಡಿದರು.  ರಂಗಭೂಮಿಯ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡ ಇಬ್ರಾಹಿಂ ಮೂಳೂರು ಅವರು ನಾಟಕಗಳನ್ನು ಬರೆಯುದರಲ್ಲಿ ಹಾಗೂ ತಾನು ಬರೆದ ನಾಟಕಗಳನ್ನು ರಂಗ ಪ್ರಯೋಗ ನಡೆಸುವುದರಲ್ಲಿ ಕೌಶಲ್ಯಯುತರಾಗಿದ್ದರು. ಕವನಗಳ ರಚನೆಯ ಮೂಲಕವೂ ಸಾಹಿತ್ಯತ್ಮಕ ಸ್ಪಂದನೆ ನಡೆಸುತ್ತಿದ್ದರು. 1973 ರಲ್ಲಿ ಎಂ.ಇ.ಮೂಳೂರ್ ರಚಿಸಿದ "ಆತ್ಮ ಸಾಕ್ಷಿ" ಎಂಬ ಕನ್ನಡ ನಾಟಕ, "ಮಲ್ಲ ಇಲ್ಲದ ಪೊಣ್ಣು” ಎಂಬ ತುಳು ನಾಟಕ ಜನಪ್ರಿಯತೆ ಗಳಿಸಿಕೊಂಡಿತ್ತು.


ಫ್ರೌಡ ವಯಸ್ಸಿನಲ್ಲಿ ಸಾಮಾಜಿಕ ಕಷ್ಟ-ಸಂಕಷ್ಟಗಳಿಗೆ ಧ್ವನಿಯಾಗುತ್ತಾ ತನ್ನ ಊರಿನಲ್ಲಿ ಸಮರ್ಥ ಸಾಮಾಜಿಕ ಕಾರ್ಯಕರ್ತರೆನಿಸಿಕೊಂಡಿದ್ದರು.ಉದ್ಯೋಗ ನಿಮಿತ್ತ 1977ರಲ್ಲಿ ಊರು ಬಿಟ್ಟು ಮುಂಬೈನ ಸಾದಿಕ್ ಅಲಿ ಯೂಸುಫ್ ಅಲಿ ಎಂಡ್ ಕಂಪನಿ ಜತೆ ಕಸ್ಟಮ್ಸ್ ಕ್ಲಿಯರಿಂಗ್ ಏಜೆಂಟ್ ಆಗಿ ಪ್ರಥಮತಃ ದುಡಿದರು.1978ರಿಂದ ಕೊಲ್ಲಿ ರಾಷ್ಟ್ರದ ಶಾರ್ಜಾಕ್ಕೆವ ಆಗಮಿಸಿ ಅಲಿ ಮಿರ್ಜಾ ಟ್ರೇಡಿಂಗ್, ಖೋರ್ಫಕ್ಕನ್, ಶಾರ್ಜಾದಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಒಂದು ವರ್ಷ ಕೆಲಸ ಮಾಡಿದರು.ಬಳಿಕ ದುಬೈಯ ಅಲ್ ವಾಫಾ ಫಾರ್ಮಸಿಯಲ್ಲಿ ಸತತ 9 ವರ್ಷಗಳ ಕಾಲ ಚಿಲ್ಲರೆ ಮಾರಾಟದ ಉಸ್ತುವಾರಿ ನಿಭಾವಣೆಯ ವೃತ್ತಿ ನಿರತರಾದರು.1989 ರಿಂದ 1993ರ ವರೆಗೆ ಘುಜ್ಲಾನ್ ಫಾರ್ಮಸಿಯಲ್ಲಿ ಕೆಲಸ ಮಾಡಿದ್ದು ಬಳಿಕ ಆಪ್ಟಿಕಲ್ ಕ್ಷೇತ್ರದಲ್ಲಿ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ ಫಾರ್ಮಸಿ ಹಾಗೂ ಅಪ್ಟಿಕಲ್ ಉದ್ಯಮಗಳೆರಡನ್ನು ನಿಭಾಯಿಸ ತೊಡಗಿ ಯಶಸ್ವಿಯಾಗಿದ್ದಾರೆ.

ಹಂತ ಹಂತಾನುವಾಗಿ ತನ್ನ ವೃತ್ತಿ ಜೀವನದ ಜತೆ ಸಾಮಾಜಿಕ,ಸಾಂಸ್ಕೃತಿಕ ಪ್ರವೃತ್ತಿ ನಡೆಸುತ್ತಾ ವಿದೇಶದ ಹಾಗೂ ಸ್ವದೇಶದ ಹಲವಾರು ಸಂಘಟನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರು.ಕಳೆದ ಹದಿನೆಂಟು ವರ್ಷಗಳಿಂದ ಅಪ್ಟಿಕಲ್ ಎಂಡ್ ಫಾರ್ಮಾಸ್ಯೂಟಿಕಲ್ ಉದ್ಯಮ ನಡೆಸುತ್ತಿದ್ದ ಇವರು ಇದೀಗ ದುಬಾಯಿಯ 
ಮಿಲಾನೊ ಗ್ರೂಪ್ ಅಫ್  ಆಪ್ಟಿಕಲ್  ಎಲ್ ಎಲ್ ಸಿ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.


ಸಂಘಟನಾತ್ಮಕ ಸವಿಶೇಷತೆ:
ತಾನು ವೃತ್ತಿ ಜೀವನದ ಮೂಲಕ ಗಳಿಸಿಕೊಂಡಿರುವುದರ ಅರ್ಧ ಪಾಲನ್ನು ಸಮಾಜದ ಪುರೋಗತಿಯ ಕೆಲಸ ಕಾರ್ಯಗಳಿಗಾಗಿ ವಿನಿಯೋಗಿಸುವುದರಲ್ಲಿ ಸಂತೃಪ್ತಿಯನ್ನು ಗಳಿಸಿಕೊಂಡಿರುವ ಮೂಳೂರ್ ಅವರು ಸ್ವತಃ ದೇಶ-ವಿದೇಶದಲಿನ ಹಲವಾರು ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

ಶಾರ್ಜಾ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ,ಯುಎಇಯ ಕರ್ನಾಟಕ ಎನ್.ಆರ್.ಐ.ಫಾರಂನ ಸಹ ಕಾರ್ಯದರ್ಶಿಯಾಗಿ,

ಮಂಗಳೂರಿನ ಬ್ಯಾರಿಸ್ ಕಲ್ಚರಲ್ ಫಾರಮ್ ನ ಉಪಾಧ್ಯಕ್ಷರಾಗಿ,ಮಂಗಳೂರಿನ ವಾರ್ತಾ ಭಾರತೀ ಕನ್ನಡ ದೈನಿಕದ ಮಾಜಿ ನಿರ್ದೇಶಕರಾಗಿ,ಬಿಸಿಫ್ ಸ್ಕಾಲರ್ ಶಿಫ್ ಸಮಿತಿಯ ಚೆಯರ್ಮೆನ್ ಆಗಿ,ಮಂಗಳೂರಿನ ಆಲ್ ಎಹನಾಸ್ ಆಂಗ್ಲ ಮಾಧ್ಯಮ ಶಾಲೆಯ ವಿಭಾಗೀಯ ಅಧ್ಯಕ್ಷರಾಗಿ,ಮೂಳೂರು ಅಲ್ ಇಹನಾಸ್ ಮಹಿಳಾ ಕಾಲೇಜಿನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ,ಮುಳೂರು ಉಚ್ಚಿಲದ ಅಲ್ ಕಮರ್ ವೆಲ್ಫೇರ್ ಆಸೋಶಿಯೇಶನ್ ನ  ಸ್ಥಾಪಕಾಧ್ಯಕ್ಷರಾಗಿ ಮೂಳೂರು ಜಮಾಯತ್ ವೆಲ್ಫೇರ್ ಫಾರಮ್ ನ ಗೌರವಾಧ್ಯಕ್ಷರಾಗಿ, ಪುತ್ತೂರು ಮರ್ಕಝಲ್ ಹುದಾ ಸಮಿತಿಯ ಸಂಚಾಲಕರಾಗಿ,ದುಬಾಯಿಯ ನಮ ತುಳುವೆರ್ ಸಂಘಟನೆಯ ಸದಸ್ಯರಾಗಿ, ಬದಿಯಡ್ಕದಲ್ಲಿ ನಡೆದ ತುಳುನಾಡೋಚ್ಚಾಯದ ಯುಎಇ ಸಮಿತಿ ಸಂಚಾಲಕರಾಗಿ

ಹೀಗೆ ವಿವಿಧ ಸಂಘ ಸಂಸ್ಥೆಯ ಮೂಲಕ ಸೇವೆ ಸಲ್ಲಿಸಿ ನಾಡಿನ ಅಭಿವೃದ್ಧಿಪರ ಕೆಲಸ ಕಾರ್ಯಗಳಿಗೆ ಕೈ ಮಿಗಿಲಾದ ಕೊಡುಗೆ ನೀಡಿದ್ದಾರೆ.


                ಸನ್ಮಾನ-ಪುರಸ್ಕಾರಗಳು: 
ಎಂ.ಇ.ಮೂಳೂರು ಅವರು ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ ರಂಗದಲ್ಲಿ ಸಲ್ಲಿಸಿದ ವಿಶೇಷ ಸಾಧನೆಗಾಗಿ ಅವರನ್ನು ಹಲವಾರು ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳನ್ನು ಅರಸಿಕೊಂಡು ಬಂದಿದೆ, 2003ರಲ್ಲಿ ಶಾರ್ಜಾ ಇಂಡಿಯನ್ ಆಸೋಶಿಯೇಶನ್ ನ ಶಾರ್ಜಾ  ಕರ್ನಾಟಕ ಸಂಘದ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರತಿಷ್ಠಿತ ಮಯೂರ ಪ್ರಶಸ್ತಿಯನ್ನು ಮೂಳೂರು ಆವರಿಗೆ ಪ್ರದಾನಿಸಲಾಗಿದೆ.

ಬ್ಯಾರಿಸ್ ಕಲ್ಚರಲ್ ಫಾರಮ್ ನ "ಸ್ಟಾರ್ ಆಫ್ ದಿ ಬ್ಯಾರಿಸ್" ಪ್ರಶಸ್ತಿ, "ಗಡಿನಾಡ ಕನ್ನಡ ರಾಷ್ಟ್ರೀಯ ಪ್ರಶಸ್ತಿ", "ವಿಶ್ವ ತುಳುನಾಡೋಚ್ಚಾಯ ಪ್ರಶಸ್ತಿ", "ಪಯನೀರ್ ಸರ್ವೀಸ್ ಆವಾರ್ಡ್",ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ನಿಂದ ಗೌರವಾಭಿನಂದನೆ, ಕರ್ನಾಟಕ ಕಲ್ಚರಲ್ ಫಾರಂನಿಂದ ಗೌರವಾಭಿನಂದನೆ,"ದುಬೈ ನಮ ತುಳುವೆರ್" ಸಂಘಟನೆಯಿಂದ ಗೌರವಾಭಿನಂದನೆ ಗಳಿಸಿಕೊಂಡಿದ್ದಾರೆ.


ಮಹ್ಮದ್ ಇಬ್ರಾಹಿಂ ಮೂಳೂರ್ ಅವರು ತಮ್ಮ ಧರ್ಮಪತ್ನಿ ಆಸೀಯಾ ಮಹ್ಮದ್ ಅವರೊಂದಿಗೆ ದುಬೈಯಲ್ಲಿ ವಾಸವಾಗಿದ್ದು ಸಂತೃಪ್ತ ಸಂಸಾರ ಸಾಗಿಸುತ್ತಿದ್ದಾರೆ. ಇವರ ಮಕ್ಕಳಾದ ನಬೀಲ್ ಯುಎಸ್ಎನ ಇಂಟ್‌ನಲ್ಲಿ ಬಿಬಿಎ ಶಿಕ್ಷಣ ಪಡೆದು, ದುಬೈ ಕ್ಯಾಂಪಸ್ ನ ಮಡೋನಾ ವಿಶ್ವವಿದ್ಯಾಲಯದಲ್ಲಿ ವ್ಯವಹಾರ ಪದವಿ ಗಳಿಸಿಕೊಂಡು ಇದೀಗ ದುಬೈನಲ್ಲಿ ತನ್ನದೇ ಆದ ಆಪ್ಟಿಕಲ್ ಉದ್ಯಮವನ್ನು ನಡೆಸುತ್ತಿದ್ದಾನೆ.ಪುತ್ರಿ ಆಯಿಷಾ ನೌರೀನ್ ದುಬೈನ AMITY ವಿಶ್ವವಿದ್ಯಾಲಯದಲ್ಲಿ ಅಂತಿಮ ಆರ್ಕಿಟೆಕ್ಚರಲ್ ಎಂಜಿನಿಯರಿಂಗ್ ಪದವಿ ವ್ಯಾಸಂಗ ನಿರತಳಾಗಿದ್ದು ಇನ್ನೊರ್ವ ಪುತ್ರ ನಜೀಮ್ ದುಬೈನ ಹ್ಯಾರಿಯೊಟ್ ವಾಟ್ ವಿಶ್ವವಿದ್ಯಾಲಯದಲ್ಲಿ ಸಿಎಸ್ ಡೇಟಾ ವಿಜ್ಞಾನ ಶಿಕ್ಷಣ ಗಳಿಸುತ್ತಿದ್ದಾನೆ.


ಸಹಜೀವಿಗಳಲ್ಲಿ ಸ್ನೇಹಪರತೆ,ಸಂಸ್ಕೃತಿ ಪ್ರೀತಿ,ಸರಳ ಸಜ್ಜನಿಕೆಯ ಧಾರ್ಮಿಕ ರೀತಿ-ನೀತಿಯಿಂದ ಜನಾನುರಾಗಿಯಾಗಿ ಗುರುತಿಸಿಕೊಂಡಿರುವ ಎಂ.ಇ. ಮೂಳೂರ್ ಅರ್ಥಾತ್
ಮಹ್ಮದ್ ಇಬ್ರಾಹಿಂ ಮೂಳೂರ್ ಅವರ ಸಾಮಾಜಿಕ ,ಸಾಂಸ್ಕೃತಿಕ ಬದುಕು ಕರಾವಳಿ ಹಾಗೂ ಕೊಲ್ಲಿ ರಾಷ್ಟದ ಬದುಕಿನ ಸಾಧನೆಗೊಂದು ಮೈಲುಗಲ್ಲಾಗಿದೆ.

Post a Comment

0 Comments