ಪ್ರಶಸ್ತಿ ಪಾತ್ರರ ಪರಿಚಯ:
ಉಪ್ಪಳದ ಹೆಸರಾಂತ ಮನೆತನದ ದಿವಂಗತ ಶೀನ ಶೆಟ್ಟಿ ಮತ್ತು ದಿವಂಗತ ದೇವಕಿ ದಂಪತಿಗಳ ಸುಪುತ್ರನಾಗಿ ಜನಿಸಿದ ಜಯಪ್ರಕಾಶ್ ಶೆಟ್ಟಿ ಅವರು ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ಪಡೆದು ಮಂಗಳೂರಿನ ಪ್ರತಿಷ್ಠಿತ ಕಾಲೇಜು ಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು, ಫಾರ್ಮಾಸ್ಯುಟಿಕಲ್ ಡಿಪ್ಲೋಮಾ, ಪತ್ರಿಕೋದ್ಯಮದಲ್ಲಿ ಪದವಿಯನ್ನು ಗಳಿಸಿದರು.ವೃತ್ತಿಜೀವನದ ಪ್ರಾರಂಭದಲ್ಲಿ ಪ್ರತಿಷ್ಠಿತ ರಾಮೋಜಿ ಫಿಲಂ ಸೊಸೈಟಿ ಇವರ ಈಟಿವಿ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಮುಂದೆ ಸಮಯ ಟಿವಿಯಲ್ಲಿ ಔದ್ಯೋಗಿಕ ವಾದ ಯಶಸ್ಸನ್ನು ಪಡೆದರು. ಪ್ರಸ್ತುತ ಮಾಧ್ಯಮರಂಗದಲ್ಲಿ ಅತ್ಯಂತ ಹೆಸರುವಾಸಿಯಾದ ಏಷ್ಯಾನೆಟ್ ರವರ ಕನ್ನಡ ಸುದ್ದಿವಾಹಿನಿ ಸುವರ್ಣನ್ಯೂಸ್ ಇದರಲ್ಲಿ ಪ್ರಧಾನ ಸುದ್ದಿ ನಿರೂಪಕರಾಗಿ ಮಾಧ್ಯಮರಂಗದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡಿದ್ದಾರೆ. ರಾಜಕೀಯ ಧಾರ್ಮಿಕ ಸಾಮಾಜಿಕ ಧುರೀಣರ ಜೊತೆ ಆತ್ಮೀಯ ಸಂವಾದ, ಸಂದರ್ಶನ ಮಾತ್ರವಲ್ಲದೆ ಭ್ರಷ್ಟಾಚಾರಿ ನಾಲಾಯಕ್ಕು ಮಂತ್ರಿಗಳ ಶಾಸಕರ ಸರಕಾರಿ ಅಧಿಕಾರಿಗಳಲ್ಲಿ ನಿರ್ಭಿಡೆಯಿಂದ ನಿರ್ಭೀತಿಯಿಂದ ಅವರ ತಪ್ಪುಗಳನ್ನು ತಿಳಿಸಿ ತಿದ್ದಿಕೊಳ್ಳುವಂತೆ ಯು ಕಾರ್ಯೋನ್ಮುಖರಾದ ಕೀರ್ತಿ ಇವರದ್ದಾಗಿದೆ.
ಸುವರ್ಣ ಚಾನೆಲ್ ನ ಪ್ರಸಿದ್ಧ Big 3 ಕಾರ್ಯಕ್ರಮದ ಮೂಲಕ ಬಡ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿದ್ದಾರೆ. ಸಹಾಯ ಹಸ್ತ ನೀಡುವುದರಲ್ಲಿ ಮುಂದಾಳತ್ವವಹಿಸುತ್ತಿರುವ ಇವರು ಉತ್ತರ ಕರ್ನಾಟಕ, ಕೊಡಗು ಮುಂತಾದ ಪ್ರದೇಶಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ 115 ಲಾರಿ ತುಂಬಾ ಸಕ್ಕರೆ ದವಸಧಾನ್ಯಗಳು ಅಕ್ಕಿ ವಸ್ತ್ರ ಔಷಧಿ ಇತ್ಯಾದಿ ಗಳಾಗಿ ಸುಮಾರು 8 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಪ್ರಮುಖ ದಾನಿಗಳಿಂದ ಸಂಗ್ರಹಿಸಿ ಸಂತ್ರಸ್ತರ ಬಳಿಗೆ ಕಳುಹಿಸಿ ದಂತಹ ಮಹತ್ಕಾರ್ಯ ಇವರದ್ದಾಗಿದೆ. ಶಾಲಾ ಮಕ್ಕಳ ಪುಸ್ತಕ ಇನ್ನಿತರ ವಸ್ತುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದಂತಹ ಸಂದರ್ಭದಲ್ಲಿ ಅಸಹಾಯಕರಾಗಿ ರೋಧಿಸುತ್ತಿರುವ ಮಕ್ಕಳಿಗೆ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪುಸ್ತಕ ಬ್ಯಾಗ್ ಟಿಫಿನ್ ಬಾಕ್ಸ್ ಜಾಮೆಟ್ರಿ ಬಾಕ್ಸ್ ನೀರಿನ ಬಾಟಲ್ ಇತ್ಯಾದಿಗಳನ್ನು ಸುಮಾರು 2500ಕ್ಕೂ ಅಧಿಕ ಮಕ್ಕಳಿಗೆ ನೀಡುವ ಮೂಲಕ ವಿದ್ಯಾ ಸರಸ್ವತಿ ಸೇವೆಯನ್ನು ಮಾಡಿರುವುದು ಶ್ಲಾಘನೀಯ.
ತಮ್ಮ ಪ್ರಾಮಾಣಿಕತೆ ಪರಿಶುದ್ಧತೆಯ ಪ್ರತೀಕವೆಂಬಂತೆ ಕಳ್ಳನೊಬ್ಬ ತಾನು ಕಳ್ಳತನ ಮಾಡಿದ 6 ಲಕ್ಷ ಬೆಲೆಯ ಚಿನ್ನಾಭರಣವನ್ನು ಪಶ್ಚಾತಾಪದಿಂದ ಕಳಕೊಂಡವರಿಗೆ ಹಿಂತಿರುಗಿಸಲು ನಿರ್ಧರಿಸಿ ಪೊಲೀಸ್ ಅಥವಾ ಇನ್ನಿತರರಿಗೆ ನೀಡದೆ ನಮ್ಮ ಜೆಪಿ ಶೆಟ್ಟರಿಗೆ ನೀಡಿರುವುದು ಇವರ ಪ್ರಾಮಾಣಿಕತೆಯ ಮೇಲೆ ಕಳ್ಳನಿಗೆ ಇದ್ದ ದೃಢ ನಂಬಿಕೆ ವಿಶ್ವಾಸ ಎಂಬುದು ವರ್ತಮಾನದ ಸತ್ಯ.
ಈ ರೀತಿಯಾಗಿ ಸಾಮಾಜಿಕ ಸೇವಾ ತತ್ಪರತೆ ಹಾಗೂ ಕಾರ್ಯ ತತ್ಪರತೆ ಎರಡನ್ನು ಮೈಗೂಡಿಸಿಕೊಂಡಿದ್ದಾರೆ. ಇವರ ಕಾರ್ಯ ಚಟುವಟಿಕೆಗೆ ಒಲಿದು ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರಕಿದೆ.
ದಕ್ಷಿಣ ಭಾರತದ ಶ್ರೇಷ್ಠ ನಿರೂಪಕ ಪ್ರಶಸ್ತಿ, 2017ರಲ್ಲಿ ವಿಜಯಪುರ ವಿರಕ್ತಮಠದ ವತಿಯಿಂದ ಬೆಳ್ಳಿ ಕಿರೀಟ ತೊಡಿಸಿ "ಕಾಯಕರತ್ನ ಪ್ರಶಸ್ತಿ", ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ 2020 ಪ್ರಶಸ್ತಿ,ಕರ್ನಾಟಕ ರತ್ನ, ತುಳುವ ಮಾಣಿಕ್ಯ ಪ್ರಶಸ್ತಿಗಳು Jayceesರವರ ಬೆಸ್ಟ್ ಜರ್ನಲಿಸ್ಟ್ ಅವಾರ್ಡ್ ,ಹಾಸನ ಹಾಗೂ ಮಂಡ್ಯ ಜಿಲ್ಲಾ ಮಾಧ್ಯಮ ಪ್ರಶಸ್ತಿ, ಪ್ರತಿಷ್ಠಿತ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ, ರೋಟರಿಕ್ಲಬ್, ಆಳ್ವಾಸ್ ಸಂಸ್ಥೆ ಅಲ್ಲದೆ ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನವನ್ನು ಗಳಿಸಿದ ಕೀರ್ತಿ ಇವರದು.
ರಂಗ ಕಲಾವಿದ: ಅದ್ಭುತ ನಟನಾ ಸಾಮರ್ಥ್ಯ ವಾಕ್ಪಟುತ್ವ ಉತ್ಸಾಹದ ಚಿಲುಮೆ ಇವರಾಗಿದ್ದಾರೆ. ಉಪ್ಪಳದ ಹೆಸರಾಂತ ರಂಗ ಸಂಸ್ಥೆ ರಚನ ಸಾಂಸ್ಕೃತಿಕ ಕಲಾ ಸಂಸ್ಥೆ ಉಪ್ಪಳ ಇದರ ಸ್ಥಾಪಕರಲ್ಲಿ ಒಬ್ಬರಾಗಿ ಸಂಸ್ಥೆಯು ಪ್ರದರ್ಶಿಸಿದ ನೂರಾರು ನಾಟಕಗಳಲ್ಲಿ ನಾಯಕ ಹಾಸ್ಯ ಚಾರಿತ್ರ ನಟನಾಗಿ ತನ್ನ ಅಭಿನಯ ಸಾಮರ್ಥ್ಯವನ್ನು ಪ್ರಚುರಪಡಿಸಿದವರು.
ಕನ್ನಡ ಚಲನಚಿತ್ರರಂಗದಲ್ಲೂ ತಮ್ಮ ಅದ್ಭುತ ಪ್ರತಿಭೆಯನ್ನು ತೋರ್ಪಡಿಸಿದ ಇವರು "ಮೈ ಬಾಸ್" ಮಲಯಾಳ ಸಿನಿಮಾದ ಕನ್ನಡ ರಿಮೇಕ್ "ಸಾಫ್ಟ್ವೇರ್ ಗಂಡ" ಎಂಬ ಚಿತ್ರದಲ್ಲಿ ಪ್ರಸಿದ್ಧ ನಟ ಜಗ್ಗೇಶ್ ರವರ ಜೊತೆ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿ ಮಿಂಚಿದ್ದಾರೆ.ಕೋಟಿ ಚೆನ್ನಯ್ಯ,ಬೇಡರ ಕಣ್ಣಪ್ಪ .ಕಡಿರ ಮಗೆ. ಭೂತದ ಇಲ್ . ಗಂಗೆ ಗೌರಿ. ಶನಿಪ್ರಭಾವ. ರಾಜ ಹರಿಶ್ಚಂದ್ರ. ಭೈರನ ಬದುಕು ಮೊದಲಾದವು ಇವರು ಅಭಿನಯಿಸಿದ ಪ್ರಮುಖ ನಾಟಕಗಳಾಗಿದೆ.
ಅನುರೂಪಳಾದ ಪತ್ನಿ ಶ್ರೀಮತಿ ರಕ್ಷಾ ಮಮತೆಯ ಸುಪುತ್ರ ಮಾಸ್ಟರ್ ಅದ್ವಿಕ್ ಇವರ ಜೊತೆ ಪುಟ್ಟ ಸಂಸಾರದೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವನ್ನು ಹೊಂದಿ ಸಾಧನೆಯ ಮೈಲುಗಲ್ಲು ಗಳನ್ನು ಯಶಸ್ವಿನಿಂದ ದಾಟುತ್ತಾ ಬೆಳೆಯುತ್ತಿರುವ ಇವರ ಔದ್ಯೋಗಿಕ ಜೀವನವು ಇನ್ನು ಹೆಚ್ಚಿನ ಯಶಸ್ಸನ್ನು ಪಡೆಯಲಿ ಎಂಬುದಾಗಿ ವಿಶೇಷ ಚಾನೆಲ್ ಈ ಸಂದರ್ಭದಲ್ಲಿ ಹಾರೈಸುತ್ತದೆ.









0 Comments