ದುಬೈಯಲ್ಲಿದ್ದುಕೊಂಡು ಬಹುಮುಖ ಪ್ರತಿಭೆಯ ಮೂಲಕ ನಾಡಿಗೆ ಶ್ರೇಷ್ಠತೆ ತಂದ ಬಾಲ ಕಲಾವಿದ "ಶ್ರೇಯಸ್"


               ವಿದೇಶ_ವಿಶೇಷ ಅಂಕಣ - 24 
ದುಬೈ: ಕನ್ನಡ ನಾಡಿನಲ್ಲಿದ್ದುಕೊಂಡು ತಮ್ಮ ಬಾಲ್ಯಕಾಲ ಸಾಧನೆಯ ಮೂಲಕ ಹುಟ್ಟೂರಿಗೆ ಶ್ರೇಯಸ್ಸು ತರುವ ಅದೆಷ್ಟೋ ಮಕ್ಕಳು ನಮ್ಮಲ್ಲಿ ಕಾಣಬಹುದಾಗಿದೆ. ಆದರೆ ವಿದೇಶದಲ್ಲಿದ್ದುಕೊಂಡು ತನ್ನ ಬಹುಮುಖ ಪ್ರತಿಭೆಯ ಮೂಲಕ ನಾಡಿಗೆ ಶ್ರೇಷ್ಠತೆ ತಂದ ಒರ್ವ ಅನನ್ಯ ಬಾಲ ಸಾಧಕನ ಬಗ್ಗೆ ಈ ಬಾರಿ ವಿಶೇಷ ಚಾನೆಲ್ ನ ವಿದೇಶ ವಿಶೇಷ ಅಂಕಣ ಬೆಳಕು ಚೆಲ್ಲುತ್ತಿದೆ. ನಾಡಿನಲ್ಲಾದರೆ ಇಂತಹ ಬಾಲಕರಿಗೆ ಸೂಕ್ತ ಅವಕಾಶಗಳು ಧಾರಳ ಲಭಿಸುತ್ತಿದೆ ಆದರೆ ಮರಳುಗಾಡಿನಂತಹ ಕೊಲ್ಲಿ ರಾಷ್ಟ್ರದಲ್ಲಿ ತನ್ನ ಬಹುಮುಖ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಗಿಟ್ಟಿಸಿಕೊಂಡ ಈ ಬಾಲಕನ

ಶೈಕ್ಷಣಿಕ ಸಾಧನೆಗೆ ದುಬೈ ಸರಕಾರ ವರ್ಷಂಪ್ರತಿ ನೀಡುವ "ಶೇಕ್ ಹಂದಾನ್ ಪ್ರಶಸ್ತಿ2020" ನೀಡಿ ಗೌರವಿಸಿರುವುದು ಕನ್ನಡಿಗರಿಗೊಂದು ಅಭಿಮಾನದ ಸಂಗತಿಯಾಗಿದೆ.

ಭಾಷಣ,ಅಭಿನಯ,ಚಿತ್ರ,ಪ್ರತಿಕೃತಿ ರಚನೆ, ವಿಜ್ಞಾನ ವಿಸ್ಮಯ,ಕ್ರೀಡೆ ಮೊದಲಾದ ಬಹುಮುಖ ಪ್ರಕಾರಗಳಲ್ಲಿ ತನ್ನನ್ನು ತೊಡಗಿಕೊಂಡಿರುವ ಶ್ರೇಯಸ್ ಗೆ ಇವುಗಳೆಲ್ಲಾ ಚಿಕ್ಕಂದಿನಿಂದಲೇ ಅತೀವ ಆಸಕ್ತಿ. ಜತೆಗೆ ಪಠ್ಯ ಚಟುವಟಿಕೆಯಲ್ಲೂ ಅಭಿರುಚಿ ಮೂಡಿಸಿಕೊಂಡ ಪ್ರತಿಭಾನ್ವಿತ ಈತನಾಗಿದ್ದಾನೆ. 

ಮೂಲತಃ ದಕ್ಷಿಣ ಕನ್ನಡ ಜಿಲೆಯ ಬಂಟ್ವಾಳ ತಾಲೂಕಿನ ಪ್ರಸಾದ್ ಮಹಾಲಿಂಗೇಶ್ವರ -ಶ್ರುತಿ ದಂಪತಿಗಳ ಪುತ್ರನಾದ ಶ್ರೇಯಸ್ಸ್ ಶಾರ್ಜಾದ ದೆಹಲಿ ಪ್ರೈವೇಟ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ. ಈತನ ತಂದೆ ದುಬೈ ಡಿಪಿ ವರ್ಲ್ಡ್ ಮರೈನ್ ಪ್ರಾಜೆಕ್ಟ್ ನ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದು ತಾಯಿ ಗೃಹಿಣಿಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. 
ಸಹಜವಾಗಿ ತಂದೆ ತಾಯಿಯರೊಂದಿಗೆ ಬೆಳೆದ ಶ್ರೇಯಸ್ ಗೆ ವಿಜ್ಞಾನ ವಿಷಯದ ಬಗ್ಗೆ ಇರುವ ಕುತೂಹಲತೆ,ಜಗತ್ತಿನ ವಿದ್ಯಾಮಾನದ ಬಗೆಗಿನ ಆಸಕ್ತಿಯ ಮಾತುಕತೆ, ಚಿಕ್ಕ ಮನದಲ್ಲಿ ಮೂಡುವ ಕಲ್ಪನೆಯ ಚಿತ್ತಾರದ ಪ್ರತಿಕೃತಿಗಳು ಇವೆಲ್ಲದರ ಅಭಿರುಚಿಯನ್ನು ಗುರುತಿಸಿಕೊಂಡ ಸ್ವತಃ ತಂದೆ ತಾಯಿ ಜತೆಗೆ ಶಾಲಾ ಅಧ್ಯಾಪಕರ ಮಾರ್ಗದರ್ಶನ ಮೊದಲಾದವನ್ನು ಮೈಗೂಡಿಸಿಕೊಂಡ ಶ್ರೇಯಸ್ ಕೊಲ್ಲಿ ರಾಷ್ಟದ ನೆಲದಲ್ಲಿ ಶ್ರೇಷ್ಟತೆಗೆ ಪಾತ್ರನಾಗಿದ್ದಾನೆ. ಶೈಕ್ಷಣಿಕ ಮಾತ್ರವಲ್ಲದೆ ಭಾಷಣ,ಏಕಪಾತ್ರಭಿನಯ,ನೃತ್ಯ,ಚಿತ್ರ ರಚನೆ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ಮಿಂಚುತ್ತಿರುವ ಶ್ರೇಯಸ್ 2019ರಲ್ಲಿ ಅಬುದಾಬಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾಡಿದ ಭಾಷಣ ಗಮನ ಸೆಳೆದಿದ್ದು
ವೇದಿಕೆಯಲ್ಲಿ ಅಭಿನಂದಿಸಲಾಗಿತ್ತು. ಶಾರ್ಜಾ ಕರ್ನಾಟಕ ಸಂಘದ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಮದಕರಿ ನಾಯಕನ ಏಕಪಾತ್ರಭಿನಯ ಮಾಡಿ ಪ್ರತಿಭೆ ಪ್ರದರ್ಶನಗೈದು ಜನ ಪ್ರಶಂಸನೆ ಗಳಿಸಿಕೊಂಡಿದ್ದಾನೆ. ಕ್ರೀಡೆಗಳಾದ ಕ್ರಿಕೆಟ್,ಟೆನಿಸ್ ಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಶ್ರೇಯಸ್ ವಿಜ್ಞಾನ ವಿಷಯಗಳಲ್ಲೂ ಅಭಿರುಚಿ ಬೆಳೆಸಿಕೊಂಡು ದುಬೈಯ ರೊಬೊಟಿಕ್ಸ್ ಕಾರ್ಯಗಾರ,

ತರಬೇತಿಗಳಲ್ಲಿ ಭಾಗವಹಿಸುತ್ತಾ ತನ್ನದೇ ಆದ ಸಂಶೋಧನಾ ಕಾರ್ಯ ನಡೆಸುತ್ತಾ ಬಾಲ ವಿಜ್ಞಾನಿ ಎಂಬ ವಿಶೇಷಣಕ್ಕೆ ಪಾತ್ರನಾಗಿದ್ದಾನೆ‌. ಉತ್ತಮ ಚಿತ್ರಕಾರನಾಗಿಯೂ ಗುರುತಿಸಿಕೊಂಡಿರುವ ಈ ಬಾಲ ಕಲಾವಿದನ ಕೈಯಲ್ಲಿ ಅರಳಿದ ಕಲಾಕೃತಿಗಳು ಯುಎಇಯ ವಿವಿದೆಡೆ ಪ್ರದರ್ಶನಗೊಂಡಿದೆ. ಯುಸಿ ಡಿನೋ ಆರ್ಟ್ ಅಚೀವರ್ಸ್ ಶಾರ್ಜಾದಲ್ಲಿ ಕಲಾ ತರಬೇತಿ ಜತೆಗೆ ಬಾಲಿವುಡ್ ಮತ್ತು ಸಮಕಾಲೀನ ನೃತ್ಯ ತರಬೇತು ಪಡೆಯುತ್ತಿರುವ ಶ್ರೇಯಸ್ ಅತ್ಯಂತ ಕಿರಿಯ ವಯಸ್ಸಿನ ಸಕಲ ಕಲಾ ವಲ್ಲಭನಾಗಿ ಕೊಲ್ಲಿ ರಾಷ್ಟ್ರದ ಹಲವು ಕಾರ್ಯಕ್ರಮಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನ ಪ್ರತಿಭಾ ಪ್ರದರ್ಶನಗೈಯುತ್ತಾ ಮಿಂಚುತ್ತಿದ್ದಾನೆ. 


ದುಬೈ ಸರಕಾರ ಶಿಕ್ಷಣ ಮಂಡಳಿಯು ನೀಡುವ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮುಕ್ತುಮ್ 2019-20ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಶ್ರೇಯಸ್ ನ್ನು ಅಭಿನಂದಿಸಿ ದುಬೈ ಹೆಮ್ಮೆಯ 
ಯುಎಇ ಕನ್ನಡಿಗರು ತಂಡವು ದಸರಾ ಕ್ರೀಡೋತ್ಸವ ಸಂದರ್ಭದಲ್ಲಿ ಗೌರವಿಸಿದೆ. ಯುಎಇಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಉತ್ಸಾಹಿಯಾಗಿ ಭಾಗವಹಿಸುವ ಈ ಕಿರಿಯ ಪ್ರತಿಭೆಯ ಹಿರಿಯ ಸಾಧನೆಗೆ ವಿಶೇಷ ಅಭಿನಂದನೆಗಳನ್ನು ಅರ್ಪಿಸುತ್ತಾ ಈ ಬಹುಮುಖ ಪ್ರತಿಭೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಲೆಂಬ ಶುಭ ಹಾರೈಕೆ.



Post a Comment

0 Comments