ಭಾರತೀಯ ಖಾನಾವಳಿಯ ರುಚಿಯನ್ನು ಕುವೈಟ್ ನಲ್ಲಿ ಪಸರಿಸಿದ– ನಕ್ರೆ ಸತೀಶ್ಚಂದ್ರ ಶೆಟ್ಟಿ


                      ವಿದೇಶ_ವಿಶೇಷ ಅಂಕಣ-22

ಕುವೈಟ್: ಕೊಲ್ಲಿ ರಾಷ್ಟ್ರಕ್ಕೆ ಆಗಮಿಸಿದ ಹಲವರು ತಮ್ಮದೆ ಆದ ವೃತ್ತಿ -ಪ್ರವೃತ್ತಿ  ಮೂಲಕ ಒಂದಲ್ಲ ಒಂದು ರೀತಿಯ ಕೊಡುಗೆಯನ್ನು ನೀಡಿದವರಾಗಿದ್ದಾರೆ. ಅಂತಹ ಸಾಲಿನಲ್ಲಿ ಗುರುತಿಸಬಹುದಾದ ಸಾಧನೀಯ ವ್ಯಕ್ತಿತ್ವದ ಒರ್ವರನ್ನು ವಿಶೇಷ ಚಾನೆಲ್ ಇಂದಿನ ವಿದೇಶ-ವಿಶೇಷ ಅಂಕಣ ಮೂಲಕ ಪರಿಚಯಿಸುತ್ತಿದ್ದೇವೆ. ಇವರು ಕುವೈಟ್ ನ ಖ್ಯಾತ ಉದ್ಯಮಿ ,ಕಲಾ ಪೋಷಕ , ಕ್ರೀಡಾ ಪ್ರೇಮಿ ಸಾಮಾಜಿಕ ಸೇವಾ ಚಟುವಟಿಕೆಗಳ ಮುಂಚೂಣಿಯ ನಾಯಕ ನಕ್ರೆ ಸತೀಶ್ಚಂದ್ರ ಶೆಟ್ಟಿ . ಎತ್ತರದ ನಿಲುವು, ನೀಳಕಾಯ, ಪ್ರಖರ ಮಾತು, ದಿಟ್ಟ ನಿಲುವಿನ ಧಿರೋದತ್ತ  ವ್ಯಕ್ತಿ. ಮಾತು ಮತ್ತು ನಡತೆ ಎರಡರಲ್ಲೂ ಏಕತೆಯನ್ನು ಹೊಂದಿರುವ ಎಲ್ಲರಲ್ಲೂ ಬೆರೆಯುವ ಅಪರೂಪದ ವ್ಯಕ್ತಿತ್ವ.

ಕರಾವಳಿ ಕರ್ನಾಟಕದ  ಧಾರ್ಮಿಕ ಕ್ಷೇತ್ರ, ಜೈನಕಾಶಿ ಎಂದು ಪ್ರಸಿದ್ಧಿ ಪಡೆದ ಐತಿಹಾಸಿಕ ಭೂಮಿ ಕಾರ್ಕಳದ ನಕ್ರೆ ಹೊಸಮನೆಯ ಶ್ರೀಮತಿ ಗಂಗಾ ಶೆಟ್ಟಿ ಮತ್ತು ಶ್ರೀ ನರಸಿಂಹ ಶೆಟ್ಟಿಯವರ ಸುಪುತ್ರ ಶ್ರೀಸತೀಶ್ಚಂದ್ರ ಶೆಟ್ಟಿ . ಕೃಷಿ ಕುಟುಂಬದ ಸುಸಂಸ್ಕ್ರತ ಪರಿಸರದಲ್ಲಿ ಬೆಳೆದ ಇವರು ತನ್ನ ಎಳೆಯ ವಯಸ್ಸಿನಲ್ಲೇ ದೇಶ ಪ್ರೇಮ, ಭಾಷಾಪ್ರೇಮ, ಮಾನವೀಯ ಮೌಲ್ಯಗಳನ್ನು ಮೈಗೊಡಿಸಿಕೊಂಡವರು.ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಆರಂಭಿಸಿ, ಅಳಕೆ ಸತ್ಯಸಾಯಿ ಪದವಿಪೂರ್ವ ಕಾಲೇಜಿನ ವಿದ್ಯಾಭ್ಯಾಸ ಮುಂದುವರಿಸಿ ಉಡುಪಿಯ ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಗಳಿಸಿದರು.

ಬಹುಮುಖ ಪ್ರತಿಭೆ: ಬಾಲ್ಯದಿಂದಲೇ ಉತ್ತಮ ಕ್ರೀಡಾಪಟುವಾಗಿದ್ದ ಇವರು ಪ್ರೌಢ ಶಾಲಾ ಅವಧಿಯಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಕ್ರೀಡಾಳುವಾಗಿ ಹೊರಹೊಮ್ಮಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಶಾಟ್ ಪುಟ್ ಹಾಗೂ ಹ್ಯಾಮರ್ ತ್ರೋ ಆಟದಲ್ಲಿ ಅಗ್ರೇಸರನಾಗಿ ಮೆರೆದಿದ್ದಾರೆ.ಚಿಕ್ಕಂದಿನಲ್ಲೇ ಯಕ್ಷಗಾನ ಕಲಿತು ಹೈಸ್ಕೂಲ್ ಹಂತದಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಿ ಸೈ ಎನಿಸಿದ್ದರು. ಕಾಲೇಜು ಮೆಟ್ಟಿಲು ಏರುವ ವೇಳೆಗೆ ಯಕ್ಷಗಾನ, ನಾಟಕ, ಕ್ರೀಡೆ ಹೀಗೆ ಹಲವು ರಂಗದ ಮೂಲಕ ತನ್ನ ಬಹುಮುಖ ಪ್ರತಿಭಾ ಪ್ರಭೆಯನ್ನು ವಿಸ್ತರಿಸಿದ್ದರು.  ಶಾಲಾ-ಕಾಲೇಜುಗಳಲ್ಲಿ ವಿಧ್ಯಾರ್ಥಿ ನಾಯಕನಾಗಿ ಸಾಮಾಜಿಕ ಕ್ರೀಯಾಶೀಲತೆಯಿಂದ ತಮ್ಮ ನಾಯಕತ್ವದ ಗುಣವನ್ನು ತೋರಿಸಿ ಕೊಟ್ಟವರು. ನಂತರದ ದಿನಗಳಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಮನದಲ್ಲಿ ಮಾನ್ಯತೆ ಪಡೆದು ಅಭಿಮಾನಿ ವರ್ಗದಲ್ಲಿ "ಸಜ್ಜನ ಸತೀಶಣ್ಣ" ಎಂಬುದಾಗಿ ಅತ್ಯಂತ ಸರಳ ಹಾಗೂ ಮಹೋನ್ನತ ವ್ಯಕ್ತಿತ್ವದಿಂದ ಹೃದಯ ಶ್ರೀಮಂತಿಕೆಯನ್ನು ಮೆರೆದವರು.

          ಒರಿಯಂಟಲ್ ರೆಸ್ಟೋರೆಂಟ್ ನ ಐಕಾನ್ :


ಸತೀಶ್ಚಂದ್ರ ಶೆಟ್ಟಿ ಅವರು ಉದ್ಯೋಗಕ್ಕಾಗಿ ವಾಣಿಜ್ಯ ನಗರವೆಂದು ಖ್ಯಾತಿ ಪಡೆದ ಸಂಯುಕ್ತ ಅರಬ್ ಒಕ್ಕೂಟಕ್ಕೆ ಕಾಲಿರಿಸಿದರು. ಇಲ್ಲಿನ ಅಬುದಾಬಿ ಹಾಗೊ ದುಬೈನ ಹೆಸರಾಂತ ರಮದಾ ಹೋಟೆಲ್ ನಲ್ಲಿ ವ್ಯವಸ್ಥಾಪಕರಾಗಿ 6 ವರ್ಷ ಕಾರ್ಯ ನಿರ್ವಹಿಸಿ  1984 ರಲ್ಲಿ ಕೊಲ್ಲಿ ರಾಷ್ಟ್ರದ ಬಂಗಾರದ ಕೋಟೆ ಎಂದೇ ಪ್ರತೀತಿ ಪಡೆದ ಕುವೈತ್ ಗ್ ಹೆಜ್ಜೆ ಇಟ್ಟರು.ಇಲ್ಲಿನ ಪ್ರತಿಷ್ಠಿತ ಹಲಿನ್ ಹೋಟೆಲ್ ನಲ್ಲಿ ಒಂದು ವರ್ಷವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು.ಆದರೆ ಇವರಿಗೆ ವಂಶ ಪಾರಂಪರ್ಯವಾಗಿ  ಬೆಳೆಸಿಕೊಂಡು ಬಂದಿರುವ ಸ್ವಂತ ಉದ್ಯಮದೆಡೆಗೆ ಮುನ್ನಡೆಯುವಂತೆ ಪ್ರೇರೆಪಿಸಿತು. ಇದರ ಪರಿಣಾಮ  1985 ರಲ್ಲಿ ಕುವೈಟ್ ನ ಹೃದಯ ಭಾಗದಲ್ಲಿ ‘ಒರಿಯಂಟಲ್ ರೆಸ್ಟೋರೆಂಟ್’ ಎಂಬ ಉಪಹಾರ ಗೃಹ ಆರಂಭಿಸಿದರು. 

ಭಾರತೀಯ ಲೋಕಪ್ರಸಿದ್ದಿಯ ತಿಂಡಿ- ತಿನಸುಗಳನ್ನು ಕೊಲ್ಲಿ ರಾಷ್ಟ್ರದಲ್ಲಿ ಪರಿಚಯಿಸುವ ದೃಷ್ಠಿಯಿಂದ ಆರಂಭಿಸಿದ  ಒರಿಯಂಟಲ್ ರೆಸ್ಟೋರೆಂಟ್’ ಉದ್ಯಮಕ್ಕೆ ಇದೀಗ 37 ವರ್ಷಗಳ ಯಶಸ್ಸು ಇತಿಹಾಸವಿದೆ. ಸವಿ ರುಚಿಯುಳ್ಳ, ಆರೋಗ್ಯಪೂರ್ಣ ಒರಿಯಂಟಲ್ ಖಾನಾವಳಿಯ ಮಳಿಗೆ ಕುವೈಟ್ ನ ಮೂಲೆ ಮೂಲೆಗೂ ತಲುಪಿ ಪ್ರಸಿದ್ಧಿ ಗಳಿಸಿದೆ.ಇದರ ಸ್ಪೂರ್ತಿಯಲ್ಲಿ ಇದೀಗ ಒರಿಯಂಟಲ್ ಇಂಟರ್ ನೇಶನಲ್ ಟ್ರೇಡಿಂಗ್ ಆಂಡ್ ಕಂಟ್ರಾಕ್ಟಿಂಗ್ ಕಂಪೆನಿಯನ್ನು ಸ್ಥಾಪಿಸಿ  ಈ ಮುಖೇನ ನಾಲ್ಕಾರು ಉದ್ಯಮಗಳನ್ನು ಆರಂಭಿಸಿ ಅದರಲ್ಲೂ ಯಶಸ್ಸು ಗಳಿಸಿ  ರಾಷ್ಟ್ರಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡ ಕರಾವಳಿಯ ಕನ್ನಡಿಗರಾಗಿದ್ದಾರೆ ಸತೀಶ್ಚಂದ್ರ ಶೆಟ್ಟಿ. ಇವರಿಗೆ ಹೋಟೆಲ್ ಉದ್ಯಮ ಎಂಬುದು ಕರಗತಗೊಂಡ ವಿಶೇಷ ಕಲೆ ಎನ್ನಬಹುದು. ಒಳ್ಳೆ ಊಟ-ತಿಂಡಿಯನ್ನು ಅರಗಿಸಿಕೊಂಡ ಇಲ್ಲಿನ ಜನರ ಕೃತಾರ್ಥ ಭಾವ ಭಾರತೀಯರ ಜತೆ ವಿದೇಶಿಯರಿಗೂ  ಶುಚಿ-ರುಚಿಯಾದ ಊಟೋಪಚಾರಗಳನ್ನು  ನೀಡುವ ಮೂಲಕ  ಕುವೈಟ್ ನಲ್ಲಿ ಅಪಾರ ಜನರ ಪ್ರೀತಿಯನ್ನು ಸಂಪಾದಿಸಿದ್ದಾರೆ. ಆಹಾರೋದ್ಯಮದ ಮೂಲಕ ನಮ್ಮ  ಸವಿರುಚಿಯನ್ನು ವಿದೇಶದಲ್ಲಿ ನೀಡುತ್ತಿರುವ ಜತೆಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಆಶ್ರಯದಾತನಾದ ಕೀರ್ತಿ ಸತೀಶ್ಚಂದ್ರ ಶೆಟ್ಟಿ ಅವರದ್ದಾಗಿದೆ. 

             ತುಳು ಭಾಷೆ-ಸಂಸ್ಕೃತಿಯ ಸಂವಾಹಕ:

ತಮ್ಮ ಬಿಡುವಿಲ್ಲದ ವ್ಯವಹಾರೋದ್ಯಮದ ನಡುವೆಯೂ  ಹಲವಾರು ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಪಡೆದ ಸಂಸ್ಕಾರ ಇವರಲ್ಲಿ ನಾಡು-ನುಡಿ ಪ್ರೇಮದ ಬಗೆಗೆ ಪ್ರೇರಣೆಯಾಗಿದೆ.ಕುವೈಟ್ ನಲ್ಲಿ ತುಳುಭಾಷೆ ಹಾಗೂ ಸಂಸ್ಕೃತಿಗೆ ಮಾನ್ಯತೆ ನೀಡಿದ ತುಳುಕೂಟ ಕುವೈಟ್ ಇದರ 2007-2008 ಅವಧಿಯಲ್ಲಿ ಎರಡು ವರ್ಷಗಳ ಕಾಲ ಅಧ್ಯಕ್ಷ- ರಾಗಿದ್ದರು.ಇದರ ಮೂಲಕ ತುಳುಭಾಷೆ- ಸಂಸ್ಕೃತಿಯನ್ನು ಕೊಲ್ಲಿರಾಷ್ಟ್ರದಲ್ಲಿ ಬೆಳೆಸಿ ಉಳಿಸಿ, ಪಸರಿಸುವ ಕಾರ್ಯಕ್ಕೆ ಇವರ ಸೇವಾವಧಿಯು  ಪ್ರಧಾನ ಪಾತ್ರವಹಿಸಿತ್ತು. ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡು ತುಳು ಕೂಟಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ  ಮನ್ನಣೆ ನೀಡಿದ್ದರು. ತನ್ನ ಅಧಿಕಾರವಧಿ ಮುಕ್ತಾಯಗೊಂಡರು ಕೂಡ  ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸುತ್ತಾ ಕೂಟದ ಸಲಹೆಗಾರರಾಗಿ ತಮ್ಮ ಅನುಭವ ಮಂಟಪದಿಂದ ವಿಚಾರಧಾರೆಗಳನ್ನು ಹರಿಸುತ್ತಾ ಕೂಟದ ಯಶಸ್ಸಿಗೆ ಹಗಲ್ಲರುಳು ಶ್ರಮಿಸುವ ಪ್ರಾಮಾಣಿಕತೆ ಇವರದ್ದಾಗಿದೆ.

ಕನ್ನಡದ ಕೊಡುಗೆ: ಕುವೈಟ್ ನಲ್ಲಿರುವ ಕನ್ನಡಿಗರ ಒಕ್ಕೂಟದ ಮತ್ತೊಂದು ದೊಡ್ಡ ಸಂಸ್ಥೆ ಕುವೈಟ್ ಕನ್ನಡ ಕೂಟ.ಇದರ ಬೆಳ್ಳಿ ಹಬ್ಬ ಸಂಭ್ರಮಾಚರಣೆಯ ಅಧ್ಯಕ್ಷರಾಗಿ ಕನುಡ ನಾಡು-ನುಡಿಯ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ತವರೂರಿನಿಂದ ಕಲಾತಂಡಗಳನ್ನು ಕುವೈಟ್ ಗೆ ಆಹ್ವಾನಿಸಿ ಅವರಿಂದ ವಿಭಿನ್ನ ಕಲಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಕಲಾವಿದರನ್ನು ಪುರಸ್ಕರಿಸುವ ಮಹತ್ಕಾರ್ಯ ಇವರು ಮುಂದಾಳುತ್ವ ವಹಿಸಿ ಯಶಸ್ವಿ- ಯಾಗಿದ್ದಾರೆ. ಕುವೈಟ್ ನಲ್ಲಿ ಬಂಟ ಭಾಂಧವರ ಕೊಡು ಕುಟುಂಬವಾದ ‘ಬಂಟರ ಸಂಘ’ದ ಅಧ್ಯಕ್ಷರಾಗಿ ಸಂಘದ ಯಶಸ್ವಿಗೆ ಪಾತ್ರರಾಗುವ ಮೂಲಕ ಸಮುದಾಯಿಕವಾದ ಕೊಡುಗೆ ನೀಡಿದ್ದಾರೆ. ಕುವೈತ್ ನಲ್ಲಿರುವ ಕರ್ನಾಟಕದ ಮೂರು ಪ್ರಮುಖ ಸಂಸ್ಥೆಗಳ ಅಧ್ಯಕ್ಷರಾಗಿರುವ ತುಳುವ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ.  ಪ್ರಸ್ತುತ Art of Living Foundation ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ ಮುಂದಾಳು:ಉದ್ಯೋಗ ಹಾಗೂ ಸಂಘ ಸಂಸ್ಥೆಗಳ ಚಟುವಟಿಕೆಗಳ ಜತೆಗೆ ಕೊಡುಗೈ ದಾನಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಂಸ್ಕೃತಿಕ  ಹಾಗೂ ಶೈಕ್ಷಣಿಕ ಸಂಘ ಸಂಸ್ಥೆಗಳ ಅನುದಾನ ನೀಡುವಲ್ಲಿ ಇವರದ್ದು ಎತ್ತಿದ ಕೈ.ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದ ಸತ್ಕಾರ್ಯಕ್ಕಾಗಿ ಸದ್ವಿನಿಯೋಗಕ್ಕಾಗಿ ದಾನ ಮಾಡುತ್ತಾ ಬಂದಿರುವರು. ಹಲವಾರು ಸಂಘ ಸಂಸ್ಥೆಗಳ ಪೋಷಕರಾಗಿ ಶೈಕ್ಷಣಿಕ,ಧಾರ್ಮಿಕ ಕ್ಷೇತ್ರಗಳಿಗೆ ಆರ್ಥಿಕ ಆಶಕ್ತರಿಗೆ, ಆನಾರೋಗ್ಯಪೀಡಿತರಿಗೆ, ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರ ನೀಡುತ್ತಿದ್ದಾರೆ. ಕಳೆದ ೮ ವರ್ಷಗಳಿಂದ 5-6 ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿ ವೇತನ  ನೀಡುತ್ತಾ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 

ಕಲಾ,ಕ್ರೀಡಾ ಪ್ರೋತ್ಸಾಹಕ: ಸ್ವತಃ ಕಲಾವಿದರೂ,ಕ್ರೀಡಾಪಟುವೂ ಆಗಿರುವ ಇವರು ಕಲೆ ಮತ್ತು ಕ್ರೀಡೆಯ ಬೆಳವಣಿಗೆಗೆ ಉತ್ತೇಜನ  ಹಾಗೂ ಪ್ರೋತ್ಸಾಹವನ್ನು ಸಾಂಘವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಕುವೈಟ್ ನಲ್ಲಿ ಪ್ರಖ್ಯಾತ ಒರಿಯಂಟಲ್ ಕ್ರಿಕೆಟ್ ತಂಡವನ್ನು ಕಟ್ಟಿ ಬಹಳಷ್ಟು ಕ್ರೀಡಾಳುಗಳಿಗೆ  ಪ್ರೋತ್ಸಾಹ ನೀಡುತ್ತಿದ್ದಾರೆ.  


ಪ್ರಶಸ್ತಿ-ಪುರಸ್ಕಾರ:
 
ಇವರು ಸಮಾಜಕ್ಕೆ ನೀಡುತ್ತಿರುವ  ಅಮೂಲ್ಯ ಕೊಡುಗೆಗಳನ್ನು  ಪರಿಗಣಿಸಿ ಕನ್ನಡ ಸಂಘ ಬೆಂಗಳೂರು ಇದರ ವತಿಯಿಂದ ‘ತೌಳವಶ್ರೀ’ ಬಿರುದು ಹಾಗೂ  ಸಿಂಗಾಪುರ್ ಕನ್ನಡಸಂಘದಿಂದ ‘ಮಹೋನ್ನತ ಸಾಮಾಜಿಕ ಕೊಡುಗೆಗಾರ’ ಎಂಬ ಬಿರುದು ನೀಡಿ ಪುರಸ್ಕರಿಸಿದೆ. ಇದಲ್ಲದೆ ತುಳುಕೂಟ ಕುವೈಟ್, ಬಂಟರ ಸಂಘ ಕುವೈಟ್ ಹಾಗೂ ಕುವೈತ್ ನಲ್ಲಿರುವ ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳು ಇವರ ಸಾಮಾಜಿಕ ಸೇವೆಗಾಗಿ ಸನ್ಮಾನಿಸಿದೆ. 
ಸಂತೃಪ್ತ ಸಂಸಾರ: ಶ್ರೀಮತಿ ಉಷಾಶೆಟ್ಟಿಯವರನ್ನು ಧರ್ಮಪತ್ನಿಯಾಗಿಸಿದ ಇವರ ದಾಂಪತ್ಯ ಜೀವನದಲ್ಲಿ ಶಿರಿಷ್ ಶೆಟ್ಟಿ ಹಾಗೂ ಶ್ರವಣ್ ಶೆಟ್ಟಿ ಎಂಬ ಎರಡು ಮಕ್ಕಳಿದ್ದಾರೆ.
ತಂದೆಯ ಯಶಸ್ಸಿನ ನೆರಳನ್ನೆ ಹಿಂಬಾಲಿಸುತ್ತಾ ಮಕ್ಕಳು ಕೂಡ ಸಕಲ ಕಲಾ ವಲ್ಲಭರೆನಿಸಿದ್ದಾರೆ. ಉನ್ನತ ವ್ಯಾಸಂಗ ಪಡೆದ ಪುತ್ರರಿಬ್ಬರು ಇದೀಗ  ವೃತ್ತಿ  ಜೀವನದ ಮೂಲಕ ವಿನೂತನ ಅಧ್ಯಾಯ ಆರಂಭಿಸಿ ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದಾರೆ. ಹಿರಿಯ ಪುತ್ರ ಶಿರಿಷ್ ಕಂಪ್ಯೂಟರ್ ಇಂಜೀನಿಯರಿಂಗ್ ಪದವಿ ಪಡೆದು ಫೈನಾನ್ಸ್ ಹಾಗೂ ಮಾರ್ಕೆಟಿಂಗ್  ನಲ್ಲಿ ಅಮೇರಿಕಾ ಹಾಗೂ ಭಾರತೀಯ ಮಾಸ್ಟರ್ ಆಫ್ ಬ್ಯುಸಿನೆಸ್ ಆಡ್ಮಿನಿಸ್ಟ್ರೇಶನ್  ಪದವಿ ಪಡೆದಿದ್ದಾನೆ. ಉಡುಪಿಯ ಉಷಾ ಹೋಟೆಲ್ ಮಾಲಕರ ಪುತ್ರಿ ಯಶಿಕಾ ಅವರನ್ನು ವಿವಾಹವಾಗಿ ಇವರ ಮನೆತನದ ಹಿರಿಯ ಸೊಸೆಯನ್ನಾಗಿಸಿದ್ದಾರೆ.ಕಿರಿಯ ಪುತ್ರ ಶ್ರವಣ್ OXFORD UNIVERSITY ಯಲ್ಲಿAstrophysics ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದು ಪ್ರಸ್ತುತ ಚೀನಾ ದೇಶದಲ್ಲಿ ವೃತ್ತಿಪರ ಬದುಕನ್ನು ಯಶಸ್ವಿಯಾಗಿ ಸಾಗಿಸುತ್ತಿದ್ದಾರೆ. ಹೀಗೆ ಸಂಸಾರ ನೌಕೆಯ ಸುಮಧುರ ಪಯಣದಲ್ಲಿ ಸತೀಶ್ಚಂದ್ರ ಶೆಟ್ಟಿಯವರದ್ದು ವೃತ್ತಿ ಜೀವನದ  35 ವರ್ಷಗಳ ಸಾರ್ಥಕ ಬದುಕು. 

           ಗಣ್ಯರ ಜತೆಗೆ ನಕ್ರೆ ಸತೀಶ್ಚಂದ್ರ ಶೆಟ್ಟಿ.......








ಸಾಗರದಾಚೆಗಿನ ತಮ್ಮ ಕರ್ಮಭೂಮಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಜತೆಗೆ ತಮ್ಮ ಸಾಧನೆಗಳನ್ನು ನಿರಂತರವಾಗಿರಿಸಿ ಜನ್ಮ ಭೂಮಿಗೂ  ತಮ್ಮ ಕೈಲಾದ ಕೊಡುಗೆ ನೀಡುತ್ತಿರುವ ನಕ್ರೆ ಸತೀಶ್ಚಂದ್ರ ಶೆಟ್ಟಿ ಅವರ ಬದುಕು ಸರ್ವರಿಗೂ ಆದರ್ಶನೀಯವಾಗಿದೆ.


Post a Comment

1 Comments

  1. Kind hearted gentleman Nakre Satishchandra Shetty established flourishing food industry in Kuwait and all good wishes with him. By Tukaram Shetty, Mumbai.

    ReplyDelete