ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ರಾಜ್ಯ ಮಟ್ಟಕ್ಕೇರಿಸಿದ ದೈಹಿಕ ಶಿಕ್ಷಕ ಮರಿಯಯ್ಯ ಬಲ್ಲಾಳ್ ನಿವೃತ್ತಿ ಬದುಕಿನೆಡೆಗೆ....


                      ವ್ಯಕ್ತಿ_ವಿಶೇಷ

ಉಪ್ಪಳ: ಜೀವನದುದ್ದಕ್ಕೂ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ತಮ್ಮ ಸೇವಾವಧಿಯಲ್ಲಿ ಭವ್ಯ ಭವಿಷ್ಯತ್ತಿನ ತಲೆಮಾರಿಗೆ ಉದಾತ್ತ ಹಾಗೂ ಸ್ಮರಣೀಯ ಕೊಡುಗೆಯನ್ನು ಮೆರೆದು ಶಾಲಾ ಮಕ್ಕಳ ಹಾಗೂ ಸಹೋದ್ಯೋಗಿಗಳ ಮನಗೆದ್ದ ಸರಕಾರಿ ಪ್ರೌಢ ವಿದ್ಯಾಲಯ ಪೈವಳಿಕೆ ನಗರ ಇಲ್ಲಿನ ದೈಹಿಕ ಶಿಕ್ಷಕರಾದ ಮರಿಯಯ್ಯ ಬಲ್ಲಾಳ್ ಅವರು 1992 ರಿಂದ 2021 ವರೆಗಿನ ತಮ್ಮ ಸರಕಾರಿ ಸೇವಾ ಅವಧಿಯನ್ನು ಕಳೆದು ಪ್ರಸ್ತುತ ವರ್ಷ ನಿವೃತ್ತರಾಗುತ್ತಿದ್ದಾರೆ. ತಮ್ಮ ಸೇವಾವಧಿಯಲ್ಲಿ ಅದೇಷ್ಟೋ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ತರಬೇತು,ಮಾರ್ಗದರ್ಶನ ನೀಡಿ ಉಪಜಿಲ್ಲಾ,ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿದಂತಾಗಿಸಿದ್ದಾರೆ. 


ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು ಗ್ರಾಮದ ಸುಣ್ಣಾಡದ ಅರಸು ಮನೆತನದ ತಿರುಮಲ ಬಲ್ಲಾಳ್-ಲಕ್ಷ್ಮಿ ಅಮ್ಮ ಇವರ ಪುತ್ರರಾಗಿ 14-09-1963ರಲ್ಲಿ ಜನಿಸಿದ ಮರಿಯಯ್ಯ ಬಲ್ಲಾಳ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಯಾರಿನ ಮುಳಿಗದ್ದೆ ಶಾಲೆಯಲ್ಲಿ ಪೂರೈಸಿ ಪೈವಳಿಕೆಯ ಕಾಯರ್ ಕಟ್ಟೆ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು ಕನ್ಯಾನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದರು. ಬಳಿಕ ಮಂಗಳೂರಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮವನ್ನು ಹಾಗೂ ಮಡಿಕೇರಿಯಲ್ಲಿ ಕೋ ಆಪರೇಟಿವ್ ಡಿಪ್ಲೋಮ ಪೂರ್ತಿಗೊಳಿಸಿದ್ದರು. ನಂತರ ಶ್ರವಣ ಬೆಳಗೊಳದ ಹೇಮಾವತಿ ದೈಹಿಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಕ ತರಬೇತು ಪೂರ್ತಿಗೊಳಿಸಿ 1988ರಿಂದ ಕುಂಜತ್ತೂರು ಸರಕಾರಿ ಹೈಸ್ಕೂಲಿನಲ್ಲಿತಾತ್ಕಾಲಿಕ ಅಧ್ಯಾಪನ ವೃತ್ತಿಯನ್ನು ಆರಂಭಿಸಿದರು.
 


1992ರಲ್ಲಿ ಅಡೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸರಕಾರಿ ಸೇವೆಗೆ ನಿಯುಕ್ತಿಗೊಂಡ ಇವರು ಬಳಿಕ ಕಾಸರಗೋಡು ಗರ್ಲ್ಸ್ ಹೈಸ್ಕೂಲಿನಲ್ಲಿ ಸೇವೆ ಸಲ್ಲಿಸಿದ ಬಳಿಕ 2016ರಲ್ಲಿ ಪೈವಳಿಕೆ ನಗರ ಶಾಲೆಗೆ ವರ್ಗಾವಣೆ ಪಡೆದು ಆಗಮಿಸಿ ಇಲ್ಲಿನ ಶೈಕ್ಷಣಿಕ ಕ್ರೀಡಾ ವಲಯಕ್ಕೊಂದು ಸ್ಪೂರ್ತಿಯ ಮಾರ್ಗದರ್ಶಕರಾಗಿದ್ದರು. ಕುಂಡಗುಯಿ ಶಾಲೆಯಲ್ಲಿ ನಡೆದ ಕಂದಾಯ ಜಿಲ್ಲಾ ಕ್ರೀಡಾ ಮೇಳದಲ್ಲಿ ಇವರ ಮಾರ್ಗದರ್ಶನದ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆನ್ ಲೈನ್ ಎಂಟ್ರಿ ಸಿಸ್ಟಂನ್ನು ಜ್ಯಾರಿಗೆ ತಂದಿರುವುದು ಹೆಮ್ಮೆಯ ವಿಚಾರವಾಗಿದೆ.ಅಂತೆಯೇ ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಮೇಳದಲ್ಲಿ ಪೈವಳಿಕೆ ನಗರ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತು ನೀಡಿ ಸಾಧನೆಗೈದಿರುವುದು ಇವರ  ಕ್ರೀಡಾ ವ್ಯಕ್ತಿತ್ವದ ಕೈಗನ್ನಡಿಯಾಗಿದೆ.

ಕೇರಳ ರಾಜ್ಯ ಸಾಪ್ಟ್ ಬಾಲ್,ಬೇಸ್ ಬಾಲ್ ಮತ್ತು ಥ್ರೋಬಾಲ್ ಅಸೋಶಿಯೇಶನ್ ನ ರಾಜ್ಯ ಸಮಿತಿಯ ಖಜಾಂಜಿಯಾಗಿಯೂ,ಶಿಸ್ತು ಮತ್ತು ತಾಂತ್ರಿಕ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿಯೂ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.  ಕೇರಳ ಯೋಗ ಆಸೋಶಿಯೇಷನ್ ನ ಸ್ಥಾಪಕ ಕಾರ್ಯದರ್ಶಿಯಾಗಿಯೂ ಕ್ರೀಡೆಯಲ್ಲಿ ಯೋಗ ಶಿಕ್ಷಣವನ್ನು ಸೇರಿಸುವಲ್ಲಿ ಇವರು ಶ್ರಮವಹಿಸಿದ್ದಾರೆ. ದಕ್ಷಿಣ ಭಾರತ ಯೋಗ ಆಸೋಶಿಯೇಷನ್ ನ ಜತೆ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸುವ ಜತೆಗೆ ಕ್ರೀಡಾ ಶಿಕ್ಷಕರ ಮತ್ತು ಮಕ್ಕಳ ನ್ಯಾಯೋಚಿತ ಬೇಡಿಕೆ ಈಡೇರಿಸುವಲ್ಲಿ ಅತ್ಯಂತ ಶ್ರಮವಹಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇತ್ತೀಚೆಗೆ ಕೇರಳ ಸರಕಾರದ ಆದೇಶ ಮೇರೆಗೆ ಸ್ಪೋರ್ಟ್ಸ್ ಕೋಟಾದಲ್ಲಿ ಹಲವಾರು ಕ್ರೀಡಾ ಪ್ರತಿಭೆಗಳಿಗೆ ಸರಕಾರಿ ಉದ್ಯೋಗ ದೊರಕಲು ಇವರ ತರಬೇತಿ ಹಾಗೂ ಮಾರ್ಗದರ್ಶನ ಪ್ರಶಂಸನೀಯವಾಗಿ ಗುರುತಿಸಲ್ಪಟ್ಟಿದೆ. 

ಅಧ್ಯಾಪನದ ಜತೆಗೆ ಪರಂಪರಾಗತ ಕೃಷಿ ಕಾಯಕದಲ್ಲೂ ಆಸಕ್ತಿ ಬೆಳಿಸಿಕೊಂಡಿರುವ ಬಲ್ಲಾಳ್ ಅವರ ನಿವೃತ್ತ ಬದುಕಿನ ಮುಂದಿನ ದಿನಗಳು  ಸುಖ ಸೌಭಾಗ್ಯ ಸಂಪತ್ಸಮೃದ್ಧಿಗಳಿಂದ ಕೂಡಿ ನೂರು ವಸಂತಗಳನ್ನು ಕಾಣುವ ಸುಯೋಗವನ್ನು ಭಗವಂತನು ತಮಗೆ ಕರುಣಿಸಲಿ ಎಂದು ಶಾಲೆಯಲ್ಲಿ ವಿದಾಯಕೂಟ ಏರ್ಪಡಿಸಿ  ಜಿ.ಎಚ್.ಎಸ್.ಎಸ್. ಪೈವಳಿಕೆನಗರ ಶಾಲಾ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ,ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಹೃದಯ ತುಂಬಿ ಹಾರೈಸಿದ್ದಾರೆ. 

ಬರಹ: ಆಶ್ರಫ್ ಮರ್ತ್ಯ

ಚಿತ್ರಗಳು: ಚಂದ್ರಶೇಖರ್ ಪೈನಗರ್ ವಿಷನ್

ಮರಿಯಯ್ಯ ಬಲ್ಲಾಳ್ ಅವರ ಸೇವಾ ಬದುಕಿನ ಸಾಧನೆಯ ಬಗ್ಗೆ ಸಮಗ್ರ ವ್ಯಕ್ತಿ ಚಿತ್ರ ಇಲ್ಲಿದೆ.

https://youtu.be/D9VSp0sbGlI

ಈ ಮೇಲಿನ ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಬಹುದಾಗಿದೆ.



Post a Comment

0 Comments