ವಿದೇಶ ಸುದ್ದಿ_ವಿಶೇಷ
ಶಾರ್ಜಾ : ಕೊಲ್ಲಿ ರಾಷ್ಟ್ರದ ಶಾರ್ಜಾದಲ್ಲಿ ಯುವಕನೋರ್ವನ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈತನನ್ನು ಕಾಸರಗೋಡು ಜಿಲ್ಲೆಯ ಉಪ್ಪಳದ ಬೇಕೂರು ನಿವಾಸಿ ಅಭಿಷೇಕ್ (29ವ) ಎಂದು ಗುರುತಿಸಲಾಗಿದೆ.
ಮೃತ ಯುವಕ ಮಂಜೇಶ್ವರ ತಾಲೂಕಿನ ಬೇಕೂರು ಬೊಳ್ಳಾರ್ ನಿವಾಸಿ ಉಪ್ಪಳದಲ್ಲಿ ಟೈಲರಿಂಗ್ ವೃತ್ತಿ ನಡೆಸುವ ದೇವದಾಸ್ ಟಿ.ಸಾಲಿಯಾನ್ ಅವರ ಪುತ್ರನಾಗಿದ್ದಾನೆ. ಈ ಹಿಂದೆ ಕೊಲ್ಲಿ ಉದ್ಯೋಗಿಯಾಗಿದ್ದ ಅಭಿಷೇಕ್ ಕಳೆದ ವರ್ಷ ಇಲ್ಲಿನ ಕಂಪೆನಿ ಕೆಲಸಕ್ಕೆ ವಿದಾಯ ಹೇಳಿ ಊರಿಗೆ ತೆರಳಿದ್ದರು. ಬಳಿಕ ಕಳೆದ ಕೋರೋನ ಲಾಕ್ ಡೌನ್ ಬಳಿಕ ಇದೀಗ 2021 ಮಾರ್ಚ್ 25ರಂದು ಊರಿನಿಂದ ವಿಸಿಟಿಂಗ್ ವೀಸಾ ಮೂಲಕ ಶಾರ್ಜಾಕ್ಕೆ ಮರಳಿ ಉದ್ಯೋಗ ಹುಡುಕಾಡುತ್ತಿದ್ದರು.ಈ ನಡುವೆ ಶಾರ್ಜಾದ ಸ್ನೇಹಿತರ ರೂಮಿನಲ್ಲಿ ತಂಗಿದ್ದ ಅಭಿಷೇಕ್ ಎಪ್ರಿಲ್ 9ರ ಹೊರಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದು ಇವರ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಉದ್ಯೋಗ ಲಭಿಸದ ಜಿಗುಪ್ಸೆ: ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ತಲಪಾಡಿ ಆನಂದಾಶ್ರಮ ಹಾಗೂ ಮಂಗಳೂರು ಗೋಕರ್ಣನಾಥೇಶ್ವರ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅಭಿಷೇಕ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಬಳಿಕ ದುಬೈಯಲ್ಲಿ 2 ವರ್ಷ, 4ವರ್ಷ ಶಾರ್ಜಾದಲ್ಲಿದ್ದು ಕಂಪನಿ ಉದ್ಯೋಗ ಬಿಟ್ಟು ಸ್ವಂತ ಊರಿಗೆ ಮರಳಿದ್ದ. ಬಳಿಕ ಇದೀಗ ಶಾರ್ಜಾಕ್ಕೆ ವಿಸಿಟಿಂಗ್ ವಿಸಾ ಮೂಲಕ ಉದ್ಯೋಗ ಹುಡುಕಾಟಕ್ಕೆ ಆಗಮಿಸಿದ್ದು ಕೆಲಸ ಸಿಗದಿರುವ ಕಾರಣ ಊರಿಗೆ ಮರಳುವ ಸಿದ್ಧತೆಯಲ್ಲಿದ್ದ ಎನ್ನಲಾಗಿದೆ. ಆತ್ಮಹತ್ಯೆಗೈಯುವ ಐದು ದಿನಗಳ ಹಿಂದೆಯಷ್ಟೆ ಊರಿಗೆ ಫೋನ್ ಮಾಡಿ ಮರಳುವ ಬಗ್ಗೆ ಸೂಚಿಸಿದ್ದ.ಆದರೆ ಧೀಡಿರ್ ಆಗಿ ಆತ್ಮಹತ್ಯೆಗೆ ನಿರ್ಧಾರ ತಳೆದಿರುವ ಕಾರಣ ತಿಳಿದಿಲ್ಲ.
ಏಕೈಕ ಪುತ್ರನ ಕಳೆದುಕೊಂಡ ಕುಟುಂಬ: ದೇವದಾಸ್ ಟಿ.ಸಾಲಿಯಾನ್-ವೀಣಾ ಡಿ.ಸಾಲಿಯಾನ್ ದಂಪತಿಗಳ ಏಕ ಮಾತ್ರ ಪುತ್ರನಾಗಿದ್ದ ಅಭಿಷೇಕ್ ಕುಟುಂಬಕ್ಕೆ ಭರವಸೆಯ ಆಧಾರಸ್ತಂಭವಾಗಿದ್ದ. ಈತನ ಸಹೋದರಿ ದಿವ್ಯಾ ಅವರನ್ನು ಬಂಟ್ವಾಳ ತಾಲೂಕಿನ ಮೆನ್ಯಾದ ವಿನೀತ್ ಅವರಿಗೆ ವಿವಾಹ ಮಾಡಿಕೊಡಲಾಗಿದೆ.
ಮೃತದೇಹ ರವಾನೆಗೆ ಮುತುವರ್ಜಿವಹಿಸಿದ ಕನ್ನಡಿಗರು: ಊರಿನಿಂದ ಬಂದು ಗಲ್ಪ್ ರಾಷ್ಟ್ರದಲ್ಲಿ ಯುವಕನೊಬ್ಬ ಸಾವಿಗೆ ಶರಣಾದ ಬಗ್ಗೆ ವಿಶೇಷ ಚಾನೆಲ್ ವ್ಯವಸ್ಥಾಪಕ ನಿರ್ದೇಶಕರಾದ ಗಲ್ಫ್ ಉದ್ಯೋಗಿ ವಿಜಯಕುಮಾರ್ ಶೆಟ್ಟಿ ಅವರಿಗೆ ಉಪ್ಪಳದ ಯುವ ಭಾರತೀ ಅನಿವಾಸಿ ಬಳಗದಿಂದ ಒರ್ವರು ಕರೆಮಾಡಿ ಸೂಚಿಸಿದ್ದರು. ಇದರ ಜಾಡು ಹಿಡಿದು ವಿಷಯ ತಿಳಿಯಲು ಹೊರಟ ವಿಜಯಕುಮಾರ್ ಶೆಟ್ಟಿ ಅವರು ಶಾರ್ಜದಲ್ಲಿರುವ ತಮ್ಮ ಸ್ನೇಹಿತರ ಮೂಲಕ ಹುಡುಕಾಟಕ್ಕೆ ತೊಡಗಿದ್ದು ಎ.10ರಂದು ಮೃತದೇಹವನ್ನು ಶಾರ್ಜಾ ಪೋಲಿಸರು ಪತ್ತೆ ಹಚ್ಚಿ ತನಿಖೆ ನಡೆಸಿದ್ದರು.ಈ ಸಂದರ್ಭದಲ್ಲಿ ಪತ್ತೆಯಾದ ಮೃತದೇಹವನ್ನು ಊರಿಗೆ ರವಾನಿಸಲು ವಿದೇಶದಲ್ಲಿರುವ ಉದ್ಯೋಗಿಗಳು ಹಾಗೂ ಊರಲ್ಲಿರುವ ಮೃತನ ಊರವರು,ಕುಟುಂಬ ಬಂಧುಗಳು ಸಹಕರಿಸಿದ್ದರು. ಶಾರ್ಜಾದಲ್ಲಿ ನಡೆದ ಆತ್ಮಹತ್ಯೆ ಪ್ರಕರಣವಾದ ಕಾರಣ ನಿಖರ ತನಿಖೆ ಹಾಗೂ ಪೋಸ್ಟು ಮಾರ್ಟಂ ಬಳಿಕವಷ್ಟೆ ಮೃತದೇಹ ಊರಿಗೆ ರವಾನಿಸಲಾಗುತ್ತದೆ. ಇದಕ್ಕೆ ಅಧಿಕೃತ ಖರ್ಚು ವೆಚ್ಚ ತಗಲುತ್ತಿದ್ದು ಇದಕ್ಕಾಗಿ ವಿದೇಶದಲ್ಲಿರುವವರು ಕನ್ನಡಿಗರ ವಾಟ್ಸಫ್ ಗ್ರೂಪೊಂದನ್ನು ರಚಿಸಿ ಅದರಲ್ಲಿ ಮೃತ ಅಭಿಷೇಕ್ ಅವರ ಕುಟುಂಬಿಕರಾದ ಸತೀಶ್ ಉಳ್ಳಾಲ್, ಸತೀಶ್ ಕುಂಪಲ, ಊರಿನ ಸಮಾಜ ಸೇವಕರಾದ ಪ್ರವೀಣ್ ಕುಮಾರ್, ಜಗದೀಶ್ ಪ್ರತಾಪನಗರ ಅವರ ವಾಟ್ಸಫ್ ಸಂದೇಶದ ಸಂಪರ್ಕದ ಸಹಭಾಗಿತ್ವದಲ್ಲಿ ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಮಂಜೇಶ್ವರ,ಯುಎಇಯಲ್ಲಿ ಯಾವುದೇ ಪ್ರಚಾರ ಬಯಸದೆ ನಿರಂತರವಾಗಿ ಅನಿವಾಸಿ ಭಾರತೀಯರ ಸೇವೆಯಲ್ಲಿ ನಿರತರಾಗಿರುವ ಕನ್ನಡಿಗಾಸ್ ಫೆಡರೇಷನ್ ಸಂಯೋಜಕಿ, ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನ ಡಿಸ್ಟ್ರೆಸ್ ರಿಲೀಫ್ ಕಾರ್ಡಿನೇಟರ್ ಆಗಿರುವ ಛಾಯ ಕೃಷ್ಣಮೂರ್ತಿ, ಕನ್ನಡಿಗಾಸ್ ಫೆಡರೇಷನ್ ನ ಸಂಚಾಲಕರಾದ ಹಿದಾಯತ್ ಅಡ್ಡೂರು,ಇಮ್ರಾನ್ ಏರ್ಮಲ್ ಅವರು ಮುತುವರ್ಜಿ ವಹಿಸಿದ್ದರು. ಇವರೆಲ್ಲರ ಸೌಹರ್ದಯುತ ಪ್ರಯತ್ನದ ಮೂಲಕ ವಿದೇಶದಲ್ಲಿ ಮೃತಪಟ್ಟ ತಮ್ಮಪುತ್ರನ ಮೃತದೇಹದ ಮುಖವನ್ನು ಅಂತಿಮವಾಗಿ ಕಾಣಲು ಅವಕಾಶ ಸಿಕ್ಕಿತೆಂದು ಕುಟುಂಬಿಕರು ಗದ್ಗತಿತರಾಗಿ ನುಡಿಯುತ್ತಿದ್ದಾರೆ. ಬೇಕೂರು ಸಮೀಪದ ಬೊಳ್ಳಾರ್ ಮನೆ ಪರಿಸರದಲ್ಲಿ ನಾಳೆ(ಎಪ್ರಿಲ್ 20) ಬೆಳಿಗ್ಗೆ 7 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.ಉಪ್ಪಳದ ಯುವ ಭಾರತೀ ಸಂಘಟನೆಯು ನಾಡಿನಲ್ಲಿ ಸಹಕರಿಸಿದೆ.







0 Comments