ಅರಬ್ ರಾಷ್ಟ್ರದ ಕನ್ನಡಿಗರ ಮಹಿಳಾ ಸಂಘಟನಾ ಸಾರಥಿ ಉಮಾ ವಿದ್ಯಾಧರ್


                  ವಿದೇಶ_ವಿಶೇಷ ಅಂಕಣ ಬರಹ -24

ದುಬೈ: ಆಧುನಿಕ ಭಾರತದಲ್ಲಿ ಮಹಿಳಾ ಶಕ್ತಿ ಎಂಬ ಪದ ತೂಕದ ಅರ್ಥ ವನ್ನು ಕೊಡುತ್ತದೆ. ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿಂದ ಏಕಾಂಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಗಳು ಪ್ರಸ್ತುತ ಪುರುಷ ಪ್ರಧಾನ ರಾಷ್ಟ್ರ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿಗಿಂತಲೂ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆ ಎಂಬುದನ್ನು ಸಾಬೀತುಪಡಿಸುತ್ತದೆ.  ಗಾಂಧೀಜಿಯವರ ದೂರಾಲೋಚನೆಗೆ ಇಂಬು ಎಂಬಂತೆ ಇಂದು ಜಾಗತಿಕ ಮಟ್ಟದಲ್ಲಿ ಮಹಿಳೆ ಒಂದು ರತ್ನವಾಗಿ ಹೊಳೆಯುತ್ತಿದ್ದಾಳೆ ಎಂಬುದಕ್ಕೆ ಹಲವು ಯಶಸ್ವಿ ಮಹಿಳೆಯರು ಇಂದು ನಿದರ್ಶನವಾಗಿದ್ದಾರೆ. ಅಂತಹ ಒರ್ವೆ ಯಶಸ್ವಿ ಅಂತರ್ದೇಶಿಯ  ಸಾಧಕಿ ಮಹಿಳಾಮಣಿಯ ಬಗ್ಗೆ  ವಿಶೇಷ ಚಾನೆಲ್ ಇಂದು ವಿದೇಶ_ವಿಶೇಷ ಅಂಕಣ ಮೂಲಕ ಬೆಳಕು ಚೆಲ್ಲುತ್ತಿದೆ. 


ಇವರು ಅರ್ಥಾತ್ ಕರ್ನಾಟಕದ ಕಣ್ಮಣಿ ಇದೀಗ ಅರಬ್ ರಾಷ್ಟ್ರದಲ್ಲಿ ಕನ್ನಡದ ಕಂಪನ್ನು ಪಸರಿಸಿ ಯಶಶ್ವಿ ಎನಿಸಿದ ಮಹಿಳಾ ಸಂಘಟನಾ ಸಾಧಕಿ. 

ಅರಬ್ ಸಂಯುಕ್ತ ಸಂಸ್ಥಾನವಾದ  ಮರಳುಗಾಡನ್ನು  ಜ್ಞಾನ ವಿಜ್ಞಾನ ಕ್ರಿಯಾರೂಪದ ಆಧುನಿಕ  ನಗರವಾಗಿರಿಸಿ ಲೋಕ ವಿಖ್ಯಾತವಾಗಿಸಿದ  ವಾಣಿಜ್ಯ ಕೇಂದ್ರವಾದ ದುಬಾಯಿಯ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸಿ  ಸಂಘಟನೆಗಳ ಮೂಲಕ  ಭಾಷೆ, ಕಲೆ ಸಂಸ್ಕೃತಿಯನ್ನು ವೈಭವೀಕರಿಸಿಕೊಂಡು ಬರುತ್ತಿರುವವರಲ್ಲಿ ಶ್ರೀಮತಿ ಉಮಾ ವಿದ್ಯಾಧರ್ ಅವರ ಸೇವೆ ಗಮನಾರ್ಹವಾಗಿದೆ. 

ಕನ್ನಡಿಗರು ದುಬಾಯಿ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಉಮಾವಿದ್ಯಾಧರ್ ರವರ ಸಾಧನೆಯ ಬಗ್ಗೆ ಇದು ವಿಶೇಷ ಲೇಖನ.


ಕರ್ನಾಟಕದ ಪ್ರಕೃತಿಯ ಮಡಿಲಿನಲ್ಲಿರುವ ಸುಂದರ ಜಿಲ್ಲೆ ಶಿವಮೊಗ್ಗದಲ್ಲಿ ಶ್ರೀ ವೀರಯ್ಯ ಮತ್ತು ಶ್ರೀಮತಿ ಅನ್ನಪೂರ್ಣ ದಂಪತಿಗಳ ಮಗಳು ಉಮಾದೇವಿ. ಒಬ್ಬಳು ಸಹೋದರಿ ಹಾಗೂ ಸಹೋದರನೊಂದಿಗೆ ಸುಂದರ ಪರಿಸರದಲ್ಲಿ ಬೆಳೆದು ಬಂದ ಉಮಾ ಶಿವಮೊಗ್ಗದ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿ, ಕಾಲೇಜು ವಿದ್ಯಾಭ್ಯಾಸ ಕಸ್ತೂರಿಬಾ ಕಾಲೇಜು ಶಿವಮೊಗ್ಗ ಹಾಗೂ ನ್ಯಾಶನಲ್ ನೈಟ್ ಕಾಲೇಜ್ ನಲ್ಲಿ ಪದವಿಯನ್ನು ಪಡೆದಿದ್ದಾರೆ.

ತನ್ನ ಶಾಲಾ ವಿದ್ಯಾಭ್ಯಾಸದ ಹಂತದಲ್ಲಿ ನೃತ್ಯ, ನಾಟಕ, ಕ್ರೀಡೆಯಲ್ಲಿ ಅಪಾರ ಆಸಕ್ತಿ ಇದ್ದುದರಿಂದ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೊತೆಗೆ ಹೆಚ್ಚಿನ ಸಹಪಾಠಿ ಸ್ನೇಹಿತೆಯರ ಬಳಗವನ್ನು ಹೊಂದಿದ್ದರು.ವಿದ್ಯಾಭಾಸದ ನಂತರ ಶಿವಮೊಗ್ಗದ ಡಿ.ಸಿ.ಸಿ.ಬ್ಯಾಂಕಿನಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

 ಈ ನಡುವೆ ಇಂಜಿನೀಯರ್ ಪದವಿ ಪಡೆದ ಶ್ರೀ ವಿದ್ಯಾಧರ್ ರವರನ್ನು ವಿವಾಹದ ನಂತರ ಶಿವಮೊಗ್ಗ ತೊರೆದು ಬೆಮೆಲ್ ನಗರದಲ್ಲಿ ವೈವಾಹಿಕ ಜೀವನ ಪ್ರಾರಂಭಿಸಿದರು.

ಬೆಮೆಲ್ ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿದ್ಯಾಧರ್ 2005 ರಲ್ಲಿ ದುಬಾಯಿಗೆ ಬಂದು ತಮ್ಮ ವೃತ್ತಿ ಜೀವನವನ್ನು ಮುಂದುವರಿಸಿದಾಗ ಸಹ ಧರ್ಮಿಣಿ ಉಮಾ ಕೂಡಾ ಸಾಥ್ ನೀಡಲು ಅರಬ್ ರಾಷ್ಟ್ರಕ್ಕೆ ಆಗಮಿಸಿದ್ದರು. 


ಇಲ್ಲಿನ ಹಲವಾರು ಕರ್ನಾಟಕ ಪರ ಸಂಘಟನೆಗಳು ಕನ್ನಡ ಭಾಷೆ, ಕಲೆ ಸಂಸ್ಕೃತಿ, ಕ್ರೀಡೆ,ಹಾಗೂ ಇನ್ನಿತರ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿರುವ ಉಮಾ ವಿದ್ಯಾಧರ್ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಕನ್ನಡದ ಕಂಪನ್ನು ಪಸರಿಸಲು ಕಾರಣೀಭೂತರಾಗಿದ್ದಾರೆ. 


ಇಲ್ಲಿನ "ಕನ್ನಡಿಗರು ದುಬಾಯಿ" ಸಂಘಟನೆಯ ಅಧ್ಯಕ್ಷೆಗಾದಿಯ ಚುಕ್ಕಾಣಿ ಹಿಡಿದ ಇವರು  ಹಲವು ಉತ್ಸಾಹಿ ಅಭಿಮಾನಿ ಕನ್ನಡಿಗರ ಮೂಲಕ ದುಬಾಯಿಯಲ್ಲಿ ಅದ್ಧೂರಿಯಾಗಿ ಕನ್ನಡ ಪರ ಚಟುವಟಿಕೆಗಳನ್ನುನಡೆಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಬಾಲ್ಯದಿಂದಲೇ ಕಥೆ ಕವನ ಕಾದಂಬರಿಗಳನ್ನು ಓದುತ್ತ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಅಪಾರ ಅಭಿಮಾನ ಪ್ರೀತಿ ಗೌರವವನ್ನು ಮೈಗೂಡಿಸಿಕೊಂಡಿದ್ದ ಉಮಾ ವಿದ್ಯಾಧರ್ ಯು.ಎ.ಇ.ಯಲ್ಲಿ ಪ್ರಥಮಬಾರಿಗೆ ಒಂದು ಪ್ರತಿಷ್ಠಿತ ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಅನಿವಾಸಿ ಕನ್ನಡತಿ ಮಹಿಳೆಯಾಗಿ ಗುರುತಿಸಿಕೊಂಡವರು. 


ತಮ್ಮ ಸಂಘಟನಾ ಅವಧಿಯಲ್ಲಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವುದಲ್ಲದೆ  ಇವರ ಮುಂದಾಳುತ್ವದ  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿರುವುದು ಉಮಾ ವಿದ್ಯಾಧರ್ ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.


ಕನ್ನಡಿಗರು ದುಬಾಯಿ ಸಂಘಟನೆಯ ನೇತೃತ್ವದಲ್ಲಿ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ, ಶಾಸ್ತ್ರೀಯ ಸಂಗೀತ ಸಂಜೆ, ಸಂಗೀತ ರಸಮಂಜರಿ, ಹಾಸ್ಯೋತ್ಸವ, ಕನ್ನಡ ಸಾಂಸ್ಕೃತಿಕ, ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ "ಕನ್ನಡ ರತ್ನ ಪ್ರಶಸ್ತಿ" ಪ್ರದಾನ ಸಮಾರಂಭ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ಇಲ್ಲಿನ ಜನ ಸಹಭಾಗಿತ್ವದಲ್ಲಿ  ಯಶಸ್ವಿಯಾಗಿ ಸಂಘಟಿಸಿದ ಕೀರ್ತಿ ಕನ್ನಡಿತಿಯಾಗಿರುವ ಉಮಾವಿದ್ಯಾಧರ್ ಅವರದ್ದಾಗಿದೆ. 


ಈ ಹಿಂದೆ ಕನ್ನಡಿಗರು ಸಂಘಟನೆಯ ಸಾರಥ್ಯವನ್ನು ವಹಿಸಿದ ಸದನ್ ದಾಸ್, ಮಲ್ಲಿಕಾರ್ಜುನ ಗೌಡ, ವೀರೇಂದ್ರ ಬಾಬು ಅವರದೇ ಹಾದಿಯಲ್ಲಿ ಸರ್ವಜನ ಮಾರ್ಗದರ್ಶನದಂತೆ ಸಾಗುತ್ತಿರುವ  ಶ್ರೀಮತಿ ಉಮಾವಿದ್ಯಾಧರ್ ಅವರು ಹಲವಾರು ಯಶಸ್ವಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.ಇದರಿಂದಾಗಿ ಕನ್ನಡ ನಾಡಿನ ಕಲೆ,ಸಾಹಿತ್ಯ,ಸಂಸ್ಕೃತಿಯ ಪ್ರೌಢಿಮೆ ಕೊಲ್ಲಿ ರಾಷ್ಟ್ರದಲ್ಲೂ  ಅನುರುಣಿಸುವಂತಾಗಿದೆ. 


ಇವರ ಈ ಸಂಘಟನಾತ್ಮಕ ಶಕ್ತಿಗೆ ಹಾಗೂ ಸಕಲ ಅಭಿರುಚಿ,ಹವ್ಯಾಸಗಳಿಗೆ ಎಮಿರೆಟ್ಸ್ ಗ್ಲೋಬಲ್ ಅಲ್ಯುಮಿನಿಯಂನ  ಸೀನಿಯರ್ ಆಫೀಸರ್ ಆಗಿರುವ ಇವರ  ಪತಿ ವಿದ್ಯಾಧರ್ ಹಾಗೂ ಮಗ  ರಜತ್ ವಿ. ಹಿರೇಮಠ್ ತುಂಬು ಪ್ರೋತ್ಸಾಹ ನೀಡುತ್ತಿರುವ ಸಂತೃಪ್ತ ಸಂಸಾರ ಇವರದ್ದಾಗಿದೆ. ಪುತ್ರ ರಜತ್ ಕ್ರೀಡೆಯಲ್ಲಿ ಸದಾ ಚಟುವಟಿಕೆ ಇಂದಿದ್ದು ಅನೇಕ ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಗಳನ್ನು ಗೆದ್ದಿದ್ದಾನೆ. ಈತ ಕೇಂದ್ರೀಯ ವಿದ್ಯಾಲಯ ಬಿಬೆಮಲ್ ನಗರ ಕೆಜಿಫ್ ನಲ್ಲಿ ಓದಿದ್ದು ನಂತರ 12th ವರೆಗೂ ದುಬೈ ನಲ್ಲಿ ವ್ಯಾಸಂಗ ಮಾಡಿ ಇದೀಗ ಬಿ ಸ್ ಸಿ ಇನ್ ಫಿಲ್ಮ್ ಟೆಕ್ನಾಲಜಿ ಫೈನಲ್ ಇಯರ್ ಮದ್ರಾಸ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ. 


ಉಮಾವಿದ್ಯಾಧರ್ ಅವರು ವಿದೇಶದಲ್ಲಿದ್ದುಕೊಂಡು ಕನ್ನಡ ಸೇವೆ ನಡೆಸಿದ್ದಕ್ಕಾಗಿ ಇವರ ಯಶಸ್ವಿ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ದಾವಣಗೆರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ  "ಕರ್ನಾಟಕ ವುಮೆನ್ಸ್ ಎಕ್ಸಾಲೆನ್ಸ್ ಅವಾರ್ಡ್ 2021‌" ನೀಡಿ ಗೌರವಿಸಲಾಗಿದೆ. ಸದ್ಗೃಹಿಣಿಯಾಗಿ ಮನೆವಾರ್ತೆಯೊಂದಿಗೆ ಕನ್ನಡಮ್ಮನ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿರಿಸಿದ ಈ ಕನ್ನಡತಿಗೆ ಕಾರ್ಯ ಚಟುವಟಿಕೆಯನ್ನು ನಾವೆಲ್ಲರೂ ಕರ ಎತ್ತಿ ಶ್ಲಾಘಿಸೋಣ. ವಿಶೇಷ ಚಾನೆಲ್ ನ ಪರವಾಗಿ ವಿಶೇಷ ಅಭಿನಂದನೆಗಳು.

ಮಾಹಿತಿ ಕೃಪೆ: ಬಿ. ಕೆ. ಗಣೇಶ್ ರೈ - ಯು.ಎ.ಇ.

Post a Comment

0 Comments