ಲೋಕದಾದ್ಯಂತ ಆರಾಧಿಸಲ್ಪಡುವ ನಿತ್ಯಾನಂದ ಸ್ವಾಮೀಜಿಗಳ ಸಾವಿರಾರು ಛಾಯಾಚಿತ್ರದ ಸರದಾರ ಛಾಯಗ್ರಾಹಕ ಎಂ.ಡಿ ಸುವರ್ಣ ||ವ್ಯಕ್ತಿ_ವಿಶೇಷ||


ಲೇಖನ| ತಾರನಾಥ ಮೇಸ್ತ ಶಿರೂರು

ಸದ್ಗುರು ನಿತ್ಯಾನಂದ ಸ್ವಾಮೀಜಿ ಅವರ, ಸಾವಿರಾರು ಕಪ್ಪು ಬಿಳುಪು ವರ್ಣದ ಚಿತ್ರಗಳು ನಮಗೆ ಕಾಣಲು ಸಿಗುತ್ತವೆ. ನಿತ್ಯಾನಂದ  ಸ್ವಾಮೀಜಿ ಅವರು, 'ಶಿಷ್ಯರೊಂದಿಗೆ, ಭಕ್ತರೊಂದಿಗೆ, ಚಿಣ್ಣರೊಂದಿಗೆ ಇರುವ ಚಿತ್ರಗಳಲ್ಲದೆ, ಹಾಗೂ... ಸ್ವಾಮೀಜಿಗಳು ವಿವಿಧ ಭಂಗಿಯಲ್ಲಿ ಇರುವ ಚಿತ್ರಗಳು ಅವುಗಳಲ್ಲಿವೆ. ಎಲ್ಲವೂ ಭಿನ್ನ ವಿಭಿನ್ನತೆ ಹೊಂದಿರುವ ಸೊಗಸಾದ ಚಿತ್ರಗಳು, ಎಲ್ಲವೂ ನೋಡುಗರಲ್ಲಿ ಶ್ರದ್ಧಾ ಭಕ್ತಿ ಅರಳಿಸುವ ಅನನ್ಯವಾದ ಚಿತ್ರಗಳು. ಈ ಚಿತ್ರಗಳೆಲ್ಲವು ವಿಶ್ವದೆಲ್ಲಡೆ ಇರುವ ನಿತ್ಯಾನಂದ ಮಂದಿರ ಆಶ್ರಮಗಳಲ್ಲಿ ಪೂಜೆಗೊಳ್ಳುತ್ತಿವೆ. ಭಕ್ತರ ಮನೆ, ಹೋಟೆಲು, ಅಂಗಡಿ, ಉದ್ಯಮ, ವಾಹನಗಳಲ್ಲಿಯೂ ಶ್ರದ್ಧಾ ಭಕ್ತಿಯಿಂದ ಪೂಜೆಗೊಳ್ಳುತ್ತಿವೆ. ಈ ಚಿತ್ರಗಳೆಲ್ಲವನ್ನು ಸೆರೆ ಹಿಡಿದಿರುವ ಭಾಗ್ಯವಂತ ಛಾಯಗ್ರಾಹಕನನ್ನು ನಾವು ಭಕ್ತಿಯಿಂದ ಸ್ಮರಿಸಲೇ ಬೇಕು. "ಅವರು ಯಾರೆಂದು ಬಲ್ಲಿರಾ...?"  ನಿತ್ಯಾನಂದ ಸ್ವಾಮೀಜಿ ಅವರ ಸಾಮಿಪ್ಯದ ಸಾಂಗತ್ಯದಲ್ಲಿದ್ದ ಛಾಯಗ್ರಾಹಕ ಶ್ರೀ ಎಂ.ಡಿ.ಸುವರ್ಣರು. ಅವರು ಗುರುದೇವರ ಅನುಗ್ರಹ ಪಡೆದು, ಸಾವಿರಾರು ಚಿತ್ರಗಳನ್ನು ಭಕ್ತರಿಗೆ ಕರುಣಿಸಿದವರು.

ಶ್ರೀ ಎಂ.ಡಿ.ಸುವರ್ಣ ಅವರ ಪೂರ್ಣ ಹೆಸರು,  'ಮೋಹನ್ ದೇವದಾಸ್ ಸುವರ್ಣ' ಎಂಬವುದು ಅವರ ಪೂರ್ಣವಾದ ಹೆಸರು. ಅವರು ಮಂಗಳೂರು ಮಣ್ಣಗುಡ್ಡೆ ಮೂಲದವರು. 1924 ರ ಸುಮಾರಿಗೆ ಸುವರ್ಣರು ಜನಿಸಿದರು. ಸುವರ್ಣರು ಬದುಕು ಕಟ್ಟಿಕೊಳ್ಳಲು ಸಣ್ಣ ಪ್ರಾಯದಲ್ಲಿಯೇ  ಮುಂಬೈಯಿಗೆ ತೆರಳಿದ್ದರು. ಅಲ್ಲಿ ಅವರು ಛಾಯಗ್ರಾಹಕರಾಗಿ ರೂಪುಗೊಂಡು ಬ್ರಿಟಿಷರ ಆಡಳಿತ ಕಾಲಘಟ್ಟದಲ್ಲಿ ಮುಂಬೈ ಪ್ರಾಂತ್ಯದಲ್ಲಿ ಛಾಯಗ್ರಾಹಕರಾಗಿ ಪ್ರಸಿದ್ಧಿ ಪಡೆದಿದ್ದರು. ಒಮ್ಮೆ ಅವರಿಗೆ ಹತ್ತಿರದ ಸಂಬಂಧಿಯಾದ  ವೇಣುಗೋಪಾಲ್ ಸುವರ್ಣ ಅವರು, ಗಣೇಶಪುರಿಯಲ್ಲಿ ನಿತ್ಯಾನಂದ ಸ್ವಾಮೀಜಿ ಎನ್ನುವ ಬಾಬಾ ಇದ್ದಾರೆ. ಅವರ ಫೋಟವನ್ನು ಕ್ಯಾಮೆರಾದಿಂದ ತೆಗೆದರೆ ಬರುದಿಲ್ಲವಂತೆ, ಬಹಳಷ್ಟು ಛಾಯಗ್ರಾಹಕರು ಬಾಬಾರ   ಚಿತ್ರ ಸೆರೆ ಹಿಡಿಯಲು ಹೋಗಿ ವಿಫಲರಾಗಿದ್ದಾರೆ. ನೀನು ಹೋಗಿ ಚಿತ್ರ ತೆಗೆಯಲು ಪ್ರಯತ್ನಿಸುವಂತೆ ಹೇಳುತ್ತಾರೆ. 


ಅದರಂತೆ.. ಎಂ. ಡಿ. ಸುವರ್ಣರು ಗಣೇಶಪುರಿಗೆ ತೆರಳುತ್ತಾರೆ. ಸ್ವಾಮೀಜಿಗಳ ಹಲವಾರು ಫೋಟೊಗಳನ್ನು ಕ್ಯಾಮೆರಾದಿಂದ ಕ್ಲಿಕ್ಕಿಸಿಕೊಂಡು, ತಮ್ಮ ಕಾರ್ಯಸ್ಥಾನಕ್ಕೆ ಮರಳಿ ಬರುತ್ತಾರೆ. ಕ್ಯಾಮೆರಾದಿಂದ ಚಿತ್ರ ಸುರುಳಿ ತೆಗೆದು, ಚಿತ್ರಪಟ ಸಿದ್ಧಗೊಳಿಸುವಾಗ, ಯಾವೊಂದು ಗುರುದೇವರ ಚಿತ್ರಗಳು ಸುರುಳಿಯಲ್ಲಿ ಮುದ್ರಣವಾಗಿರುವುದಿಲ್ಲ..! ಸುವರ್ಣರಿಗೆ ಸಂಬಂಧಿ  ವೇಣುಗೋಪಾಲ್ ಹೇಳಿದ್ದು ಸತ್ಯವಾಗಿ ಕಂಡುಬರುತ್ತದೆ.  ಅಚ್ಚರಿಗೊಳಗಾದ ಸುವರ್ಣರು, ಮತ್ತೆ ಗಣೇಶಪುರಿಗೆ ತೆರಳುತ್ತಾರೆ. ಗುರುದೇವರ ಫೋಟವನ್ನು ಸೆರೆ ಹಿಡಿಯುತ್ತಾರೆ. ಮನೆಗೆ ಬಂದು ಚಿತ್ರ ಸುರುಳಿಯನ್ನು ಮುದ್ರಿಸಲು ಪ್ರಾರಂಭಿಸುತ್ತಾರೆ. ಸುರುಳಿಯಲ್ಲಿ ಯಾವೊಂದು ಚಿತ್ರಗಳು ಮೂಡಿರುವುದಿಲ್ಲ. ಹಾಗಾಗಿ ಚಿತ್ರ ಮುದ್ರಣ ಆಗುದಿಲ್ಲ..! ಕ್ಯಾಮೆರಾ ಏನಾದರೂ ದೋಷಗೊಂಡಿರ ಬಹುದೆಂದು ಪರೀಕ್ಷೆಗೆ ಒಳಪಡಿಸಿದಾಗ, ಕ್ಯಾಮರದಲ್ಲಿ ಯಾವೊಂದು ದೋಷವು ಸುವರ್ಣರಿಗೆ ಕಂಡುಬರುವುದಿಲ್ಲ. ಹೀಗೆ ಆರು ತಿಂಗಳುಗಳ ಕಾಲ ಸುವರ್ಣರು, ನಿತ್ಯಾನಂದ ಸ್ವಾಮೀಜಿ ಅವರ ಚಿತ್ರಗಳನ್ನು ಸೆರೆ ಹಿಡಿಯಲು ಪ್ರಯತ್ನಿಸಿ ಸೋತು ಹೋಗುತ್ತಾರೆ. ಇದೆಲ್ಲವು ಮಹಾಮಹಿಮ ಸದ್ಗುರು ನಿತ್ಯಾನಂದ ಸ್ವಾಮೀಜಿ ಅವರ ಮಹಾಲೀಲೆ ಎಂದು ಸುವರ್ಣರಿಗೆ  ಅರಿವಾಗುತ್ತದೆ.  


ಕೊನೆಗೆ ಒಂದು ದಿನ ನಿತ್ಯಾನಂದರು, ಸುವರ್ಣರಿಗೆ "ಫೋಟೋ ಬರುತ್ತದೆ ತೆಗೆ" ಎಂದು ಹೇಳಿ ಅನುಗ್ರಹಿಸುತ್ತಾರೆ. ಆದರೆ.. ನೀನು ಫೋಟ ತೆಗೆಯುವಾಗ, ನನಗೆ ಹಾಗೆ ನಿಲ್ಲು..! ಹೀಗೆ ನಿಲ್ಲು..! ಎಂದು ಹೇಳಬಾರದೆಂದು ಸೂಚನೆ ನೀಡುತ್ತಾರೆ. ನಂತರದ ದಿನಗಳಲ್ಲಿ ಸ್ವಾಮೀಜಿ ಅವರ  ಅನುಗ್ರಹ ಪಡೆದ ಬಳಿಕ ಸುವರ್ಣರು ಕ್ಯಾಮೆರಾದಿಂದ   ಕ್ಲಿಕ್ಕಿಸಿರುವ ಚಿತ್ರಗಳು ಮುದ್ರಣ ಪಡೆಯುತ್ತವೆ. ಲಭ್ಯ  ಮಾಹಿತಿ ಪ್ರಕಾರ ಸುವರ್ಣರು 1944 ರಿಂದ ಪ್ರಾರಂಭಿಸಿ ನಿತ್ಯಾನಂದ ಸ್ವಾಮೀಜಿ ಅವರು ಮಹಾಸಮಾಧಿ ಪಡೆಯುವವರೆಗೂ ಚಿತ್ರಗಳನ್ನು ಸೆರೆ ಹಿಡಿದ್ದಾರೆ. 


ಸೆರೆ ಹಿಡಿದಿರುವ ಕಪ್ಪು ಬಿಳುಪು ಚಿತ್ರಗಳ ಸಂಖ್ಯೆ ಲಕ್ಷ ದಾಟಿರಬಹುದೆಂದು ಅಂದಾಜಿಸಲಾಗಿದೆ. ಇವಾಗ ಸುವರ್ಣರು ಸೆರೆ ಹಿಡಿದಿರುವ   ಒಂದು ಸಾವಿರ ಚಿತ್ರಗಳ ನೆಗೆಟಿಯುಗಳನ್ನು ಮಾತ್ರ, ಅಂದು ಅವರು ಖಾರ್ ಮುಂಬೈಯಲ್ಲಿ ಸ್ಥಾಪಿಸಿರುವ ಫೋಟೊ ಕಾರ್ನರ್ ಸ್ಟುಡಿಯೋದಲ್ಲಿ ರಕ್ಷಿಸಿಡಲು, ಸಾಧ್ಯವಾಗಿದೆ. 

ನಿತ್ಯಾನಂದ ಸದ್ಗುರುಗಳ   ಸಮಾಧಿಮಾಡುವ ಸಮಯದಲ್ಲಿ ಸುವರ್ಣರು,  ಪೋಟೋ ತೆಗೆಯಲು ಸರ್ವ ಸನ್ನದ್ಧ ವ್ಯವಸ್ಥೆಯಲ್ಲಿ ಬಂದು ಸರಿಯಾದ ಜಾಗದಲ್ಲಿ ನಿಂತು ಕ್ಲಿಕ್ಕಿಸಿದರೂ, ಒಂದೇ ಒಂದು ಪೋಟೋ ದಾಖಲಿಸಲು ಅವರಿಗೆ ಸಾಧ್ಯವಾಗದೆ ಹೋಗುತ್ತದೆ...!! ಈ ವಿಸ್ಮಯ ಗುರುದೇವರ ಚರಿತೆ  ಪುಸ್ತಕದಲ್ಲಿ ದಾಖಲಾಗಿದೆ.. ಶ್ರೀಕೃಷ್ಣ ರಥದಿಂದ ಇಳಿದ ಮೇಲೆ, ಅರ್ಜುನನಿಗೆ ತನ್ನ ಕರ್ತವ್ಯ ನಿಭಾಯಿಸಲಾಗದ  ಬಲಹೀನ ಸ್ಥಿತಿಯನ್ನು ನೆನೆಪಿಗೆ ತರುವಂತಿದೆ..!! ನಿತ್ಯಾನಂದರು ತೋರಿದ ನೂರಾರು ಲೀಲೆಗಳನ್ನು ಶ್ರೀಎಂ.ಡಿ. ಸುವರ್ಣರು ಕಣ್ಣಾರೆ ಕಂಡವರು. ತಾವು ಅನುಭವಿಸಿದ್ದರು. ಗುರುದೇವರ ಸಾಂಗತ್ಯದಲ್ಲಿದ್ದ ಗೋವಿಂದ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಕುಟ್ಟಿ ರಾಮ ಸ್ವಾಮೀಜಿ, ಜನಾನಂದ ಸ್ವಾಮೀಜಿ, ದಿಗಂಬರ ಸ್ವಾಮೀಜಿ, ಮಹಾಬಲನಂದ ಸ್ವಾಮೀಜಿ ಹೀಗೆ ಮೊದಲಾದ ಸ್ವಾಮೀಜಿಗಳೊಂದಿಗೆ ಅಕ್ಕರೆಯ ಸಾಂಗತ್ಯವು ಸುವರ್ಣರಿಗೆ ಪ್ರಾಪ್ತಿಯಾಗಿತ್ತು. ಸುವರ್ಣರು ಜುಲೈ-16, 1984 ರಂದು ಸ್ವರ್ಗಸ್ಥರಾದರು. ಸುವರ್ಣರು ಖಾರ್ ಮುಂಬೈಯಲ್ಲಿ ಸ್ಥಾಪಿಸಿರುವ ಫೋಟ ಕಾರ್ನರ್ ಸ್ಟುಡಿಯೋವನ್ನು ಅವರ ಮಗ ನಿರಂಜನ್ ಅವರು ಮುನ್ನೆಡುಸುತ್ತಿದ್ದಾರೆ. ಅಂದು ಗುರುದೇವರ ಚಿತ್ರ ಸೆರೆ ಹಿಡಿಯಲು ಬಳಸಿರುವ ಹಳೆ ಮಾದರಿಯ ಕ್ಯಾಮೆರವನ್ನು ನಿರಂಜನ್ ಅವರು ಜೋಪಾನವಾಗಿ ರಕ್ಷಿಸಿ ಇಟ್ಟುಕೊಂಡಿದ್ದಾರೆ. 

(ಅವಧೂತ ಚರಿತಾಮೃತ ಅಧ್ಯಾಯ-55.ರಿಂದ ಆಯ್ದ ಭಾಗ)

             ✍️ ತಾರಾನಾಥ್ ಮೇಸ್ತ ಶಿರೂರು

Post a Comment

0 Comments