ಮಂಜೇಶ್ವರ: ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆ ರೂಪುಗೊಂಡು ಇಂದಿಗೆ ಮೂವತ್ತೇಳು ವರ್ಷದ ಚರಿತ್ರೆಯಲ್ಲಿ ಅಚ್ಚಗನ್ನಡ ನಾಡಾಗಿದ್ದ ಮಂಜೇಶ್ವರ ಮಂಡಲದ ಶಾಸಕರಾದ ಎಕೆಎಂ ಆಶ್ರಫ್ ಇಂದು ಬೆಳಿಗ್ಗೆ ತನ್ನ ಚೊಚ್ಚಲ ಪ್ರವೇಶದಲ್ಲಿಯೇ ವಿಧಾನಸಭಾ ಪ್ರತಿನಿಧಿಯಾಗಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಡಿನಾಡ ಕನ್ನಡಿಗನೆಂಬ ಅಭಿಮಾನ ಮೂಡಿಸಿದ್ದಾರೆ.
ಮಂಜೇಶ್ವರ ಕ್ಷೇತ್ರ ರೂಪುಗೊಂಡು ಮೂರುವರೆ ದಶಕಗಳು ಕಳೆದರೂ ಇಲ್ಲಿನ ಭಾಷೆ,ಪ್ರದೇಶ ಹಾಗೂ ಹಲವಾರು ಅಭಿವೃದ್ಧಿಯಲ್ಲಿ ಇನ್ನಷ್ಟು ಯೋಜನೆಗಳು ಅನಿವಾರ್ಯ. ಅತೀ ಹೆಚ್ಚು ಜನಸಂಖ್ಯೆ ಇರುವ ಮಂಜೇಶ್ವರ ಕ್ಷೇತ್ರದಲ್ಲಿ ಕಾಲಾನುಕ್ರಮವಾದ ,ಕ್ರಾಂತಿಕಾರಿ ಅಭಿವೃದ್ಧಿಗಾಗಿ ಜನರು ಕಾದು ನೋಡುತ್ತಿದ್ದಾರೆ. ಇಂದು ಶಾಸನ ಸಭೆಯಲ್ಲಿ ಎಕೆಎಂ ಆಶ್ರಫ್ ಅಚ್ಚಗನ್ನಡಿಗನಾಗಿ ಕನ್ನಡ ಭಾಷೆಯಲ್ಲಿ ದೇವರ ಹೆಸರಿನಲ್ಲಿ ಸತ್ಯ ಪ್ರತಿಜ್ಞೆಗೈದಿರುವುದು ಜನತೆಯಲ್ಲಿ ಭರವಸೆ ಹುಟ್ಟಿಸಿದೆ.
ತನ್ನ ಹತ್ತನೇ ವಯಸ್ಸಿನಲ್ಲಿ ವಿದ್ಯಾರ್ಥಿ ರಾಜಕೀಯ ಅಭಿರುಚಿಯೊಂದಿಗೆ ಸಾರ್ವಜನಿಕ ರಂಗಕ್ಕಿಳಿದ ಎಕೆಎಂ ಎಂ.ಎಸ್.ಎಫ್.ನಪಂಚಾಯತ್,ಮಂಡಲಾಧ್ಯಕ್ಷ,ಕಾರ್ಯದರ್ಶಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಅಧ್ಯಕ್ಷ,ರಾಜ್ಯ ಕಾರ್ಯಕಾರಿ ಸಮಿತಿ ಹೀಗೆ ವಿವಿಧ ಸ್ಥಾನಗಳಲ್ಲಿ ಕಾರ್ಯಚರಿಸಿದ ಸುಪರಿಚಿತರು. ಸರಕಾರಿ ಅಪ್ಪರ್ ಪ್ರೈಮರಿ ಶಾಲೆ ಕಡಂಬಾರ್,ಸರಕಾರಿ ಹೈಯರ್ ಸೆಕಂಡರಿ ಶಾಲೆ ಬಂಗ್ರಮಂಜೇಶ್ವರ,ಗೋವಿಂದ ಪೈ ಸರಕಾರಿ ಕಾಲೇಜು ಮಂಜೇಶ್ವರದಲ್ಲಿ ತನ್ನ ಶಿಕ್ಷಣ ಪಡೆದವರು. ಬಂಗ್ರಮಂಜೇಶ್ವರ ಶಾಲಾ ನಾಯಕನಾಗಿಯೂ, ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಪದವಿ ಶಿಕ್ಷಣದ ವೇಳೆ ಸತತ ಮೂರು ವರ್ಷವೂ ಯೂನಿಯನ್ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಪ್ರಥಮ ವರ್ಷ ಸ್ಟುಡೆಂಟ್ ಎಡಿಟರ್,ದ್ಚಿತೀಯ ವರ್ಷ ಪ್ರಧಾನ ಕಾರ್ಯದರ್ಶಿ, ತೃತೀಯ ವರ್ಷ ಗೋವಿಂದ ಪೈ ಕಾಲೇಜಿನ ಎಂಎಸ್ ಎಫ್ ನ ಪ್ರಥಮ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡವರು.
ಕನ್ನಡ ಸ್ನಾತಕೋತ್ತರ ಪದವಿ ಗಳಿಸಿಕೊಂಡು ಮಲೆಯಾಳ,ಕನ್ನಡ,ತುಳು, ಉರ್ದು,ಇಂಗ್ಲಿಷ್ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲ ಬಹುಭಾಷಾ ಸಂಪನ್ನರಾಗಿದ್ದಾರೆ ಎಕೆಎಂ.ಕ್ರೀಡಾ ರಂಗದಲ್ಲೂ ಆಸಕ್ತಿಯುತರಾದ ಎಕೆಎಂ ಕಾಸರಗೋಡು ಜಿಲ್ಲಾ ಕಬ್ಬಡಿ ಅಸೋಶಿಯೇಶನ್, ಅಂಡರ್ ಆರ್ಮ್ ಕ್ರಿಕೆಟ್ ಅಸೋಶಿಯೇಶನ್ ಚೆಯರ್ ಮೆನ್ ಆಗಿದ್ದರು.2011ರಿಂದ 2015ರ ವರೆಗೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ-ಯೂ,2016ರಿಂದ 2021ರ ವರೆಗೆ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷರಾಗಿಯೂ ಸಾಮಾಜಿಕ ಸೇವಾ ಚಟುವಟಿಕೆ ನಿರತರಾಗಿದ್ದರು.
ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷರಾಗಿ ಇವರ ಸೇವಾವಧಿಯಲ್ಲಿ ಕಾರ್ಯರೂಪಕ್ಕೆ ತಂದ ಡಯಾಲಿಸಿಸ್ ಯೂನಿಟ್, ಭಾರತದ ಪ್ರಥಮ ವನಿತಾ ಜೀಮ್ನಾಶಂ, ವನಿತಾ-ಯುವಜನ ಸಶಕ್ತೀಕರಣದ ಕಾರ್ಯಚಟುವಟಿಕೆಗಳು ಪರಿಶಿಷ್ಟ ಜಾತಿ/ವರ್ಗ ಅಭಿವೃದ್ಧಿ ಯೋಜನೆಗಳು ವಿವಿಧ ಶೈಕ್ಷಣಿಕ ಯೋಜನೆಗಳು ಸಾರ್ವಜನಿಕವಾಗಿ ಪ್ರಶಸಂನೆಗೆ ಪಾತ್ರವಾಗಿದೆ.
ಮುಂದೆಯು ಸದಾ ಈ ಮಂಡಲದ ಜನತೆಯ ಜತೆಗಿರುವುದಲ್ಲದೆ ಇಲ್ಲಿನ ಅಭಿವೃದ್ಧಿದಾಯಕ ಕೈಂಕರ್ಯಕ್ಕೆ ಸರ್ವರ ಪೂರ್ಣ ಸಹಾಯ ಸಹಕಾರ ಬೆಂಬಲ ಸದಾ ನೀಡಬೇಕಿದೆ ಎಂದು ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಕೆಎಂ ಆಶ್ರಫ್ ತಿಳಿಸಿದ್ದಾರೆ.





0 Comments