ಬದಿಯಡ್ಕ: ಕೋರೋನ ಸೋಂಕಿನ ಹಿನ್ನಲೆಯಲ್ಲಿ ಸರಕಾರ ಸಂಪೂರ್ಣ ಲಾಕ್ ಡೌನ್ ವಿಧಿಸಿದೆ. ಸಾರ್ವಜನಿಕ ಸಂಚಾರ ಯೋಗ್ಯವಲ್ಲದ ಈ ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗಾಗಿ ಅನಿವಾರ್ಯ ಸಂಚಾರ ನಡೆಸಬೇಕಗಿ ಬರುವ ಬಡ ಕುಟುಂಬಗಳ ಪರಿಸ್ಥಿತಿ ಹೇಳತೀರದ್ದಾಗಿದೆ.ಇಂತಹ ತುರ್ತು ಪರಿಸ್ಥಿತಿಯಲ್ಲಿ ಇದಕ್ಕೆ ಸಹಕರಿಸಬೇಕಾದ ಅಧಿಕಾರಿ ವರ್ಗ ಇದನ್ನು ಕಂಡು ಕಾಣದಂತೆ ಕುರುಡು ಜಾಣತನ ತೋರ್ಪಡಿಸಿರುವುದು ಮಾನವೀಯ ನೆಲೆಗಟ್ಟನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತಾಗಿದೆ.
ಬೆಳ್ಳೂರು ಗ್ರಾಮ ಪಂಚಾಯತಿನಲ್ಲಿ ಇಂತಹವೊಂದು ತುರ್ತು ಪರಿಸ್ಥಿತಿ ಎದುರಾದಾಗ ಕೈ ಹಿಡಿದು ಸ್ಥೈರ್ಯ ತುಂಬಬೇಕಾದ ಪಂಚಾಯತ್ ಅಧಿಕೃತ ವರ್ಗ ನಿರ್ಧಾಕ್ಷಿಣವಾಗಿ ಕೈ ಚೆಲ್ಲಿ ಕುಳಿತದ್ದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚಾಸ್ಪದ ವಿಷಯವಾಗಿದೆ.
ಪ್ರಕರಣದ ವಿವರ: ಬೆಳ್ಳೂರು ಗ್ರಾಮ ಪಂಚಾಯತಿನ 11ನೇ ವಾರ್ಡ್ ಗೊಳಪಟ್ಟ ಕಾಯಿಮಲೆಯ ನಿವಾಸಿಯಾದ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಿಡ್ನಿ ರೋಗಿಯೋರ್ವರನ್ನು ಕಾಸರಗೋಡಿಗೆ ಡಯಾಲಿಸಿಸ್ ಗಾಗಿ ಕೊಂಡೊಯ್ಯಲು ವಾಹನ ಸಿಗದೆ ಪರದಾಡಿದ ಪುತ್ರ ಕೊನೆಗೆ ತನ್ನ ಸ್ಕೂಟಿಯಲ್ಲೇ ಬೆಳ್ಳೂರಿನಿಂದ ಕಾಸರಗೋಡಿನ ವರೆಗೆ ಸಾಗಿಸಿ ತಂದ ಪ್ರಕರಣ ಹೃದಯಸ್ಪರ್ಶಿಯಾಗಿದೆ. ಇಲ್ಲಿನ ಪಂಚಾಯತಿಗೆ ಸರಕಾರ ಅಂಬುಲೆನ್ಸ್ ಅನುಮತಿಸಿದ್ದರೂ ಈ ಬಡ ಕುಟುಂಬ ಲಾಕ್ ಡೌನ್ ಆದ್ದರಿಂದ ರೋಗಿಯನ್ನು ಸಾಗಿಸಲು ಪಂಚಾಯತ್ ಅಧಿಕೃತರಲ್ಲಿ ಅಂಬುಲೆನ್ಸ್ ಗೆ ಬೇಡಿಕೆ ಇಟ್ಟಿದ್ದರು. ಅದನ್ನು ನಿರ್ಲಕ್ಷಿಸಿದ ಪಂಚಾಯತ್ ಕಾರ್ಯದರ್ಶಿಯು ಈ ಬೇಡಿಕೆಯನ್ನು ತಳ್ಳಿ ಹಾಕಿದ್ದು ಅಧಿಕಾರಿಯ ಹೃದಯ ಕಠೋರತೆಯು ಲಾಕ್ ಡೌನ್ ಸಂದರ್ಭದ ಅನಿವಾರ್ಯ ಪರಿಸ್ಥಿತಿಯ ಬಗ್ಗೆ ವಹಿಸಿದ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಬೆಳ್ಳೂರು ಗ್ರಾಮ ಪಂಚಾಯತ್ ಅಧಿಕ ಎಂಡೋಸಲ್ಪನ್ ಬಾಧಿತ ಪ್ರದೇಶ. ಗ್ರಾಮೀಣ ಪ್ರದೇಶವಾದ್ದರಿಂದ ಇಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ವಾಹನ ಸಂಚಾರವಿಲ್ಲ. ಇಂತಹ ಅನಿವಾರ್ಯ ಸಂದರ್ಭದಲ್ಲಿ ದಲಿತ ಕುಟುಂಬವೊಂದು ರೋಗಿಯ ಚಿಕಿತ್ಸೆಯ ಸಂಚಾರಕ್ಕಾಗಿ ಪಂಚಾಯತ್ ಅಂಬುಲೆನ್ಸ್ ಗಾಗಿ ಬೇಡಿಕೆ ಇರಿಸಿದಾಗ ಯಾವುದೇ ಕನಿಕರ ತೋರದೆ "ಎಂಡೋಸಲ್ಫನ್ ಬಾಧಿತರಿಗೆ ಮಾತ್ರ ಅಂಬುಲೆನ್ಸ್ ಸಂಚಾರಕ್ಕೆ ಅನುಮತಿ" ಎಂದು ಸರಸಾಗಾಟಗಿ ತಿರಸ್ಕರಿಸಿ ಪಂಚಾಯತ್ ಅಧಿಕೃತರ ನಿರ್ಲಕ್ಷ್ಯದಿಂದಾಗಿ ಕಿಲೋ ಮೀಟರ್ ಗಟ್ಟಲೆ ದೂರದವರೆಗೆ ರೋಗಿಯ ಪುತ್ರ ಸ್ವತಃ ದ್ವಿಚಕ್ರ ವಾಹನದಲ್ಲಿ ಸಾಗಿಸಿದ್ದರು.
ಬಡ ಜನತೆಯ ಅಳಲು ಕೇಳುವವರಿಲ್ವೇ..?
ಸರಕಾರ ಲಾಕ್ ಡೌನ್ ವಿಧಿಸಿದಾಗ ಯಾವುದೇ ಕುಟುಂಬಕ್ಕೂ ತೊಂದರೆಯಾಗಲು ಬಿಡಬಾರದೆಂದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲಾಗಿದ್ದು ಅನಿವಾರ್ಯ ಪರಿಸ್ಥಿತಿಯ ಬಳಕೆಗಾಗಿ ಅಂಬುಲೆನ್ಸ್ ನೀಡಿ ಸಹಕರಿಸದ ಇಲ್ಲಿನ ಪಂಚಾಯತ್ ಅಡಳಿತ ಬಡ ಜನತೆಗೆ ಇಂತಹ ಸಂದರ್ಭದಲ್ಲಿ ಯಾವ ಸಹಕಾರ ನೀಡಿದಂತಾಗಿದೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಇಲ್ಲಿರುವ ಅಂಬುಲೆನ್ಸ್ ಎಂಡೋಸಲ್ಫನ್ ಬಾಧಿತರಿಗೆ ಮಾತ್ರ ಎಂದು ಕಾನೂನು ಇದ್ದರೂ ತುರ್ತು ಪರಿಸ್ಥಿತಿಯನ್ನು ಈ ನಿಯಮವನ್ನು ಜನೋಪಯೋಗಕ್ಕಾಗಿ ತಿದ್ದುಪಡಿ ಮಾಡಿ ಬಳಸುವ ಅಧಿಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇದೆ. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ರೋಗಿಯ ಸಂಚಾರಕ್ಕೆ ಅನುಮತಿಸದ ಅಧಿಕೃತರ ವಿರುದ್ಧ ಜನಾಂದೋಲನ ಮೂಡಿ ಬರುತ್ತಿದೆ.



0 Comments