ದ್ಯಾಟ್ (DYAT) |ದುಬಾಯಿಯಲ್ಲಿನ ಯಕ್ಷ ತರಬೇತಿಯ ಕಲಾ ವಿದ್ಯಾಲಯ


                         ವಿದೇಶ_ವಿಶೇಷ- 25

ದುಬಾಯಿ: ಮರಳುಗಾಡಿನ ಮಾಯಾನಗರಿಯಾದ ದುಬಾಯಿ ವಿಶ್ವದ ಹೆಸರುವಾಸಿ ಪ್ರವಾಸಿ ಕೇಂದ್ರ ಹಾಗೂ  ಇತ್ತಿಚೀಗಿನ ದಿನದಿಂದ ಸಾಂಸ್ಕ್ರತಿಕ ನಗರಿಯಾಗಿಯೂ ಬೆಳೆಯುತ್ತಿದೆ. ಇದಕ್ಕೆ ಕರಾವಳಿಯ ಕೊಡುಗೆಯೂ ಗಮನಾರ್ಹ. ನಮ್ಮ ನಾಡಿನ ಯಕ್ಷಗಾನ ಕಲೆಯ ಸದ್ದು ಈ ಮರಳುಗಾಡಿನಲ್ಲೂ ಅನುರುಣಿಸುತ್ತಿದೆ ಎಂದರೆ ಅದಕ್ಕಾಗಿ ಅಹರ್ನಿಶಿ ದುಡಿಯುವವರ ಸೇವೆ ಸರ್ವತ್ರ ಶ್ಲಾಘನೀಯ. 

ಇಂದಿನ ವಿದೇಶ ವಿಶೇಷ ಅಂಕಣದಲ್ಲಿ  ದುಬಾಯಿ ಕೇಂದ್ರಿಕರಿಸಿ ಕಾರ್ಯಚರಿಸುವ ಇಂತಹವೊಂದು ಯಕ್ಷ ತರಬೇತಿ ಕೇಂದ್ರದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡುತ್ತಿದ್ದೇವೆ.

ಸುಮಾರು ಮೂರು ನಾಲ್ಕು ದಶಕಗಳ ಹಿಂದೆಯೇ ಪ್ರಸಿದ್ಧ ಬಲಿಪ ನಾರಾಯಣ ಭಾಗವತರ ನೇತೃತ್ವದಲ್ಲಿ ತೆಂಕು ತಿಟ್ಟು ತಂಡ ಪಿ.ವೆಂಕಟ್ರಾಯ ಐತಾಳರ ಸಂಚಾಲಕತ್ವದಲ್ಲಿ ಇಲ್ಲಿ ಪ್ರದರ್ಶನ ನೀಡಿತ್ತು.ಡಾ.ಶಿವರಾಮ ಕಾರಂತರ ನಿರ್ದೇಶನದ ಬಡಗುತಿಟ್ಟು ತಂಡ ಇಲ್ಲಿ ಪ್ರದರ್ಶನ ನೀಡಿದೆ.1989ರಲ್ಲೇ ಶ್ರೀಧರ ಭಂಡಾರಿಯವರಿದ್ದ ತಂಡ ದುಬಾಯಿಯಲ್ಲಿ ಪ್ರದರ್ಶನ ನೀಡಿರುವುದಕ್ಕೆ ದಾಖಲೆ ಇದೆ. ಇಂತಹ ವಿಶ್ವ ಪ್ರಸಿದ್ಧ ತಾಯ್ನಾಡಿನ ಮಣ್ಣಿನ ಕಲೆ ಯಕ್ಷಗಾನದ ಕುರಿತಾಗಿ ಮಕ್ಕಳಿಗೆ -ಹೆತ್ತವರಿಗೆ ಇರುವ ತುಡಿತ- ಮಿಡಿತಗಳನ್ನು ಅರ್ಥವಿಸಿಕೊಂಡು, ಅದಕ್ಕೊಂದು ಸಾಂಸ್ಥಿಕ ನೆಲೆಗಟ್ಟು ಮತ್ತು ದಿಸೆಗಳನ್ನು ಒದಗಿಸುವ ಸದಿಚ್ಛೆಯಿಂದಲೇ ದುಬಾಯಿಯಲ್ಲಿಯೇ ಮೊತ್ತಮೊದಲ ಬಾರಿಗೆ, ಯಕ್ಷಗಾನ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಸಮಾನಾಸಕ್ತ ಯಕ್ಷಗಾನ ಕಲಾಸಕ್ತ ಬಂಧುಗಳೆಲ್ಲಾ ಒಟ್ಟಾಗಿ ಸಂಕಲ್ಪಿಸಿ, ಶ್ರೀಯುತ ದಿನೇಶ ಶೆಟ್ಟಿ ಕೊಟ್ಟಿಂಜರ ನೇತೃತ್ವದಲ್ಲಿ ಕರ್ಯಾರಂಭ ಮಾಡಿದ ಸಂಸ್ಥೆ "ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ".

ದುಬಾಯಿಯಲ್ಲಿ ಅನೌಪಚಾರಿಕವಾಗಿ ಶೇಖರ್ ಡಿ. ಶೆಟ್ಟಿಗಾರರ ಗುರುತ್ವದಲ್ಲಿ ಸರಿ ಸುಮಾರು 2011-2012ನೇ ಸಾಲಿನಿಂದಲೇ ಯಕ್ಷಗಾನ ನಾಟ್ಯ ತರಬೇತಿ ನಡೆಯುತ್ತಿದ್ದರೂ2015-2016 ನೇ ಸಾಲಿನಿಂದ ಅಧಿಕೃತವಾಗಿ“ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ” ಎಂಬ ಹೆಸರಿನಿಂದ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಸಹೋದರರ ನಿವಾಸದಲ್ಲೇ ಪ್ರಥಮವಾಗಿ ಕಾರ್ಯಾರಂಭ ಮಾಡಿತು. ಮುಂದೆ ತರಗತಿಯ ಅನುಕೂಲಕ್ಕಾಗಿ ತರಗತಿಯ ಸಂಚಾಲಕರಾದ ಶ್ರೀಯುತ ದಿನೇಶ ಶೆಟ್ಟಿಯವರ ನಿವಾಸದಲ್ಲಿ ಮುಂದುವರಿಯಿತು. ಆ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ವ್ಯವಸ್ಥಿತವಾದ ತರಗತಿಗಳು ಟ್ಯಾಲೆಂಟ್ ಝೋನ್ ಮ್ಯೂಸಿಕ್ & ಡ್ಯಾನ್ಸ್ ಸೆಂಟರ್, ದುಬೈಯಲ್ಲಿ ಮತ್ತು ಪ್ರಖ್ಯಾತ ವಿದ್ಯಾಲಯ ಬಿಲ್ವ ಸ್ಕೂಲ್ ನಲ್ಲಿ ಮುಂದುವರಿಯಿತು. ಈಗ ಕೊರೋನ ಸಾಂಕ್ರಾಮಿಕ ರೋಗ ಕಾರಣವಾಗಿ  ಆನ್ ಲೈನ್ ನಲ್ಲಿ ನಡೆಯುತ್ತಿದೆ.


ಮುಖ್ಯವಾಗಿ ಹೊರನಾಡಿನಲ್ಲಿ, ಯಾವುದೇ ಕಲಾ ಅಭ್ಯಾಸಿಗಳು ಒಂದೋ –ಎರಡೋ ಕಾರ್ಯಕ್ರಮಗಳ ಉದ್ದೇಶದಿಂದ ಸೀಮಿತ ಅಭ್ಯಾಸ ಮಾಡುವುದು ರೂಢಿ. ಒಂದೊಮ್ಮೆ ಅಭ್ಯಾಸಿಗಳಿಗೆ ಹೆಚ್ಚಿನ ಅಭ್ಯಾಸದ ಇಂಗಿತವಿದ್ದರೂ,ಅದಕ್ಕೆ ಪೂರಕ ಅವಕಾಶಗಳು ದೊರೆಯುತ್ತಿದುದು ಕಡಿಮೆ. ಅದರಲ್ಲೂ ರಾಜಕಲೆಯಾದ ಯಕ್ಷಗಾನದಲ್ಲಿ 
ಮುಂದುವರಿಯಲು ಸಮೂಲಾಗ್ರ ಅಭ್ಯಾಸ –ವಿಸ್ತ್ರತ ಅಧ್ಯಯನ ಅತೀ ಅಗತ್ಯ. ಇದನ್ನು ಮನಗಂಡೇ ಯಕ್ಷಗಾನ ಅಭ್ಯಾಸ ತರಗತಿಯು ವರ್ಷಪೂರ್ತಿ ನಿರಂತರವಾಗಿ ನಡೆವಂತೆ ಯಕ್ಷಗಾನದ ನಾಟ್ಯ -ಹಿಮ್ಮೇಳಗಳ ಮೂಲ ಅಭ್ಯಾಸ, ಹಾಗೇ ಯಕ್ಷಗಾನ ಕುರಿತಾದ ಮತ್ತು ಪೂರಕ ಪಠ್ಯಗಳ ಅಭ್ಯಾಸ, ಮಾಹಿತಿಗಳ ವಿನಿಮಯ, ಪರಂಪರೆಗಳ ಪರಿಚಯ,ಪರಿಶ್ರಮ, ಪರಿವರ್ತನೆ, ಪ್ರದರ್ಶನಗಳ ಹೆಬ್ಬಯಕೆಯನ್ನು ಹೊಂದಿ ಪ್ರಾರಂಭಿಸಲಾಯಿತು.

DYAT (ದ್ಯಾಟ್- ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ) ನಲ್ಲಿ ಸಧ್ಯ ಲಭ್ಯವಿರುವ ವಿಶೇಷ ತರಗತಿಗಳು: 

 •ಯಕ್ಷಗಾನ ನಾಟ್ಯ (ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳು)- ಅಭಿನಯ ತರಬೇತಿ. •ಪೂರ್ವರಂಗ-ಉತ್ತರರಂಗ ವೈವಿಧ್ಯಗಳ ತರಬೇತಿ. 

ವಿಶೇಷ ರಂಗಕ್ರಮಗಳ ಪ್ರಾತ್ಯಕ್ಷಿಕೆ. 

ಆಯ್ದ ಪ್ರಸಂಗ –ರಂಗಪಠ್ಯಗಳ ತರಬೇತಿ.

ರಾಮಾಯಣ-ಮಹಾಭಾರತ ಇತ್ಯಾದಿ ಪುರಾಣ ಕಾವ್ಯ – ಕಥನ ಅಧ್ಯಯನ. 

ಭಾಗವತಿಕೆ ಮತ್ತು ಚೆಂಡೆ-ಮದ್ದಳೆ ತರಬೇತಿ. 

ಪ್ರಸಾಧನ (ಮೇಕಪ್)- ವೇಷಭೂಷಣ ತರಬೇತಿ.  ತಾಳಮದ್ದಳೆ ಅಭ್ಯಾಸ ಕೂಟ. 

ರಜಾಕಾಲದ ವಿಶೇಷ ತರಗತಿ- ಯಕ್ಷಗಾನ ಪೂರಕ ಚಿತ್ರಕಲೆ- ಯೋಗಾಭ್ಯಾಸಗಳ ತರಬೇತಿ. 

ಕನ್ನಡ ತಿಳಿಯದ ಮಕ್ಕಳಿಗೆ ಕನ್ನಡ ಭಾಷಾ ಅಭ್ಯಾಸ ಇತ್ಯಾದಿಗಳು. ಇಷ್ಟೆಲ್ಲಾ ಕೌಶಲ್ಯಗಳ ತರಬೇತಿ ಧರ್ಮಾರ್ಥವಾಗಿ ಯಾವುದೇ ಶುಲ್ಕ ಪಡೆಯದೆ ನಡೆಸಲಾಗುತ್ತದೆ ಎನ್ನುವುದು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಹೆಚ್ಚುಗಾರಿಕೆ.

ಅರ್ಹ ತರಬೇತಿ ಪಡೆದವರಿಗೆ ಅರ್ಹತಾ ಪತ್ರವೂ ಲಭ್ಯ: 

ತರಗತಿಯು ಈಗಾಗಲೇ ಪೂರ್ವ ಪ್ರಾಥಮಿಕ,ಪ್ರಾಥಮಿಕ ವಿಭಾಗ ಮತ್ತು ಪ್ರೌಢ ವಿಭಾಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕೆ ್ಷ ನಡೆಸಿ ಅರ್ಹತಾ ಪತ್ರ ನೀಡುತ್ತಿದೆ.ಅಲ್ಲದೆ ಕರ್ನಾಟಕ ಸರಕಾರ ಪ್ರಯೋಜಿತ ಕರ್ನಾಟಕ ಯಕ್ಷಗಾನ ಅಕಾಡೆಮಿ ನಡೆಸಲುದ್ದೇಶಿಸಿರುವ ಯಕ್ಷಗಾನ ಪರೀಕ್ಷೆಗಳಿಗೆ ಅಕಾಡೆಮಿಯ ಪಠ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯವನ್ನೂ ಮಾಡುತ್ತಿದೆ. ಇದರ ಸದುಪಯೋಗವನ್ನು ಯು.ಎ.ಇ. ಯ ಎಲ್ಲಾ ಕಲಾಸಕ್ತರು ಮಾಡಿಕೊಳ್ಳಬೇಕೆಂಬುದು ಸಂಸ್ಥೆಯ ಮಹತ್ ಉದ್ದೇಶವಾಗಿದೆ.

ಸಮರ್ಥ ಸಾರಥ್ಯ ಹಾಗೂ ಗುರುವೃಂದದ ಸಹಕಾರ :

ಸಂಸ್ಥೆಯು ಶ್ರೀಯುತ ದಿನೇಶ ಶೆಟ್ಟಿ ಕೊಟ್ಟಿಂಜ ರವರ ನೇತೃತ್ವದಲ್ಲಿ ಬಲವಾದ ಸಂಘಟನಾತ್ಮಕ ಕೌಶಲದಿಂದ ಕಳೆದ ಆರು-ಏಳು ವರ್ಷಗಳಿಂದ ‚ಯಕ್ಷಗಾನ ಅಭ್ಯಾಸ ತರಗತಿ‛ ಎಂಬ ಸಂಸ್ಥೆಯ ವತಿಯಿಂದ ಮೇಲೆ ವಿವರಿಸಿದ ಉದ್ದೇಶಗಳ ಈಡೇರಿಕೆಗಾಗಿ ದುಬಾಯಿಯ ಯಕ್ಷಗಾನ ಕಲಾವಿದರು ಹಾಗೂ ಇತರ ಕಲಾ ಪ್ರಕಾರಗಳ ಕಲಾವಿದರ ಜೊತೆಗೆ ಕಲಾಪೋಷಕರು ಒಂದಾಗಿ ಶ್ರಮಿಸುತ್ತಿದ್ದಾರೆ. ತುಳು- ಕನ್ನಡ ಪರ ಸಂಘ-ಸಂಸ್ಥೆಗಳು ಪದಾಧಿಕಾರಿಗಳು ಈ ಮಹತ್ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ.  ಗುರುಗಳ ತಂಡವೂ ಈ ದಿಸೆಯಲ್ಲಿ ಸದೃಢವಾಗಿ ದುಡಿಯುತ್ತಿದೆ. ಪ್ರಸಿದ್ಧ ಯಕ್ಷಗಾನ ಕಲಾವಿದ-ನಮ್ಮ ಸಂಸ್ಥೆಯ ಮುಖ್ಯ  ಗುರುಗಳು ಮತ್ತು ನಿರ್ದೇಶಕರಾಗಿರುವ ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರ ಪರಿಕಲ್ಪನೆಯಲ್ಲಿ ಅರಳಿರುವ ಈ ಸಂಸ್ಥೆಯಲ್ಲಿ ನಾಟ್ಯ ಗುರುಗಳಾಗಿ ಉದಯೋನ್ಮುಖ ಕಲಾವಿದ ಶ್ರೀಯುತ ಶರತ್ ಕುಮಾರ್ ಕುಡ್ಲರವರು ತಂಡವನ್ನು ರೂಪಿಸುವಲ್ಲಿ ಶ್ರಮವಹಿಸಿದರೆ, ಚೆಂಡೆ-ಮದ್ದಳೆ ತರಬೇತಿಯ ನೇತೃತ್ವವನ್ನು ಶ್ರೀಯುತರಾದ ಭವಾನಿಶಂಕರ ಶರ್ಮ, ಲಕ್ಷ್ಮೀಶ ಶರ್ಮ ಮೊದಲಾದವರು ವಹಿಸುತ್ತಿದ್ದಾರೆ. 

ಹೊಸ ಯೋಜನೆಗಳು: ಮುಂದಿನ ದಿನಗಳಲ್ಲಿ ಚಿತ್ರಕಲೆ ತರಬೇತಿಯನ್ನು ಶ್ರೀಯುತ ಗಿರೀಶ್ ನಾರಾಯಣ ಕಾಟಿಪಳ್ಳರವರು ಮುನ್ನಡೆಸಲಿದ್ದಾರೆ. ಕನ್ನಡ ತರಗತಿ- ಛಂದಸ್ಸುಇತ್ಯಾದಿ ತರಬೇತಿಗಳು ಗುರುಗಳಾದ ಶೇಖರ್ ಡಿ. ಶೆಟ್ಟಿಗಾರರ ಅಧ್ಯಾಪನದಲ್ಲಿ ಅವ್ಯಾಹತವಾಗಿ ಮುನ್ನಡೆಯುತ್ತಿದೆ.

                 ಹಲವೆಡೆ ಪ್ರಬುದ್ಧ ಪ್ರದರ್ಶನ: 


ಯಕ್ಷಗಾನ ಅಭ್ಯಾಸ ತರಗತಿ-ದುಬಾಯಿ‛ ಈಗಾಗಲೇ ಸಾಧನಾ ಸಂಭ್ರಮ-2017, ಪಟ್ಲ ಸಂಭ್ರಮ ಮತ್ತು ಸಾಧನಾ ಸಂಭ್ರಮ 2019, ಮಕ್ಕಳ ಯಕ್ಷಗಾನ ಮತ್ತು ತಾಳಮದ್ದಳೆ ಪ್ರದರ್ಶನಗಳ ಮೂಲಕ ಮನೆಮಾತಾಗಿದೆ. 2018ರಿಂದಲೇ ಸತತವಾಗಿ ಪುತ್ತಿಗೆ ವಾಸುದೇವ ಭಟ್ಟರ ಮನೆಯ ಚೌತಿ ಕಾರ್ಯಕ್ರಮದಲ್ಲಿ, ಪುಜೇರ ಭವಾನಿ ಶಂಕರ ಶರ್ಮರ ಪಡಸಾಲೆಯಲ್ಲಿ, ಅಬುಧಾಬಿ ಕರ್ನಾಟಕ ಸಂಘದ ನೇತೃತ್ವದಲ್ಲಿ ಸತತ ತಾಳಮದ್ದಲೆ ಪ್ರದರ್ಶನ ನೀಡಿದೆ. 2019 ಪದ್ಮಶಾಲಿ ದಶಮಾನೋತ್ಸವದ ಅಂಗವಾಗಿ ನಡೆಸಿಕೊಟ್ಟ ನಳ-ದಮಯಂತಿ ಆಖ್ಯಾನ ಜನಮನ್ನಣೆ ಗಳಿಸಿದೆ. ಪರಿಪೂರ್ಣ 
ಬಾಲಕಲಾವಿದರ ತಂಡ ಹೊಂದಿರುವ ಸಂಸ್ಥೆ ಅಬುಧಾಬಿ, ದುಬಾಯಿ, ಶಾರ್ಜಾ ಹೀಗೆ ಅನೇಕ ಕಡೆ ಬಾಲ ಕಲಾವಿದರಿಂದಲೇ ಯಕ್ಷಗಾನ ಪ್ರದರ್ಶನ ನೀಡಿದೆ.   ಮಂಗಳೂರು ಅಡ್ಯಾರ್ ಗಾರ್ಡನ್ನಲ್ಲಿ ನಡೆದ ಪಟ್ಲ ಸಂಭ್ರಮ 2018 ರಲ್ಲಿ ಭಾಗವಹಿಸಿ, ದುಬಾಯಿಯ ಬಾಲ ಕಲಾವಿದರ ಸಮಾಗಮದ ಮೋಹಿನೀ ಏಕಾದಶಿ ಪ್ರಸಂಗ ಪ್ರದರ್ಶಿಸುವ ಮೂಲಕ ಯಕ್ಷಗಾನ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಸಂಪೂರ್ಣ ವಿದೇಶಿ ತಂಡವೊಂದು ಯಕ್ಷಗಾನದ ತವರೂರಿನಲ್ಲಿ ಪ್ರದರ್ಶನ ಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ:-


ಅತ್ಯಂತ ಮಹತ್ವಾಕಾಂಕ್ಷೆಯ ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷಭೂಷಣದ ಕಾರ್ಯಗಾರವನ್ನುದಿನಾಂಕ 13-08-2019 ನೇ ದುಬಾಯಿಯ ಟ್ವಿನ್ ಟವರ್ ನಲ್ಲಿ ಹಮ್ಮಿಕೊಂಡದ್ದು  ಯಕ್ಷ ಅಭ್ಯಾಸಿ ಮಕ್ಕಳಿಗೆ ಮತ್ತು 
ಹೆತ್ತವರಿಗೆಲ್ಲ ಮರೆಯಲಾರದ ಅನುಭವ ನೀಡಿದೆ. ಶ್ರೀಯುತ ಗಣೇಶ ರೈ , ರವಿ ಶೆಟ್ಟಿಗಾರ ಕಾರ್ಕಳ, ದಯಾನಂದ  ಹೆಬ್ಬಾರ್ ಮುಂತಾದವರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸಿದ್ದಾರೆ.

"ಯಕ್ಷಯೋಧಾಸ್ ದುಬಾಯಿ":  ಯಕ್ಷಗಾನ ಅಭ್ಯಾಸ ತರಗತಿಯು ದುಬಾಯಿಯಲ್ಲಿ ಊರಿನ ಗ್ರಾಮೀಣ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ, ಕಾರ್ಯಕರ್ತರೆಲ್ಲರ ಆಶಯದಂತೆ ಯಕ್ಷಯೋಧಾಸ್ ದುಬಾಯಿ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದೆ.

2020ನೇ ಸಾಲಿನಲ್ಲಿ ದುಬಾಯಿ ಇಟ್ಟಿಹಾಡ್ ಸ್ಕೂಲ್ ಮೈದಾನದಲ್ಲಿ ಮಂಗಳೂರು ಕ್ರಿಕೆಟ್ ಎಂದೇ ಖ್ಯಾತವಾದ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನೆಮೆಂಟ್ ಆಯೋಜಿಸಿದೆ. ವಿವಿಧ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಭಾಗವಹಿಸಿ ಪ್ರವರ್ಧಮಾನಕ್ಕೆ ಬರುತ್ತಿದೆ. ಹತ್ತು ಹಲವು ಯೋಜನೆಗಳು ಇನ್ನು ಮುಂದೆ ಸಕಾರಗೊಳ್ಳಲಿದೆ.

ಸಕುಟುಂಬಿಕರಾದ ಕಲಾವಿದರ ಸಂಘ: ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯಲ್ಲಿನ ವಿದ್ಯಾರ್ಥಿಗಳ ಹೆತ್ತವರು ಕರ್ನಾಟಕ ಕರಾವಳಿಯವರೇ ಆದರೂ ದುಬಾಯಿಯಲ್ಲೇ ಹುಟ್ಟಿ ಬೆಳೆದು ಇಲ್ಲಿಯ ಇಂಗ್ಲಿಷ್ಮೀ  ಮಿಡಿಯಂ ಸ್ಕೂಲಿಗೆ ಹೋಗುತ್ತಾ ಹೆಚ್ಚಿನವರ ಮನೆಯಲ್ಲೂ ಇಂಗ್ಲಿಷೇ ವ್ಯವಹಾರ ಭಾಷೆಯಾಗಿ ಚಲಾವಣೆಯಾಗುತ್ತಿದ್ದರೂ,ಕನ್ನಡವೇನೆಂದೇ ಅರಿಯದ ದುಬಾಯಿ ಪುಟಾಣಿಗಳು ಯಕ್ಷಗಾನ ಮೂಲಕ ಕನ್ನಡ ಪರಿಚಯ ಬೆಳೆಸಿಕೊಂಡು, ತಮ್ಮಅಸಾಧಾರಣ ಪ್ರತಿಭೆ-ಸತತ ಪರಿಶ್ರಮಗಳ ಮೂಲಕ ಯಕ್ಷರಂಗದಲ್ಲಿ ಮಿಂಚುತ್ತಿರುವ ಸಾಧನೆ ಯಕ್ಷ ರಂಗದ ಅಭೂತಪೂರ್ವ ಸಾಧನೆಯಾಗಿದೆ.


ಹೆಚ್ಚಿನವರು ಇಲ್ಲಿ ಅಭ್ಯಾಸ ಪ್ರಾರಂಭಿಸಿದವರು, ಇನ್ನು ಕೆಲವರು ತಾಯ್ನಾಡಿನಲ್ಲೇ ಯಕ್ಷಗಾನ ಅಭ್ಯಾಸ ಮಾಡಿದವರಾದರೆ ಕೆಲವರು ಇಲ್ಲಿ ಮತ್ತು ಊರಿನಲ್ಲಿ ಈಗಾಗಲೇ ಪಾತ್ರ ನಿರ್ವಹಣೆ ಮಾಡಿದವರು ಈ ಸಂಸ್ಥೆ ಪ್ರಾರಂಭವಾದ ನಂತರ ಇದರ ಮೂಲಕ ಅಭ್ಯಾಸ ಮುಂದುವರಿಸಿ  ವೇದಿಕೆ ಏರಿದವರು ಇದ್ದಾರೆ.ದುಬಾಯಿ ಯಕ್ಷಗಾನ ತರಗತಿಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಹಿರಿಯ ಕಲಾವಿದರು, ಮಹಿಳಾ ಕಲಾವಿದರು ಮತ್ತು ಬಾಲ ಕಲಾವಿದರು ಅನೇಕರಿದ್ದಾರೆ. ಅಭ್ಯಾಸ ತರಗತಿಯ ಕುಟುಂಬದಲ್ಲಿ ಅನೇಕರು ಸಕುಟುಂಬಿಕರಾಗಿ ಭಾಗವಹಿಸುತ್ತಿದ್ದಾರೆ. ತಂದೆ-ಮಕ್ಕಳ ಜೋಡಿ, ತಾಯಿ-ಮಕ್ಕಳ ಜೋಡಿ, ಗಂಡ-ಹೆಂಡತಿ ಜೋಡಿ, ಸಹೋದರ-ಸಹೋದರಿಯರ ಜೋಡಿ ಹೀಗೆ ಕೌಟುಂಬಿಕ ಯಕ್ಷ ಕಲಾ ಪ್ರೀತಿ ಈ ಸಂಸ್ಥೆಗೊಂದು ಹೆಮ್ಮೆಯ ವಿಚಾರವಾಗಿದೆ. 

ಅಂತಹ ಅಮೂಲ್ಯ ಕಲಾವಿದರ ಅಮೂಲಾಗ್ರ ಪರಿಚಯವನ್ನು ಮುಂದಿನ ಸಂಚಿಕೆಯಲ್ಲಿ ಅನಾವರಣಗೊಳಿಸಲಿದ್ದೇವೆ. ಈ ಸಂಸ್ಥೆಯನ್ನು ಪ್ರೋತ್ಸಾಹಿಸುವವರು +97150 896 8565 ದೂರವಾಣಿ ನಂಬ್ರದಲ್ಲಿ ಸಂಪರ್ಕಿಸಬಹುದು.

  (ಮುಂದುವರಿಯುವುದು....)


ಬರಹ : ವಾಸು ಬಾಯಾರ್ (ಚಲನಚಿತ್ರ ನಟ, ಯಕ್ಷಗಾನ,ರಂಗ ಕಲಾವಿದರು)



Post a Comment

0 Comments