ವಿದೇಶ_ವಿಶೇಷ- 26
ದುಬಾಯಿ: ಮರಳುಗಾಡಿನ ಮಾಯಾನಗರಿಯಾದ ದುಬಾಯಿಯಲ್ಲಿ ಸಾಂಸ್ಕ್ರತಿಕ ರಂಗಕ್ಕೆ ಕೊಡುಗೆ ನೀಡುತ್ತಿರುವ ದುಬಾಯಿ ಯಕ್ಷಗಾನ ಅಭ್ಯಾಸ ತರಬೇತಿ ದ್ಯಾಟ್ (DYAT) ಬಗ್ಗೆ ಕಳೆದ ಸಂಚಿಕೆಯಲ್ಲಿ ಓದಿ ತಿಳಿದಿದ್ದೇವೆ. ಇದೀಗ ಸಂಸ್ಥೆಯ ಕಲಾ ಪಯಣದಲ್ಲಿ ಜತೆಗಿರುವ ಯಕ್ಷ ಪ್ರತಿಭಾನ್ವಿತರ ಸಮಗ್ರ ಪರಿಚಯವನ್ನು ಈ ಬಾರಿ ನಿಮ್ಮ ಮುಂದಿಡುತ್ತಿದ್ದೇವೆ.
ನಮ್ಮ ನಾಡಿನ ಯಕ್ಷಗಾನ ಕಲೆಯ ಸದ್ದು ದುಬಾಯಿ ಎಂಬ ಮರಳುಗಾಡಿನಲ್ಲೂ ಅನುರುಣಿಸಲು ಕಾರಣಭೂತರಾದ ಇವರಲ್ಲಿ ಹೆಚ್ಚಿನವರ ಹೆತ್ತವರು ಕರ್ನಾಟಕ ಕರಾವಳಿಯವರೇ ಆದರೂ ದುಬಾಯಿಯಲ್ಲೇ ಹುಟ್ಟಿ ಬೆಳೆದ ಮಕ್ಕಳು ಇಲ್ಲಿನ ಇಂಗ್ಲಿಷ್ಮೀ ಡಿಯಂ ಸ್ಕೂಲಿಗೆ ಹೋಗುತ್ತಾ ಹೆಚ್ಚಿನವರ ಮನೆಯಲ್ಲೂ ಇಂಗ್ಲಿಷೇ ವ್ಯವಹಾರ ಭಾಷೆಯಾಗಿ ಚಲಾವಣೆಯಾಗುತ್ತಿದ್ದರೂ, ಕನ್ನಡವೇನೆಂದೇ ಅರಿಯದ ದುಬಾಯಿ ಪುಟಾಣಿಗಳು ಯಕ್ಷಗಾನ ಮೂಲಕ ಕನ್ನಡ ಪರಿಚಯ ಬೆಳೆಸಿಕೊಂಡು, ತಮ್ಮಅಸಾಧಾರಣ ಪ್ರತಿಭೆ-ಸತತ ಪರಿಶ್ರಮಗಳ ಮೂಲಕ ಯಕ್ಷರಂಗದಲ್ಲಿ ಮಿಂಚಿದ ಕಥೆಯೇ ವಿಸ್ಮಯ ಮೂಡಿಸುವಂತಿದೆ.ದುಬಾಯಿ ದ್ಯಾಟ್ (DYAT) ನಲ್ಲಿ ಅಭ್ಯಸಿಸುವವರಲ್ಲಿ ಹೆಚ್ಚಿನವರು ಇಲ್ಲಿಯೇ ಅಭ್ಯಾಸ ಪ್ರಾರಂಭಿಸಿದವರು, ಇನ್ನು ಕೆಲವರು ತಾಯ್ನಾಡಿನಲ್ಲೇ ಯಕ್ಷಗಾನ ಅಭ್ಯಾಸ ಮಾಡಿದವರಾದರೆ ಕೆಲವರು ಇಲ್ಲಿ ಮತ್ತು ಊರಿನಲ್ಲಿ ಈಗಾಗಲೇ ಪಾತ್ರ ನಿರ್ವಹಣೆ ಮಾಡಿದವರು ಈ ಸಂಸ್ಥೆ ಪ್ರಾರಂಭವಾದ ನಂತರ ಇದರ ಮೂಲಕ ಅಭ್ಯಾಸ ಮುಂದುವರಿಸಿ ವೇದಿಕೆ ಏರಿದವರಿದ್ದಾರೆ. ಪ್ರತ್ಯೇಕ ಕಲಾವಿದರ ಪರಿಚಯ ಮಾಡುವಾಗ ಅವರ ವೈಯಕ್ತಿಕ ಭಾಗವಹಿಸುವಿಕೆಯ ದಾಖಲೆಯನ್ನು ಒದಗಿಸುವ ಮೂಲಕ ಈ ತಂಡದಲ್ಲಿ ತೊಡಗಿಸಿಕೊಂಡವರ ಸಮೂಲಾಗ್ರ ಪರಿಚಯವನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಭವಾನಿಶಂಕರ ಶರ್ಮ
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ವೇಷಧಾರಿಗಳು,ಮದ್ದಳೆಗಾರರು ಮತ್ತು ಚೆಂಡೆ-ಮದ್ದಳೆ ಗುರುಗಳಾಗಿಯೂ ಉಪಯುಕ್ತ ಸೇವೆ ಸಲ್ಲಿಸಿದವರು.ವೈದಿಕ ಪರಂಪರೆಯ ಕೃಷ್ಣ ಶರ್ಮ ಮತ್ತು ಸರೋಜಿನಿ ಶರ್ಮ ಇವರ ಮಗನಾಗಿ ನವೆಂಬರ್ 10 1963ರಂದು ಜನಿಸಿದರು. ಸಂಗೀತ ಮತ್ತು ಭರತನಾಟ್ಯ ಕಲಾವಿದೆಯೂ, ಶಿಕ್ಷಕಿಯಾಗಿಯೂ ಪರಿಶ್ರಮ ಉಳ್ಳ ಶ್ರೀಮತಿ ದಿವ್ಯ ಇವರ ಧರ್ಮಪತ್ನಿ. ಇವರ ತಂದೆ ಮತ್ತು ಹಿರಿಯ ಸಹೋದರರು ಕೂಡ ಅರ್ಥಧಾರಿಯಾಗಿ ಮತ್ತು ಚೆಂಡೆ-ಮದ್ದಳೆ ಭಾಗವತಿಗೆಯಲ್ಲಿ ಪರಿಶ್ರಮ ಉಳ್ಳವರು. ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಪ್ರಧಾನ ಪ್ರಾಚಾರ್ಯರೆಂದೇ ಖ್ಯಾತರಾದ ದಿವಂಗತ ಗುರಿಕಾರ ನಿಡ್ಲೆ ನರಸಿಂಹ ಭಟ್ ಮತ್ತು ಜಯಪ್ರಕಾಶ ನಿಡ್ವಣ್ಣಾಯರಲ್ಲಿ ಶಿಷ್ಯವೃತ್ತಿ ಮಾಡಿ ಹಿಮ್ಮೇಳದ ಪಟ್ಟು ಮಟ್ಟುಗಳನ್ನು ಕರಗತ ಮಾಡಿಕೊಂಡವರು. ಧರ್ಮಸ್ಥಳ ಯಕ್ಷಗಾನ ಕೇಂದ್ರದ ಸಂಪರ್ಕ ಹಾಗೂ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ರ ಪಾಠ ಪ್ರವಚನಗಳಿಂದ ಪ್ರೇರಿತರಾಗಿ ಸ್ವತಃ ಪರಿಶ್ರಮದಿಂದ ವೇ಼ಷಧಾರಿಯಾಗಿ ಮುಂಚೂಣಿಗೆ ಬಂದವರು.
ಶ್ರೀದೇವೀಮಹಾತ್ಮೆ ಮತ್ತು ಕಟೀಲು ಕ್ಷೇತ್ರ ಮಹಾತ್ಮೆಯ ಶ್ರೀದೇವಿಯಾಗಿ ಶರ್ಮರದ್ದು ದುಬಾಯಿ ಯಕ್ಷಗಾನ ರಂಗ ಭೂಮಿಯಲ್ಲಿ ದಾಖಲಾರ್ಹ ಪ್ರದರ್ಶನ. ಮಾನಿಷಾದ ಪ್ರಸಂಗದ ರಾಮ,ತ್ರಿಜನ್ಮಮೋಕ್ಷದ ಬಣ್ಣದ ವೇಷದ ರಾವಣ, ಚಕ್ರೇಶ್ವರ ಪರೀಕ್ಷಿತದ ಧರ್ಮರಾಯ, ರತಿ ಕಲ್ಯಾಣದ ಮೇಘಸ್ತನಿ, ದೇವೀ ಮಹಾತ್ಮೆಯ ದೇವೇಂದ್ರ ಇತ್ಯಾದಿ ವೈವಿಧ್ಯಮಯ ಪಾತ್ರಗಳ ಮೂಲಕ ದುಬಾಯಿ ಯಕ್ಷರಂಗದಲ್ಲಿ ಕಾಣಿಸಿಕೊಂಡವರು. ಈಗಾಗಲೇ ಯಕ್ಷರಂಗದಲ್ಲಿ ಹವ್ಯಾಸಿ ಕಲಾವಿದನಾಗಿ ಸರಿ ಸುಮಾರು 23-24 ವರ್ಷಗಳಷ್ಟು ಸುದೀರ್ಘ ಅವಧಿಯ ರಂಗದ ದುಡಿದ ಹಿರಿಮೆ ಶ್ರೀಯುತರದ್ದು.
ಅನಿಕೇತ್ ಬಿಯಸ್ ಶರ್ಮ:
ಶ್ರೀಯುತ ಭವಾನಿಶಂಕರ ಶರ್ಮ ಮತ್ತು ಶ್ರೀಮತಿ ದಿವ್ಯ ಭವಾನಿಶಂಕರ ಶರ್ಮ ದಂಪತಿಗಳ ಮಗ. ೨೪ ಜನವರಿ 2002ರಂದು ಜನಿಸಿದರು. ಕೋಟಿ ಚೆನ್ನಯದ ಕೋಟಿ ಪಾತ್ರದ ಮೂಲಕ ರಂಗಪ್ರವೇಶ ಮಾಡಿದ ಇವರು ದೇವೇಂದ್ರ ಬಲ ಇತ್ಯಾದಿ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚಿದ ಅನಿಕೇತ ಶರ್ಮ ಮುಂದೆ ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ವೇಷಗಳಲ್ಲಿಯೂ ಪ್ರಖ್ಯಾತಿ ಪಡೆದ ಪ್ರತಿಭೆ.
ಮಣಿಕಂಠ ಮಹಿಮೆಯ ವೀರಭದ್ರ, ವಿರೋಚನ ಕಾಳಗದ ವರಾಹ ಮುಂತಾದ ಬಣ್ಣದ ವೇಷಗಳಲ್ಲಿ ಪಾತ್ರಗಳನ್ನು ಆಕರ್ಷಕವಾಗಿ ಮಾಡಬಲ್ಲ ಜಾಣ್ಮೆ ಈತನದ್ದು.ಸ್ವಲ್ಪ ಮಟ್ಟಿನ ಮದ್ದಳೆವಾದನದ ತರಬೇತಿಯನ್ನೂ ತಂದೆಯವರಿಂದಲೇ ಪಡಿದಿದ್ದಾರೆ. ತನ್ನ 12 ನೇ ತರಗತಿ ತೇರ್ಗಡೆಯಾಗಿರುವ ಇವರು ವೈದ್ಯಕೀಯ ವ್ಯಾಸಂಗಕ್ಕಾಗಿ ಹುಟ್ಟೂರಲ್ಲಿದ್ದಾರೆ. ಯಕ್ಷಗಾನ ಮಾತ್ರವಲ್ಲದೆ ಇತರ ಕಲಾ ಪ್ರಕಾರಗಳಲ್ಲಿಯೂ ಅಭ್ಯಾಸ ನಡೆಸುತ್ತಿದ್ದಾರೆ. ಶ್ರೀ ಕಾರ್ತಿಕ್ ಮೆನನ್ಮ ತ್ತು ಸ್ವತಃ ತಾಯಿಯವರಿಂದ ಸಂಗೀತ, ಶ್ರೀ ರಾಜೇಂದ್ರ ಮತ್ತು ತಂದೆಯವರಿಂದ ಮೃದಂಗ ಮಾತ್ರವಲ್ಲದೆ ತಂದೆಯವರ ಗರಡಿಯಲ್ಲಿ ತಬಲ ವಾದನದಲ್ಲೂ ಪಳಗುತ್ತಿದ್ದಾರೆ.
ಮನಸ್ವಿನಿ ಬಿಯಸ್ ಶರ್ಮ:
ಶ್ರೀಯುತ ಭವಾನಿಶಂಕರ ಶರ್ಮ ಮತ್ತು ಶ್ರೀಮತಿ ದಿವ್ಯ ಭವಾನಿಶಂಕರ ಶರ್ಮ ದಂಪತಿಗಳ ಮಗಳು ಮನಸ್ವಿನಿ ಶರ್ಮ. 2005ರ ಅಕ್ಟೋಬರ್ 12 ರಂದು ಜನಿಸಿದ ಈಕೆ ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕಟೀಲು ಕ್ಷೇತ್ರ ಮಹಾತ್ಮ್ಯೆಯ ದೇವತೆ, ಮಾನಿಷಾದ ಪ್ರಸಂಗದ ಬಾಲ ದಕ್ಷ, ಚಕ್ರೇಶ್ವರ ಪರೀಕ್ಷಿತದ ಯಾದವರು,ಕಟೀಲು ಕ್ಷೇತ್ರ ಮಹಾತ್ಮ್ಯೆಯಲ್ಲಿ ಮೋಹಿನಿ ಮತ್ತಿನ್ನಿತರ ಪಾತ್ರಗಳಲ್ಲಿ ಮಿಂಚಿದವರು. ಬಾಲಕಲಾವಿದರ ತಂಡ ಮಂಗಳೂರು ಅಡ್ಯಾರ್ ಗಾರ್ಡನ್ ನಲ್ಲಿ ಪ್ರದರ್ಶಿಸಿದ ಮೋಹಿನೀ ಏಕಾದಶಿಯಲ್ಲಿ ಸಂಧ್ಯಾವಳೀ ಪಾತ್ರ ನಿರ್ವಹಿಸಿ ಹುಟ್ಟೂರ ಕಲಾಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ತಮ್ಮವೈವಿಧ್ಯಮಯ ಪಾತ್ರ ನಿರ್ವಹಣೆಯ ಮೂಲಕ ದುಬಾಯಿಯ ಯಕ್ಷರಸಿಕರನ್ನು ರಂಜಿಸಿ ತಾನೊಬ್ಬಳು ಪ್ರತಿಭಾವಂತ ಕಲಾವಿದೆ ಯೆಂಬುದನ್ನು ಪ್ರಚುರ ಪಡಿಸಿದ್ದಾರೆ. ತಂದೆಯವರ ಗರಡಿಯಲ್ಲಿ ಪಳಗಿ ಚೆಂಡೆ ವಾದನದ ಪ್ರಾಥಮಿಕ ಪರಿಣತಿ ಪಡೆದುಕೊಂಡಿದ್ದಾರೆ.
ವೆಂಕಟೇಶ್ ಶಾಸ್ತ್ರಿ ಪುತ್ತಿಗೆ
ಪುತ್ತಿಗೆ ರಾಮಚಂದ್ರ ಶಾಸ್ತ್ರಿ– ಜಾನಕಿ ಆರ್ ಶಾಸ್ತ್ರಿ ದಂಪತಿಯವರ ಪುತ್ರನಾಗಿರುವ ವೆಂಕಟೇಶ ಶಾಸ್ತ್ರಿಯವರು 1966 ಅಕ್ಟೋಬರ್ 12ರಂದು ಜನಿಸಿದರು. ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ನಲ್ಲಿ ಬಿ.ಇ. ಪದವೀಧರರಾದ ಇವರು ಗುರುಗಳಾದ ಗುರುಪುರ ಅಣ್ಣಿ ಭಟ್, ಮಧೂರು ಲಕ್ಷ್ಮಿ ನಾರಾಯಣ ಶರ್ಮ ಅವರಿಂದ ಚೆಂಡೆ-ಮದ್ದಳೆ ಕಲಿತು ಓರ್ವ ಸಮರ್ಥ ಹವ್ಯಾಸೀ ಚೆಂಡೆ –ಮದ್ದಳೆ ವಾದಕರಾಗಿ ಪ್ರಸಿದ್ಧರಾಗಿದ್ದಾರೆ.
ದುಬಾಯಿಯಲ್ಲಿ ನಡೆಯುತ್ತಿರುವ ಪ್ರತಿ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಸಹಕರಿಸುತ್ತಿರುವ ಶ್ರೀಯುತರು ಹಿರಿಯ ಬಲಿಪ ನಾರಾಯಣ ಭಾಗವತರು, ಪುರುಷೋತ್ತಮ ಪೂಂಜ, ದಿನೇಶ್ ಅಮ್ಮಣ್ಣಾಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಪಟ್ಲ ಸತೀಶ್ ಶೆಟ್ಟಿ,ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ, ಅಡೂರು ಗಣೇಶ್ ರಾವ್, ಪದ್ಮನಾಭ ಉಪಾಧ್ಯಾಯರು, ಮೋಹನ್ ಶೆಟ್ಟಿಗಾರ್ ಮಿಜಾರು, ದಯಾನಂದ ಶೆಟ್ಟಿಗಾರ್ ಮಿಜಾರು ಮೊದಲಾದ ಹಿರಿಯ – ಕಿರಿಯ ಹಿಮ್ಮೇಳದ ಕಲಾವಿದರ ಜೊತೆ ಸಾಥ್ ನೀಡಿದ್ದಾರೆ. ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಸಂಸ್ಥೆಯಲ್ಲಿ ಸಕ್ರಿಯ ಸದಸ್ಯರಾದ ಶ್ರೀಯುತರು ಯಕ್ಷಗಾನದ ಸಂಪೂರ್ಣ ಪರಿಜ್ಞಾನ ಹೊಂದಿದ ಓರ್ವ ಹವ್ಯಾಸಿ ಕಲಾವಿದರಾಗಿದ್ದಾರೆ. ಅಂಬಾ ವೆಂಕಟೇಶ ಶಾಸ್ತ್ರಿಇವರ ಧರ್ಮಪತ್ನಿ ಶ್ರೀ ಚರಣ ಶಾಸ್ತ್ರಿ, ಶರಣ್ಯ ಶಾಸ್ತ್ರಿ (ಕಲಾವಿದೆ ) ಮಕ್ಕಳಾಗಿದ್ದಾರೆ.
ಶರಣ್ಯ ಪುತ್ತಿಗೆ:
ದುಬಾಯಿ ಯಕ್ಷರಂಗದಲ್ಲಿ ಮದ್ದಳೆಗಾರರಾಗಿ ಮಿಂಚುವ ಪುತ್ತಿಗೆ ವೆಂಕಟೇಶ ಶಾಸ್ತ್ರಿಮತ್ತು ಮುಚ್ಚೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು ಮತ್ತು ತೆಂಕುತಿಟ್ಟಿನ ಪ್ರಖ್ಯಾತ ಮೇಳಗಳಲ್ಲಿ ಒಂದಾದ ಮುಚ್ಚೂರು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ನಡೆಸಿ ಕೀರ್ತಿಪಡೆದ ಕುಟುಂಬದ ಸದಸ್ಯೆ ಶ್ರೀಮತಿ ಅಂಬಾ ವೆಂಕಟೇಶ ಶಾಸ್ತ್ರಿ ದಂಪತಿಗಳ ಮಗಳು. 1999 ಮೇ 13ರಂದು ಜನಿಸಿದರು.
ಬಿಟೆಕ್ ಬಯೋ ಮೆಡಿಕಲ್ ಇಂಜಿನಿಯರಿಂಗ್ ಪದವೀಧರೆಯಾದ ಇವರು ಕಳೆದ ಒಂಭತ್ತು ವರ್ಷಗಳಿಂದ ಯಕ್ಷಗಾನ ನಾಟ್ಯ ಭಾಗವತಿಕೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ತಾನು 2ನೆಯ ಇಯತ್ತೆಯಲ್ಲಿ ವ್ಯಾಸಂಗ ಮಾಡುವಾಗಲೇ ಯಕ್ಷಗಾನದಿಂದ ಆಕರ್ಷಿಸಲ್ಪಟ್ಟು ಕೋಟಿ ಚೆನ್ನಯದಲ್ಲಿ ಚೆನ್ನಯ ಪಾತ್ರದ ಮೂಲಕ ರಂಗ ಪ್ರವೇಶ ಮಾಡಿದವರು. ದೇವೀ ಮಹಾತ್ಮ್ಯೆಯ ಸುಮನಸ, ತ್ರಿಜನ್ಮಮೋಕ್ಷದ ಪ್ರಹ್ಲಾದ, ಕಟೀಲು ಕ್ಷೇತ್ರ ಮಹಾತ್ಮ್ಯೆಯ ನಂದಿನಿ, ಭಸ್ಮಾಸುರ ಮೋಹಿನಿ ಮತ್ತು ವಿರೋಚನ ಕಾಳಗದ ವಿಷ್ಣು, ಮಾನಿಷಾದದ ನಾರದ ಮತ್ತು ಕ್ರೌಂಚಪಕ್ಷಿ, ರತಿ ಕಲ್ಯಾಣದ ರತಿ, ಚಕ್ರೇಶ್ವರ ಪರೀಕ್ಷಿತದ ವಜ್ರ ಮತ್ತು ಆಸ್ತಿಕ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಬಾಲಕಲಾವಿದರ ತಂಡ ಅಡ್ಯಾರ್ ಗಾರ್ಡನ್ ನಲ್ಲಿ ಪ್ರದರ್ಶಿಸಿದ ಮೋಹಿನೀ ಏಕಾದಶಿಯಲ್ಲಿ ಮಹಾವಿಷ್ಣುವಿನ ಪಾತ್ರ ನಿರ್ವಹಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಸ್ವತಃ ಮೇಕಪ್ ಮಾಡಿಕೊಳ್ಳುವ ಪ್ರೌಢಿಮೆಯೂ ಇವರಿಗಿದೆ.ತಮ್ಮ 12ನೇ ವಯಸ್ಸಿನಲ್ಲೇ ಮಾಡಿದ ಪ್ರಹ್ಲಾದನ ಪಾತ್ರ ದುಬಾಯಿ ಯಕ್ಷಪ್ರೇಮಿಗಳ ಮನಸೂರೆಗೊಂಡ ಪರಿ, ನಂದಿನಿ ಪಾತ್ರದ ಮೂಲಕ ತನ್ನ ಸ್ಪುಟವಾದ ಕನ್ನಡದ ಮೂಲಕ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಮೆಚ್ಚುಗೆಗೆ ಪಾತ್ರರಾದುದು ನೆನಪಿಸಲೇ ಬೇಕಾದ ಸಂಧರ್ಭಗಳು. ಗುರುಗಳಾದ ಶೇಖರ ಡಿ. ಶೆಟ್ಟಿಗಾರ್, ಕಿಶೋರ್ ಗಟ್ಟಿ, ಶರತ್ ಕುಡ್ಲ , ದೀಪಕ್ ರಾವ್ ಪೇಜಾವರ ಅವರಿಂದ ನಾಟ್ಯ ಅಭ್ಯಾಸ ಮಾಡಿದ್ದಾರೆ. ಸಂಗೀತಭ್ಯಾಸ ಮಾಡಿರುವ ಇವರಿಗೆ ಭಾಗವತಿಕೆಯಲ್ಲಿಯೂ ಆಸಕ್ತಿಯಿದೆ. ಯಕ್ಷಗಾನ ಅಭ್ಯಾಸ ತರಗತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಶರಣ್ಯ ಶಾಸ್ತ್ರಿಯವರದ್ದು ಯಾವತ್ತೂ ಪ್ರಥಮ ದರ್ಜೆಯ ಪರಿಪೂರ್ಣತೆ. ಇವರ ನುರಿತ ನಾಟ್ಯ, ಸ್ಪಷ್ಟ ಕನ್ನಡ ಉಚ್ಛಾರ ಪಾತ್ರದ ಭಾವಾಭಿನಯ, ಗುರುಗಳು ಹೇಳಿಕೊಟ್ಟದನ್ನು ಕ್ಷಣ ಮಾತ್ರದಲ್ಲಿ ಪ್ರಸ್ತುತಪಡಿಸುವ ಏಕಪಾಠಿತ್ವ ಇವರ ವೈಶಿಷ್ಠ್ಯ. ಏಕಲವ್ಯನಂತೆ ಭಾಗವತಿಕೆ ಅಭ್ಯಾಸ ಮಾಡಿದ ಇವರು ಪಟ್ಲ ಸತೀಶ್ ಶೆಟ್ಟಿ ಭಾಗವತರಲ್ಲಿನ ಗುರು ಭಾವನೆ, ತನ್ನ ಭಾಗವತಿಕೆಗೆ ಪ್ರೇರಣೆ ಎಂಬುದಾಗಿ ಮನಬಿಚ್ಚಿ ನುಡಿಯುತ್ತಾರೆ ಮಾತ್ರವಲ್ಲ ಅವರು ಹಾಡಿದ ಹಾಡುಗಳನ್ನು ಅನುಸರಿಸಿಯೇ ಒಂದೆರಡು ಹಾಡುಗಾರಿಕೆ ಪ್ರಸ್ತುತಿಯನ್ನು ಮಾಡಿದ್ದೇನೆ ಎಂದು ವಿನಮ್ರರಾಗಿ ತಿಳಿಸುತ್ತಾರೆ. ತಾನು ಅಭಿನಯಿಸಿದ ಪಾತ್ರಗಳಲ್ಲಿ ಪ್ರಹ್ಲಾದ, ನಂದಿನಿ, ರತಿವೇ಼ಷಗಳು ಮನಮೆಚ್ಚಿದ ಪಾತ್ರಗಳಾಗಿದೆ ಎನ್ನುತ್ತಾರೆ. ಯಕ್ಷಗಾನವಲ್ಲದೆ ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳಲ್ಲೂ ತನ್ನ ಪ್ರತಿಭೆ ಮೆರೆದಿದ್ದಾರೆ. ಶ್ರೀಮತಿ ಸುಮಾಲಕ್ಷ್ಮಿ ನಾರಾಯಣ ಅವರಲ್ಲಿ ಕರ್ನಾಟಕೀ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಎಂಟು ವರ್ಷಗಳಿಂದ ಅಭ್ಯಾಸ ಮಾಡುತ್ತಿರುವ ಶರಣ್ಯರವರು, ಅನೇಕ ವೇದಿಕೆಯನ್ನು ಹಂಚಿಕೊಂಡವರಾಗಿದ್ದಾರೆ. ತನ್ನ ಕಲಾಜೀವನಕ್ಕೆಪ್ರೋತ್ಸಾಹ,ಮಾರ್ಗದರ್ಶನ ನೀಡುತ್ತಿರುವ ತಂದೆ ತಾಯಿಗಳನ್ನು ಸದಾಸ್ಮರಿಸುವ ಶರಣ್ಯ ಶಾಸ್ತ್ರಿಗೆ ಕಲಿಕೆಯ ಜೊತೆಗೆ ಯಕ್ಷಗಾನದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲ. ತಂದೆ-ತಾಯಿಯವರಿಗೆ ಇರುವ ಯಕ್ಷಗಾನದ ಒಲವು ನನ್ನಲ್ಲೂ ಬೆಳೆಯುವುದಕ್ಕೆ ಕಾರಣರಾದವರು ನನ್ನ ಹೆತ್ತವರು ಮಾತ್ರವಲ್ಲದೆ ತಾಯ್ನಾಡಿನ ಮಣ್ಣಿನ ಕಲೆಯಾದ ಯಕ್ಷಗಾನ ಕಲೆಯಲ್ಲಿ ನಾನು ಬೇರೂರುವುದಕ್ಕೆ ಅವರ ಸತತ ಪ್ರೋತ್ಸಾಹ ಮಾರ್ಗದರ್ಶನ ಕಾರಣ ಎನ್ನುತ್ತಾರೆ. ಪ್ರಥಮ ಪ್ರವೇಶದ ದೇವೀಮಹಾತ್ಮ್ಯೆಯ ಪಾತ್ರ ನನ್ನ ಪಾಲಿಗೆ ಅನುಗ್ರಹರೂಪದಲ್ಲಿ ದೊರೆತು, ಮುಂದೆ ಸವಾಲೆಸೆಯುವ ಪಾತ್ರಗಳ ನಿರ್ವಹಣೆಗೆದಾರಿಯಾಯಿತೆನ್ನುತ್ತಾರೆ. ಭಾಗವತರಾದ ಶ್ರೀ ಪಟ್ಲ ಸತೀಶ ಶೆಟ್ಟಿ ನನ್ನ ಯಕ್ಷಗಾನ ಪಯಣಕ್ಕೆ ಪ್ರೇರಣೆ ಮತ್ತು ಆದರ್ಶಪ್ರಾಯರು. ಆ ಕಾರಣವೇ ನಾನು ನನ್ನ ಪ್ರಥಮ ಪ್ರದರ್ಶನ ಅವರ ಭಾಗವತಿಕೆಯಲ್ಲೇ ಮಾಡುವಂತಾಯಿತು ಮಾತ್ರವಲ್ಲದೆ ಮುಂದೆ ಅದೇ ನಾನು ಯಕ್ಷಗಾನ ಭಾಗವತಿಕೆಯನ್ನು ಅಭ್ಯಾಸ ಮಾಡುವುದಕ್ಕೂ ಪ್ರೇರಣೆ ಆಯಿತು ಎನ್ನುತ್ತಾರೆ. ಯಕ್ಷಗಾನದ ಮೇರು ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ದಿನೇಶ ಅಮ್ಮಣ್ಣಾಯ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಕುರಿಯ ಗಣಪತಿ ಶಾಸ್ತ್ರಿ, ಶ್ರೀ ಪುರುಷೋತ್ತಮ ಪೂಂಜ, ಶ್ರೀಕುಬಣೂರು ಶ್ರೀಧರ ರಾವ್ ಮುಂತಾದವರ ಪ್ರಭಾವವೂ ತನ್ನ ಮೇಲಿದೆ ಎಂದು ಹೇಳಿಕೊಳ್ಳುತ್ತಾರೆ. ಬಹು ಆಯಾಮದ ಪ್ರತಿಭೆಯನ್ನು ಬಯಸುವ ಯಕ್ಷಗಾನದ ಸತತ ಅಭ್ಯಾಸ ನನ್ನ ಬದುಕಿನಲ್ಲಿ ಪರಿಪೂರ್ಣತೆ ಮತ್ತು ಆನಂದ ತುಂಬಿದೆ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆಯೆಂದು ಬಾಯ್ತುಂಬಿ ಹೇಳುತ್ತಾರೆ.
ಕುಮಾರಿ ಅದಿತಿ ದಿನೇಶ ಶೆಟ್ಟಿ
ದಿನಾಂಕ 07ನೇ ಜನವರಿ 2005ರಂದು ಜನಿಸಿದ ಕುಮಾರಿ ಅದಿತಿ ದಿನೇಶ ಶೆಟ್ಟಿ ಕೊಲ್ಲಿ ರಾಷ್ಟ್ರ ದುಬಾಯಿಯ ಯಕ್ಷಗಾನ ಕಲಾಕ್ಷೇತ್ರದಲ್ಲಿ ಓರ್ವೆ ಸಮರ್ಥ ಕಲಾವಿದೆಯಾಗಿ ಹೆಸರು ಗಳಿಸುತ್ತಿರುವ ಅಪ್ಪಟ ಪ್ರತಿಭೆ, ಕೊಟ್ಟಿಂಜ ದಿನೇಶ ಶೆಟ್ಟಿ ಮತ್ತು ಆರತಿ ದಿನೇಶ ಶೆಟ್ಟಿ ದಂಪತಿಗಳ ಮಗಳು. ದುಬಾಯಿಯ ಯಕ್ಷಗಾನ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈಕೆ, ಪ್ರಸ್ತುತ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಕ್ರಿಯ ಕಲಾವಿದೆ. ಗುರು ಶೇಖರ್ ಡಿ.ಶೆಟ್ಟಿಗಾರರ ಗರಡಿಯಲ್ಲಿ ಮೂಡಿ ಬರುತ್ತಿರುವ ಯಕ್ಷಪ್ರತಿಭೆ. ಶರತ್ ಕುಡ್ಲ ಅವರಿಂದ ನಾಟ್ಯ ಪಟ್ಟುಗಳನ್ನು ಕರಗತಮಾಡಿಕೊಂಡ ಚತುರೆ.ತನ್ನ ಎಂಟರ ಹರೆಯದಲ್ಲಿ ಯಕ್ಷಗಾನದತ್ತ ಆಕರ್ಷಿತಳಾದ ಈಕೆ ಯಕ್ಷಗಾನದ ನಾಟ್ಯ ಕಲಿತು ಬಣ್ಣ ಹಚ್ಚಿದವಳು. ತಂದೆ ದಿನೇಶ ಶೆಟ್ಟಿಯವರು ಓರ್ವ ಸಂಘಟಕರಾಗಿದ್ದು ಹತ್ತು ಹಲವಾರು ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದು, ಈ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಅದಿತಿ ಶೆಟ್ಟಿಗೆ ಅನುಕೂಲವಾಯಿತು. ಈಕೆಯ ದೊಡ್ಡಪ್ಪ ಪ್ರತಾಪನಗರ ಬಾಲಕೃಷ್ಣ ಶೆಟ್ಟಿಯವರು ತಲಕಳ ಮೇಳದ ಪ್ರಸಿದ್ಧ ವೇಷಧಾರಿಯಾಗಿದ್ದಾರೆ. 2013 ರಿಂದ ಶೇಖರ ಡಿ. ಶೆಟ್ಟಿಗಾರರ ನಿರ್ದೇಶನದ ಕಟೀಲು ಕ್ಷೇತ್ರ ಮಹಾತ್ಮೆಯ ದೇವೇಂದ್ರ ಬಲದ ಮೂಲಕ ರಂಗಪ್ರವೇಶ ಮಾಡಿದ ಈಕೆ ಮಾನಿಷಾದ, ಶಬರಿಮಲೆ ಅಯ್ಯಪ್ಪ, ವಿರೋಚನ ಕಾಳಗ, ಪಾಂಚಜನ್ಯ, ಮಣಿಕಂಠ ವಿಜಯ, ಚಕ್ರೇಶ್ವರ ಪರೀಕ್ಷಿತ, ಶರಸೇತು ಬಂಧ, ಮೋಹಿನಿ ಏಕಾದಶಿ, ಶ್ರೀದೇವಿ ಮಹಾತ್ಮೆ, ಭಾರ್ಗವ ವಿಜಯ, ಭೀಷ್ಮೋತ್ಪತ್ತಿ ಮೊದಲಾದ ಪ್ರಸಂಗಗಳಲ್ಲಿ ರೂಕ್ಷ, ಗರುಡ, ಬಲರಾಮ, ವಿಷ್ಣು, ನಕುಲ, ಅರ್ಜುನ, ರುಕ್ಮಾಂಗದ, ಬ್ರಹ್ಮ, ಜಮದಗ್ನಿ, ಶಂತನು ಮೊದಲಾದ ಪಾತ್ರಗಳಿಂದ ರಂಗಸ್ಥಳದಲ್ಲಿ ಮೆರೆದಾಡಿದ್ದಾಳೆ. ವಿಶೇಷವಾಗಿ ‚ ಶ್ರೀಕೃಷ್ಣ ಒಡ್ಡೋಲಗ‛ ಪರಂಪರೆ ಪ್ರಯೋಗದಲ್ಲಿ ಶ್ರೀಕೃಷ್ಣನ ಪಾತ್ರದ ಪ್ರಸ್ತುತಿಯನ್ನು ಕಂಡು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮೆಚ್ಚಿ ಆಶೀರ್ವದಿಸಿರುವುದು ವಿಶೇಷ. ತರಣಿಸೇನಕಾಳಗದ ಪರಂಪರೆಯ ಹನುಮಂತನ ಪಾತ್ರದಲ್ಲೂ ಲೀಲಾಜಾಲವಾಗಿ ಅಭಿನಯಿಸಿದ ಕೀರ್ತಿ ಕುಮಾರಿ ಅದಿತಿಯವರದ್ದು. ಸ್ತ್ರೀವೇಷ, ಪುಂಡುವೇಷ, ರಾಜವೇಷಗಳಲ್ಲಿಏಕಪ್ರಕಾರದ ಪ್ರೌಢಿಮೆ ಹೊಂದಿರುವ ಈಕೆ ಭಾವತುಂಬಿ ಅಭಿನಯಿಸುವುದರಲ್ಲಿ ಸಿದ್ಧಹಸ್ತೆ. ಲಯ ತಲ್ಲೀನತೆ ಈಕೆಗೆ ದೇವರಿತ್ತ ವರಪ್ರಸಾದ. ಹುಟ್ಟೂರು ಕೊಟ್ಟಿಂಜದಲ್ಲಿ ತಂದೆಯವರು ಸಂಯೋಜಿಸಿದ ‚ಶ್ರೀಕೃಷ್ಣ ಲೀಲೆ- ಕಂಸವಧೆ‛ ಎಂಬ ಒಂದು ಗಂಟೆಯ ಯಕ್ಷರೂಪಕದಲ್ಲಿ ಯಶೋದೆ, ಪೂತನಿ, ವಿಜಯ, ಕಂಸ ಹೀಗೆ ಒಂದು ಗಂಟೆಯ ಒಂದೇ ಪ್ರದರ್ಶನದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿ ತಾನು ಯಾವ ಪಾತ್ರವನ್ನೂ ನಿರ್ವಹಿಸಬಲ್ಲೆನೆಂಬುದನ್ನು ನಿರೂಪಿಸಿದವರು. ಕಲಿಕಾ ಭಾಷೆ ಇಂಗ್ಲೀಷ್ ಆದರೂ ಕನ್ನಡದಲ್ಲಿ ಸ್ಪುಟವಾಗಿ ಮಾತನಾಡಬಲ್ಲ ಚತುರೆಯಾಗಿದ್ದಾಳೆ. ಅದಿತಿ ಶೆಟ್ಟಿ ತನ್ನ ಪ್ರತಿಭೆಯನ್ನು ದುಬಾಯಿ ಮಾತ್ರವಲ್ಲದೆ ಅಬುಧಾಬಿ, ಶಾರ್ಜ, ಪುಜೇರ, ಮಸ್ಕತ್, ದ.ಕ.ಜಿಲ್ಲೆಯ ಉಜಿರೆ ಶ್ರೀಜನಾರ್ಧನ ದೇವಸ್ಥಾನ, ಮಂಗಳೂರು ಅಡ್ಯಾರ್‌ನಲ್ಲಿ ಜರುಗಿದ ಪಟ್ಲ ಸಂಭ್ರಮ – 2019 ಮುಂತಾದೆಡೆ ತನ್ನ ಕಲಾ ಚಾತುರ್ಯವನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾಳೆ. 2019ರಲ್ಲಿ ದುಬಾಯಿಯಲ್ಲಿ ಜರುಗಿದ ವಿಶ್ವತುಳು ಸಮ್ಮೇಳನದ ಪ್ರಯುಕ್ತ ಪ್ರದರ್ಶನಗೊಂಡ ‘ಜಾಂಬವತಿ ಕಲ್ಯಾಣ’ ಪ್ರಸಂಗದಲ್ಲೂ ವೇಷಧರಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಯಕ್ಷಗಾನದ ಜೊತೆಗೆ ವಿಜಯ್ ಜೋಗಿಯವರ ಗರಡಿಯಲ್ಲಿ 2010ರಿಂದ ಜಾನಪದ ನೃತ್ಯ,ಪಾಶ್ಚಾತ್ಯ ನೃತ್ಯ, ನೃತ್ಯ ರೂಪಕಗಳನ್ನು ಕಲಿತು ಪ್ರದರ್ಶನ ನೀಡಿದ್ದಾಳೆ. ಸತತ 8 ವರ್ಷಗಳಲ್ಲಿ ಗ್ಲೋಬಲ್ ವಿಲೇಜ್ ನಲ್ಲಿಸಂಘಟಿಸಲ್ಲಟ್ಟ ಬಾಲಿವುಡ್ ಡ್ಯಾನ್ಸ್ ನಲ್ಲಿ ಬಾಗವಹಿಸಿದ ಹಿರಿಮೆ ಹೊಂದಿದ್ದಾರೆ. ಯಕ್ಷಗಾನ ಕಲಿಕೆಯನ್ನು ಈಗಲೂ ಮುಂದುವರಿಸುತ್ತಿರುವ ಈಕೆ ಪರಂಪರೆಯ ನಾಟ್ಯಗಳನ್ನು ಕರಗತ ಮಾಡಿ ಅನೇಕ ಪ್ರಸಂಗಗಳಲ್ಲಿ ಪ್ರದರ್ಶನ ನೀಡಿ ಸೈ ಎನಿಸಿದ್ದಾರೆ. ಇಂತಹ ಅಭಿಜಾತ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರೆ ಯಕ್ಷಗಾನ ಸಹಿತ ಎಲ್ಲಾ ಕಲೆಗಳು ಸತ್ವಯುತವಾಗಿ ಉಳಿಯಬಲ್ಲುದು.ಕುಮಾರ ಆದಿತ್ಯ ದಿನೇಶ ಶೆಟ್ಟಿ
ಕೊಟ್ಟಿಂಜ ದಿನೇಶ ಶೆಟ್ಟಿ ಮತ್ತು ಆರತಿ ದಿನೇಶ ಶೆಟ್ಟಿ ದಂಪತಿಗಳ ಮಗ ಆದಿತ್ಯ ದಿನೇಶ ಶೆಟ್ಟಿ ಹನ್ನೆರಡರ ಹರೆಯದಲ್ಲೇ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಯಕ್ಷಗಾನ ಬಯಲಾಟ, ತಾಳಮದ್ದಳೆ, ಜಾನಪದ, ಪಾಶ್ಚಾತ್ಯ ನೃತ್ಯ, ಕ್ರೀಡಾರಂಗ ಹೀಗೆ ಎಲ್ಲಾ ರಂಗಗಳಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಯು.ಎ.ಇ ರಾಷ್ಟ್ರದ ದುಬಾಯಿಯಲ್ಲಿ ಅತ್ಯಂತ ಕಿರಿಯ ಬಾಲಕಲಾವಿದನಾಗಿ ಮಿಂಚಿದ್ದಾರೆ. ಪ್ರಸ್ತುತ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಈತ ತನ್ನ ಆರನೇ ಹರೆಯದಲ್ಲೇ ರಂಗಸ್ಥಳವನ್ನೇರಿದ ಪೋರ. ಯಕ್ಷಗುರು ಶೇಖರ್ ಡಿ. ಶೆಟ್ಟಿಗಾರರು ಯಕ್ಷಗಾನ ಶಿಕ್ಷಣವನ್ನು ನೀಡುತ್ತಿರುವ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿ ಅವರಿಂದ ಮತ್ತು ಶರತ್ ಕುಡ್ಲ ಅವರಿಂದ ನಾಟ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಶೇಖರ್ ಡಿ. ಶೆಟ್ಟಿಗಾರ್ ನಿರ್ದೇಶನದ ಮಣಿಕಂಠ ಮಹಿಮೆ, ತರಣಿಸೇನ ಕಾಳಗ, ವಿರೋಚನ ಕಾಳಗ, ಪಾಂಚಜನ್ಯ, ಭಸ್ಮಾಸುರ, , ಶ್ರೀಕೃಷ್ಣಲೀಲೆ, ಕಂಸ ವಧೆ, ಚಕ್ರೇಶ್ವರ ಪರೀಕ್ಷಿತ, ಮೋಹಿನಿ ಏಕಾದಶಿ, ಶ್ರೀದೇವಿ ಮಹಾತ್ಮೆ ಮೊದಲಾದ ಪ್ರಸಂಗಗಳಲ್ಲಿ ಬಾಲಮಣಿಕಂಠ, ಅಂಗದ, ನಾರದ, ಶ್ರೀಕೃಷ್ಣ, ಬಾಲ ಪರೀಕ್ಷಿತ, ಸುಪಾರ್ಶ್ವಕ ಮುನಿ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಶ್ರೀಕೃಷ್ಣಒಡ್ಡೋಲಗದಲ್ಲಿ ‘ಕಾಳಿಂದಿ’
ಸ್ತೀಪಾತ್ರವನ್ನು ನೈಜ ಭಾವಾಭಿನಯದಲ್ಲಿ ಪ್ರಸ್ತುತಪಡಿಸಿದ್ದು, ಅದನ್ನು ವೀಕ್ಷಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಪಾರಂಪರಿಕ ನಾಟ್ಯಗಳು, ಹಿಮ್ಮೇಳದಲ್ಲೂ ಆಸಕ್ತಿಯುಳ್ಳ ಇವರು ಚೆಂಡೆ-ಮದ್ದಳೆ ವಾದನವನ್ನೂ ಕಲಿಯಬೇಕೆಂಬ ಉತ್ಸಾಹ ಹೊಂದಿದ್ದಾರೆ. ವಿಜಯ ಜೋಗಿ ಅವರಿಂದ ಜಾನಪದ ನೃತ್ಯ, ಪಾಶ್ಚಾತ್ಯ ನೃತ್ಯ ಕಲಿತುಕೊಂಡ ಇವರು ದುಬಾಯಿ ಮತ್ತು ಅಬುಧಾಬಿಯ ಅನೇಕ ಕಡೆ ಪ್ರದರ್ಶನ ನೀಡಿದ್ದಾರೆ. ಸತತ ಐದು ವರ್ಷಗಳಿಂದ ಗ್ಲೋಬಲ್ ವಿಲೇಜ್‌ನಲ್ಲಿ ಭಾರತೀಯ ವೇದಿಕೆಯಲ್ಲಿ ಬಾಲಿವುಡ್ ನ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.ಓರ್ವ ಸಮರ್ಥ ಸಂಘಟಕನಾಗಿ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿರುವ ತಂದೆ ದಿನೇಶ ಶೆಟ್ಟಿಯವರು ಹಾಗೂ ದೊಡ್ಡಪ್ಪ ಪ್ರತಾಪನಗರ ಬಾಲಕೃಷ್ಣ ಶೆಟ್ಟಿಯವರು ಇವರಿಗೆ ಪೂರ್ಣ ಸಹಕಾರ,ಬೆಂಬಲ ನೀಡುತ್ತಿದ್ದಾರೆ. 29ನೇ ಜೂನ್,2008ರಂದು ಹುಟ್ಟಿದ ಆದಿತ್ಯ ದಿನೇಶ ಶೆಟ್ಟಿ, ಕ್ರೀಡಾರಂಗದಲ್ಲೂ ಸಮರ್ಥವೆನಿಸಿಕೊಂಡಿದ್ದಾರೆ. ಕ್ರಿಕೆಟ್, ಕಾಲ್ಚೆಂಡು, ಕಬಡ್ಡಿ ಮೊದಲಾದವುಗಳಲ್ಲೂ ಮುಂದಿದ್ದಾರೆ. ಈಗಾಗಲೇ ಹಲವಾರು ಪ್ರಶಸ್ತಿಪುರಸ್ಕಾರಗಳನ್ನು ಪಡೆದಿದ್ದಾರೆ. ಬಂಟ್ಸ್ ದುಬಾಯಿಯಿಂದ ‘ಲಿಟ್ಲ್ ಪ್ರಿನ್ಸ್-ರನ್ನರ್ ಅಪ್’ ಹೆಗ್ಗಳಿಕೆಯನ್ನುಪಡೆದುಕೊಂಡಿದ್ದಾರೆ ಮಾತ್ರವ್ಲದೆ ‚ಅಬಾಕಸ್‛ 3ನೇ ಹಂತದ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಪಡೆದಿದಾರೆ. ಈ ಯಕ್ಷಕಿಶೋರ ಕಲಾ ಜಗತ್ತನ್ನು ಇನ್ನಷ್ಟು ಬೆಳಗಲಿ ಎಂದು ಹಾರೈಸೋಣ.
ಪ್ರತೀಕ್ ಜಯಾನಂದ ಪಕ್ಕಳ
ಶ್ರೀಯುತ ಜಯಾನಂದ ಪಕ್ಕಳ ಮತ್ತು ಶ್ರೀಮತಿ ಜಯಲಕ್ಶ್ಮಿ ಪಕ್ಕಳರ ಇಬ್ಬರು ಕಲಾವಿದ ಮಕ್ಕಳಲ್ಲಿ ಹಿರಿಯವರು ಪ್ರತೀಕ್ ಪುಂಡು ವೇಷಧಾರಿಯಾಗಿ ಪ್ರವೃತ್ತನಾದರೂ ಮಕ್ಕಳ ತಂಡದ ಅಗತ್ಯಕ್ಕೆ ರಾಜವೇಷಗಳಲ್ಲಿಯೂ ಮಿಂಚಿದ ಪ್ರತಿಭೆ. ಪಾಂಚಜನ್ಯ ಪ್ರಸಂಗದ ಪಂಚಜನ,ಚಕ್ರೇಶ್ವರ ಪರೀಕ್ಷಿತದ ಅರ್ಜುನ, ಮೋಹಿನೀ ಏಕಾದಶೀ ಪ್ರಸಂಗದ ಭರತ ಪಾತ್ರಗಳು ಹೆಚ್ಚಿನ ಕೀರ್ತಿಗೆ ಕಾರಣವಾಗಿದೆ. ಭಸ್ಮಾಸುರ ಮೋಹಿನಿಯಲ್ಲಿ ಷಣ್ಮುಖ, ಮಣಿಕಂಠ ಮಹಿಮೆಯಲ್ಲಿ ಕನಕವರ್ಮ ಮೊದಲಾದ ವೇಷಗಳನ್ನು ಧರಿಸಿ ಕಲಾಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ಹಿಮ್ಮೇಳವಾದನದಲ್ಲಿಯೂ ಆಸಕ್ತ. ಹೆಚ್ಚಿನ ವ್ಯಾಸಂಗಕ್ಕಾಗಿ ಹುಟ್ಟೂರಲ್ಲಿದ್ದಾರೆ.ಶಿಕ್ಷಣದ ಜತೆಗೆ ಯಕ್ಷಗಾನವೆಂಬ ದೈವಿಕ ಕಲೆಯನ್ನು ಕಲಿತುಕೊಳ್ಳಬೇಕೆಂಬ ಆಸೆ ಹಲವರಿಗಿರುತ್ತದೆ. ಆದರೆ ಆಸೆಪಟ್ಟುಕೊಳ್ಳುವವರಿಗೆಲ್ಲಾ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬುವುದು ಸಂಶಯ. ಆದರೆ ಅದನ್ನುಸಾಧಿಸಲೇಬೇಕೆಂಬ ಛಲ ಹೊಂದಿದವರಲ್ಲಿ ಪ್ರತೀಕ್ ಜಯಾನಂದ್ ಕೂಡಾ ಒಬ್ಬರು.2000 ಡಿಸೆಂಬರ್ 20 ರಂದು ಪ್ರತೀಕ್ ಜಯಾನಂದ್ ಜನಿಸಿದರು. ತಂದೆ ಜಯಾನಂದ್ ಪಕ್ಕಳ, ತಾಯಿ ಜಯಲಕ್ಷ್ಮಿ, ಪ್ರಸ್ತುತ ಬಯೋಮೆಡಿಕಲ್ ಇಂಜಿನಿಯರಿಂಗ್ ಪದವಿಗಾಗಿ 3ನೇ ವರ್ಷದ ವ್ಯಾಸಂಗ ಮುಂದುವರಿಸುತ್ತಿರುವಪ್ರತೀಕ್ ದುಬೈಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ನಾಟ್ಯಾಭ್ಯಾಸ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿ.ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಹಾಗೂ ಶರತ್ ಕುಡ್ಲ ಅವರಿಂದ ನಾಟ್ಯ ಮತ್ತು ತಕ್ಕ ಮಟ್ಟಿಗೆ ಭಾಗವತಿಕೆ ಅಭ್ಯಾಸ ಮಾಡಿದ ಇವರು ಮುಂದೆ ಇನ್ನಷ್ಟು ಮೆಟ್ಟಿಲುಗಳನ್ನೇರಬೇಕೆಂಬ ದೃಢ ನಿರ್ಧಾರವನ್ನು ಹೊಂದಿದ್ದಾರೆ. ಊರಿನಲ್ಲಿ ಮೋಹನ ಬೈಪಡಿತ್ತಾಯರ ಗರಡಿಯಲ್ಲಿ ಹಿಮ್ಮೇಳ ಅಭ್ಯಾಸ ಮುಂದುವರಿಸುತ್ತಿದ್ದಾರೆ. ಯಕ್ಷಗಾನದಿಂದಾಗಿ ನನಗೆ ಹೆಚ್ಚಿನ ಅರಿವು ಉಂಟಾಗಿದೆ. ಹೆಚ್ಚೆಚ್ಚು ಜನರು ನನ್ನನ್ನು ಗುರುತಿಸುವಂತಾಗಿದೆ. ಪೌರಾಣಿಕ ಜ್ಞಾನದ ಅರಿವಾಗಿದೆ. ಇದಕ್ಕೆಲ್ಲ ಮೂಲ ಕಾರಣ ಗುರು ಶೇಖರ್ ಡಿ. ಶೆಟ್ಟಿಗಾರ್ ಎಂಬುದಾಗಿ ವಿನಮ್ರರಾಗಿ ಹೇಳುತ್ತಾರೆ. ಯಕ್ಷಗಾನವಲ್ಲದೆ ಇತರ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡ ಪ್ರತೀಕ್ ಉತ್ತಮ ಗಾಯಕನಾಗಿ, ಗಿಟಾರ್ ನುಡಿಸುವುದು, ಡ್ರಾಯಿಂಗ್, ಪುಟ್ಬಾಲ್ ಕ್ರೀಡೆ ಹೀಗೆ ವಿವಿಧ ಸ್ತರಗಳಲ್ಲೂ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ. ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ‚ಫಾಲ್ಕನ್ ಗಾವೆಲ್ ಕ್ಲಬ್ ಟೋಸ್ಟ್ ಮಾಸ್ಟರ್‛ ನಡೆಸಿದ ಸ್ಪರ್ಧೆಯಲ್ಲಿ ಅತ್ಯುತ್ತಮ ಭಾಷಣಕಾರ, ‚ಗ್ರೀನ್ ಹೋಪ್ ಯು.ಎ.ಇ ಮನ್ ( MUN) ಕಾನ್ಫರೆನ್ಸ್ ನವರ ಸ್ಪರ್ಧೆಯಲ್ಲಿ ಅತ್ಯುತ್ತಮ ಭಾಷಣಕಾರ, ‚ಬ್ರೈನ್ ಓ ಬ್ರೈನ್ ಅಬಾಕಸ್ ಸ್ಪರ್ಧೆಯಲ್ಲಿ ಯು.ಎ.ಇ ಚಾಂಪಿಯನ್, ವರಮಹಾಲಕ್ಶ್ಮಿ ಪೂಜಾ ಸಮಿತಿ ಯು.ಎ.ಇ ಇವರ ಭಜನೆ ಹಾಡಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಟೋಸ್ಟ್ ಮಾಸ್ಟರ್ಸ್ ಯು.ಎ.ಇ.ಗ್ರೂಪ್ ನವರ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ಹೆಮ್ಮೆ ಪ್ರತೀಕ್ ರವರಿಗಿದೆ. ತನ್ನ ಸಾಧನೆಯನ್ನು ಮುಂದುವರಿಸಿ ಉತ್ತಮ ಮಟ್ಟದ ಕಲಾವಿದನಾಗಬೇಕೆಂಬ ಹೆಬ್ಬಯಕೆ ಮಾತ್ರವಲ್ಲದೆ ಗುರುಗಳಾದ ಶೇಖರ್ ಶೆಟ್ಟಿಗಾರರಂತೆ ಉತ್ತಮ ಕಲಾಗುರುಗಳಾಗಿಯೂ ಸೇವೆ ಮಾಡುವ ಹೆಬ್ಬಯಕೆ ಹೊಂದಿದ್ದಾರೆ. ಎಷ್ಟು ಸಲ ನೋಡಿದರೂ ದಣಿಯದ ಶ್ರೀದೇವೀ ಮಹಾತ್ಮ್ಯೆ ತನ್ನ ಮೆಚ್ಚಿನ ಪ್ರಸಂಗ ಮತ್ತು ಭಸ್ಮಾಸುರ ಮೋಹಿನಿಯ ಭಸ್ಮಾಸುರ ತಾನು ಮೆಚ್ಚುವ ತನ್ನ ಕನಸಿನ ಪಾತ್ರ ಎಂಬುದಾಗಿ ಭರವಸೆಯಿಂದ ನುಡಿಯುತ್ತಾರೆ.
ಪ್ರಾಪ್ತಿ ಜಯಾನಂದ ಪಕ್ಕಳ
ಶ್ರೀಯುತ ಜಯಾನಂದ ಪಕ್ಕಳ ಮತ್ತು ಶ್ರೀಮತಿ ಜಯಲಕ್ಶ್ಮಿ ಪಕ್ಕಳರ ಮಗಳು. ಮಗಳು ಪ್ರಾಪ್ತಿ ಪುಂಡುವೇಷ ಮತ್ತು ಸ್ತಿçÃವೇಷ ಎರಡರಲ್ಲಿಯೂ ಪ್ರಸಿದ್ಧಿ ಹೊಂದಿದಾಕೆ. ಪ್ರಾಪ್ತಿ ಜಯಾನಂದ 2004 ಮಾರ್ಚ್ 7 ರಂದು ಜನಿಸಿದರು. 11ನೇ ತರಗತಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಪ್ರಾಪ್ತಿ ಕಳೆದ ಆರು ವರ್ಷಗಳಿಂದ ದುಬೈಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಯಕ್ಷಗಾನದ ನಾಟ್ಯ, ಭಾಗವತಿಕೆ, ಹಿಮ್ಮೇಳವನ್ನು ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಹಾಗೂ ಶರತ್ ಕುಡ್ಲ ಅವರಿಂದ ಕಲಿಯುತ್ತಿದ್ದಾರೆ. ಈಗಾಗಲೇ ವಿವಿದೆಡೆ ಜರುಗಿದ ಯಕ್ಷಗಾನಗಳಲ್ಲಿ ಭಾಗವಹಿಸಿದ ಪ್ರಾಪ್ತಿ ವಿಭಿನ್ನ ವೇಷಗಳನ್ನು ಧರಿಸಿದ್ದಾರೆ. ಇವುಗಳ ಪೈಕಿ ವಿರೋಚನ ಕಾಳಗದಲ್ಲಿ ‘ಲಕ್ಶ್ಮಿ’ ಶರಸೇತು ಬಂಧನದಲ್ಲಿ ಹನುಮಂತ, ದೇವಿ ಮಹಾತ್ಮೆಯಲ್ಲಿ ಮಾಲಿನಿ, ಪಾಂಚಜನ್ಯದಲ್ಲಿ ಬಲರಾಮ ಮೊದಲಾದವುಗಳು ಒಳಗೊಂಡಿದೆ.
ಮೋಹಿನೀ ಏಕಾದಶಿ ಪ್ರಸಂಗದ ಮೋಹಿನೀ ಪಾತ್ರ ಸರ್ವ ಜನಾಕರ್ಷಣೆಗೆ ಪಾತ್ರವಾಗಿದೆ. ಇದರ ಜತೆಗೆ ಭರತನಾಟ್ಯ, ಸಂಗೀತ ಹಾಗೂ ಡ್ರಾಯಿಂಗ್ ಮತ್ತು ಕ್ರಾಫ್ಟ್ಗಳನ್ನು ಕಲಿತುಕೊಂಡಿದ್ದಾರೆ. ಭರತನಾಟ್ಯವನ್ನು ಜಶ್ಮಿಥಾ ವಿವೇಕ್ ಅವರಿಂದ ಕಲಿತಿದ್ದು ಜೊತೆಗೆ ಗಾಯನ, ಡ್ರಾಯಿಂಗ್ ಮತ್ತು ಕ್ರಾಫ್ಟ್ ಈ ರಂಗದಲ್ಲೂ ಸಾಧನೆ ಮೆರೆಯುತ್ತಿದ್ದಾರೆ. ಈಗಾಗಲೇ ಅಕಾಡೆಮಿಕ್ ಉತ್ಕೃಷ್ಟತೆ ಮತ್ತು ಬಾಹ್ಯ ಚಟುವಟಿಕೆಗಳಿಗೆ ಹಮ್ದಾನ್ ಪ್ರಶಸ್ತಿ, ಟೋಸ್ಟ್ ಮಾಸ್ಟರ್‌ನವರ ಸಾರ್ವಜನಿಕ ಸ್ಪೀಕಿಂಗ್ ಕ್ಲಬ್‌ನಲ್ಲಿ ಅತ್ಯುತ್ತಮ ಸ್ಪೀಕರ್ ಪ್ರಶಸ್ತಿ ಪಡೆದಿದ್ದಾರೆ. ಅನೇಕ ಭಾಷಣ, ಗಾಯನ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ದುಬೈಯ ವರಮಹಾಲಕ್ಷ್ಮಿ ಪೂಜಾ ಸಮಿತಿ ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಯಕ್ಷಾಂತರಂಗ ಬೆಂಗಳೂರು ನಡೆಸಿದ ಯಕ್ಷಗಾನ ನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಯಕ್ಷಗಾನದ ಎಲ್ಲಾ ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹೆಚ್ಚಿನ ಸಾಧನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.
ಇಶೀತಾ ಶೇಖರ್ ಪೂಜಾರಿ
ಇಶೀತಾ ಶೇಖರ್ ಪೂಜಾರಿ: ದುಬಾಯಿಯ ಶ್ರೀಯುತ ಶೇಖರ್ ಪೂಜಾರಿ ಮತ್ತು ಶೈಲಜಾ ಶೇಖರ್ ಪೂಜಾರಿಯವರ ಮಕ್ಕಳಲ್ಲಿ ಹಿರಿಯಾಕೆ ಇಶೀತಾ, ಹಾಸ್ಯ ಪಾತ್ರಗಳಲ್ಲಿಯೂ ಮಿಂಚ ಬಲ್ಲ ಪ್ರತಿಭೆ. ಶರಸೇತು ಬಂಧ ದ ಹಾಸ್ಯ-ವೃಧ್ಧಬ್ರಾಹ್ಮಣ, ಶ್ರೀಕೃಷ್ಣಲೀಲೆಯ ಧೇನುಕಾಸುರ, ಅಭಿಮನ್ಯು ಕಾಳಗದ ಸೈಂಧವ, ಮಹಿಷಮರ್ದಿನಿ -ಜಗಜ್ಜನನಿ ಮತ್ತು ಕಟೀಲು ಕ್ಷೇತ್ರ ಮಹಾತ್ಮ್ಯೆಯಲ್ಲಿ ದೇವಬಲ, ಚಕ್ರೇಶ್ವರ ಪರೀಕ್ಷಿತದಲ್ಲಿ ಸನಕ ಸನಂದರು ಇತ್ಯಾದಿ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚಿದಾರೆ. 30ನೇ ಆಗಸ್ಟ್, 2002ರಂದು ಜನಿಸಿದ ಈಕೆ ಈಗ 18ರ ಬಾಲೆ. 2016ರಿಂದಲೇ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಸಕ್ರಿಯ ವಿದ್ಯಾರ್ಥಿ. ಯಕ್ಷಗಾನ ಮಾತ್ರವಲ್ಲದೆ ಇತರ ಕಲಾಪ್ರಕಾರ, ಸಂಸ್ಕೃತಿ ಪ್ರಕಾರಗಳ ಅಧ್ಯಯನದಲ್ಲೂ ಕ್ರಿಯಾಶೀಲರಾಗಿದ್ದಾರೆ. 2008 ರಿಂದ 2013 ಅಂಬ್ಲಿಯವರಲ್ಲಿ ಭರತನಾಟ್ಯ ಅಭ್ಯಾಸ ಆ ಬಳಿಕ ಶ್ರೀಮತಿ ಜಸ್ಮಿತಾ ವಿವೇಕರಲ್ಲಿ 2016-2017 ನೆ ಸಾಲಿನಲಿ ಅಭ್ಯಾಸ ಮಾಡಿದ್ದಾರೆ. ಅಲ್ಕಾ ಅಸಾಂಗಿಯವರಿಂದ 2016ರಿಂದ 2019ರವರೆಗೆ ಶ್ಲೋಕ ಕಂಠಪಾಠ ತರಗತಿಯಲ್ಲೂ ಭಾಗವಹಿಸಿದ್ದಾರೆ. ಕುಮಾರಿ ಗೀತಾ ಅವರಿಂದ ನೃತ್ಯ ಅಭ್ಯಾಸ ಮಾಡಿರುವ ಈಕೆ ಚಿತ್ರಕಲೆಯಲ್ಲೂ ಸ್ವಅಭ್ಯಾಸದ ಮೂಲಕ ತೊಡಗಿಸಿಕೊಂಡಿದ್ದಾರೆ. ಅನೇಕ ಸ್ಪರ್ಧೆಗಳಲ್ಲಿ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಭ್ಯಾಸ ತರಗತಿ ಸಾಧನಾ ಸಂಭ್ರಮ 2017ರ ಪೂರ್ವರಂಗ ಭಾಗವತಿಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಜಿಐಹೆಚ್ಚೆಸ್ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ಇಂmರ್ ಹೌಸ್ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ, ಇಸ್ಕಾನ್ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಮಾತ್ರವಲ್ಲದೆ ವರಮಹಾಲಕ್ಷ್ಮಿ ಶ್ಲೋಕ ಸ್ಫರ್ಧೆಯಲಿ ಪ್ರಥಮ ಪ್ರಶಸ್ತಿ ಪಡೆದಿರುವ ಈಕೆ ಹುಟ್ಟು ಪ್ರತಿಭಾವಂತೆ. ಕಷ್ಟಸಾಧ್ಯವಾದ ಹಾಸ್ಯ ಪಾತ್ರ ನಿರ್ವಹಣೆಯಲ್ಲಿ ಆಸಕ್ತಿ ಮತ್ತು ತನ್ನ ಛಾಪು ಮೂಡಿಸಿರುವಾಕೆ.
ಯಶಸ್ವಿ ಶೇಖರ್ ಪೂಜಾರಿ
ದುಬಾಯಿಯ ಶ್ರೀಯುತ ಶೇಖರ್ ಪೂಜಾರಿ ಮತ್ತು ಶೈಲಜಾ ಶೇಖರ್ ಪೂಜಾರಿಯವರ ಮಕ್ಕಳಲ್ಲಿ ಹಿರಿಯಾಕೆ ಯಶಸ್ವಿ, 22 ಫೆಬ್ರವರಿ 2007ರಲ್ಲಿ ಜನಿಸಿದ ಈಕೆ ಯಶಸ್ವಿ ಸಮರ್ಥ ಪುಂಡುವೇಷಧಾರಿ. ದೇವತೆ, ಯಾದವರು, ಬಲರಾಮ ಇತ್ಯಾದಿ ಪಾತ್ರಗಳಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದಿದ್ದಾರೆ. 2016ರಿಂದಲೇ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಪಾಠ- ಆಟಗಳಲ್ಲಿ ಭಾಗವಹಿಸುತ್ತಿರುವ ಈಕೆ ತನ್ನ ಅಭ್ಯುದಯಕ್ಕೆ ಇಲ್ಲಿಯ ಗುರುಗಳ ಕೊಡುಗೆಯನ್ನು ಸದಾ ಸ್ಮರಿಸುತ್ತಾರೆ. ಪಾಂಚಜನ್ಯ ಪ್ರಸಂಗದ ಸುತೀತಿ, ಅಭಿಮನ್ಯು ಕಾಳಗದ ರುಗ್ಮರಥ, ಮಹಿಷಮರ್ದಿನಿ -ಜಗಜ್ಜನನಿ ಮತ್ತು ಕಟೀಲು ಕ್ಷೇತ್ರ ಮಹಾತ್ಮ್ಯೆಯಲ್ಲಿ ದೇವಬಲ, ಚಕ್ರೇಶ್ವರ ಪರೀಕ್ಷಿತದಲ್ಲಿ ಮನ್ಮಥ ಇತ್ಯಾದಿ ಹತ್ತು ಹಲವು ಪಾತ್ರಗಳಲ್ಲಿ ತನ್ನ ಛಾತಿ ತೋರಿಸಿದ ಹೆಗ್ಗಳಿಕೆ ಈ ಪೋರಿಯದ್ದು. ತನ್ನ ಹಿರಿಯ ಸಹೋದರಿಯಂತೆ ಇತರ ಕಲಾಪ್ರಕಾರಗಳಾದ ಭರತನಾಟ್ಯವನ್ನು ಶ್ರೀಮತಿ ಜಸ್ಮಿತಾ ವಿವೇಕರಲ್ಲಿ ಅಭ್ಯಾಸ ಮಾಡಿದ್ದಾರೆ. ಅಲ್ಕಾ ಅಸಾಂಗಿ ಯವರ ಶ್ಲೋಕ ಕಂಠಪಾಠ ತರಗತಿಯಲ್ಲೂ ಭಾಗವಹಿಸಿದ್ದಾರೆ.ಸಹೋದರಿಯರಿಬ್ಬರೂ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಾ ಹೀಗೆ ನುಡಿಯುತ್ತಾರೆ. ಅಭ್ಯಾಸ ತರಗತಿಯಲ್ಲಿ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಮತ್ತು ಶರತ್ ಕುಡ್ಲ ತರಬೇತಿಯಲ್ಲಿ ನಮ್ಮ ಯಕ್ಷಗಾನ ಪಯಣ ಚೆನ್ನಾಗಿ ನಡೆಯುತ್ತಿದೆ ಮಾತ್ರವಲ್ಲದೆ ಇಲ್ಲಿ ಕಲಿಕೆಗೆ ತುಂಬಾ ಅವಕಾಶಗಳಿವೆ. ನೃತ್ಯ, ಹಿಮ್ಮೇಳ, ಮುಮ್ಮೇಳ, ಬಣ್ಣಗಾರಿಕೆ, ಪುರಾಣ, ಭಾಗವತಿಕೆ, ಮಾತುಗಾರಿಕೆ, ರಾಮಾಯಣ ಮಹಾಭಾರತದ ಪಾತ್ರಗಳನ್ನು ಸೂಕ್ಮವಾಗಿ ಅರ್ಥಮಾಡುವ ಅವಕಾಶಗಳು ಸಿಕ್ಕಿದೆ. ಯಕ್ಷಗಾನದಂತಹ ಮೇರು ಕಲೆಯ ಸಂಪೂರ್ಣ ಮರ್ಮಗಳನ್ನು ಅರಿಯಬೇಕಾದರೆ, ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಇನ್ನಷ್ಟು ಪ್ರಯತ್ನ ಮತ್ತು ಸತತ ಅಭ್ಯಾಸದ ಅಗತ್ಯವಿದೆ. ನಮ್ಮ ಪಾಲಕರು ಮತ್ತು ಗರುಗಳು ಅಭಿಮಾನ ಪಡುವಂತಹ ಸಾಧನೆ ಮಾಡಬೇಕಾದರೆ ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಿಸಬೇಕೆಂದು ವಿಶ್ವಾಸದಿಂದ ನುಡಿಯುತ್ತಾರೆ. ಐಹೆಚ್ಚೆಸ್ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದಿರುವ ಈಕೆ, ಟ್ಯಾಲೆಂಟ್ಸ್ ಡೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಲಕ್ಷ್ಮಿ ನಾರಾಯಣ ಶರ್ಮ ಮಧೂರು
ಲಕ್ಷ್ಮಿನಾರಾಯಣ ಶರ್ಮ ಮಧೂರು ಅವರು ನಮ್ಮ ತಂಡದ ಅನುಭವಿ ಮದ್ದಳೆಗಾರರು. ಯಕ್ಷಗಾನ ಕಲಾವಿದ, ಉಳಿಯ ಧನ್ವಂತರಿ ಯಕ್ಷಗಾನ ಸಂಘದ ಸ್ಥಾಪಕರೂ ಆದ ಮಧೂರು ವಿಷ್ಣು ಭಟ್ ಮತ್ತು ಶಾರದ ಇವರ ಹೆತ್ತವರು. 1973ರ ಮಾರ್ಚ 5 ರಂದು ಜನಿಸಿದ ಶರ್ಮರು ಎಂ.ಕಾಂ ಪದವೀಧರ. ಕೂಡ್ಲು ನಾರಾಯಣ ಬಲ್ಯಾಯರಿಂದ ಯಕ್ಷಗಾನ ನಾಟ್ಯ 1984ನೇ ಇಸವಿಯಿಯಲ್ಲಿ ಅಭ್ಯಾಸ ಮಾಡಿದವರು ಮತ್ತು 1994ರಲ್ಲಿ ತೆಂಕುತಿಟ್ಟಿನ ಪ್ರಖ್ಯಾತ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಚೆಂಡೆ-ಮದ್ದಳೆ ಅಭ್ಯಾಸ ಮಾಡಿದ್ದಾರೆ. ವೇಷಧಾರಿಯಾಗಿ ಪುಂಡುವೇಷ, ಸ್ತ್ರೀವೇಷ, ಕಿರೀಟ ವೇಷ, ವಿವಿಧ ಪೀಠಿಕೆವೇಷಗಳು ಮತ್ತು ಹಸಿಬಣ್ಣದವೇಷ ಹೀಗೆ ವೈವಿಧ್ಯಮಯ ವೇಷಗಳನ್ನು ಮಾಡಿದ ಅನುಭವಿ. ಹಿವ್ಮೇಳ ಮತ್ತು ಮುಮ್ಮೇಳಗಳಲ್ಲಿ ಸವ್ಯಸಾಚಿ ಕಲಾವಿದನಾಗಿ ಸಿದ್ಧರಾಗಬೇಕೆಂಬುದು ಇವರ ಒಲವು. ವೃತ್ತಿಪರ ಮೇಳಗಳಾದ ಮಧೂರು, ಕೂಡ್ಲು, ಉಪ್ಪಳ, ಮಲ್ಲ, ಕಟೀಲು, ಕೊಟೂರು ಮತ್ತು ಕೊಲ್ಲಂಗಾನ ಮೇಳಗಳಲ್ಲಿ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರಾಗಿ ಭಾಗವಹಿಸಿದ್ದಾರೆ. ನಮ್ಮ ತಂಡದಲ್ಲಿ ಚೆಂಡೆ-ಮದ್ದಳೆ ಗುರುಗಳಾಗಿಯೂ ಉಪಯುಕ್ತ ಸೇವೆ ಸಲ್ಲಿಸಿದವರು. ಯಕ್ಷಗಾನವಲ್ಲದೆ ಇತರ ಕಲಾ ಪ್ರಕಾರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಸ್ತಿçÃಯ ಸಂಗೀತ, ಭರತನಾಟ್ಯ ಮತ್ತು ಕೀರ್ತನೆ ಅಲ್ಲದೆ ತಬಲ ಅಭ್ಯಾಸವನ್ನು ಗುರುಗಳಾದ ವಿದ್ವಾನ್ ಬಾಬು ರೈ ಕಾಸರಗೋಡು ಇವರಲ್ಲಿ 1996ನೇ ಇಸವಿಯಲ್ಲಿ ಅಭ್ಯಾಸ ಮಾಡಿದ್ದಾರೆ ಮತ್ತು ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರ ಶ್ರೀಮತಿ ಸವಿತಾ ಶರ್ಮ ಕೂಡ ಶಾಸ್ತ್ರೀಯ ಸಂಗೀತ ಕಲಿತ ಕಲಾವಿದೆ.ವಿಷ್ಣುಕಿರಣ್ ಕೆ.ಎಲ್
ಮಧೂರು ಲಕ್ಷ್ಮಿನಾರಾಯಣ ಶರ್ಮ ಮತ್ತು ಸವಿತ ಕುಮಾರಿ ಇವರ ಸುಪುತ್ರ. 2002 ಮಾರ್ಚ 22 ರಂದು ಜನಿಸಿದ 2017ರಿಂದ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಮತ್ತು ಶರತ್ ಕುಮಾರ್ ಕುಡ್ಲ ಅವರಲಿ ನಾಟ್ಯ ಅಭ್ಯಾಸ ಮಾಡಿದವರು. ತಂದೆ ಲಕ್ಷ್ಮಿನಾರಾಯಣ ಶರ್ಮರಿಂದ ಚೆಂಡೆ-ಮದ್ದಳೆ ಅಭ್ಯಾಸ ಮಾಡುತ್ತಿದ್ದಾರೆ. ತರಣಿಸೇನ ಕಾಳಗದ ವಾನರ ಪಾತ್ರದ ಮೂಲಕ ರಂಗಪ್ರವೇಶ ಮಾಡಿದ್ದಾರೆ.ಯಕ್ಷರಂಗದಲ್ಲಿ ಸವ್ಯಸಾಚಿ ಕಲಾವಿದನಾಗಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಕೆಲವೊಂದು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಾಸ್ತ್ರಿಯ ಸಂಗೀತ, ಭರತನಾಟ್ಯ ಮತ್ತು ಕೀರ್ತನೆಗಳಲ್ಲೂ ತಂದೆಯಂತೆ ಆಸಕ್ತರಾಗಿದ್ದಾರೆ.
ಶ್ರೀದೇವಿ ಕೆ. ಎಲ್
ದುಬೈಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಯಕ್ಷಗಾನದ ಹಿಮ್ಮೇಳ –ಮುಮ್ಮೇಳ ತರಬೇತಿ ಪಡೆದಿರುವವರಲ್ಲಿ ಅತೀ ಕಿರಿಯ ವಯಸ್ಸಿನ ಶ್ರೀದೇವಿ ಕೆ. ಎಲ್ ಕೂಡಾ ಒಬ್ಬಳು ( ಜನನ 30.06.2009) ಮಧೂರು ಲಕ್ಷ್ಮಿನಾರಾಯಣ ಶರ್ಮ - ಸವಿತಾ ಕುಮಾರಿ ದಂಪತಿಯ ಪುತ್ರಿಯಾದ ಈಕೆ ಈಗಾಗಲೇ ಐದನೇ ತರಗತಿ ಶಿಕ್ಷಣ ಪೂರ್ತಿಗೊಳಿಸಿದ್ದಾಳೆ. ತಂದೆ ಹಾಗೂ ಅಜ್ಜ ಯಕ್ಷಗಾನದ ಕಲಾವಿದರಾಗಿರುವುದು ಕೂಡಾ ಈಕೆಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಲು ಕಾರಣವಾಯಿತೆನ್ನಲಾಗಿದೆ. ತನ್ನ ಎಂಟರ ಹರೆಯದಲ್ಲೇ ಅಂದರೆ 2017 ರಲ್ಲಿ ಯಕ್ಷಗಾನದ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರರಿಂದ ನಾಟ್ಯವನ್ನು, ಜೊತೆಗೆ ಭಾಗವತಿಕೆಯನ್ನು ಅಭ್ಯಾಸ ಮಾಡತೊಡಗಿದರು. ಹತ್ತನೇ ಹರೆಯದಲ್ಲಿ ಹಿಮ್ಮೇಳವನ್ನು ತಂದೆಯಿಙದಲೇ ಅಭ್ಯಾಸಿಸ ತೊಡಗಿದ್ದಾಳೆ.ಈಗಾಗಲೇ ವಿವಿದೆಡೆ ಜರುಗಿದ ಯಕ್ಷಗಾನದಲ್ಲಿ ಭಾಗವಹಿಸಿದ ಶ್ರೀದೇವಿ- ಬಾಲಗೋಪಾಲ,ಸನಕಾದಿ ಋಷಿಗಳು, ಕೃಷ್ಣ, ವಾನರ ಮೊದಲಾದ ವೇಷ ಧರಿಸಿ ಕಲಾಭಿಮಾನಿಗಳ ಮೆಚ್ಚುಗೆಗೆಪಾತ್ರಳಾಗಿದ್ದಾಳೆ. ಅಲ್ಲದೇ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ ಮೊದಲಾದವುಗಳಲ್ಲಿ ಆಸಕ್ತಿ ಹೊಂದಿದ್ದಾಳೆ. ಜೊತೆಗೆ ಈಗಾಗಲೇ ಅನೇಕ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾಳೆ. ಉತ್ತಮ ಕಲಾವಿದೆಯಾಗಬೇಕೆಂಬ ಆಸೆ ಈಕೆಯದ್ದಾಗಿದೆ.ಅರುಂಧತಿ ಮನೋಹರ್ ಪದ್ಮಶಾಲಿ
ಅರುಂಧತಿ ಮನೋಹರ್ ಪದ್ಮಶಾಲಿ ಮನೋಹರ್ ಡಿ. ಶೆಟ್ಟಿಗಾರರ ಧರ್ಮಪತ್ನಿ, ಉಡುಪಿ-ಚಿಟ್ಪಾಡಿಯ ಪ್ರೇಮಾನಂದ ಶೆಟ್ಟಿಗಾರ್ ಮತ್ತು ವಾರಿಜ ಶೆಟ್ಟಿಗಾರರ ಮಗಳು. ಬಿಎಸ್ಸಿ ಎ,ಎಂಬಿಎ ಪದವೀಧರೆ. ಇಬ್ಬರು ಮಕ್ಕಳು ವೈದೇಹಿ ಮತ್ತು ವೈಷ್ಣವಿ. ಹಿರಿಯಾಕೆ ವೈಷ್ಣವಿ ಪದ್ಮಶಾಲಿ ನಮ್ಮ ಅಭ್ಯಾಸ ತರಗತಿಯ ವಿದ್ಯಾರ್ಥಿ. ಮಗಳ ಸಲುವಾಗಿ ತರಗತಿಗೆ ಬರುತ್ತಿದ್ದ ಇವರು ತರಗತಿಯ ಚಟುವಟಿಕೆಗಳಿಂದ ಆಕರ್ಷಿತರಾಗಿ ಹೆಜ್ಜೆಗಾರಿಕೆ ಅಭ್ಯಾಸ ಆರಂಭಿಸಿದವರು.2019 ರ ದುಬಾಯಿ ಪಟ್ಲ ಸಂಭ್ರಮದಲ್ಲಿ ಪೂರ್ವರಂಗದ ಮುಖ್ಯ ಸ್ತ್ರೀವೇಷದಲ್ಲಿ ರಂಗ ಪ್ರವೇಶ ಮಾಡಿ ಅಭ್ಯಾಸ ಮುಂದುವರಿಸುತ್ತಿದ್ದಾರೆ.
ವೈಷ್ಣವಿ ಪದ್ಮಶಾಲಿ
ಅತೀ ಚಿಕ್ಕ ಪ್ರಾಯದಲ್ಲೇ, ಅಂದರೆ ೪ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಯಕ್ಷಗಾನ ರಂಗದಲ್ಲಿ ತನ್ನ ಸಾಧನೆ ತೋರಿಸಿದವರಲ್ಲಿ ವೈಷ್ಣವಿ ಪದ್ಮಶಾಲಿ ಕೂಡಾ ಬಬ್ಬರು. ಮನೋಹರ್ ಶೆಟ್ಟಿಗಾರ್ – ಆರುಂಧತಿ ಮನೋಹರ್ ದಂಪತಿಯ ಪುತ್ರಿಯಾದ ವೈಷ್ಣವಿ 2008 ಮಾರ್ಚ 5ರಂದು ಜನಿಸಿದರು. 2017ರಲ್ಲಿ ಇವರು ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿದ್ದಾರೆ. ಗುರುಗಳಾದ ಶೇಖರ ಡಿ. ಶೆಟ್ಟಿಗಾರ್, ಶರತ್ ಕುಮಾರ್ ಕುಡ್ಲ ಅವರಿಂದ ನಾಟ್ಯವನ್ನುಹಾಗೂ ಭಾಗವತಿಕೆಯನ್ನು ಕಲಿಯುತ್ತಿದ್ದಾರೆ. ಚಕ್ರೇಶ್ವರ ಪರೀಕ್ಷಿತದಲ್ಲಿ ವನಪಾಲಕ, ಅಭಿಮನ್ಯು ಕಾಳಗದಲ್ಲಿ ಕುರುಪಡೆ, ಪೂರ್ವರಂಗದಲ್ಲಿ ಬಾಲಗೋಪಾಲ, ಮಹಷಮರ್ಧಿನಿ ಜಗಜ್ಜನನಿಯಲ್ಲಿ ವರುಣ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಂದೆಯೂ ಇನ್ನಷ್ಟು ಪಾತ್ರಗಳನ್ನು ಮಾಡುವುದರ ಮೂಲಕ ವೇದಿಕೆಗೇರಬೇಕೆಂಬ ಹಂಬಲ ಇವರದ್ದಾಗಿದೆ. ಸಂಗೀತವನ್ನು ಪ್ರಸನ್ನಾ ಅವರಿಂದ, ಭರತನಾಟ್ಯವನ್ನು ಗೋಪಿಕಾ ಅವರಿಂದ 2015ರಿಂದ ಕಲಿಯುತಿದ್ದು ಅನೇಕ ಕಡೆ ಪ್ರದರ್ಶನ ನೀಡಿದ್ದಾರೆ.ಶ್ರೀಲಕ್ಷ್ಮಿ ವಿಜಯ ಕುಮಾರ್
ಶ್ರೀಲಕ್ಷ್ಮಿ ವಿಜಯ ಕುಮಾರ್ ಅವರ ತಂದೆ ವಿಜಯ ಕುಮಾರ್ ಮತ್ತು ತಾಯಿ ಸ್ವತಃ ಯಕ್ಷಗಾನ ಕಲಾವಿದೆಯೂ ಆದ ಸುಜಯ ವಿಜಯ ಕುಮಾರ್. 2002ರ ನವೆಂಬರ್ 07 ರಂದು ಜನಿಸಿದ ಶ್ರೀಲಕ್ಷ್ಮಿ 2019ರಿಂದ ಯಕ್ಷಗಾನ ಅಭ್ಯಾಸ ತರಗತಿಯ ವಿದ್ಯಾರ್ಥಿ. ಕಳೆದ ದುಬಾಯಿ ಪಟ್ಲ ಸಂಭ್ರಮದಲ್ಲಿ ಪೂರ್ವರಂಗ ಮತ್ತು ದೇವೀ ಮಹಾತ್ಮ್ಯೆಯ ಸಪ್ತಮಾತೃಕೆಯರಲ್ಲಿ ಒಬ್ಬರಾಗಿ ರಂಗವೇರಿದ್ದಾರೆ.ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹುಟ್ಟೂರಲ್ಲಿದ್ದಾರೆ.
ಶ್ರೀಶ್ ವಿಜಯ ಕುಮಾರ್

ವಿಜಯ ಕುಮಾರ್ -ಸುಜಯ ದಂಪತಿಗಳ ಮಗ. ಐದನೇ ತರಗತಿವಿದ್ಯಾರ್ಥಿಯಾಗಿರುವ ಇವರು 2010 ಡಿಸೆಂಬರ್ 14ರಂದು ಜನಿಸಿದವರು. ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿದ ಅಲ್ಪಾವಧಿಯಲ್ಲಿಯೆ ಚುರುಕಿನ ನಾಟ್ಯ-ನಡೆಗಳಿಂದ ಗಮನ ಸೆಳೆದವರು.
ದಿಯೇಶ್ ಮತ್ತು ದಿಯಾ ಪೂಜಾರಿ:
ದಿಯಾ ದಿಯೇಶ್ ಇಬ್ಬರು ದಿವಾಕರ ಪೂಜಾರಿ ಮತ್ತು ಸೌಮ್ಯ ಪೂಜಾರಿಯವರ ಮಕ್ಕಳು. ದಿಯಾ 2001ರ ಮಾರ್ಚ್ 17ರಂದು ಹುಟ್ಟಿದರೆ, ದಿಯೇಶ್ 2012 ಆಗಸ್ಟ್ 25ರಂದು ಹುಟ್ಟಿದವರು. ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ನಾಟ್ಯದ ಜೊತೆ ಜೊತೆಗೆ ಹಿಮ್ಮೇಳ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಕಳೆದ ದುಬಾಯಿ ಪಟ್ಲ ಸಂಭ್ರಮದಲ್ಲಿ ಕೋಡಂಗಿ ಪಾತ್ರದಲ್ಲಿ ಇಬ್ಬರೂ ರಂಗವೇರಿದ್ದಾರೆ.
ಯಕ್ಷಗಾನ ಮಾತ್ರವಲ್ಲದೆ ಮನಲ್ ಮೊಹಮ್ಮದೀಯವರಿಂದ ನೃತ್ಯ ಮತ್ತು ಗಾಯನ ಅಭ್ಯಾಸ ಮಾಡುತ್ತಿದ್ದಾರೆ. ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಹೆಬ್ಬಯಕೆ ಹೊಂದಿದ್ದಾರೆ.
ಸೌಮ್ಯ ಧನಂಜಯ ಶೆಟ್ಟಿಗಾರ್
ಸೌಮ್ಯ ಧನಂಜಯ ಶೆಟ್ಟಿಗಾರ್ ಮೋಹನ್ ಶೆಟ್ಟಿಗಾರ್ ಮತ್ತು ಸರಸ್ವತಿಯವರ ಪುತ್ರಿ. ಧನಂಜಯ ಶೆಟ್ಟಿಗಾರರ ಧರ್ಮಪತ್ನಿ. ಯಕ್ಷಗಾನ ಕಲಾವಿದೆ ಮಾತ್ರವಲ್ಲದೆ ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರರಿಂದ ಭರತನಾಟ್ಯವನ್ನೂ ಅಭ್ಯಾಸ ಮಾಡಿ ಪ್ರದರ್ಶನ ನೀಡಿದ ಹಿರಿಮೆ ಹೊಂದಿದ್ದಾರೆ. ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್ ಪದವೀಧರೆಯಾಗಿರುವ ಈಕೆ ದುಬಾಯಿ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು ಅಭ್ಯಾಸ ತರಗತಿಯ ವಿದ್ಯಾರ್ಥಿಯಾಗಿ ಯಕ್ಷಗಾನ ಅಭ್ಯಾಸ ಮುಂದುವರಿಸಿದ್ದಾರೆ.ಕಳೆದ ಬಾರಿಯ ದುಬಾಯಿ ಪಟ್ಲ ಸಂಭ್ರಮದಲ್ಲಿ ಮುಖ್ಯ ಸ್ತ್ರೀವೇಷ ಮಾಡಿದ ಈಕೆ ದುಬಾಯಿ ರಂಗವೇದಿಕೆಯಲ್ಲಿ ದೇವೀ ಮಹಾತ್ಮ್ಯೆಯ ದೇವಬಲ, ಅಗ್ರಪೂಜೆಯ ಸಹದೇವ ಇತ್ಯಾದಿ ಪಾತ್ರಗಳನ್ನೂ ಕೂಡ ಮಾಡಿದ್ದಾರೆ. ಅನೇಕ ಕಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿದ, ನಿರ್ದೇಶನ ಮಾಡಿದ ಹಿರಿಮೆ ಈಕೆಗಿದೆ.
ಗಹನ್ ಧನಂಯ್ ಶೆಟ್ಟಿಗಾರ್
ಸೌಮ್ಯ ಮತ್ತು ಧನಂಜಯ ಶೆಟ್ಟಿಗಾರರ ಮಗನಾಗಿ 2013 ಮೇ 30ರಂದು ಜನಿಸಿದವರು. 2ನೇ ತರಗತಿ ಅಭ್ಯಾಸ ಮಾಡುತ್ತಿರುವ ಇವರು ಈಗ ಕಲಿಯುತ್ತಿರುವ ವಿದ್ಯಾರ್ಥಿ, ಆದರೂ ಕಳೆದ ಬಾರಿ ಕೋಡಂಗಿ ಪಾತ್ರದ ಮೂಲಕ ದುಬಾಯಿ ಪಟ್ಲ ಸಂಭ್ರಮದ ರಂಗ ವೇದಿಕೆ ಏರಿದ್ದಾರೆ. (ಮುಂದುವರಿಯುವುದು....)
ಬರಹ : ವಾಸು ಬಾಯಾರ್
( ಚಲನಚಿತ್ರ ನಟ, ಯಕ್ಷಗಾನ,ರಂಗ ಕಲಾವಿದರು)















































0 Comments