ವಿದೇಶ_ವಿಶೇಷ ಅಂಕಣ - 29
ಕುವೈಟ್: ಸಾಗರದಾಚೆಗಿನ ಸಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು,ಪರೋಪಕಾರಿ ವೃತ್ತಿ ಜೀವನದ ಜತೆಗೆ ಬಹುಮುಖಿ ಪ್ರತಿಭೆಗಳ ಸಾಗರದಂತೆ ಗೋಚರಿಸುವವರಲ್ಲಿ ಕುವೈಟಿನಲ್ಲಿ ಉದ್ಯೋಗ ನಿರತರಾಗಿರುವ ಡಾ.ಸುರೇಂದ್ರ ನಾಯಕ್ ಅವರ ಸೇವೆ ಶ್ಲಾಘನೀಯ.
ವೈದ್ಯೋಹೀ ನಾರಾಯಣ ಎನ್ನುವುದು ಉಕ್ತಿ. ಈ ಪದಕ್ಕೆ ಆನ್ವರ್ಥ ನಾಮರಾಗಿದ್ದುಕ್ಕೊಂಡು ತನ್ನ ಬದುಕಿನಲ್ಲಿ ಕೃತಾರ್ಥತೆಯ ಸೂಕ್ತಿ ಕಂಡುಕೊಂಡವರು ಡಾ.ಸುರೇಂದ್ರ ನಾಯಕ್. ವೈದ್ಯರಾಗಿ,ಸಂಘಟಕರಾಗಿ,ಭಜನಾ ಸಂಕೀರ್ತನಗಾರರಾಗಿ,ಸಾಮಾಜಿಕ ವಲಯದ ಕೊಡುಗೈದಾನಿಯಾಗಿ ಹೀಗೆ ತನ್ನ ವ್ಯಕ್ತಿತ್ವವನ್ನು ಬಹುಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಪಾದರಸ ವ್ಯಕ್ತಿತ್ವದ ಸಾಧಕರೋರ್ವರನ್ನು ಈ ಬಾರಿ ವಿಶೇಷ ಚಾನೆಲ್ ವಿದೇಶ ವಿಶೇಷ ಸಂಚಿಕೆ ಮೂಲಕ ಪರಿಚಯಿಸುತ್ತಿದೆ.
ಬಾಲ್ಯ-ಬದುಕು: ಮೂಲತಃ ಉಡುಪಿ ಜಿಲ್ಲೆಯ ಹರಿಖಂಡಿಗೆ ನಿವಾಸಿ ಯಾಗಿರುವ ದಿ. ಕೆ. ನಾರಾಯಣ ನಾಯಕ್- ರಾಜೀವಿ ನಾಯಕ್ ದಂಪತಿಗಳ ಪುತ್ರರಾದ ಸುರೇಂದ್ರ ನಾಯಕ್ ಹುಬ್ಬಳ್ಳಿ ಕಿಮ್ಸಿ ನಿಂದ ಎಂಬಿಬಿಎಸ್ ಪದವಿ ಹಾಗೂ ಮಂಗಳೂರು ಕೆ.ಎಂ.ಸಿ.ಯಲ್ಲಿ ಎಂ.ಡಿ. ಪದವಿಯನ್ನು ಗಳಿಸಿಕೊಂಡು ಡಾ.ಸುರೇಂದ್ರ ನಾಯಕ್ ಆಗಿ ಗುರುತಿಸಿಕೊಂಡರು.ಕರಾವಳಿಯ ಕನ್ನಡಿಗರಾಗಿರುವ ಇವರ ಮಾತೃಭಾಷೆ ಕೊಂಕಣಿ,ಆಡು ಭಾಷೆ ತುಳು,ಔದ್ಯೋಗಿಕವಾಗಿ ಆಂಗ್ಲ ಹಾಗೂ ಹಿಂದಿ ಭಾಷೆಯ ಸಂಪನ್ನತೆ ಗಳಿಸಿಕೊಂಡ ಇವರು ಮಿತಭಾಷಿ.
ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡಿರುವ ಸರಳ ಸಜ್ಜನ ವ್ಯಕ್ತಿತ್ವ,ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಆಸಿಸ್ಟೆಂಟ್ ಪ್ರೋಫೆಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಇವರು 2002ರಲ್ಲಿ ಉದ್ಯೋಗಕ್ಕಾಗಿ ಕೊಲ್ಲಿ ರಾಷ್ಟ್ರದ ಕುವೈಟನ್ನು ಆರಿಸಿಕೊಂಡರು. ಇದೀಗ ಕುವೈಟ್ ನ Histopathology Dept Maternity Hospitelನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೌಟುಂಬಿಕ : ಈ ಡಾಕ್ಟರದ್ದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸಂಸಾರವಾದ್ದರಿಂದ ಕೌಟುಂಬಿಕ ವಾತವರಣ ಸಹಜವಾಗಿಯೇ ಸಂಸ್ಕಾರಗಳು ಕರಗತವಾಗಿತ್ತು. ಬಾಲ್ಯದಿಂದಲೇ ಮನೆ ಪರಿಸರದಲ್ಲಿ ನಡೆಯುತ್ತಿದ್ದ ಭಜನೆ,ಸಂಕೀರ್ತನೆಗಳ ಬಗ್ಗೆ ಬಹು ಆಕರ್ಷಿತರಾಗಿದ್ದರು.ಮನೆ ಸಮೀಪದ ಹರಿಕಂಡಿಗೆ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಭಜನೆ ಹಾಡಲು ಪ್ರಾರಂಭಿಸಿದ ಸುರೇಂದ್ರ ನಾಯಕ್ ಅವರು ಸುಸ್ವರ ಮಿಳಿತವಾಗಿ ಭಜನೆ ಹಾಡುವುದನ್ನು ಕರಗತ ಮಾಡಿಕೊಂಡವರು. ಜತೆಗೆ ಹಾರ್ಮೋನಿಯಂ ಬಾರಿಸುವುದನ್ನು ಕೂಡ ಕಲಿತಿರುವ ಇವರು ಹಾಡು ಹಾಗೂ ಸಂಗೀತ ವಾದನ ಇವೆರಡಲ್ಲೂ ಸೈ ಎನಿಸಿಕೊಂಡವರು. ರಂಗ ನಟನೆಯ ಬಗ್ಗೆ ಅಭಿರುಚಿ ಬೆಳೆಸಿಕೊಂಡಿರುವ ಇವರು ಉತ್ತಮ ನಟರಾಗಿಯೂ ಪ್ರತಿಭೆ ಮೆರೆದಿದ್ದಾರೆ.
ಸಹೃದಯತೆಯ ಸಂಘಟಕ: ಕನ್ನಡಿಗರಾಗಿರುವ ಡಾ.ಸುರೇಂದ್ರ ನಾಯಕ್ 2012ರಲ್ಲಿ ಕುವೈಟ್ ಕನ್ನಡ ಕೂಟದ ಅಧ್ಯಕ್ಷರಾಗಿ ಹಲವಾರು ಕನ್ನಡಪರ ಚಟುವಟಿಕೆಯನ್ನು ನಡೆಸುವಲ್ಲಿ ಸಕ್ರಿಯರಾಗಿದ್ದವರು.
ಕುವೈತ್ ಕನ್ನಡ ಕೂಟ ಭಜನಾ ಮಂಡಳಿಯ ಮುಖ್ಯಸ್ಥರಾಗಿ ಬಹಳಷ್ಟು ಕೀರ್ತನೆಗಳಿಗೆ ಭಕ್ತಿಭಾವದಿಂದ ಸುಸ್ವರ ನೀಡಿದ ಸುಮಧುರ ಕಂಠದ ಗಾಯಕರು. ವರ್ಷಂಪ್ರತಿ ನಡೆಯುವ ದಾಸೋತ್ಸವ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ನೇತ್ರತ್ವ ವಹಿಸಿ ಗಾನ ಮಾಧುರ್ಯತೆಯನ್ನು ಉಣಬಡಿಸಿ ಭಕ್ತಾದಿಗಳನ್ನು ಸಂತೃಪ್ತ ಪಡಿಸುತ್ತಿದ್ದಾರೆ.
ಭಾರತದ ಖ್ಯಾತ ಗಾಯಕರಾದ ಶಂಕರ್ ಶ್ಯಾನ್ ಭೋಗ್,ರವೀಂದ್ರ ಪ್ರಭು,ಕಲಾವತಿ ದಯಾನಂದ್, ಜಯತೀರ್ತಾ ಮೆವುಂಡಿ,ವಾಗೀಶ್ ಭಟ್,ಪಂಡಿತ್ ಉಪೇಂದ್ರ ಭಟ್,ನಕುಲ್ ಅಭ್ಯಾಂಕರ್,ಪ್ರೊಫೆಸರ್ ನರೇಂದ್ರ ನಾಯಕ್,ಪ್ರೊಫೆಸರ್ ರಂಗ ಪೈ,ದೀಪಕ್ ನಾಯಕ್, ವಿಲಾಸ್ ನಾಯಕ್ (ಸ್ಪೀಡ್ ಪೇಂಟ್ ಕಲಾವಿದರು) ಮೊದಲಾದವರನ್ನು ಕುವೈತ್‌ಗೆ ಆಹ್ವಾನಿಸಿ ಜಿಎಸ್ ಬಿ , ಕನ್ನಡ ಕೂಟ ಮತ್ತು ಐಡಿಎಫ್ ನ ವತಿಯಿಂದ ಪ್ರದರ್ಶನ ನೀಡಲು ಅವಕಾಶ ನೀಡುವಲ್ಲಿ ಡಾ.ಸುರೇಂದ್ರ ನಾಯಕ್ ನೇತೃತ್ವವಹಿಸಿದ್ದಾರೆ.
ಕುವೈಟ್ ತುಳು ಕೂಟದ ಸದಸ್ಯರಾಗಿ ಹಲವಾರು ತುಳು ಕಾರ್ಯಕ್ರಮಕ್ಕೂ ಉದಾರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ.
2018ನೇ ಸಾಲಿನ ಇಂಡಿಯನ್ ಡಾಕ್ಟರ್ಸ್ ಫೋರಂ ನ ಅಧ್ಯಕ್ಷರಾಗಿ ವೈದ್ಯ ಉದ್ಯೋಗಿಗಳ ಬವಣೆಯನ್ನು ಸಮೀಪದಿಂದ ಅರಿತಿದ್ದಾರೆ.
ಜಿಎಸ್ ಬಿ ಸಭಾ ಕುವೈಟ್ ನ ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿದ್ದುಕೊಂಡು ಬಹಳಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಜನರ ಸಂಕಷ್ಟದ ಸಮಯದಲ್ಲಿ ಸ್ಪಂದನೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಸಮಾಜ ಸೇವಕ ಹಾಗೂ ಕೊಡುಗೈ ದಾನಿ ಇವರಾಗಿದ್ದಾರೆ.
ಇಂಡಿಯನ್ ಡಾಕ್ಟರ್ಸ್ ಫೋರಂ ನ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವ ಸಂದರ್ಭದಲ್ಲಿ ವಿಶ್ವವೇ ತತ್ತರಿಸಿದ ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ICSG (Indian community SUPPORT group ) ನೊಂದಿಗೆ ಸೇರಿಕೊಂಡು 17000 ಜನರಿಗೆ ಒಂದು ತಿಂಗಳ ಅವಧಿಗೆ ಪಡಿತರ ನೀಡಿ ಸೇವಾ ಭಾವ ಮೆರೆದಿದ್ದಾರೆ.
ಕಳೆದ ಕೋವಿಡ್ ಸಮಯದಲ್ಲಿ 43 ವೈದ್ಯರಿಂದ ಉಚಿತ ಸೇವೆಯನ್ನು ಏರ್ಪಡಿಸಿದ್ದರು.ಆರೋಗ್ಯ ಜಾಗೃತಿ ಮಾತುಕತೆ, ಸೆಮಿನಾರ್‌ಗಳು ಮತ್ತು ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಅರಿವು ಮೂಡಿಸಿದ ಆರೋಗ್ಯ ಶಿಬಿರಗಳು ಇವರ ನೇತೃತ್ವದಲ್ಲಿ ಭಾರತೀಯ ವೈದ್ಯರ ವೇದಿಕೆಯ (ಐಡಿಎಫ್) ಪ್ರಮುಖ ಸಮುದಾಯ ಚಟುವಟಿಕೆಯಾಗಿ ಗುರುತಿಸಲ್ಪಟ್ಟಿತ್ತು . ಪ್ರತಿ ಆರೋಗ್ಯ ಶಿಬಿರದಲ್ಲಿ 500 ರಿಂದ 1000 ಜನರಿಗೆ ಉಚಿತ ಆರೋಗ್ಯ ಸಮಾಲೋಚನೆ ನೀಡಲಾಗಿದ್ದು,
ಕೋವಿಡ್ ಸಮಯದಲ್ಲಿ ಅನಾರೋಗ್ಯ ಪೀಡಿತರನ್ನು ತಾಯ್ನಾಡಿಗೆ ವಾಪಸ್ ಕಳುಹಿಸುವಲ್ಲಿ ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಇವರು ಕೆಲಸ ಮಾಡಿದ್ದಾರೆ. ಚುರುಕು ಚಟುವಟಿಕೆಯ ಇವರ ಸಮಾಜ ಉದ್ಧಾರಕ ಕಾರ್ಯಗಳು ಇಂದಿಗೂ ನಿರಂತರ ಸಾಗುತ್ತಲೇ ಇದೆ.
ಧರ್ಮಪತ್ನಿ ಸುಗುಣ ನಾಯಕ್ (ಬ್ಯಾಂಕ್ ಆಫ್ ಬರೋಡಾ ಉದ್ಯೋಗಿ),ಪುತ್ರ ಡಾ.ಸಚೀಂದ್ರ ನಾಯಕ್ ಕಪಾಡಿ (ಸ್ಕಾಟ್ಲೆಂಡ್ ನಎಡಿನ್ಬರ್ಗ್ ನಲ್ಲಿ ಆರ್ಥೋಪೆಡಿಶಿಯನ್) ಪುತ್ರಿ ಸುರಕ್ಷಾ ನಾಯಕ್ -(ಬಿಇ -ಇನ್‌ಫೋಸಿಸ್ ಉದ್ಯೋಗಿ) ಎಂಬವರೊಡನೆ ಸಂತೃಪ್ತ ಸಂಸಾರ ಸಾಗಿಸುತ್ತಿರುವ ಡಾ.ಸುರೇಂದ್ರ ನಾಯಕ್ ಅವರ ಬದುಕು ಹಾಗೂ ಸಾಧನೆ ಸರ್ವರಿಗೂ ಆದರ್ಶನೀಯವಾಗಿದೆ.


















0 Comments