ಸಿನಿಮಾ_ವಿಶೇಷ
'777 ಚಾರ್ಲಿ' ಸಿನಿಮಾದ ಐಡಿಯಾ ತಲೆಗೆ ಹೊಕ್ಕಾಗಲೇ ಈ ಕಿರಣ್ ರಾಜ್ ಇದರ ಕಥೆಯನ್ನು ತೀರಾ RAW ಆಗಿ ನನಗೆ ಹೇಳಿದ್ದ. ಆಗಲೇ ನನಗೆ ಅನಿಸಿತ್ತು : ಮೊದಲ ಸಿನಿಮಾವೇ ಈ ಹುಡುಗನನ್ನು ಯಾವುದೋ ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ. ಆದರೆ ಇದನ್ನು ನೇರವಾಗಿ ಈತನ ಕಿವಿಗೆ ಹಾಕಿದರೆ ಅಪಾಯ ತಪ್ಪಿದ್ದಲ್ಲ ಎನ್ನುವ ಕಾರಣಕ್ಕೆ ವರ್ಷಗಳ ಹಿಂದೆಯೇ ಒಂದು ಕಿವಿಮಾತು ಹೇಳಿದ್ದೆ : 'ಕಿರಣ್, ಇದೊಂದು ಅಸಾಮಾನ್ಯ ಸಿನಿಮಾವಾಗಲಿದೆ. ಶ್ವಾನವೊಂದು ಮುಖ್ಯ ಪಾತ್ರದಲ್ಲಿರುವುದಾದರೂ ಜತೆಗೊಬ್ಬ ಹೃದಯವಂತ ನಟನನ್ನು ಆಯ್ಕೆ ಮಾಡಿಕೋ. ನಿನ್ನ ಅಭಿಮಾನದ ನಟ ರಕ್ಷಿತ್ ಶೆಟ್ಟಿಯವರನ್ನು ಕೇಳಿ ನೋಡು. ಕಥೆ ಕೇಳಿದರೆ ಅವರು ಒಪ್ಪಿಕೊಳ್ಳುವುದರಲ್ಲಿ ಯಾವ ಅನುಮಾನವೂ ಬೇಡ. ಒಪ್ಪಿದರೆ ನೀನು ಪೂರ್ತಿ ಗೆದ್ದಂತೆಯೇ. ಆದರೆ ನೆನಪಿಡು ಹುಡುಗಾ : ಯಾವುದೇ ಹಂತದಲ್ಲಾದರೂ ನೀನು ಸೌಂಡ್ ಮಾಡಬೇಡ. ನಿನ್ನ ಸಿನಿಮಾ ಸೌಂಡ್ ಮಾಡುತ್ತಾ ಹೋಗಲಿ...'
ನಾನು ಎರಡು ವರ್ಷಗಳ ಹಿಂದೆ ಕಿರಣ್ ಕಿವಿಯಲ್ಲಿ ಹೇಳಿದ ಮಾತು ಇದೀಗ ನಿಜವಾಗಿದೆ! '777 ಚಾರ್ಲಿ' ಸೌಂಡ್ ಮಾಡುತ್ತಿದೆ. ಕಾಸರಗೋಡಿನ ಈ ಹುಡುಗನ ಎದೆಯಲ್ಲಿ 'ಡಬ್ ಡಬ್' ಶುರುವಾಗಿದೆ!
ಹೀಗೆ ಕಿರಣ್ ಎದೆಯಲ್ಲಿ 'ಡಬ್ ಡಬ್' ಶುರುವಾಗುವ ಮೊದಲೇ ಅಂದರೆ ಸಿನಿಮಾ ಗೀಳಿನಿಂದ ಬೆಂಗಳೂರು ಸೇರಿಕೊಂಡಾಗಲೇ ಈತನ ಕುಟುಂಬಸ್ಥರ ಎದೆಯಲ್ಲಿ 'ಡಬ್ ಡಬ್' ಶುರುವಾಗಿತ್ತು! ಅನಿಶ್ಚಿತತೆಯ ಚಿತ್ರರಂಗವನ್ನು ನಂಬಿಕೊಂಡು ಹೋದ ಈ ಹುಡುಗನ ಭವಿಷ್ಯ ಏನಾಗುವುದೋ ಎನ್ನುವ ಆತಂಕ ಅವರಿಗೆ. ಕಾಸರಗೋಡಿನಲ್ಲಿ ಕಿರಣನದ್ದು ದೊಡ್ಡ ಕುಟುಂಬ. ಈ ದೊಡ್ಡ ಕುಟುಂಬದ ಆತಂಕ ಕೂಡಾ ದೊಡ್ಡದೇ...
ಕಿರಣನ ತಾಯಿಯ ತಮ್ಮನೊಬ್ಬರು ಕಾಸರಗೋಡಿನ ಸರ್ಕಾರೀ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಲ್ಲಿದ್ದಾರೆ. ಅವರ ಹೆಸರು : ರತ್ನಾಕರ ಮಲ್ಲಮೂಲೆ. ಒಳ್ಳೆಯ ಯಕ್ಷಗಾನ ಪಟು. ಮನೆ ತುಂಬಾ ಕಲಾವಿದರಿದ್ದರೂ ಸಿನಿಮಾ ಕ್ಷೇತ್ರ ಮಾತ್ರ ಅಪರಿಚಿತ. ಇಂಥಾ ಅಪರಿಚಿತ ಕ್ಷೇತ್ರವನ್ನು ನಂಬಿ ಬದುಕು ರೂಪಿಸ ಹೊರಟಿರುವ ಕಿರಣ್ ಬಗ್ಗೆ ಈ ಸೋದರ ಮಾವನಿಗೂ ಆತಂಕವಿದ್ದೇ ಇತ್ತು. ನನ್ನ ಆತ್ಮೀಯರೂ ಆಗಿರುವ ರತ್ನಾಕರ್ ಅವರ ಆತಂಕದ ಮಾತುಗಳು ಹೀಗಿವೆ :
'ಅವ ನನ್ನ ಅಕ್ಕನ ಮಗ ಸರ್.
ಸೋದರಳಿಯ. ನನಗೆ ಒಬ್ಬಳು ಅಕ್ಕ, ಮೂವರು ಅಣ್ಣಂದಿರು. ಅಕ್ಕನಿಗೆ ಮೂವರು ಮಕ್ಕಳು.
ದೊಡ್ಡವ ಕಿರಣ. ಅವನಿಗೊಬ್ಬ ತಮ್ಮ ಮತ್ತು ತಂಗಿ. ಅವನ ಅಮ್ಮ ಅಂದರೆ ನನ್ನ ಅಕ್ಕ ಮಲ್ಲಮೂಲೆಯಲ್ಲೇ ಇರುವುದು, ನಮ್ಮ ಮುಖ್ಯ ಮನೆಯಲ್ಲಿ. ಕಿರಣ್ ಆಯ್ಕೆ ಮಾಡಿಕೊಂಡ ಕ್ಷೇತ್ರ ನಮಗೆಲ್ಲರಿಗೂ ಅಪರಿಚಿತ. ಅವನ ಈ ಸಿನೆಮಾ ಎಲ್ಲಾ ರೀತಿಯಿಂದಲೂ ಗೆದ್ದರೆ ಸಾಕಿತ್ತು. ಅವನ ಅವಿಶ್ರಾಂತ ಪರಿಶ್ರಮ ಸಾರ್ಥಕ ಆಗಬೇಕು. ಜತೆಗೆ ಈ ಸವಾಲಿನ ಕ್ಷೇತ್ರದಲ್ಲಿ ಮುನ್ನುಗ್ಗಲು ಅವಕಾಶವೂ ಆಗಬೇಕು. ನಿಮ್ಮಂತಹ ಅನುಭವಿ ಹಿರಿಯಣ್ಣನ ಪ್ರೋತ್ಸಾಹ, ಪ್ರೀತಿ ಆತನ ಮೇಲೆ ಸದಾ ಇರಲಿ. ಸಿನೆಮಾ ಕ್ಷೇತ್ರ ನಮ್ಮ ಇಡೀ ಕುಟುಂಬಕ್ಕೆ ಹೊಸತು. ಸಿನೆಮಾದ ಏಳುಬೀಳುಗಳ ಕತೆ ಕೇಳಿ ನೋಡಿ ನನಗೆ ಗೊತ್ತಷ್ಟೆ. ಆಗ ಮನೆ ಹುಡುಗನೊಬ್ಬ ದಿಡೀರ್ ಆ ಕ್ಷೇತ್ರಕ್ಕೆ ಮುನ್ನುಗ್ಗುವಾಗ ಆತಂಕ ಸಹಜ ತಾನೇ? ಅವನ ಛಲ, ಕಠಿಣ ಪರಿಶ್ರಮ ಮತ್ತು ಯೋಚನೆ ಮಾತ್ರ ಶಾರ್ಪ್ ಇತ್ತು. ಅದನ್ನು ನಾನು ಗುರುತಿಸಿದ್ದೆ. ಇನ್ನು ಅದು ನಿಮ್ಮಂತಹ ಅನುಭವಿ ಹಿರಿಯರ ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಗಟ್ಟಿಯಾಗಬೇಕು. ನಿಮ್ಮಂಥವರ ಮಾತು ಅವನ ಭವಿಷ್ಯಕ್ಕೆ ಶ್ರೀರಕ್ಷೆಯಾಗಲಿ. ನೀವೆಲ್ಲ ಹೀಗೆ ಭರವಸೆಯಿಂದ ಮಾತನಾಡುವಾಗ ಖುಷಿಯಾಗುತ್ತದೆ...' - ಹೀಗೆಂದು ಹೇಳಿ ಶೂನ್ಯವನ್ನು ದಿಟ್ಟಿಸಿದ್ದರು! ನಾನು ಕಿರಣ್ ಬಗ್ಗೆ ಭರವಸೆಯ ಮಾತಾಡಿದಾಗ ಸ್ವಲ್ಪವೇ ಸ್ವಲ್ಪ ಸುಧಾರಿಸಿಕೊಂಡಿದ್ದರು ರತ್ನಾಕರ ಮಲ್ಲಮೂಲೆ!
ಗಟ್ಟಿಯಾದ ಕಥೆ, ಹಠಮಾರಿ ಹುಡುಗನ ಕೆಲಸದ ಮೇಲಿನ ತನ್ಮಯತೆ, ಶ್ವಾನವೊಂದರ ಅದ್ಭುತ ಪರ್ಫಾರ್ಮೇನ್ಸ್, ನಿರ್ಮಾಪಕರ ಸಪೋರ್ಟ್ ಮತ್ತು ರಕ್ಷಿತ್ ಶೆಟ್ಟಿ ಎಂಬ ಹೃದಯವಂತನ ಅಮೋಘ ನಟನೆ '777 ಚಾರ್ಲಿ' ಸಿನಿಮಾವನ್ನು ಒಂದು ಅದ್ಭುತ ಅನುಭವವನ್ನಾಗಿ ರೂಪಿಸಿದೆ.
ಅನುಮಾನವೇ ಬೇಡ : ಕಿರಣ್, ರಕ್ಷಿತ್ ಮತ್ತು ಚಾರ್ಲಿ ರಾಷ್ಟ್ರವ್ಯಾಪಿ ಮನ್ನಣೆಗೆ ಪಾತ್ರರಾಗುತ್ತಾರೆ. ಅದರ ಸೂಕ್ಷ್ಮ ಲಕ್ಷಣ ಈಗಾಗಲೇ ವೇದ್ಯ...ಶುಭಂ...






0 Comments