ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ (DYAT) | ಲೇಖನ ಸರಣಿ 4

 


ವಿದೇಶ_ವಿಶೇಷ ಅಂಕಣ - 30

ದುಬಾಯಿಯಲ್ಲಿರುವ ಯಕ್ಷಗಾನ‌ ಆಸಕ್ತರನ್ನು ತಮ್ಮ ಅಭಿರುಚಿಗನುಗುಣವಾಗಿ ಪ್ರೋತ್ಸಾಹಿಸುವ ಜತೆಗೆ ಕಲಾ ರಂಗವನ್ನು ಬೆಳೆಸುವ ಮಹತ್ತರ ಉದ್ದೇಶದ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ (DYAT)ನ ಕಲಾವಿದರ ಪರಿಚಯವನ್ನು ವಿದೇಶ_ವಿಶೇಷ ಸಂಚಿಕೆ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ.

(ಕಳೆದ ಸಂಚಿಕೆಯಿಂದ ಮುಂದುವರಿದುದು...)



                                     ಪ್ರಭಾಕರ ಡಿ. ಸುವರ್ಣ :

ಪ್ರಭಾಕರ ಡಿ. ಸುವರ್ಣ ಅವರು ಯಕ್ಷಗಾನ ಸಂಘಟಕರಾಗಿ, ಕಲಾಪೋಷಕ, ಕಲಾವಿದರಾಗಿ ತನ್ನ ಇಳಿ ವಯಸ್ಸಿನಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತನ್ನ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ೨೦೧೨ ರಲ್ಲಿ ದುಬೈಯ ಯಕ್ಷಗಾನ ಅಭ್ಯಾಸ ತರಗತಿಗೆ ಸೇರ್ಪಡೆಗೊಂಡ ಇವರು ಯಕ್ಷಗಾನ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್, ಶರತ್ ಕುಡ್ಲ ಅವರಿಂದ ನಾಟ್ಯ, ಅರ್ಥಗಾರಿಕೆ ಕಲಿತುಕೊಂಡವರು ಆರಂಭದ ದಿನಗಳಲ್ಲಿ ಕಿಶೋರ್ ಗಟ್ಟಿಯವರಿಂದಲೂ ತರಬೇತಿ ಪಡೆದಿದ್ದಾರೆ. ಈಗಾಗಲೇ ವಿವಿದೆಡೆ ಪ್ರದರ್ಶನಗೊಂಡ ಯಕ್ಷಗಾನದಲ್ಲಿ ವಿವಿಧ ಪ್ರಸಂಗದಲ್ಲಿ ಭಾಗವಹಿಸಿದ ಇವರು ಆದಿಮಾಯೆ, ಬ್ರಹ್ಮ, ವಿಷ್ಣು, ಈಶ್ವರ, ಸುಗ್ರೀವ, ಅಷ್ಟಭುಜೆ, ಶಮೀಕ, ಚೆನ್ನಯ, ಧರ್ಮರಾಯ, ಬಪ್ಪನಾಡು ದುರ್ಗಾಪರಮೇಶ್ವರಿ, ವಾಮನ, ವಿಭೀಷಣ ಮೊದಲಾದ ಪಾತ್ರಗಳನ್ನು ಯಶಸ್ವಿಯಾಗಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಮಾತ್ರವಲ್ಲದೆ ಶ್ರೀ ಕಟೀಲು ಮೇಳ, ಶ್ರೀ ಧರ್ಮಸ್ಥಳ ಮೇಳ, ಬಪ್ಪನಾಡು, ಬಾಳ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದಾರೆ.೧೯೫೧ ಜುಲೈ ೧೦ ರಂದು ದಾಸಪ್ಪ ಜತನ್ನ – ಕಲ್ಯಾಣಿ ದಾಸಪ್ಪ ದಂಪತಿಯ ಪುತ್ರನಾಗಿ ಜನಿಸಿದರು. ಧರ್ಮಪತ್ನಿ ವಸಂತಿ ಸುವರ್ಣ, ಅವರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. ಇಬ್ಬರು ಪುತ್ರಿಯರಲ್ಲಿ ಒಬ್ಬಾಕೆ ಪೃಥ್ವಿ ಸುವರ್ಣ ಯಕ್ಷಗಾನ ಕಲಾವಿದೆಯಾಗಿ ಬಣ್ಣ ಹಚ್ಚಿದವರು. ಬಿ.ಕಾಂ ಪದವೀಧರನಾದ ಇವರು ದುಬೈಯ ಅಲ್‌ಶಾಯ ಟ್ರೇಡಿಂಗ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. 


ಬಾಲ್ಯದಲ್ಲೇ ಇವರಿಗೆ ಯಕ್ಷಗಾನದ ಆಸಕ್ತಿ ಇತ್ತಾದರೂ ಅದನ್ನು ತನ್ನ ಜೀವನದ ಒಂದು ಭಾಗವನ್ನಾಗಿಸಿಕೊಳ್ಳುವ ಅವಕಾಶ ಲಭಿಸಿದ್ದು ಜೀವನದ ತುಂಬು ೫ ದಶಕಗಳನ್ನು ಕಳೆದ ಮೇಲೆ. ಅದೂ ದುಬಾಯಿಯ ನೆಲದಲ್ಲಿ. ಅದೂ ಇನ್ನಷ್ಟು ಪ್ರಜ್ವಲಿಸಿದ್ದು - ಸಾರ್ಥಕಗೊಂಡಿರುವುದು ದುಬೈಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಎಂಬುವುದು ಹೆಮ್ಮೆಯ ಸಂಗತಿ. ಯಕ್ಷಗಾನವೆಂಬ ದೈವಿಕ ಕಲೆಯನ್ನು ಆರಾಧಿಸಿಕೊಂಡು ಅದನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಿದ ಪ್ರಭಾಕರ ಸುವರ್ಣ ಅವರನ್ನು ವಿವಿಧ ಸಂಘ - ಸಂಸ್ಥೆಗಳ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಬಿಲ್ಲವಾಸ್ ದುಬೈ, ರಜತ ಚಂದ್ರ, ಅಮ್ಮುಂಜೆ ಮಹೋತ್ಸವ, ಸುವರ್ಣ ಪ್ರತಿಷ್ಠಾನ, ಯಕ್ಷಮಿತ್ರರು ದುಬೈ, ಮುಂಬಯಿಯಲ್ಲಿ ಅಸ್ರಣ್ಣ ವೇದಿಕೆ ಮೊದಲಾದ ಕಡೆಗಳಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಯಕ್ಷಗಾನ ರಂಗದಲ್ಲಿ ಇನ್ನಷ್ಟು ಸಾಧನೆಗೈಯಲಿರುವ ಎಲ್ಲಾ ಸಾಧ್ಯತೆಗಳು ಇವರಿಗಿರುವುದು ಹೆಮ್ಮೆಯ ವಿಷಯವಾಗಿದೆ. ತಾನೇ ಸ್ಥಾಪಕನೂ, ಮುಖ್ಯ ಕಾರ್ಯಕರ್ತನೂ, ಮುಖ್ಯ ಪ್ರಾಯೋಜಕನೂ ಆಗಿರುವ ಸುವರ್ಣ ಪ್ರತಿಷ್ಠಾನ ಕರ್ನಿರೆ ಎಂಬ ಸಂಸ್ಥೆ ಸ್ಥಾಪಿಸಿ ಕಲೆ, ಕಲಾವಿದರಿಗೆ ಉದಾರವಾಗಿ ಸಹಾಯ ನೀಡುವುದಲ್ಲದೇ ತನ್ನ ಸುವರ್ಣ ಪ್ರತಿಷ್ಠಾನದ ಮೂಲಕ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ತುಂಬು ಹೃದಯದಿಂದ ಸಹಾಯ ನೀಡುವ ದಾನಿಗಳೂ ಆಗಿದ್ದಾರೆ.ಕೋರೋನದ ವಿಷಮ ಕಾಲದಲ್ಲಿ ಕಲಾವಿದರಿಗೆ, ಮತ್ತು ಬಡ ಜನರಿಗೆ ಆಹಾರ ಕಿಟ್ ಪೂರೈಸಿದ್ದಾರೆ. ೭೦ ವಸಂತಗಳು ಮುಂದುವರಿದು, ಯುವಕರೂ ನಾಚುವಂತೆ ಉತ್ಸಾಹದ ಬುಗ್ಗೆ ಯಾಗಿರುವ ಇವರ ಯಕ್ಷರಂಗದ ಪ್ರವೇಶ ವಿಳಂಬವಾದರೂ ಎರಡು ಮುಖ್ಯ ಕಾರಣಗಳಿಂದ ಪ್ರಾಮುಖ್ಯ ಪಡೆಯುವುದು, ಒಂದು, ಇವರು ಹಮ್ಮಿಕೊಂಡ ಅನೇಕ ಯಕ್ಷಗಾನ ಕಾರ್ಯಕ್ರಮ-ಮತ್ತದೇ ವೇದಿಕೆಯಲ್ಲಿ ಅನೇಕ ಕಲಾವಿದರಿಗೆ ಸನ್ಮಾನ ಗಳ ಮೂಲಕ ಅನೇಕ ಕಲಾವಿದರ ಅನ್ನಕ್ಕೆ ಕಾರಣರಾದವರು. ಮಾತ್ರವಲ್ಲದೆ, ಅನೇಕ ಬಡ ಕಲಾವಿದರಿಗೆ, ಕಲಾವಿದರ ಮಕ್ಕಳಿಗೆ ಸಹಾಯಧನ, ವಿದ್ಯಾಭ್ಯಾಸ ನೀಡುತ್ತಿದ್ದಾರೆ.



        ಶಮಂತ ಗಿರೀಶ್, ಗಿರೀಶ್ ನಾರಾಯಣ್ ಶೆಟ್ಟಿಗಾರ್ :

ಶಮಂತ ಗಿರೀಶ್, ಯಕ್ಷಗಾನವನ್ನು ಗಂಡುಕಲೆ ಎನ್ನುವುದಾದರೆ ಅಸುರ, ರಾಜವೇಷಗಳ ಪೌರುಷ, ನಾಟ್ಯ, ಭಾವಾಭಿನಯದ ಗಾಂಭೀರ್ಯ ಇದರಿಂದಲೇ ಗಂಡು ಮೆಟ್ಟಿದ ಕಲೆ ಆಗಿತ್ತು. ಆದರೆ ಕಲೆಗೆ ಲಿಂಗ ಭೇದವೇನು? ಲಲನೆಯರು ಈ ಕಲೆಯಲ್ಲಿಂದು ಮಿಂಚುತ್ತಿರುವುದು ಈ ಕಲೆಯ ಉಳಿವಿನ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆ ಯು.ಎ.ಇ ರಾಷ್ಟ್ರದ ದುಬಾಯಿಯಲ್ಲಿ ಯಕ್ಷಗಾನ ಅಭ್ಯಾಸ ತರಗತಿ ಕೇಂದ್ರದಲ್ಲಿ ಯಕ್ಷಗುರು ಶೇಖರ್ ಡಿ. ಶೆಟ್ಟಿಗಾರ್‌ರು ತರಬೇತಿ ನೀಡುತ್ತಿದ್ದು ಇಲ್ಲಿ ಪಳಗುತ್ತಿರುವ ಶ್ರೀಮತಿ ಸಮಂತ ಗಿರೀಶ್ ಯಕ್ಷಲೋಕಕ್ಕೆ ದಿಟ್ಟ ಹೆಜ್ಜೆಯಿರಿಸಿ ಸದ್ದು ಮಾಡಿದ್ದಾಕೆ ದುಬಾಯಿ ಯಕ್ಷರಂಗ ಭೂಮಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಮಹಿಳಾ ಕಲಾವಿದರಲ್ಲಿ ಹುರುಪು ಮೂಡಿಸಿದ್ದಾರೆ.ದಕ್ಷಿಣ ಕನ್ನಡ ಹಿರಿಯ ತಾಳಮದ್ದಳೆ ಕಲಾವಿದರಾಗಿರುವ ದಿವಂಗತ ರಾಮಪ್ಪ ಹೆಗ್ಡೆಯವರ ಮೊಮ್ಮಗಳು. ತಂದೆ ಸುರೇಶ್ ಹೆಗ್ಡೆ, ತಾಯಿ ಶ್ರೀಲತ ಹೆಗ್ಡೆ ೧೯೯೦ ಜುಲೈ ೨೯ರಂದು ಜನಿಸಿದ ಸಮಂತ ಅವರು ಸಿ.ಎ. ಉನ್ನತ ವ್ಯಾಸಂಗ ಮುಗಿಸಿ ಸದ್ಯ ದುಬೈಯಲ್ಲಿ ಎಚ್.ಎಸ್.ಬಿ.ಸಿ ಬ್ಯಾಂಕ್ ಉದ್ಯೋಗಿಯಾಗಿದ್ದಾಳೆ. ಪತಿ ಗಿರೀಶ್ ನಾರಾಯಣ ಕೂಡ ಯಕ್ಷಗಾನ ಕಲಾವಿದ ಪತಿಯ ಪ್ರೋತ್ಸಾಹ ಸದಾ ಇವರಿಗಿದೆ. ೨೦೧೪ ರಲ್ಲಿ ದುಬಾಯಿಯ ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿ ನಾಟ್ಯ ಹಾಗೂ ಅರ್ಥಗಾರಿಕೆಯನ್ನು ಕರಗತ ಮಾಡಿಕೊಂಡರು. ಯಕ್ಷಗಾನದಲ್ಲಿ ಮಿಂಚುತ್ತಿರುವಾಗಲೇ ಮತ್ತಷ್ಟು ಅಭ್ಯಾಸ, ಕಲಾಭ್ಯಾಸ ಮುಂದುವರಿಸುತ್ತಾ ಯಕ್ಷ ರಂಗದ ಸ್ಪಷ್ಟ ಒಳಮರ್ಮವನ್ನು ಅರಿಯಲು ಪ್ರಯತ್ನಿಸಿದ್ದಾರೆ. 


ಈಗಾಗಲೇ ದುಬಾಯಿ, ಒಮನ್, ಬಹರೈನ್, ಶಾರ್ಜ, ಅಬುಧಾಬಿ ಮೊದಲಾದೆಡೆಗಳ ಪ್ರದರ್ಶನಗಳಲ್ಲಿ ಸುಗ್ರೀವ, ಗಣಪತಿ, ವಿಭೀಷಣ, ಪಾರ್ವತಿ, ಜಾಂಬವತಿ ಮತ್ತು ಕೃಷ್ಣನ ಪಾತ್ರಗಳಿಗೆ ಜೀವ ತುಂಬಿ ಎಲ್ಲಾ ಪಾತ್ರಕ್ಕೂ ತಾನು ಸೈ ಎಂದು ಸಾಬೀತುಪಡಿಸಿದ್ದಾರೆ. ತಂಡದ ಅಗತ್ಯಕ್ಕೆ ಯಾವುದೇ ಪಾತ್ರವನ್ನಾದರೂ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನಷ್ಟು ಕಲಿಕೆ-ಸಾಧನೆಗಳ ಮೂಲಕ ಸತತ ಯಕ್ಷರಂಗದಲ್ಲಿ ಕಾಣಿಸಿಕೊಂಡು ಗಲ್ಪ್ ರಾಷ್ಟ್ರಗಳಲ್ಲಿ ಯಕ್ಷಗಾನ ಪ್ರಚಾರಕ್ಕೆ ತುಂಬಾ ಕೆಲಸ ಮಾಡಬೇಕೆಂಬ ಇಚ್ಛೆ ಹೊಂದಿದ್ದಾರೆ.೨೦೦೨ ರಲ್ಲಿ ತನ್ನ ೧೨ನೇ ಹರೆಯದಲ್ಲಿ ವಿದ್ಯಾರ್ಥಿನಿಯಾಗಿರುವಾಗಲೇ ವಿದುಷಿ ಶ್ರೀಮತಿ ವಿಜಯಕುಮಾರಿ ಅವರ ಶಿಷ್ಯೆಯಾಗಿ ಭರತನಾಟ್ಯ ಅಭ್ಯಾಸ ನಡೆಸಿದ್ದರು. ನಾಟಕ, ನೃತ್ಯ, ಸಂಗೀತ, ಭಜನೆ ಇತ್ಯಾದಿ ಕಲೆಗಳಲ್ಲಿ ಪ್ರವೀಣೆ. ಇವರ ಮುಂದಿನ ಕಲಾ ಬದುಕಿಗೆ ಶುಭ ಹಾರೈಕೆ.



                                ಗಿರೀಶ್ ನಾರಾಯಣ್ ಶೆಟ್ಟಿಗಾರ್: 

ದುಬೈಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಸಮರ್ಥ ಕಲಾವಿದ ಗಿರೀಶ್ ನಾರಾಯಣ ಶೆಟ್ಟಿಗಾರ್. ೧೯೮೪ ಎಪ್ರಿಲ್ ೨೪ ರಂದು ಇವರು ಜನಿಸಿದರು. ತಂದೆ ಪಿ. ನಾರಾಯಣ ಶೆಟ್ಟಿಗಾರ್, ತಾಯಿ ಪದ್ಮಾವತಿ ಎನ್. ಶೆಟ್ಟಿಗಾರ್ ಪತ್ನಿ ಸಮಂತ ( ಕಲಾವಿದೆ ) ಪುತ್ರ ಗ್ಯಾನ್ ಗಿರೀಶ್‌ರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ. ಬಿ.ಎ ಇಕಾನಮಿಕ್ಸ್ ಪೂರ್ತಿಗೊಳಿಸಿದ ಇವರು ಸಾಮಾಜಿಕ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ದುಬೈಯ ಗೋರಿಕಾ ಗ್ರೂಫ್ ಆಫ್ ಇಂಡಸ್ಟ್ರೀಸ್‌ನಲ್ಲಿ ಆಸಿಸ್ಟೆಂಟ್ ಹ್ಯೂಮನ್ ರಿಸೋರ್ಸ್ ಮ್ಯಾನೇಜರ್ ಆಗಿದ್ದಾರೆ. ಇವರ ಅಜ್ಜ ನಿವೃತ್ತ ಅಧ್ಯಾಪಕರಾದ ಪಣಂಬೂರು ಶಿವ ಶೆಟ್ಟಿಗಾರ್ ಯಕ್ಷಗಾನ ಕಲಾವಿದರಾಗಿದ್ದರು ಮತ್ತು ಗಿರೀಶರಿಗೆ ಬಾಲ್ಯದ ಪ್ರೇರಣೆಯಾಗಿದ್ದವರು.


ಇವರು ಪ್ರಥಮವಾಗಿ ಡಾ.ದಿನಕರ ಪಚ್ಚನಾಡಿ, ದೀಪಕ್ ರಾವ್ ಪೇಜಾವರ (೨೦೦೪) ಅವರಿಂದ ನಾಟ್ಯಾಭ್ಯಾಸ 
ಮಾಡಿ, ನಂತರ ೨೦೧೨ ರಿಂದ ಶೇಖರ್ ಡಿ. ಶೆಟ್ಟಿಗಾರ್‌ರಿಂದ ದುಬೈ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಹೆಚ್ಚಿನ ಹೆಜ್ಜೆಗಾರಿಕೆ, ಅರ್ಥಗಾರಿಕೆ ಪ್ರಸಾಧನ ಕಲೆಯಲ್ಲಿ ಪಳಗುತ್ತಿದ್ದಾರೆ. ಈಗಾಗಲೇ ದುಬೈ ಮತ್ತು ಇತರ ಗಲ್ಫ್ ರಾಷ್ಟ್ರಗಳ ವಿವಿದೆಡೆ ನಡೆದ ಯಕ್ಷಗಾನಗಳಲ್ಲಿ ಹಲವಾರು ವೇಷಗಳನ್ನು ಧರಿಸಿದ್ದಾರೆ. ಆ ಮೂಲಕ ಸಮುದ್ರದಾಚೆಗಿನ ನಾಡಿನಲ್ಲೂ ಗಂಡು ಮೆಟ್ಟಿನ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆಪಾತ್ರರಾಗಿದ್ದಾರೆ. ಬಾಡಿ ಪೈಂಟಿಂಗ್, ಕ್ಯಾನ್‌ವಾಸ್ ಪೈಂಟಿಂಗ್, ರಂಗನಾಟಕ, ಜಾನಪದ ನೃತ್ಯ ಹಾಗೂ ಬಣ್ಣಗಾರಿಕೆಯೇ ಮೊದಲಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ಈಗಾಗಲೆ ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಪ್ರಸಾಧನ ಕಲೆಯ ಪ್ರಾಥಮಿಕ ಪಾಠ ಇವರಿಗೆ ಲಕ್ಷ್ಮಣ ಮರಕಡ, ರಾಜೇಶ್ ಕಟೀಲುರವರಿಂದ ದೊರೆತಿದೆ. ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ಊರಿನಲ್ಲೂ, ವಿದೇಶದಲ್ಲೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿಕೊಂಡಿದ್ದಾರೆ.ಯಕ್ಷಗಾನದಲ್ಲಂತೂ ಎಲ್ಲಾ ವಿಧದ ವೇಷ ಮಾಡಿದ ಹೆಗ್ಗಳಿಕೆ ಇವರದ್ದು ಅವುಗಳಲಿ ದುಬಾಯಿಯ ಯಕ್ಷರಂಗದಲ್ಲಿ ತ್ರಿಜನ್ಮ ಮೋಕ್ಷದ ದಿತಿ, ಹಾಸ್ಯ, ಭಗದತ್ತ, ಕಟೀಲು ಕ್ಷೇತ್ರ ಮಹಾತ್ಮೆಯ ಮಾಲಿನಿ, ದುರ್ಜಯಾಸುರ, ಮಾನಿಷಾದ ಪ್ರಸಂಗದ ಅಗಸನ ಹೆಂಡತಿ, ರಾಕ್ಷಸದೂತ, ಮುದಿಯಪ್ಪಣ್ಣ, ಮಣಿಕಂಠ ಮಹಿಮೆ –ರತಿಕಲ್ಯಾಣ ಪ್ರಸಂಗದ ದುರ್ಮುಖಿ, ಕೌಡ್ಲಿಕ ದೂತ, ಚಕ್ರೇಶ್ವರ ಪರೀಕ್ಷಿತ ಪ್ರಸಂಗದ ಭೀಮ, ಮಕರಂದ, ಗುಣವತಿ, ನಾಗಪಾತ್ರಿ, ವಿಶ್ವ ತುಳು ಕೂಟದ ಜಾಂಬವತಿ ಕಲ್ಯಾಣದ ಸಿಂಹ, ಮಹಿಷಮರ್ದಿನಿ-ಜಗಜ್ಜನನಿ ಪ್ರಸಂಗದ ಮಧು ಹೀಗೆ ಮತ್ತೆ ಓಮಾನ್ ದೇಶದ ಮಸ್ಕತ್ ನಲ್ಲಿ ನಡೆದ ಭಕ್ತ ಪ್ರಹ್ಮಾದ- ಇಂದ್ರಜಿತು ಕಾಳಗದ ರಾವಣ ದೂತ ಮತ್ತು ಜಾಂಬವ, ಶಬರಿಮಲೆ ಅಯ್ಯಪ್ಪದ ಕುಂಭ- ಕೇಳು ಪಂಡಿತ, ಬೆಹರೈನ್ ನಾಡಿನ ಕೃಷ್ಣಾರ್ಜುನ ಪ್ರಸಂಗದ ದಾರುಕ, ವಿಜಯ ಪಾತ್ರಗಳು ಶಾರ್ಜ ಶ್ರೀ ಕೃಷ್ಣ ಲೀಲೆ ಪ್ರಸಂಗದ ವಿಜಯ ಪಾತ್ರ ಇತ್ಯಾದಿಗಳು ಮಾತ್ರವಲ್ಲದೆ ತಾಯ್ನಾಡು ಮತ್ತು ಕಾಶಿ, ಅಯೋಧ್ಯೆಯೇ ಮೊದಲಾದ ಭಾರತದ ಉದ್ದಗಲಕ್ಕೂ ಸಂಚರಿಸಿ ಕಲಾವಿದನಾಗಿ ಪಾಲ್ಗೊಂಡಿದ್ದಾರೆ.  ಹಾಸ್ಯ ಪ್ರಜ್ಞೆಯಿರುವ ಶ್ರೀಯುತರು ರಂಗದಲ್ಲಿ ರಂಜನೆಯ ನಟ. ಅನೇಕ ತುಳು ನಾಟಕಗಳಲ್ಲೂ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಜೊತೆಗೆ ಕರಾವಳಿ ಕರ್ನಾಟಕದ ಹುಲಿವೇಷ ಕುಣಿತದಲ್ಲೂ ಖ್ಯಾತರೆ, ಕುಣಿತ, ಹುಲಿವೇಷದ ಬಣ್ಣಗಾರಿಕೆ ಎಲ್ಲದರಲ್ಲೂ ಸೈ. ಬೆಹರೈನ್, ಮಸ್ಕತ್, ಓಮನ್, ಅಬುಧಾಬಿ, ದುಬೈ, ಶಾರ್ಜ, ಮಂಗಳೂರು ಮೊದಲಾದೆಡೆ ಯಕ್ಷಗಾನ, ನಾಟಕ, ತಾಳಮದ್ದಳೆ, ಹುಲಿವೇಷ, ಕುಣಿತ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆಯನ್ನು ಮೆರೆದ ಓರ್ವ ಉತ್ತಮ ಕಲಾವಿದ. ಅನೇಕ ಕಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ -ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಕರಾವಳಿ ಕಾಲೇಜಿನಲ್ಲಿ ೨೦೦೮ರ ಅತ್ಯುತ್ತಮ ಶಿಸ್ತಿನ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಒಉಒ ಉಡುಪಿ ಕಾಲೇಜಿನಲ್ಲಿ ನಡೆದ ಸ್ಫರ್ಧೆಯಲ್ಲಿ ಕಾರ್ಟೂನ್ ಚಿತ್ರ ಬಿಡಿಸುವುದರಲ್ಲಿ ಪ್ರಥಮ, ಗೋವಿಂದ ದಾಸ ಕಾಲೇಜು ಸುರತ್ಕಲ್ ನಲ್ಲಿ ನಡೆದ ಡ್ರಾಯಿಂಗ್ ಸ್ಫರ್ಧೆಯಲ್ಲಿ ಪ್ರಥಮ, NTK ಸುರತ್ಕಲ್ ನಲ್ಲಿ ನಡೆದ ಡ್ರಾಯಿಂಗ್ ಸ್ಫರ್ಧೆಯಲ್ಲಿ ಪ್ರಥಮ, ದುಬಾಯಿ ದೀಪಾವಳಿ ಉತ್ಸವದಲ್ಲಿ ನಡೆದ ಜನಪದ ನೃತ್ಯ ಸ್ಫರ್ಧೆಯಲ್ಲಿ ಪ್ರಥಮ, ಅಣ್ಣಾಮಲೈ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯದವರು ನಡೆಸಿದ ಅಂತರಕಾಲೇಜು ಜನಪದ ನೃತ್ಯ ಸ್ಫರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.



                                       ಕೆ.ಶ್ರೀಲತಾ ಸುರೇಶ್ ಹೆಗ್ಡೆ :

ಕೆ.ವೆಂಕಪ್ಪ ಹೆಗ್ಡೆ ಮತ್ತು ಕಸ್ತೂರಿ ವಿ. ಹೆಗ್ಡೆ ದಂಪತಿಗಳ ಪುತ್ರಿಯಾಗಿ ೨೬.೦೨.೧೯೭೦ರಂದು ಜನಿಸಿದರು. ಗಂಡ ಕಂಕನಾಡಿ ಸುರೇಶ್ ಹೆಗ್ಡೆ ಮತ್ತು ಮಕ್ಕಳಾದ ಯಕ್ಷಗಾನ ಕಲಾವಿದೆಯೂ ಆಗಿರುವ ಸಮಂತ ಗಿರೀಶ್ ಮತ್ತು ಸನ್ಮತ ಸುರೇಶ್ ಹೆಗ್ಡೆಯವರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.ಎಂ.ಕಾಂ ಪದವೀಧರರಾದ ಶ್ರೀಲತಾ ಪ್ರತಿಷ್ಠಿತ ಕಂಪೆನಿಯಾದ ಆಲ್ ರೊಸ್ತಮನಿ ಗ್ರೂಪ್‌ನಲ್ಲಿ ಹಣಕಾಸು ವಿಭಾಗದ ಮುಖ್ಯಸ್ಥೆಯಾಗಿ ಕರ‍್ಯ ನಿರ್ವಹಿಸುತ್ತಿದ್ದಾರೆ. ಇವರ ಕುಟುಂಬದ ಹಿರಿಯ ರಾಮಪ್ಪ ಹೆಗಡೆ ತಾಳಮದ್ದಳೆ ಅರ್ಥಧಾರಿಗಳು ಉಳಿದಂತೆ ಕುಟುಂಬ ಸದಸ್ಯರಾದ ನಾರಾಯಣ ಹೆಗ್ಡೆ ಮತ್ತು ಮಕ್ಕಳು, ವಾಸುದೇವ ಹೆಗ್ಡೆ ಮುಂತಾದವರು ಕೂಡ ಕಲೆಯಲ್ಲಿ ಪರಿಶ್ರಮ ಉಳ್ಳವರು. 


ದುಬೈಯ 
ಯಕ್ಷಗಾನ ಅಭ್ಯಾಸ ತರಗತಿಯನ್ನು ಸೇರಿಕೊಂಡ ಇವರು ವೇಷಧಾರಿಯಾಗಿ ರಂಗಪ್ರವೇಶ ಮಾಡದಿದ್ದರೂ, ತಾಳಮದ್ದಳೆಯಲ್ಲಿ ಬಹಳ ಆಸಕ್ತಿಯನ್ನು ತೋರಿಸುತ್ತಿದ್ದರು. ಶಾಲಾ ಕಾಲೇಜು ವ್ಯಾಸಂಗ ಸಂದರ್ಭಗಳಲ್ಲಿ ಯಕ್ಷಗಾನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಲಲಿತ ಸಹಸ್ರನಾಮ ಪಠಿಸುವುದು ಮತ್ತು ಭಜನೆ ಇವರ ನೆಚ್ಚಿನ ವಿಷಯವಾಗಿದ್ದು, ಲಲಿತ ಸಹಸ್ರನಾಮವನ್ನು ಗುರುಗಳಾದ ಗಾಯತ್ರಿ ಅವರಿಂದ ೨೦೨೦ ರಲ್ಲಿ ಅಭ್ಯಸಿಸಿದ್ದಾರೆ.



                                          ಸುಧಾಕರ ಪೇಜಾವರ :

ಸುಧಾಕರ ಪೇಜಾವರವರು ವಸಂತ ರಾವ್ ಮತ್ತು ಮೀರಾ ವಸಂತ ರಾವ್ ದಂಪತಿಗಳ ಮಗನಾಗಿ೧೨ ಜುಲೈ ೧೯೫೮ ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ಪದವೀಧರ ಹಾಗೂ ಪತ್ರಿಕೋದ್ಯಮದಲ್ಲಿ ಪ್ರಮಾಣೀಕೃತ ಪದವಿಗಳಿಸಿದರು. ಮಡದಿ ಲತಾ ಸುಧಾಕರ್ ಮತ್ತು ಮಗ ವಿಕಾಸ್ ಪೇಜಾವರರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಇವರು ತಾನು ಕಲಾಪೋಷಕನಾಗಿ ಗುರುತಿಸಿಕೊಂಡವರು ತೀರಾ ಇತ್ತೀಚೆಗೆ ತಾಳಮದ್ದಳೆಯಲ್ಲಿ ಅರ್ಥಗಾರಿಕೆ ಪಟ್ಟು-ಮಟ್ಟುಗಳನ್ನುಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್‌ರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ತಾಳಮದ್ದಳೆಯಲ್ಲಿ ರಂಗಪ್ರವೇಶಿಸಿದ ಇವರು ಧರ್ಮರಾಯನಾಗಿ ‚ಗದಾಯುದ್ಧ‛ ಪ್ರಸಂಗದಲ್ಲಿ ಮತ್ತು ಭೀಮಕನಾಗಿ ‚ದಮಯಂತಿ ಪುನಃಸ್ವಯಂವರ‛ ಪ್ರಸಂಗದಲ್ಲಿತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.ಪೇಜಾವರರ ನೆಚ್ಚಿನ ವಿಷಯಗಳು ಬರವಣಿಗೆ, ಸಾಹಿತ್ಯ – ರಂಗ ಚಟುವಟಿಕೆ, ಸಮುದಾಯ ಸಂಘಟನೆ, ಸಮಾಜ ಸೇವೆ, ಕಲಾರಾಧನೆ ಮತ್ತು ಪೋಷಣೆ. ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯನ್ನು ಶ್ರೀಯುತರು ಹೊರಗಿನಿಂದಲೂ – ಒಳಗಿನಿಂದಲೂ ಬಲ್ಲವರು. ಇದರ ಕಾರ್ಯವೈಖರಿಯಿಂದ ಆಕರ್ಷಿತರಾಗಿ ತಾನೂ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮನಮಾಡಿದವರು. ತರಗತಿಯ ಕುರಿತಾದ ಅವರ ಒಟ್ಟು ಮಾತುಗಳು ಹೀಗಿವೆ-‚ವಿಶ್ವದ ಈ ಭಾಗದಲ್ಲಿ ನಮ್ಮ ಕರಾವಳಿ ಕರ್ನಾಟಕದ ಪ್ರಾಚೀನ, ಜಾನಪದದ ನೆಲೆಯಲ್ಲಿ ಅರಳಿ ಮಾರ್ಗಕಲೆಯಾಗಿ ರೂಪುತಳೆದ ರಂಗಕಲೆ ಯಕ್ಷಗಾನವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ಕೆಲವು ಸಮಾನ ಮನಸ್ಕ ಕಲಾವಿದರ ತಂಡ ಕಳೆದ ೩೫ ವರ್ಷಗಳಲ್ಲಿ ಇಲ್ಲಿ ನಿವಾಸಿಯಾಗಿರುವ ನಾನು ಅನೇಕ ಗುಂಪುಗಳು ರೂಪುಗೊಂಡಿರುವುದನ್ನು ನೋಡಿದ್ದರು. ಆದರೆ ‚ದ್ಯಾಟ್‛ ಒಂದು ವಿಶಿಷ್ಟ ವೇದಿಕೆಯನ್ನು ಕಲ್ಪಿಸಿದೆ. ಆಡಳಿತದಿಂದ ಕಾರ್ಯಕರ್ತರವರೆಗೆ ಇಲ್ಲಿರುವ ಎಲ್ಲಾ ಸದಸ್ಯರು ಸಮಾನರಾಗಿ ದುಡಿಯುತ್ತಿದ್ದಾರೆ.ಇದರ ಪ್ರೇರಕ ಶಕ್ತಿ ಯಕ್ಷಗುರು ಶ್ರೀ ಶೇಖರ್ ಡಿ. ಶೆಟ್ಟಿಗಾರ್ ರ ಅಪ್ರತಿಮ ವಿನಮ್ರತೆ ಹಾಗೂ ಪೋಷಕ ಶಕ್ತಿ ದಿನೇಶ ಶೆಟ್ಟಿ ಕೊಟ್ಟಿಂಜರವರ ಪಾರದರ್ಶಕತೆ, ತಮ್ಮ ಜೀವನೋಪಾಯದ ವೃತ್ತಿಯಷ್ಚೇ ಕಲಾಸೇವೆಯ ಪ್ರವೃತ್ತಿಯಲ್ಲೂ ಅಷ್ಟೇ ನಿಷ್ಟೆ ತೋರುವ ಈ ಮಾರ್ಗದರ್ಶನ ಮನೋಭಾವ ತಂಡದ ತ್ವರಿತ ಬೆಳವಣಿಗೆಗೆ ಮೂಲ ಕಾರಣ. ಖ್ಯಾತಿ ಮತ್ತು ಸ್ಥಾನವನ್ನು ಗಳಿಸಲು ಇಂತಹ ವೇದಿಕೆಯನ್ನು ಬಳಸದೇ ಯಕ್ಷಗಾನದ ಸರ್ವತೋಮುಖ ಉನ್ನತಿಗೆ ಈ ತಂಡದ ಎಲ್ಲಾ ಸದಸ್ಯರು ನಿಸ್ವಾರ್ಥವಾಗಿ ಬದ್ಧರಾಗಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ತರಬೇತಿ ನೀಡುವುದು ಅತ್ಯಂತ ಗಮನಾರ್ಹವಾದ ಸಾಧನೆ. ಸುತ್ತಲಿನ ಐಷಾರಾಮಿ ಮತ್ತು ಆಕರ್ಷಣೆಯ ವಾತಾವರಣದ ಮಧ್ಯೆ ಮಕ್ಕಳ ಆಸಕ್ತಿಯನ್ನು ಉತ್ತೇಜಿಸಲು ಶಿಕ್ಷಕ ಮತ್ತು ಪೋಷಕ ತಂಡವು ಹೆಚ್ಚಿನ ಪ್ರಮಾಣದ ತಾಳ್ಮೆ ಮತ್ತು ಸಮರ್ಪಣೆಯ ಮನೋಭಾವದಿಂದ ತೊಡಗಿಸಿಕೊಳ್ಳಬೇಕಾಗುತ್ತದೆ. ಅವರ ಸಮಯದ ನಿರ್ಬಂಧಗಳನ್ನು ಪರಿಗಣಿಸಿಕೊಂಡು, ಯಕ್ಷಗಾನದ ಮೇಲಿನ ಅವರ ಅಭಿಮಾನದ ಅಭಿವ್ಯಕ್ತಿಗಾಗಿ ನಾನು ಈ ತಂಡವನ್ನು ಹೊರಗಿನಿಂದ ಬೆಂಬಲಿಸಲು ಅವರ ಕಾರ್ಯ ಚಟುವಟಿಕೆಗಳಲ್ಲಿ ಸೇರಿಕೊಂಡೆ. ಆದರೆ ಗುರುಗಳ ನಿರಂತರ ಒತ್ತಾಯದಿಂದಾಗಿ ತಾಳಮದ್ದಳೆಯಲ್ಲಿ ಪಾಲ್ಗೊಳ್ಳುವ ಒಂದೆರಡು ಅವಕಾಶ ನನಗೆ ಲಭಿಸಿತು. ಅಲ್ಪ ಅವಧಿಯಲ್ಲಿ ಅರಿತ ಅನುಭವ ಅಪಾರ. ಇದೀಗ ಕೊರೋನಾ ವಿಶ್ವ ಸಾಂಕ್ರಮಿಕ ಹಾವಳಿಯಿಂದ ಮುಕ್ತ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾದಾಗಲೂ ಸುಮ್ಮನಿರದೇ ಅಂತರ್ಜಾಲದ ಮೂಲಕ ವಾರದ ತರಬೇತಿ, ಅಭ್ಯಾಸ ವರ್ಗ, ಸಹಾಯ ಸ್ಪಂದನ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅಭಿನಂದನೀಯ‛- ಇದು ಸುಧಾಕರರ ಮನದಾಳದ ಮಾತಾಗಿದೆ. ಹೀಗೆ ಸದಾ ಲವಲವಿಕೆಯಲ್ಲಿ ಯಕ್ಷಗಾನದ ಸೇವೆ ಮಾಡುತ್ತಿರುವ ನಿಸ್ವಾರ್ಥ ಮನೋಭಾವದ ತಂಡದ ಸರ್ವ ಚಟುವಟುಕೆಗಳಿಗೆ ನಾನು ಸದಾ ಬೆಂಬಲಿಸಲು ಬದ್ಧನಾಗಿದ್ದೇನೆಂದು ಅವರು ತುಂಬು ಮನಸ್ಸಿನಿಂದ ಹೇಳಿಕೊಳ್ಳುತ್ತಾರೆ.



                                  ಆನಂದ ಸಾಲ್ಯಾನ್ :

ಆನಂದ ಸಾಲ್ಯಾನ್ ೦೨.೦೫.೧೯೭೯ ರಲ್ಲಿ ಸೋಮಪ್ಪ ಮೂಲ್ಯ ಮತ್ತು ಜಲಜ ಮೂಲ್ಯರವರ ಮಗನಾಗಿ ಜನಿಸಿದರು. ಬಾಲ್ಯದಲ್ಲೇ ಯಕ್ಷಗಾನದಲ್ಲಿ ಬಹಳ ಆಸಕ್ತಿ ಹೊಂದಿದ್ದ ಆನಂದರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವೇ ಸಿಕ್ಕಿರಲಿಲ್ಲ. ಆದರೆ ಅದೃಷ್ಟವಶಾತ್ ಕಿನ್ನಿಗೋಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಊರಿನಲ್ಲಿ ಯಕ್ಷನಾಟ್ಯ ಎಂಬ ಯಕ್ಷಗಾನ ತಂಡ ಪ್ರಾರಂಭವಾಯಿತು. ಆನಂದರು ಆ ಯಕ್ಷಗಾನ ತಂಡವನ್ನು ಸೇರಿ ದೇವೀ ಮಹಾತ್ಮೆಯ ಶಂಖ ದುರ್ಗರ ಪಾತ್ರದಲ್ಲಿ ರಂಗಪ್ರವೇಶ ಕೂಡ ಮಾಡಿದ್ದಾರೆ. ಈ ಮೂಲಕ ಯಕ್ಷಗಾನದ ಬಗ್ಗೆ ಇರುವ ಒಲವನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ನಂತರ ಮುಂದುವರಿಯಲು ಸಾಧ್ಯವಾಗಲಿಲ್ಲ.ಐ.ಟಿ.ಐ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಇವರು ದುಬೈಯಲ್ಲಿ ನಿರ್ವಹಣೆ ಮೇಲ್ವಿಚಾರಕರಾಗಿ ಕರ‍್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮಣಿಕಂಠ ಮಹಿಮೆ ಪ ್ರಸಂಗದಲ್ಲಿ ಬೇಟೆಗಾರ ಹುಲಿ, ದೇವಿ ಮಹಾತ್ಮೆಯಲ್ಲಿ ಸಿಂಹ ಮತ್ತು ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿ ಈಶ್ವರನಾಗಿ ಪಾತ್ರ ಪ್ರದರ್ಶನ ಮಾಡಿದ್ದಾರೆ.ದುಬೈಗೆ ಬಂದ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್‌ರ ಬಗ್ಗೆ ತಿಳಿದು ಯಕ್ಷಗಾನ ಅಭ್ಯಾಸ ತರಗತಿಗೆ ಸೇರ್ಪಡೆಗೊಂಡು ನಾಟ್ಯವನ್ನು ಅವರಿಂದ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಇವರು ನೇಪಥ್ಯದ ಕಲಾವಿದರಾಗಿ ಅಭ್ಯಾಸ ತರಗತಿಯಲ್ಲಿ ಸಕ್ರಿಯ ಸದಸ್ಯನಾಗಿ ದುಡಿಯುತ್ತಿದ್ದಾರೆ. ವೇಷಭೂಷಣ-ಪ್ರಸಾದನ ಕಲೆಯಲ್ಲೂ ಅತೀವ ಆಸಕ್ತಿಯಿದೆ. ಯಕ್ಷಗಾನದಲ್ಲಿ ಬಹಳ ಒಲವನ್ನು ಹೊಂದಿದ್ದ ಇವರ ಯಕ್ಷಗಾನ ಕಲಿಕಾ ಪ್ರಯಾಣವು ಶುಭವಾಗಲಿ ಎಂದು ಹಾರೈಸೋಣ.



                                  ಚಂದ್ರಮೋಹನ್ ಶೆಟ್ಟಿಗಾರ್ :

ಚಂದ್ರಮೋಹನ್ ಶೆಟ್ಟಿಗಾರ್ ತಂದೆ ಸಂಜೀವ ಶೆಟ್ಟಿಗಾರ್ ಮತ್ತು ತಾಯಿ ಬೇಬಿ ಶೆಟ್ಟಿಗಾರ್‌ರ ಮಗನಾಗಿ ೧೨.೦೯.೧೯೮೩ ರಲ್ಲಿ ಜನಿಸಿದರು. ದ್ವಿತೀಯ ಪಿ.ಯು.ಸಿ ಪೂರ್ಣಗೊಳಿಸಿದ ಇವರು ಸ್ವ-ಉದ್ಯೋಗಿಯಾಗಿದ್ದು (ಇಲೆಕ್ಟ್ರಿಷಿಯನ್) ಮಡದಿ ಸವಿತಾ ಶೆಟ್ಟಿಗಾರ್ ಮತ್ತು ಮಗ ಮಹಂತ್ ಶೆಟ್ಟಿಗಾರ್‌ರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.ಕಟೀಲು ಮೇಳದಲ್ಲಿ ಮದ್ದಳೆಗಾರನಾಗಿ ಸೇವೆ ಮಾಡುತ್ತಿರುವ ಮಿಜಾರು ಸದಾನಂದ ಶೆಟ್ಟಿಗಾರ್ ಮತ್ತು ಮಿಜಾರು ದಯಾನಂದ ಶೆಟ್ಟಿಗಾರ್ ಚಂದ್ರಮೋಹನ್ ರವರ ಮಾವನ ಮಕ್ಕಳು. ೨೦೧೩ ರಲ್ಲಿ ಗುರುಗಳ ಪ್ರೋತ್ಸಾಹದಿಂದ ಹಿಮ್ಮೇಳ ಚಕ್ರತಾಳ ವಾದಕನಾಗಿ ಮೊದಲಿಗೆ ರಂಗಪ್ರವೇಶ ಮಾಡಿದ್ದಾರೆ. ೨೦೧೫-೨೦೧೭ರಲ್ಲಿ ಭಾಗವತಿಕೆಯನ್ನು ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ಇವರಿಂದ ಅಭ್ಯಾಸ ಮಾಡಿದ್ದಾರೆ. 


ಅಬುಧಾಬಿ ಮತ್ತು ಶಾರ್ಜದಲ್ಲಿ ನಡೆದ ಮಕ್ಕಳ ಯಕ್ಷಗಾನ ‚ಶರಸೇತು ಬಂಧ‛ ಪ್ರದರ್ಶನದಲ್ಲಿ 
ಭಾಗವತರಾಗಿ ವೇದಿಕೆ ಯೇರಿದ್ದಾರೆ. ಯಕ್ಷಗಾನ ಅಭ್ಯಾಸ ತರಗತಿ ದುಬೈಯ ಆರಂಭ ಕಾಲದಿಂದಲೂ ತರಗತಿಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಶ್ರೀಯುತರು ಸಾಧನಾ ಸಂಭ್ರಮ ೨೦೧೭ರಲ್ಲಿ ಭಾಗವಹಿಸುವ ತಯಾರಿ ನಡೆಸುತ್ತಿರುವಾಗ ವೈಯಕ್ತಿಕ ಕಾರಣಗಳಿಂದ ದುಬಾಯಿಯನ್ನು ತ್ಯಜಿಸಿ ಊರಿನಲ್ಲಿ ವಾಸಿಸಬೇಕಾಗಿ ಬಂತು. ಆ ತನಕವೂ ತರಗತಿಯ ಪ್ರತೀ ಅಭ್ಯಾಸಗಳಲ್ಲಿ ವಿದ್ಯಾರ್ಥಿಯಾಗಿ ಭಾಗಿಯಾಗುತ್ತಿದ್ದರು ಮತ್ತು ಕಾರ್ಯಕ್ರಮಗಳಲ್ಲಿ ನೇಪಥ್ಯ ಕಲಾವಿದನಾಗಿ, ಸ್ವಯಂ ಸೇವಕನಾಗಿ ದುಡಿಯುತ್ತಿದ್ದರು. ಯಕ್ಷಗಾನದಲ್ಲಿ ಆಸಕ್ತಿ ಮಾತ್ರವಲ್ಲದೇ ಯಕ್ಷಗಾನ ವೀಕ್ಷಣೆ, ಸಂಗೀತ, ವಾಲಿಬಾಲ್, ಕ್ರಿಕೆಟ್ ಕ್ರೀಡೆಗಳಲ್ಲಿಯೂ ತಮ್ಮನ್ನುತೊಡಗಿಸಿಕೊಳ್ಳುತ್ತಿದ್ದರು. 



                             ಭಾಸ್ಕರ ಪೂಜಾರಿ ನೀರುಮಾರ್ಗ :

೧೯೭೭ ಮಾರ್ಚ್ ೨೫ ರಂದು ಜನಿಸಿದ ಇವರ ತಂದೆ ದಿ.ರಾಮ ಪೂಜಾರಿ ಮತ್ತು ತಾಯಿ ದಿ. ವಿಮಲ ಪೂಜಾರಿ. ತಾಂತ್ರಿಕ ಪದವಿ ಪಡೆದು ಉದ್ಯೋಗ ನಿಮಿತ್ತ ದುಬಾಯಿಗೆ ಬಂದ ಇವರಿಗೆ ಯಕ್ಷಗಾನ ಮತ್ತು ತುಳುನಾಡಿನ ಸಂಸ್ಕೃತಿ ಆರಾಧನೆಗಳ ಮೇಲೆ ಅತೀವ ಪ್ರೀತಿ. ಹಾಗೆಯೇ ದುಬಾಯಿಯಲ್ಲಿ ಸಮಾಜಿಕ ಚಟುವಟಿಕೆಗಳು, ಶನೀಶ್ವರ ಪೂಜೆ ಇತ್ಯಾದಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳತೊಡಗಿದ ಇವರ ಆಸಕ್ತಿ ನಿಧಾನಕ್ಕೆ ತನ್ನ ಮೂಲಸೆಲೆ ಯಕ್ಷಗಾನ ಚಟುವಟಿಕೆಗಳತ್ತ ಹೊರಳಿಕೊಂಡಿತು. ನೇಪಥ್ಯ ಕಲಾವಿದರಾಗಿ ತೊಡಗಿಸಿಕೊಂಡು ದುಬಾಯಿಯ ಪ್ರತೀ ಯಕ್ಷಗಾನ ಕಾರ್ಯಕ್ರಮಗಳ ಬೆನ್ನೆಲುಬಾಗಿ ಕಾರ‍್ಯ ನಿರ್ವಹಿಸಿದರು. ಮುಂದೆ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಪ್ರಾರಂಭವಾದ ಮೇಲೆ ತರಗತಿಯ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಪ್ರಸಂಗ ಮಾಹಿತಿಗಳನ್ನು ಅಭ್ಯಾಸ ಮಾಡಿ ರಂಗಸಜ್ಜಿಕೆ- ತೆರೆಯ ಸಹಕಾರ ನೀಡಿ ಒಂದಿನಿತೂ ಪ್ರದರ್ಶನಕ್ಕೆ ಊನ ಬಾರದಂತೆ ಮುತುವರ್ಜಿಯಿಂದ ಕೆಲಸ ಮಾಡಿದವರು. ಪ್ರತೀ ಅಭ್ಯಾಸ ತರಗತಿಗಳಲ್ಲಿ ಹಾಜರಾಗಿ ಬೇಕು ಬೇಡಗಳ ಪಟ್ಟಿ ಮಾಡಿ ಪ್ರದರ್ಶನದ ದಿನ ಕಾರಾರುವಕ್ಕಾಗಿ ರಂಗದ ಹಿನ್ನೆಲೆ ಸಹಕಾರ ನೀಡುವ ಮೂಲಕ ಮುಂಚೂಣಿಯಲಿ ಕಾಣಿಸಿಕೊಳ್ಳುವ ನೀರುಮಾರ್ಗ ಸ್ವತಃ ಯಕ್ಷಗಾನ ಪ್ರಸಂಗ ಸಂಘಟಿಸಿ ಪ್ರದರ್ಶಿಸುವಲ್ಲಿಯೂ ಆಸಕ್ತರು. ಬಹುಮಂದಿ ಕಲಾವಿದರ ನೇರ ಸಂಪರ್ಕವೂ - ಸಹಕಾರಕ್ಕೊದಗುವ ಸ್ವಭಾವವೂ ಇದೆ.



                                ಶೇಖರ ಡಿ.ಶೆಟ್ಟಿಗಾರ್, ಕಿನ್ನಿಗೋಳಿ :

ಕೊಲ್ಲಿರಾಷ್ಟ್ರದ ದುಬೈಯಲ್ಲಿ ಕರುನಾಡ ಕಮನೀಯ ಕಲೆ ಯಕ್ಷಗಾನದ ತರಬೇತಿ ನೀಡಿ ಸಕ್ರಿಯ ಯಕ್ಷಗಾನದ ವಾತಾವರಣ ರೂಪಿಸಿ, ತಾಯ್ನಾಡ ಸಮಾನ ಮನಸ್ಕರನ್ನು ಮಣ್ಣಿನ ಕಲೆ, ಸಂಸ್ಕೃತಿಯ ಹೆಸರಲ್ಲಿ ಒಗ್ಗೂಡಿಸಿ,ನಿರಂತರ ಯಕ್ಷಗಾನ ಕಲಿಕೆಯ ವಾತಾವರಣ ರೂಪಿಸಿರುವುದು ನಿಸ್ವಾರ್ಥ ಕಲಾಸಾಧಕ ಶ್ರೀಯುತ ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಇವರ ಶ್ರದ್ಧಾಭರಿತ, ಅವಿರತ ಕಲಾ ಪರಿಶ್ರಮದ ಕಾಳಜಿಯ ಕೊಡುಗೆ.


ಶೇಖರ್ ಡಿ.ಶೆಟ್ಟಿಗಾರರು ಅನೇಕ ಹವ್ಯಾಸಿ ಸಂಘಟನೆಗಳಲ್ಲಿ ಪ್ರಮುಖ ವೇಷಧಾರಿಯಾಗಿ ನಿರ್ವಹಿಸಿದ ಅನುಭವಿ,
ಮಾತ್ರವಲ್ಲದೆ ವೃತ್ತಿಮೇಳಗಳಾದ ಭಗವತೀ ಮೇಳ ಸಸಿಹಿತ್ಲು ಮತ್ತು ಶ್ರೀ ಕಟೀಲು ಮೇಳದಲ್ಲಿ ನಾಲ್ಕು ವರ್ಷ ದುಡಿದ ಅನುಭವಿ. ಯಕ್ಷಗಾನ ಕಲಾವಿದರಾಗಿ ನಾಟ್ಯಗುರು, ನಿರ್ದೇಶಕರಾಗಿ ದಕ್ಷಿಣ ಕನ್ನಡ, ಮುಂಬಾಯಿ ಮೊದಲಾದೆಡೆ ಸೇವೆಸಲ್ಲಿಸಿದವರು. ಅನೇಕ ತೆಂಕುತಿಟ್ಟು ಹವ್ಯಾಸಿ ತಂಡಗಳ ಸ್ಪರ್ಧೆಗಳಲ್ಲಿ ಇವರ ನಿರ್ದೇಶನದ ತಂಡ, ತಂಡ ಪ್ರಶಸ್ತಿ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನೂ ಪಡೆದವರು, ಸತತವಾಗಿ ಪ್ರಥಮ ಪುಂಡುವೇ಼ಷದ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು. ಪ್ರಸಿದ್ಧವಾದ ‚ಆಳ್ವಾಸ್ ಧೀಂಕಿಟ‛ ದ ನಿರ್ದೇಶಕ, ನಾಟ್ಯಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಪಾರ ಪ್ರತಿಭಾವಂತ ಕಲಾವಿದರನ್ನು ರೂಪಿಸಿದ್ದಾರೆ. ಕರಾವಳಿಯ ಯಕ್ಷಗಾನ ಸ್ಪರ್ಧೆಗಳಲ್ಲು ‚ಆಳ್ವಾಸ್ ತಂಡಕ್ಕೆ ಪ್ರಥಮ ಬಹುಮಾನ‛ ಕಟ್ಟಿಟ್ಟ ಬುತ್ತಿ ಎನ್ನುವಂತೆ ಸಮರ್ಥ ಸವ್ಯಸಾಚಿ ಪರಿಣಿತ ತಂಡ ರೂಪಿಸಿರುವುದು ಶೆಟ್ಟಿಗಾರರ ಸಾಧನೆಯ ಕೊಡುಗೆ. ತೆಂಕ ಎರ್ಮಾಳು ಮತ್ತು ಉಲ್ಲಂಜೆ- ಕಿನ್ನಿಗೋಳಿಯ ಅನುದಾನಿತ ಶಾಲೆಗಳಲ್ಲು ತರಬೇತಿ ನೀಡಿ ತಂಡ ಸಿದ್ಧಪಡಿಸಿದ್ದಾರೆ.ಪ್ರಸ್ತುತ ಉದ್ಯೋಗ ನಿಮಿತ್ತ ದುಬೈಯಲ್ಲಿ ೧೨ ವರ್ಷಗಳಿಂದ ನೆಲೆಸಿರುವ ಇವರು ಕೊಲ್ಲಿನಾಡಿನಲ್ಲೂ ಯಕ್ಷಗಾನ ವಾತಾವರಣ ರೂಪಿಸಿ, ತನ್ನ ಕಲಾಕೈಂಕರ್ಯದ ಕೊಡುಗೆ ಮುಂದುವರಿಸಿದ್ದಾರೆ. ಯು.ಎ.ಇ ಯ ದುಬಾಯಿಯಲ್ಲೂ ಯಕ್ಷಮಿತ್ರರು ಮತ್ತು ಯಕ್ಷಗಾನ ಅಭ್ಯಾಸ ತರಗತಿ ತಂಡಗಳಿಗೆ, ಮಹಿಳಾ ತಂಡಕ್ಕೆ ನಿರಂತರ ಯಕ್ಷಗಾನದ ಪೂರ್ವಾಂಗ ಶಿಕ್ಷಣ, ನಿರ್ದೇಶನ ನೀಡುತ್ತಿರುವ ಇವರು ಕೊಲ್ಲಿಯಲ್ಲಿ ೬೦ ಕ್ಕೂ ಅಧಿಕ ಶಿಷ್ಯರನ್ನೂ ರೂಪಿಸಿದ್ದಾರೆ. ಈ ಪೈಕಿ ೫ ರ ಮಕ್ಕಳಿಂದ ತೊಡಗಿ ೬೦ ದಾಟಿದ ಹಿರಿಯರ ತನಕವೂ ಇದ್ದಾರೆ.ಕೊಲ್ಲಿಯಲ್ಲೇ ಹುಟ್ಟಿ ಬೆಳೆದ, ಕನ್ನಡವೇ ಅರಿಯದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಕನ್ನಡ ಬರೆದು, ಸ್ಪಷ್ಟ ಉಚ್ಛಾರಣೆ, ಭಾವ – ಅಭಿನಯದೊಂದಿಗೆ ಕನ್ನಡ ನುಡಿಸಿ, ಅರ್ಥ ಹೇಳಿಸುವ ಜೊತೆಗೆ ಯಕ್ಷಗಾನ ವಿದ್ಯಾರ್ಥಿಗಳಿಗೆ ಕನ್ನಡ ತರಗತಿಗಳ ಮೂಲಕ ಕನ್ನಡ ಭಾಷೆ ಕಟ್ಟುವಲ್ಲಿಯೂ ಇವರು ಯಕ್ಷಗಾನದ ಮೂಲಕ ಕೊಡುಗೆ ಇತ್ತಿದ್ದಾರೆ.ಯಕ್ಷಗಾನವನ್ನು ಸಂಪ್ರದಾಯ ಬದ್ಧವಾಗಿ, ಪಾರಂಪರಿಕವಾಗಿಯೇ ಕಲಿಸುತ್ತಿರುವ ಇವರು ಕೊಲ್ಲಿಯ ತಂಡವನ್ನು ಪೂರ್ವರಂಗ ಸಹಿತ ಸಜ್ಜುಗೊಳಿಸಿದ್ದಾರೆ. ದುಬೈ, ಅಬುಧಾಬಿ, ಶಾರ್ಜ, ಬೆಹರೈನ್, ಮಸ್ಕತ್ ಮೊದಲಾದೆಡೆಗಳಲ್ಲಿ ಅಲ್ಲದೇ, ತಾಯ್ನಾಡು ದ.ಕ. ಜಿಲ್ಲೆಯ ಉಜಿರೆ ಜನಾರ್ಧನ ದೇವಸ್ಥಾನ, ಪಟ್ಲ ಪೌಂಡೇ಼ಷನ್ ವಾರ್ಷಿಕೋತ್ಸವ ಸಂಧರ್ಭ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಈ ತಂಡ ನೀಡಿದ ಪ್ರದರ್ಶನ ನುರಿತ ಕಲಾವಿದರ, ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. ಇವರ ಯಕ್ಷಶಿಕ್ಷಣವೆಂದರೆ ಕೇವಲ ನಾಟ್ಯ ಕಲಿಕೆಯಲ್ಲ, ನಾಟ್ಯ ತರಬೇತಿಯ ಜೊತೆ ಪೂರ್ವರಂಗ ವೈವಿಧ್ಯಗಳು, ಉತ್ತರರಂಗದ ಒಡ್ಡೋಲಗ ಕ್ರಮ, ಅಭಿನಯ, ಅರ್ಥಗಾರಿಕೆ, ಮುಖವರ್ಣಿಕೆ- ವೇಷಭೂಷಣ ತರಬೇತಿ, ಪೌರಾಣಿಕ ಪ್ರಸಂಗಗಳ ರಂಗಕ್ರಮಗಳ ತರಬೇತಿಯನ್ನೂ ಒಳಗೊಂಡಿದೆ. ಯಕ್ಷಗಾನ ಸಂಬAಧಿ ಚಟುಚಟಿಕೆಗಳ ಜೊತೆಗೆ ಕನ್ನಡ ಭಾಷಾ ಅಭ್ಯಾಸ ತರಗತಿಯನ್ನೂ ವಿದ್ಯಾರ್ಥಿ ಕಲಾವಿದರಿಗೆ ತಪ್ಪದೆ ನಡೆಸುತ್ತಿದ್ದಾರೆ. ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಮೂಲಕ ಬಿಡುವಿಲ್ಲದೆ ನಡೆಯುವ ಇವರ ನಿರ್ದೇಶನದ ತಾಲೀಮುಗಳಿಂದ ಯಕ್ಷಗಾನವನ್ನೇ ಕಂಡರಿಯದ ಮಕ್ಕಳೂ ಕೂಡ ಅನುಭವಿ ಕಲಾವಿದರಾಗಿದ್ದಾರೆ. ತರಗತಿಯ ಸಂಪರ್ಕಕ್ಕೆ ಬಂದ ಹೆತ್ತವರು – ಕರ‍್ಯಕರ್ತರು ಪಕ್ವ ಪ್ರೇಕ್ಷಕರಾಗಿ ಪರಿವರ್ತನೆ ಗೊಂಡಿದ್ದಾರೆ.ಯಕ್ಷಗಾನ ಅಭ್ಯಾಸ ತರಗತಿ ತಂಡವು ವರ್ಷಪೂರ್ತಿ ಬಿಡುವಿಲ್ಲದೆ ಹಮ್ಮಿಕೊಳ್ಳುವ ವೈವಿಧ್ಯಮಯ ಕರ‍್ಯಕ್ರಮಗಳು ವಿದ್ಯಾರ್ಥಿಗಳ ಅನುಭವ, ಪಾತ್ರ ನಿರ್ವಹಣಾ ಕೌಶಲ್ಯ, ಸಾಮರ್ಥ್ಯಗಳನ್ನು ಹೆಚ್ಚಿಸಿದೆ. ವರ್ಷಂಪ್ರತಿ ನಡೆವ, ಸಾಧನಾ ಸಂಭ್ರಮಗಳ ಮೂಲಕ ನಡೆವ ವಿವಿಧ ಯಕ್ಷಗಾನ ಸಂಬಂಧಿ ಸ್ಪರ್ಧೆಗಳು, ಪ್ರಾತ್ಯಕ್ಷಿಕೆಗಳು, ಪ್ರಯೊಗಾರ್ಥ ಪ್ರದರ್ಶನಗಳು, ತಿಂಗಳ ಆಟಗಳು, ಮಕ್ಕಳ ಯಕ್ಷಗಾನಗಳು, ತಾಳಮದ್ದಳೆ ಕೂಟಗಳು ವಿದ್ಯಾರ್ಥಿಗಳ ಸಂಭ್ರಮದ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿವೆ. ಆ ಮೂಲಕ ಇವರ ಅಧ್ಯಾಪನ ಮನೆಮಾತಾಗಿದೆ. ಕಳೆದ ವ಼ರ್ಷ ವಿಶೇಷವಾಗಿ ಅರಬ್ ಸಂಯುಕ್ತ ಸಂಸ್ಥಾನದ ಏಳು ರಾಜ್ಯಗಳ ಉದ್ದಗಲಕ್ಕೂ ಹಮ್ಮಿಕೊಂಡ ‚ತಾಳಮದ್ದಳೆ ಅಭಿಯಾನ-೨೦೨೦‛ ಯೋಜನಾ ಪರ್ಯಟನೆಯನ್ನು ಕೈಗೆತ್ತಿಕೊಂಡು ತನ್ನ ಯಕ್ಷ ಚಟುವಟಿಕೆಗಳಿಂದ, ಯು.ಎ.ಇ ಯ ಉದ್ದಗಲಕ್ಕೂ ತಾಳಮದ್ದಳೆ ಅಭಿಯಾನ ಕೈಗೆತ್ತಿಕೊಂಡು ದುಬೈ, ಫುಜೇರ, ಅಬುಧಾಬಿ ತಾಳಮದ್ದಳೆಗಳು ಮುಗಿಸಿಕೊಳ್ಳುವ ಹೊತ್ತಿಗೆ ವಕ್ಕರಿಸಿದ ಕೊರೋನದಿಂದಾಗಿ ಅಲ್ಲಿಗೇ ಸ್ಥಗಿತಗೊಂಡಿದೆ. ಕೊರೋನ ಭೀತಿ ಒಂದೆಡೆ ಕಲೆತು ನಡೆಸುವ ತರಗತಿ - ಪ್ರದರ್ಶನಗಳಿಗೆ 

ತಡೆಯೊಡ್ಡಿದರೂ ಆನ್ ಲೈನ್ ಮೂಲಕ ನಾಟ್ಯ ತರಗತಿ ಮತ್ತು ತಾಳಮದ್ದಳೆ ತರಬೇತಿಗಳು ಬಿಡದೆ ನಡೆಯುತ್ತಿವೆ. ಇಷ್ಟೆಲ್ಲಾ ವೈವಿಧ್ಯಮಯ ಯಕ್ಷ ಕಾಯಕವನ್ನು ಉದ್ಯೋಗದ ಬಿಡುವಿನ ಅವಧಿಗಳಲ್ಲಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಉಚಿತವಾಗಿಯೇ ನಡೆಸುತ್ತಾರೆನ್ನುವುದು ಗಮನಾರ್ಹ. ತಾಯ್ನಾಡಿನ ಜನರನ್ನು ಕೊಲ್ಲಿರಾಷ್ಟ್ರದಲ್ಲಿ ಕಲೆಯ ಮೂಲಕ ಒಂದೇ ನೂಲಿನಲ್ಲಿ ಪೋಣಿಸಿದಂತೆ ಸಂಘಟಿಸಿರುವುದು ಇವರ ಸಂಘಟನಾತ್ಮಕ ಚಾತರ‍್ಯಕ್ಕೆ ಸಾಕ್ಷಿ. ಶೇಖರ ಶೆಟ್ಟಿಗಾರರು ಓರ್ವ ಅಭಿಜಾತ ಕಲಾವಿದರು ನಾಲ್ಕುವರೆ ದಶಕಗಳಷ್ಟು ಸುರ್ಧೀಘ ಕಾಲ ತನ್ನನ್ನು ತೋಡಗಿಸಿಕೊಂಡು ಎಲ್ಲಾ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಪುಂಡುವೇಷಗಳಲ್ಲಿ ಸುಧನ್ವ, ಬಬ್ರುವಾಹನ, ದೇವವೃತ, ರಾಮ, ಕೃಷ್ಣ, ವಿಷ್ಣು, ತರಣಿಸೇನ, ಚಂಡ, ಮುಂಡ, ಕುಶ, ಲವ, ರೂಕ್ಷ, ಕಿರೀಟ ವೇಷಗಳಲ್ಲಿ ದೇವೇಂದ್ರ, ಅರ್ಜುನ. ಶಂತನು, ಧಕ್ಷ, ಕಾರ್ತವೀರ್ಯಾರ್ಜುನ, ಬಲರಾಮ, ಶಿಶುಪಾಲ, ಕೌರವ, ಕೌಂಡ್ಲಿಕ, ಇಂದ್ರಜಿತು, ರಕ್ತಬೀಜ, ಹಿರಣ್ಯಾಕ್ಷ, ನಾಟಕೀಯ ಪಾತ್ರಗಳಲ್ಲಿ ಮಧು-ಕೈಟಭ, ಅರುಣಾಸುರ, ಶನೀಶ್ವರ, ಕಂಸ, ಹಿರಣ್ಯಕಶ್ಯಪ, ಭಂಡಾಸುರ, ಘಟೋತ್ಕಚ, ಕೋಟಿ, ಚೆನ್ನಯ, ದೇವಪೂಂಜ, ಸ್ತ್ರೀ ವೇಷದಲ್ಲಿ- ಶ್ರೀದೇವಿ, ದಾಕ್ಷಾಯಿಣಿ ,ರುಕ್ಮಿಣಿ, ಮಾಲಿನಿ, ದ್ರೌಪದಿ, ಮಾಯಾ ಶೂರ್ಪನಖಿ, ನಂದಿನಿ ಅಲ್ಲದೇ ಹಾಸ್ಯ ಪಾತ್ರ, ಅಪರೂಪಕ್ಕೆ ಬಣ್ಣದ ವೇಷ ವೈವಿಧ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೀಷ್ ಯಕ್ಷಗಾನ ಹಾಗೂ ಆಕಾಶವಾಣಿ ಯಕ್ಷಗಾನ ಕಾರ್ಯಕ್ರಮಗಳಲ್ಲಿ ತನ್ನ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ಆರಂಭದ ಕಾಲೇಜು ವ್ಯಾಸಂಗದ ಸಂದರ್ಭಗಳಲ್ಲಿ ಕಾಲೇಜುರಂಗ ಮತ್ತು ಸಂಘಸಂಸ್ಥೆಗಳಲ್ಲಿ ನಾಟಕ ಪಾತ್ರಧಾರಿಯಾಗಿಯೂ ಖ್ಯಾತಿಗಳಿಸಿದ್ದಾರೆ. ಶ್ರೀಯುತರ ಕಲಾಶ್ರಮದ ಸಾಧನೆ, ಕೊಡುಗೆ ಮಾನಿಸಿ ಅಬುಧಾಬಿ ಕರ್ನಾಟಕ ಸಂಘದವರು ೨೦೧೭ರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ¯್ಲ ‚ದ.ರಾ. ಬೇಂದ್ರೆ ಪ್ರಶಸ್ತಿ‛ ಮತ್ತು ಶಾರ್ಜ ಕರ್ನಾಟಕ ಸಂಘದವರು ‚ಯಕ್ಷ ಮಯೂರ ಪ್ರಶಸ್ತಿ-೨೦೧೭‛ ಪ್ರಶಸ್ತಿಯೊಂದಿಗೆ ಪುರಸ್ಕರಿಸಿದ್ದಾರೆ. ದುಬಾಯಿ ಪದ್ಮಶಾಲಿ ಕಮ್ಯೂನಿಟಿ, ಬಿಲ್ಲವಾಸ್ ದುಬಾಯಿ, ತುಳುಕೂಟ, ಕನ್ನಡ ಸಂಘ ಮತ್ತಿತರ ದುಬಾಯಿ ಸಂಘ ಸಂಸ್ಥೆಗಳಿಂದಲೂ ಸನ್ಮಾನ ಗೌರವಗಳು ಸಂದಿವೆ.ಯಾವುದೇ ಫಲಾಪೇಕ್ಷೆಗಳ ಬಯಕೆ ಇಲ್ಲದೆ, ನಿಸ್ವಾರ್ಥವಾಗಿ ಕಲೆಯಲ್ಲಿ ತೊಡಗಿಸಿಕೊಂಡ ಇವರಿಗೆ ಕಲೆ ಕೌಟುಂಬಿಕ ಪರಂಪರೆಯ ಬಳುವಳಿ. ಪ್ರಸಿದ್ಧ ಯಕ್ಷಗಾನ ಕಲಾವಿದ, ಪ್ರಸಾಧನ ತಜ್ಞ, ಕಿನ್ನಿಗೋಳಿಯ ಮೋಹಿನಿ ಕಲಾ ಸಂಪದದ ಸ್ಥಾಪಕ ದಿ.ತಾಳಿಪಾಡಿ ದಾಮೋದರ ಶೆಟ್ಟಿಗಾರರ ಹಿರಿಯ ಪುತ್ರರಾದ ಇವರು ತಮ್ಮ ಪರಂಪರೆಯನ್ನು ಮುಂದುವರಿಸುತ್ತಿರುವುದು ನಾಡಿಗೆ ಅಭಿಮಾನ. ಶ್ರೀಯುತರ ಪತ್ನಿ ಶಾಂತ (ಮುಖ್ಯೋಪಾಧ್ಯಾಯಿನಿ), ಮಕ್ಕಳಾದ ಹೃಷೀಕೇಶ, ವಿಘ್ನೇಶ (ಹವ್ಯಾಸಿ ಹಿಮ್ಮೇಳ ಮುಮ್ಮೇಳದ ಕಲಾವಿದರು) ಒಳಗೊಂಡ ಸುಖ ಸಂಸಾರ. ಶ್ರೀಯುತರು ಓರ್ವ ಶಿಸ್ತುಬದ್ಧ ನಾಟ್ಯಗುರು,ಸಮರ್ಥ ನಿರ್ದೇಶಕ. ರಂಗತಂತ್ರ ಪರಿಣತಿ, ಪರಿಶ್ರಮ, ಇವರ ಯಶಸ್ಸಿನ ಗುಟ್ಟು. ಇವರಿಗೆ ಮೊದಲು ತಂದೆಯಿಂದಲೇ ಯಕ್ಷಗಾನ ಬಾಲಪಾಠವಾದರೆ ಮುಂದೆ ಕಟೀಲು ಶ್ರೀನಿವಾಸ ರಾವ್, ಕೋಳ್ಯೂರು ರಾಮಚಂದ್ರ ರಾವ್, ಐ.ಲೋಕೇಶ್ ಕಟೀಲು ಅವರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಮತ್ತು ಕೊಲೆಕಾಡಿ ಗಣೇಶರಿಂದ ಛಂದಸ್ಸು ಮತ್ತು ಸ್ವಲ್ಪ ಮಟ್ಟಿನ ಭಾಗವತಿಕೆ ಅಭ್ಯಾಸ ಮಾಡಿದ್ದಾರೆ. ಇವರ ಸಾಧನೆಗೆ ಪೂರಕ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದ ಕೊರ್ಗೀ ವೆಂಕಟೇಶ ಉಪಾಧ್ಯಾಯ, ಹರೀಶ ಶೆಟ್ಟಿಗಾರ್ ಮುಚ್ಚೂರು, ಮುರಳೀಧರ ಭಟ್ ಕಟೀಲು, ಮುಖ್ಯಪ್ರಾಣ ಕಿನ್ನಿಗೋಳಿ, ದಯಾನಂದ ಶೆಟ್ಟಿಗಾರ್ ಮಿಜಾರು, ಕುರಿಯ ಗಣಪತಿ ಶಾಸ್ತಿç, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಮತ್ತು ಒಡನಾಟದ ಎಲ್ಲಾ ಕಲಾವಿದರ ಕೊಡುಗೆ ಇದೆ ಎಂದು ಎಲ್ಲರ ಸಹಕಾರವನ್ನು ಸದಾ ಸ್ಮರಿಸುತ್ತಾರೆ.ಹೊರ ದೇಶಗಳಲ್ಲಿ ಯಕ್ಷಗಾನದ ಕಲೆಯನ್ನು ಪ್ರಚುರಪಡಿಸುತ್ತಾ ಕಲೆಯ ಉಳಿವಿಗೆ ಜೊತೆಗೆ ಕನ್ನಡ ಭಾಷೆಯನ್ನು ಕಲಿಸುತ್ತಿರುವ ಈ ಅಸಮಾನ್ಯ ಕಲಾವಿದನ ಅರ್ಹತೆಗೆ ಕರ್ನಾಟಕ ಸರಕಾರ ಅಕಾಡೆಮಿಗಳು ಅಂಗೀಕಾರದ ಮನ್ನಣೆ ನೀಡಿ ಗುರುತಿಸುವಂತಾಗಲಿ, ಇನ್ನಷ್ಟೂ ಕಲಾ ಸೇವೆಯನ್ನು ಮಾಡಲು ಭಗವಂತ ಶಕ್ತಿ ಕೊಡಲಿ.


                                        ಬಾಲಕೃಷ್ಣ ಡಿ.ಶೆಟ್ಟಿಗಾರ್ ;

ಬಾಲಕೃಷ್ಣ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ದುಬಾಯಿಯ ಪ್ರತಿಷ್ಠಿತ NMC ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಇವರು ರಾಜವೇಷ, ಪುಂಡುವೇಷ ಮಾಡಬಲ್ಲ ಪ್ರೌಢಿಮೆ ಹೊಂದಿದ್ದಾರೆ. ಕುಟುಂಬದಲ್ಲಿ ಹೆಚ್ಚಿನವರೆಲ್ಲಾ ಕಲಾವಿದರು. ತಂದೆಯಿಂದಲೇ ಬಳುವಳಿಯಾಗಿ ಬಂದ ಕಲಾ ನೈಪುಣ್ಯವಾದ ಕಾರಣ ದುಬಾಯಿಯಲ್ಲಿ ನಡೆಸುವ ಯಾವುದೇ ಯಕ್ಷಗಾನ ಕಲಾ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯೂ ಹೌದು. ರಂಗದ ಒಳಗೆ ಮತ್ತು ಹೊರಗೆ ಯಕ್ಷಗಾನ ಕಾರ್ಯಕ್ರಮಗಳಿಗೆ ಬೇಕಾದ ಅಗತ್ಯಗಳ ಮಾಹಿತಿ-ಅನುಭವಗಳಿರುವುದರಿಂದ ಯಾವುದೇ ತಂಡಕ್ಕೆ ಇವರೊಬ್ಬರು ಅಗತ್ಯದ ಕಾರ್ಯಕರ್ತ- ಕಲಾವಿದ. ೧೯೭೨ ಜುಲೈ ೦೧ ರಂದು ಹುಟ್ಟಿದ ಇವರು DCE- ಪದವಿ ಪಡೆದು ಇಂಜಿನಿಯರ್ ಆಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ತಂದೆ- ಪ್ರಸಿದ್ಧ ವೇಷಧಾರಿ, ವೇಷಭೂಷಣ ಪ್ರಸಾದನ ತಜ್ಷ, ಮೋಹಿನಿ ಕಲಾ ಸಂಪದ ಕಿನ್ನಿಗೋಳಿ ಸಂಸ್ಥೆಯ ಸ್ಥಾಪಕ ದಿವಂಗತ ತಾಳಿಪಾಡಿ ದಾಮೋದರ ಶೆಟ್ಟಿಗಾರ್ ,ತಾಯಿ ಮೋಹಿನೀ ಡಿ. ಶೆಟ್ಟಿಗಾರ್. ಅಣ್ಣ ಶೇಖರ್ ಡಿ.ಶೆಟ್ಟಿಗಾರ್ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ನಿರ್ದೇಶಕ ಗುರುಗಳು. ಹೆಂಡತಿ- ಆಶಾ ಮತ್ತು ಯಕ್ಷಗಾನ ವೇಷಧಾರಿಗಳಾಗಿ ಪರಿಶ್ರಮ ಉಳ್ಳ ನವನೀತ್ ಮತ್ತು ನವ್ಯತಾ ಇವರ ಇಬ್ಬರು ಮಕ್ಕಳು. ಇವರ ಅಕ್ಕ ಮತ್ತು ಉಳಿದ ಅಣ್ಣಂದಿರು ಕೂಡ ಯಕ್ಷಗಾನ ಕಲಾವಿದರು.ಯಕ್ಷಗಾನದ ಬಾಲಪಾಠ ತಂದೆಯವರಿಂದ ಆದರೆ ಮುಂದಿನ ಪೂರ್ಣ ಮಟ್ಟದ ನಾಟ್ಯಭ್ಯಾಸ ಯಕ್ಷಗಾನದ ಶ್ರೇಷ್ಠ ಕಲಾವಿದ ಗುರುಗಳು ಆದ ಸುರತ್ಕಲ್ ಸೂರಪ್ಪ ಶೆಟ್ಟಿಗಾರ್ ಅವರಿಂದ ಲಭಿಸಿತು. ಊರಿನ ಶ್ರೀ ವೀರಭದ್ರ ಯುವಕ ಮಂಡಲದ ಯಕ್ಷಗಾನ ತಂಡದ ಸದಸ್ಯನಾಗಿ ಹವ್ಯಾಸಿ ಕಲಾವಿದನಾಗಿ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಹು ಸಂಖ್ಯೆಯ ಮತ್ತು ವೈವಿಧ್ಯಮಯ ವೇಷಗಳನ್ನು ಮಾಡಿದ ಹಿರಿಮೆ ಹೊಂದಿದವರು. 


ಇವರು ಶ್ರೀದೇವಿ ಮಹಾತ್ಮೆಯಲ್ಲಿ ವಿಷ್ಣು, ಮಧು, ಕೈಟಭ, 
ಮುಂಡಾಸುರ ಇತ್ಯಾದಿ ಪಾತ್ರ ನಿರ್ವಹಿಸಿದ ಅನುಭವಿಯಾದರೆ, ವೀರಮಣಿ ಕಾಳಗದ ಶುಭಾಂಗ-ರುಕ್ಮಾಂಗರಾಗಿ, ರುಕ್ಮಾಂಗದ ಚರಿತ್ರೆಯ ಧರ್ಮಾಂಗದನಾಗಿ, ತುಳಸೀ ಜಲಂಧರದ ಕುಂಭಾನಿಶುಂಭರಾಗಿ, ಪಂಚವಟಿ ಪ್ರಸಂಗದ ಲಕ್ಷ್ಮಣನಾಗಿ, ಕುಶ-ಲವ ಪ್ರಸಂಗದ ಲವ, ಇಂದ್ರಜಿತು ಕಾಳಗ, ತರಣಿಸೇನ ಕಾಳಗದಲ್ಲಿ ಶ್ರೀರಾಮನಾಗಿ, ತ್ರಿಜನ್ಮ ಮೋಕ್ಷದಲ್ಲಿ ವಿಷ್ಣುವಾಗಿ, ಮಾನಿಷಾದದ ಶತ್ರುಘ್ನ, ಹೀಗೆ ಹತ್ತು ಹಲವು ವೇಷಗಳ ಮೂಲಕ ತಮ್ಮ ರಂಗಾನುಭವವನ್ನು ಹೆಚ್ಚಿಸಿ ಕೊಂಡಿದ್ದಾರೆ. ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ನಡೆಸುವ ತಾಳಮದ್ದಲೆ ಅಭಿಯಾನದಲ್ಲಿ ಪ್ರಮುಖ ಕಲಾವಿದನಾಗಿ, ಪಂಚವಟಿಯ ಲಕ್ಷ್ಮಣ, ಗದಾಯುದ್ಧದ ಭೀಮ, ನಳದಮಯಂತಿಯ ನಳ,ಋತುಪರ್ಣ, ಕೃಷ್ಣಾರ್ಜುನದ ಅರ್ಜುನ ಇತ್ಯಾಧಿ ಪಾತ್ರ ನಿರ್ವಹಣೆಯ ಮೂಲಕ ದುಬಾಯಿ ಯಕ್ಷರಸಿಕರನ್ನು ರಂಜಿಸಿದ್ದಾರೆ. ಕಾಂತಾವರ ಮತ್ತು ನವಮಂಗಳೂರುಗಳಲ್ಲಿ ನಡೆದ ತೆಂಕುತಿಟ್ಟು ಯಕ್ಷಗಾನ ಸ್ಫರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಪಶಸ್ತಿ ಪಡೆದ ತಂಡದ ಸದಸ್ಯನಾಗಿ ತಂಡ ಪ್ರಶಸ್ತಿ ಪಡೆವಲ್ಲಿ ತಮ್ಮ ಅತ್ಯುತ್ತಮ ಪಾತ್ರ ನಿರ್ವಹಣೆಯ ಮೂಲಕ ಗಮನ ಸೆಳೆದವರು.


 


                                              ಶರತ್ ಕುಡ್ಲ :

ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ನಾಟ್ಯ ಗುರುಗಳಾಗಿ ತಮ್ಮ ಯಕ್ಷ ಪಾಂಡಿತ್ಯ ವನು 

ಧಾರೆಯೆರೆಯುತ್ತಿರುವ ಶರತ್ ಕುಡ್ಲ ಒಬ್ಬ ಅಸಾಧಾರಣ ಕಲಾವಿದ. ಹುಟ್ಟಿನಿಂದಲೇ ಅಂಟಿಕೊAಡು ಬಂದದಿಯೇನೋ ಎಂಬಷ್ಟು ಸಹಜ ಲೀಲಾಜಾಲ ಲಯಶುದ್ಧಿ, ಕ್ಷಣದೊಳಗೆ ಚಿಗುರೊಡೆವ ವೈವಿಧ್ಯಮಯ ಯಕ್ಷಗಾನದ ಪ್ರಾಚೀನ ಪರಂಪರೆಗೆ ಎರವಾಗದ ನಾಟ್ಯ, ಪುಂಡುವೇಷದಲ್ಲಿ ಹೆಚ್ಚಿನ ಚಾಕಚಕ್ಯತೆ. ಯೌವನಕ್ಕೆ ಕಾಲಿಡುವ ಮುನ್ನ ನಾಟ್ಯ ಗುರು - ನಿರ್ದೇಶಕನಾಗಿ ಕಾರ್ಯಸಿದ್ಧಿ. ಅದಕ್ಕೆ ಪೂರಕವಾಗಿ ಸ್ವಲ್ಪಮಟ್ಟಿನ ಭಾಗವತಿಕೆಯ ಅಭ್ಯಾಸ - ಹವ್ಯಾಸ. ಬಡಗುತಿಟ್ಟಿನ ನಾಟ್ಯಾಭ್ಯಾಸವನ್ನು ಮಾಡಿದ ಸಾಧಕ. ಇವಿಷ್ಟು ಸ್ಥೂಲವಾಗಿ ವಿವರಿಸಬಹುದಾದ ಶರತ್ ಕುಡ್ಲರ ಒಟ್ಟು ರೂಪ. ವಿಸ್ತೃತವಾಗಿ ನೋಡುವುದಾದರೆ ಅವರ ಜನ್ಮ ವೃತ್ತಾಂತದಿಂದಲೇ ಪ್ರಾರಂಭಿಸಬೇಕು.

ಶರತ್ ಹುಟ್ಟಿದ್ದು ೧೯೯೨ರ ಡಿಸೆಂಬರ್ ೦೩ ರಂದು, ತಂದೆ ದಿ. ವಂಸತ, ತಾಯಿ ದಿ.ಶೋಭ ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪೂರೈಸಿ ಉದ್ಯೋಗಕ್ಕೆ ದುಬಾಯಿಯತ್ತ ಪಯಣ. ಪದವೀಧರನಾಗುವ ಹೊತ್ತಿಗೆ ಪರಿಪೂರ್ಣ ಕಲಾವಿದನಾಗಿಯೂ ಸಿದ್ಧರಾಗಿದ್ದರು. ಪ್ರಾರಂಭದ ಯಕ್ಷ ಶಿಕ್ಷಣವನ್ನು ಶ್ರೀ ದೇವಿಪ್ರಸಾದ್ ಐ.ಕಟೀಲು, ಶ್ರೀವತ್ಸ ಕಟೀಲು ಇವರಿಂದ, ನಂತರ ಮೋಹಿನೀ ಕಲಾ ಸಂಪದ ಕಿನ್ನಿಗೋಳಿ ನೇತೃತ್ವದ ಹೆಜ್ಜೆ-ಗೆಜ್ಜೆ ಲಲಿತ ಕಲಾ ಕೇಂದ್ರದಲ್ಲಿ ಶ್ರೀ ಲೋಕೇಶ್ ಐ.ಕಟೀಲು ಹಾಗೂ ಶ್ರೀ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀ ಜಯಂತ್ ಅಮೀನ್ ಸಂಚಾಲಕತ್ವದ ವಿನಾಯಕ ಮಕ್ಕಳ ಮೇಳ ಕೆರೆಕಾಡು ತಂಡದಲ್ಲಿ ಶ್ರೀ ಜಗನ್ನಾತ್ ಆಚರ‍್ಯ ಅವರಿಂದ ಪಡೆದು, ಮುಂದೇ ಸಮಗ್ರ ಯಕ್ಷಗಾನ ನಾಟ್ಯ, ಪ್ರಸಂಗ ನಡೆ, ರಂಗಕ್ರಮ ಮುಂತಾದವುಗಳನ್ನು ಶ್ರೀ ಮೋಹನ್ ಆಳ್ವಾ ಅವರ ಪ್ರೋತ್ಸಾಹದಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಮೂಲಕ ಸಮಗ್ರ ಕಲಿಕೆಗೆ ಅವಕಾಶ ಒದಗಿಬಂತು. ಅಲ್ಲಿ ಗುರುಗಳಾಗಿ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀ ಸದಾಶಿವ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀ ದಯಾನಂದ ಮಿಜಾರ್, ಶ್ರೀ ಪ್ರಸಾದ್ ಚೇರ್ಕಾಡಿ, ಶ್ರೀ ಪವನ್ ಕೇರ್ವಾಶೆಯವರಿಂದ ಪಡೆದರು. ಬಡಗು ನಾಟ್ಯವನ್ನು ಶ್ರೀ ಮಂಟಪ ಪ್ರಭಾಕರ್ ಉಪಾಧ್ಯಾಯ ಹಾಗೂ ಶ್ರೀ ಚಂದ್ರಶೇಖರ್ ನಾವಡರಿಂದ ಕಲಿತುಕೊಂಡರು. ಪುರಾಣ ಜ್ಞಾನ ಶ್ರೀ ಯೋಗೀಶ್ ಕೈರೋಡಿ, ಶ್ರೀ ವಿನಾಯಕ್ ಭಟ್ ಗಾಳಿಮನೆ ಮತ್ತು ಪ್ರಸಾಧನದ ಬಗ್ಗೆ ಗಂಗಾಧರ್ ಡಿ ಶೆಟ್ಟಿಗಾರ್ ಅವರಿಂದ ಮಾರ್ಗದರ್ಶನ ಪಡೆದರು.ಶ್ರೀ ಗಣೇಶ್ ಕೊಲೆಕಾಡಿಯವರಿಂದ ಭಾಗವತಿಕೆಯ ಬಾಲ ಪಾಠ ಹಾಗೂ ಅರ್ಥಗಾರಿಕೆಯ ಆಧ್ಯಯನ ಮಾಡಿದರು.೧೩ನೇ ವರ್ಷ ಪ್ರಾಯದಲ್ಲಿ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಕೇಂದ್ರ ಕಟೀಲು ಇಲ್ಲಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಜರಗಿದ ಕುಶ-ಲವ ಪ್ರಸಂಗದಲ್ಲಿ ಕುದುರೆ ದೂತನಾಗಿ ರಂಗ ಪ್ರವೇಶ ಮಾಡಿದ ಇವರು, ಏಡ್ಸ್ ಜನಜಾಗೃತಿ ಪ್ರಯುಕ್ತ ನಡೆದ ಯಕ್ಷಗಾನದಲ್ಲಿ ಹಾಸ್ಯ ಪಾತ್ರ., ನಂತರ ವಿನಾಯಕ ಮಕ್ಕಳ ಮೇಳ ಕೆರೆಕಾಡು ತಂಡ ಸೇರಿ ಬೆಂಗಳೂರು, ಹಾಗೂ ಊರಿನ ನಾನಾ ಭಾಗಗಳಲ್ಲಿ ಯಕ್ಷ ಸೇವೆ.ಆಳ್ವಾಸ್ ಸಂಸ್ಥೆಯ ಮೂಲಕ. ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯನಾಗಿ, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೇ ಚೆನೈ ಮುಂಬಾಯಿ, ಹಾಗೂ ವಿದೇಶ ಕಾರ್ಯಕ್ರಮದಲ್ಲಿ ದುಬೈ, ಅಬುಧಾಬಿ, ಬೆಹರೈನ್ ದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದರು. ಯುನಿವರ್ಸಿಟಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವು ಇವರದಾಯಿತು. 


ಶ್ರೀಮದ್ ಜಗದ್ಗುರು ಕೇಶವಾನಂದ ಭಾರತಿ ಸ್ವಾಮಿಗಳು ಹಾಗೂ ಈಗಿನ ಪೀಠಾಧಿಪತಿ 
ಸಚ್ಚಿದಾನಂದ ಶ್ರೀಗಳ ಆಶೀರ್ವಾದದಿಂದ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ಮಾಡಿದ ಅನುಭವವೂ ಇವರಿಗಿದೆ. ಅಲ್ಲದೆ ತಪೋವನ ಉಜಿರೆ, ಕಲಾರಂಗ ಉಡುಪಿ ಇಲ್ಲಿ ನಡೆದ ಯಕ್ಷಗಾನ ಶಿಬಿರಗಳಲ್ಲಿ ಭಾಗವಹಿಸಿ ಹಿರಿಯ ಕಲಾವಿದರ ಮೂಲಕ ಹೆಚ್ಚಿನ ರಂಗ ಪ್ರಕ್ರಿಯೆಗಳ ಶಿಕ್ಷಣ ಪಡೆದರು.ಕಟೀಲು ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸೇವೆ. ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಇರುವೈಲು, ಬಾಚಕೆರೆ ಮೇಳ, ಕಲಾರಂಗ ಉಡುಪಿ, ಬಪ್ಪನಾಡು ಮುಂತಾದ ವೇದಿಕೆಯಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸಿದರು. 


ಇನ್ಫೋಸಿಸ್ ಮಂಗಳೂರು ಇಲ್ಲಿ ಇಂಗ್ಲೀಷ್ 
ಯಕ್ಷಗಾನದಲ್ಲಿ ಭಾಗವಹಿಸಿದರು. ಯಕ್ಷಧ್ರುವ ಶ್ರೀ ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಯಕ್ಷಗಾನ ತಂಡದಲ್ಲಿ ಸದಸ್ಯನಾಗಿ ಕುವೈಟ್ ನ್ನಲ್ಲಿ ಯಕ್ಷಗಾನ ಪ್ರದರ್ಶನ. ಯಕ್ಷಮಿತ್ರರು ತಂಡದ ಮೂಲಕ ಮಸ್ಕತ್ ನ್ನಲ್ಲಿ ಯಕ್ಷಗಾನ ಪ್ರದರ್ಶನ. ಯಕ್ಷಧ್ರುವ ಪಟ್ಲ ಸಂಭ್ರಮದ ವಾರ್ಷಿಕ ಕಾರ್ಯಕ್ರಮದಲ್ಲಿ ದುಬೈ ತಂಡದ ಮೂಲಕ ಭಾಗವಹಿಸಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಪ್ರಭಾಕರ್ ಡಿ ಸುವರ್ಣ ಕರ್ನಿರೆ ಇವರ ಸಹಕಾರದಿಂದ ಸುವರ್ಣ ಪ್ರತಿಷ್ಠಾನ ಕರ್ನಿರೆ ಇದರ ವಾರ್ಷಿಕ ಕಾರ್ಯಕ್ರಮದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆಳ್ವಾಸ್ ನ ಪ್ರಾಥಮಿಕ ತರಗತಿಯ ಮಕ್ಕಳಿಗೆ ಪ್ರಸಂಗ ತರಬೇತಿ, ಮಂಗಳೂರು ವಿಶ್ವ ವಿದ್ಯಾನಿಲಯದ ಡಾ: ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಯಕ್ಷಮಂಗಳದಲ್ಲಿ ಗುರುಳಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿಉತ್ತಮವಾದ ಯಕ್ಷಗಾನ ಪ್ರದರ್ಶನ ನೀಡುವ ಮುಖೇನ ತಮ್ಮ ರಂಗಾನುಭವ ಪಕ್ವತೆಗಳ ಅನಾವರಣ ಮಾಡಿರುತ್ತಾರೆ.ಪ್ರಸ್ತುತ ಯಕ್ಷಗಾನ ಅಭ್ಯಾಸ ತರಗತಿ ದುಬೈ ಇಲ್ಲಿ ನಾಟ್ಯ ಗುರುವಾಗಿ ಕಲಾ ಸೇವೆ ಮಾಡುತ್ತಿರುವ ಇವರು ತಂಡದ ಸಕ್ರಿಯ ಸದಸ್ಯನಾಗಿ ಯು.ಎ.ಇ ಯ ವಿವಿಧ ಭಾಗಗಳಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆಗಳಲ್ಲಿ ಭಾಗವಹಿಸಿ ಪುಂಡುವೇ಼ಷಧಾರಿಯಾಗಿ, ಅರ್ಥಧಾರಿಯಾಗಿ ಮಾತ್ರವಲ್ಲದೆ ತನ್ನ ಭಾಗವತಿಕೆಯ ಮೂಲಕವೂ ಜನಮೆಚ್ಚುಗೆ ಪಡೆದಿದ್ದಾರೆ.ತಮ್ಮ ಸುಧೀರ್ಘ ಅವಧಿಯ ಕಲಾಜೀವನದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ-ಪುರಸ್ಕಾರ ಪಡೆದಿದ್ದಾರೆ. ಕಟೀಲು ದೇವಳ ಕಾಲೇಜು ಯಕ್ಷಗಾನ ತಂಡದ ಸದಸ್ಯನಾಗಿ ಮಧುಸೂದನ ಕುಶೆ ಮಂಗಳೂರು ಇದರ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ತಂಡ ಪ್ರಶಸ್ತಿ. ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡದ ಮೂಲಕ ಎಸ್.ಡಿ.ಎಂ ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ತಂಡ ಪ್ರಶಸ್ತಿ. ಮುಲ್ಕಿ ವಿಜಯ ಕಾಲೇಜ್ ನ ಯಕ್ಷ ವಿಜಯ ಕೇಸರಿ ಸ್ಪರ್ಧೆಯಲ್ಲಿ ಪ್ರಥಮ ತಂಡ ಪ್ರಶಸ್ತಿ ಜೊತೆಗೆ, ವೈಯಕ್ತಿಕ ಪ್ರಥಮ ಪುಂಡುವೇಷ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡ ಹಿರಿಮೆ ಇವರದ್ದು. ಮಂಗಳೂರಿನ್ನಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಯಕ್ಷ ಭಾಗವತಿಕೆಗೆ ದ್ವಿತೀಯ ಪ್ರಶಸ್ತಿ. ದುಬೈಯ ಎನ್.ಎಮ್.ಸಿ ಸಂಸ್ಥೆ ಅಯೋಜಿಸಿದ ‘ಟ್ಯಾಲೆಂಟ್ ಸ್ಟೋರ‍್ಸ್’ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ.ಅನೇಕ ಕಡೆ ಸನ್ಮಾನ – ಗೌರವಗಳು ಕೂಡ ಇವರಿಗೆ ಸಂದಿವೆ. ಕುವೈಟ್ ಬಿಲ್ಲವ ಸಂಘ, ಮಸ್ಕತ್ ತುಳು ಸಂಘಟನೆ, ವತಿಯಿಂದ ಸನ್ಮಾನ ಪಡೆದಿದ್ದಾರೆ. ನಮ್ಮ ಕುಡ್ಲ ವಾಹಿನಿಯಲ್ಲಿ ಇವರ ಯಕ್ಷ ಸಂದರ್ಶನ ಪ್ರಸಾರವಾಗಿದೆ. ವಾಹಿನಿಗೂ ಈ ಕಾರ್ಯಕ್ರಮ ಸಜ್ಜುಗೊಳ್ಳುವಲ್ಲಿ ಮುತುವರ್ಜಿ ವಹಿಸಿದ ವಾಸು ಬಾಯಾರು ಅವರ ಸಹಕಾರವನ್ನು ಸ್ಮರಿಸುತ್ತಾರೆ.ಇಷ್ಟರವರೆಗೆ ಇವರು ರಂಗದಲ್ಲಿ ಕಾಣಿಸಿಕೊಂಡ ವೈವಿಧ್ಯಮಯ ಪಾತ್ರಗಳ ಪಟ್ಟಿ ಬಹು ದೊಡ್ಡದು. ಸುದರ್ಶನ ವಿಜಯದಲ್ಲಿ ಸುದರ್ಶನ, ತರಣಿಸೇನ ಕಾಳಗದಲ್ಲಿ ತರಣಿಸೇನ, ಶ್ರೀದೇವಿ ಮಹಾತ್ಮೆಯಲ್ಲಿ ಶ್ರೀದೇವಿ, ದೇವೇಂದ್ರ, ವಿಷ್ಣು, ಈಶ್ವರ, ಸುರ್ಪಾಶ್ವಕ, ದಿತಿ, ಪುರೋಹಿತನ ಮಡದಿ, ಯಕ್ಷ, ಮಾಲಿನಿ ದೂತ, ಶಂಖಾಸುರ, ದೇವೇಂದ್ರ ಬಲ, ಧೂಮ್ರಾಕ್ಷ, ಕಾಳಿ, ಪಾತ್ರಿ, ಚಂಡಾಸುರ, ಮುಂಡಾಸುರ, ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿ ಬೃಹಸ್ಪತಿ, ಗಿರಿಜಾ ಕಲ್ಯಾಣದಲ್ಲಿ ಷಣ್ಮುಖ,ದಕ್ಷಾಧ್ವರದಲ್ಲಿ ವೀರಭದ್ರ, ಶಬರಿಮಲೆ ಸ್ವಾಮಿ ಅಯ್ಯಪ್ಪದಲ್ಲಿ ಮಣಿಕಂಠ, ಹರಿಹರ, ಕುಂಭ, ಕೇಳುಪಂಡಿತ, ರುಕ್ಮಾಂಗದ ಚರಿತ್ರೆಯಲ್ಲಿ ಧರ್ಮಾಂಗದ, ವೀರಮಣಿ ಕಾಳಗದಲ್ಲಿ ರುಕ್ಮಾಂಗ, ಕೃಷ್ಣ ಲೀಲೆ-ಕಂಸವಧೆಯಲ್ಲಿ ಕೃಷ್ಣ, , ಬಲರಾಮ ಲಕ್ಷ್ಮಣ,ಕುಂಭಕರ್ಣ ಕಾಳಗದಲ್ಲಿ ರಾಮ, ವಿನಾಯಕ ಮಹಾತ್ಮೆಯಲ್ಲಿ ಗಜಾಸುರ, ನಂದಿ, ಜಾಂಬವತಿ ಕಲ್ಯಾಣದಲ್ಲಿ ಪ್ರಸೇನ, ವರಾಹ, ಏಕಾದಶೀ ಶ್ರೀದೇವಿ ಮಹಾತ್ಮೆಯಲ್ಲಿ ವಿಷ್ಣು ಗರುಡ, ಬಬ್ರಹುವಾಹನ ಕಾಳಗದಲ್ಲಿ ಬಬ್ರುವಾಹನ, ಕೋಟಿ-ಚೆನ್ನಯ್ಯದಲ್ಲಿ ಚೆನ್ನಯ್ಯ, ಚಕ್ರೇಶ್ವರ ಪರೀಕ್ಷಿತದಲ್ಲಿ ಶೃಂಗಿ, ಇಂದ್ರನಂದನ ವಾನರೇಂದ್ರದಲ್ಲಿ ವಾಲಿ, ಕುಶ-ಲವದಲ್ಲಿ ಕುದುರೆ ದೂತ, ಅಭಿಮನ್ಯು ಕಾಳಗ ಸಾರಥಿ, ಕರ್ಣ ಮುಂತಾದ ವಿವಿಧ ಬಗೆಯ ಪಾತ್ರಗಳನ್ನು ಮಾಡಿದ್ದಾರೆ.ಯಕ್ಷಗಾನದ ಜೊತೆಗೆ ಮಿಮಿಕ್ರಿ, ನಾಟಕ, ನೃತ್ಯ, ಕ್ರೀಡೆ,ಎನ್.ಸಿ.ಸಿ; ಎನ್‌ಎಸ್.ಎಸ್; ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.


ಮರೆಯಬಾರದವರು:- ಉಳಿದಂತೆ ಕಿಶನ್, ನಿತಿನ್ ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಶೆಟ್ಟಿ ಕುಳಾಯಿ, ಸಹನಾ ಭಟ್, ಸಾತ್ವಿಕ್ ಲಕ್ಷ್ಮಿಕಾಂತ ಭಟ್, ಸ್ಮೃತಿ ಲಕ್ಷೀಕಾಂತ ಭಟ್, ತನ್ವಿ ಪ್ರಸನ್ನ ಕುಮಾರ್, ತೀರ್ಥರಾಮ್, ದಕ್ಷ್ ಮನೋರಾಜ್, ಶರಣ್ಯ ಕೃಷ್ಣಕುಮಾರ ಐಲ, ದೀಕ್ಷಾ ಕೃಷ್ಣಕುಮಾರ ಐಲ, ಹರೀಶ ಪೂಜಾರಿ, ಲಕ್ಷ್ ಹರೀಶ್ ಸುವರ್ಣ, ರಾಘವೇಂದ್ರ ಕಟೀಲು, ರೋಹಿನ್ ಮನೀಷ್, ರೂಪ ಕಿರಣ್, ಸಮೀಕ್ಷ ಶೈಲೇಶ್ ಮಾಣೈ, ಶ್ರಮಿತ ಸೂರಜ್, ಶ್ರೇಯ ಸೂರಜ್, ಸ್ವರ ರಘು ಭಟ್, ತನ್ವಿ ಪ್ರಸನ್ನ ಕುಮಾರ್, ಛಾಯ ಲಕ್ಷ್ಮಣ ಶೆಟ್ಟಿಗಾರ್, ರಾಧಾಕೃಷ್ಣ ಯೆರುಂಬು, ಸೋಮಶೇಖರ್ ಕಕ್ಕೆ ಪದವು, ವಿಕ್ರಮ ಕಟೀಲು, ಯಶ್ ಲಕ್ಷ್ಮಣ ಶೆಟ್ಟಿಗಾರ್ ಮುಂತಾದವರು ಅಭ್ಯಾಸ ತರಗತಿಯ ವ್ಯಾಸಂಗ ಮಾಡಿ ಕೆಲವರು ಈಗಾಗಲೇ ರಂಗ ವೇರಿ ಮಿಂಚಿದ್ದಾರೆ, ಉಳಿದವರು ಅವಕಾಶದ ನಿರೀಕ್ಷೆಯಲ್ಲಿ ಇದ್ದಾರೆ. ಕೆಲವರು ಈಗಾಗಲೇ ಕರ್ತವ್ಯ/ ವಿದ್ಯಾಭ್ಯಾಸ ನಿಮಿತ್ತ ತಾಯ್ನಾಡಿಗೆ ತೆರಳಿದ್ದಾರೆ ಅದರಲ್ಲಿ ಕೆಲವರು ಊರಿನಲ್ಲಿ ಅಭ್ಯಾಸ ಮುಂದುವರಿಸುತ್ತಿದ್ದಾರೆ.ಹೊಸ ಸೇರ್ಪಡೆಯಾಗಿ ೫ ರ ಮುದ್ದು ಬಾಲೆಯರು- ಶೈವಿ ಪ್ರಭಾಕರ ಪೂಜಾರಿ, ಜಿಯಾ ವಿಶಾಲ್ ಪಿರೇರ, ಆದ್ಯ ಶೇಖರ್ ಶೆಟ್ಟಿ ಮೊದಲಾದ ಪುಟಾಣಿಗಳು ಅಭ್ಯಾಸ ಪ್ರಾರಂಭಿಸಿದ್ದಾರೆ. ತರಗತಿಯ ಮದ್ಯಾವಧಿಯಲ್ಲಿ ಸ್ವಲ್ಪ ಕಾಲ ಶ್ರೀಯುತ ಕಿಶೋರ್ ಗಟ್ಟಿ ಉಚ್ಚಿಲರವರು ಕೂಡ ನಾಟ್ಯ ಶಿಕ್ಷಕರಾಗಿ ಅಭ್ಯಾಸ ತರಗತಿಯಲ್ಲಿ ಸೇವೆ ಮಾಡಿದ್ದಾರೆ.

  (ಮುಂದುವರಿಯುವುದು....)



               ಸರಣಿ ಲೇಖನ ನಿರ್ವಹಣೆ:
ವಿಜಯ ಕುಮಾರ್ ಶೆಟ್ಟಿ ಯು.ಎ.ಇ

Post a Comment

0 Comments