ಪೆರ್ಲ: ಬಾಲ್ಯದಲ್ಲಿ ವೇದಿಕೆ ಏರಿ ನಾಟಕದಲ್ಲಿ ನಾಯಕನಾಗಿ ಪೋಲೀಸ್ ವೇಷ ಹಾಕಿದ ಪಾತ್ರಧಾರಿಯೊಬ್ಬರು ಮುಂದೆ ತನ್ನ ನಿಜ ಜೀವನದಲ್ಲೂ ಇದೇ ವೇಷಭೂಷಣವನ್ನು ಸ್ವಂತವಾಗಿಸಲು ಬಡತನದ ವಿರುದ್ಧ ಹೋರಾಡಿ ಗೆದ್ದ ಕಥೆ ಅವಿಸ್ಮರಣೀಯವಾಗಿದೆ.
ಈ ಕಥೆಯ ನಾಯಕ ಬಾಲಕೃಷ್ಣ ನಾಯಕ್ ಎಂಬ ರಾಜಾಪುರ ಸಾರಸ್ವತ ಸಮಾಜದ ವ್ಯಕ್ತಿಯಾಗಿದ್ದಾರೆ. ತನ್ನ ಕನಸನ್ನು ನನಸು ಮಾಡಿದ ಈ ವ್ಯಕ್ತಿ ಇಂದು ನಮ್ಮೊಂದಿಗೆ ಇಲ್ಲವಾಗಿದ್ದರೂ ಅವರ ನೆನಪು ಸದಾ ಅವಿಸ್ಮರಣೀಯವಾಗಿ ಊರಿನ ಜನರೊಡನೆ, ಓರಗೆಯ ಸ್ನೇಹಿತರೊಡನೆ ಮನದಲ್ಲಿ ಬೆಚ್ಚಗೆ ಉಳಿದಿದೆ. ವ್ಯಕ್ತಿಯೊಬ್ಬನ ಕಾಯ ಅಳಿದರೂ ಕೀರ್ತಿ ಇನ್ನೂ ಉಳಿದಿದೆ ಎಂದರೆ ನೆನಪಿಗೆ ಸಾವಿಲ್ಲ ಅದು ಅವಿಸ್ಮರಣೀಯ ಎಂಬುದೇ ಸಾರ್ಥಕತೆಯಾಗಿದೆ.
ಪೆರ್ಲ ಸಮೀಪದ ಶೇಣಿ ಎಂಬ ಗ್ರಾಮದಲ್ಲಿ ನೂಜಿಲ ರಾಮಣ್ಣ ನಾಯಕ್ -ಪದ್ಮಾವತಿ ದಂಪತಿಗಳ ಪುತ್ರನಾಗಿ 1969ರಲ್ಲಿ ಜನಿಸಿದ ಬಾಲಕೃಷ್ಣ ನಾಯಕ್ (ಉದಯ) ಅವರಿಗೆ ನಿರ್ಮಲ ಹಾಗೂ ಶ್ಯಾಮಲ ಎಂಬ ಇಬ್ಬರು ಸಹೋದರಿಯರು. ಮನೆಯಲ್ಲಿ ಬಾಲ್ಯದಿಂದಲೇ ಬಡತನದಿಂದಾಗಿ ಸಂಕಷ್ಟದ ದಿನಗಳು. ತಾವು ಹೆಚ್ಚು ಓದದಿದ್ದರೂ ತಮ್ಮನನ್ನು ವಿದ್ಯಾವಂತನ್ನಾಗಿಸಿ ಸರಕಾರಿ ಕೆಲಸ ದಕ್ಕಿಸಬೇಕೆಂದು ಸಹೊದರಿಯರಿಬ್ಬರು ರಾತ್ರಿ ಹಗಲು ಬೀಡಿ ಸುರುಟಿ ಪಣ ತೊಟ್ಟರು.ಇದರಿಂದಾಗಿ ಬಾಲಕೃಷ್ಣ ನಾಯಕ್ ಅವರು ಶೇಣಿ ಶ್ರೀಶಾರದಾಂಬ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿ ಕಾಸರಗೋಡು ಸರಕಾರಿ ಕಾಲೇಜಿನಲಿ ಪಿಡಿಗ್ರಿ ವ್ಯಾಸಂಗ ಪೂರೈಸುವಂತಾಯ್ತು.
ಯೌವನಾವಸ್ಥೆಗೆ ಕಾಲಿರಿಸಿದಾಗ ಕಟ್ಟುಮಸ್ತಾದ ದೇಹ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ ಬಾಲಕೃಷ್ಣ ನಾಯಕ್ ವಾಲಿಬಾಲ್,ಕಬ್ಬಡಿ ಮೂಲಕ ಉತ್ತಮ ಕ್ರೀಡಾಪಟುವಾಗಿ ಊರಿನಲ್ಲಿ ಎಲ್ಲರೊಡನೆ ಸೌಹರ್ದತೆ,ಪ್ರೀತಿಯ ಜತೆಗೆ ಉದಯ ಎಂಬ ಹೆಸರಿನೊಂದಿಗೆ ಗುರುತಿಸಿ ಜನಾನುರಾಗಿಯಾದರು. ಆಗ ಈಗಿನಂತೆ ಸಿನಿಮಾ,ಟಿವಿ,ಸಮೂಹ ಮಾಧ್ಯಗಳಂತಹ ಆಧುಕತೆಗೆ ಒಗ್ಗಿಕೊಳ್ಳದ ಜನತೆಗೆ ಆ ಕಾಲದಲ್ಲಿ ಊರಿನ ಪ್ರತಿಯೊಂದು ಪ್ರದೇಶದಲ್ಲಿ ಆಯೋಜಿಸಲ್ಪಡುವ ನಾಟಕಗಳೇ ಪ್ರಮುಖ ಸಾಂಸ್ಕೃತಿಕ ಆಸ್ತಿಯಾಗಿತ್ತು. ಬದುಕಿನಲ್ಲಿ ನೊಂದು ಬೆಂದು ಇರುವ ಜನತೆ ನಾಟಕ ನೋಡಿ ಆನಂದ ಪಡುತ್ತಿದ್ದರು. ಹೀಗಿರುವಾಗ ಸಹಜವಾಗಿಯೇ ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಬಾಲಕೃಷ್ಣ ನಾಯಕ್ ಅವರಿಗೆ ತುಳು ನಾಟಕದ ಮೂಲಕ ರಂಗವೇರುವ ಅವಕಾಶವೊದಗಿತು. ಯಾವುದೇ ವೇಷ ನೀಡಿದರೂ ಅದರಲ್ಲಿ ತಲೀನರಾಗಿ ಪಾತ್ರದ ಪರಕಾಯ ಪ್ರವೇಶ ಮಾಡುವ ನಾಯಕ್ ಅವರು ಒಮ್ಮೆ ಪೋಲಿಸ್ ಇನ್ಸ್ ಪೆಕ್ಟರ್ ಪಾತ್ರವಹಿಸಿ ಅದನ್ನು ಲೀಲಾಜಾಲವಾಗಿ ನಿರ್ವಹಿಸಿ ಪ್ರೇಕ್ಷಕರ ಪ್ರಶಂಸನೆಗೆ ಪಾತ್ರರಾದರು. ನಾಟಕ ಮುಗಿದ ಬಳಿಕ ಮರುದಿನದಿಂದ ನೋಡಿದವರು ಸಿಕ್ಕ ಸಿಕ್ಕಲಿ ಬಾಲಕೃಷ್ಣರು ನಿರ್ವಹಿಸಿದ ಅ ಪೋಲಿಸ್ ಪಾತ್ರದ ಬಗ್ಗೆ ಹೊಗಳಿದ್ದೇ ಹೊಗಳಿದ್ದು,ಪಾತ್ರ ನೈಜ ಜೀವನದಲ್ಲೂ ತನ್ನದಾಗಿಸುವ ಹಠ ತೊಟ್ಟರು. ಹಾಗೆ ಹುಟ್ಟಿದ ಛಲ ಕಾರವಾರದಲ್ಲಿ ಪೋಲಿಸ್ ತರಬೇತಿನಲ್ಲಿ ಭಾಗವಹಿಸುವವರೆಗೂ ಮುಂದುವರಿಯಿತು.
ಮುಂದೆ ನಡೆದಿದ್ದೆಲ್ಲ ಇವರ ಛಲದ ಸಾಧನೆಗೆ ಲಭಿಸಿದ ಸದಾವಕಾಶಗಳಾಗಿತ್ತು. ಪೋಲಿಸ್ ಟ್ರೈನಿಂಗ್ ಪೂರೈಸಿದ ಬಾಲಕೃಷ್ಣ ನಾಯಕ್ ಅವರು 1993ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಪೇದೆ ಉದ್ಯೋಗಕ್ಕೆ ನಿಯುಕ್ತರಾದರು.
ತನ್ನ ಕನಸನ್ನು ನನಸಾಗಿಸಿದ ವೃತ್ತಿ ಜತೆಗೆ ಜೀವನ ಆರಂಭಿಸಿದ ಬಾಲಕೃಷ್ಣ ನಾಯಕ್ ಅವರು 1997ರಲ್ಲಿ ಪುತ್ತೂರು ಸಮೀಪ ನಾಡಾಜೆಯ ರಾಮಚಂದ್ರ -ಪ್ರೇಮಲತಾ ನಾಯಕ್ ದಂಪತಿಗಳ ಪುತ್ರಿಯಾದ ಅರುಣಾ ಎಂಬವರನ್ನು ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತನ್ನಹುಟ್ಟೂರು, ಒಡನಾಡಿ, ಕುಟುಂಬವನ್ನು ಸದಾ ಪ್ರೀತಿಸುತ್ತಿದ್ದ ನಾಯಕ್ ಬಿಡುವಿನ ಸಮಯದಲ್ಲಿ ಊರಿಗೆ ಬಂದು ಬೆರೆಯುತ್ತಿದ್ದರು. ಉದ್ಯೋಗದಲ್ಲಿಯೂ ಕರ್ತವ್ಯ ನಿಷ್ಠೆ,ಶ್ರದ್ಧೆಯನ್ನು ಬೆಳೆಸಿಕೊಂಡಿದ್ದ ಇವರು ಅವನಿ(ಪುತ್ರಿ) ಹಾಗೂ ಶಾಶ್ವತ್ (ಪುತ್ರ)ನೊಡನೆ ಸಂತೃಪ್ತ ಸಂಸಾರ ಕಂಡುಕೊಂಡಿದ್ದರು.
ಬಿ.ಸಿ.ರೋಡ್ ಪೋಲಿಸ್ ಸ್ಟೇಶನ್ ನಲ್ಲಿ ಸೇವೆ ನಿರತರಾಗಿರುವ ನಡುವೆ ಇದ್ದಕ್ಕಿದ್ದಂತೆ ಆನಾರೋಗ್ಯಕ್ಕೆ ತುತ್ತಾದ ಇವರು 14-07-2012ರಂದು ಈ ಲೋಕವನ್ನು ಬಿಟ್ಟಗಲಿದರು.
ನಾಟಕ ನಟನೆಯ ಮೂಲಕ ಉದಯಿಸಿದ ಕನಸು ನನಸಾಗಿಸಿ ಯುವ ಪೀಳಿಗೆಗೆ ಆದರ್ಶಪ್ರಾಯರಾದ ಬಾಲಕೃಷ್ಣ ನಾಯಕ್ ಅವರು ಸಂಕಷ್ಟದ ನಡುವೆ ಬದುಕಿನ ಛಲವನ್ನು ದಾಟಿದ ಸಾಧಕ. ಊರಿನ ಜನತೆಯ,ಓರಗೆಯವರ ಓಡನಾಡಿಗಳ "ಪೋಲಿಸ್ ಉದಯ" ಇಂದು ನಮ್ಮನ್ನಗಲಿ ಎಂಟು ವರ್ಷಗಳೇ ಸಂದಿದರೂ ಅವರ ನಾಡಿನ ನಂಟು,ಪರಿಶ್ರಮ ಪ್ರತಿಯೊಬ್ಬರಿಗೂ ಮಾದರಿ. ಅವರ ಅವಿಸ್ಮರಣೀಯ ನೆನಪಿನ ನೋಟದೆಡೆಗೆ ಇದೊಂದು ಅಕ್ಷರಾಂಜಲಿಯ ಸಮರ್ಪಣೆ.





0 Comments