ದೇಶ-ವಿದೇಶದಲ್ಲಿ ಏಕರೂಪದ ಕಲಾ ಸಾಧನೆಗೆ ಪಾತ್ರರಾದ "ವಾಸು ಬಾಯಾರು"


                      ವಿದೇಶ_ವಿಶೇಷ  ಅಂಕಣ 32

(ವಿದೇಶ ವಿಶೇಷ ಅಂಕಣದ ಮೂಲಕ ಕಳೆದ 4 ಸರಣಿ ಲೇಖನಗಳನ್ನು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ DYAT ಬಗ್ಗೆ ಸವಿವರ ಪರಿಚಯ ನಿಮ್ಮ ಮುಂದಿಡಲಾಗಿತ್ತು. ಅದಕ್ಕೆ ಪೂರಕವಾದ 5ನೇ ಸರಣಿ ಬರಹ ಇದಾಗಿದೆ.)

ದುಬಾಯಿ: ತನ್ನ ಕಲಾ ಸಾಧನೆಯ ಸಾಮಾರ್ಥ್ಯವನ್ನು ದೇಶ- ವಿದೇಶದಲ್ಲಿ ಏಕ ರೂಪದಲ್ಲಿ ಪ್ರಸ್ತುತ ಪಡಿಸುವಂತಹ ಖ್ಯಾತಿಯನ್ನು ಪಡೆದ ಸಮರ್ಥರಲ್ಲಿ ವಾಸು ಬಾಯಾರ್ ಒರ್ವರಾಗಿದ್ದಾರೆ. ತುಳುನಾಡೆಂಬ ಹೆಗ್ಗಳಿಕೆಯ ಕೇರಳ-ಕರ್ನಾಟಕದ ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿಗೊಳಪಟ್ಟ ಬಾಯಾರು ಎಂಬ ಕುಗ್ರಾಮದಲ್ಲಿ ಜನಿಸಿ ತನ್ನ ಕಲಾ ನೈಪುಣ್ಯತೆಯ ಪ್ರಚುರತೆಯಿಂದ ದೇಶ ವಿದೇಶದಲ್ಲಿ ಪ್ರಸಿದ್ಧತೆ ಪಡೆದುಕೊಂಡ ವಾಸು ಬಾಯಾರ್ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ.

ಯಕ್ಷಗಾನ,ನಾಟಕ,ಚಲನಚಿತ್ರ ಹೀಗೆ ತ್ರಿರಂಗ ಕಲಾ ಸಾಧನೆಯನ್ನು ಕರಗತ ಮಾಡಿಕೊಂಡ ವಾಸು ಬಾಯಾರ್  ಸ್ವದೇಶದಲ್ಲಿ ಹೇಗೆ ಖ್ಯಾತಿ ಪಾತ್ರರೋ ಹಾಗೆಯೇ ವಿದೇಶದಲ್ಲಿ ವಿಖ್ಯಾತಿ ಸಿದ್ಧರು. ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಕ್ರಿಯ ಸದಸ್ಯರಾಗಿದ್ದ ಇವರ ಪರಿಚಯವನ್ನು ಈ ಸರಣಿ ಬರಹದ ಮೂಲಕ ವಿಶೇಷ ಚಾನೆಲ್ ನಿಮ್ಮ ಮುಂದಿಡುತ್ತಿದೆ.  


ಗಡಿನಾಡು ಕಾಸರಗೋಡಿನ ರಂಗಭೂಮಿ ಸಾಂಸ್ಕೃತಿಕ ಕನ್ನಡ ಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡವರು ವಾಸು ಬಾಯಾರು. ರಂಗಭೂಮಿಯಲ್ಲಿ ಸುಮಾರು ನಾಲ್ಕುವರೆ ದಶಕಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಓರ್ವ ಹಿರಿಯ ಅನುಭವಿ ಕಲಾವಿದ.

ಬಾಯಾರು-ಮುಳಿಗದ್ದೆ ದೇರೆ ಪೂಜಾರಿ – ಕೊರಪ್ಪಾಳು ದಂಪತಿಯರ ಆರು ಮಂದಿ ಮಕ್ಕಳಲ್ಲಿ ಕೊನೆಯವರು. ಕೌಟುಂಬಿಕವಾಗಿ ಕಲಾ ಪರಂಪರೆಯಿಲ್ಲದಿದ್ದರೂ ಅಸುಪಾಸಿನಲ್ಲಿ ಜರಗುತ್ತಿದ್ದ ಕಲಾ ಪ್ರದರ್ಶನಗಳನ್ನು ನೋಡಿ, ಕೇಳಿ, ತಿಳಿದುಕೊಂಡು ಉತ್ಸಾಹಿತರಾದ ಶ್ರೀಯುತರು ಮೂರನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಪ್ರಥಮವಾಗಿ ಮುಖಕ್ಕೆ ಬಣ್ಣ ಹಚ್ಚಿ ವೇದಿಕೆ ಏರಿದವರು. 80ರ ದಶಕಗಳಿಂದ ಕಾಸರಗೋಡಿನ ರಂಗಭೂಮಿಯಲ್ಲಿ ಸಕ್ರಿಯರಾಗಿ ಪ್ರಸಿದ್ಧ ರಂಗ ನಿರ್ದೇಶಕರ ನಿರ್ದೇಶನದಲ್ಲಿ ಅನೇಕ ತುಳು –ಕನ್ನಡ ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡೆದರು. ಸಾಮಾಜಿಕ, ಚಾರಿತ್ರಿಕ, ಪೌರಾಣಿಕ, ಐತಿಹಾಸಿಕ ತುಳು -ಕನ್ನಡ ನಾಟಕಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ಮಿಂಚಿದವರು. ದೆಹಲಿ, ಕಲ್ಕತ್ತ, ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಕಾಸರಗೋಡು, ದುಬೈ ಮೊದಲಾದೆಡೆ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. 

ಅನೇಕ ಮೂಖಾಭಿನಯ (ಮೈಮ್‌ಸೋ)ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಆಕಾಶವಾಣಿ ಮಂಗಳೂರು ನಿಲಯದ ‚ಬಿ.ಗ್ರೇಡ್‛ ಕಲಾವಿದರಾಗಿದ್ದು ಅನೇಕ ತುಳು – ಕನ್ನಡ ಬಾನುಲಿ ನಾಟಕಗಳು ಪ್ರಸಾರಗೊಂಡಿದೆ. ದೂರದರ್ಶನದಲ್ಲೂ ಇವರ ನಾಟಕಗಳು ಪ್ರಸಾರಗೊಂಡಿದೆ.

ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಾಣಿಸಿಕೊಂಡವರು. ಬಾಯಾರು ಶ್ರೀಪ್ರಕಾಶ್ ಚಂದ್ರ ರಾವ್ ಅವರಿಂದ ಪ್ರಥಮ ಹೆಜ್ಜೆಗಾರಿಕೆ ಕಲಿತು ಮುಂದೆ ಅನೇಕ ಯಕ್ಷಗಾನ ಪ್ರದರ್ಶನಗಳಲ್ಲಿ ವಿವಿಧ ಪಾತ್ರಗಳನ್ನು ಮಾಡಿದ್ದಾರೆ. 

ಯಕ್ಷಗಾನದಲ್ಲಿ ನಾನು ಪೂರ್ಣ ಪ್ರಮಾಣದ ಕಲಾವಿದನಾಗಿ ಗುರುತಿಸಿಕೊಳ್ಳದಿದ್ದರೂ ಓರ್ವ ‚ಸುಧಾರಿಕೆ‛ಯ ಕಲಾವಿದನಾಗಿ ಅನೇಕ ಪಾತ್ರಗಳನ್ನು ಮಾಡಿದ್ದೇನೆ ಎಂಬುದಾಗಿ ಅವರೇ ಹೇಳಿಕೊಳ್ಳುತ್ತಾರೆ. 


ಯಕ್ಷಗಾನ ಸಂಯೋಜಕರಾಗಿ, ಸಂಘಟಕರಾಗಿ ಕೇರಳ, ಕರ್ಣಾಟಕಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. 2017ರಲ್ಲಿ ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇವರು ಸಂಯೋಜಿಸಿ ರಮೇಶ್ ಶೆಟ್ಟಿ ಬಾಯಾರು ನಿರ್ದೇಶನದಲ್ಲಿ ಪ್ರಥಮವಾಗಿ ‚ಭಾನುಕೋಪ ವಿಜಯ‛ ಯಕ್ಷಗಾನ ಕೊರಿಯಾಗ್ರಾಫಿ ಚಿತ್ರೀಕರಣದ ಮೂ­ಕ ದಾಖಲೀಕರಣವಾಗಿದೆ. 


ಕೇರಳ ಸರಕಾರದ ಪ್ರವಾಸೋದ್ಯಮ ಇಲಾಖೆ ಅಯೋಜಿಸಿದ ‚ಉತ್ಸವಾ‛ ಕಾರ್ಯಕ್ರಮದಲ್ಲಿ ಕೇರಳದ 14 ಜಿಲ್ಲೆಗಳಲ್ಲಿ ಕನ್ನಡ ಪೌರಾಣಿಕ ಪ್ರಸಂಗದ ಯಕ್ಷಗಾನ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು.ಓಣಂ‛ ಹಬ್ಬದ ಪ್ರಯುಕ್ತ ತಿರುವನಂತಪುರಂ ಕನಕಕುನ್ನು ಕೊಟ್ಟಾರ (ಪ್ರಸಿದ್ಧ ಅರಮನೆ )ದ ವೇದಿಕೆಯಲ್ಲಿ ಪ್ರದರ್ಶನಗೊಂಡ ಕನ್ನಡ ಯಕ್ಷಗಾನ ಜನಮೆಚ್ಚುಗೆ ಪಡೆದಿತ್ತು. ತಿರುವನಂತಪುರಂ ದೂರದರ್ಶನದಲ್ಲೂ ಇವರ ಸಂಯೋಜನೆಯಲ್ಲಿ ಕನ್ನಡ ಯಕ್ಷಗಾನ ಪ್ರದರ್ಶನಗೊಂಡಿದೆ.

ದುಬಾಯಿ ಯಕ್ಷರಂಗದ ಅವರ ಚಟುವಟಿಕೆಗಳ ಬಗ್ಗೆ ಅವರು ಮಾತುಗಳಲ್ಲೇ ಕೇಳುವುದಾದರೆ, 2010ರಿಂದ ಯಕ್ಷಮಿತ್ರರು ದುಬಾಯಿ ಮತ್ತು ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಸಂಘದ ಕಲಾವಿದರಾಗಿ ತೊಡಗಿಸಿಕೊಂಡಿದ್ದೇನೆ. ಯಕ್ಷಗುರು ಶೇಖರ್ ಡಿ. ಶೆಟ್ಟಿಗಾರ್ ತನ್ನನ್ನು ತಿದ್ದಿ ತೀಡಿ ಸರಿಯಾದ ರಂಗ ಕ್ರಮ, ರಂಗ ಮಾಹಿತಿ, ಅರ್ಥಗಾರಿಕೆ ಮೊದಲಾದ ಸಂಪೂರ್ಣ ಮಾಹಿತಿ ಜೊತೆಗೆ ನನ್ನಲ್ಲಿದ್ದ ಕುಂದು ಕೊರತೆಗಳನ್ನು ಸರಿಪಡಿಸುವಲ್ಲಿ ಸದಾ ಪರಿಶ್ರಮ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಯಕ್ಷಗಾನ ಪ್ರದರ್ಶನ, ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿ ಬೆಳೆಸಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂಬುದಾಗಿ ಗೌರವಭಾವ, ಮಾತ್ರವಲ್ಲದೆ ಯಕ್ಷಗಾನ ಅಭ್ಯಾಸ ತರಗತಿ ದುಬೈ ಇದರ ಸಂಚಾಲಕರಾದ ಶ್ರೀದಿನೇಶ್ ಶೆಟ್ಟಿ ಕೊಟ್ಟಿಂಜ ಇವರ ಆತ್ಮೀಯತೆ, ಪ್ರೋತ್ಸಾಹ, ಸಹಾಯ, ಸಹಕಾರ ನಾನು ಎಂದೆಂದಿಗೂ ಮರೆಯಲಾರದ ಅನುಭವ‛ ಎಂದು ಮನದ ಮಾತುಗಳನ್ನು ಬಿಚ್ಚಿಡುತ್ತಾರೆ.

ಧ್ವನಿ ಪ್ರತಿಷ್ಠಾನ ದುಬೈ ಸಂಸ್ಥೆಯ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದ ಅನೇಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲಿ ಅಭಿನಯಿಸಿ ದುಬಾಯಿಯ ಕನ್ನಡ ನಾಟಕ ಪ್ರೇಮಿಗಳನ್ನು ರಂಜಿಸಿದ್ದಾರೆ.

ಸಿನಿಮಾ, ಕಿರುತೆರೆ, ಟೆಲಿಫಿಲ್ಮ್ ಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆದ ಶ್ರೀಯುತರು ‚ಓರ್ವ ಚತುರ್ಭಾಷಾ ಕಲಾವಿದ. ತುಳು, ಕನ್ನಡ, ಮಲೆಯಾಳಂ, ಹಿಂದಿ ಭಾಷಾ ಟೆಲಿಫಿಲ್ಮ್, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಅಭಿನಯಿಸಿದ ಕಿರುತೆರೆ ಧಾರಾವಾಯಿಗಳು ಉದಯ ಟಿವಿ, ಚಂದನ, ತಿರುವನಂತಪುರಂ ದೂರದರ್ಶನ, ಡೆಲ್ಲಿ ದೂರದರ್ಶನಗಳಲ್ಲೂ ಪ್ರಸಾರಗೊಂಡಿದೆ. 


ಇವರು ಅಭಿನಯಿಸಿದ ಹೆಚ್ಚಿನ ಸಿನಿಮಾಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು ನಿರ್ದೇಶನ ಮಾಡಿರುವುದು, ಅಂತಹ ನುರಿತ ನಿರ್ದೇಶಕರು ಇವರನ್ನು ತಮ್ಮ ಚಲನಚಿತ್ರ ಪಾತ್ರಗಳಿಗೆ ಆಯ್ದುಕೊಂಡುದು ಇವರ ಹೆಗ್ಗಳಿಕೆ. 

ಹವ್ಯಾಸಿ ಲೇಖಕರಾಗಿಯೂ ಗುರುತಿಸಿಕೊಂಡಿರುವ ಇವರ ತುಳು – ಕನ್ನಡ ಲೇಖನಗಳು ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ವಿಜಯ ಕಿರಣ, ಕಾರವಲ್, ಮಂದಳ, ಕಣಿಪುರ, ಬಲ್ಲಿರೇನಯ್ಯಾ ಮೊದಲಾದ ಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗಿದೆ.

ಸಮಾಜಮುಖಿಯಾಗಿ ಗುರುತಿಸಿಕೊಂಡಿರುವ ಶ್ರೀಯುತರು ಅನೇಕ ಅಶಕ್ತ ಕಲಾವಿದರಿಗೆ ಗಣ್ಯ ಕಲಾವಿದರಿಗೆ ಪ್ರಶಸ್ತಿ- ಪುರಸ್ಕಾರ ದೊರೆಯುವಂತೆ ಪ್ರಯತ್ನಶೀಲರಾಗಿ ಕಲಾವಿದರ ನೋವು-ನಲಿವಿನಲ್ಲಿ ಭಾಗಿಯಾಗಿದ್ದಾರೆ. 

ಇವರ ಸಾಂಸ್ಕೃತಿಕ ಬದುಕಿನ ಸೇವೆಯನ್ನು ಗುರುತಿಸಿ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ಕ್ಷೇತ್ರ ಬೆಂಗಳೂರು, ಬಿಲ್ಲವ ಸಮಾಜ ಕಾಸರಗೋಡು, ತುಳುವರೆ ಆಯೋಜನದ ಪ್ರಥಮ ತುಳು ಸಮ್ಮೇಳನ ಬದಿಯಡ್ಕದಲ್ಲಿ ನಡೆದ ಸಂದರ್ಭ. ಕಾಸರಗೋಡಿನಲ್ಲಿ ಜರುಗಿದ 16ನೇ ಕರ್ನಾಟಕ ಪ್ರಾಂತ್ಯ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಾಡೋಜ ಡಾ| ಕಯ್ಯಾರು ಕಿಞಣ್ಣ ರೈಗಳು ‚ಸುವರ್ಣ ಕನ್ನಡಿಗ‛ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 

ತರುಣಕಲಾ ವೃಂದ (ರಿ) ಇದರ 39ನೇ ವಾರ್ಷಿಕೋತ್ಸವ, ೨೪ನೇ ಸಾರ್ವಜನಿಕ ಗಣೇಶೋತ್ಸವ ಬಾಯಾರು – ಮುಳಿಗದ್ದೆ ಇಲ್ಲಿ, ಒಡಿಯೂರು ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಸನ್ಮಾನ, ಕುಂಬಳೆ ಬಿ­ಲ್ಲವರ ಸಮ್ಮೇಳನ, 2012 ರಲ್ಲಿ ಬಿಲ್ಲವಾಸ್ ದುಬೈ’, 2015ರಲ್ಲಿ‚ತುಳು ಪಾತರ‍್ಗ ತುಳು ಒರಿಪಾಗ ದುಬೈ‛ ಇವರಿಂದ,‚ಅಪ್ಪೆ ಭಾಷೆ ತುಳುವ ತುಡರ್-2‛ ಸನ್ಮಾನ ಮೊದಲಾದೆಡೆಗಳಲ್ಲಿ ಅನೇಕ ಗೌರವ ಪುರಸ್ಕಾರ ಪಡೆದಿದ್ದಾರೆ.

ತಾನು ಹೊದ ಕಡೆಗಳಲ್ಲಿ ಎಲ್ಲಾ ಕಲೆಗೆ ಬೆಲೆ ನೀಡಿ ಉದಯೋನ್ಮುಖ ಕಲಾವಿದರು ಬೆಳೆಯುವಂತೆ ಮಾಡುವ ವಾಸು ಬಾಯಾರ್ ನಿಜವಾಗಿಯೂ ತುಳುನಾಡಿನ ಅನರ್ಘ್ಯ ರತ್ನ. ಇವರ ಕಲಾ ಸಾಧನೆಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಒಲಿದು ಬದುಕು ಬಂಗಾರವಾಗಲೆಂಬುದೆ ಶುಭ ಹಾರೈಕೆ.



(ಕಳೆದ ಕೆಲವು ವಾರಗಳಿಂದ ವಿದೇಶ ವಿಶೇಷ ಅಂಕಣ ಮೂಲಕ ಸರಣಿ ಲೇಖನಕ್ಕೆ ಬಹುವಾಗಿ ನೆರವಾದವರು DYAT ತಂಡದ ಲಿಪಿಕಾರರಾದಂತಹ ಶ್ರೀಮತಿ ಅನುಷಾ. 
ಇವರು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಕ್ರಿಯ ಕಲಾವಿದ ಸತೀಶ ಶೆಟ್ಟಿಗಾರ್ ವಿಟ್ಲರವರ ಧರ್ಮಪತ್ನಿ. 
ಪುರಾಣ, ಕಥಾ ಶ್ರವಣಗಳಲ್ಲಿ ಅತೀವ ಆಸಕ್ತಿ. ಅಭ್ಯಾಸ ತರಗತಿಯ ಅಗತ್ಯದ ಪ್ರಸಂಗ-ರಂಗಪಠ್ಯ 
ತಯಾರಿಯಲ್ಲಿ ಇವರ ಗಣಕಲಿಪಿ-ಬೆರಳಚ್ಚಿನ ಸಹಕಾರ ನೀಡಿದ್ದಾರೆ. 
ಛಾಯಚಿತ್ರ ಮತ್ತು ಮಾಹಿತಿ ಸಂಗ್ರಹಕ್ಕೆ ನೆರವಾದ DYAT ತಂಡದ ಅಧಿಕೃತ ಛಾಯಾಚಿತ್ರಗ್ರಾಹಕರಾದ 
ಶ್ರೀಯುತ ಶರತ್ (ಕುಮಾರ್) ಸರಳಾಯರ ಸಂಗ್ರಹದಿಂದ ಹೆಚ್ಚಿನ ಚಿತ್ರಗಳನ್ನು ಕಳೆದ ಲೇಖನದಲ್ಲಿ 
ಬಳಸಲಾಗಿದೆ. ಉಳಿದಂತೆ ಮಾಹಿತಿ ಲಭ್ಯವಿಲ್ಲದ ಅನೇಕ ಚಿತ್ರಗಳನ್ನು ಬಳಸಲಾಗಿದೆ. ಎಲ್ಲರಿಗೂ 
ಕೃತಜ್ಞತೆಗಳು. 
ಕಲಾವಿದರ ಮಾಹಿತಿ ಸಂಗ್ರಹದಲ್ಲಿ ಸತತವಾಗಿ ಶ್ರಮಿಸಿದ ನಾಟ್ಯಗುರುಗಳೂ ಆದ ಶ್ರೀಯುತ ಶರತ್ ಕುಡ್ಲ, ಸಂಯೋಜಕ ದಿನೇಶ್ ಕೊಟ್ಟಿಂಜ ಹಾಗೂ ಸರ್ವ ಕಲಾವಿದರಿಗೂ  ವಿಶೇಷ ಧನ್ಯವಾದಗಳು
ವಿಜಯ ಕುಮಾರ್ ಶೆಟ್ಟಿ ಕಾರ್ಯ ನಿರ್ವಾಹಕ ನಿರ್ದೇಶಕರು- ವಿಶೇಷ ಚಾನೆಲ್ ಹಾಗೂ ಸಂಪಾದಕೀಯ ಮಂಡಳಿ

Post a Comment

0 Comments