ವಿದೇಶ ವಿಶೇಷ ಅಂಕಣ: 34
ಯುಎಇ: ಬದುಕಿನಲ್ಲಿ ಬವಣೆಪಡುವ ಅದೇಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಅಂತಹ ಬಡವರ ಬವಣೆ ಸ್ಪಂದಿಸುವ ಮನೋಭಾವದೊಂದಿಗೆ ಸಾಮಾಜಿಕ ಸೇವಾ ಸಂತೃಪ್ತಿಗೆ ಬದುಕ ಮೀಸಲಿರಿಸಿದವರು ಇಲ್ಲೊಬ್ಬರಿದ್ದಾರೆ ಅವರೇ ಎಸ್.ಎಂ.ಬಶೀರ್.
ಗಲ್ಫ್ ರಾಷ್ಟ್ರದಲ್ಲಿ ತನ್ನದೇ ವೃತ್ತಿ ಜೀವನದೊಂದಿಗೆ ಪ್ರವೃತ್ತಿಯಲ್ಲಿ ಸಂಕಷ್ಟದಾತರಿಗೆ ಸಮರ್ಥ ಮಾರ್ಗದರ್ಶನ, ಮಾಹಿತಿಗಳ ಮೂಲಕ ಆಸರೆಯಾಗುವ ಇವರು "ಪರೋಪಕಾರರ್ಥಂ ಇಧಂ ಶರೀರಂ" ಎಂಬ ಊಕ್ತಿಗೆ ಅನ್ವರ್ಥನಾಮರಾಗಿದ್ದಾರೆ.
ಸಂಘ,ಸಂಸ್ಥೆಗಳ ಒಡನಾಟವೇ ಜೀವಾಳವಾಗಿಸಿ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವ ದೃಢತೆಯ ಈ ಸಾಮಾಜಿಕ ಸಾಕಾರಮೂರ್ತಿಯ ಬದುಕು ಬರಹದ ಅನಾವರಣ ಇಲ್ಲಿದೆ.
ಇವರು ಮತ್ಸ್ಯೋದ್ಯಮಕ್ಕೆ ಹೆಸರುವಾಸಿಯಾದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನ ಎಸ್.ಎಂ.ಅಬ್ದುಲ್ ರಸಾಕ್- ಝುಹರಾ ದಂಪತಿಗಳ 6 ಮಂದಿ ಮಕ್ಕಳಲಲ್ಲಿ ಹಿರಿಯವರಾಗಿ ಜನಿಸಿದವರು. ಬಳಿಕ ಮಂಗಳೂರಿನ ಕಡಲತೀರದಲ್ಲಿ ಬೆಳೆದ ಎಸ್.ಎಂ.ಬಶೀರ್ ಅವರ ಕುಟುಂಬ ಮೀನುಗಾರಿಕೆಯನ್ನೇ ಜೀವನವನ್ನಾಗಿಸಿತ್ತು. ಮಂಗಳೂರಿನಲ್ಲಿ ಪದವಿ ವ್ಯಾಸಂಗ ಪೂರೈಸಿದ ಬಶೀರ್ ಅವರು ವೃತ್ತಿ ಜೀವನಕ್ಕಾಗಿ ಸಾಗರ ದಾಟಿ 1993ರಲ್ಲಿ ಅರಬ್ ನಾಡಾದ ಕುವೈತ್ ಗೆ ಕಾಲಿರಿಸಿದರು. ಚಿಕ್ಕಂದಿನಿಂದಲೇ ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಬಶೀರ್ ಅವರು ಸುಸಂಸ್ಕೃತ ಗುಣವನ್ನು ಹೊಂದಿದ್ದರು. ಪರ ದೇಶದಲ್ಲಿಯೂ ಪರರಿಗೆ ಸಹಾಯ ಮಾಡುವ ಉದ್ದೇಶವಿರಿಸಿದ್ದ ಇವರು ಕುವೈತ್ ನ ಕೆಕೆಎಂಎ ಎಂಬ ಸಂಘಟನೆಯಲ್ಲಿ ಸದಸ್ಯರಾಗಿ ಸೇರಿಕೊಂಡು ತಮ್ಮ ಸದುದ್ದೇಶದ ಸಾಕಾರಕ್ಕೆ ತೊಡಗಿಕೊಂಡರು.
ಕುವೈತ್ತಿನಿಂದ ವೃತ್ತಿ ಜತೆಗೆ ಸಾಮಾಜಿಕ ಪ್ರವೃತ್ತಿ ಆರಂಭ:
ಹತ್ತು ಹಲವು ಸಾಮಾಜಿಕ ದೃಷ್ಠಿಕೋನವಿರಿಸಿಕೊಂಡಿದ್ದ ಬಶೀರ್ ಅವರು ಕೆಕೆಎಂಎ ಸಂಘಟನೆಯನ್ನು ವಿಸೃತವಾಗಿ ಬೆಳೆಸಲು ಶ್ರಮವಹಿಸಿದರು. ಸರಿ ಸುಮಾರು 18 ವರ್ಷಗಳ ಹಿಂದೆಯೇ ಬಡವರಿಗೆ ಮಧುಮೇಹ ಕಾಯಿಲೆ ಬಂದರೆ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕಿದೆ ಎಂಬ ಯೋಚನೆಯನ್ನು ಕೆಕೆಎಂಎ ಮೂಲಕ ಸಾಮಾಜಿಕ ಸ್ವಾಸ್ಥ್ಯ ಯೋಜನೆಯನ್ನಾಗಿಸಲು ಪ್ರಯತ್ನಿಸಿದ್ದರು. ಇದರಂತೆ ಮಂಗಳೂರಿನ ಫಾದರ್ ಮುಲ್ಲಾರ್ಸ್ ಮತ್ತು ಹೈಲ್ಯಾಂಡ್,ಕುಂದಾಪುರದ ವಿನಯ ಆಸ್ಪತ್ರೆಗಳಲ್ಲಿ ಕೆಕೆಎಂಎ ಸಂಘಟನೆಯ ಮೂಲಕ ಡಯಾಬಿಟಿಸ್ ಸೆಂಟರ್ ಗಳನ್ನು ಆರಂಭಿಸಲು ಬಶೀರ್ ಅವರ ದೂರದೃಷ್ಠಿತ್ವ ಮುಖ್ಯ ಕಾರಣವಾಯಿತು. ಇಂದಿಗೂ ಕೂಡಾ ಇಲ್ಲಿ ಜಾತಿ,ಧರ್ಮದ ಭೇಧವಿಲ್ಲದೆ ಎಲ್ಲರಿಗೂ ಸಮಾನ ಚಿಕಿತ್ಸೆ ನೀಡುವ ವ್ಯವಸ್ಥೆ ಈ ಕೇಂದ್ರಗಳಲ್ಲಿದ್ದು ಇದು ಅತ್ಯಧಿಕ ಸಮಾನ್ಯ ಜನ ವಿಭಾಗಕ್ಕೆ ಸಹಾಯಕವಾಗಿದೆ.
ಬಹುಮುಖಗಳಿಂದ ಸಾಮಾಜಿಕ ಸಾಂತ್ವನದ ಕಾಳಜಿ ಹೊಂದಿರುವ ಎಸ್.ಎಂ.ಬಶೀರ್ ಅವರು ಸಮಾಜದಲ್ಲಿರುವ ಆನಾಥರನ್ನು ಗಮನಿಸಿ ಅವರ ಸಂಕಷ್ಟಕ್ಕೆ ನೆರವು ನಿಲ್ಲಲು ಕೆಕೆಎಂಎ ಮೂಲಕ ಪ್ರಯತ್ನಶೀಲರಾದರು. ಇದರಿಂದಾಗಿ ಹಲವಾರು ಬಡವರಿಗೆ ಮನೆಗಳನ್ನು ನಿರ್ಮಿಸಿ ಬದುಕನ್ನು ಕಟ್ಟಿಕೊಡುವ ಮಹತ್ಕಾರ್ಯಕ್ಕೆ ಪ್ರೇರಣಾದಾಯಕರಾದರು.
ಅರಬ್ ರಾಷ್ಟ್ರ ಎಂದರೆ ಉದ್ಯಮ ನಗರಿ ಎಂಬ ಆಸೆಯಿಂದ ಸೂಕ್ತ ಮಾಹಿತಿ,ಮಾರ್ಗದರ್ಶನಗಳಿಲ್ಲದೆ ಅದೆಷ್ಟೋ ಜನ ಸ್ವದೇಶದಿಂದ ವಿದೇಶಕ್ಕೆ ಬರುವವರು ಇಲ್ಲಿ ಕೆಲಸವಿಲ್ಲದೆ ಸಮಸ್ಯೆಗೆ ಸಿಲುಕುವವರಿದ್ದಾರೆ. ಅಂತಹವರನ್ನು ಕಂಡು ಮರುಗಿದ ಮನಸ್ಸಿನಿಂದ ಸ್ವತಃ ತಮ್ಮ ಸ್ವದೇಶದ ಜನತೆಗೆ ಸಹಾಯಕವಾಗಿ ಕೆಕೆಎಂಎ ಮೂಲಕ ಉದ್ಯೋಗ ಕೌಶಲ ತರಬೇತಿಯನ್ನು ನೀಡ ತೊಡಗಿದರು.
ಕುವೈತ್ ನಿಂದ ಯುಎಇಯ ಟೆಲಿಕಾಂ ಕಂಪೆನಿಯ ಉಪಾಧ್ಯಕ್ಷ ಸ್ಥಾನಕ್ಕೆ....
ಕುವೈತ್ತಿನ ವೃತ್ತಿ ಬದುಕಿನಿಂದ ಪಲ್ಲಟ ಕಂಡ ಎಸ್.ಎಂ.ಬಶೀರ್ ಯುಎಇಗೆ ಆಗಮಿಸಿದರು. ಅವರು ಪ್ರತಿಷ್ಠಿತ ಹಾರ್ವರ್ಡ್ ವಿ.ವಿ.ಯಿಂದ ಮ್ಯಾನೇಜ್ ಮೆಂಟ್ ಎಸ್ಲೆಂಷಿಯಲ್ ಕೋರ್ಸ್ ಗಳಿಸಿಕೊಂಡು ಗ್ರೂಫ್ ಆಫ್ ಇಂಟರ್ ನ್ಯಾಷನಲ್ (3ಟೆಲಿಕಾಂ ಕಂಪೆನಿ)ಯ ಪ್ರತಿಷ್ಠಿತ ಗ್ರೂಫ್ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾದರು. ಉದ್ಯೋಗ ಕೌಶಲ್ಯತೆಗೆ ಸ್ವತಃ ತಾನೇ ಮಾದರಿಯಾಗಿರುವ ಬಶೀರ್ ಇಂತಹ ಉನ್ನತ ಹುದ್ದೆಯನ್ನು ಹೊಂದಿರುವ ಅಪರೂಪದ ಕನ್ನಡಿಗರಲ್ಲಿ ಒರ್ವರಾಗಿದ್ದಾರೆ.
ದುಬೈಯ ಬ್ಯಾರಿ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ನ ದುಬೈ ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾದ ಬಶೀರ್ ಅವರು ತಮ್ಮ ನಾಯಕತ್ವದಲ್ಲಿ ವ್ಯಾಪಾರ,ಉದ್ಯೋಗ ಸೃಷ್ಠಿ ಮಾಡಲು ಮುಂದಾಗುವವರಿಗೆ ನೆರವಿನ ಸಹಾಯ ನೀಡುತ್ತಾರೆ. ಅವರಿಗೆ ಬೇಕಾದ ಮಾಹಿತಿ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ತರಬೇತಿ ನೀಡುವ ಸಮಾಜೋನ್ಮುಖಿ ಸಾಧಕರಾಗಿದ್ದಾರೆ.
ದೂರದ ಯುಎಇಯಲ್ಲಿದ್ದರೂ ತನ್ನ ಜನ್ಮ ನಾಡಿನೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿರುವ ಬಶೀರ್ ಅವರು ಮಂಗಳೂರಿನ ಶೆಫರ್ಡ್ ಇಂಟರ್ ನ್ಯಾಷನಲ್ ಆಕಾಡೆಮಿಯ ಟ್ರಸ್ಟಿ ಮತ್ತುಸಲಹೆಗಾರರಾಗಿದ್ದಾರೆ. ಅತ್ಯಂತ ಬಡ ವಿದ್ಯಾರ್ಥಿಗಳಿಗೂ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡುವ ಯೋಜನೆಗೆ ಕೈಜೋಡಿಸುತ್ತಿದ್ದಾರೆ.
ಉತ್ತಮ ವಾಕ್ಪಟುತ್ವವನ್ನು ಮೈಗೂಡಿಸಿಕೊಂಡಿರುವ ಎಸ್.ಎಂ.ಬಶೀರ್ ಅವರ ಮಾತು ಎಂತಹವರನ್ನು ಮಂತ್ರಮುಗ್ದಗೊಳಿಸುತ್ತದೆ. ಹಿಂದಿ,ಇಂಗ್ಲಿಷ್, ಮಲೆಯಾಳ,ಬ್ಯಾರಿ,ಕನ್ನಡ ಬಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಬಶೀರ್ ಅತ್ಯುತ್ತಮ ವಾಗ್ಮಿಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಕೋರೋನ ಕಾಲದಲ್ಲಿ ಜಗತ್ತೇ ತತ್ತರಿಸಿರುವ ಸಂದಿಗ್ದ ಸಮಯದಲ್ಲಿ ವೆಬಿನಾರ್,ಸೆಮಿನಾರ್ ನಡೆಸುವ ಮೂಲಕ ಉದ್ಯೋಗಿಗಳಲ್ಲಿ ಹೊಸ ಸಂಚಲನ ಸೃಷ್ಠಿಸುವಲ್ಲಿ ಸಫಲರಾಗಿದ್ದರು. ಇವರ ಇಂತಹ ಜೀವಮಾನ ಸಾಧನೆಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ. ಸಾಹಿತ್ಯದ ಒಲವು, ಸಾಮಾಜಿಕತೆಯ ಗೆಲುವು ಗಳಿಸಿಕೊಂಡಿರುವ ಬಶೀರ್ ಅವರು ಇದೀಗ ದುಬೈಯಲ್ಲಿ ಪತ್ನಿ ಮಕ್ಕಳೊಂದಿಗೆ ಸಂತೃಪ್ತ ಸಂಸಾರ ಕಂಡುಕೊಂಡಿದ್ದಾರೆ.
ಸದಾ ಮತ್ತೊಬ್ಬರ ಬದುಕಿನಲ್ಲಿ ಸಂತಸದ ಸಹಾನುಭೂತಿ ವ್ಯಕ್ತಪಡಿಸುವ ಈ ಮಹಾನ್ ಸಾಧಕನ ಬದುಕು ಸದಾ ಹಸನಾಗಿರಲೆಂದು ವಿಶೇಷ ಚಾನೆಲ್ ಅಭಿನಂದಿಸುತ್ತದೆ.











0 Comments