ವ್ಯಕ್ತಿ _ವಿಶೇಷ
ನಿಡ್ಲೆ ಗ್ರಾಮದ ಪ್ರಥಮ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಧಕಿಯೋರ್ವರ ಬಗ್ಗೆ ವಿಶೇಷ ಚಾನೆಲ್ ಇಂದು ವ್ಯಕ್ತಿ ವಿಶೇಷದ ಮೂಲಕ ಬೆಳಕು ಚೆಲ್ಲುತ್ತಿದೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿ, ಪ್ರವೃತ್ತಿಯಲ್ಲಿ ಕವಯತ್ರಿ, ಲೇಖಕಿ, ಕಥೆಗಾರ್ತಿ, ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡ ವಸಂತಿ. ಟಿ. ನಿಡ್ಲೆ ಯವರು ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಕೈರೋಳಿ ಮನೆ ದಿ.ಮುದರ ಮತ್ತು ದಿ.ಕಾಳಿಯಮ್ಮ ಎಂ ದಂಪತಿಯ ಪುತ್ರಿ.
ಬಹುಮುಖ ಪ್ರತಿಭೆಯನ್ನು ಹೊಂದಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ,ಪ್ರೌಢಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿ ಪೂರೈಸಿದರು. ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿ ಪದವಿಪೂರ್ವ ಶಿಕ್ಷಣ ವನ್ನು, ವಿವೇಕಾನಂದ ಶಿಕ್ಷಕರ ತರಬೇತಿ ಸಂಸ್ಥೆ ಪುತ್ತೂರು ಇಲ್ಲಿ ಶಿಕ್ಷಕರ ತರಬೇತಿಯನ್ನು ಪೂರೈಸಿದರು. ಅಲ್ಲದೇ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ಪದವಿ ಮತ್ತು ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿರುವುದಲ್ಲದೆ, ಹಿಂದಿ ಪ್ರಸಾರ ಪರಿಷತ್ ಬೆಂಗಳೂರು ಇಲ್ಲಿ ಹಿಂದಿರತ್ನ ಪದವಿಯನ್ನು ಪೂರೈಸಿರುತ್ತಾರೆ.
ಹಲವು ಪ್ರಶಸ್ತಿಗಳ ಸರದಾರೆ:
ಆಡು ಮುಟ್ಟದ ಸೊಪ್ಪಿಲ್ಲವಂತೆ ಅಂತೆಯೇ, ವಸಂತಿ ಟಿ ನಿಡ್ಲೆಯವರು ಕೈಯಾಡಿಸದ ಕ್ಷೇತ್ರವಿಲ್ಲ. ಎಂಬಂತೆ ಸಂಗೀತ, ಸಾಹಿತ್ಯ,ಯಕ್ಷಗಾನ,ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿರುವ ಬಹುಮುಖ ಪ್ರತಿಭಾ ಸಂಪನ್ನೆ.
ಹಲವಾರು ತಾಲೂಕು, ಜಿಲ್ಲೆ, ರಾಜ್ಯಮಟ್ಟದ ತುಳು ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ ಮತ್ತು ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಇವರು ಇದುವರೆಗೆ 15 ಬಾರಿ ಇವರ ಕವನಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡು, ರಾಜ್ಯಮಟ್ಟದ ಕವನಸಂಕಲನಗಳಲ್ಲಿ ಮುದ್ರಣಗೊಂಡಿರುತ್ತದೆ.
ಹಲವು ಪತ್ರಿಕೆ ನಿಯತಕಾಲಿಕೆಗಳಲ್ಲಿ ಬರೆಯುವ ಇವರು ಸರಳ ಸಜ್ಜನಿಕೆಯ ನೇರ ನಡೆನುಡಿಯ ಜನಮಚ್ಚಿನ ಶಿಕ್ಷಕಿ ಎಂಬ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
ಇವರ ಪ್ರತಿಭೆಗೆ ತಕ್ಕಂತೆ ಇದುವರೆಗೆ 7 ರಾಜ್ಯ ಪ್ರಶಸ್ತಿ ಮತ್ತು 1 ತಾಲೂಕು ಮಟ್ಟದ ಪ್ರಶಸ್ತಿಯನ್ನು ಅತೀ ಕಿರಿಯ ವಯಸ್ಸಿನಲ್ಲಿ ಮುಡಿಗೇರಿಸಿಕೊಂಡ ಅಪ್ರತಿಮ ಸಾಧಕಿ.
ಕೃಷಿ ಪ್ರೀತಿಯ ಶಿಕ್ಷಕಿ:
ಅಳಿವಿನಂಚಿನಲ್ಲಿರುವ ಭತ್ತದ ಕೃಷಿಯನ್ನು ತನ್ನ ಶಾಲೆಯ ಅಂಗಳದಲ್ಲಿ ಮಾಡಿ ರಾಜ್ಯಮಟ್ಟದಲ್ಲಿ ಗುರುತಿಸಿ ಕೊಂಡಿರುವುದಲ್ಲದೆ, ಕ್ರೀಡೆ ಮತ್ತು ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ತಾಲೂಕು, ಜಿಲ್ಲಾಮಟ್ಟದ ಪಾರಿತೋಷಕ ಪಡೆಯುವಲ್ಲಿ ಶ್ರಮ ವಹಿಸಿರುತ್ತಾರೆ.
ಕ್ರೀಡಾಳು & ಯಕ್ಷಗಾನ ಕಲಾವಿದೆ :
ರಾಜ್ಯಮಟ್ಟದ ಖೋ ಖೋ ಆಟಗಾರ್ತಿಯಾಗಿರುವ ಇವರು ಯಕ್ಷಗಾನ ಕಲಾವಿದೆಯೂ ಕೂಡ ಹೌದು. ಯಕ್ಷಗಾನದಲ್ಲಿ
ಅತಿಥಿ ಕಲಾವಿದೆಯಾಗಿ ಭಾಗವಹಿಸುವ ಇವರು ತಾಳಮದ್ದಳೆಗಳಲ್ಲೂ ಭಾಗವಹಿಸುತ್ತಾರೆ. ಸಂಗೀತವನ್ನು ವಿದುಷಿ ಶ್ರೀಮತಿ ವಿಜಯಲಕ್ಷ್ಮಿ ಇವರಲ್ಲಿ ಅಭ್ಯಾಸ ಮಾಡಿ, ಯಕ್ಷಗಾನ ನಾಟ್ಯವನ್ನು ಯೋಗೀಶ್ ಶರ್ಮ ಅಳದಂಗಡಿ ಇವರಲ್ಲಿ ಅಭ್ಯಾಸ ಮಾಡಿರುತ್ತಾರೆ. ಪ್ರಸ್ತುತ ಮೋಹನ್ ಬೈಪಾಡಿತ್ತಾಯ ಇವರಿಂದ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದಾರೆ.
ಬಹುಮುಖ ಪ್ರತಿಭಾ ಸಂಪನ್ನೆಯಾಗಿರುವ ಇವರು ನೂರಾರು ವಿದ್ಯಾರ್ಥಿ ವೃಂದವನ್ನು ಹೊಂದಿದ್ದು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ.
ಸ್ವತಃ ಯಕ್ಷಗಾನ ಕಲಾವಿದೆಯಾದ ತನ್ನಂತೆ ವಿದ್ಯಾರ್ಥಿಗಳು ಕೂಡ ಯಕ್ಷಗಾನ ಕಲಿಯಬೇಕೆಂಬ ಉದ್ದೇಶದಿಂದ ಮಕ್ಕಳಿಗಾಗಿ ಪ್ರಸಿದ್ಧ ಯಕ್ಷಗಾನ ಕಲಾವಿದ ರನ್ನು ಕರೆಸಿ, ತರಬೇತುಗೊಳಿಸಿ, ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನವನ್ನು ನೀಡಿ,ಜನರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿರುವ ಇವರ ಸಹೋದರರು ಶ್ರೀ ಜಲದುರ್ಗಾ ಪರಮೇಶ್ವರಿ ಭಜನಾಮಂಡಳಿ ನಿಡ್ಲೆ ಇದರ ಅಧ್ಯಕ್ಷ ಕೃಷ್ಣಪ್ಪ, ಭರೂಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿಡ್ಲೆ ಇಲ್ಲಿಯ ಉದ್ಯೋಗಿ ನಾಟಿವೈದ್ಯ, ಸುಂದರ್.ಟಿ.ಬೆಸೆಂಟ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಗಿರಿಯಪ್ಪ ಮತ್ತು ಎಂ. ಆರ್. ಪಿ. ಎಲ್. ನಲ್ಲಿ ಕೆಮಿಕಲ್ ಇಂಜಿನಿಯರ್ ಆಗಿರುವ ವಿಶ್ವನಾಥ ಟಿ.ಸಹೋದರಿಯ ಈ ಸಾಧನೆಗೆ ಪ್ರೋತ್ಸಾಹದಾಯಕರಾಗಿದ್ದಾರೆ.
ಕೆಮ್ಮಟೆ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಕೈ ಜೋಡಿಸುವುದರೊಂದಿಗೆ ವಿದ್ಯಾರ್ಥಿಗಳ ಪ್ರಗತಿಗೆ ಕಾರಣೀಭೂತರಾದ,ಕರ್ತವ್ಯನಿಷ್ಠೆಯ ಬಹುಮುಖ ಪ್ರತಿಭಾ ಸಂಪನ್ನೆ ಶಿಕ್ಷಕಿಯ ಸಾಧನೆಗೆ ಇನ್ನಷ್ಟು ಗರಿಮೆಗಳು ಲಭಿಸಲೆಂದು ವಿಶೇಷ ಚಾನೆಲ್ ಹಾರೈಸುತ್ತದೆ.














0 Comments