ಪ್ರತಿಭಾ_ವಿಶೇಷ: ಕೆಲವರು ಪ್ರತಿಭೆಗಳಿಂದ ಗುರುತಿಸಿಕೊಳ್ಳುವವರಾದರೆ ಇನ್ನು ಹಲವರು ಪ್ರತಿಭೆಗಳನ್ನು ಗುರುತಿಸುವಲ್ಲಿ ಗಮನಾರ್ಹರು ಈ ಎರಡೂ ರಂಗದಲ್ಲೂ ತನ್ನನ್ನು ತೊಡಗಿಸಿಕೊಂಡವರೊಬ್ಬರನ್ನು ವಿಶೇಷ ಚಾನೆಲ್ ಈ ಬಾರಿ ಪ್ರತಿಭಾ_ವಿಶೇಷದ ಮೂಲಕ ಪರಿಚಯಿಸುತ್ತಿದೆ.
ತನ್ನ ವಿಭಿನ್ನ ಶೈಲಿಯ ಚಿಂತನೆ ಮತ್ತು ಬರಹಗಳ ಮೂಲಕ ಗುರುತಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಸರು ಮಾಡಿರುವ ಭರವಸೆಯ ಬರಹಗಾರ ಉದಯಭಾಸ್ಕರ್ ಸುಳ್ಯ.
ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂಬಳಚೇರಿ ಇವರ ಹುಟ್ಟೂರು. ಶ್ರೀಮತಿ ಸುಶೀಲಾ ಮತ್ತು ದಿವಂಗತ ನಾರಾಯಣ ಆಚಾರ್ಯ ವಿಟ್ಲ ಇವರ ಪುತ್ರರಾಗಿರುವ ಉದಯಭಾಸ್ಕರ್ ಸುಳ್ಯ ಇವರು ಪ್ರಸ್ತುತ ಸುಳ್ಯ ನಿವಾಸಿ.
ಇವರು ಕುಂಬಳಚೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಮತ್ತು ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ, ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಯನ್ನು ಪೂರೈಸಿ ಮುಂದೆ ಬಡತನದ ಕಾರಣದಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿದರು. ಪ್ರೌಢಶಾಲೆಯಲ್ಲಿದ್ದಾಗ ಇವರು ಬರೆಯುತ್ತಿದ್ದ ಪ್ರಬಂಧಗಳನ್ನು ಗಮನಿಸಿದ ಕನ್ನಡ ಅಧ್ಯಾಪಕರಾದ ವೇಣುಗೋಪಾಲ ಮಾಸ್ತರ್ ಇವರಿಗೆ ಸ್ಫೂರ್ತಿ ತುಂಬುತ್ತಿದ್ದರಂತೆ. 'ನನ್ನಲ್ಲಿನ ಬರಹದ ಸಾಮರ್ಥ್ಯವನ್ನು ಗುರುತಿಸಿ ಬೆನ್ನು ತಟ್ಟಿದ ಮೊತ್ತ ಮೊದಲ ಕೈಗಳು ನನ್ನ ಕನ್ನಡ ಅಧ್ಯಾಪಕರದ್ದು' ಅನ್ನುತ್ತಾರೆ ಉದಯಭಾಸ್ಕರ್.
ವೃತ್ತಿ ಜೀವನಕ್ಕೆ ಬಂದ ಮೇಲೆ ಮೂಲೆಗುಂಪಾಗಿದ್ದ ಬರಹದ ಹವ್ಯಾಸ ಆಮೇಲೆ ಚಿಗುರಿದ್ದು ಪ್ರೇಮವೈಫಲ್ಯದ ಬಳಿಕವಂತೆ! "ಆಗ ಬರೆದ ಎರಡು ವಿರಹ ಕವನಗಳು ನನ್ನ ಜೀವನದ ತಿರುವನ್ನೇ ಬದಲಾಯಿಸಿತು. ವಿರಹದಿಂದ ನನ್ನ ಬರಹದ ಆರಂಭ" ಅನ್ನುತ್ತಾ ನಗುತ್ತಾರೆ ಇವರು. ಅಲ್ಲಿಂದ ಕವನ ಬರೆಯಲು ಪ್ರಾರಂಭಿಸಿದ ಇವರು ಇದೀಗ ಜನಮನ್ನಣೆ ಗಳಿಸಿದ ಬರಹಗಾರ.
ಕನ್ನಡ, ಅರೆಭಾಷೆ, ತುಳು, ಮಲಯಾಳಂ ನಾಲ್ಕು ಭಾಷೆಗಳಲ್ಲಿ ಸಾಹಿತ್ಯ ಬರೆಯುವ ಇವರು ಚತುರ್ಭಾಷಾ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ನ್ಯಾನೋ ಕತೆಗಳು, ಹನಿಗವನ, ಪ್ರೇಮಕವನ, ದೇಶಭಕ್ತಿಗೀತೆ, ಗೇಯ ಸಾಹಿತ್ಯ, ಲೇಖನ, ಆಧ್ಯಾತ್ಮಿಕ ಕವನಗಳು ಇತ್ಯಾದಿ ಪ್ರಕಾರಗಳಲ್ಲಿ 600 ಕ್ಕಿಂತಲೂ ಹೆಚ್ಚು ಬರಹಗಳನ್ನು ಬರೆದಿರುವ ಓರ್ವ ಪ್ರತಿಭಾನ್ವಿತ ಕವಿ. ಪ್ರೇಮ ಕವನಗಳನ್ನು ಬಹಳಷ್ಟು ಶೃಂಗಾರ ಭಾವನೆಯಿಂದ ಬರೆಯುತ್ತಾ ಅದೇ ರೀತಿಯಲ್ಲಿ ಆಧ್ಯಾತ್ಮಿಕ ಕವನಗಳನ್ನು ಕೂಡ ಅಷ್ಟೇ ಆಳಕ್ಕಿಳಿದು ಬರೆಯುವ ವಿಭಿನ್ನ ಸಾಮರ್ಥ್ಯ ಇವರಲ್ಲಿದೆ. ದಿನಕ್ಕೆ ನಾಲ್ಕಾರು ಕವನಗಳನ್ನು ಗೀಚಿ ಬರಹಗಳ ಸಂಖ್ಯೆ ಹೆಚ್ಚಿಸುವುದರ ಬದಲು ಆ ಬರಹದಲ್ಲಿನ ಗುಣಮಟ್ಟದ ಕಡೆಗೆ ಗಮನ ಕೊಡಬೇಕು ಎಂದು ವಾದಿಸುವ ಇವರು, ಬಹಿರಂಗವಾಗಿಯೂ ವೈಯಕ್ತಿಕವಾಗಿಯೂ ಅದೆಷ್ಟೋ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಂಜಿ ಕಾವೇರಮ್ಮ ಅವರಂತಹ 82 ವರ್ಷದ ಹಿರಿಯ ಸಾಹಿತಿ ಇವರ ಬರಹಗಳನ್ನು ಓದಿ ಆಶ್ಚರ್ಯದಿಂದ ಆಶೀರ್ವಾದ ಮಾಡುತ್ತಾರೆ.
ಪ್ರಶಸ್ತಿ, ಸನ್ಮಾನಗಳ ಹಿಂದೆ ಹೋಗದೆ, ಸಾಹಿತ್ಯ ವಿಚಾರವಾಗಿ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸದ ಇವರು ಸಾಹಿತ್ಯ ಅಂದರೆ ಸರಸ್ವತಿ ಪೂಜೆ ಎಂದು ನಂಬಿದವರು. ಪ್ರಕಟನೆಗೆ ಯೋಗ್ಯವಾದ ಗುಣಮಟ್ಟದ ರಚನೆಗಳು ಇವರದ್ದಾಗಿದ್ದರೂ ಇಲ್ಲಿಯ ತನಕ ಅದನ್ನು ಕೃತಿರೂಪದಲ್ಲಿ ಹೊರತಂದಿಲ್ಲ. ಆಕಾಶವಾಣಿ ಮಂಗಳೂರು ಮತ್ತು ಪುತ್ತೂರಿನ ರೇಡಿಯೋ ಪಾಂಚಜನ್ಯದಲ್ಲಿ ಇವರ ಕವನವಾಚನ ಪ್ರಸಾರಗೊಂಡಿದೆ.
ಸಾಹಿತ್ಯ ಸಾಧಕನೊಳಗೆ ಸಮಾಜ ಸೇವಕ:-
ಇವರು ಸಾಹಿತ್ಯ ಬರೆದು ಬೋಧನೆ ಮಾಡಿ ಸುಮ್ಮನಾಗುವುದಿಲ್ಲ ಬರೆದದ್ದನ್ನು ಸ್ವತಃ ಅಳವಡಿಸಿ ಬರಹ ಮತ್ತು ಬದುಕನ್ನು ಒಂದಾಗಿಸುವುದಕ್ಕೆ ಪ್ರಯತ್ನಿಸುತ್ತಿರುವ ಅಪರೂಪದ ಸಾಹಿತಿ ಅಂದರೆ ತಪ್ಪಾಗಲಾರದು. ಯಾಕೆಂದರೆ "ಅಮೃತಗಂಗಾ ರಕ್ತನಿಧಿ ಸುಳ್ಯ" ಎಂಬ ಸಂಸ್ಥೆಯನ್ನು ಹುಟ್ಟು ಹಾಕಿರುವ ಉದಯಭಾಸ್ಕರ್ ಅದೆಷ್ಟೋ ರೋಗಿಗಳಿಗೆ ಜೀವದಾನರ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ದ ಕ ಉಡುಪಿ ಜಿಲ್ಲೆಯ ರೋಗಿಗಳಿಗೆ ರಕ್ತ ಪೂರೈಕೆ ಮಾಡುತ್ತಾ ಯಾರಿಂದಲೂ ಪ್ರತಿಫಲ ಅಪೇಕ್ಷೆ ಮಾಡದೆ ಸೇವೆ ಮಾಡುವ ಇವರೋರ್ವ ನಿಷ್ಠಾವಂತ ಸಮಾಜಸೇವಕ ಎಂದರೆ ತಪ್ಪಾಗಲಾರದು.
ಇವರ ಈ ಸೇವೆಯಲ್ಲಿನ ನಿಷ್ಠೆ ಹೇಗಿದೆಯೆಂದರೆ ಮಧ್ಯರಾತ್ರಿ ಕರೆ ಮಾಡಿದರೂ ರಕ್ತ ಪೂರೈಸಲು ಶ್ರಮಿಸುತ್ತಾರೆ. ತಡರಾತ್ರಿ 12, 2, 3 ಗಂಟೆಯ ಸಮಯದಲ್ಲೂ ರಕ್ತದಾನಿಗಳನ್ನು ವ್ಯವಸ್ಥೆ ಮಾಡಿ ರಕ್ತನಿಧಿಗೆ ಕರೆದೊಯ್ದು ರೋಗಿಗಳಿಗೆ ನೆರವಾಗಿರುವುದನ್ನು ಅಮೃತಗಂಗಾ ರಕ್ತನಿಧಿ ಫೇಸ್‌ಬುಕ್ ಪೇಜ್ ನಲ್ಲಿ ಕಾಣಬಹುದು. ಈ ಸೇವೆಯಲ್ಲಿ ಸಂತೃಪ್ತಿ ಇದೆಯಾ ಕೇಳಿದರೆ, "ನನಗೆ ಯಾವ ರೋಗಿಗಳ ಮುಖ ಪರಿಚಯವೇ ಇರುವುದಿಲ್ಲ, ಅವರಿಗೂ ನನ್ನ ಪರಿಚಯ ಇರುವುದಿಲ್ಲ. ಯಾರಿಂದಲೋ ನಂಬರ್ ಪಡೆದು ಕರೆ ಮಾಡುತ್ತಾರೆ, ನಾನು ನಮ್ಮ ತಂಡದ ಸದಸ್ಯರ ರಕ್ತದ ಗುಂಪು, ಈ ಹಿಂದೆ ರಕ್ತದಾನ ಮಾಡಿದ ದಿನಾಂಕ ಇವೆಲ್ಲವನ್ನೂ ಪರಿಶೀಲಿಸಿ ರಕ್ತದ ವ್ಯವಸ್ಥೆ ಮಾಡುತ್ತೇನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಂತಹ ರೋಗಿ ಮರುದಿನ ನನ್ನ ಎದುರೇ ಬಂದರೂ ನಾನೇ ಅವರಿಗೆ ರಕ್ತ ಪೂರೈಕೆ ಮಾಡಿದ್ದೆಂದು ಅವರಿಗೂ ಗೊತ್ತಿರುವುದಿಲ್ಲ, ನಾನೇ ಇವರಿಗೆ ರಕ್ತದ ವ್ಯವಸ್ಥೆ ಮಾಡಿದ್ದೆಂದು ನನಗೂ ಗೊತ್ತಿರುವುದಿಲ್ಲ. ಹೀಗೆ ಪರಸ್ಪರ ಪರಿಚಯವೇ ಇಲ್ಲದೆ ಸೇವೆ ಮಾಡುತ್ತಾ ಗೌಪ್ಯವಾಗಿ ಉಳಿಯುವುದರಲ್ಲೂ ಒಂದು ಆತ್ಮತೃಪ್ತಿ ಇದೆ" ಎಂದು ನಗುತ್ತಾ ಉತ್ತರಿಸುತ್ತಾರೆ ಉದಯಭಾಸ್ಕರ್. ಸೇವೆಯ ಮೂಲಕ ಬಹಳಷ್ಟು ಜನಮನ್ನಣೆಗೆ ಪಾತ್ರರಾಗಿರುವ ಇವರು ನೊಂದವರಿಗೆ ಮಾನಸಿಕ ಸಾಂತ್ವನ ನೀಡುವ ಸಹೃದಯಿ ಕೂಡ ಹೌದು.
ಎಳೆಯ ಮಕ್ಕಳ ಜೊತೆ ಅವರದ್ದೇ ಮಟ್ಟಕ್ಕೆ ಇಳಿದು, ಅದೇ ರೀತಿ ಹಿರಿಯರ ಜೊತೆ ಪ್ರಬುದ್ಧರ ಜೊತೆ ಪ್ರಬುದ್ಧ ಮಟ್ಟದಲ್ಲೇ ಗೌರವದಿಂದ ಬೆರೆಯುವ ಇವರು ತಮಾಷೆ ಹಾಸ್ಯ ಪ್ರವೃತ್ತಿಯ ಸ್ನೇಹಿತರೊಂದಿಗೂ ಅವರ ರೀತಿಯಲ್ಲೇ ಬೆರೆಯುವ ವಿಭಿನ್ನ ವ್ಯಕ್ತಿತ್ವದ ಅಪರೂಪದ ವ್ಯಕ್ತಿ. ಹಾಗಾಗಿ ಇವರ ಫೇಸ್‌ಬುಕ್ ಖಾತೆಯಲ್ಲಿ ಇಣುಕಿದರೆ ಎಲ್ಲಾ ವರ್ಗದ ಸ್ನೇಹಿತರು ಸಿಗುತ್ತಾರೆ ಮತ್ತು ಪ್ರೇಮ, ಆಧ್ಯಾತ್ಮ, ಚಿಂತನೆ, ತುಂಟತನ, ಹಾಸ್ಯ ಎಲ್ಲವನ್ನೂ ಸಮಪ್ರಮಾಣದಲ್ಲಿ ಕಾಣಬಹುದು ಮತ್ತು ಒಳಗೆ ಎಷ್ಟೇ ನೋವಿದ್ದರೂ ತೋರಿಸಿಕೊಳ್ಳದೆ ಸದಾ ಹಸನ್ಮುಖಿ ವ್ಯಕ್ತಿತ್ವವನ್ನೂ ಕಾಣಬಹುದು.
ಇವರ ಭಾಷಾ ಪ್ರಬುದ್ದತೆಗೆ ಎಷ್ಟೋ ಜನ, "ನೀವು ಕನ್ನಡ ಎಂಎ ಮಾಡಿದ್ದೀರಾ? ನೀವು ಟೀಚರಾ?" ಅಂತ ಪ್ರಶ್ನೆಗಳನ್ನು ಕೇಳಿದರೆ, "ನಾನು ಓದಿದ್ದು ಕೇವಲ ಪಿಯುಸಿ" ಅಂತ ಉತ್ತರಿಸುವ ಉದಯಭಾಸ್ಕರ್, ಎಷ್ಟೋ ಜನ ನನ್ನನ್ನು ಶಿಕ್ಷಕ ವೃತ್ತಿಯವನು ಅಂತಲೇ ತಿಳಿದುಕೊಂಡು ಮಾತನಾಡಿಸುತ್ತಾರೆ ಅಂತ ನಗುತ್ತಾರೆ.
ಚಿಂತನಾಶೀಲ ಬರಹಗಾರನ ಬಹುಮುಖ ಪ್ರತಿಭೆ:
ಸಾಹಿತ್ಯ ಕ್ಷೇತ್ರ ಮಾತ್ರವಲ್ಲದೆ, ಕಾರ್ಯಕ್ರಮ ನಿರೂಪಣೆಯಲ್ಲಿ ತೊಡಗಿಸಿಕೊಂಡು, ಕವನಗಳಿಗೆ ಹಿನ್ನೆಲೆ ಧ್ವನಿ ಕೊಡುವುದು , ಧಾರ್ಮಿಕ ಭಾಷಣ, ಸಮಾಜಸೇವೆ ಮುಂತಾದ ಅಭಿರುಚಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಓರ್ವ ಉತ್ತಮ ಕಾರ್ಯಕ್ರಮ ಸಂಘಟಕನೂ ಹೌದು. ತನ್ನ ಕವನ ವಾಚನದ ಶೈಲಿಯಿಂದಲೂ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಳವಾದ ಚಿಂತನೆಗಳನ್ನು ಒಳಗೊಂಡ ಬರಹಗಳನ್ನು ಬರೆಯುವ ಇವರು, ಸೋಲು ವಾಸ್ತವದ ಪರದೆ ಸರಿಸುವ ಗುರು, ಸರಕಾರಿ ಶಾಲೆಗಳೆಂದರೆ ತಾತ್ಸಾರವೇಕೆ?, ಪ್ರಶಸ್ತಿ ಪುರಸ್ಕಾರಗಳ ಸುತ್ತಮುತ್ತ, ಲೈಕು ಕಮೆಂಟ್ ಗಳ ಮೂಲಕ ಮೌಲ್ಯಮಾಪನ ಮಾಡುವ ಅಪ್ರಬುದ್ಧ ಮಾನದಂಡ, ವೈರಲ್ ಗಾಗಿ ಕಸರತ್ತು - ಸಂಗೀತ ಮಾತೆಯ ಘನತೆಗೂ ಆಪತ್ತು, ಆ ಪ್ರಶಸ್ತಿಗಳನ್ನೆಲ್ಲಾ ಅವಮಾನಿಸುತ್ತಿರುವ ಇ - ಪ್ರಶಸ್ತಿಗಳು., ಹಳ್ಳಿಯೆಂದರೆ ಪಟ್ಟಣಿಗರ ಅನ್ನದ ಬಟ್ಟಲು, ಭಾಷಾ ತಾರತಮ್ಯದ ಕುರಿತಾಗಿ ಲೇಖನ, ಇವೆಲ್ಲಾ ಜನ ಮೆಚ್ಚುಗೆಗೆ ಪಾತ್ರವಾದ ಪ್ರಮುಖ ಚಿಂತನಶೀಲ ಬರಹಗಳು.
ಮೋದಿಜಿಯವರ ಕುರಿತಾಗಿ ಬರೆದ ಹಾಡು, ನವರಾಗ ಭಾವಾಭಿಷೇಕ, ಅಜ್ಜನ ಸುಗಿಪು,ಮತ್ತು ಇತ್ತೀಚೆಗೆ ರಾಮ್ ಸಾಲ್ಯಾನ್ ಅವರ ಮೂಲಕ ಹಾಡಿಸಿದ 'ಕಟೀಲ್ದಪ್ಪೆನ ಭಕ್ತಿ ಸುಗಿಪು' ಹೆಚ್ಚು ವೈರಲ್ ಆದಂತಹ ಗೀತೆಗಳು. ಇವರು ರಚಿಸಿದ ಹಲವಾರು ಗೀತೆಗಳು ಆಲ್ಬಂ ಹಾಡುಗಳಾಗಿದ್ದು ಇವರ ಸೂರ್ಯರಶ್ಮಿ ಕ್ರಿಯೇಶನ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ. 'ಏನ ಬೇಡಲಿ ಕಾಳಿಕಾಂಬೆ, ಗಾನಪ್ರಿಯೆ ಮೂಕಾಂಬಿಕಾ, ನಮೋ ಶಂಕರಾ, ಶ್ರೀ ಜಲದುರ್ಗೆಗ್ ಶರಣು' ಭಕ್ತಿಗೀತೆಗಳು ಬಿಡುಗಡೆಯ ಹಂತದಲ್ಲಿವೆ. ಮತ್ತು ಇನ್ನೂ ಕೆಲವು ಗೀತೆಗಳಿಗಾಗಿ ತುಳುನಾಡಿನ ಭಕ್ತರಿಂದ ಬೇಡಿಕೆ ಬಂದಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ..
ತಮ್ಮ ಬರಹಗಳಲ್ಲಿ ಸಮಾಜಕ್ಕೆ ನೇರವಾಗಿ ಸಂದೇಶ ಕೊಡುವ ಬದಲು ತನ್ನ ದೋಷಗಳನ್ನು ತಾನೇ ಎತ್ತಿ ತೋರಿಸಿಕೊಂಡು ಆ ಮೂಲಕ ಸಮಾಜಕ್ಕೆ ಸಂದೇಶ ಕೊಡುವ ವಿಶಿಷ್ಟ ಶೈಲಿ ಇವರದ್ದು. ತನ್ನೊಳಗಿನ ದೋಷಗಳನ್ನೇ ಅವಲೋಕನ ಮಾಡುವ ಕವನಗಳಾದ. ಅಂತರ್ಮುಖಿಯ ಕನವರಿಕೆಗಳು, ಸಾವಿಗೊಂದು ಪೂರ್ವತಯಾರಿ, ಆತ್ಮಾವಲೋಕನದ ಹಾದಿಯಲ್ಲಿ, ವಾಸ್ತವ - ಒಂದಿಷ್ಟು ಪ್ರಶ್ನೆಗಳು , ದೇವರಿಗೆ ಧಿಕ್ಕಾರ ಇವೆಲ್ಲ ಜನಮನ್ನಣೆ ಗಳಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಓದುಗರಿಂದ ಇವರ ಬರಹಗಳು ಮೆಚ್ಚುಗೆ ಪಡೆದಿವೆ. ನಿರೂಪಕ, ಭಾಷಣಗಾರ, ತೀರ್ಪುಗಾರರಾಗಿ ಹಲವಾರು ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಇವರು, ಇತ್ತೀಚೆಗೆ ರಾಮ್ ಸಾಲ್ಯಾನ್ ಅವರ ಘಟನೆಯ ನಂತರ ನ್ಯೂಸ್ ಚಾನೆಲ್ ಒಂದರಲ್ಲಿ ಮಾಡಿದ ಸಂದರ್ಶನದಲ್ಲಿ ತನ್ನ ಬರಹದ ಸಾಮರ್ಥ್ಯವನ್ನು
ಮೊತ್ತ ಮೊದಲು ಗುರುತಿಸಿದ ಕನ್ನಡ ಅಧ್ಯಾಪಕರ ಬಗ್ಗೆ ಹೇಳಿಕೊಂಡಿದ್ದರು. ಇದನ್ನು ಗಮನಿಸಿದ ಅವರ ಶಿಕ್ಷಕರು ಕಾಲ್ ಮಾಡಿ ಬಹಳಷ್ಟು ಪ್ರೋತ್ಸಾಹಿಸಿದ್ದರಂತೆ. ಅದೇ ರೀತಿಯಲ್ಲಿ ಅವರಿಗೆ ಪಾಠ ಕಲಿಸಿದ ಇನ್ನಿತರ ಶಿಕ್ಷಕರು ಉಪನ್ಯಾಸಕರು ಇತ್ತೀಚೆಗೆ ಇವರ ಬರಹಗಳನ್ನು ಮೆಚ್ಚುತ್ತಿದ್ದಾರಂತೆ. ಗುರುಗಳಿಂದ ಸಿಕ್ಕ ಮೆಚ್ಚುಗೆ ನನ್ನ ಜೀವನದಲ್ಲಿ ಅತ್ಯಂತ ಮರೆಯಲಾಗದ ಭಾವುಕ ಕ್ಷಣ ಎಂದು ಸ್ಮರಿಸಿಕೊಳ್ಳುತ್ತಾರೆ ಉದಯಭಾಸ್ಕರ್.
ಎಷ್ಟೋ ಜನ ಇತರರು ಬೆಳೆಯುವಾಗ ಕಾಲು ಎಳೆಯುವವರಿದ್ದಾರೆ. ಆದರೆ ತಾನು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸುವ ಸದ್ಗುಣ ಇವರದು. ಹಲವಾರು ಎಲೆಮರೆಯ ಪ್ರತಿಭೆಗಳಿಗೆ ಅವಕಾಶ ನೀಡಿರುವ ಇವರು ಇತ್ತೀಚೆಗೆ ಟೀಕೆಗೆ ಗುರಿಯಾಗಿದ್ದ ರಾಮ್ ಸಾಲ್ಯಾನ್ ಅವರಿಗೂ ಅವಕಾಶ ಕಲ್ಪಿಸಿಕೊಟ್ಟು ಟೀಕಿಸಿದವರ ನಾಲಿಗೆಯಲ್ಲೇ ಕೊಂಡಾಡುವಂತೆ ಮಾಡಿದ್ದು ಇವರ ಮಹತ್ಕಾರ್ಯ.
ಅವಕಾಶಕ್ಕಾಗಿ ಯಾರ ಮುಂದೆಯೂ ಅಂಗಲಾಚದ ಇವರು 'ನನ್ನೊಳಗೆ ನಿಜವಾದ ಸರಸ್ವತಿ ಇರುವುದೇ ಹೌದಾದಲ್ಲಿ ಯೋಗ್ಯ ಕಾಲದಲ್ಲಿ ಆಕೆಗೆ ಸರಿಯಾದ ವೇದಿಕೆ ಸಿಗುತ್ತದೆ. ಆದರೆ ಅವಕಾಶಕ್ಕಾಗಿ ಆ ಸರಸ್ವತಿಯನ್ನು ಇತರರ ಕಾಲಿಗೆ ಬೀಳಿಸಿ ಅವಮಾನಿಸಲಾರೆ. ಇದುವರೆಗೆ ನನಗೆ ಸಿಕ್ಕಿದ ಅವಕಾಶಗಳೆಲ್ಲವೂ ಅದಾಗಿಯೇ ಅರಸಿ ಬಂದದ್ದಾಗಿದೆ' ಅನ್ನುವ ಭರವಸೆಯ ಮಾತುಗಳನ್ನು ಹೇಳುತ್ತಾರೆ.
ಇಂತಹ ಓರ್ವ ಉತ್ತಮ ಚಿಂತನಶೀಲ ಬರಹಗಾರ, ಲೇಖಕ, ಕಥೆಗಾರ ಕವಿಯಾಗಿ ಗುರುತಿಸಿಕೊಂಡಿರುವ ಉದಯಭಾಸ್ಕರ್ ಹಲವಾರು ಪ್ರತಿಭೆಗಳನ್ನು, ವ್ಯಕ್ತಿಗಳನ್ನು ತನ್ನ ಬರಹದ ಮೂಲಕ ಪರಿಚಯಿಸಿದ್ದಾರೆ. ಆದರೆ ಇಂದು ಅವರ ವ್ಯಕ್ತಿ ಪರಿಚಯವನ್ನು ನಾವು ಮಾಡುತ್ತಿದ್ದೇವೆ. ಸಮಸ್ತ ಅಭಿಮಾನಿಗಳಿಗೆ ಇದು ಹೆಮ್ಮೆಯ ವಿಚಾರ. ಇಂತಹ ಓರ್ವ ಎಲೆಮರೆಯ ಪ್ರತಿಭೆಗೆ ಕಲಾಮಾತೆ ಸರಸ್ವತಿಯ ಆಶೀರ್ವಾದ, ಅನುಗ್ರಹ ಸದಾ ಇರಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

0 Comments