ವಿದೇಶದಲ್ಲಿ ದುಡಿಮೆ ಸ್ವದೇಶದಲ್ಲಿ ಸಮಾಜ ಸೇವಾ ನಿರತ ಯಜ್ಞೇಶ್ ಶಿವತೀರ್ಥಪದವು


            ವಿದೇಶ_ವಿಶೇಷ ಅಂಕಣ -36

ಕತಾರ್: ಕೊಲ್ಲಿ ರಾಷ್ಟ್ರದಲ್ಲಿ ದುಡಿಯುವ ಮೂಲಕ ಸುಂದರವಾದ ಮನೆ, ಮಡದಿ,ಮಕ್ಕಳ ಹಿತ ಸಂರಕ್ಷಣೆಯ ಕನಸು ಕಾಣುವವರು ಹಲವಾರು ಇರುತ್ತಾರೆ ಆದರೆ ತಾನು ದುಡಿದುದರ ಮುಕ್ಕಾಲು ಪಾಲು ಸಮಾಜಕ್ಕೆ ಸಮರ್ಪಿಸಿ ಕಾಲು ಅಂಶ ಮಾತ್ರ ತನ್ನ ಕುಟುಂಬಕ್ಕೆ ಬಳಸಿಕೊಳ್ಳುವವರು ವಿರಳ. ಅದರಲ್ಲೂ ವಿದೇಶದಲ್ಲಿ ನಾಲ್ಕಾರು ಜನಗಳನ್ನು ಕೆಲಸಕ್ಕಿಟ್ಟೊ, ಬಿಸಿನೆಸ್ ಕಂಪೆನಿ ಮಾಡಿದವರೋ ಊರಲ್ಲಿ ಸಾಮಾಜಿಕ- ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡವರು ಧಾರಳ ಇರುತ್ತಾರೆ. ಆದರೆ ಇಲ್ಲೊಬ್ಬರು ಸಾಮಾನ್ಯ ಡ್ರೈವರ್ ಉದ್ಯೋಗ ನಿರ್ವಹಿಸುವ ಮೂಲಕ ತನ್ನ ತಾಯ್ನಾಡಿನಲ್ಲಿ ಹಲವಾರು ಸಾಮಾಜಿಕ - ಧಾರ್ಮಿಕ - ಸಾಂಸ್ಕೃತಿಕ ಸೇವೆಗಳಿಗೆ ತೊಡಗಿಸಿಕೊಂಡಿದ್ದಾರೆ ಎಂದರೆ ಒಂದರ್ಥದಲ್ಲಿ ಇದುವೇ ಅಲ್ಲವೇ " ಸೇವಾಹೀ ಪರಮೋ ಧರ್ಮ" ಎಂಬ ಸೂಕ್ತಿಯ ಸಾರ್ಥಕತೆ. ಅಂತಹ ಅಪರೂಪದ ವ್ಯಕ್ತಿಯೊಬ್ಬರ ಪರಿಚಯವನ್ನು  ಇಂದು ವಿಶೇಷ ಚಾನೆಲ್ "ವಿದೇಶ_ವಿಶೇಷ" ಅಂಕಣ ಮೂಲಕ ಅನಾವರಣಗೊಳಿಸುತ್ತಿದೆ.

ಔದ್ಯೋಗಿಕವಾಗಿ ಕೊಲ್ಲಿ ರಾಷ್ಟ್ರದ ಕತಾರ್ ಎಂಬಲ್ಲಿ ಕಾಲೂರಿ ಸ್ವದೇಶದ ಸಮಾಜಸೇವೆಗೆ ತನ್ನ ಕೈ ಕೊಡುಗೆ ನೀಡುತ್ತಿರುವಂತಹ ಇಂತಹ ಅಪರೂಪದ ವ್ಯಕ್ತಿತ್ವವೇ ಯಜ್ಞೇಶ್ ಶಿವತೀರ್ಥಪದವು.


ಬದುಕು ಬಾಲ್ಯ:  
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸಮೀಪದ ಮುಳಿಂಜ ಶಿವ ತೀರ್ಥ ಪದವಿನ ಪರಂಪರಾಗತ ಕೃಷಿಕರಾದ ಕೃಷ್ಣಪ್ಪ- ಸದ್ಗೃಹಿಣಿ ಇಂದಿರಾ ದಂಪತಿಗಳ ಪುತ್ರ.ಎಲ್.ಪಿ.ಹಾಗೂ ಯು.ಪಿ.ಶಿಕ್ಷಣವನ್ನು ಉಪ್ಪಳ ಸರಕಾರಿ ಶಾಲೆಯಲ್ಲಿ ಗಳಿಸಿಕೊಂಡ ಇವರು ಹೈಸ್ಕೂಲ್ ಶಿಕ್ಷಣವನ್ನು ಪೈವಳಿಕೆಯ ಕಾಯರ್ ಕಟ್ಟೆ ಸರಕಾರಿ  ಶಾಲೆಯಲ್ಲೂ, ಉಳ್ಳಾಲದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಐಟಿಐ ಪದವಿಯನ್ನು ಗಳಿಸಿಕೊಂಡರು. 

ಬಳಿಕ ಮನೆಗೆ ಆಸರೆಯಾಗಲು ವಿದೇಶ ಉದ್ಯೋಗಕ್ಕಾಗಿ ಕತಾರ್ ಗೆ ಕಾಲಿರಿಸಿದ ಇವರು ಡ್ರೈವರ್ ಕೆಲಸ ನಿರ್ವಹಿಸ ತೊಡಗಿದರು.ದೂರದ ಕತಾರ್ ನಲ್ಲಿದ್ದರೂ ತನ್ನ ತಾಯ್ನಾಡಿನ  ಕುಟುಂಬ,ಬಂಧು ಮಿತ್ರರು, ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ  ಯಜ್ಞೇಶ್ ಅವರಿಗೆ ಇತರರ ಜತೆಗಿನ ಗೌರವ, ಪ್ರೀತಿ, ಅನುಕಂಪ, ಕರುಣೆ ಮೊದಲಾದವುಗಳೇ ಇವರ ಆದರ್ಶ ವ್ಯಕ್ತಿತ್ವಕ್ಕೆ ಹಾಗೂ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

           ತಾಯ್ನಾಡಿನ ಸಮಾಜ ಸೇವಕ: 


ಮರಳುಗಾಡಿನ ಉಷ್ಣಾಂಶದ ಬಿಸಿಯನ್ನು ಲೆಕ್ಕಿಸದೆ ಪರಿಶ್ರಮಪಟ್ಟು ದುಡಿಯುವ ಇವರು ಅಲ್ಲಿ ದೊರಕಿದ ಹಣದ ಬಹುಪಾಲು ತನ್ನ ಊರಿನ ಸಮಾಜ ಸೇವೆಗಾಗಿ ವಿನಿಯೋಗಿಸುವುದಲ್ಲದೆ ಹಲವಾರು ಸಾಮಾಜಿಕ,ಧಾರ್ಮಿಕ,ಸಾಂಸ್ಕೃತಿಕ,ಶೈಕ್ಷಣಿಕ ರಂಗದ ಪ್ರಮುಖರ ಸಂಪರ್ಕ ಸಾಧಿಸಿಕೊಂಡು ಬಡವರ ಸೇವೆಯಲ್ಲಿ ಅವಿರತ ತೊಡಗಿಸಿಕೊಂಡಿರುವುದು ಅನನ್ಯ ಸೇವೆಯೇ ಸರಿ
.

ಪ್ರಚಾರಕ್ಕೋ,ಪ್ರಶಂಸನೆಗೋ ಒಳಗಾಗದ ಯಜ್ಞೇಶ್ ಅವರು ತನಗೆ ವಿದೇಶದಲ್ಲಿ ಉದ್ಯೋಗ ಲಭಿಸಿದ ಅಂದಿನಿಂದ ನಿತ್ಯ ನಿರಂತರವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆಂದರೆ ನಿಜ ಅರ್ಥದಲ್ಲಿ ಇದೊಂದು ವ್ರತ.ಇಷ್ಟರ ವರೆಗೆ ಅದೇಷ್ಟೋ ಅನಾರೋಗ್ಯ ಪೀಡಿತರಿಗೆ, ಶಿಕ್ಷಣಾಭಿಲಾಷಿಗಳಿಗೆ, ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ, ಬಡ ಜನತೆಯ ಮನೆ ನಿರ್ಮಾಣವನ್ನು ನಡೆಸಿಕೊಟ್ಟ ಕೀರ್ತಿ ಇವರದ್ದಾಗಿದೆ. ಒಂದು ಕೈಯಲ್ಲಿ ಕೊಟ್ಟದ್ದು ಇನ್ನೊಂದು ಕೈಗೆ ತಿಳಿಯಬಾರದೆಂಬ ರಹಸ್ಯತೆಯನ್ನು ತನ್ನ ಜೀವಮಾನದಲ್ಲಿ ಕಾಯ್ದುಕೊಂಡು ಬಂದಿರುವ ಯಜ್ಞೇಶರ ಬಗ್ಗೆ ನಾವು ತಿಳಿದು ಕೊಂಡು ಪಟ್ಟಿ ಮಾಡಿದ ಸೇವಾ ಕೈಂಕರ್ಯಗಳೇ ಅಗಣಿತ. 

ಇವರ ಇನ್ನೊಂದು ವಿಶೇಷವೆಂದರೆ ಅದೆಷ್ಟೋ ಜನ ಸಮಾಜಕ್ಕೆ ತನ್ನ ಕೈಯಿಂದ ಕನಿಷ್ಠ ಕೊಡುಗೆ ನೀಡಿ ಗರಿಷ್ಠ ಪ್ರಚಾರ ಪಡೆದುಕೊಳ್ಳುವವರೆಡೆಯಲ್ಲಿ  ತಾನು  ನೀಡುವ ಕೊಡುಗೆಯನ್ನು ತನ್ನ ಕೈಯಿಂದ ನೀಡಿ ಪ್ರಚಾರ ಗಳಿಸಿಕೊಳ್ಳದೆ ತಾನು ಸ್ಚತಃ ಸ್ಥಾಪಿಸಿದ ಹಾಗೂ ಪದಾಧಿಕಾರಿಯಾಗಿರುವ ಸಂಘಟನೆಯ ಮೂಲಕ ಮಾತ್ರ ನೀಡುತ್ತಿರುವುದೇ ಇವರ ಇನ್ನೊಂದು ವೈಶಿಷ್ಠತೆಯಾಗಿದೆ.

ಸೇವಾ ನಿರತ ಸಂಘಟನೆಗಳು: ತಿಂಗಳು ಪೂರ್ತಿ ದುಡಿದ ಹಣದ ಮುಕ್ಕಾಲು ಅಂಶವನ್ನು ತಾನು ಸೇರಿರುವ ಸಂಘಟನೆಗೆ ನೀಡುವ ಜಾಯಮಾನ ಬೆಳೆಸಿಕೊಂಡಿರುವ ಯಜ್ಞೇಶ್ ಅವರು ಹಲವು ಸಂಘಟನೆಗಳ ಸ್ಥಾಪಕರಾಗಿಯೂ, ಮಾರ್ಗದರ್ಶಕರಾಗಿಯೂ,ಪದಾಧಿಕಾರಿಯಾಗಿಯೂ ನೇತೃತ್ವ ನೀಡುತ್ತಿದ್ದಾರೆ. ಈ ಬಗ್ಗೆ ನಮಿಗೆ ಲಭಿಸಿದ ಸಂಘಟನೆಗಳ ವಿವರ ಇಲ್ಲಿದೆ. 

1.ಯುವ ಕೇಸರಿ ಶಿವತೀರ್ಥಪದವು,ಮುಳಿಂಜ (ಸ್ಥಾಪಕರು)

2.ಯುವ ಭಾರತಿ ಸಮಾಜ ಸೇವಾ ಸಂಸ್ಥೆ ಉಪ್ಪಳ 

3.ಸ್ಪಂದನ (ರಿ.) ಉಪ್ಪಳ 

4.ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ 

5.ಶ್ರೀ ರಾಜ ಬೆಳ್ಚ ಪ್ಪಾಡ ಬಳಗ ಮಂಜೇಶ್ವರ (ಸ್ಥಾಪಕರು)

6.ಸ್ಪಂದನ ಟ್ರಸ್ಟ್ ಕೋಳ್ಯೂರು 

7.ಭಗತ್ ಫ್ರೆಂಡ್ಸ್ ಮುನ್ನಿಪಾಡಿ 

8.ಶ್ರೀ ದುರ್ಗಾ ಪರಮೇಶ್ವರಿ ಯುವ ಸಂಘ ಪೆರಿಯ (ಸ್ಥಾಪಕರು)

9.ಗೌರಿಶಂಕರ ಯುವಜನ ಸಮಿತಿ. (ಸ್ಥಾಪಕರು)

10.ಶ್ರೀ ಪುಲಿಭೂತ ಖಲಾಗ ಯುವಜನ ಸಂಘ (ಸ್ಥಾಪಕರು)

11.ಶ್ರೀ ಅಯ್ಯಪ್ಪ ಯುವ ಸಮಿತಿ ಕಾಣಿಗುಂಡು (ಸ್ಥಾಪಕರು)

12.ಸೌಪರ್ಣಿಕ ಪೆರಿಯ 

13.ಶ್ರೀ ಕೃಷ್ಣ ಸಂಘ ಕುಡಾನಮ್ ಪೆರಿಯ 

14.ಪೆರಿಯಸ್ ಪೆರಿಯ 

15.ರಾಜೀವಿ ಆರ್ಟ್ಸ್ &ಸ್ಪೋರ್ಟ್ಸ್ ಕ್ಲಬ್ ಪೆರಿಯ 

16.ಸೂರಿಯ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನೀಲೇಶ್ವರ

17.ಯುವ ಸಂಘ ಪಾಲಟ್ ಪೆರಿಯ

18.ಶ್ರೀ ಅಯ್ಯಪ್ಪ ಭಜನ ಮಂದಿರ ಪೆರಿಯ 

19.ಶ್ರೀ ಅಯ್ಯಪ್ಪ ಭಜನ ಮಂದಿರ ನೆಡೋಟುಪಾರ 

20.ರಚನಾ (ರಿ.) ಉಪ್ಪಳ

21.ಪರ್ಮಾತ್ಮ ಸೇವಾ ಸಂಸ್ಥೆ ಮಂಜೇಶ್ವರ ಮೊದಲಾದವುಗಳಾಗಿದೆ. 

ಇಂತಹ ಸಂಘಟನೆಗಳು ಹೆಸರಿಗೆ ಇರುವುದಲ್ಲ ಬದಲಿಗೆ ಸಕ್ರಿಯವಾಗಿ ತಿಂಗಳವರ್ತನ ಲೆಕ್ಕದಲ್ಲಿ ವಿವಿಧ ರೀತಿಯ ಬಡವರ ಸೇವೆ ನಿರ್ವಹಿಸಿಕೊಂಡು ಬರುವಲ್ಲಿ ಯಜ್ಞೇಶ್ ಅವರ ಕ್ರಿಯಾಶೀಲತೆ ಗಮನಾರ್ಹವಾಗಿದೆ.ಆದ್ದರಿಂದಲೇ "ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ" ಎಂಬ ತತ್ವಗಳು ಈ ವ್ಯಕ್ತಿಯ ಮೂಲಕ ಅಕ್ಷರಶಃ  ಪಾಲನೆಗೊಳ್ಳುತ್ತಿರುವುದು ನಾವು ಕಾಣಬಹುದಾಗಿದೆ. 

ವಿದೇಶದಲ್ಲಿ ಆಗಲಿ, ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿ ನಿಸ್ಸಾಹಯಕನಾಗಿ ಸಂಕಷ್ಟದಲ್ಲಿ ಇದ್ದಾನೆ ಎಂಬುದನ್ನು ಅರಿತರೆ ಕೂಡಲೇ ಇಂತಹವರ ಕಡೆಗೆ ಕೈಚಾಚಿ ಅವರನ್ನು ಪಾರು ಮಾಡುವುದು ಹೇಗೆಂಬ ದೂರದೃಷ್ಟಿತ್ವ ಬೆಳಿಸಿಕೊಂಡಿರುವುದೇ ಯಜ್ಞೇಶ್ ಅವರ ಬದುಕಿನ ಪಾಸಿಟಿವ್ ಪಾಯಿಂಟ್. 

ಈಗಿನ ಕಾಲಘಟ್ಟದಲ್ಲಿ ತಾನು ತನ್ನ ಮನೆ ಎಂಬ ತನ್ನ ತನದಿಂದ ಹೊರಬಂದು ಸಮಾಜ,ಸಂಸ್ಕೃತಿ, ಶಿಕ್ಷಣ, ಕಲೆ, ಸಾಹಿತ್ಯ, ಧಾರ್ಮಿಕ ಮೊದಲಾದ ರಂಗಗಳಿಗೆ ವರ್ಷದ, ತಿಂಗಳ, ವಾರದ,ದಿನದ ಗಂಟೆ,ಸೆಕೆಂಡು,ನಿಮಿಷ ಪೂರ್ತಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರೆ ಒಂದು ಅರ್ಥದಲ್ಲಿ ಇಂತಹವರು ನಮ್ಮೊಂದಿಗೆ, ನಮ್ಮ ಸಮಾಜದೊಂದಿಗೆ ಇರುವುದು ನಮ್ಮ ಸೌಭಾಗ್ಯ. 

ಉತ್ತಮ ಕ್ರಿಕೆಟ್ ಪಟುವಾಗಿರುವ ಹವ್ಯಾಸ ರೂಫಿಸಿ ಕೊಂಡಿರುವ ಯಜ್ಞೇಶ್ ಊರಲ್ಲಿರುವಾಗ ಹಲವಾರು ಕ್ರಿಕೆಟ್ ಪಂದ್ಯಾಟಗಳಲ್ಲಿ ಪಾಲ್ಗೊಳ್ಳುತ್ತಿರುವುದಲ್ಲದೆ ಕೊಲ್ಲಿ ರಾಷ್ಟ್ರದಲ್ಲೂ ಹಲವಾರು ಪ್ರೀಮಿಯರ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದಾರೆ. 


ಇಂತಹ ಪಂದ್ಯಗಳು ಗೆದ್ದಾಗ ತನಗೆ ವೈಯಕ್ತಿಕವಾಗಿ ಲಭಿಸಿದ ಬಹುಮಾನದ ಮೊತ್ತವನ್ನು ಕೂಡ ಸಂಘ ಸಂಸ್ಥೆಗಳ ಮೂಲಕ ಬಡವರ ಸೇವೆಗೈಯಲು ಬಳಸಿಕೊಳ್ಳುತ್ತಿದ್ದಾರೆ.

ಪತ್ನಿ ಸೀಮಾ ಯಜ್ಞೇಶ್ (ದಾದಿ) ಮಕ್ಕಳಾದ ಅಭಿಷೇಕ್ ಕೃಷ್ಣ (ರಾಜ್ಯ ಮಟ್ಟದ ಕ್ರಿಕೆಟ್ ಪಟು), ಅಧೀತಿಯನ್  ಕೃಷ್ಣ (ವಿದ್ಯಾರ್ಥಿ) ಅವರ ಜತೆಗೆ ಸಂತೃಪ್ತ ಸಂಸಾರ ಕಂಡುಕೊಂಡಿರುವ ಯಜ್ಞೇಶ್ ಅವರಿಗೆ ಇದೀಗ ನಲ್ವತ್ತೊಂದರ ಹರೆಯ.

ವರ್ಷಂಪ್ರತಿ ಸಮಾಜದ ಬಡವರಿಗೆ ಕಿಟ್ ನೀಡುವ ಮೂಲಕ, ಆನಾಥಶ್ರಮಗಳಲ್ಲಿ ಅನ್ನ ಆಹಾರ ನೀಡುವ ಮೂಲಕ ಹೀಗೆ ವಿಭಿನ್ನ ರೀತಿಯಲ್ಲಿ ತನ್ನ  ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡು ಬಂದಿರುವ ಯಜ್ಞೇಶ್ ಅವರು ಈ ಬಾರಿಯೂ ತಮ್ಮ ಸ್ಥಾಪಕ ಬಳಗವಾದ ಶ್ರೀರಾಜ ಬೆಳ್ಚಪ್ಪಾಡ ಬಳಗದ ಮೂಲಕ "ಗೋವಿಗಾಗಿ ಮೇವು" ಎಂಬ ದೇವತಾ ಪ್ರೀತಿಯ ಸಾಕ್ಷತ್ ಗೋಮಾತೆಯ ಸೇವೆ ನಡೆಸುವ ಮೂಲಕ ನೇರೆವೇರಿಸಿದ್ದಾರೆ. 

ಇಂತಹ ಸಾಮಾಜಿಕ ಪ್ರೀತಿಯ, ಸೌಹಾರ್ದತೆಯ ನೀತಿಯ, ಆದರ್ಶ ಜೀವನ ಮೌಲ್ಯದ ವ್ಯಕ್ತಿತ್ವಕ್ಕೆ ನಿಮ್ಮೆಲ್ಲರ ಪ್ರೀತಿಯ ಹಾರೈಕೆಗಳು ಇರಲಿ ಎಂಬುದಾಗಿ ವಿಶೇಷ ಚಾನೆಲ್ ಹಾರೈಸುತ್ತಿದೆ.






ಜಾಹೀರಾತುಗಳು

Post a Comment

0 Comments