ಕಾಸರಗೋಡು: ಗಡಿನಾಡದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮ ಪಂಚಾಯತಿನ ನಿವಾಸಿಯಾದ ಯುವ ಉಪನ್ಯಾಸಕರೋರ್ವರು ದೂರದ ಆಂಧ್ರಪ್ರದೇಶದ ರಾಯಚೂಟಿಯಲ್ಲಿ ಶ್ರೇಷ್ಠ ಶಿಕ್ಷಕ ಪುರಸ್ಕಾರಕ್ಕೆ ಪಾತ್ರರಾಗುವ ಮೂಲಕ ಶೈಕ್ಷಣಿಕ ರಂಗದ ಕೀರ್ತಿಗೆ ಭಾಜನರಾಗಿದ್ದಾರೆ.
ಮೂಲತಃ ನೀರ್ಚಾಲು ಸಮೀಪದ ಕನ್ನೆಪ್ಪಾಡಿಯ ಕಿಶೋರ್ ಕುಮಾರ್ ಎಂಬವರೇ ಈ ಪುರಸ್ಕಾರಕ್ಕೆ ಪಾತ್ರರಾದ ಯುವ ಶಿಕ್ಷಕ.
ಆಂದ್ರಪ್ರದೇಶದ ಕಡಪ ಜಿಲ್ಲೆಯ ರಾಯಚೂಟಿಯ ಮುನ್ಸಿಫ್ ವತಿಯಿಂದ ನಡೆದ 73ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರ ವೃತ್ತಿ ಹಾಗೂ ಪ್ರವೃತ್ತಿ ರಂಗದ ಸಾಧನೆಗಾಗಿ ಈ ವಿಶೇಷ ಪುರಸ್ಕಾರ ಪ್ರದಾನಿಸಲಾಗಿತ್ತು.
ಇಲ್ಲಿನ ನಿದ ಟೆಕ್ನೋ ಸ್ಕೂಲ್ ನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವ ಕಿಶೋರ್ ಕುಮಾರ್ ಆಂಗ್ಲ ಸ್ನಾತಕೋತ್ತರ ಪದವಿ ಪಡೆದಿದ್ದು ಮಕ್ಕಳಲ್ಲಿ ಪಠ್ಯ ಚಟುವಟಿಕೆಯ ಜತೆಗೆ ಕೌಶಲ್ಯ ತರಬೇತನ್ನು ನೀಡಿ ಪ್ರಸ್ತುತ ತಮ್ಮ ಶಾಲೆಯನ್ನು ಆಂದ್ರ ಪ್ರದೇಶದ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿಸಿದ್ದರು.
ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಡಿಜಿಪಿ ಪಿ.ಶ್ರೀಧರ್,ಕಡಪ ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ ರೆಡ್ಡಿ, ಶಾಲಾ ಆಡಳಿತ ನಿರ್ದೇಶಕ ಎಸ್.ನಿಸಾರ್ ಅಹಮ್ಮದ್ ಮೊದಲಾದವರಿದ್ದರು.
ಕಳೆದ ಲಾಕ್ ಡೌನ್ ಕಾಲದಲ್ಲಿ ತಾಯ್ನಾಡಿಗೆ ಮರಳಿದ್ದ ಇವರು ಹಡೀಲು ಬಿದ್ದ ಗದ್ದೆಯಲ್ಲಿ ಸ್ವತಃ ಕೃಷಿ ಮಾಡಿ ಕೊಯ್ಲು ನಡೆಸಿ ಮಾದರಿಯಾಗಿದ್ದರು. ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಪಾತ್ರಿಯಾಗಿರುವ ಇವರು ಸ್ವತಃ ಜಾನಪದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ.
"ಶ್ರೇಷ್ಠ ಶಿಕ್ಷಕ"ಪುರಸ್ಕೃತ ಕಿಶೋರ್ ಕುಮಾರ್ ಅವರನ್ನು ಶಾಲಾ ಶಿಕ್ಷಕ ವೃಂದ ಅಭಿನಂದಿಸಿದೆ.
ಜಾಹೀರಾತುಗಳು

0 Comments