ಉಪ್ಪಳ: ಮುಳಿಂಜ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಯುವಕೇಸರಿ ಫ್ರೆಂಡ್ಸ್ ಕ್ಲಬ್ ಶಿವತೀರ್ಥಪದವು ಮುಳಿಂಜ ಇದರ 12ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ ಅನಿವಾಸಿ ಭಾರತೀಯರಾಗಿರುವ ಕತಾರ್ ನ ಉದ್ಯೋಗಿಯಾದ ಸದಾನಂದ ಶೆಟ್ಟಿ ಕುಂಟುಪುಣಿ ಅವರಿಗೆ ಸಂಘಟನಾತ್ಮಕ ಚಟುವಟಿಕೆಗಾಗಿ "ಸಂಘಟನಾ ಸಾರಥಿ " ಬಿರುದು ನೀಡಿ ಗೌರವಿಸಲಾಯಿತು.
ಧಾರ್ಮಿಕ, ಸಾಂಸ್ಕೃತಿಕ,ಶೈಕ್ಷಣಿಕ,ಸಾಮಾಜಿಕವಾಗಿ ಸೇವೆ ಸಲ್ಲಿಸುವ ಯುವ ಕೇಸರಿ ಫ್ರೆಂಡ್ಸ್ ಕ್ಲಬ್ ಶಿವತೀರ್ಥಪದವು ಮುಳಿಂಜ ಇದರ ಅಧ್ಯಕ್ಷ ಸ್ಥಾನವನ್ನು ಕಳೆದ 5ವರ್ಷಗಳಿಂದ ಜವಾಬ್ದಾರಿಯುತವಾಗಿ ವಹಿಸಿಕೊಂಡು ಊರಲ್ಲಿ ಸಂಸ್ಥೆಯ ಹಿರಿಯ ಕಿರಿಯ ಸದಸ್ಯರಿಗೆ ಮಾದರಿ ವ್ಯಕ್ತಿತ್ವವಾಗಿ ಎಲ್ಲರ ಪ್ರೀತಿ ಪಾತ್ರರಾಗಿರುವ ಇವರು ಉದ್ಯೋಗ ನಿಮಿತ್ತ ವಿದೇಶದ ಕತಾರ್ ನಲ್ಲಿದ್ದರೂ ತನ್ನ ಹುಟ್ಟೂರ ಸಂಸ್ಥೆಯ ಕಾರ್ಯ ಚಟುವಟಿಕೆಗೆ ಒಂದಿನಿತೂ ಚ್ಯುತಿ ಬಾರದ ರೀತಿಯಲ್ಲಿ ಆದರ್ಶಮಯವಾಗಿ ಮುನ್ನಡೆಸುತ್ತಿದ್ದಾರೆ.
ಇವರ ಮುಂದಾಳುತ್ವಕ್ಕೆ ಅಭಿಮಾನದಿಂದ. "ಸಂಘಟನಾ ಸಾರಥಿ" ಬಿರುದು ಪ್ರದಾನಿಸಲಾಗಿತ್ತು.
ಕುಂಟುಪುಣಿ ನಾರಾಯಣ ಶೆಟ್ಟಿ ಮತ್ತು ಕುಸುಮ ಶೆಟ್ಟಿ ದಂಪತಿಗಳ ಪ್ರಥಮ ಪುತ್ರರಾಗಿ ಊರಿನ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು ರಾಷ್ಟ್ರೀಯವಾದಿತ್ವವನ್ನು ಮೈಗೂಡಿಸಿಕೊಂಡ ಸ್ವಯಂಸೇವಕರಾಗಿ, ಅನಿವಾಸಿಯಾಗಿದ್ದರೂ ಸಂಸ್ಥೆಯನ್ನು ಸಮಾಜದಲ್ಲಿ ಮಾದರಿ ಸಂಸ್ಥೆ ಆಗಿ ಎಲ್ಲರ ಮೆಚ್ಚುಗೆಯಿಂದ ಸಮರ್ಥ ರೀತಿಯಲ್ಲಿ ಮುನ್ನಡೆಸಿ ಅಧ್ಯಕ್ಷ ಪದವಿಗೆ ಅನ್ವರ್ಥನಾಮರಾಗಿರುವ ಬಗ್ಗೆ ಸಭೆಯಲ್ಲಿ ಶ್ಲಾಘಿಸಲಾಯಿತು.
ಈ ಬಗ್ಗೆ ನಡೆದ ಸಭೆಯಲ್ಲಿ ಮಹಾಲಿಂಗೇಶ್ವರ ಸೇವಾ ಸಮಿತಿ ಮುಳಿಂಜ ಇದರ ಅಧ್ಯಕ್ಷರಾದ ಹರಿನಾಥ್ ಭಂಡಾರಿ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ಹಿಂದೂ ಜಾಗರಣ ವೇದಿಕೆ ಪ್ರಮುಖ್ ರಾಧಾಕೃಷ್ಷ ಅಡ್ಯಂತಾಯ, ಪತ್ವಾಡಿ ತಿಮ್ಮಪ್ಪ ಶೆಟ್ಟಿ, ಬಾಬು ಶೆಟ್ಟಿ ಗುಡ್ಡೆಮಾರ್, ವಿಶ್ವನಾಥ್ ಶೆಟ್ಟಿ ಕುಂಟುಪುಣಿ,ವಿಜಯ್ ಪಂಡಿತ್ ಭಗವತಿ, ರಾಜೇಶ್ ದೇವಾಡಿಗ ಸಂತಡ್ಕ, ಯುವ ಕೇಸರಿ ಸಂಘಟನೆಯ ಸ್ಥಾಪಕ,ಮಾರ್ಗದರ್ಶಕ,ಕತಾರ್ ಉದ್ಯೋಗಿ ಯಜ್ಞೇಶ್ ಶಿವತೀರ್ಥಪದವು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾನ್ವಿ ಭರತ್ ಉಪ್ಪಳ ಬಿರುದು ಪ್ರದಾನ ಪತ್ರ ವಾಚನಗೈದರು. ಸತೀಶ್ ಮುಳಿಂಜ ಸ್ವಾಗತಿಸಿ ದಿನೇಶ್ ಮುಳಿಂಜ ವಂದಿಸಿದರು.

0 Comments