ದುಬೈ: ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿ ದುಬೈ ಇವರ 8 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಅಜ್ಮಾನ್ ನ ಇಂಡಿಯನ್ ಅಸೋಸಿಯೇಷನ್ ನ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಜರಗಿತ್ತು.
ರಘು ಭಟ್ ಮತ್ತು ರಾಜೇಶ್ ಅಡಿಗರ ನೇತೃತ್ವದ ಪೌರೋಹಿತ್ಯದಲ್ಲಿ ಸಾವಿರಾರು ಭಕ್ತರ ಪ್ರಾರ್ಥನೆಗಳೊಂದಿಗೆ ಪೂರ್ವಹ್ನ ಗಂಟೆ 7 ರಿಂದ ಸಾಯಂಕಾಲದವರೆಗೆ ವಿಜೃಂಭಣೆಯಿಂದ ಜರುಗಿತ್ತು. ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಮಹಿಳಾ ಸಮಿತಿಯ ಸದಸ್ಯೆಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಗಣಪತಿ ದೇವರ ಪ್ರತಿಷ್ಠಾಪನೆ ಜರಗಿತು.ಮಾರ್ಗದೀಪ ಸಾಂಸ್ಕೃತಿಕ ಸಮಿತಿ, ಮೋಗವಿರ ದುಬೈ ಭಜನಾ ವೃಂದ, ಓಂ ಶ್ರೀ ಭಜನಾ ವೃಂದ ದುಬೈಯ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತ್ತು. ಪುರೋಹಿತ ಶ್ರೀ ಸುಬ್ರಹ್ಮಣ್ಯ ಅಣ್ಣ ಗಾದ ಬೆಂಗಳೂರು ಮತ್ತು ತಂಡದವರಿಂದ ವೇದ ಮಂತ್ರ ಪಾರಾಯಣ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಮಧ್ಯಾಹ್ನದ ಬಳಿಕ ರಾಮಚಂದ್ರ ಬೆದ್ರಡ್ಕ ಮತ್ತು ಯುವರಾಜ್ ದೇವಾಡಿಗ ತಂಡದವರಿಂದ ಭಕ್ತಿ ರಸಮಂಜರಿ ಹಾಗೂ ಗೊಲ್ಡನ್ ಸ್ಟಾರ್ ಮ್ಯೂಸಿಕ್ ಮತ್ತು ಫೈನ್ ಆರ್ಟ್ಸ್ ಶಾರ್ಜಾ ಇವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತ್ತು. ಸಂಜೆ ಗಿರೀಶ್ ನಾರಾಯಣ ದುಬೈ ಮತ್ತು ತಂಡದವರಿಂದ ಹುಲಿ ವೇಷ ಕುಣಿತ
ಹಾಗೂ ಕೇರಳದ ಪ್ರಸಿದ್ಧ ಚೆಂಡೆ ಮೇಳ ತಂಡವಾದ ಸಾದನಂ ದುಬೈ ತಂಡದವರ ಚೆಂಡೆ ಮೇಳದೊಂದಿಗೆ ಶ್ರೀ ಗಣಪತಿ ದೇವರ ವಿಸರ್ಜನೆ ಮೆರವಣಿಗೆಯ ಮೂಲಕ ವಿಸರ್ಜಿಸಲಾಯಿತು.
ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ಹಾಗೂ ಸಲಹೆಗಾರರಾದ ಪ್ರಭಾಕರ ಅಂಬಲತ್ತರೆ, ಮಾಜಿ ಅಧ್ಯಕ್ಷ ರಾಜೇಶ್ ರಾವ್, ಪ್ರಸ್ತುತ ಅಧ್ಯಕ್ಷರಾದ ಸುಗಂಧರಾಜ್ ಬೇಕಲ್,ಪ್ರದಾನ ಕಾರ್ಯದರ್ಶಿ ಯಶವಂತ್ ಮಲ್ಲಿಗೆಮಾಡು,ಉಪಾಧ್ಯಕ್ಷ ಅಜಿತ್ ಕೊರಕೊಡು,ಕೋಶಾಧಿಕಾರಿ ಸುಬ್ರಹ್ಮಣ್ಯ ಕೆ.,ಜತೆ ಕಾರ್ಯದರ್ಶಿ ಪ್ರವೀಣ್ ಉಪ್ಪೂರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ನೇತೃತ್ವ ನೀಡಿದರು.
ಯುಎಇ ಯ ಮರುಭೂಮಿಯಲ್ಲಿ ಯಶಸ್ವಿಯಾಗಿ ಜರಗಿದ 8 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಶ್ರೀ ಗಣಪತಿ ದೇವರ ದರ್ಶನ ಪಡೆದು ಪುನೀತರಾಗಿರುವುದಲ್ಲದೆ ಸಮಿತಿಯ ಪದಾಧಿಕಾರಿಗಳ ಹಾಗೂ ಸದಸ್ಯರ ಕಾರ್ಯ ವೈಖರಿಯನ್ನು ಕಂಡು ಪ್ರಶಂಸಿದರು. ವಿಘ್ನೇಶ್ ಕುಂದಾಪುರ ಮತ್ತು ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.
ವರದಿ: ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ -ದುಬೈ
ಜಾಹೀರಾತಿಗಾಗಿ ಸಂಪರ್ಕಿಸಿ: +971552032097
ಜಾಹೀರಾತು








0 Comments