ಉಪ್ಪಳ: ಯಾವುದೇ ಕಲೆ ಕರಗತವಾಗಬೇಕಾದರೆ ದೇವರ ಒಲವು ಬೇಕಂತೆ ಆದರೆ ಇಲ್ಲೊಬ್ಬರು ದೈವ ಪೂಜಾರಿ(ಕರ್ಮಿ)ಯೋರ್ವರಿಗೆ ದೈವದತ್ತವಾಗಿಯೇ ಕಲೆಯ ಸಿದ್ಧಿ ಲಭಿಸಿರುವುದು ನೋಡುಗರನ್ನು ಮೂಕ ವಿಸ್ಮಿತಗೊಳಿಸುತ್ತದೆ.
ಹಾಗೆಂದು ಚಿತ್ರ ಯಾರೂ ಬಿಡಿಸಬಹುದು.ಮಾತ್ರವಲ್ಲ ಪ್ರಯತ್ನಿಸಬಹುದು ಆದರೆ ಉಳಿದ ಚಿತ್ರಗಳಿಗಿಂತೆಲ್ಲ ವಿಭಿನ್ನವಾಗಿ ಚಿತ್ರಿಸುವ,ವ್ಯಕ್ತಿ ರೂಪವನ್ನೇ ಹೋಲುವ ಪ್ರತಿಬಿಂಬಿತ ಕಲೆಯನ್ನು ಕರಗತ ಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಉಳಿದವರು ಆಕರ್ಷಕ ಚಿತ್ರಗಳನ್ನು ಬಿಡಿಸುವುದಿದ್ದರೆ ಇವರು ವ್ಯಕ್ತಿಗಳನ್ನೇ ಹೋಲುವಂತಹ ಸಾದೃಶ್ಯ ಚಿತ್ರಗಳನ್ನು ರಚಿಸುವಲ್ಲಿ ಗಮನ ಸೆಳೆಯುತ್ತಾರೆ. ಸರಿ ಸುಮಾರು 50ರ ಹರೆಯದ ಉಪ್ಪಳ ಭಗವತೀ ನಗರದ ಜನಾರ್ಧನ ಬೆಲ್ಚಾಡ (ಪೂಜಾರಿಯಚ್ಚ) ಈ ರೀತಿಯ ಚಿತ್ರ ಕಲೆಗಳನ್ನು ಬಿಡಿಸುವುದರಲ್ಲಿ ನಿಸ್ಸೀಮರಾಗಿದ್ದು ಈಗಾಗಲೇ ಹಲವಾರು ವ್ಯಕ್ತಿಗಳ ಚಿತ್ರವನ್ನು ಬಿಡಿಸಿ ಕೊಡುಗೆಯಾಗಿ ನೀಡಿದ್ದಾರೆ.
ಉಪ್ಪಳ ಶ್ರೀಭಗವತೀ ಕ್ಷೇತ್ರದ ದೈವಸ್ಥಾನದ ಚಂದ ಕಾರ್ನವರ್-ದೇವಕಿ ಅಮ್ಮ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಕೊನೆಯ ಪುತ್ರ.ರಾದ ಜನಾರ್ಧನ ಬೆಲ್ಚಪ್ಪಾಡ ಐಲ ಶಾರದ ಬೋವಿ ಶಾಲೆಯಲ್ಲಿ ನಾಲ್ಕನೇ ತರಗತಿ ಬಳಿಕ ಟೈಲರ್ ವೃತ್ತಿ ಕಲಿತಿದ್ದರು. ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ಚಿತ್ರ ಕಲೆಯ ಬಗ್ಗೆ ಅತೀವ ಒಲವು ಬೆಳೆಸಿಕೊಂಡಿದ್ದ ಇವರು ಬಳಿಕ ವೃತ್ತಿ ಜೀವನದ ಜತೆಗೆ ಚಿತ್ರ ಬಿಡಿಸುವ ಕಲೆಯನ್ನು ಹವ್ಯಾಸವಾಗಿ ಮುಂದುವರಿಸಿದರು.
2011ರಲ್ಲಿ ಉಪ್ಪಳ ಶ್ರೀ ಭಗವತೀ ದೈವಸ್ಥಾನದ ಬಳೆ ತೊಡಿಸಿ ಪೂಜಾರಿ (ಅಚ್ಚನ್) ಸ್ಥಾನ ವಹಿಸಿಕೊಂಡ ಬಳಿಕ ಮನೆಯಲ್ಲಿಯೇ ಟೈಲರಿಂಗ್ ವೃತ್ತಿ ಮುನ್ನಡೆಸ ತೊಡಗಿದರು. ಇದರೊಂದಿಗೆ ಚಿತ್ರ ಕಲೆಯಲ್ಲಿಯೂ ಇವರಿಗಿದ್ದ ಸಹಜ ಒಲವಿಗೆ ಕಳೆದ ಕೋರೋನ ಕಾಲಘಟ್ಟದ ಲಾಕ್ ಡೌನ್ ಇನ್ನಷ್ಟು ಸದಾವಕಾಶ ಒದಗಿಸಿತು. ಈ ಸಂದರ್ಭದಲ್ಲಿ ಒಬ್ಬೋಬ್ಬರಾದ ವ್ಯಕ್ತಿಗಳ ಚಿತ್ರಗಳನ್ನು ತನ್ನ ಕಲ್ಪನೆಯಲ್ಲಿ ಮೂಡಿಸಲಾರಂಭಿಸಿದ್ದು ನೋಡಿದವರು ಪ್ರೋತ್ಸಾಹಿಸ ತೊಡಗಿದರಂತೆ.
ಇದರಿಂದಾಗಿ ಇಷ್ಟರ ವರೆಗೆ ಹಲವಾರು ಸರಿ ಸುಮಾರು 50ಕ್ಕಿಂತ ಹೆಚ್ಚಿನ ಚಿತ್ರಗಳನ್ನು ರಚಿಸಲು ಸಾಧ್ಯವಾಗಿದೆ. ಪ್ರಧಾನಿ ಮೋದಿಜೀ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ಗುರು ದಿ.ಕೃಷ್ಣ ಮಾಸ್ತರ್ ಉಪ್ಪಳ,ಕೊಂಡೆವೂರು ಶ್ರೀ, ಒಡಿಯೂರು ಶ್ರೀ,ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್,ಧಾರ್ಮಿಕ ಮುಂದಾಳುಗಳಾದ ಕುಂಟಾರು ರವೀಶ ತಂತ್ರಿ,ಸುರೇಶ್ ಶೆಟ್ಟಿ ಪರಂಕಿಲ, ವಿಜಯ ರೈ, ಜಯಪ್ರಕಾಶ್ ಶೆಟ್ಟಿ ಸುವರ್ಣ ನ್ಯೂಸ್ ಹೀಗೆ ಹಲವು ಮಂದಿಯ ಚಿತ್ರಗಳನ್ನು ಈ ಇಳಿ ವಯಸ್ಸಿನಲ್ಲಿ ರಚಿಸಿದ ಆತ್ಯಾಪೂರ್ವ ಕಲಾವಿದರಲ್ಲಿ ಜನಾರ್ಧನ ಬೆಲ್ಚಪ್ಪಾಡ ಅವರ ಕಲೆ ನೋಡುಗರಲ್ಲಿ ಅಚ್ಚರಿ ಸೃಷ್ಠಿಸುತ್ತದೆ.
ದೇವರುಗಳ ಚಿತ್ರ ಅಥವಾ ಇನ್ಯಾವುದೋ ವಸ್ತುವಿನ ಚಿತ್ರ ಬಿಡಿಸುವುದು ಸುಲಭ. ಆದರೆ ವ್ಯಕ್ತಿ ಚಿತ್ರಗಳನ್ನು ಚಿತ್ರಿಸುವದು ಕಷ್ಟದ ಮಾತು.ಯಾಕೆಂದರೆ ವ್ಯಕ್ತಿಯಲ್ಲಿರುವ ಪ್ರತಿ ಗೆರೆಗಳನ್ನು ಅಚ್ಚಿನಂತೆ ತನ್ನ ಕಲಾ ಕುಂಚದಲ್ಲಿ ಬಿಡಿಸಬೇಕಿದ್ದರೆ ಅಷ್ಟೆ ತಾಳ್ಮೆ ಹಾಗೂ ಸಹನೆ ಬೇಕು ಅಂತಹ ಮನೋಗುಣಗಳನ್ನು ಬೆಳೆಸಿಕೊಂಡಿರುವ ಜನಾರ್ಧನ ಬೆಲ್ಚಪ್ಪಾಡರು ಈ ಇಳಿ ವಯಸ್ಸಿನ ಕಲಾವಿದರಲ್ಲಿ ಅಪೂರ್ವ ಸಾಧಕರಾಗಿದ್ದಾರೆ ಎಂದು ಕೊಂಡೆವೂರು ನಿತ್ಯಾನಂದ ಆಶ್ರಮದ ಶ್ರೀಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆವರು ಜನಾರ್ಧನ ಬೆಲ್ಚಪ್ಪಾಡ ಅವರ ಕಲಾ ಕೌಶಲ್ಯವನ್ನು ಕೊಂಡಾಡಿದ್ದಾರೆ.
ಈ ಹಿಂದೆ ಭಗವತೀ ಕೃಪಾ ಜೈಶ್ರೀರಾಮ ಆಂಜನೇಯ ವ್ಯಾಯಾಮ ಶಾಲೆ ಭಗವತೀ ನಗರ ಉಪ್ಪಳ ಇದರ ಸದಸ್ಯರಾಗಿ ತಾಲೀಮು ಪ್ರದರ್ಶನಗಳಿಗೂ ನೇತೃತ್ವ ನೀಡುತ್ತಿದ್ದ ಇವರು ಗಂಟೆ ಗಟ್ಟಲೆ ಭಜನೆಗಳನ್ನು ಕಂಠಪಾಠದಂತೆ ಹಾಡುವುದರಲ್ಲಿಯೂ ಗಮನ ಸೆಳೆದಿದ್ದಾರೆ. ಪ್ರಸ್ತುತ ಪತ್ನಿ ಪುಷ್ಪಾವತೀ ಮಕ್ಕಳಾದ ಆಶ್ವಿನಿ, ರಘವೀರ,ರವಿರಾಜ್ ಅವರ ಜತೆ ಸಂತೃಪ್ತ ಸಂಸಾರ ಸಾಗಿಸುತ್ತಿರುವ ಜನಾರ್ಧನ ಬೆಲ್ಚಪ್ಪಾಡ ಅವರದ್ದು ಬಡ ಕುಟುಂಬ. ಇವರೊಳಗೆ ಅಂತರ್ಗತವಾಗಿರುವ ಕಲೆಯ ಒಲವು ನಾಲ್ಕೂರಿನ ಜನ ಗುರುತಿಸುವಂತಾಗಿ ದೈವ ದೇವರುಗಳ ಅನುಗ್ರಹದಲ್ಲಿ ವಿಶ್ವ ವ್ಯಾಪ್ತಿಯಾಗಲೆಂಬ ಶುಭ ಹಾರೈಕೆ.
ಚಿತ್ರ ಮಾಹಿತಿ: ಕಿಶೋರ್ ಭಗವತೀ & ಸುರೇಶ್ ಶೆಟ್ಟಿ ಪರಂಕಿಲ
ಬರಹ : ಜಯ ಮಣಿಯಂಪಾರೆ







0 Comments