ಆದರ್ಶ ಸಮಾಜ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮಿತ್ರಂಪಾಡಿ ಜಯರಾಮ ರೈ ಅವರು ಆಯ್ಕೆ


ಪುತ್ತೂರು: 2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮಾದರಿ ಸಮಾಜ ಸೇವಕ ಮಿತ್ರಂಪಾಡಿ ಜಯರಾಮ ರೈ ಅವರು ಆಯ್ಕೆಯಾಗಿರುವುದು ಅವರ ಅಭಿಮಾನಿ ವರ್ಗದಲ್ಲಿ ಸಂತಸ ಸೃಷ್ಠಿಸಿದೆ.

 ಮಿತ್ರಂಪಾಡಿ ಜಯರಾಮ್ ರೈ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ದಿವಂಗತ ಮಿತ್ರಂಪಾಡಿ ಚನ್ನಪ್ಪ ರೈ ಹಾಗೂ ದಿಂಬ್ರಿ ಗುತ್ತು ಸರಸ್ವತಿ ರೈ ಅವರ ಸುಪುತ್ರ.  

ಇವರು ಕೊರೊನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಅಧಿಕ ಬಡಕುಟುಂಬಗಳಿಗೆ ಅಕ್ಕಿಯನ್ನು ವಿತರಿಸುವುದರ ಜೊತೆಗೆ ಪುತ್ತೂರು  ಜಾತ್ರಾ ಸಂದರ್ಭದಲ್ಲಿ ಲೋಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಜಾಯಿಂಟ್ ವೀಲ್ ನಡೆಸುವ  60ಕ್ಕೂ ಅಧಿಕ ಸದಸ್ಯರಿರುವ 9 ಕುಟುಂಬಕ್ಕೆ ಸುಮಾರು ಒಂದು ತಿಂಗಳ ಪರ್ಯಂತ  ಊಟೋಪಚಾರ ನೀಡಿ ಆಶ್ರಯ ನೀಡಿದ್ದಾರೆ.

ಕೊರೋನ ತುರ್ತು ಸಂದರ್ಭದಲ್ಲಿ  ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಅನೇಕ ಭಾರತೀಯರಿಗೆ  ಸ್ವದೇಶಕ್ಕೆ ಮರಳಲು ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಸುಮಾರು ನೂರಕ್ಕೂ ಅಧಿಕ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಆರ್ಥಿಕ ಸಹಾಯವನ್ನು ಮಾಡಿದ್ದಾರೆ.ಅನಾರೋಗ್ಯಕ್ಕೆ ಸಿಲುಕಿದ  ನೂರಾರು ಮಂದಿಗೆ  ಆರ್ಥಿಕ ಸಹಾಯವನ್ನು ನೀಡಿದ್ದಾರೆ. ಸುಮಾರು ಹಲವಾರು ಬಡಕುಟುಂಬಗಳ ಮನೆ ದುರಸ್ತಿ ಕಾರ್ಯಗಳಿಗೆ ಆರ್ಥಿಕ ಸಹಾಯವನ್ನು ನೀಡಿದ್ದಾರೆ.

ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹರ್ಷ ಕುಮಾರ್ ರೈ ಅವರ ನಿರ್ದೇಶನದ ಪುತ್ತೂರು ಉಮೇಶ್ ನಾಯಕ್ ಸಾಹಿತ್ಯದ ಪುತ್ತೂರು ನರಸಿಂಹ ನಾಯಕ್ ಹಾಡಿರುವ ಅಷ್ಟ ಕ್ಷೇತ್ರ ಗಾನ ವೈಭವ ಎಂಬ ಕನ್ನಡ ಭಕ್ತಿಗೀತೆಯನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಅದನ್ನು  ಅರಬ್ ರಾಷ್ಟ್ರಗಳಲ್ಲಿ ಡಾ ಬಿ ಆರ್ ಶೆಟ್ಟಿ ಅವರಿಂದ ಬಿಡುಗಡೆಗೊಳಿಸಿ  ಅರಬ್ ರಾಷ್ಟ್ರದಲ್ಲಿ ಕನ್ನಡದ ಕಂಪನ್ನು ಪಸರಿಸಿದ್ದಾರೆ. 

 ಅರಬ್ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಕನ್ನಡದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕಳೆದ ಇಪ್ಪತ್ತು ವರ್ಷಗಳಿಂದ  ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ದಾರ ಸಮಿತಿ ಸದಸ್ಯರಾಗಿ  ಮಹತ್ತರ ಕಾರ್ಯವನ್ನು ಮಾಡಿದ್ದಾರೆ.  ಅಬುದಾಬಿಯ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆ ಇದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

 ಕಳೆದ 24 ವರ್ಷಗಳಿಂದ ಇವರು ಧಾರ್ಮಿಕ ಕ್ಷೇತ್ರ,  ಶೈಕ್ಷಣಿಕ ಕ್ಷೇತ್ರ,ಸಮಾಜಸೇವೆ ಹಾಗೂ ಕನ್ನಡಪರ ಸೇವೆಯನ್ನು ಗುರುತಿಸಿ 2022 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Post a Comment

0 Comments