ಯುಎಇ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಪಟ್ಲ ಘಟಕ ದುಬಾಯಿ ಜಂಟಿ ಸಂಯೋಜನೆಯ ಪಟ್ಲ ಸಂಭ್ರಮ 2023 ಇದರ ಅಂಗವಾಗಿ ಮುಹೂರ್ತ ಪೂಜೆ ಫಾರ್ಚೂನ್ ಗ್ರೂಪ್ ಮಾಲಿಕತ್ವದ ದುಬಾಯಿ ಗ್ರಾಂಡ್ ಹೋಟೇಲ್ ನಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದಿಂದ ವೈಭವ ಪೂರ್ಣವಾಗಿ ನೆರವೇರಿತು.
ತುಂಬಿದ ಸಭಾಂಗಣದಲ್ಲಿ ಕಲಾವಿದರು, ವಿದ್ಯಾರ್ಥಿಗಳು, ಹೆತ್ತವರು, ಅಭಿಮಾನಿಗಳು, ಕಲಾಪೋಷಕರು ಈ ವೈಭವೋಪೇತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪೂಜಾ ಕಾರ್ಯಕ್ರಮಗಳನ್ನು, ಶ್ರೀಯುತ ವಾಸುದೇವ ಭಟ್ ಪುತ್ತಿಗೆ ಇವರ ನೇತೃತ್ವದಲ್ಲಿ ಶ್ರೀಯುತ ಲಕ್ಷ್ಮೀಕಾಂತ್ ಭಟ್, ಶ್ರೀಯುತ ವೆಂಕಟೇಶ್ ಶಾಸ್ತ್ರಿ ಪುತ್ತಿಗೆ ತಂಡದವರು ನಡೆಸಿಕೊಟ್ಟರು.
ಶ್ರೀಯುತ ರಘು ಪೂಜಾರಿ ಮತ್ತು ಶ್ರೀಯುತ ರಾಜೇಶ್ ಕುತ್ತಾರು ನೇತೃತ್ವದಲ್ಲಿ ತಂಡದ ಹಿರಿ- ಕಿರಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲದೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮಾಡಲಾಯಿತು.
ಗಣಪತಿ ಸ್ತುತಿ- ಪೂಜೆಯ ನಂತರ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಮತ್ತು ಶರತ್ ಕುಡ್ಲರವರು ನೂತನ ಯಕ್ಷಗಾನ ನಾಟ್ಯ ಅಭ್ಯಾಸಿಗಳಿಗೆ ಗೆಜ್ಜೆ ನೀಡುವ ಮೂಲಕ ಅವರ ರಂಗಪ್ರವೇಶಕ್ಕೆ ಅನುವು ಮಾಡಿಕೊಟ್ಟರು.
ಶಾಸ್ರ್ತ ರೀತ್ಯ ಜೋಡಿ ವೇಷಗಳಿಗೆ ಗೆಜ್ಜೆಕಟ್ಟಿ, ತರುವಾಯ ರಂಗಸ್ಥಳಕ್ಕೆ ದೀಪ ಹಿಡಿದು ನೂತನ ವಿದ್ಯಾರ್ಥಿಗಳ ರಂಗಪ್ರವೇಶದಿಂದ ಪೂರ್ವರಂಗ- ಕೋಡಂಗಿ, ಬಾಲಗೋಪಾಲ, ಮುಖ್ಯಸ್ತ್ರೀವೇಷ, ಸರ್ವ ಕಲಾವಿದರ ಗೆಜ್ಜೆಸೇವೆ, ಪ್ರಸಂಗ ಅಭ್ಯಾಸಾರಂಭ, ಧೀಂಗಿಣ ಸ್ಪರ್ಧೆಯ ಅರ್ಹತಾಸುತ್ತು ಮುಗಿಸಿ, ಕೊನೆಗೆ ಯಕ್ಷ ಭಜನೆಯಾಗಿ ಮರಳಿ ದೀಪ ಹಿಡಿದು ಕಲಾವಿದರು ಚೌಕಿ ಬರುವ ತನಕ ಕಲಾಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮಗಳ ಜೊತೆ ಕ್ರಮಬದ್ಧವಾಗಿ ಜರಗಿತು.
ಹಿಮ್ಮೇಳ ದಲ್ಲಿ ಕುಮಾರಿ ವೈಷ್ಣವಿ ಮನೋಹರ್ ಪದ್ಮಶಾಲಿ, ಆದಿತ್ಯ ದಿನೇಶ ಶೆಟ್ಟಿ, ಶರತ್ ಕುಡ್ಲ, ಆಶಿತ್ ಎ, ಕೃಷ್ಣಪ್ರಸಾದ್ ರಾವ್ ಸುರತ್ಕಲ್, ವೆಂಕಟೇಶ ಶಾಸ್ತ್ರಿ ಪುತ್ತಿಗೆ ಮೊದಲಾದ ಕೇಂದ್ರದ ಸದಸ್ಯರು ಮುಮ್ಮೇಳದವರನ್ನು ಚೆನ್ನಾಗಿಯೇ ಪ್ರಕಟಗೊಳಿಸಿದರು.
ವೇದಿಕೆಯಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ನೂತನ ನಾಮಫಲಕ ಮತ್ತು ಲಾಂಛನವನ್ನು ಎಲ್ಲಾ ಅತಿಥಿಗಳು ಸೇರಿ ಬಿಡುಗಡೆಗೊಳಿಸಿದರು.
ಶ್ರೀಯುತ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಮಾತನಾಡುತ್ತಾ "ಪಟ್ಲ ಸಂಭ್ರಮ 2023"ರ ಕಾರ್ಯಕ್ರಮವು ವಿಶ್ವ ಮಟ್ಟದ ಕಾರ್ಯಕ್ರಮ ಆಗಲಿದೆ. ವಿಶ್ವದಲ್ಲಿ ಇರುವ ಎಲ್ಲಾ ಪಟ್ಲ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದರೆ ಹಾಗೂ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿಕ್ಕೆ ಎಲ್ಲರ ಸಹಾಯ ಹಸ್ತ ಬೇಕು" ಎಂದರು
ಅಭ್ಯಾಸ ಕೇಂದ್ರದ ಸರ್ವ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀಯುತ ರಾಜೇಶ್ ಕುತ್ತಾರು ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಣೆ ಮಾಡಿದರು.
ಅಭ್ಯಾಸ ಕೇಂದ್ರದ ಹಿತೈಷಿಗಳಾದ ಸರ್ವಮಾನ್ಯ ವಾಸುಶೆಟ್ಟಿ, ಪದ್ಮನಾಭ ಕಟೀಲು, ವಿಶ್ವನಾಥ ಶೆಟ್ಟಿ, ಸಂತೋಷ್ ಶೆಟ್ಟಿ, ವರದರಾಜ ಶೆಟ್ಟಿಗಾರ್, ಧನಂಜಯ ಕಿನ್ನಿಗೋಳಿ, ಕೀರ್ತಿ ಶೆಟ್ಟಿಗಾರ್, ಶರತ್ ಸರಳಾಯ ಮೊದಲಾದವರು ಕಾರ್ಯಕ್ರಮದ ಉದ್ದಕ್ಕೂ ಉಪಸ್ಥಿತರಿದ್ದು ಶುಭ ಹಾರೈಸಿದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು.
ಶ್ರೀಯುತ ವಸಂತ ಶೆಟ್ಟಿಯವರು ಸಭಾಂಗಣ, ಪೂಜಾಮಂಟಪ, ಧ್ವನಿ- ಬೆಳಕಿನ ವ್ಯವಸ್ಥೆ ಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದರು. ಹೊಸ ಸಮವಸ್ತ್ರದಲ್ಲಿ ಶೋಭಿಸಿದ, ವಿದ್ಯಾರ್ಥಿಗಳು, ಹೆತ್ತವರು ಮತ್ತು ಕಾರ್ಯಕರ್ತರ ತಂಡ, ಶಿಸ್ತುಬದ್ಧ ಕಾರ್ಯಕ್ರಮ ಆಯೋಜನೆಯ ಸರ್ವಾಂಗಗಳಲ್ಲೂ ಸಹಕರಿಸಿ, ನೆರೆದ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ಕೊನೆಗೆ ಪಟ್ಲ ಸಂಭ್ರಮ ಪ್ರಯುಕ್ತ ನಡೆಯುವ, *ದಶಾವತಾರ* ಪ್ರಸಂಗದ ಪಾತ್ರ ವಿತರಣೆ ನಡೆಯಿತು.










0 Comments