ದುಬೈ : ಓವರ್ಸೀಸ್ ಮೂವೀಸ್ ಗಲ್ಫ್ ಸಹಯೋಗದಲ್ಲಿ ಫೆಬ್ರವರಿ 4 ರಂದು ದುಬೈನಲ್ಲಿ "ಪಿಲಿ" ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನವು ಯುಎಇ ತುಳುವರ ಮನವನ್ನು ಗೆದ್ದಿತು. ನಗರದ ದೇರಾದ ಗ್ಯಾಲರಿಯ ಹಯಾತ್ ಸಿನಿಮ ಮಂದಿರದಲ್ಲಿ ನಡೆದ ಪ್ರೀಮಿಯರ್ ನ ಪ್ರದರ್ಶನವು ಹೌಸ್ ಫುಲ್ ಗೊಂಡಿತು.
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ,ಭಾರತ ಕಬಡ್ಡಿ ತಂಡದ ನಾಯಕ ಪ್ರಶಾಂತ್ ರೈ,ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಹರೀಶ್ ಬಂಗೆರ,ದಿನೇಶ್ ಶೆಟ್ಟಿ ಕೊಟಿಂಜ,ತಾರನಾಥ ರೈ,ಓವರ್ಸೀಸ್ ಮೂವೀಸ್ ಗಲ್ಫ್ ನ ಸೆಂಥಿಲ್ ಬೆಂಗಳೂರು, ಈಶ್ವರಿದಾಸ್ ಶೆಟ್ಟಿ ಮಲ್ಲಿಕಾರ್ಜುನ ಗೌಡ ದೀಪ ಬೆಳಗಿಸಿ ಚಿತ್ರಕ್ಕೆ ಶುಭ ಹಾರೈಸಿದರು.ಸಹ ನಿರ್ಮಾಪಕ ಭರತ್ ರಾಮ್ ರೈ ಸ್ವಾಗತಿಸಿದರು.ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ ನಿರ್ಮಾಪಕರಾದ ಆತ್ಮನಂದ ರೈ ಆತ್ಮನಂದ ರೈ ಧನ್ಯವಾದವಿತ್ತರು.
"ಪಿಲಿ"ಯ ಒಳಗಿನ ಕಥೆ
ಹುಲಿ ಕುಣಿತ ಕೇವಲ ಮನರಂಜನೆಗೆ ಸೀಮಿತವಲ್ಲ ಅದು ದೈವದತ್ತವಾಗಿ ಬಂದ ಪ್ರಸಾದ.ಹುಲಿ ಕುಣಿತದಲ್ಲಿ ದೈವ ಶಕ್ತಿ ಇದೆ.ಈ ಹುಲಿ ಕುಣಿತವನ್ನು ಯಾರು ಕಡೆಗಣಿಸಬಾರದು ಕಡೆಗಣಿಸಿದರೆ ಏನಾಗಬಹುದು ಎಂಬುದೇ ಚಿತ್ರದ ಕಥಾವಸ್ತು.ನಿರ್ದೇಶಕ ಮಯೂರ್ ಆರ್. ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿ ಬಂದ ಪಿಲಿ ಚಿತ್ರದಲ್ಲಿ ನಾಯಕ ಭರತ್ ಭಂಡಾರಿ ನಾಯಕಿ ಸ್ವಾತಿ ಶೆಟ್ಟಿಯವರ ಚೊಚ್ಚಲ ಚಿತ್ರವಾದರು ಅಭಿನಯದಲ್ಲಿ ಚೊಚ್ಚಲ ಚಿತ್ರ ಅಂತ ಗೊತ್ತಾಗದಂತೆ ಅಭಿನಯಿಸಿದ್ದಾರೆ .ಕಾಂತರ ಚಿತ್ರದ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿಯವರ ಅಭಿನಯವಂತು ಸೈ ಎನಿಸಿಕೊಂಡಿತು. ಚಿತ್ರದುದ್ದಕ್ಕೂ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ವಿಜಯಕುಮಾರ್ ಕೊಡಿಯಲ್ ಬೈಲ್ ರವರ ಪಾತ್ರವಂತು ಎಲ್ಲರ ಮನಸ್ಸನ್ನು ಗೆದ್ದಿತ್ತು.
ಹಾಸ್ಯ ದಿಗ್ಗಜ್ಜರಾದ ನವೀನ್ ಡಿ.ಪಡಿಲ್,ಅರವಿಂದ ಬೋಳಾರ್,ಬೋಜಾರಾಜ ವಾಮಂಜೂರು,ಉಮೇಶ್ ಮಿಜಾರ್,ದೀಪಾಕ್ ರೈ ಪಾಣಜೆ,ಪ್ರಸನ್ನ ಶೆಟ್ಟಿ ಬೈಲೂರು,ಸಂದೀಪ್ ಶೆಟ್ಟಿ ಮಾಣಿಬೆಟ್ಟು,ಪಿಂಕಿ ರಾಣಿ,ವಿಶ್ಮಯ ವಿನಾಯಕರ ಪಾತ್ರವು ನಗೆಗಡಲಲ್ಲಿ ತೇಲಾಡಿಸಿತ್ತು.ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ನಮಿತಾ ಕುಳೂರು,ಚೇತನ್ ರೈ ಮಾಣಿ ಸೇರಿ ತುಳುನಾಡಿನ ಪ್ರಬುದ್ಧ ಕಲಾವಿದರು ಮಿಂಚಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತ ನಿರ್ದೇಶನದಲ್ಲಿ ಅದ್ಭುತವಾದ ನಾಲ್ಕು ಹಾಡುಗಳನ್ನು ಪಟ್ಲ ಸತೀಶ್ ಶೆಟ್ಟಿ, ನಿಹಾಲ್ ತಾವ್ರೊ,ಅನುರಾಧ ಭಟ್, ಉಜ್ವಲ ಆಚಾರ್,ಕಲಾವತಿ ಹಾಡಿದ್ದಾರೆ.
ತುಳುನಾಡಿನಾದ್ಯಂತ ಫೆಬ್ರವರಿ 10 ರಂದು ಈ ಚಿತ್ರ ಬಿಡುಗಡೆಯಾಗಲಿದ್ದು ಇಂತಹ ಒಳ್ಳೆಯ ಚಿತ್ರವನ್ನು ಗೆಲ್ಲಿಸುವುದು ತುಳುವರಾದ ನಮ್ಮ ಕರ್ತವ್ಯ.
ತುಳುನಾಡಿನ ಸಂಸ್ಕೃತಿ ಪರಂಪರೆಯ ಕಥೆಯನ್ನು ಒಳಗೊಂಡ ಪಿಲಿ ಚಿತ್ರವು ನೂರು ದಿನ ಪ್ರದರ್ಶನವಾಗುವುದರಲ್ಲಿ ಏನು ಸಂಶಯವಿಲ್ಲ ಎಂಬುದು ದುಬೈ ಪಿಲಿ ತುಳು ಚಿತ್ರ ಪ್ರೇಮಿಗಳ ಅಭಿಪ್ರಾಯವಾಗಿದೆ.
ವರದಿ: ✒️ ವಿಜಯಕುಮಾರ್ ಶೆಟ್ಟಿ, ಗಾಣದಮೂಲೆ- ಮಜಿಬೈಲ್ (ದುಬೈ)





0 Comments