ಸೀತಾಂಗೋಳಿಯ ಬೇಳದಲ್ಲಿ ಬೋರ್ ವೆಲ್ ಗುತ್ತಿಗೆದಾರನ ಮೃತದೇಹ ಶೌಚಾಲಯ ಹೊಂಡದಲ್ಲಿ ಪತ್ತೆ | ಕೊಲೆ ಶಂಕೆ

 


ಕಾಸರಗೋಡು : ಸೀತಾಂಗೋಳಿ ಸಮೀಪದ ಬೇಳದಲ್ಲಿ  ವ್ಯಕ್ತಿಯೋರ್ವರ ಮೃತದೇಹ ಇವರ ಮನೆ ಸಮೀಪದ ನಿರ್ಮಾಣ ಹಂತದಲ್ಲಿರುವ  ಶೌಚಾಲಯದ ಹೊಂಡದಲ್ಲಿ ಪತ್ತೆಯಾಗಿದ್ದು ಇದು ಕೊಲೆ ಎಂಬ ಶಂಕೆ ಮೂಡಿದೆ. 

ಮೃತದೇಹ ಚೌಕಾರು ಪಿಲಿಪಳ್ಳ ನಿವಾಸಿ ಕೊಳವೆ ಬಾವಿ ನಿರ್ಮಾಣದ ಗುತ್ತಿಗೆದಾರ  ಥೋಮಸ್ ಕ್ರಾಸ್ಟ (63) ಎಂಬವರದ್ದೆಂದು ಗುರುತು ಪತ್ತೆ ಹಚ್ಚಲಾಗಿದ್ದು ಬದಿಯಡ್ಕ ಪೋಲಿಸರು ಸ್ಥಳಕ್ಕಾಗಮಿಸಿ ಮೃತದೇಹ ಕಂಡು ಹಿಡಿದಿದ್ದಾರೆ. 


ಕಳೆದೆರಡು ದಿನಗಳಿಂದ ಥೋಮಸ್ ಕ್ರಾಸ್ಟ ನಾಪತ್ತೆಯಾಗಿದ್ದು ಇವರಿಗೆ ಸಂಬಂಧಿಕರೊಡನೆ ಸರಿಯಾಗಿಲ್ಲವಾದ ಕಾರಣ ನಾಪತ್ತೆ ವಿಚಾರ ಬೆಳಕಿಗೆ ಬರಲು ತಡವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ನಡುವೆ ಇವರನ್ನು ಕಾಣದಿದ್ದಾಗ ಸಮೀಪ ವಾಸಿಗಳು ಬದಿಯಡ್ಕ ಪೋಲಿಸ್ ಠಾಣೆಗೆ ವಿಚಾರ ತಿಳಿಸಿದ್ದು  ಇದರಂತೆ ಸ್ಥಳಕ್ಕೆ ಆಗಮಿಸಿದ ಪೋಲಿಸರು ಹುಡುಕಾಟದ ವೇಳೆ ಇವರ ಮನೆ ಸಮೀಪದ ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಹೊಂಡದಿಂದ ಗಬ್ಬು ವಾಸನೆ ಬರತೊಡಗಿದ್ದು ಇದರ ಜಾಡು ಹಿಡಿದು ಸ್ಥಳೀಯರೊಡನೆ 
ಹುಡುಕಿದ ಪೋಲಿಸರಿಗೆ ಮೃತದೇಹ ಕಂಡು ಬಂದಿದೆ. ತಲೆ ಕೆಳಗಾಗಿ ಹೊಂಡದೊಳಗೆ ತಳ್ಳಿದ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪತ್ತೆ ಹಚ್ಚಲಾಗಿದ್ದು ಯಾರೋ ಕೊಲೆ ಮಾಡಿ ಈ ಹೊಂಡದೊಳಗೆ ತಳ್ಳಿರುವುದಾಗಿ ಪೋಲಿಸರು ಸಂಶಯ ವ್ಯಕ್ತಪಡಿಸಿದ್ದಾರೆ.
 

ರವಿವಾರ ಮೃತದೇಹದ ಪಂಚೆನಾಮೆ ನಡೆಸಲಾಗುತ್ತಿದ್ದು  ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಕೊಳವೆ ಬಾವಿ ನಿರ್ಮಾಣ ಗುತ್ತಿಗೆದಾರರಾಗಿರುವ ಥೋಮಸ್ ಕ್ರಾಸ್ಟ ಅವರು ತಮಿಳುನಾಡಿನ ಬೋರ್ ವೆಲ್ ಕಂಪೆನಿಯೊಡನೆ ಸೇರಿ ಈ ಪ್ರದೇಶದಲ್ಲಿ ಬೋರ್ ವೆಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ನಡುವೆ ಮಳೆಗಾಲವಾದ್ದರಿಂದ ಬೋರ್ ವೆಲ್  ಕಾರ್ಮಿಕರು ಊರಿಗೆ ತೆರಳಿದ್ದು ಈ ಕೃತ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Post a Comment

0 Comments