ನಗ ನಗದಿನ ಆಸೆಗಾಗಿ ಥೋಮಸ್ ಕ್ರಾಸ್ತರ ಕೊಲೆಗೈದ ಆರೋಪಿಗಳ ಕರ್ನಾಟಕದಿಂದ ಪತ್ತೆ


ಕಾಸರಗೋಡು : ಸೀತಾಂಗೋಳಿ ಸಮೀಪದ ಚೌಕಾರು ಪಿಲಿಪಳ್ಳ ನಿವಾಸಿ ಕೊಳವೆ ಬಾವಿ ನಿರ್ಮಾಣದ ಗುತ್ತಿಗೆದಾರ ಥೋಮಸ್ ಕ್ರಾಸ್ತರನ್ನು ಕೊಲೆಗೈದು ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿದ್ದ ಜನ ವಾಸ ರಹಿತ ಮನೆಯ ಶೌಚಾಲಯದ ಹೊಂಡಕ್ಕೆಸೆದ ಸ್ಥಿತಿಯಲ್ಲಿ ಕಳೆದ ಶನಿವಾರ ಪತ್ತೆಯಾಗಿತ್ತು. ನಾಡನ್ನೆ ಬೆಚ್ಚಿ ಬೀಳಿಸಿದ ಈ ಕೊಲೆ ಪ್ರಕರಣದ ಆರೋಪಿಗಳನ್ನು ಇದೀಗ ವಾರವೊಂದರೊಳಗೆ ಅತೀ ಚಾಣಕ್ಷ್ಯತನದಿಂದ ಬಂಧಿಸುವಲ್ಲಿ ಡಿವೈಎಸ್ ಪಿ ಪಿ.ಕೆ.ಸುಧಾಕರನ್ ನೇತೃತ್ವದ ತನಿಖಾ ತಂಡ ಸಫಲವಾಗಿದೆ.ಬದಿಯಡ್ಕ ಎಸ್.ಐ.ಪಿ.ಕೆ.ವಿನೋದ್ ಕುಮಾರ್ ಹಾಗೂ ವಿದ್ಯಾನಗರ ಎಸ್ ಐ ಪಿ.ಪ್ರಮೋದ್ ಸಹಕಾರದೊಂದಿಗೆ ಆರೋಪಿಗಳನ್ನು ಕರ್ನಾಟಕದಿಂದ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 

ಮೃತ ಥೋಮಸ್ ಕ್ರಾಸ್ತರ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದ ಮುನೀರ್ (42) ಹಾಗೂ ಈತನ ಪತ್ನಿಯ ಸಹೋದರ ಆಶ್ರಫ್ (36) ಬಂಧಿತ ಆರೋಪಿಗಳಾಗಿದ್ದಾರೆ. 


ಕಳೆದ ಜೂನ್ ಕೊನೆಯ ವಾರದಲ್ಲಿ ನಾಪತ್ತೆಯಾಗಿದ್ದ ಥೋಮಸ್ ಕ್ರಾಸ್ತರ ಮೃತದೇಹ ಕೊಲೆಗೈದು ಗೋಣಿಚೀಲದಲ್ಲಿ ಕಟ್ಟಿದ ಸ್ಥಿತಿಯಲ್ಲಿ ಜುಲೈ 1 ರಂದು ಸಂಜೆ ವೇಳೆ ಪತ್ತೆಯಾಗಿತ್ತು. ಕೊಳವೆ ಬಾವಿ ಗುತ್ತಿಗೆದಾರರಾಗಿದ್ದು ಏಕಾಂಕಿಯಾಗಿ ಮನೆಯಲ್ಲಿ ವಾಸಿಸುವ ಥೋಮಸ್ ಕ್ರಾಸ್ತರನ್ನು ಹಣದ ಆಸೆಯಿಂದ ಕೊಲೆಗೈದು ಉಪೇಕ್ಷಿಸಿರಬೇಕೆಂದು ಪೋಲಿಸರು ಬಲವಾಗಿ ಸಂಶಯಿಸಿದ್ದು ಇದರಂತೆ ಪ್ರಾರಂಭದಲ್ಲಿ ಅನ್ಯರಾಜ್ಯ ನಿವಾಸಿಗಳನ್ನು ಕೇಂದ್ರಿಕರಿಸಿ ತನಿಖೆ ಸಾಗಿತ್ತು. ಮಳೆಯ ಕಾರಣ ಶ್ವಾನದಳಕ್ಕೂ ನಿಖರ ಮಾಹಿತಿ ಲಭಿಸದ ಕಾರಣ ಕೊಲೆ ಕೃತ್ಯ ಪೋಲಿಸರಿಗೂ ಸ್ಥಳೀಯರಿಗೂ ಗೊಂದಲ ಸೃಷ್ಠಿಸಿತ್ತು. ಈ ನಡುವೆ ಊರಿನವರಾದ ಇಬ್ಬರು ಕಳೆದೊಂದು ವಾರದಿಂದ ಸ್ಥಳದಲ್ಲಿ ಇಲ್ಲದಿರುವ ಜಾಡು ಹಿಡಿದು ತನಿಖೆಗೈದ ಪೋಲಿಸರಿಗೆ ರಹಸ್ಯ ಮಾಹಿತಿಗಳು ಲಭಿಸಿತ್ತು. ಇದರಂತೆ ಕ್ವಾಟರ್ಸ್ ನಲ್ಲಿ ವಾಸಿಸುವ ಮುನೀರ್ ಅವರ ಪತ್ನಿಯಲ್ಲಿ ವಿಚಾರಿಸಿದಾಗ ಕೆಲಸಕ್ಕಾಗಿ ಪತಿ ಕರ್ನಾಟಕಕ್ಕೆ ತನ್ನ ಸಹೋದರನಾದ ಆಶ್ರಫ್ ಜತೆ ತೆರಳಿರುವುದಾಗಿ ಮಾಹಿತಿ ಲಭಿಸಿತ್ತು. ಇದರಂತೆ ಇವರಿಬ್ಬರನ್ನು ಕೇಂದ್ರಿಕರಿಸಿ ನಡೆಸಿದ ತನಿಖೆಯಲ್ಲಿ ಮಹತ್ತರವಾದ ಸುಳಿವು ಲಭಿಸಿ ಬಂಧಿಸಲಾಗಿತ್ತು ಎಂದು ಪೋಲಿಸರು ತಿಳಿಸಿದ್ದಾರೆ. ಕೊಲೆಗೈದ ಬಳಿಕ ಥೋಮಸ್ ಕ್ರಾಸ್ತರ ಹಣ ಹಾಗೂ ಒಡವೆಗಳನ್ನು ಅಪಹರಿಸಿದ ಆರೋಪಿಗಳು ಇದನ್ನು ಹಲವೆಡೆ ಒತ್ತೆಯಿರಿಸಿರುವುದಾಗಿ ಪೋಲಿಸರು ತಿಳಿಸಿದ್ದಾರೆ. 



ಜಾಹೀರಾತು


Post a Comment

0 Comments