ಥಾಮಸ್ ಕ್ರಾಸ್ತ ರನ್ನು ಕೊಲೆಗೈದು ಹೂತಿರುವುದಾಗಿ ಮಾಹಿತಿ - ತನಿಖೆ ತೀವ್ರ


ಕಾಸರಗೋಡು:  ಸೀತಾಂಗೋಳಿ ಸಮೀಪದ ಪಿಲಿಪಳ್ಳ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಶೌಚಾಲಯದ ಹೊಂಡದಲ್ಲಿ ಪತ್ತೆಯಾದ ಥಾಮಸ್ ಕ್ರಾಸ್ತ (63)ಅವರ ಮೃತದೇಹವನ್ನು ರವಿವಾರ ಹೊರ ತೆಗೆಯಲಾಗಿದ್ದು ಮಹಜರಿಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ. ಕಳೆದೆರಡು ದಿನಗಳಿಂದ ಕಾಣೆಯಾಗಿದ್ದ ಥಾಮಸ್ ಕ್ರಾಸ್ತರ ಹುಡುಕಾಟದ ನಡುವೆ ಹೊಂಡದಲ್ಲಿ ಮೃತದೇಹ ಶನಿವಾರ ಸಂಜೆ ಪತ್ತೆಯಾಗಿತ್ತು.  ಗೋಣಿ ಚೀಲದಲ್ಲಿ ಕಟ್ಟಿದ ಸ್ಥಿತಿಯಲ್ಲಿದ್ದ ಮೃತದೇಹದ  ತಲೆಯಲ್ಲೂ, ಕೈಯಲ್ಲೂ, ಕಾಲಿಗೂ ಮಾರಕವಾಗಿ ಗಾಯಗಳಾಗಿರುವುದಾಗಿ ಪತ್ತೆ ಹಚ್ಚಲಾಗಿದೆ. 


 ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು ಮನೆಯಿಂದ 30 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಥೋಮಸ್ ಕ್ರಾಸ್ತಾ ಕೊಳವೆ ಬಾವಿ ನಿರ್ಮಾಣದ ಗುತ್ತಿಗೆದಾರರಾಗಿದ್ದು ಹಣಕ್ಕಾಗಿ ಕೊಂದು ಇವರ ಕೈ ಕಾಲು ಕಟ್ಟಿ ಹೆಣವನ್ನು ಹೊಂಡದಲ್ಲಿ ಉಪೇಕ್ಷಿಸಿರಬೇಕೆಂದು ಪೋಲಿಸರು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ. ಈ ನಡುವೆ ಇಲ್ಲಿ ಪರಿಸರದ ಕ್ವಾರ್ಟಸ್ ಗಳಲ್ಲಿ ವಾಸಿಸುತ್ತಿದ್ದ ಅನ್ಯರಾಜ್ಯ ಕಾರ್ಮಿಕರು ಕೆಲವರು ಊರಿಗೆ ತೆರಳಿದ್ದು ಸಂಶಯಾಸ್ಪದವಾಗಿ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ತನಿಖೆಯನ್ನು ಅಂತರ್ ರಾಜ್ಯಕ್ಕೂ ವಿಸ್ತರಿಸಲಾಗಿದೆ. ಥೋಮಸ್ ಕ್ರಾಸ್ತರೊಡನೆ ನಿಕಟವಾಗಿ ಸಂಪರ್ಕವಿರುವ ಹಲವರ ಮೇಲೆ ಪೋಲಿಸರು ನಿಗಾವಹಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಬಂದು ಮಾಹಿತಿ ಕಲೆ ಹಾಕಿದೆ.

Post a Comment

0 Comments