ಪೆರ್ಲ: ಮನೆ ಸಮೀಪದ ಅವರಣವಿಲ್ಲದ ಬಾವಿಗೆ ಕಾಲು ಜಾರಿ ಬಿದ್ದು ಪಾಕತಜ್ಞರೋರ್ವರು ಮೃತಪಟ್ಟ ಘಟನೆ ಕಾಟುಕುಕ್ಕೆ ಸಮೀಪದ ಕುಡ್ತಡ್ಕದಲ್ಲಿ ಗುರುವಾರ ಸಂಜೆ
ನಡೆದಿದೆ. ಇಲ್ಲಿ ಪಾಕ ತಜ್ಞರಾಗಿ ಕೆಲಸ ನಿರ್ವಹಿಸುವ ದಿ.ಚಂದ್ರಶೇಖರ ನಾಯಕ್ ಅವರ ಪುತ್ರ ಜನಾರ್ಧನ ನಾಯಕ್ (42) ಮೃತಪಟ್ಟವರೆಂದು ಗುರುತಿಸಲಾಗಿದೆ.
ಸಮಾರಂಭಗಳ ಅಡುಗೆ ಕಾರ್ಯಕ್ಕೆ ತೆರಳುತ್ತಿದ್ದ ಇವರು ಇದೀಗ ಮಳೆಗಾಲವಾದ್ದರಿಂದ ಕಾರ್ಯಕ್ರಮಗಳು ವಿರಳವಾದ್ದರಿಂದ ಮನೆಯಲ್ಲಿಯೇ ಉಳಿದು ತೋಟದ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಇವರ ಪತ್ನಿ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದು ಈ ಸಮಯದಲ್ಲಿ ಮನೆಯ ಬಳಿ ಜನಾರ್ದನ ನಾಯಕ್ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಬಾಯಾರಿಕೆಗಾಗಿ ನೀರಿಗಾಗಿ ಮನೆಗೆ ಬಂದಿದ್ದು ವಿದ್ಯುತ್ ಇಲ್ಲದ ಕಾರಣ ಕುಡಿನೀರು ಸಂಗ್ರಹವಿಲ್ಲದ ಕಾರಣ ಮನೆ ಸಮೀಪವೇ ಇರುವ ಬಾವಿಗೆ ನೀರು ಸೇದಲು ಹೋಗಿ ಕಾಲು ಜಾರಿ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಈ ವೇಳೆ ಮನೆಯಲ್ಲಿ ಹಾಗೂ ಪರಿಸರದಲ್ಲಿ ಯಾರು ಇಲ್ಲದಿದ್ದು ಸಂಜೆ ಸುಮಾರು 4ಗಂಟೆಯ ವೇಳೆಗೆ ಪತ್ನಿ ಮರಳಿ ಮನೆಗೆ ಬಂದ ವೇಳೆ ಗಂಡನನ್ನು ಹುಡುಕಾಡಿದ್ದು ಈ ವೇಳೆ ಬಾವಿಯೊಳಗೆ ಪತ್ತೆಯಾಗಿದ್ದರು. ತಕ್ಷಣ ಊರವರು ಸೇರಿದ್ದು ಮೃತದೇಹವನ್ನು ಮುಳುಗು ತಜ್ಞರ ಸಹಾಯದೊಡನೆ ಮೇಲಕ್ಕೆತ್ತಲಾಯಿತು.
ಮಧ್ಯಾಹ್ನ ಸುಮಾರು 11 ಗಂಟೆಯ ವೇಳೆಗೆ ಇವರು ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದ್ದು ಸಂಜೆ 4 ಗಂಟೆಗೆ ಮೃತದೇಹ ಪತ್ತೆಯಾಗಿದ್ದು ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾರ ಅರಿವಿಗೆ ಬಾರದೆ ಮುಳುಗಿರಬೇಕೆಂದು ಪ್ರಾಥಮಿಕ ಮಾಹಿತಿ ದಾಖಲಿಸಲಾಗಿದೆ. ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿದ್ದು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಮಹಜರಿಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ಮೋಹಿನಿ ಮಕ್ಕಳಾದ ಪ್ರಜ್ವಲ್ ,ದಿಯಾ ಹಾಗೂ ಸಹೋದರ ಸತೀಶ, ಸಹೋದರಿಯರಾದ ಸಾವಿತ್ರಿ, ವಾಣಿ ಹಾಗೂ ಅಪಾರ ಬಂದು ಬಳಗವನ್ನಗಲಿದ್ದಾರೆ.


0 Comments