ಪೆರ್ಲ: : ದುಬೈ ಕೆಎಂಸಿಸಿ ಎಣ್ಮಕಜೆ ಪಂಚಾಯಿತಿ ಸಮಿತಿಯ "ತುಳುನಾಡಿನ ಮತ ಮೈತ್ರಿ" ಪುರಸ್ಕಾರಕ್ಕೆ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಆಯ್ಕೆಯಾಗಿದ್ದಾರೆ. ದುಬೈನಲ್ಲಿ ನ.9ರಂದು ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ.
ಮಾಜಿ ಸಚಿವ, ದೀರ್ಘಕಾಲ ಮಂಜೇಶ್ವರ ಶಾಸಕರಾಗಿದ್ದ ಚೆರ್ಕಳಂ ಅಬ್ದುಲ್ಲರ ಹೆಸರಿನಲ್ಲಿ ದುಬೈ ಕೆಎಂಸಿಸಿ ಎಣ್ಮಕಜೆ ಪಂಚಾಯಿತಿ ಸಮಿತಿ ಕೊಡ ಮಾಡುವ "ತುಳುನಾಡಿನ ಮತ ಮೈತ್ರಿ" ಪುರಸ್ಕಾರಕ್ಕೆ ಎಣ್ಮಕಜೆ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅವರ ಹೆಸರು ಘೋಷಿಸಲಾಗಿದೆ.ನಾಡಿನಲ್ಲಿ ಮತ ಸೌಹಾರ್ದತೆ ಆಶಯಗಳನ್ನು ಎತ್ತಿ ಹಿಡಿಯಲು, ಸಮಾಜದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸಲು ಅವರು ನೀಡಿದ ನಾಯಕತ್ವ ಕೊಡುಗೆಯನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ.
ಪಂಚಾಯಿತಿ ಆಡಳಿತದಲ್ಲಿ ಕ್ರಿಯಾತ್ಮಕವಾದ ನಿಲುವು, ಸಹಕಾರ, ಶಿಕ್ಷಣ, ಸಾಮಾಜಿಕ ಸೇವಾರಂಗದಲ್ಲಿ ಗಮನಾರ್ಹವಾದ ಕೊಡುಗೆ ಹಾಗೂ ಚಟುವಟಿಕೆಗಳನ್ನು ಗಮನಿಸಿದ ಆಯ್ಕೆ ಸಮಿತಿ ಪುರಸ್ಕಾರಕ್ಕೆ ಸೋಮಶೇಖರ್ ಅವರನ್ನು ಆಯ್ಕೆ ಮಾಡಿದೆ.
ಮುಸ್ಲಿಂಲೀಗ್ ಎಣ್ಮಕಜೆ ಪಂ.ಸಮಿತಿ ಅಧ್ಯಕ್ಷ ಎ.ಕೆ. ಶರೀಫ್, ಕುದುಕ್ಕೋಳಿ ಹವ್ವಾ ಹಸನ್ ಫೌಂಡೇಶನ್ ಸ್ಥಾಪಕ, ಉದ್ಯಮಿ ಅಬ್ದುಲ್ಲ ಮಾದುಮೂಲೆ, ದುಬೈ ಯುಎ ಇ ಎಕ್ಸ್ ಚೇಂಜ್ ಮಾಜಿ ಸಿಇಒ ಸುಧೀರ್ ಕುಮಾರ್ ಶೆಟ್ಟಿ ಯೆಣ್ಮಕಜೆ, ಮುಹಮ್ಮದಾಲಿ ಪೆರ್ಲ, ಅಬೂಬಕ್ಕರ್ ಹಾಜಿ ಪೆರ್ದನೆ ಆಯ್ಕೆ ಸಮಿತಿಯಲ್ಲಿ ಒಳಗೊಂಡಿದ್ದಾರೆ.ದುಬೈ ಕೆಎಂಸಿಸಿ ಎಣ್ಮಕಜೆ ಪಂ.ಸಮಿತಿ ಅಧ್ಯಕ್ಷ ಎಸ್.ಯು. ಅಶ್ರಫ್ ಶೇಣಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಲ್ಕ ಪುರಸ್ಕಾರ ಘೋಷಣೆ ಸಭೆಯಲ್ಲಿ ಮಾತನಾಡಿದರು.
ಕೆಎಂಸಿಸಿ ಸದಸ್ಯರಾದ ಮುಸ್ತಾಕ್ ಬಜಕೂಡ್ಲು, ತನ್ವಿರ್ ಪೆರ್ಲ, ಹಸನ್, ಮನ್ಸೂರ್, ಯೂಸಫ್ ಉಪಸ್ಥಿತರಿದ್ದರು.



0 Comments